ಸುತ್ತಾಟ | ಆಫ್ರಿಕಾದ ತಾಂಜಾನಿಯಾ ದೇಶದ ಮೇರು ಪರ್ವತದಲ್ಲಿ ಕಂಡುಕೊಂಡ ಜೀವನ ಸತ್ಯ!

Date:

Advertisements

ನನ್ನ ಜೀವನದ ಮಹತ್ವದ ಅನುಭವಗಳಲ್ಲಿ ಒಂದು ಆಫ್ರಿಕಾದ ತಾಂಜಾನಿಯಾದ ಮೇರು ಪರ್ವತ ಚಾರಣ. ನಾನು ಈ ಪರ್ವತವನ್ನು ಹತ್ತುವ ಯೋಚನೆ ಮಾಡಿರಲಿಲ್ಲ, ತಯಾರಿಯೂ ಇರಲಿಲ್ಲ (ದೈಹಿಕ ಫಿಟ್ನೆಸ್ ಹೊರತುಪಡಿಸಿ). ಆದರೂ ಈ ಚಾರಣ ನಡೆದದ್ದೇ ವಿಶೇಷ. ಇದು ನನಗೆ ನನ್ನೊಳಗಿನ ಶಕ್ತಿಯನ್ನು ತೋರಿದ, ಇಂತಹ ಸ್ವ -ನಿರ್ಮಿತ ಬೇಲಿಯೊಂದನ್ನು ದಾಟಿ ನಡೆದು, ನನ್ನೊಳಗಿನ ಶಕ್ತಿಯನ್ನು ನಾನೇ ಕಂಡುಕೊಂಡ ಚಾರಣವಿದು.


ಎಷ್ಟೋ ಸಲ ಜೀವನದಲ್ಲಿ ‘ಇದು ನನ್ನಿಂದ ಸಾಧ್ಯವಿಲ್ಲ’, ‘ಇದು ನನ್ನಂತಹವರಿಗಾಗಿ ಅಲ್ಲ’, ‘ಇದು ನನ್ನ ನಿರೀಕ್ಷೆಗಿಂತ ಬಹಳ ದೊಡ್ಡದು’ ಇಂತಹ ಭಾವನೆಗಳು ಬಹು ಸಹಜ, ಕೆಲವೊಮ್ಮೆ ನಿಮಗೆ ನಿಮ್ಮ ಮೇಲೆ ನಂಬಿಕೆಯಿನ್ದದರರೋ, ನಮ್ಮ ಸುತ್ತಮುತ್ತಲಿನ ಜನ, ನಮ್ಮ ನೆರೆಹೊರೆ, ನಮ್ಮ ಹಿರಿಯರು, ನಮ್ಮ ಸುತ್ತಮುತ್ತರಿನ ಪರಿಸರ ಇವು ನಮ್ಮ ಆತ್ಮಸ್ಥೈರ್ಯವನ್ನು ನಾವೇ ಸಂಶಯಿಸುವ ಹಾಗೆ ಮಾಡುತ್ತವೆ. ಇದರಿಂದಾಗಿ ಹಲವಾರು ಮಿತಿ ರೇಖೆಗಳನ್ನು ನಾವುಗಳೇ ನಮ್ಮ ಮನದೊಳಗೆ ನಿರ್ಮಿಸಿಕೊಳ್ಳುತ್ತಾ ಹೋಗುತ್ತೇವೆ. ನಮಗರಿವಿಲ್ಲದೆಯೇ ನಮ್ಮನ್ನು ನಾವೇ ಒಂದು ಬೇಲಿಯೊಳಗೆ ಬಂಧಿಸಿಡುತ್ತೇವೆ. ರಾಮಾಯಣದಲ್ಲಿ ಬರುವ ಜಾಂಬವಂತನಂತೆ, ನಮ್ಮ ಶಕ್ತಿಯ ಅರಿವು ನಮಗೇ ಇಲ್ಲದಂತಾಗುತ್ತದೆ. ಆದರೆ ಈ ಮಿತಿಗಳನ್ನು ಮೀರಿ ಹೆಜ್ಜೆ ಇಡುತ್ತಿದ್ದಂತೆ, ನಮ್ಮೊಳಗಿನ ಶಕ್ತಿ, ಧೈರ್ಯ, ಮತ್ತು ನಂಬಿಕೆಯನ್ನು, ಆತ್ಮ ಸ್ಥೈರ್ಯವನ್ನು ನಾವು ಕಂಡುಕೊಳ್ಳುತ್ತೇವೆ. ಇದುವೇ ಜೀವನ. ಬಹುಶ ಇದನ್ನೇ ಕೆಲವು ತತ್ವಜ್ಞಾನಿಗಳು -Learn to unlearn ಎನ್ನುತ್ತಾರೆ. ಹೀಗೆ ನಾವುಗಳು ಹಾಕಿಕೊಂಡ ಬೇಲಿಯನ್ನು ನಾವೇ ದಾಟಬೇಕು, ಇದು ನಾನು ಕಂಡುಕೊಂಡ ಸತ್ಯ.

ನನ್ನ ಜೀವನದ ಅಂತಹ ಮಹತ್ವದ ಅನುಭವಗಳಲ್ಲಿ ಒಂದು ಆಫ್ರಿಕಾದ ತಾಂಜಾನಿಯಾದ ಮೇರು ಪರ್ವತ ಚಾರಣ. ನಾನು ಈ ಪರ್ವತವನ್ನು ಹತ್ತುವ ಯೋಚನೆ ಮಾಡಿರಲಿಲ್ಲ, ತಯಾರಿಯೂ ಇರಲಿಲ್ಲ (ದೈಹಿಕ ಫಿಟ್ನೆಸ್ ಹೊರತುಪಡಿಸಿ). ಆದರೂ ಈ ಚಾರಣ ನಡೆದದ್ದೇ ವಿಶೇಷ. ಇದು ನನಗೆ ನನ್ನೊಳಗಿನ ಶಕ್ತಿಯನ್ನು ತೋರಿದ, ಇಂತಹ ಸ್ವ -ನಿರ್ಮಿತ ಬೇಲಿಯೊಂದನ್ನು ದಾಟಿ ನಡೆದು, ನನ್ನೊಳಗಿನ ಶಕ್ತಿಯನ್ನು ನಾನೇ ಕಂಡುಕೊಂಡ ಚಾರಣವಿದು. ಆ ಕಾರಣಕ್ಕೇ ಇದು ನನ್ನ ಮೆಚ್ಚಿನ ಚಾರಣ.

