ಭೂಮ್ತಾಯಿ | ನೀವರಿಯದ ಸಂಗತಿ: ಗರ್ಭಿಣಿ- ನವಜಾತ ಶಿಶುಗಳಿಗೆ ಕಂಟಕವಾಗುತ್ತಿರುವ ಹವಾಮಾನ ಬದಲಾವಣೆ

Date:

Advertisements

ಮಾನವ ಸಂತತಿಯ ವಿಕಾಸ ಮನುಕುಲದ ಉಳಿವಿಗೆ ಅತ್ಯವಶ್ಯಕ. ಆದರೆ, ಇತ್ತೀಚಿನ ಸಂಶೋಧನೆಗಳು ಸಂತಾನಾಭಿವೃದ್ಧಿ ಪ್ರಕ್ರಿಯೆ ಮೇಲೆಯೇ ಹವಾಮಾನ ಬದಲಾವಣೆ ದುಷ್ಪರಿಣಾಮ ಬೀರಲಾರಂಭಿಸಿದೆ ಎನ್ನುವ ಆಘಾತಕಾರಿ ಅಂಶವನ್ನು ಹೊರಗೆಡಹುತ್ತಿವೆ.

ಹವಾಮಾನ ಬದಲಾವಣೆಯು ಮಾನವನ ಶ್ವಾಸಕೋಶ, ಮಿದುಳು ಮತ್ತು ಹೃದಯ ಸೇರಿದಂತೆ ದೇಹದ ಇತರೆ ಅಂಗಗಳಲ್ಲಿಉಂಟು ಮಾಡಬಲ್ಲ ಆರೋಗ್ಯ ಸಮಸ್ಯೆಗಳ ಕುರಿತು ಈಗಾಗಲೇ ಹಲವಾರು ಅಧ್ಯಯನಗಳು ನಡೆದಿವೆ. ಆದರೆ ಇತ್ತೀಚಿನ ಅಧ್ಯಯನಗಳು ಹವಾಮಾನ ಬದಲಾವಣೆಯಿಂದ ಉಂಟಾಗುವ ತಾಪಮಾನ ಏರಿಕೆಯು ಗರ್ಭಿಣಿಯರ ಆರೋಗ್ಯದ ಮೇಲೆ, ಹೆರಿಗೆಯ ಸಂದರ್ಭಗಳಲ್ಲಿ ಮತ್ತು ನವಜಾತ ಶಿಶುವಿನ ಮೇಲೂ ತೀವ್ರ ಪರಿಣಾಮ ಬೀರಬಲ್ಲದು ಎಂದು ಎಚ್ಚರಿಸುತ್ತಿವೆ.

ಈ ಕುರಿತಂತೆ ಅಧ್ಯಯನ ನಡೆಸಿ ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿರುವ “ಹವಾಮಾನ ಬದಲಾವಣೆಯ ಪರಿಣಾಮಗಳಿಂದ ತಾಯಂದಿರು, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯದ ರಕ್ಷಣೆ” ಎಂಬ ವರದಿಯು ಹವಾಮಾನ ವೈಪರೀತ್ಯದ ಘಟನೆಗಳು ತಾಯಂದಿರು ಮತ್ತು ಮಕ್ಕಳ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು  ನಿರ್ಲಕ್ಷಿಸಲಾಗಿರುವುದು ಹಾಗು ಹವಾಮಾನ ಬದಲಾವಣೆಯ ಚರ್ಚೆಯಲ್ಲಿ ಮಹಿಳೆಯರು, ನವಜಾತ ಶಿಶುಗಳು ಮತ್ತು ಮಕ್ಕಳ ಅಗತ್ಯಗಳಿಗೆ ಸಮರ್ಪಕವಾಗಿ ಗಮನ ನೀಡದಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಹವಾಮಾನ ಬದಲಾವಣೆ ಬೀರುವ ಪರಿಣಾಮಗಳ ತೀವ್ರತೆ ಹಾಗು ಗಂಭೀರತೆ ದಾಖಲಾಗಿಲ್ಲ ಮತ್ತು ಈ ಕುರಿತು ಕೆಲವೇ ಕೆಲವು ವರದಿಗಳನ್ನು ಪ್ರಕಟಿಸಲಾಗಿದೆ  ಎಂದು ವಿಶ್ವ ಆರೋಗ್ಯ ಸಂಸ್ಥೆ ಬೇಸರಿಸಿದೆ.

