ಗ್ಯಾರಂಟಿಯ ಭಾರ ಹೊರಲಾರದೆ ಈ ಸರ್ಕಾರ ಎಡವಬೇಕು, ಅಭಿವೃದ್ಧಿ ಚಟುವಟಿಕೆಗಳಿಗೆ ಹಣ ಮರೀಚಿಕೆಯಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎನ್ನುವುದನ್ನು ಕಾದು ಕೂತಿರುವವರು ಬಹಳ ಮಂದಿ. ಇದು ಕೇವಲ ವಿಪಕ್ಷಗಳನ್ನು ಉದ್ದೇಶಿಸಿ ಹೇಳುತ್ತಿರುವ ಮಾತಲ್ಲ, ಕಲ್ಯಾಣ ರಾಜ್ಯದ ಕಲ್ಪನೆಯ ಬಗ್ಗೆಯೇ ನಮ್ಮಲ್ಲಿ ಆಳವಾದ ಅಸಹನೆಯೊಂದು ಇದೆ. ಅಂತಹ ಅಸಹನೆಯುಳ್ಳ ಎಲ್ಲರನ್ನೂ ಉದ್ದೇಶಿಸಿ ಹೇಳುತ್ತಿರುವ ಮಾತು…
ಈ ವಾರ ಎಲ್ಲರ ಚಿತ್ತ ರಾಜ್ಯ ಬಜೆಟ್‌ನತ್ತ. ಸಾಮಾನ್ಯವಾಗಿ ರಾಜ್ಯಗಳಲ್ಲಿ ಮಂಡನೆಯಾಗುವ ಬಜೆಟ್‌ಗಳು ಅವುಗಳ ಭೌಗೋಳಿಕ ಮಿತಿಯ ಕಾರಣಕ್ಕಾಗಿ ಹೆಚ್ಚಾಗಿ ದೇಶದ ಗಮನವನ್ನು ಸೆಳೆಯುವುದಿಲ್ಲ. ಆಗೊಮ್ಮೆ ಈಗೊಮ್ಮೆ ಮಾತ್ರ ಯಾವುದೋ ನಿರ್ದಿಷ್ಟ ಯೋಜನೆ, ಕಾರ್ಯಕ್ರಮದ ಕಾರಣಕ್ಕಾಗಿ ಈ ಬಗ್ಗೆ ಚರ್ಚೆಗಳಾಗುವುದುಂಟು. ಆದರೆ, ಈ ಬಾರಿ ಮಾರ್ಚ್ 7ರಂದು ಕರ್ನಾಟಕದಲ್ಲಿ ಮಂಡನೆಯಾಗಲಿರುವ ಬಜೆಟ್ ಬಗ್ಗೆ ದೇಶಾದ್ಯಂತ ವಿಶೇಷ ಕುತೂಹಲವಿದೆ. ವಿಶೇಷ ಕುತೂಹಲ ಎನ್ನುವುದಕ್ಕಿಂತ ಹೆಚ್ಚಾಗಿ ಕೆಟ್ಟ ಕುತೂಹಲವಿದೆ ಎನ್ನಬಹುದು. ಗ್ಯಾರಂಟಿ ಯೋಜನೆಗಳೆಂಬ ಹಗ್ಗವನ್ನು ಕೊಟ್ಟು ಕಾಂಗ್ರೆಸ್ ತನ್ನ ‘ಕೈ’ಯನ್ನು ತಾನೇ ಕಟ್ಟಿಸಿಕೊಂಡಿದೆ ಎನ್ನುವ ಕುಹಕ-ಪುಳಕ ವಿಪಕ್ಷಗಳಲ್ಲಿರುವಂತೆಯೇ ಇಂತಹ ಯೋಜನೆಗಳನ್ನು ಆಳವಾಗಿ ದ್ವೇಷಿಸುವ ಸಮಾಜದ ಹಲ ವರ್ಗಗಳಲ್ಲಿಯೂ ಇದೆ.
ಗ್ಯಾರಂಟಿಯ ಭಾರ ಹೊರಲಾರದೆ ಈ ಸರ್ಕಾರ ಎಡವಬೇಕು, ಅಭಿವೃದ್ಧಿ ಚಟುವಟಿಕೆಗಳಿಗೆ ಹಣ ಮರೀಚಿಕೆಯಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎನ್ನುವುದನ್ನು ಕಾದು ಕೂತಿರುವವರು ಬಹಳ ಮಂದಿ. ಇದು ಕೇವಲ ವಿಪಕ್ಷಗಳನ್ನು ಉದ್ದೇಶಿಸಿ ಹೇಳುತ್ತಿರುವ ಮಾತಲ್ಲ, ಕಲ್ಯಾಣ ರಾಜ್ಯದ ಕಲ್ಪನೆಯ ಬಗ್ಗೆಯೇ ನಮ್ಮಲ್ಲಿ ಆಳವಾದ ಅಸಹನೆಯೊಂದು ಇದೆ. ಅಂತಹ ಅಸಹನೆಯುಳ್ಳ ಎಲ್ಲರನ್ನೂ ಉದ್ದೇಶಿಸಿ ಹೇಳುತ್ತಿರುವ ಮಾತು…
ಈ ಅಸಹನೆಯ ಮುಂದುವರಿಕೆಯಂತೆಯೇ ಈ ಬಾರಿಯ ರಾಜ್ಯ ಬಜೆಟ್‌ನೆಡೆಗೆ ಅನೇಕರು ಕಣ್ಣು ನೆಟ್ಟಿದ್ದಾರೆ. ಈ ಬಾರಿಯ ಬಜೆಟ್ ವಿತ್ತ ಸಚಿವರಾಗಿ ಹದಿನಾರನೆಯ ದಾಖಲೆಯ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ತರಬೇಕು, ವಿತ್ತೀಯ ಶಿಸ್ತು ಹೇಗೆ ಗಾಳಿಗೆ ತೂರಿಹೋಗಿದೆ ಎನ್ನುವುದರ ಅನಾವರಣವಾಗಬೇಕು. ರಾಜಸ್ವದ ಕೊರತೆ, ಮೂಲಸೌಕರ್ಯಗಳ ವೆಚ್ಚದಲ್ಲಿ ಕಡಿತ ಎದ್ದು ಕಾಣಬೇಕು. ರಾಜ್ಯದ ರಸ್ತೆಗಳಿಗೆ ತೇಪೆ ಹಚ್ಚಲೂ ಸಹ ಹಣವಿಲ್ಲದಂತಾಗಿ, ಗುಂಡಿ ಬಿದ್ದ ರಸ್ತೆಗಳಲ್ಲಿ ಜನರು ಪ್ರಯಾಣಿಸುವಾಗ ಪ್ರತಿಯೊಂದು ರಸ್ತೆ ಗುಂಡಿ ಇಳಿದು ಹತ್ತಿದಾಗಲೂ ಒಂದೊಂದು ಗ್ಯಾರಂಟಿ ಯೋಜನೆ ನೆನಪಿಸಿಕೊಂಡು ಅವುಗಳಿಗೆ ಹಿಡಿಶಾಪ ಹಾಕಬೇಕು. ಪರಿಶಿಷ್ಟರ ಉಪಯೋಜನೆಗಳಿಗೆ (ಎಸ್‌ಸಿಪಿ/ಟಿಎಸ್‌ಪಿ) ಮೀಸಲಿಡುವ ಹಣದ ಪ್ರಮಾಣದಲ್ಲಿ ಕುಸಿತವಾಗಬೇಕು. ಗ್ಯಾರಂಟಿ ಯೋಜನೆಗಳಿಗಾಗಿ ಈ ಉಪಯೋಜನೆಗಳಿಂದ ಹಣ ಬಳಸಿರುವ ಬಗ್ಗೆ ಈ ಸಮುದಾಯಗಳಲ್ಲಿ ಇದಾಗಲೇ ಇರುವ ಅಸಮಾಧಾನ ಆಕ್ರೋಶವಾಗಿ ಭುಗಿಲೇಳಬೇಕು…

ಹೀಗೆ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಲು ರಣೋತ್ಸಾಹದಲ್ಲಿ ಸಜ್ಜಾಗಿರುವ ಮನಸ್ಸುಗಳು ಬಜೆಟ್‌ಅನ್ನು ಕಾತರದಿಂದ ಎದುರು ನೊಡುತ್ತಿವೆ!
ಇಂತಹ ಅಸಹನೆ ಗ್ಯಾರಂಟಿ ಯೋಜನೆಗಳಿಗೆ ಮಾತ್ರವೇ ಸೀಮಿತವೇನೂ ಅಲ್ಲ, ಅಸಲಿಗೆ ಈ ಬಗೆಯ ಮನಸ್ಥಿತಿಗೆ ಮೀಸಲಾತಿ, ಸಬ್ಸಿಡಿ, ಬೆಲೆ ಏರಿಕೆ ನಿಯಂತ್ರಣ, ಬಡಜನತೆಗೆ ಉಚಿತ ಪಡಿತರ, ಸರ್ಕಾರಿ ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸಮೂಹ ಸಾರಿಗೆ ಹೀಗೆ ಯಾವುದೇ ಕಲ್ಯಾಣ ಕಾರ್ಯಕ್ರಮಗಳೂ ರುಚಿಸುವುದಿಲ್ಲ. ಈ ಎಲ್ಲದರೆಡೆಗೆ ಅಸಹ್ಯವಾದ ಅಸಹನೆಯೊಂದು ಗುಪ್ತಗಾಮಿನಿಯಾಗಿ ಸಮಾಜದ ಕೆಲ ವರ್ಗಗಳಲ್ಲಿ ಹರಿಯುತ್ತಿರುತ್ತದೆ. ಕೆಲವೊಮ್ಮೆ ಅದು ತನ್ನ ಹೇಸಿಗೆಯ ಹೆಡೆಗಳನ್ನು ಮುಜುಗರವಿಲ್ಲದೆ ಮುಕ್ತವಾಗಿಯೇ ಹೊರಚಾಚುತ್ತದೆ ಕೂಡ.
ಈ ಬಗೆಯ ಅಸಹನೆಗೆ ಹಲವು ಬೇರುಗಳಿವೆ. ಕೆಲ ಬೇರುಗಳ ಹಿಂದೆ ಕಟು ಉದ್ಯಮಶಾಹಿ, ಬಂಡವಾಳಶಾಹಿ ಮನಸ್ಥಿತಿ ಇದ್ದರೆ ಮತ್ತೆ ಹಲ ಬೇರುಗಳ ಹಿಂದೆ ಊಳಿಗಮಾನ್ಯ ಹಾಗೂ ವರ್ಣ, ವರ್ಗ ವ್ಯವಸ್ಥೆಗಳಿಗೆ ಆತುಕೊಂಡ ವ್ಯಸನಗಳಿವೆ. ಹಾಗಾಗಿ ಯಾವುದೇ ಸಮಾಜೋಆರ್ಥಿಕ ಪ್ರಗತಿಪರ ಯೋಜನೆಗಳ ಬಗ್ಗೆಯೂ ಇದೇ ಅಸಹನೆ ಈ ಮನಸ್ಥಿತಿಗೆ ಇರುತ್ತದೆ. ಅದು ಬೇರೆಯದೇ ಚರ್ಚೆಯ ವಿಷಯ.