ತಾಂಜಾನಿಯಾ ಆಫ್ರಿಕಾದ 13ನೇ ಅತಿದೊಡ್ಡ ದೇಶ ಮತ್ತು ಜಗತ್ತಿನ 31ನೇ ಅತಿದೊಡ್ಡ ರಾಷ್ಟ್ರ. ಇಲ್ಲಿನ ಸುಪ್ರಸಿದ್ಧ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನವು ವಿಶಾಲ ಮತ್ತು ವೈವಿಧ್ಯಮಯ ಜೀವವೈವಿಧ್ಯದ ನೆಲೆ, ಪಂಚದಲ್ಲೇ ಅತೀ ವಿಶಿಷ್ಟವಾದ ವನ್ಯಜೀವಿ ಸಂಕುಲಗಳಿಗೆ ಬೀಡು. ಹಾಗೆಯೇ ಇಲ್ಲಿನ ಜ್ವಾಲಾಮುಖಿ ಪರ್ವತಗಳು ಮತ್ತು ಬೃಹತ್ ಪರ್ವತಗಳೂ ಸಹ ಚಾರಣ ಪ್ರೇಮಿಗಳಿಗೆ ಬಹು ಹೆಸರುವಾಸಿ.

Advertisements

ಭಾರತದಂತೆ ತಾಂಜಾನಿಯಾವೂ ಬಹು ಭಾಷಾ, ಬಹು ಸಂಸ್ಕೃತಿ, ಬಹು ಧರ್ಮ, ಬಹು ಮತಗಳ ಹೊಂದಾಣಿಕೆಯಿಂದ ಕೂಡಿರುವ ದೇಶ. ಅದಕ್ಕಾಗಿಯೋ ಏನೋ ತುಂಬಾ ಖುಷಿಕೊಟ್ಟ ದೇಶವೂ ಹೌದು. ಆಫ್ರಿಕಾ ಖಂಡವನ್ನು ಭೇಟಿ ಮಾಡಬೇಕೆಂಬ ಆಸೆ ನನ್ನೊಳಗೆ ಬಹು ದಿನಗಳಿಂದ ಇತ್ತು. ನನಗೆ ವೈವಿಧ್ಯತೆಯಲ್ಲಿ ಏಕತೆಯ ಸೌಂದರ್ಯವನ್ನು ಹೊತ್ತ ದೇಶಗಳೆಂದರೆ ವಿಶೇಷ ಪ್ರೀತಿ. ಇತರ ದೇಶಗಳಲ್ಲಿ ನಮ್ಮ ಸಂಸ್ಕೃತಿಯ ಹೋಲಿಕೆಯನ್ನು ನನಗರಿವಿಲ್ಲದೆ ನನ್ನ ಮನಸು ಎಷ್ಟೋ ಸಲ ಹುಡುಕಾಡುತ್ತೆ. ಜೊತೆಗೆ ಪ್ರಾಚೀನ ಇತಿಹಾಸ ಹೊಂದಿರುವ ದೇಶಗಳೂ ನನಗೆ ಆಕರ್ಷಕ. ತಾಂಜಾನಿಯಾ ಅಂಥಹ ಹಲವು ಕಾರಣಗಳಿಗೆ ನಾನು ಓದಿ, ಕೇಳಿ, ಅನುಭವಿಸಲು ಇಚ್ಛಿಸಿದ್ದ ದೇಶ. ಅದರಲ್ಲೂ ಕಿಲಿಮಂಜಾರೋ ಪರ್ವತವನ್ನು ನೋಡಬೇಕೆಂಬ ಆಸೆ ಬಹು ಹಳೆಯದು.

WhatsApp Image 2025 05 30 at 3.21.58 PM

ಕೊನೆಗೆ, ನಾನು ಏಕವ್ಯಕ್ತಿ ಚಾರಣ ((Solo Travel) ಮಾಡಬೇಕು ಎಂದು ನಿಶ್ಚಯಿಸಿ, ಸಾಕಷ್ಟು ಓದಿ ತಿಳಿದು, ಒಬ್ಬಳೇ ಪ್ರಯಾಣಿಸಬಹುದೆಂಬ ಆತ್ಮವಿಶ್ವಾಸವಿನಿಂದ ಈ ಪ್ರಯಾಣವನ್ನು ಕೈಗೊಂಡಿದ್ದೆ. ಇವತ್ತಿಗೂ ತಾಂಜಾನಿಯಾ ಬಹು ಸುರಕ್ಷಿತ ದೇಶವಾಗಿದ್ದು, ಮಹಿಳೆಯರು ಒಂಟಿಯಾಗಿ ಪ್ರಯಾಣಿಸಲು ತುಂಬಾ ಅನುಕೂಲವಾಗಿರುವಂತಹ ದೇಶ. ಪ್ರವಾಸಿ ಪ್ರದೇಶಗಳಲ್ಲಿ ಬಹುತೇಕ ಜನರು ಇಂಗ್ಲಿಷ್ ಮಾತನಾಡುತ್ತಾರೆ.