Advertisements

ಗರ್ಭಿಣಿಯರ ಮೇಲೆ  ಹೆಚ್ಚುತ್ತಿರುವ ತಾಪಮಾನದ ಪರಿಣಾಮಗಳು

ಹವಾಮಾನ ಬದಲಾವಣೆಯ ಕುರಿತು ಸಂಶೋಧನೆ ಮತ್ತು ಅಧ್ಯಯನ ಕೈಗೊಳ್ಳುವ  ಸ್ವತಂತ್ರ ವಿಜ್ಞಾನಿಗಳ ಗುಂಪಾದ ಕ್ಲೈಮೇಟ್ ಸೆಂಟ್ರಲ್ ನಡೆಸಿದ ವಿಶ್ಲೇಷಣೆಯು ವಿಶ್ವದಾದ್ಯಂತ 247ಕ್ಕೂ ಹೆಚ್ಚು ದೇಶಗಳಲ್ಲಿ ಹೆಚ್ಚುತ್ತಿರುವ ತಾಪಮಾನವು  ಗರ್ಭಿಣಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಹೊರಹಾಕಿದೆ.

 ಸಂಶೋಧನೆ ಒಂದರಲ್ಲಿ ಕಳೆದ 5 ವರ್ಷಗಳಿಂದ, ಗರ್ಭಿಣಿಯರ ಮೇಲೆ ಪರಿಣಾಮ ಬೀರಬಲ್ಲ, ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿರುವ ತಾಪಮಾನದಿಂದ ಕೂಡಿರುವ ದಿನಗಳ ವಾರ್ಷಿಕ ಸರಾಸರಿಯನ್ನು ಲೆಕ್ಕ ಹಾಕಲಾಯಿತು. ಇದು ಹೆಚ್ಚು ತಾಪಮಾನದಿಂದ ಕೂಡಿರುವ ಸರಾಸರಿ ದಿನಗಳು ಇತ್ತೀಚಿನ ವರ್ಷಗಳಲ್ಲಿ ದುಪ್ಪಟ್ಟಾಗಿವೆ ಮತ್ತು ಜಾಗತಿಕವಾಗಿ 90 ಶೇಕಡಾ ದೇಶಗಳಲ್ಲಿ ಗರ್ಭಿಣಿಯರು ಇವುಗಳ ಪರಿಣಾಮವನ್ನು ಅನುಭವಿಸುವಂತಾಗಿದೆ ಎಂಬ ಆಘಾತಕಾರಿ ಅಂಶವನ್ನು ಬಹಿರಂಗಗೊಳಿಸಿತು.

ಗರ್ಭಿಣಿಯರು ವಾತಾವರಣದಲ್ಲಿ ಹೆಚ್ಚು ಸಮಯ ಬಿಸಿಗಾಳಿಗೆ ಒಡ್ಡಿಕೊಂಡರೆ/ಒಳಗಾದರೆ ಅಧಿಕ ರಕ್ತದೊತ್ತಡ, ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಟೈಪ್ -2  ಡಯಾಬಿಟಿಸ್, ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯದಲ್ಲಿ ಹೆಚ್ಚಳ, ಗರ್ಭದಲ್ಲಿಯೇ ಶಿಶುವಿನ ಮರಣ ಮತ್ತು ಅವಧಿಪೂರ್ವ ಜನನದಂತಹ  ಅಪಾಯಗಳು ಹೆಚ್ಚಾಗುತ್ತವೆ ಎಂದು ಸಂಶೋಧನೆಗಳು ಎಚ್ಚರಿಸುತ್ತವೆ.