ಹಾಗಾದರೆ, ಗ್ಯಾರಂಟಿ ಯೋಜನೆಗಳ ಬಗ್ಗೆ ವಿಮರ್ಶೆಯನ್ನೇ ಮಾಡಬಾರದೇ, ಈ ಯೋಜನೆಗಳಿಂದ ಆಗುವ ಸಾಧಕ ಬಾಧಕಗಳನ್ನು ಚರ್ಚಿಸಲೇ ಬಾರದೇ? ಖಂಡಿತವಾಗಿಯೂ ವಿಮರ್ಶಿಸಬೇಕು, ಚರ್ಚಿಸಬೇಕು. ಆದರೆ, ಅದೆಲ್ಲವೂ ಸಮಚಿತ್ತ, ಸ್ವಸ್ಥ ಮನಸ್ಥಿತಿಯಿಂದ ನಡೆಯಬೇಕು. ಇದಕ್ಕೂ ಮುನ್ನ ಗ್ಯಾರಂಟಿ ಯೋಜನೆಗಳಂತಹ ಕಾರ್ಯಕ್ರಮಗಳು ಅಗತ್ಯವಾಗಿದ್ದಾದರೂ ಏಕೆ ಎನ್ನುವುದನ್ನು ಮೊದಲಿಗೆ ನಾವು ಅರಿಯಬೇಕು.
ಕಳೆದ ಕೆಲ ವರ್ಷಗಳಲ್ಲಿ ದೇಶ ಹಿಡಿದಿರುವ ಹಾದಿಯನ್ನು ಗಮನಿಸಿದರೆ ಜನಜೀವನದ ಮೇಲೆ ಪ್ರಭಾವ ಬೀರಿರುವ ಪ್ರಮುಖ ಅಂಶಗಳನ್ನು ಹೀಗೆ ಗುರುತಿಸಬಹುದು: ನಿರಂತರ ಬೆಲೆ ಏರಿಕೆ, ಕೌಶಲರಹಿತ ಹಾಗೂ ಕೌಶಲ್ಯಯುತ ಯುವಪೀಳಿಗೆಯ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಏರುತ್ತಿದ್ದರೂ ಅದೇ ಗತಿಯಲ್ಲಿ ಸೃಷ್ಟಿಯಾಗದ ಉದ್ಯೋಗಾವಕಾಶಗಳು, ಉತ್ಪಾದನಾ ವಲಯದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣದೆ ಕೇವಲ ಸೇವಾವಲಯವನ್ನೇ ನಮ್ಮ ಆರ್ಥಿಕತೆ ನೆಚ್ಚಿಕೊಂಡಿರುವುದು, ಕೃಷಿ ಲಾಭದಾಯಕ ವೃತ್ತಿ/ಉದ್ಯಮವಾಗದೇ ಸಣ್ಣ ಹಿಡುವಳಿದಾರರು ಅದರಿಂದ ವ್ಯಾಪಕವಾಗಿ ವಿಮುಖವಾಗುತ್ತಿರುವುದು, ಬಹುಮುಖ್ಯವಾಗಿ ಅಧಿಕಾರ ಹಾಗೂ ಸಂಪನ್ಮೂಲವನ್ನು ಕ್ರೂಢೀಕರಣಗೊಳಿಸುವಂತಹ ಅರ್ಥವ್ಯವಸ್ಥೆ, ಆಡಳಿತ ವ್ಯವಸ್ಥೆ, ರಾಜಕಾರಣಕ್ಕೆ ಅತೀವ ಪ್ರಾಶಸ್ತ್ಯ ದೊರೆತಿರುವುದನ್ನು ಕಾಣಬಹುದು.
ಮಧ್ಯಮ, ಕೆಳಮಧ್ಯಮ ಹಾಗೂ ಬಡವರ್ಗಗಳ ಜನತೆಯ ಮೇಲೆ ಇದರಿಂದ ಉಂಟಾಗಿರುವ ಪರಿಣಾಮಗಳ ಬಗ್ಗೆ ಗಂಭೀರ ಅಧ್ಯಯನಗಳ ಕೊರತೆ ಇದೆ. ದುಬಾರಿ ಜೀವನ, ನಿರಂತರ ಅಭದ್ರತೆಯ ಭಾವ, ಸರ್ಕಾರಿ ಶಾಲೆಗಳು ಹಾಗೂ ಆಸ್ಪತ್ರೆಗಳ ಬಗ್ಗೆ ಗಣನೀಯವಾಗಿ ಕುಸಿದಿರುವ ವಿಶ್ವಾಸಾರ್ಹತೆ, ಗ್ರಾಮೀಣ ಭಾಗಗಳಿಂದ ನಗರಗಳೆಡೆಗೆ ನಡೆಯುತ್ತಿರುವ ವ್ಯಾಪಕ ವಲಸೆ, ಬಿಮಾರು ರಾಜ್ಯಗಳೆಂದೇ ಹಣೆಪಟ್ಟಿ ಹೊತ್ತು ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನದಂತಹ ಉತ್ತರದ ರಾಜ್ಯಗಳ ನಿರಾಶಾದಾಯಕ ಪ್ರಗತಿ, ಉಳ್ಳವರು ಮತ್ತು ಸಾಮಾನ್ಯರ ನಡುವೆ ಗಂಬೀರವಾಗಿ ಹೆಚ್ಚುತ್ತಿರುವ ಕಂದರ, ಕಳವಳಕಾರಿ ಚರ್ಚೆಗೆ ಕಾರಣವಾಗುತ್ತಿರುವ ಕುಸಿದಿರುವ ಸಾಮಾಜಿಕ ಮೌಲ್ಯ ಹಾಗೂ ಸಾಮಾಜಿಕ ಸ್ವಾಸ್ಥ್ಯ ಹೀಗೆ ಕಣ್ಣಿಗೆ ರಾಚುವಂತಹ ಹಲವು ಪ್ರಮುಖ ಪರಿಣಾಮಗಳನ್ನು ನಾವು ಮೇಲುನೋಟಕ್ಕೆ ಗುರುತಿಸಬಹುದು.