ಕಿಲಿಮಂಜಾರೋ ಹತ್ತಿ ಕೆಳಗಿಳಿದ ಬಳಿಕ ನನ್ನಲ್ಲಿ ಇನ್ನೂ ಕೆಲ ದಿನಗಳ ಕಾಲ ಸಮಯ ಲಭ್ಯವಿತ್ತು. ಆ ಕಾರಣದಿಂದಾಗಿ ನಾನು ಅಲ್ಲಿನ ಇನ್ನೊಂದು ಎತ್ತರದ ಪರ್ವತ, ಮೌಂಟ್ ಮೇರು ಚಾರಣ ಮಾಡುವ ನಿಶ್ಚಯವನ್ನು ಕೈಗೊಂಡೆ. ಈ ನಿರ್ಧಾರ ಕೆಲವೊಂದು ಅನುಮಾನಗಳೊಂದಿಗೆ ನಿಂತಿತ್ತು. ‘ಈಗಲೇ ದೇಹ ಸುಸ್ತಾಗಿದೆ’, ‘ಇದು ಸಾಧ್ಯವಾಗುತ್ತಾ?’, ‘ಅದು ದೀರ್ಘ ರಾತ್ರಿ ಚಾರಣ ಬೇರೆ’, ‘ಗೈಡ್ ಜೊತೆಗೆ ಒಬ್ಬಳೇ ಹೋಗಬೇಕು’, ಹಾಗೆಯೇ, ‘ಇಲ್ಲಿ ತುಂಬಾ ಚಾರಣಿಗರೂ ಇರುವುದಿಲ್ಲ’.. ಹೀಗೆ ಹಲವು ಪ್ರಶ್ನೆಗಳು. ಆದರೆ, ಕೊನೆಗೆ “ಸಾಧ್ಯ” ಎಂಬ ನಂಬಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದ್ದೆ. ದೇಹ ಸುಸ್ತಾಗಿದ್ದರೂ ಮನಸ್ಸಿಗೆ ಶಕ್ತಿ ಇತ್ತು. ಇನ್ನೊಂದು ಚಾರಣ ಮಾಡುವಷ್ಟು ಶಕ್ತಿ ಇದೆ ಅಂದು ಆ ಕ್ಷಣದಲ್ಲಿ ನನಗನ್ನಿಸಿತ್ತು. ಹಾಗೆ ಅಸಾಧ್ಯ ಎಂದೆನಿಸಿದರೆ ವಾಪಾಸ್ ಬಂದರಾಯಿತು ಅಂತ ಹೇಳಿಕೊಂಡೆ ಹೊರಟಿದ್ದೆ.

ತಾಂಜಾನಿಯಾದ ಆಗ್ನೇಯ ಭಾಗದಲ್ಲಿರುವ ಅರುಷಾ ಪ್ರದೇಶದಲ್ಲಿ, ಕಿಲಿಮಂಜಾರೋದಿಂದ ಪಶ್ಚಿಮಕ್ಕೆ ಸರಿ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಒಂದು ಸುಪ್ತ ಜ್ವಾಲಾಮುಖಿ ಪರ್ವತ (ಸುಪ್ತ ಸ್ಟ್ರಾಟೊವೊಲ್ಕಾನೊ) ಮೌಂಟ್ ಮೇರು. 4,566 ಮೀಟರ್ ಎತ್ತರ ಇರುವ ಮೌಂಟ್ ಮೇರುವನ್ನು ಕಿಲಿಮಂಜಾರೋ ಪರ್ವತದಿಂದ ನೋಡಬಹುದು, ಹಾಗೇನೇ ಮೌಂಟ್ ಮೇರುವಿನಿಂದ ಕಾಣ ಸಿಗುವ ಕಿಲಿಮಂಜಾರೋ ದೃಶ್ಯ ಕೂಡ ಬಹು ಸುಂದರ. ಇದು ಆಫ್ರಿಕಾದ ಅತಿ ಎತ್ತರದ ಪರ್ವತ ಶಿಖರಗಳಲ್ಲಿ ಐದನೇ ಅತಿ ಎತ್ತರದ ಪರ್ವತವಾಗಿದೆ. ಹಾಗೆಯೇ ಇದು ತಾಂಜಾನಿಯಾದ ಅತಿ ಎತ್ತರದ ಪರ್ವತ ಶಿಖರಗಳಲ್ಲಿ ಎರಡನೇ ಅತಿ ಎತ್ತರದ ಪರ್ವತವಾಗಿದೆ.

ಚಾರಣ 2 -3 ದಿನ ತೆಗೆದುಕೊಳ್ಳುತ್ತದೆ. ಹಾಗೆಯೇ ಇದಕ್ಕೆ ದೈಹಿಕ ಫಿಟ್ನೆಸ್, ಮತ್ತು ಹೈ ಆಲ್ಟಿಟ್ಯುಡ್ (High Altitude) ಅನುಭವ ಕೂಡ ಅತೀ ಅಗತ್ಯ. ಒಂದಿಷ್ಟು ನುರಿತ ಚಾರಣಿಗರು ಈ ಚಾರಣವನ್ನು ಪ್ರಯತ್ನಿಸಬಹುದು. ಸಾಮಾನ್ಯವಾಗಿ, ಪರ್ವತದ ಪೂರ್ವ ಭಾಗದಲ್ಲಿರುವ ಮೊಮೆಲ್ಲಾ ಗೇಟ್‌ನಲ್ಲಿ ಪ್ರಾರಂಭವಾಗುವ ಮೊಮೆಲ್ಲಾ ಮಾರ್ಗವು ಪರ್ವತಾರೋಹಿಗಳಿಗೆ ಶಿಖರವನ್ನು ತಲುಪಲು ಇರುವ ಅತ್ಯಂತ ಪ್ರಸಿದ್ಧ ಮಾರ್ಗವಾಗಿದೆ. ಇದು ಎರಡು ಅಥವಾ ಮೂರು ದಿನದ ಚಾರಣ, ನಾನು ಎರಡು ದಿನ ತೆಗೆದುಕೊಂಡಿದ್ದೆ. ಹಾಗೆಯೇ ಪ್ರಯಾಣ ವೆಚ್ಚ ಹೊರತುಪಡಿಸಿ, ಹೋಟೆಲ್, ಚಾರಣ, ಗೈಡ್, ಊಟ, ತಂಗುದಾಣ, ಅನುಮತಿ ಎಲ್ಲವೂ ಸೇರಿ, ಸರಿ ಸುಮಾರು 50,000 -70,000 (Indian Rupees) ರೂಪಾಯಿ ಬೇಕಾಗುವುದು. ನಾನು ಇದನ್ನು ಕಿಲಿಮಂಜಾರೋ ಚಾರಣದೊಂದಿಗೆ ಜೊತೆ ಸೇರಿಸಿದ್ದರಿಂದ, ಒಂದಿಷ್ಟು ಕಡಿಮೆ ವೆಚ್ಚದಲ್ಲಿ ನಡೆದು ಹೋಯಿತು.