ಬಿಸಿಗಾಳಿ ಕಡಿಮೆ  ಇರುವ ದಿನಗಳಿಗೆ ಹೋಲಿಸಿದಾಗ, ಬಿಸಿಗಾಳಿ ಹೆಚ್ಚಿರುವ ದಿನಗಳಲ್ಲಿ ಅವಧಿಪೂರ್ವ ಶಿಶು ಜನನದ ಸಂದರ್ಭಗಳು ಶೇಕಡಾ 16 ರಷ್ಟಿರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ವಾತಾವರಣದಲ್ಲಿ ಕೇವಲ ಒಂದು ಡಿಗ್ರಿ (0.56 °C)  ಫ್ಯಾರನ್ ಹೀಟ್ ತಾಪಮಾನ ಹೆಚ್ಚಳವೂ ಸಹ ಗರ್ಭಿಣಿಯರಲ್ಲಿ ಅಪಾಯದ ಪ್ರಮಾಣವನ್ನು 5ಶೇಕಡಾದಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸುತ್ತಾರೆ. ಇದೇ ರೀತಿ ಸಾಧಾರಣವಾಗಿ ವಾತಾವರಣದಲ್ಲಿ ಸಾಮಾನ್ಯವಾಗಿರುವ ತಾಪಮಾನವು  ಹೆಚ್ಚಾದಾಗ ಜನನದ ಸಂದರ್ಭದಲ್ಲಿ ಮಗುವಿನ ತೂಕದಲ್ಲಿ ಇಳಿಕೆ ಉಂಟಾಗುತ್ತದೆ. ಅಧ್ಯಯನಗಳ ಪ್ರಕಾರ ಈ ಸನ್ನಿವೇಶದಲ್ಲಿ ಶಿಶುವಿನ ತೂಕವು ಸರಾಸರಿ 26 ಗ್ರಾಂ ಕಡಿಮೆಯಾಗುತ್ತದೆ.

ನವಜಾತ ಶಿಶು

ಇದೇ ರೀತಿ ಬಿಸಿಗಾಳಿಯ ಪ್ರಮಾಣ ಹೆಚ್ಚಿರುವ ಸಂದರ್ಭದಲ್ಲಿ ನವಜಾತ ಶಿಶುಮರಣದ ಅಪಾಯ 46 ಶೇಕಡಾ ಹೆಚ್ಚಿರುತ್ತದೆ.  ಗರ್ಭಧಾರಣೆಯ ನಂತರದ  ಆರಂಭಿಕ ದಿನಗಳಲ್ಲಿ ಬಿಸಿಗಾಳಿಯನ್ನು ಗರ್ಭಿಣಿಯರು ಎದುರಿಸಿದರೆ, ನವಜಾತ ಶಿಶುಗಳ ಮರಣ ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ.  ಬಿಸಿಗಾಳಿಯಿಂದಾಗಿ ಗರ್ಭಿಣಿಯರಲ್ಲಿ ನೀರು ಹೋಗುವುದು (ಭ್ರೂಣದ ಸುತ್ತ ಇರುವ ದ್ರವ ತುಂಬಿರುವ  ಚೀಲವು ಹೆರಿಗೆಗೆ ಮುನ್ನವೇ ಒಡೆಯುವುದು), ಗರ್ಭಿಣಿ ಸ್ತ್ರೀಯರಲ್ಲಿ ಕಾಣಿಸಿಕೊಳ್ಳಬಹುದಾದ ಹೃದಯ ಸಂಬಂಧೀ ಕಾಯಿಲೆಗಳು, ಹೆಚ್ಚಿನ ರಕ್ತದೊತ್ತಡ, ನವಜಾತ ಶಿಶು ಮರಣ, ಹೆಚ್ಚಿದ ರಕ್ತದೊತ್ತಡದಿಂದ  ದೇಹದ ಇತರ ಅಂಗಾಂಗಗಳಲ್ಲಿ ಕಾಣಿಸಿಕೊಳ್ಳಬಹುದಾದ ಸಮಸ್ಯೆಗಳು ಮತ್ತು ನವಜಾತ ಶಿಶುಗಳಲ್ಲಿ ಆರೋಗ್ಯ ಸಂಬಂಧೀ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳ ಬಹುದಾದ ಸಾಧ್ಯತೆಗಳು ಹೆಚ್ಚಿರುತ್ತವೆ.