ಜನಸಾಮಾನ್ಯರು, ಕೆಳವರ್ಗಗಳು, ತಳ ಸಮುದಾಯಗಳ ಮೇಲೆ ಬೆಲೆ ಏರಿಕೆಯ ಬಿಸಿ, ಬಡ್ಡಿದರ ಏರಿಕೆಯ ಬಿಸಿ ನಿರಂತರವಾಗಿ ಹೆಚ್ಚುತ್ತಲೇ ಇದೆ. ದೈನಂದಿನ ಜೀವನ ಸಾಗಿಸುವುದೇ ದುಸ್ತರ ಎನಿಸುವ ಪರಿಸ್ಥಿತಿ ಇದೆ. ಇದೆಲ್ಲಕ್ಕೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾದ ಕೇಂದ್ರ ಸರ್ಕಾರ ತನ್ನ ನೀತಿನಿರೂಪಣೆಗಳಲ್ಲಿ, ಕಾರ್ಯಕ್ರಮಗಳಲ್ಲಿ ದೇಶದ ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ, ಘನತೆಯ ಜೀವನಕ್ಕೆ ಕಾರಣವಾಗುವ ಯಾವುದೇ ಕ್ರಮಗಳಿಗೆ ಮುಂದಾಗದೆ ತೋರಿಕೆಯ, ಔಪಚಾರಿಕ ಮಾತು, ನೀತಿ, ಕೃತಿಗಳಲ್ಲಿ ಕಾಲಹರಣ ಮಾಡಿದೆ. ಇದೆಲ್ಲದರ ಪರಿಣಾಮವಾಗಿ ಹಾಗೂ ಚುನಾವಣಾ ರಾಜಕಾರಣದ ಯಶಸ್ಸಿನ ಭಾಗವಾಗಿ ಗ್ಯಾರಂಟಿ ಯೋಜನೆಗಳು ಮೂಡಿದವು. ಬೆಂಕಿಯಲ್ಲಿ ಬೇಯುತ್ತಿದ್ದ ಜನರಿಗೆ ಇವು ಸಹಜವಾಗಿಯೇ ಆಶ್ರಯಕ್ಕೆ ಒದಗಿದ ನೆರಳಿನಂತೆ ಕಂಡಿವೆ.
ಗ್ಯಾರಂಟಿ ಯೋಜನೆಗಳು ಹೆಸರೇ ಸೂಚಿಸುವಂತೆ ಜನಸಾಮಾನ್ಯರ ಬದುಕಿಗೆ ತಕ್ಷಣದ ಭರವಸೆ ತುಂಬುವ ಹಾಗೂ ಅವರ ಮೇಲಿರುವ ಆರ್ಥಿಕ ಹೊರೆಗಳನ್ನು ತಕ್ಕಮಟ್ಟಿಗೆ ತಗ್ಗಿಸಿ ಅವರಲ್ಲಿ ಆಶಾವಾದವನ್ನು ತುಂಬುವ ಕಾರ್ಯಕ್ರಮಗಳು. ಇವುಗಳನ್ನು ದೂರಗಾಮಿ ಯೋಜನೆಗಳು, ನೀತಿಗಳೊಟ್ಟಿಗೆ ನೋಡಲಾಗದು. ಬದಲಿಗೆ ಸಾಮಾಜಿಕ ಭದ್ರತೆ, ಘನತೆಯ ಬದುಕಿನ ಖಾತರಿಯ ಭಾಗವಾಗಿ ಮಾತ್ರವೇ ನೋಡಬೇಕು.
