ಗ್ರಾಮ ಮಧ್ಯದಲೊಂದು ಹೋಮದ ಗುಂಡಿ ಇದ್ದರೆ ಸಂಪ್ರದಾಯವಾದಿಗಳು ಆ ಹೋಮಕ್ಕೆ ವಿವಿಧ ವಸ್ತು ,ಪ್ರಾಣಿಗಳನ್ನು ಆಹುತಿ ಕೊಡುವರು ಎನ್ನುವ ಶರಣ ಘಟ್ಟಿವಾಳಯ್ಯನ ಸಾಂಕೇತಿಕ ಭಾಷೆ ಈ ದೇಶದ ಪ್ರತಿ ಹಳ್ಳಿಗಳಲ್ಲಿರುವ ವೈದಿಕರ ಸಂತತಿ ಮತ್ತು ಅವರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಆಚರಿಸುವ ಅಮಾನುಷ ಸಂಪ್ರದಾಯಗಳು ಈ ನೆಲದ ಬಡವರನ್ನು ಆಹುತಿ ಪಡೆಯುತ್ತಿವೆ ಎಂದು ವರ್ಣಿಸುತ್ತಿದೆ. ವೈದಿಕರು ಸಂಪ್ರದಾಯದ ಹೆಸರಿನಲ್ಲಿ ಹಾಕುವ ಹೋಮ ಕುಂಡದೊಳಗಿನ ಬೆಂಕಿಯು ನಮ್ಮ ಸುತ್ತಲು ಅಜ್ಞಾನದ ಹೊಗೆಯನ್ನು ಆವರಿಸುವಂತೆ ಮಾಡಿದೆ.
ಯಜ್ಞ-ಯಾಗˌ ಹೋಮ-ಹವನಗಳು ನೆಲಮೂಲ ಸಂಸ್ಕೃತಿಯ ಆಚರಣೆಗಳಲ್ಲ. ಇವು ಯುರೇಷಿಯಾ, ಕಕೇಷಿಯಾ, ಸಿರಿಯಾ, ಇರಾನ್ ಮುಂತಾದ ಮಧ್ಯಪ್ರಾಚ್ಯದ ಭಾಗಗಳಿಂದ ವಲಸೆ ಈ ಉಪಖಂಡಕ್ಕೆ ಬಂದಿರುವ ಸನಾತನ ಆರ್ಯ ವೈದಿಕ ಬ್ರಾಹ್ಮಣರ ಆಚರಣೆಗಳು. ಬ್ರಾಹ್ಮಣ ಶ್ರೇಷ್ಠತೆ, ವೇದಪ್ರಾಮಾಣ್ಯ, ಗೃಹಾಗ್ನಿಪಾಲನೆ, ಸಂಧ್ಯಾವಂದನೆ, ಪಿತೃತರ್ಪಣ, ಪಿತೃಪಕ್ಷಾಚರಣೆ, ಗಾಯತ್ರಿ ಮಂತ್ರ ಪಠಣ,ಅದಕ್ಕಾಗಿ ಜುಟ್ಟು ಜನಿವಾರಗಳು, ಗೋತ್ರಪ್ರವರಗಳ ಪುನರುಚ್ಛಾರಣೆಯ ಸಂಪ್ರದಾಯವು ಅಪ್ಪಟ ಭಾರತೀಯರ ಆಚರಣಾ ವಿಧಾನಗಳಲ್ಲ. ಇವೆಲ್ಲವೂ ವಲಸೆ ಬ್ರಾಹ್ಮಣರ ಆಚರಣೆಗಳು. ಸನಾತನಿ ಆರ್ಯರು ಬರೆದ ಕಾಲ್ಪನಿಕ ಪುರಾಣಗಳಲ್ಲಿ ರಾಕ್ಷಸರು ಋಷಿ ಮುನಿಗಳು ಮಾಡುವ ಹೋಮ ಹವನಗಳಿಗೆ ವಿಘ್ನ ತಂದೊಡ್ಡುತ್ತಿದ್ದ ಸಂಗತಿಗಳನ್ನು ನೀವೆಲ್ಲರೂ ತಿಳಿದಿದ್ದಿರಿ. ಇತ್ತೀಚಿಗೆ ಈ ಬ್ರಾಹ್ಮಣ ಧರ್ಮದ ಆಚರಣೆಗಳನ್ನು ಸಮಸ್ತ ಹಿಂದೂ ಧರ್ಮದ ಆಚರಣೆಗಳೆಂದು ಸುಳ್ಳನ್ನು ಹರಿಬಿಡಲಾಗುತ್ತಿದೆ. ಹಿಂದೂ ಒಂದು ಜೀವನಮಾರ್ಗವೆ ಹೊರತು ಧರ್ಮವಲ್ಲವೆಂದು ಈಗಾಗಲೆ ಈ ನೆಲದ ಸರ್ವೋಚ್ಛ ನ್ಯಾಯಾಲಯವೆ ಸ್ಪಷ್ಟಪಡಿಸಿದೆ. ಆದರೆ ಬ್ರಾಹ್ಮಣ ಧರ್ಮವು ವೈಜ್ಞಾನಿಕˌ ವೈಚಾರಿಕ ಹಾಗೂ ವಸ್ತುನಿಷ್ಠ ತಾರ್ಕಿಕ ಪ್ರಮಾಣಗಳನ್ನು ನಿರಾಕರಿಸುವ ಒಂದು ಅತ್ಯಂತ ಅಥಾಸ್ಥಿತಿವಾದಿ ಸಿದ್ಧಾಂತವುಳ್ಳ ಧರ್ಮ.
“ಹಿಂದೂ ಧರ್ಮ ಎನ್ನುವುದು ಒಂದು ಅಸ್ಪಷ್ಟ ನಂಬಿಕೆ. ಅದರಲ್ಲಿ ಅನೇಕ ರೂಪಗಳಿವೆ: ವೈದಿಕˌ ಉಪನಿಷದಿಕˌ ಪೌರಾಣಿಕ ಮತ್ತು ಶಾಸ್ತ್ರೀಯ. ಹಿಂದೂ ಧರ್ಮವನ್ನು ಒಂದು ಧರ್ಮವಾಗಿ ತಿಳಿದುಕೊಳ್ಳುವ ಈ ನಾಲ್ಕು ಮಾರ್ಗಗಳಲ್ಲಿ ಏಕರೂಪವೆನ್ನುವುದು ಒಂದು ನಿರಾಧಾರ ಕಲ್ಪನೆಯಾಗಿದೆ. ಹಿಂದೂ ತತ್ವಶಾಸ್ತ್ರಗಳಾದ ಸಾಂಖ್ಯ ˌ ಯೋಗˌ ನ್ಯಾಯˌ ವೈಶೇಷಿಕಾˌ ಮೀಮಾಂಸ ಮತ್ತು ವೇದಾಂತ- ಈ ಆರು ಸಿದ್ಧಾಂತಗಳೂ ಸಹ ಭಿನ್ನ ಭಿನ್ನ ರೂಪಗಳನ್ನು ಹೇಳುತ್ತವೆ ಮತ್ತು ಅಲ್ಲೂ ಸಹ ಏಕರೂಪತೆ ಎನ್ನುವುದು ದುರ್ಲಭ ಸರಕಾಗಿದೆ” ಎನ್ನುತ್ತಾರೆ ಡಾ. ಶಿವಾನಂದ ಜಾಮದಾರ್ ಅವರು ತಮ್ಮ ‘ಲಿಂಗಾಯತರು ಹಿಂದೂಗಳೆ?: ಲಿಂಗಾಯತ ಧರ್ಮ ಮತ್ತು ಹಿಂದೂ ಧರ್ಮ: ಒಂದು ತುಲನೆ’ ಎನ್ನುವ ಗ್ರಂಥದಲ್ಲಿ. ಮುಂದುವರೆದು ಅವರು ಸರ್ವೋಚ್ಚ ನ್ಯಾಯಾಲಯ ಗುರುತಿಸಿದ ಹಿಂದೂ ಧರ್ಮದ ಲಕ್ಷಣವನ್ನು ಹೀಗೆ ವಿವರಿಸುತ್ತಾರೆ: “ಧಾರ್ಮಿಕ ಮತ್ತು ತಾತ್ವಿಕ ವಿಷಯಗಳಲ್ಲಿ ವೇದಗಳು ಅತ್ಯಂತ ಅಧಿಕೃತವೆಂದೂˌ ಅವು ಹಿಂದೂ ತತ್ವಜ್ಞಾನಕ್ಕೆ ಏಕಮಾತ್ರ ಆಧಾರವೆಂದೂ ಹಿಂದೂ ಚಿಂತಕರು ಮತ್ತು ತತ್ವಜ್ಞಾನಿಗಳು ಶ್ರದ್ಧಾಭಕ್ತಿಯಿಂದ ಒಪ್ಪಿಕೊಳ್ಳುವುದು ಹಿಂದೂ ಧರ್ಮದ ಪ್ರಥಮ ಲಕ್ಷಣವಾಗಿದೆ.” ಅಂದರೆ ಭಾರತದಲ್ಲಿ ಶೇಕಡ 95% ಜನರು ವೇದಗಳನ್ನು ಪ್ರಮಾಣವೆಂದು ಒಪ್ಪಿಕೊಳ್ಳುವುದಿಲ್ಲವಾಗಿ ಅವರು ಯಾರೂ ಹಿಂದೂಗಳಲ್ಲ ಎಂದಾಯಿತು.