ಬಿಸಿಗಾಳಿಗೆ ಅಲ್ಪಾವಧಿ (Acute) ಅಥವಾ ದೀರ್ಘಕಾಲದವರೆಗೆ (Chronic) ಒಡ್ಡಿಕೊಳ್ಳುವುದು ಗರ್ಭಿಣಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆರಿಗೆಗೂ ಒಂದು ವಾರ ಮುನ್ನ ನಿತ್ಯವೂ ವಾತಾವರಣದಲ್ಲಿರುವ  ಬಿಸಿಗಾಳಿಗೆ ಒಳಗಾಗುವುದು ಅವಧಿಗೂ ಮುನ್ನ ಹೆರಿಗೆಗೆ ಮತ್ತು ನವಜಾತ ಶಿಶುವಿನ ಮರಣಕ್ಕೆ ಕಾರಣವಾಗಬಹುದು. ಅದೇ ರೀತಿ ಗರ್ಭಧಾರಣೆಯ ಆರಂಭದಿಂದ ಹೆರಿಗೆಯವರೆಗೂ ಅವರು ಹೆಚ್ಚಿನ ತಾಪಮಾನಕ್ಕೆ ಒಳಗಾಗುವ ಅವಧಿಯನ್ನು ದೀರ್ಘಕಾಲದ ಒಡ್ಡಿಕೊಳ್ಳುವಿಕೆ  ಎಂದು ಪರಿಗಣಿಸಲಾಗುತ್ತದೆ. ಈ ರೀತಿಯಾಗಿ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವಿಕೆ ಗರ್ಭಿಣಿಯರ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಸ್ಪಷ್ಟತೆ ಇಲ್ಲದಿದ್ದರೂ, ಇದು ಗರ್ಭಧರಿಸುವ ಸೂಕ್ತ ವಯಸ್ಸನ್ನು ಮೀರಿರುವವರಲ್ಲಿ, ಕಡಿಮೆ ಸಾಮಾಜಿಕ-ಆರ್ಥಿಕ ವರ್ಗದವರಲ್ಲಿ, ಕಡಿಮೆ ಶಿಕ್ಷಣ ಹೊಂದಿರುವವರ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ದೀರ್ಘಕಾಲ ಬಿಸಿಲಿಗೆ ಒಡ್ಡಿಕೊಳ್ಳುವಿಕೆ ಗರ್ಭಿಣಿ ಸ್ತ್ರೀಯರ ಭಾವನಾತ್ಮಕ ಒತ್ತಡಕ್ಕೂ ಕಾರಣವಾಗಬಹುದು ಎಂದು ಅಧ್ಯಯನಗಳು ಹೇಳುತ್ತವೆ.