WhatsApp Image 2025 05 30 at 4.12.22 PM

ಮೌಂಟ್ ಮೇರು, ಒಂದು ಪ್ರಭಾವಶಾಲಿ ಜ್ವಾಲಾಮುಖಿ ಪರ್ವತ. ಬಹುತೇಕ ಕಿಲಿಮಂಜಾರೋ ಚಾರಣಿಗರು ಇದನ್ನು ತರಬೇತಿ ಚಾರಣವನ್ನಾಗಿ ಆರೋಹಣ ಮಾಡುತ್ತಾರೆ. ಕಿಲಿಮಂಜಾರೋಗೆ ಹೋಲಿಸಿದರೆ ಕಡಿಮೆ ಜನಸಂದಣಿ, ಶ್ರೀಮಂತ ವನ್ಯಜೀವಿಗಳು ಮತ್ತು ಸವಾಲಿನ ಆರೋಹಣದೊಂದಿಗೆ, ಮೌಂಟ್ ಮೇರು ತಾಂಜಾನಿಯಾದಲ್ಲಿ ಮರೆಯಲಾಗದ ಚಾರಣ ಅನುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ.

ಮೊದಲ ದಿನ, ಕಿಲಿಮಂಜಾರೋ ಏರ್ಪೋರ್ಟಿನಿಂದ ಮೋಶಿ ಪಟ್ಟಣಕ್ಕೆ ತಲುಪಿ ಅಲ್ಲಿ ಒಂದು ದಿನ ಉಳಿದು, ಮರುದಿನ ಅಲ್ಲಿಂದ ಟ್ರೆಕಿಂಗ್ ಆರಂಭ. ಮೋಶಿಯಿಂದ ಮೊಮೆಲ್ಲಾ ಗೇಟ್‌ಗೆ ವಾಹನದಲ್ಲಿ ಹೋಗಿ, ಅಲ್ಲಿಂದ ಮಿರಿಯಾಗಂಬಾ ಹಟ್ಟಿಗೆ (2,514 ಮೀ) ಚಾರಣ ಪ್ರಾರಂಭವಾಗುತ್ತದೆ.

ಅಲ್ಲಿಂದ ಚಾರಣ ಮುಂದುವರಿಸಿ ಸೇಡಲ್ ಹಟ್ಟಿಗೆ (3,570 ಮೀ) ತಲುಪಬೇಕು. ಕೆಲವರು ಇಲ್ಲಿಯೇ ಒಂದು ರಾತ್ರಿ ಕಳೆಯುತ್ತಾರೆ. ಇಲ್ಲಿಗೆ ತಲುಪುವ ವೇಳೆಗೆ ಸಂಜೆಯಾಗಿದ್ದರೆ, ಸಂಜೆಯ ವೇಳೆಗೆ ಲಿಟಲ್ ಮೇರು (Little Meru – 3,800 ಮೀ.) ಶಿಖರದತ್ತ ಸಣ್ಣ ಹೈಕ್‌ ಕೂಡ ಮಾಡಬಹುದು. ಇದು ಶರೀರದ ಹವಾಮಾನ ಹೊಂದಿಕೆ (acclimatization) ಗೆ ಕೂಡ ಸಹಕಾರಿ ಆಗುತ್ತೆ ಮತ್ತು ಅವಶ್ಯವೂ ಕೂಡ.

ಮೌಂಟ್ ಮೇರು ಚಾರಣ ಬಹು ಆಕರ್ಷಕ ಚಾರಣ, ಇಲ್ಲಿ ಕಾಣಸಿಗುವ ಮರಗಿಡ, ಪೊದೆಗಳು ನಾನು ಹಿಂದೆಂದೂ ನೋಡಿರಲಿಲ್ಲ, ಎಲ್ಲೋ ಬೇರೆಯೇ ಪ್ರಪಂಚದ ಮರಗಿಡವನ್ನು ನೋಡುತ್ತಿರುವೆನೋ ಏನೋ ಎನ್ನುವಂತಿತ್ತು. ತನ್ಮಧ್ಯೆ ದೂರದಲ್ಲಿ ಕಿಲಿಮಂಜಾರೋ ಪರ್ವತದ ಅಪೂರ್ವ ನೋಟಗಳನ್ನು ನೀಡುವ ವಿಶಿಷ್ಟ ಸ್ಥಳದಿಂದ ಕಾಣುವ ವಿಸ್ತೃತ ದೃಶ್ಯಾವಳಿಗಳು, ಅರುಷಾ ನ್ಯಾಷನಲ್ ಪಾರ್ಕ್‌ನ ಕೊಲೊಬಸ್ ಕೋತಿಗಳು, ಜಿರಾಫೆಗಳು, ಜೇಬ್ರಾಗಳು ಹಾಗೂ ಇನ್ನಿತರ ವೈವಿಧ್ಯಮಯ ವನ್ಯಜೀವಿಗಳ ಸಮ್ಮುಖದಲ್ಲಿ ನಡೆಯುವ ಚಾರಣ, ಅರಣ್ಯದಿಂದ ಉನ್ನತ ಎತ್ತರದ ಮೂರ್ಲ್ಯಾಂಡ್‌ವರೆಗೆ ಹರಡಿರುವ ವಿಭಿನ್ನ ಸಸ್ಯವರ್ಗಗಳಿಂದ ಕೂಡಿದ ಪರಿಸರಗಳು, ಈ ಎಲ್ಲವೂ ಮೌಂಟ್ ಮೇರು ಚಾರಣವನ್ನು ಒಂದು ನೆನಪಿನ ಅಪೂರ್ವ ಅನುಭವವನ್ನಾಗಿಸುತ್ತವೆ.