ಆದ್ದರಿಂದ ಮೇಲೆ ವಿವರಿಸಿದ ಅನೇಕ ಆಚರಣೆಗಳು ಹಾಗೂ ಸಿದ್ಧಾಂತಗಳು ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ಬ್ರಾಹ್ಮಣ ಧರ್ಮದ ಆಚರಣೆಗಳು ಎನ್ನುವುದು ಸ್ಪಷ್ಟವಾಗುತ್ತದೆ. ದೇವತೆಗಳು ಅಥವಾ ಸುರರನ್ನು ಒಲಿಸಿಕೊಳ್ಳಲು ಅಥವಾ ಖುಷಿಪಡಿಸಲು ಸನಾತನ ಬ್ರಾಹ್ಮಣರು ಯಜ್ಞಯಾಗˌ ಹೋಮ-ಹವನಗಳನ್ನು ಮಾಡುತ್ತಿದ್ದರು. ಈ ಆಚರಣೆಗಳಲ್ಲಿ ಬೆಲೆ ಬಾಳುವ ಆಹಾರ ಪದಾರ್ಥಗಳುˌ ವಸ್ತ್ರಗಳನ್ನು ಬೆಂಕಿಗೆ ಆಹುತಿ ನೀಡಲಾಗುತ್ತಿತ್ತು. ಪ್ರಾಣಿಗಳನ್ನು ವಿಶೇಷವಾಗಿ ನೆಲಮೂಲದ ಕೃಷಿ ಕಾಯಕದ ಜನರ ಬದುಕಿಗೆ ಆಸರೆಯಾಗಿದ್ದ ಹಸುˌ ಎತ್ತುಗಳನ್ನು ಬಲಿಕೊಟ್ಟು ಅವುಗಳ ಮಾಂಸವನ್ನು ಭಕ್ಷಿಸಲಾಗುತ್ತಿತ್ತು. ಹೋಮಕುಂಡದಲ್ಲಿ ಬೆಂಕಿ ಹೊತ್ತಿಸಲು ಕಾಡುಗಳನ್ನು ನಾಶಮಾಡಿದ ಕಟ್ಟಿಗೆಗಳನ್ನು ಬಳಸಲಾಗುತ್ತಿತ್ತು. ನಿಸರ್ಗನಾಶˌ ಹಾಗೂ ವಾತಾವರಣವನ್ನು ಕಲುಷಿತಗೊಳಿಸುವ ಮತ್ತು ಮನುಷ್ಯರು ತಿನ್ನುವ ಪದಾರ್ಥಗಳನ್ನು ಸುಡುವ ಅನಾಗರಿಕˌ ಅರ್ಥಹೀನ ಧಾರ್ಮಿಕ ಆಚರಣೆಯನ್ನು ಸನಾತನಿಗಳಿಂದ ಅಸುರರೆಂದು ಕರೆಯಲ್ಪಡುತ್ತಿದ್ದ ನೆಲಮೂಲದ ವಿಚಾರವಿಧಿಗಳು ತಡೆಯುವ ಪ್ರಯತ್ನ ಮಾಡುತ್ತಿದ್ದರು. ಬ್ರಾಹ್ಮಣರ ಈ ಕರ್ಮಕಾಂಡಗಳು ಪ್ರಗತಿ ವಿರೋಧಿ ಮಾತ್ರವಲ್ಲದೆ ನಿಸರ್ಗವಿರೋಧಿˌ ಮನುಷ್ಯ ವಿರೋಧಿ ಹಾಗೂ ಜೀವವಿರೋಧಿಯಾಗಿದ್ದವು ಎಂದೇ ವಿಚಾರವಂತರು ಅವುಗಳನ್ನು ವಿರೋಧಿಸುತ್ತಿದ್ದರು.