ಇಂಗಾಲದ ಹೊರಸೂಸುವಿಕೆ ಮತ್ತು ಶಿಶುವಿನ ಆರೋಗ್ಯ

ಮೇಲಿನ ಅಧ್ಯಯನದಲ್ಲಿ ವಿಶ್ಲೇಷಿಸಲಾದ ಪ್ರತಿಯೊಂದು ದೇಶದಲ್ಲಿಯೂ  ಹವಾಮಾನ ಬದಲಾವಣೆಯಿಂದಾಗಿ  ಅಪಾಯಕಾರಿ ಪರಿಣಾಮಗಳನ್ನು ಬೀರಬಲ್ಲ ಹೆಚ್ಚಿನ ತಾಪಮಾನದ ದಿನಗಳನ್ನು ಗರ್ಭಿಣಿಯರು ಎದುರಿಸುವಂತಾಯಿತು. ಇದು ಕಲ್ಲಿದ್ದಲು, ತೈಲ ಮತ್ತು ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಪಳೆಯುಳಿಕೆ ಇಂಧನ ಹೊರಸೂಸುವಿಕೆಯನ್ನು ಕಡಿತಗೊಳಿಸುವುದು ಕೇವಲ ಭೂಗ್ರಹದ  ಹಿತದೃಷ್ಟಿಯಿಂದ  ಮಾತ್ರವಲ್ಲ, ಪ್ರಪಂಚದಾದ್ಯಂತ ಗರ್ಭಿಣಿಯರು ಮತ್ತು ನವಜಾತ ಶಿಶುಗಳನ್ನು ರಕ್ಷಿಸುವ ನಿಟ್ಟಿನಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ಸಾಬೀತಾಗುತ್ತದೆ. ಇಲ್ಲವಾದರೆ ಇಂಗಾಲದ ಹೊರಸೂಸುವಿಕೆ ಗರ್ಭಾವಸ್ಥೆಯಲ್ಲಿರುವ ಶಿಶುಗಳಿಗೆ  ಮಾರಣಾಂತಿಕ ಸಮಸ್ಯೆಯಾಗಿ ಪರಿಣಮಿಸಬಲ್ಲದು. ಅದು ಅವಧಿಪೂರ್ವ ಪ್ರಸವ, ಕಡಿಮೆ ತೂಕದ ಶಿಶುಗಳ  ಜನನ ಮತ್ತು ಗರ್ಭಾವಸ್ಥೆಯಲ್ಲಿಯೇ ಶಿಶುಗಳ ಮರಣಕ್ಕೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ಶಿಶುವಿನ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ, ಅವರ ಜೀವಿತಾವಧಿಯ ಉದ್ದಕ್ಕೂ ಅವರು ಒಂದಲ್ಲ ಒಂದು ಆರೋಗ್ಯ ಸಂಬಂಧೀ ಸಮಸ್ಯೆಗಳನ್ನು ಎದುರಿಸುವಂತಾಗಬಹುದು. ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಅವರ ದೇಹ ಮತ್ತು ಮಿದುಳಿನ ಬೆಳವಣಿಗೆಯ ಮೇಲೂ ಇದು ವೈರುಧ್ಯ ಪರಿಣಾಮಗಳನ್ನು ಬೀರಬಹುದು.

grfBiNi

ಪ್ರಕೃತಿ ವಿಕೋಪಗಳು ಮತ್ತು ಗರ್ಭಿಣಿಯರ ಆರೋಗ್ಯ

ಕರೆಂಟ್ ಎನ್ವಿರಾನ್ಮೆಂಟ್ ಹೆಲ್ತ್ ರೆಪ್ ಎಂಬ ಜರ್ನಲಿನಲ್ಲಿ ಪ್ರಕಟವಾದ ʻದ ಚೇಜಿಂಗ್ ಕ್ಲೈಮೇಟ್ ಎಂಡ್  ಮೆಟರ್ನಲ್ ಹೆಲ್ತ್ʼ (ಬದಲಾಗುವ ಹವಾಮಾನ ಮತ್ತು ತಾಯಂದಿರ ಆರೋಗ್ಯ) ಎಂಬ ಸಂಶೋಧನಾ ಲೇಖನದಲ್ಲಿ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಪಬ್ಲಿಕ್ ಹೆಲ್ತ್ ವಿಭಾಗದ ಸ್ಯಾಂಡಿ ಹಾ ಹವಾಮಾನ ಬದಲಾವಣೆ ಸಂಬಂಧಿತ ಪ್ರಕೃತಿ ವಿಕೋಪಗಳು ಗರ್ಭಿಣಿಯರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಚರ್ಚಿಸುತ್ತಾರೆ. ಬದಲಾಗುತ್ತಿರುವ ಹವಾಮಾನವು ನೇರವಾಗಿ ಪರಿಸರ ವಿಕೋಪಗಳ ಮೂಲಕ (ಅಂದರೆ, ಕಾಡ್ಗಿಚ್ಚು, ಬಿಸಿಗಾಳಿ, ಚಂಡಮಾರುತ, ಪ್ರವಾಹ ಮತ್ತು ಬರಗಾಲ) ಮತ್ತು ಪರೋಕ್ಷವಾಗಿ ನೈಸರ್ಗಿಕ ಮತ್ತು ಸಾಮಾಜಿಕ ಪರಿಸರದಲ್ಲಿನ ಬದಲಾವಣೆಗಳ ಮೂಲಕ ಗರ್ಭಿಣಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ.