ಸೇಡಲ್ ಹಟ್ಟಿನಲ್ಲಿ (3,570 ಮೀ) ಒಂದಿಷ್ಟು ವಿಶ್ರಮಿಸಲು (ರಾತ್ರಿ 11 ಗಂಟೆಯ ವರೆಗೆ ) ಕಾಲಾವಕಾಶವಿದೆ . ಅಲ್ಲಿಯೇ ಊಟದ ವ್ಯವಸ್ಥೆ ಕೂಡ ಇದೆ. ಇಲ್ಲಿ ಎಲ್ಲ ರೀತಿಯ ಆಹಾರ ಕೂಡ ಸಿಗುತ್ತದೆ, ಆದರೆ ಮೊದಲೇ ಹೇಳಿಡಬೇಕು ಅಷ್ಟೇ. ಹೆಚ್ಚಾಗಿ ಇಲ್ಲಿ ಉಗಾಲಿ/ಪೋರ್ರಿಡ್ಜ್ (ಜೋಳದ ಗಂಜಿ) ಮತ್ತು ಪಿಲಾವ್ (ನಮ್ಮ ಕಡೆ ಸಿಗುವ ಪುಲಾವ್) ನಂತಹ ಪ್ರಮುಖ ಆಹಾರಗಳು ಬಹಳ ಜನಪ್ರಿಯ. ಹಾಗೆಯೇ ಇಲ್ಲಿಯ ಜನ ಮಾಂಸಾಹಾರಿಗಳು, ಕಾಫಿ ಪ್ರಿಯರು. ತಾಂಜಾನಿಯಾದ ಕಾಫಿ ಬಹು ಪ್ರಸಿದ್ಧ, ಬಹು ರುಚಿಕರ ಕೂಡ. ಹೆಚ್ಚಾಗಿ ನಮ್ಮ ಭಾರತದಲ್ಲಿ ಬಳಸುವ ಮಸಾಲೆಪದಾರ್ಥಗಳನ್ನು ಇವರು ತಮ್ಮ ಖಾದ್ಯದಲ್ಲಿ ಬಳಸುತ್ತಾರೆ. ಬಹಳ ಹಿಂದೆಯೇ ಬಹಳಷ್ಟು ಭಾರತೀಯರು ಇಲ್ಲಿಗೆ ವಲಸೆ ಹೋಗಿರುವುದರಿಂದ, ಇಲ್ಲಿ ಎಲ್ಲ ಭಾರತೀಯ ಮಸಾಲೆಪದಾರ್ಥಗಳು ಲಭ್ಯವಿದೆ. ಹಾಗಾಗಿ ಇಲ್ಲಿ ಆಹಾರದ ಬಗ್ಗೆ ತಲೆಕೆಡಿಸುವ ಅಗತ್ಯವೇ ಬೀಳಲ್ಲ.

ತಾಂಜಾನಿಯಾ

ಆ ರಾತ್ರಿ, ಸುಮಾರು 11 ಗಂಟೆಗೆ ಚಾರಣ ಆರಂಭಿಸಿ ಮೌಂಟ್ ಮೇರು (4,566 ಮೀ) ಶಿಖರದತ್ತ ನಡೆಯಲಾಯಿತು. ಇದು ಬಹಳ ದೀರ್ಘವಾದ ಮತ್ತು ಶ್ರಮಕರವಾದ ನಡಿಗೆ. ರಾತ್ರಿಯಿಡೀ ಚಾರಣ. ಆದುದರಿಂದ ಹೆಡ್ಲಾಂಪ್, ಬೆಚ್ಚನೆಯ ಜಾಕೆಟ್, ಒಳ್ಳೆಯ ಗ್ರಿಪ್ ಇರುವ ಹೈಕಿಂಗ್ ಬೂಟ್ಸ್, ಟ್ರೆಕಿಂಗ್ ಪೋಲ್ಸ್, ಮಿಟನ್ಸ್, ಕೈಗವಸು, ಎಲ್ಲವೂ ಬಹು ಅವಶ್ಯ. ಇದರಲ್ಲಿ ಯಾವುದೇ ಸಾಮಗ್ರಿ ಇಲ್ಲದೆ ಹೋದಲ್ಲಿ, ಹೆಚ್ಚಾಗಿ ಗೈಡುಗಳು ಇವನ್ನು ನೀಡುತ್ತಾರೆ /ಅಥವಾ ಇವನ್ನು ಬಾಡಿಗೆ ಕೊಟ್ಟು ಪಡೆಯಬಹುದು. ಚಾರಣ ಆರಂಭಿಸುವ ಮೊದಲೇ ಗೈಡುಗಳು ನಿಮ್ಮ ಟ್ರೆಕಿಂಗ್ ವಸ್ತ್ರ, ಜಾಕೆಟ್, ಬೂಟ್ಸ್, equipments ಎಲ್ಲವನ್ನೂ ಪರಿಶೀಲಿಸುತ್ತಾರೆ.