ಹೋತ್ರಿ, ಅಧ್ವರ್ಯ, ಉಧ್ಘಟ, ಮತ್ತು ಯಜಮಾನ ಎನ್ನುವ ನಾಲ್ಕು ವಿಧದ ಬ್ರಾಹ್ಮಣರು ಯಜ್ಞ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಕೊನೆಯ ಯಜಮಾನ ಬ್ರಾಹ್ಮಣನೆ ಆಗಿರಬೇಕು ಎನ್ನುವ ನಿಯಮವಿರಲಿಲ್ಲ. ಯಜ್ಞ ಯಾಗಗಳನ್ನು ನಡೆಸುವ ಬ್ರಾಹ್ಮಣ ಪುರೋಹಿತರು ಅದಕ್ಕಾಗಿ ಸಾಕಷ್ಟು ಹಣವನ್ನು ಪಡೆಯುತ್ತಿದ್ದರು. ಯಜ್ಞಗಳಲ್ಲಿ ಪ್ರಾಣಿಬಲಿಯು ಹಿಂಸಾಚಾರಕ್ಕೆ ಹಾದಿ ಮಾಡಿಕೊಡುತ್ತಿತ್ತು. ಯಜ್ಞಕುಂಡದ ಹೊಗೆಯು ಪರಿಸರ ಮಾಲಿನ್ಯ ಮಾಡಿದರೆ ಪುರೋಹಿತರು ತಾರಕ ಧ್ವನಿಯಲ್ಲಿ ಹೇಳುವ ಮಂತ್ರಗಳು ಶಬ್ದ ಮಾಲಿನ್ಯವನ್ನುಂಟುಮಾಡುತ್ತಿತ್ತು. ದೇವರುˌ ಧರ್ಮ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಆಚರಿಸುತ್ತಿದ್ದ ಈ ಜನವಿರೋಧಿˌ ಜೀವವಿರೋಧಿˌ ನಿಸರ್ಗವಿರೋಧಿ ಆಚರಣೆಗಳನ್ನು ಹನ್ನೆರಡನೇ ಶತಮಾನದಲ್ಲಿ ಶರಣರು ಉಗ್ರವಾಗಿ ವಿರೋಧಿಸುತ್ತಾರೆ. ಅಗ್ನಿ ಆರಾಧನೆ ಮತ್ತು ವೇದಗಳಲ್ಲಿ ಹೇಳಲಾದ ಕರ್ಮಕಾಂಡವನ್ನು ಶರಣರು ತೀಕ್ಷ್ಣವಾಗಿ ಟೀಕಿಸುತ್ತಾರೆ. ಆದ್ದರಿಂದ ವೇದಗಳನ್ನು ಪ್ರಮಾಣವೆಂದು ಸ್ವೀಕರಿಸದ ಶರಣರು ಅವೈದಿಕ ಸಿದ್ಧಾಂತದ ಪ್ರತಿಪಾದಕರೆಂದು ಗುರುತಿಸಿಕೊಳ್ಳುತ್ತಾರೆ. ಯಜ್ಞಕುಂಡದಿಂದ ಹೊರಸೂಸುವ ಹೊಗೆಯು ಜಗತ್ತನ್ನು ಮುಸುಕಿದ ಅಂಧಕಾರದ ಹೊಗೆಯೆ ಹೊರತು ಅದು ಜ್ಞಾನದ ಬೆಳಕಲ್ಲ ಎಂದು ಶರಣ ಘಟ್ಟಿಯಾಳಯ್ಯ ಈ ಕೆಳಗಿನ ವಚನದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ:
“ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು.