ಚಂಡಮಾರುತಗಳು ಮತ್ತು ಪ್ರವಾಹದಂತಹ ಹವಾಮಾನ ವೈಪರೀತ್ಯದ ಸಂದರ್ಭಗಳಲ್ಲಿ, ಗರ್ಭಿಣಿಯರು ತಮ್ಮ ಮನೆ, ಆಸ್ತಿ ಮತ್ತು ಕೆಲಸವನ್ನು ಕಳೆದುಕೊಳ್ಳುವ ಭಯಕ್ಕೊಳಗಾಗುತ್ತಾರೆ.  ಈ ಪರಿಸ್ಥಿತಿಯಲ್ಲಿ ಮಗುವಿನ ಆರೋಗ್ಯ ಮತ್ತು ಹೆರಿಗೆಯ ಕುರಿತಾಗಿ ತೀವ್ರ ಆತಂಕಕ್ಕೆ ಒಳಗಾಗಿ ಮಾನಸಿಕ ಒತ್ತಡವನ್ನು ಮತ್ತು ಖಿನ್ನತೆಯನ್ನು ಅನುಭವಿಸುತ್ತಾರೆ. ಇವೆಲ್ಲವೂ ಗರ್ಭಿಣಿಯರಿಗೆ ಅಪಾಯಕಾರಿ ಅಂಶಗಳಾಗಿ ಪರಿಣಮಿಸುತ್ತವೆ. ಚಂಡಮಾರುತದ ಅಬ್ಬರಕ್ಕೆ ಸಿಕ್ಕಿ ನಲುಗಿರುವ ಮಹಿಳೆಯರಿಗೆ ಗರ್ಭಧಾರಣೆಯ ಸಮಯದಲ್ಲಿ ಅಧಿಕ ರಕ್ತದೊತ್ತಡದಿಂದಾಗಿ ಕಾಣಿಸಿಕೊಳ್ಳುವ ಅಸ್ವಸ್ಥತೆಗಳ ಪ್ರಮಾಣ ಹೆಚ್ಚಿರುತ್ತದೆ.  ಹೆರಿಗೆಯ ಸಮಯದಲ್ಲಿ ತೊಡಕುಗಳು ಮತ್ತು ಸಿ-ಸೆಕ್ಷನ್/ಸಿಸೇರಿಯನ್‌ ಮಾಡಿಸಲೇ ಬೇಕಾದ ಅನಿವಾರ್ಯತೆಗಳೂ ಹೆಚ್ಚಿರುತ್ತವೆ. 

ಇದರೊಂದಿಗೆ ಚಂಡಮಾರುತಗಳು ಮತ್ತು ಪ್ರವಾಹದಂತಹ ಹವಾಮಾನ ವೈಪರೀತ್ಯದ ಸಂದರ್ಭಗಳಲ್ಲಿ, ಸುರಕ್ಷಿತ ಆಹಾರ ಮತ್ತು ನೀರಿನ ಲಭ್ಯತೆ ದುರ್ಲಬವಾಗುತ್ತದೆ. ನೀರಿನಿಂದ ಹರಡುವ ರೋಗಕಾರಕಗಳು ಅನಾರೋಗ್ಯವನ್ನು ಉಂಟು ಮಾಡುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ಬೆಳೆಗಳಿಗೆ ಸಿಂಪಡಿಸಿದ ವಿಷಕಾರಿ ಕೀಟನಾಶಕ ಸಂಯುಕ್ತಗಳು ನೀರಿನ ಮೂಲವನ್ನು ಸೇರಬಹುದು.

ಚಂಡಮಾರುತಗಳಂತೆ, ಬರಗಾಲದಲ್ಲಿ ಸುರಕ್ಷಿತ ಕುಡಿಯುವ ನೀರಿನ ಅಲಭ್ಯತೆ, ನೀರಿನ ಅಭಾವದಿಂದ ಜಾನುವಾರುಗಳ ಸಾವು, ಬೆಳೆ ನಾಶ ಮತ್ತುಆಹಾರ ಅಭದ್ರತೆ ಗರ್ಭಿಣಿಯರಲ್ಲಿ ಅಪೌಷ್ಟಿಕತೆಗೆ ಕಾರಣವಾಗುತ್ತವೆ. ತಾಯಂದಿರಲ್ಲಿ ಪೋಷಕಾಂಶಗಳ ಕೊರತೆ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದರೊಂದಿಗೆ ದೀರ್ಘಕಾಲದ ಕಾಯಿಲೆಗಳು ಮತ್ತು ಮುಂಬರುವ ಪೀಳಿಗೆಯಲ್ಲೂ  ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವು ಎಚ್ಚರಿಸಿದೆ.