ಈ ಕಾರ್ಯಕ್ರಮಗಳಿಂದ ಪಡೆಯುವ ಲಾಭವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎನ್ನುವುದು ಆಯಾ ಕುಟುಂಬಗಳಿಗೆ, ಫಲಾನುಭವಿಗಳಿಗೆ ಬಿಟ್ಟ ವಿಚಾರ. ಆದಾಗ್ಯೂ, ಈವರೆಗಿನ ಅನುಷ್ಠಾನದಲ್ಲಿ ಈ ಕಾರ್ಯಕ್ರಮಗಳ ಫಲಾನುಭವಿಗಳು ಇವುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು, ಉದಾಹರಣೆಗಳು ಸಿಕ್ಕಿರುವುದು ಕಡಿಮೆಯೇ. ಇದರ ಹೋಲಿಕೆಯಲ್ಲಿ ಗಮನಿಸಿದರೆ, ಈ ಯೋಜನೆಗಳು ತಮ್ಮ ದೈನಂದಿನ ಬದುಕಿಗೆ ಹೇಗೆ ಸಹಕಾರಿಯಾಗಿವೆ ಎನ್ನುವ ಬಗ್ಗೆ ಜನ ವ್ಯಾಪಕವಾಗಿ ಮಾತನಾಡಿದ್ದಾರೆ. ಮೇಲ್ಮಧ್ಯಮವರ್ಗದ ಸಿನಿಕತನವನ್ನು ತೊರೆದು ಅಂತಃಕರಣದಿಂದ ಕೆಳ ವರ್ಗಗಳು, ಸಮುದಾಯಗಳಿಗೆ ಈ ಯೋಜನೆಗಳಿಂದ ಉಪಯೋಗವಾಗಿದೆಯೇ ಎನ್ನುವುದನ್ನು ತಿಳಿಯಲು ಕಿವಿಯಾದರೆ ಆಗ ನಮ್ಮ ಕಣ್ಣ ಮುಂದೆ ಹತ್ತುಹಲವು ಆಶಾದಾಯಕ, ಪ್ರೇರಣಾದಾಯಕ ಕಥೆಗಳು ಬಿಚ್ಚುಕೊಳ್ಳುತ್ತವೆ.
ಇದೆಲ್ಲದರ ಹೊರತಾಗಿಯೂ ಈ ಯೋಜನೆಗಳನ್ನು ಸ್ವಸ್ಥ ಮನಸ್ಸಿನಿಂದ ವಿಮರ್ಶಿಸುವ, ಪುನರೂಪಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ ಗೃಹಜ್ಯೋತಿ ಯೋಜನೆಯನ್ನು ಗಮನಿಸಿ. ಆಧುನಿಕ ಬದುಕಿನ ಅತ್ಯಗತ್ಯಗಳಲ್ಲಿ ವಿದ್ಯುತ್‌ನ ಬಳಕೆ ನಿರ್ಣಾಯಕವಾದುದು. ಕೈಗಾರಿಕೆ, ಕಚೇರಿಗಳಲ್ಲಿ ಬಳಕೆಯಾಗುವ ವಿದ್ಯುತ್ ಆಯಾ ರಾಜ್ಯಗಳ ಆರ್ಥಿಕ, ಔದ್ಯಮಿಕ ಚಟುವಟಿಕೆಗಳ ನಾಡಿಮಿಡಿತವಾದರೆ, ಗೃಹಬಳಕೆಯ ವಿದ್ಯುತ್ ಅಲ್ಲಿನ ಜನಜೀವನ ಮಟ್ಟಕ್ಕೆ ಹಿಡಿದ ಕನ್ನಡಿಯಾಗಿರುತ್ತದೆ. ವಿದ್ಯುತ್ ಬಳಕೆಯ ಮೇಲೆ ಋತುಮಾನ, ಪ್ರಾಕೃತಿಕ ಬದಲಾವಣೆಗಳು ನೇರ ಪರಿಣಾಮವನ್ನು ಬೀರುತ್ತವಾದರೂ ಜನಜೀವನ ಮಟ್ಟವನ್ನು ಅಳೆಯುವ ಮಾನದಂಡಗಳಲ್ಲಿ ವಿದ್ಯುತ್‌ಶಕ್ತಿಯ ಬಳಕೆಗೆ ಗಣನೀಯ ಮಹತ್ವವಿದೆ.
ಕುಟುಂಬವೊಂದು ಹೆಚ್ಚು ಅನುಕೂಲಸ್ಥವಾದಷ್ಟು ಅದು ಬಳಸುವ ವಿದ್ಯುತ್ ಚಾಲಿತ ಗೃಹೋಪಯೋಗಿ ವಸ್ತುಗಳು,ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಆಲಂಕಾರಿಕ ದೀಪಗಳು, ಹೆಚ್ಚಿನ ಸಂಖ್ಯೆಯ ಕೋಣೆಗಳು, ಸ್ನಾನಗೃಹಗಳು ಹೀಗೆ ಆ ಮನೆಯಲ್ಲಿ ಬಳಕೆಯಾಗುವ ತಲಾವಾರು ವಿದ್ಯುತ್ ಪ್ರಮಾಣವೂ ಹೆಚ್ಚಿರುತ್ತದೆ.