ಹೊಗೆ ಜಗವಾಗಿ ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ.
ನಗೆ ಹೊಗೆವರಿದಲ್ಲಿ ಹೊಗೆ ಜಗವಾದದೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ.”
-ಶರಣ ಘಟ್ಟಿವಾಳಯ್ಯ.

ಭಾವಾರ್ಥ
ಗ್ರಾಮ ಮಧ್ಯದಲೊಂದು ಹೋಮದ ಗುಂಡಿ ಇದ್ದರೆ ಸಂಪ್ರದಾಯವಾದಿಗಳು ಆ ಹೋಮಕ್ಕೆ ವಿವಿಧ ವಸ್ತು, ಪ್ರಾಣಿಗಳನ್ನು ಆಹುತಿ ಕೊಡುವರು ಎನ್ನುವ ಶರಣ ಘಟ್ಟಿವಾಳಯ್ಯನ ಸಾಂಕೇತಿಕ ಭಾಷೆ ಈ ದೇಶದ ಪ್ರತಿ ಹಳ್ಳಿಗಳಲ್ಲಿರುವ ವೈದಿಕರ ಸಂತತಿ ಮತ್ತು ಅವರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಆಚರಿಸುವ ಅಮಾನುಷ ಸಂಪ್ರದಾಯಗಳು ಈ ನೆಲದ ಬಡವರನ್ನು ಆಹುತಿ ಪಡೆಯುತ್ತಿವೆ ಎಂದು ವರ್ಣಿಸುತ್ತಿದೆ. ವೈದಿಕರು ಸಂಪ್ರದಾಯದ ಹೆಸರಿನಲ್ಲಿ ಹಾಕುವ ಹೋಮ ಕುಂಡದೊಳಗಿನ ಬೆಂಕಿಯು ನಮ್ಮ ಸುತ್ತಲು ಅಜ್ಞಾನದ ಹೊಗೆಯನ್ನು ಆವರಿಸುವಂತೆ ಮಾಡಿದೆ. ವೈದಿಕರ ಅವೈಜ್ಞಾನಿಕ ಆಚರಣೆಗಳಿಂದ ಈ ನೆಲದ ಜನರ ಚಿಂತನಾ ಶಕ್ತಿ ಕುಂದಿ ಅವರ ಮಿದುಳಿಗೆ ಹೊಗೆ ಆವರಿಸಿದೆ. ಹೊಗೆಯೇ ಜಗವಾಗಿˌ ಜಗವೇ ಹೊಗೆಯಾಗಿ ಇಡೀ ಭಾರತಖಂಡವೇ ಅಜ್ಞಾನದ ಹೊಗೆಯೆಂಬ ಕತ್ತಲೆಯಲ್ಲಿ ಮುಳುಗಿದೆ. ಇದೊಂದು ಹಾಸ್ಯಾಸ್ಪದವಾದ ನಡೆˌ ಮತ್ತು ನಗೆಗೇಡು ಪ್ರಸಂಗ. ಈ ಹಾಸ್ಯಾಸ್ಪದವಾದ ವೈದಿಕ ಸಂಪ್ರದಾಯಗಳು ಅಜ್ಞಾನದ ಹೊಗೆ (ಮುಸುಕಿನಲ್ಲಿ)ಯಲ್ಲಿ ಜನರನ್ನು ಮುಳುಗಿಸಿವೆ. ಈ ಅಜ್ಞಾನವೆಂಬ ಹೊಗೆ ಎಂದಿಗೂ ಪ್ರಾಯೋಗಾತ್ಮಕವಾದ ನೈಜ ಜಗತ್ತು ಆಗಲಾರದು ಎನ್ನುತ್ತಾರೆ ಶರಣ ಘಟ್ಟಿವಾಳಯ್ಯ.