italy baby

1993 ರಿಂದ ಕೆಲವು ಪ್ರದೇಶಗಳಲ್ಲಿ ಸಮುದ್ರ ಮಟ್ಟ 6–8 ಇಂಚು (15–20 ಸೆಂ.ಮೀ) ಹೆಚ್ಚಾಗಿದೆ ಎನ್ನುವ ಲೇಖಕರು ಈ ಹೆಚ್ಚಳಕ್ಕೆ  ಹವಾಮಾನ ಬದಲಾವಣೆಯಿಂದಾಗಿ ಉಂಟಾಗಿರುವ ಹಿಮನದಿಗಳು ಮತ್ತು ಮಂಜುಗಡ್ಡೆಗಳ ಕರಗುವಿಕೆ  ಕಾರಣ ಎನ್ನುತ್ತಾರೆ. ಇದರಿಂದಾಗಿ ಚಂಡಮಾರುತಗಳು ಉಂಟಾಗುತ್ತವೆ ಎನ್ನುವ ಅಂಶವನ್ನು ಉಲ್ಲೇಸುತ್ತಾ ಟೆಕ್ಸಾಸಿನಲ್ಲಿ 2017ರಲ್ಲಿ ಬಂದ ಹಾರ್ವೆ ಚಂಡಮಾರುತದ ನಂತರ ಶೇಕಡಾ 24 ಗರ್ಭಿಣಿಯರು ತುರ್ತಾಗಿ ವೈದ್ಯರನ್ನು ಭೇಟಿ ಮಾಡುವ ಸಂದರ್ಭಗಳು ಎದುರಾದವು ಎಂಬ ಅಂಶವನ್ನು ಈ ಪ್ರಬಂಧವು ಉಲ್ಲೇಖಿಸಿದೆ. ಈ ಪ್ರವಾಹದ ಒಂದು ತಿಂಗಳ ಬಳಿಕವೂ ಇದೇ ರೀತಿಯ ಘಟನೆಗಳು ಮರುಕಳಿಸಿದವು. ಅದೇ ರೀತಿ 2005ರಲ್ಲಿ ಯುನೈಟೆಡ್ ಸ್ಟೇಟ್ಸ್ ಗಲ್ಫ್ ಕೋಸ್ಟ್ ನಲ್ಲಿ ಕಾಣಿಸಿಕೊಂಡ ಕತ್ರಿನಾ ಚಂಡಮಾರುತದ ಪ್ರವಾಹ ಅಲಬಾಮಾದಲ್ಲಿ ಶಿಶುಗಳ ಅಕಾಲಿಕ ಜನನದ ದರದಲ್ಲಿ ಶೇಕಡಾ 23ರಷ್ಟು ಹೆಚ್ಚಳಕ್ಕೆ ಕಾರಣವಾಯಿತು. ಅದೇ ರೀತಿ, ಲೂಸಿಯಾನದಲ್ಲಿ 2005ರಲ್ಲಿ ಕಾಣಿಸಿಕೊಂಡ ಕತ್ರಿನಾ ಮತ್ತು ರೀಟಾದ ಪ್ರವಾಹಗಳು ನವಜಾತ ಶಿಶುಗಳ  40% ಹೆಚ್ಚಳಕ್ಕೆ ಕಾರಣವಾದವು ಎನ್ನುವ ಆಘಾತಕಾರಿ ಮಾಹಿತಿಯನ್ನು ಈ ಅಧ್ಯಯನವು ಹೊರಹಾಕುತ್ತದೆ.

ಹವಾಮಾನ ಬದಲಾವಣೆಯ ಕಾರ್ಯಸೂಚಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಪ್ರಾತಿನಿಧಿತ್ವ

ಯುನಿಸೆಫ್ ಇತ್ತೀಚೆಗೆ ಹೊರತಂದಿರುವ ʻಹೆಣ್ಣುಮಕ್ಕಳಿಗಾಗಿ ಗುರಿಗಳು: ಹೆಣ್ಣುಮಕ್ಕಳಿಗಾಗಿ ಏನು ಬದಲಾಗಿದೆ? ಕಳೆದ 30 ವರ್ಷಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗಾಗಿ ಹಕ್ಕುಗಳು (Girl Goals: What has changed for girls? Adolescent girls’ rights over 30 years) ಎಂಬ ವರದಿಯು ಹವಾಮಾನ ಬದಲಾವಣೆಯ ಕಾರ್ಯಸೂಚಿಗಳಲ್ಲಿ ಮಹಿಳೆಯರಿಗೆ ಮತ್ತು  ಅವರ ಸಮಸ್ಯೆಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ವಿಷಾದಿಸುತ್ತದೆ.