ಈ ಹಿನ್ನೆಲೆಯನ್ನಿರಿಸಿಕೊಂಡು ಉದಾಹರಣೆಯೊಂದನ್ನು ನೋಡೋಣ. ಆರ್ಥಿಕವಾಗಿ ಸಶಕ್ತವೂ, ಸದೃಢವೂ ಆಗಿರುವ ಒಬ್ಬರು ಅಥವಾ ಇಬ್ಬರು ದುಡಿಯುವ ಸದಸ್ಯರಿರುವ ನಾಲ್ವರ ಅನುಕೂಲಸ್ಥ ಕುಟುಂಬವೊಂದಕ್ಕೆ ಅದರ ಹಿಂದಿನ ವರ್ಷದ ಬಳಕೆಯ ಸರಾಸರಿ ಆಧಾರದಲ್ಲಿ ಇನ್ನೂರು ಯೂನಿಟ್‌ಗಳವರೆಗೆ ವಿದ್ಯುತ್‌ಅನ್ನು ಉಚಿತವಾಗಿ ಕೊಡುವುದು ಆ ಕುಟುಂಬದ ಕೈಹಿಡಿಯುವ ಕಾರ್ಯವೇನೂ ಅಲ್ಲ. ಬದಲಿಗೆ ಪರೋಕ್ಷವಾಗಿ ಆ ಕುಟುಂಬಕ್ಕೆ ಬೋನಸ್ ನೀಡಿದಂತೆ. ಇದರ ಹೋಲಿಕೆಯಲ್ಲಿ ಬೆಂಗಳೂರಿನಂತಹ ನಗರದಲ್ಲಿ ಮಾಸಿಕ ಸುಮಾರು ನಲವತ್ತು ಸಾವಿರ ರೂ. ಆದಾಯ ಹೊಂದಿರುವ ನಾಲ್ವರು ಸದಸ್ಯರುಳ್ಳ ಕುಟುಂಬವೊಂದರ ಸರಾಸರಿ ವಿದ್ಯುತ್ ಬಳಕೆಯ ಪ್ರಮಾಣ ಗಮನಾರ್ಹವಾಗಿ ಕಡಿಮೆ ಇರುತ್ತದೆ. ಹೀಗೆ ಮಧ್ಯಮ, ಕೆಳ ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳು ತಮ್ಮ ಈ ಹಿಂದಿನ ಸರಾಸರಿ ಬಳಕೆಯ ಅನುಸಾರ ಕಡಿಮೆ ಉಚಿತ ವಿದ್ಯುತ್ ಯೂನಿಟ್‌ಗಳ ಲಾಭ ಪಡೆದರೆ (ಸುಮಾರು 70-120 ಯೂನಿಟ್‌ಗಳು) ಮೇಲ್ಮಧ್ಯಮ ಹಾಗೂ ಶ್ರೀಮಂತ ವರ್ಗಗಳು ಬಂಪರ್ ಲಾಭವನ್ನು ಪಡೆಯುತ್ತಿವೆ (ಸುಮಾರು 160 ರಿಂದ 190 ಯೂನಿಟ್‌ಗಳು).
ಆಧುನಿಕ ಜಗತ್ತಿನಲ್ಲಿ ಶ್ರೀಸಾಮಾನ್ಯರ ಬದುಕಿಗೆ ಹೊರೆಯಾಗದಂತೆ ಅವರಿಗೆ ಉಚಿತ ವಿದ್ಯುತ್ ಭದ್ರತೆ ಒದಗಿಸುವುದು ಉತ್ತಮ ವಿಚಾರವೇ ಆದರೂ ಅದರ ಸಂಪೂರ್ಣ ಆಶಯ ಮೇಲಿನ ರೀತಿಯಲ್ಲಿ ಈಡೇರದೇ ಹೋಗಬಹುದು. ಹಾಗಾಗಿ, ಸಹಜವಾಗಿಯೇ ಯಾವ ಆದಾಯ ಮಿತಿಯ ವರ್ಗಕ್ಕೆ ಯಾವ ರೀತಿಯ ಯೋಜನೆಗಳನ್ನು ರೂಪಿಸಬೇಕು, ಅದು ಅವರಿಗೆ ಹೆಚ್ಚು ಸದುಪಯೋಗವಾಗಲು ಏನು ಕ್ರಮ ಕೈಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ರೂಪಿಸುವ ಅಗತ್ಯವಿತ್ತು. ಆಗ ಅವುಗಳು ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ಪಡೆಯುತ್ತಿದ್ದವು.
ಇಂತಹ ನ್ಯೂನತೆಗಳನ್ನು ಸರಿಪಡಿಸುವ, ಅಗತ್ಯವಿರುವ ನಿರ್ದಿಷ್ಟ ಫಲಾನುಭವಿ ಸಮೂಹವನ್ನು ಗುರುತಿಸಿ ಅವರಿಗೆ ನಿರ್ದಿಷ್ಟ ಯೋಜನೆಗಳನ್ನು ಲಭ್ಯವಾಗಿಸುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಈ ದಿಕ್ಕಿನಲ್ಲಿ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚಿಂತನ-ಮಂಥನ ನಡೆದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ನೂರು ಯೂನಿಟ್‌ಗಳವರೆಗೆ ಎಲ್ಲರಿಗೂ ಉಚಿತ ವಿದ್ಯುತ್ ನೀಡಿ, ನಂತರದ ಹಂತದಲ್ಲಿ ಹೆಚ್ಚು ಬಳಕೆಗೆ – ಹೆಚ್ಚಿನ ದರದ ಸ್ಲ್ಯಾಬ್‌ಗಳನ್ನು ಅಳವಡಿಸಿಕೊಳ್ಳುವಂತಹ ಅವಕಾಶಗಳು ಸಹ ಇತ್ತು, ಈಗಲೂ ಇದೆ.