ಟಿಪ್ಪಣಿ
ಭಾರತ ಉಪಖಂಡ ಮೂಲದಲ್ಲಿ ಶಿವ-ದ್ರಾವಿಡ ಸಂಸ್ಕೃತಿಯ ಬೀಡು. ಮೂರುವರೆ ಸಾವಿರ ವರ್ಷಗಳ ಹಿಂದೆ ವೇದಗಳ ಕಾಲದಲ್ಲಿ ಇಲ್ಲಿನ ಮೂಲ ಸಂಸ್ಕೃತಿಯು ಸನಾತನಿ ವಲಸೆ ಆರ್ಯರ ಆಚರಣೆಗಳ ಪ್ರಭಾವಕ್ಕೆ ಸಿಲುಕಿತು. ಅಗ್ನಿ ಆರಾಧನೆ ನೆಲಮೂಲ ಸಂಸ್ಕೃತಿಯಲ್ಲ ˌ ನಮ್ಮದು ಅಗ್ನಿಭಂಜಕ ಸಂಸ್ಕೃತಿ. ಆದಿಯೋಗಿ ಶಿವನು ವೀರಭದ್ರನ ಮೂಲಕ ದಕ್ಷನ ಯಜ್ಞಕುಂಡವನ್ನು ಧ್ವಂಸ ಮಾಡಿಸಿದ ಸ್ಮರಣಾರ್ಥವಾಗಿ ಇಂದಿಗೂ ವೀರಭದ್ರನ ಮಂದಿರಗಳಲ್ಲಿ ಕೆಂಡ ಹಾಯುವ ಉತ್ಸವಗಳು ಜರಗುತ್ತವೆ. ಅಗ್ನಿಯನ್ನು ಆರಾಧಿಸುತ್ತ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವ ಹೋಮ-ಹವನ ಪದ್ದತಿಯು ಸನಾತನಿ ಆರ್ಯರ ಪ್ರಮುಖ ಧಾರ್ಮಿಕ ಆಚರಣೆ. ಇದು ಪರಿಸರ ನಾಶˌ ಬೆಲೆಬಾಳುವ ಪದಾರ್ಥಗಳ ನಾಶ ಹಾಗೂ ಪ್ರಾಣಿಬಲಿಯಿಂದ ಜೀವಹಾನಿಗೆ ಕಾರಣವಾಗುತ್ತದೆ. ಆ ಕಾರಣದಿಂದ ಭಾರತೀಯರು ಈ ವಿದೇಶಿ ಆರ್ಯರ ಅಗ್ನಿ ಆರಾಧನೆಯನ್ನು ವಿರೋಧಿಸುತ್ತಾರೆ. ಅಗ್ನಿಯು ಆರ್ಯರ ದೇವರಾದರೆ ಮನೆಗೆ ಬೆಂಕಿ ಹತ್ತಿದಾಗ ಆರ್ಯರು ಅದನ್ನು ವಂದಿಸುವ ಬದಲಿಗೆ ನಿಂದಿಸುತ್ತಾರೆ. ಇದು ಸನಾತನಿ ಆರ್ಯರ ದ್ವಿಮುಖ ನೀತಿ ಎನ್ನುತ್ತಾರೆ ಬಸವಣ್ಣನವರು. ಅದನ್ನು ಅವರು ಹೀಗೆ ಹೇಳುತ್ತಾರೆ: “ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲ್ಲಿ ಕಿಚ್ಚೆದ್ದು ಸುಡುವಾಗˌ ಬಚ್ಚಲ ನೀರು, ಬೀದಿಯ ದೂಳು ಹೊದ್ದು, ಬೊಬ್ಬಿಟ್ಟೆಲ್ಲರ ಕರೆವರು, ಕೂಡಲಸಂಗಮದೇವಾ, ವಂದನೆಯ ಮರೆತು ನಿಂದಿಸುತಿಹರು.”