ಇದನ್ನೂ ಓದಿ ಗಾಜಾ | ನೆರವು ವಿತರಣಾ ಕೇಂದ್ರದ ಮೇಲೆ ಇಸ್ರೇಲ್‌ನಿಂದ ಗುಂಡಿನ ದಾಳಿ: 30 ಮಂದಿ ಸಾವು

ಈ ವರದಿಯು ಹವಾಮಾನ ಬದಲಾವಣೆ ವೇಗ ಸಾಕಷ್ಟು ತೀವ್ರಗೊಂಡಿದೆ ಮತ್ತು ಇದರ ಪರಿಣಾಮವಾಗಿ ಚಂಡಮಾರುತಗಳು, ಕಾಡ್ಗಿಚ್ಚು, ಪ್ರವಾಹ ಮತ್ತು ಬರಗಾಲದವರೆಗೆ ಹವಾಮಾನ ವೈಪರೀತ್ಯಗಳ ಘಟನೆಗಳು ಕಾಣಿಸಿಕೊಳ್ಳುತ್ತಿರುವ ಸಂಖ್ಯೆ ಮತ್ತು ತೀವ್ರತೆಯಲ್ಲಿ ಹೆಚ್ಚಳವಾಗಿದೆ ಎಂಬುದನ್ನು ಗಮನಿಸುತ್ತದೆ. ಸರಾಸರಿ ಬಿಸಿಗಾಳಿಯ ದಿನಗಳಲ್ಲೂ ಏರಿಕೆ ಕಂಡುಬಂದಿದೆ  ಎನ್ನುತ್ತಾ ಈ ವರದಿಯು ಪ್ರಸ್ತುತ ಮಕ್ಕಳು ಬಿಸಿಗಾಳಿಗೆ ಎದುರಾಗುವ ಸಂದರ್ಭಗಳು 2000ರ ದಶಕಕ್ಕೆ ಹೋಲಿಸಿದಾಗ  ಸುಮಾರು ಎಂಟು ಪಟ್ಟು ಹೆಚ್ಚು ಎನ್ನುತ್ತದೆ.

ಹವಾಮಾನ ಬಿಕ್ಕಟ್ಟು ಪ್ರತಿಯೊಂದು ಮಗುವಿನ ಆರೋಗ್ಯ ಮತ್ತು ಯೋಗಕ್ಷೇಮದ ಮೂಲಭೂತ ಹಕ್ಕನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಇದು ಅಂತಿಮವಾಗಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಹವಾಮಾನ ಬದಲಾವಣೆಯ ಕಾರ್ಯಸೂಚಿಯಲ್ಲಿ ಅಗತ್ಯವಾಗಿ ಮತ್ತು ಜರೂರಾಗಿ ಸೇರಿಸಬೇಕಾದ ಕ್ಷಣ. ಈ ನಿಟ್ಟಿನಲ್ಲಿ ಲಿಂಗ ಸಂವೇದನೆ ಹೊಂದಿರುವ ಹವಾಮಾನ ನೀತಿಗಳ  ಅಗತ್ಯವಿದೆ. ಮಕ್ಕಳ ಭವಿಷ್ಯವನ್ನು ಪ್ರಜ್ಞಾಪೂರ್ವಕವಾಗಿ ರಕ್ಷಿಸಬೇಕಾಗಿದೆ. ಅವರ ಆರೋಗ್ಯ ಮತ್ತು ಉಳಿವಿಗಾಗಿ ತುರ್ತಾಗಿ  ಕ್ರಮ ಕೈಗೊಳ್ಳಬೇಕಾಗಿದೆ.

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X