ಹೀಗೆ ಗ್ಯಾರಂಟಿ ಯೋಜನೆಗಳನ್ನು ಮೊನಚು ಮಾಡುವುದು ಒಂದು ವಿಧಾನವಾದರೆ, ಮತ್ತೊಂದು ವಿಧಾನ ರಾಜ್ಯದ ಹಿತಾಸಕ್ತಿಯನ್ನು ನಿಕೃಷ್ಟವಾಗಿ ಕಾಣುವಂತಹ ಪ್ರಸಕ್ತ ತೆರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವುದು. ದೇಶದ ಬೊಕ್ಕಸಕ್ಕೆ ಅಗಾಧ ಪ್ರಮಾಣದಲ್ಲಿ ತೆರಿಗೆಯನ್ನು ರಾಜ್ಯವು ನೀಡಿ ಬದಲಿಗೆ ಮೂರು ಕಾಸಿನ ಅನುದಾನವನ್ನು ಪಡೆಯುವುದು ಪರಮಶೋಷಣೆಯಲ್ಲದೆ ಮತ್ತೇನೂ ಅಲ್ಲ. ಇಂತಹ ಶೋಷಣೆಗೆ ಈಡಾಗಿರುವ ರಾಜ್ಯಗಳೆಲ್ಲವೂ ಇದನ್ನು ಸರಿಪಡಿಸಿಕೊಳ್ಳುವ ದಾರಿಯ ಬಗ್ಗೆ ಸಂಘಟಿತವಾಗಿ, ಗಂಭೀರವಾಗಿ ಯೋಚಿಸಬೇಕಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ಸಹಜವಾಗಿಯೇ ಸಂಪದ್ಭರಿತವೂ, ಆರ್ಥಿಕವಾಗಿ ಮುಂದುವರೆದಿರುವಂತಹ ರಾಜ್ಯಗಳು ಇರುತ್ತವೆ. ಈ ರಾಜ್ಯಗಳು ತುಲನಾತ್ಮಕವಾಗಿ ತಮಗಿಂತ ಹಿಂದುಳಿದಿರುವ ರಾಜ್ಯಗಳ ಅಭಿವೃದ್ಧಿಗೆ, ಅವುಗಳ ಬೆಳವಣಿಗೆಗೆ ತಾವು ಸಂಗ್ರಹಿಸಿ ಕೇಂದ್ರಕ್ಕೆ ನೀಡುವ ತೆರಿಗೆಯಲ್ಲಿ ಪ್ರಮುಖ ಪಾಲನ್ನು ಹಂಚಿಕೊಳ್ಳುವುದು ಸಾಂವಿಧಾನಿಕವೂ, ನೈತಿಕವೂ ಆದ ಹೊಣೆಗಾರಿಕೆ. ಆದರೆ, ಹೀಗೆ ನೀಡುವ ತೆರಿಗೆಯ ಪಾಲು ಎಷ್ಟಿರಬೇಕು ಎನ್ನುವ ಬಗ್ಗೆ ಗಂಭೀರ ನಿಷ್ಕರ್ಷೆಯಾಗಬೇಕಿದೆ. ಕರ್ನಾಟಕದಂತಹ ರಾಜ್ಯಗಳು ನಾಲ್ಕು ಲಕ್ಷ ಕೋಟಿ ರೂ.ಗಳಷ್ಟು ತೆರಿಗೆಯನ್ನು ವಾರ್ಷಿಕವಾಗಿ ಕೇಂದ್ರಕ್ಕೆ ಪಾವತಿಸಿ ಮರಳಿ 52 ಸಾವಿರ ಕೋಟಿಯಷ್ಟು ಹಣವನ್ನು ಪಡೆಯುವುದು, ಇದನ್ನು ಪಡೆಯಲಿಕ್ಕೂ ಕೇಂದ್ರದ ಮುಂದೆ ಮಂಡಿಯೂರುವಂತಾಗುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸರ್ವಥಾ ಸಲ್ಲುವ ಧೋರಣೆಯಲ್ಲ. 1 ರೂ. ತೆರಿಗೆ ನೀಡಿ ಅದರಲ್ಲಿ ಮರಳಿ 15 ಕಾಸು ಅನುದಾನ ಪಡೆಯಲು ಕೈಯೊಡ್ಡುತ್ತಾ ನಿಲ್ಲುವ ದೈನೇಸಿ ಸ್ಥಿತಿ ಕರ್ನಾಟಕದ್ದಾಗಬಾರದು. ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ, ಅದೇ ರೀತಿ, ನೆರೆಯ ತಮಿಳುನಾಡು, ಮಹಾರಾಷ್ಟ್ರಗಳಿಗೂ ಗಂಭೀರ ಅನ್ಯಾಯವಾಗುತ್ತಿದ್ದು. ಈ ರಾಜ್ಯಗಳು ಈ ಕುರಿತು ಗಟ್ಟಿಯಾಗಿ ದನಿ ಎತ್ತಬೇಕಿದೆ.

ಕೇಂದ್ರ ಸರ್ಕಾರವು ತಾನು ರಾಜ್ಯಗಳ ತಲೆಯ ಮೇಲೆ ಕೂತಿರುವ ಮಹಾಮಂಡಳೇಶ್ವರನ ರೀತಿ ವರ್ತಿಸದೆ ಈ ರಾಜ್ಯಗಳಿಂದ ಶಕ್ತಿ, ಸಂಪನ್ಮೂಲವನ್ನು ಪಡೆದು ಅದನ್ನು ಜಾಗರೂಕತೆಯಿಂದ ದೇಶದ ಅಭಿವೃದ್ಧಿಗೆ ಬಳಸುವ ವಿಶ್ವಸ್ತನಂತೆ ವರ್ತಿಸಬೇಕು. ಪ್ರಸ್ತುತ ಒಕ್ಕೂಟ ವ್ಯವಸ್ಥೆಯ ಮಾದರಿಯಲ್ಲಿ, ಯಾವುದೇ ರಾಜಕೀಯ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅಲ್ಲಿ ಸರ್ವಾಧಿಕಾರದ ಧೋರಣೆ ಕಂಡುಬರುತ್ತಿದೆಯೇ ಹೊರತು ವಿಶ್ವಸ್ತನ ಗುಣವಲ್ಲ. ಮಾಂಡಳೀಕರನ್ನು ನಿಯಂತ್ರಿಸುವ ಚಕ್ರಾಧಿಪತಿಯಂತೆ ಕೇಂದ್ರ ಸರ್ಕಾರವು ಕೆಲ ವಿನಾಶಕಾರಿ ಧೋರಣೆ, ನಡಾವಳಿಗಳನ್ನು ರೂಢಿಸಿಕೊಂಡಿದೆ. ಇದು ಬದಲಾಗಲೇಬೇಕು.