ಇದನ್ನೂ ಓದಿ ಬಾನು ಮುಷ್ತಾಕ್ ಬರಹಕ್ಕೆ ಇನ್ನಾದರೂ ʼಸಾಹಿತ್ಯಕ ಮನ್ನಣೆʼ ಸಿಗಲಿ
ಆದ್ದರಿಂದ ಶರಣ ಸಂಸ್ಕೃತಿಯು ಸನಾತನಿಗಳ ವೈದಿಕ ಆಚರಣೆಯಾಗಿರುವ ಗೃಹಾಗ್ನಿಪಾಲನೆˌ ಅಗ್ನಿ ಆರಾಧನೆಯನ್ನು ಕಟುವಾಗಿ ಟೀಕಿಸುತ್ತದೆ ಹಾಗೂ ಅದನ್ನು ವಿರೋಧಿಸುತ್ತದೆ. ವಚನಕಾರ ಘಟ್ಟಿವಾಳಯ್ಯನವರು ತಮ್ಮ ಮೆಲಿನ ವಚನದಲ್ಲಿ ಸನಾತನಿ ಆರ್ಯರ ಹೋಮದ ಅಗ್ನಿಕುಂಡವನ್ನು ಆಹುತಿಯ ಕುಳಿ ಎಂದು ಮಾರ್ಮಿಕವಾಗಿ ವರ್ಣಿಸುತ್ತಾರೆ. ನೇಮಯುಳ್ಳವರೆಲ್ಲ ಎನ್ನುವ ಪದಪ್ರಯೋಗದ ಮೂಲಕ ಹೋಮ ಹವನ ಆಚರಿಸುವ ಸನಾತನಿಗಳು ಎಂದು ಪರೋಕ್ಷವಾಗಿ ಸಂಬೋಧಿಸುತ್ತಾರೆ. ಇಡೀ ಜಗತ್ತೆಂಬ ಬದುಕೆ ಹೊಗೆಯಿಂದ ಆವರಿಸಿದೆ. ವೈದಿಕ ಮೌಢ್ಯವೆಂಬ ಹೊಗೆಯೆ ಜಗವಾಗಿ ಪರಿಣಮಿಸಿದೆ. ಇದೊಂದು ಹಾಸ್ಯಾಸ್ಪದ ಸಂಗತಿ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಹಾಗಾಗಿˌ ಶರಣ ಸಂಸ್ಕೃತಿಯು ಸನಾತನ ಆರ್ಯ ವೈದಿಕ ಸಂಸ್ಕೃತಿಗೆ ಪ್ರತಿದ್ವಂದ್ವಿಯಾಗಿ ಹುಟ್ಟಿದ ಉದಾತ್ ಜೀವನಮಾರ್ಗವಾಗಿದೆ. ಇದು ಹಿಂದೂ ಬ್ರಾಹ್ಮಣ ಧರ್ಮದ ಚೌಕಟ್ಟಿನಲ್ಲಿ ಸೇರುವುದಿಲ್ಲ. ಇದನ್ನು ಶರಣರ ಪ್ರತಿಯೊಂದು ವಚನಗಳು ಮೇಲಿಂದ ಮೇಲಿಂದ ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ಸಾರಿ ಹೇಳುತ್ತವೆ. ವಚನ ಚಳವಳಿ ಒಂದು ಭಕ್ತಿ ಚಳವಳಿˌ ಅದು ಸನಾತನ ಸಂಸ್ಕೃತಿಯ ಸುಧಾರಣಾವಾದಿ ಕ್ರಮ ಎಂದು ಅಪವ್ಯಾಖ್ಯಾನಿಸುವ ಸನಾತನಿ ಸಂತತಿ ಈ ಸತ್ಯವನ್ನು ಜೀರ್ಣಿಸಿಕೊಳ್ಳಲಾಗದೆ ಪರಿತಪಿಸುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