ರಾತ್ರಿ ಚಾರಣದ ವೇಳೆ, ಸುತ್ತೆಲ್ಲ ಕತ್ತಲೆಯ ಮಡಿಲಲ್ಲಿ ಮಿನುಗುವ ನಕ್ಷತ್ರಗಳ ಹೊರತು ಬೇರೆ ಯಾವುದೂ ಕಾಣಿಸಲ್ಲ. ಈ ಮಧ್ಯೆ ನಡೆಯುತ್ತಿದ್ದಂತೆ ಮನಸಿನಲ್ಲಿ ಅನೇಕ ಆಲೋಚನೆಗಳು. ಎಷ್ಟೋ ಬಾರಿ ನಿಮ್ಮ ದೃಢ ನಿಶ್ಚಯವನ್ನು ನೀವೇ ಮನಸಿಗೆ ಮತ್ತೆ ಮತ್ತೆ ಒತ್ತಿ ಹೇಳಬೇಕಾಗುತ್ತೆ: “ಈ ಚಾರಣವನ್ನು ಮಾಡಬೇಕಿತ್ತಾ?”, “ಈ ಸಾಹಸಕ್ಕೆ ಏಕೆ ಕೈ ಹಾಕಿದೆ?” ಅಂತ. ಆದರೆ ಜೀವನದಲ್ಲಿ – ಒಂದು ಸಾಹಸಮಯ ಚಾರಣವಾಗಲಿ, ಅಥವಾ ಜೀವನದ ಯಾವುದೇ ಮತ್ತೊಂದು ಗುರಿಯಾಗಲಿ, ನೀವು ಮನದೊಳಗೆ ದೃಢ ನಿಶ್ಚಯದಿಂದ ನಿರ್ಧರಿಸಿದರೆ, ಅದು ನಿಮ್ಮನ್ನು ಹಿಂದೆ ತಿರುಗಿ ನೋಡುವ ಅವಕಾಶವನ್ನೇ ಕೊಡುವುದಿಲ್ಲ. ದೇಹದ ದಣಿವನ್ನೂ ಲೆಕ್ಕಿಸದೆ, ಮನಸ್ಸು ತನ್ನ ಗುರಿಯ ಕಡೆಗೆ ಸಾಗುತ್ತಲೇ ಇತ್ತು. ಆ ರಾತ್ರಿ ಆ ಕಠಿಣ ಹಾದಿಯಲ್ಲಿ, ಹೆಡ್ ಲಂಪಿನ ಬೆಳಕಿನ ಸಹಾಯದೊಂದಿಗೆ ನಡೆಯುತ್ತಾ, ಮನಸಿಗೆ ಮತ್ತೆ ಮತ್ತೆ ಅದನ್ನೇ ಹೇಳಬೇಕಾಯಿತು, ಇದು ನನ್ನದೇ ನಿರ್ಧಾರ, ಇದರಿಂದ ಹಿಂದೆ ಹೋಗುವ ಹಾಗೆ ಇಲ್ಲ, ಇರುವ ದಾರಿ – ಮುಂದೆ ಹೋಗುವುದೊಂದೇ ಎಂದು. ಈ ಪರ್ವತವನ್ನು ನಾನು ಮೊದಲು ಕಿಲಿಮಂಜಾರೋದ ಶಿಖರದಿಂದ ನೋಡಿದ ಕ್ಷಣದಲ್ಲೇ, ಇದನ್ನು ಏರಬೇಕು ಎಂಬ ಬಲವಾದ ನಿರ್ಧಾರ ಮನದಲ್ಲಿ ಮೂಡಿತ್ತು. ಆ ರಾತ್ರಿ ಇಂತಹ ಆಲೋಚನೆಗಳು ಒಂದರ ಬಳಿಕ ಇನ್ನೊಂದು ಮನಃಪಟಲದಲ್ಲಿ ಸುಳಿಯುವ ನಡುವೆ, ಮನಸಿನೊಳಗಣ ಸಂಭಾಷಣೆಯ ನಡುವೆ, ದಾರಿ ಕಳೆದದ್ದೇ ಗೊತ್ತಾಗಲಿಲ್ಲ, ಎಲ್ಲೋ ಒಂದೆಡೆ ಬಾನಿನಲ್ಲಿ ಕೆಂಪು ಕಂಡಾಗಲೇ ಅನ್ನಿಸಿದ್ದು – ಓಹ್, ಇನ್ನೇನು ಸೂರ್ಯ ಮೇಲೇಳುವ ಸಮಯವೆಂದು. ಈ ಮನಸು ಎಷ್ಟು ವಿಚಿತ್ರ. ಈ ಭೂಮಿಯಲ್ಲಿ ಇರುವ, ನಮಗೆ ಕಾಣುವ ಸೂರ್ಯ ಒಬ್ಬನೇ, ನೀವು ಅವನನ್ನು ಬೆಂಗಳೂರಿನಿಂದ ನೋಡಿ, ನಿಮ್ಮ ಹಳ್ಳಿಯಿಂದ ನೋಡಿ, ಅಥವಾ ಆಫ್ರಿಕಾ ದೇಶದಿಂದ ನೋಡಿ, ಅದು ಒಬ್ಬನೇ, ಆದರೂ, ಮೇರು ಪರ್ವತದಿಂದ ಸೂರ್ಯನನ್ನು ನೋಡುವ ಕಾತರವೇ ಬೇರೆ. ಇದಕ್ಕಿಂತ ಮುಂಚೆ ಹಿಂದೆಂದೂ ಸೂರ್ಯನನ್ನು ಕಂಡೆ ಇಲ್ಲವೇನೋ ಎಂಬಂತೆ, ಒಂದು ಪುಟ್ಟ ಕಂದನ ಕುತೂಹಲದ ಮನಸಿನ ಹಾಗೆ ಮನಸು ನಲಿದಾಡುವುದು ನೋಡಿ, ನನಗೆ ಇಷ್ಟು ನಡೆದದ್ದು ಸಾರ್ಥಕ ಅಂದೆನಿಸಿತ್ತು. ಹಾಗೆಯೇ ನನ್ನ ಶಕ್ತಿಯ ಬಗ್ಗೆ (ದೇಹ ಹಾಗೂ ಮನಸು) ಆತ್ಮಸ್ಥೈರ್ಯವೂ ಹೆಚ್ಚಾಗಿತ್ತು.