ಅಷ್ಟೇ ಅಲ್ಲದೆ, ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣವನ್ನು ಶಿಕ್ಷಣ, ರಕ್ಷಣೆ, ಆರೋಗ್ಯದಂತಹ ನಿರ್ದಿಷ್ಟ ವಲಯಗಳಿಗೆ ಮಾತ್ರವೇ ಕೇಂದ್ರ ಬಳಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರವು ಹೆಚ್ಚಿನ ತೆರಿಗೆ ಪಾಲು ಪಾವತಿಸುವ ರಾಜ್ಯಗಳಿಗೆ ಅವು ಪಾವತಿಸುವ ಪ್ರತಿಯೊಂದು ಪೈಸೆಯೂ ಹೇಗೆ ದೇಶದ ಜನರ ಘನತೆಯ ಬದುಕಿನ ಏಳಿಗೆಗೆ ಮಾತ್ರವೇ ಬಳಕೆಯಾಗುತ್ತಿದೆ ಎನ್ನುವ ಲೆಕ್ಕವನ್ನೂ ನೀಡಬೇಕು. ರಾಜ್ಯಗಳಿಗೆ, ವಿಶೇಷವಾಗಿ ಹೆಚ್ಚಿನ ತೆರಿಗೆಯ ಪಾಲನ್ನು ಪಾವತಿಸುವ ರಾಜ್ಯಗಳಿಗೆ ಕೇಂದ್ರವು ಹಣಕಾಸು ವಿಚಾರದಲ್ಲಿ ಉತ್ತರದಾಯಿಯಾಗಿರಬೇಕು. ಒಂದೊಮ್ಮೆ ತಾವು ನೀಡುತ್ತಿರುವ ಹಣ ದೇಶದ ಜನತೆಯ ಘನತೆಯ ಬದುಕಿನ ಯೋಜನೆಗಳಿಗೆ ಬಳಕೆಯಾಗುತ್ತಿಲ್ಲ ಎನ್ನುವುದು ಇಂತಹ ರಾಜ್ಯಗಳಿಗೆ ಮನವರಿಕೆಯಾದರೆ ಈ ಬಗ್ಗೆ ಸೂಕ್ತ ತಕರಾರು ತೆಗೆದು ಸಾಂವಿಧಾನಿಕ ಮಾರ್ಗಾನುಸಾರವೇ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಸ್ವಾತಂತ್ರ್ಯ, ವೇದಿಕೆಗಳು ಸಹ ಸೃಷ್ಟಿಯಾಗಬೇಕು.
ಇದನ್ನೂ ಓದಿ ರಾಯಭಾರ | ಡಿಕೆ ಸಾಹೇಬರ ‘ಮಿಷನ್ ಚೀಫ್ ಮಿನಿಸ್ಟರ್’ ಎಂಬ ಯೋಜನೆ ‘ಗಾಳಿ ತೆಗೆಯುವ ಕಾರ್ಯಕ್ರಮ’ವಾದ ಪರಿ!
ಇಂತಹ ಗಂಭೀರ ವಿಚಾರಗಳ ಬಗ್ಗೆ ಪಕ್ಷಭೇದ ಮರೆತು ಕರ್ನಾಟಕದ ರಾಜಕಾರಣಿಗಳು ಕೇಂದ್ರ ಸರ್ಕಾರದೊಂದಿಗೆ ದಿಟ್ಟವಾಗಿ ವ್ಯವಹರಿಸುವ ಛಾತಿ, ತಿಳಿವಳಿಕೆ, ಬದ್ಧತೆಯನ್ನು ಬೆಳೆಸಿಕೊಳ್ಳಬೇಕಿದೆ. ರಾಜ್ಯವನ್ನು ಪ್ರತಿನಿಧಿಸುವ ಸಂಸದರಾಗಲಿ, ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿರುವವರಾಗಲಿ ತಮಗೆ ಈ ರಾಜ್ಯದ ಜನತೆ ಶಕ್ತಿ ನೀಡಿರುವುದು ಯಾವುದೇ ಒಂದು ರಾಜಕೀಯ ಪಕ್ಷದ ಕಾರ್ಯಸೂಚಿಯನ್ನು ಎತ್ತಿಹಿಡಿಯಲು ಅಲ್ಲ, ಬದಲಿಗೆ ಈ ನಾಡಿನ ಹಿತಚಿಂತನೆಯನ್ನು ಸಾಕಾರಗೊಳಿಸಲು ಎನ್ನವುದನ್ನು ಮರೆಯಬಾರದು, ಅದಕ್ಕೆ ದ್ರೋಹವೆಸಗಬಾರದು.