WhatsApp Image 2025 05 30 at 3.19.40 PM

ಮೇರು ಪರ್ವತದ ಶಿಖರ ತಲುಪಿದಾಗ ಬೆಳಗಿನ ಜಾವ ಸಮಯ. ಗಾಳಿ ತಣ್ಣಗೆ, ಶಾಂತವಾಗಿತ್ತು. ಇಡೀ ಪರ್ವತದ ಮೇಲ್ಭಾಗ ಮೋಡಗಳಿಂದ ತುಂಬಿದಂತೆ ಕಂಡಿತು. ನಾವು ಆ ಮೋಡಗಳ ಮೇಲೆಯೇ ನಿಂತಿದ್ದೆವು ಎಂದು ಭಾಸವಾಗುತಿತ್ತು. ದೂರದ ಜಾಗದಲ್ಲಿ, ಬಿಳಿ ಹಿಮದಿಂದ ಮುಚ್ಚಿದ ಕಿಲಿಮಂಜಾರೋ ಪರ್ವತ ಬೆಳಕು ಬೀಳುತ್ತಾ ಸ್ಪಷ್ಟವಾಗಿ ಕಾಣುತ್ತಿತ್ತು. ನಸು ಕೆಂಪು ಬಣ್ಣದ ಸೂರ್ಯನು ನಿಧಾನವಾಗಿ ಮೋಡಗಳ ನಡುವಿಂದ ತಲೆ ಎತ್ತಿದಾಗ – ಈ ದೃಶ್ಯಕ್ಕಾಗಿ ತಾನೇ ಇಷ್ಟು ದೂರ ನಡೆದು ಬಂದಿದ್ದು ಎಂದು ಮನಸು ತನಗೆ ತಾನೇ ಉತ್ತರಿಸುತಿತ್ತು. ಮೋಡಗಳ ನಡುವೆ ಚಿತ್ತಾರದಂತೆ ಬೆಳಕು ಸುತ್ತಲೂ ಹರಡುತ್ತಿತ್ತು. ಬೆಳಕು ಎಲ್ಲೆಡೆ ಪಸರಿಸುತಿದ್ದರೂ ಕೂಡ, ಸುತ್ತಲಿನ ಪ್ರಪಂಚ ಸಂಪೂರ್ಣವಾಗಿ ಮೌನದಲ್ಲಿ ಮುಳುಗಿತ್ತು, ಕೇವಲ ಗಾಳಿಯ ಸದ್ದು, ಮತ್ತು ಪ್ರಕೃತಿಯ ಶಾಂತತೆ. ಸೂರ್ಯೋದಯದ ಆ ಅದ್ಭುತ ದೃಶ್ಯವನ್ನು ನೋಡುತ್ತಾ ನಾವು ಮುಂದೆ ಸಾಗಿದಾಗ, ಶಿಖರದ ಬಳಿ ಒಂದು ದೊಡ್ಡ ಕ್ರೇಟರ್ ಕಾಣಸಿಗುತ್ತೆ. ಪ್ರಾಚೀನ ಕಾಲದ ಜ್ವಾಲಾಮುಖಿಯ ಗುರುತು. ಶಿಲೆಗಳ ನಡುವೆ ನಿಂತು ಆ ದೃಶ್ಯವನ್ನು ನೋಡುತ್ತಿರುವಾಗ ಮನಸ್ಸು ತುಂಬಾ ನಿಶ್ಚಲವಾಗಿ ಶಾಂತವಾಗಿತ್ತು. ಅಲ್ಲಿಂದ ಮತ್ತೆ ಮಿರಿಯಾಗಂಬಾ ಹಟ್ಟಿಗೆ ಇಳಿದು, ಅಲ್ಲಿ ನಮಗಾಗಿ ತಯಾರಿಸಿದ ಬಿಸಿ ಬಿಸಿ ತಾಂಜಾನಿಯಾ ಕಾಫಿ ಕುಡಿದು, ಉಗಾಲಿ ಸೇವಿಸಿ, ಅಲ್ಲಿಂದ ಮೊಮೆಲ್ಲಾ ಗೇಟ್‌ವರೆಗೆ ಇಳಿದು ಅರೂಷಾಕ್ಕೆ ವಾಪಸ್ ಪ್ರಯಾಣ.

ಮೌಂಟ್ ಮೇರು ಪರ್ವತದ ಶಿಖರ ತಲುಪಿದ ಕ್ಷಣ ಮಾತ್ರವಲ್ಲ, ಆ ದಾರಿಯಲ್ಲಿ ನಡೆದ ಪ್ರತಿಯೊಂದು ಹೆಜ್ಜೆಯೂ ನನಗೆ ಒಂದು ಹೊಸ ಜೀವನಪಾಠವನ್ನು ಕಲಿಸಿತ್ತು. ನಾನು ಆ ದಾರಿಯಲ್ಲಿ ಕಂಡುದೆಂದರೆ, ಯಾವುದೇ ಗುರಿ ಬಹು ದೊಡ್ಡದು, ನನ್ನ ಸಾಮರ್ಥ್ಯದ ಮಿತಿ ಮೀರಿದ್ದು ಎಂದು ಭಯಪಡುವ ಮೊದಲು, ನಾವು ನಮ್ಮ ಭಯವನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂಬ ಜೀವನ ಸತ್ಯ. ನಮ್ಮ ಶಕ್ತಿಯ ಅಳತೆ ನಾವು ಮಾಡುವ ಮುನ್ನ, ಅದನ್ನು ಪ್ರಯತ್ನದ ಕಸದಂಚಿನಲ್ಲಿ ಎಸೆಯಬಾರದು ಎಂಬ ತೀಕ್ಷ್ಣ ಬೋಧನೆ. ಈ ಚಾರಣ ನನ್ನ ದೈಹಿಕ ಸಾಮರ್ಥ್ಯಕ್ಕೆ ಪರೀಕ್ಷೆಯಾಗಿದ್ದರೂ, ಹೆಚ್ಚು ನನ್ನ ಮಾನಸಿಕ ಶಕ್ತಿಯ ಪರೀಕ್ಷೆಯೂ ಆಗಿತ್ತು. ಅಲ್ಲಿಂದ ನಾನು ಹಿಂತಿರುಗಿದಾಗ, ನನ್ನೊಳಗಿನ “ಇದು ನನ್ನಿಂದ ಸಾಧ್ಯವಿಲ್ಲ” ಎನ್ನುವುದರ ಬದಲಾಗಿ, ‘ಇದನ್ನು ಸಾಧಿಸಬೇಕಾದರೆ ನನ್ನನ್ನು ಹೇಗೆ ತಯಾರಿಗೊಳಿಸಬೇಕು’. ಎನ್ನುವ ಹೊಸ ಯೋಚನಾಶೈಲಿಯನ್ನು ಹುಟ್ಟು ಹಾಕಿತ್ತು. ಜೀವನದ ಹಲವು ಕಠಿಣ ದಾರಿಗಳು ಇಂತಹ ಬದಲಾವಣೆಯನ್ನು ನಮ್ಮಲ್ಲಿ ತರಿಸುತ್ತವೆ. ಹೊರಗಿನ ವೀಕ್ಷಕರಿಗೆ ಇದು ದೊಡ್ಡ ಸಂಗತಿಯಲ್ಲ ಎಂದೆನಿಸಬಹುದು. ಆದರೆ ಆ ದಾರಿಯನ್ನು ನಡೆದವರಿಗೆ ಆ ಬದಲಾವಣೆಯ ಹಿಂದಿನ ರಹಸ್ಯ ಚೆನ್ನಾಗಿ ತಿಳಿದಿರುತ್ತದೆ. ಹಾಗೆಯೇ ಮನಸಿನೊಳಗೆ ನಡೆದ ಆ ನಿರಂತರ ಸಂಭಾಷಣೆ ಕೂಡ.

ಇದನ್ನೂ ಓದಿ ಹಿಡನ್‌ ಅಜೆಂಡಾ | ಪೊರೊಂಬೋಕು ಅಂದರೆ ಕಾಮನ್ಸ್‌! ಅದಕ್ಕೂ ಜಾತಿಗೂ ಏನು ಸಂಬಂಧ?

ಪ್ರತಿ ಪರ್ವತದ ಶಿಖರ ಒಂದೊಂದು ಗುರಿಯಾಗಿರಬಹುದು, ಆದರೆ ಅದನ್ನು ಹತ್ತುವ ಪ್ರಕ್ರಿಯೆ, ನಮ್ಮ ನಂಬಿಕೆಯ, ನಮ್ಮ ನಿರ್ಧಾರಗಳ, ನಮ್ಮ ಆತ್ಮಸ್ಥೈರ್ಯದ ಹಾದಿ. ಮೌಂಟ್ ಮೇರು ಪರ್ವತ ನನ್ನನ್ನು ಸುತ್ತಲಿನ ಪ್ರಕೃತಿಯ ಅದ್ಭುತತೆಯೊಂದಿಗೆ, ಅದು “ನನ್ನೊಳಗಿನ ನನ್ನನ್ನು” ಪರಿಚಯಿಸಿತು ಎಂದು ಹೇಳಿದರೆ ಅದು ಅತಿಶಯೋಕ್ತಿಯೇನಲ್ಲ.

ಯಾವುದನ್ನೇ ಆಗಲಿ, ನಾವು ಯಾಕೆ ಸಾಧ್ಯವಿಲ್ಲವೆನ್ನಬೇಕು? ಎಲ್ಲಿ ಎಡವುತ್ತೇನೆಯೋ ಏನೋ – ಎಂಬ ಭೀತಿಗೆ ಬಲಿಯಾಗಿ ನಮ್ಮ ಕನಸನ್ನೇ ಕಸದಂಚಿಗೆ ಯಾಕೆ ಎಸೆಯಬೇಕು? ಸಣ್ಣ ಸಣ್ಣ ಹೆಜ್ಜೆಯೊಂದಿಗೆ ನಾವು ಪ್ರಾರಂಭಿಸಿದಾಗಲೇ, ದಾರಿ ತಾನಾಗಿ ಕಂಡು ಬರುತ್ತದೆ. ಕನಸನ್ನು ನನಸಾಗಿಸುವ ಹೊಸ ವಿಧಾನವನ್ನೂ ಕಂಡುಕೊಳ್ಳುತ್ತೇವೆ. ಅದು ಪರ್ವತದ ಹಾದಿಯಾಗಿರಲಿ ಅಥವಾ ಜೀವನದ ಹಾದಿಯಾಗಿರಲಿ, ಗುರಿ ನಿಖರವಾಗಿರದಿದ್ದರೂ, ನಂಬಿಕೆ ಸ್ಪಷ್ಟವಿದ್ದರೆ, ಆತ್ಮಸ್ಥೈರ್ಯ ಒಂದಿದ್ದರೆ, ಯಾವುದೇ ಶಿಖರ ದೂರವಲ್ಲ.

ಸುಚಿತ್ರಾ
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X