ವಚನಯಾನ | ಸನಾತನ ಧರ್ಮದ ಮೂಲವೇ ಜಾತಿವ್ಯವಸ್ಥೆ

Date:

Advertisements

ಕಿವಿಯಲ್ಲಿ ಹುಟ್ಟುವ, ಮಡಿಕೆಯಲ್ಲಿ ಹುಟ್ಟುವ ಹಾಗೂ ಮಂತ್ರದಿಂದ ಹುಟ್ಟುವ ಸನಾತನಿಗಳ ನಿಸರ್ಗ ವಿರೋಧಿ ಮತ್ತು ಅಸಹಜ ಕಾಲ್ಪನಿಕ ಕತೆಗಳನ್ನು ನಿರಾಕರಿಸುವ ಬಸವಣ್ಣನವರು ಜಾತಿಗಳನ್ನು ಜನರ ಕಾಯಕದಿಂದ ಹುಟ್ಟಿವೆ ಎನ್ನುವುದನ್ನು ದೃಢಪಡಿಸುತ್ತಾರೆ. ಮನುಷ್ಯನ ಜನ್ಮವು ಹೊಲೆಯಿಂದಾಗಿದೆ, “ಹೊಲೆಯಿಂದಲ್ಲದೆ ಜಗವು ತಲೆಯಿಂದ ಹುಟ್ಟಿತೆ?” ಎಂದು ಶರಣರು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ.

ಭಾರತದಲ್ಲಿ ಜಾತಿ ವ್ಯವಸ್ಥೆ ಯಾವಾಗ ಹುಟ್ಟಿತು ಎನ್ನುವುದನ್ನು ಬಹಳ ಸುಲಭವಾಗಿ ವಿವರಿಸಬಹುದು. ವೈದಿಕರ ಧರ್ಮಗ್ರಂಥಗಳಾದ ವೇದಗಳು, ಶಾಸ್ತ್ರಗಳು, ಗೀತೆ, ಮನುಸ್ಮೃತಿ ಮುಂತಾದವು ವರ್ಣ ವ್ಯವಸ್ಥೆಯ ಜೊತೆಜೊತೆಗೆ ಜಾತಿ ವ್ಯವಸ್ಥೆಯನ್ನು ಕೂಡ ಪ್ರತಿಪಾದಿಸಿವೆ. ಬುದ್ದಪೂರ್ವದಲ್ಲಿದ್ದ ವರ್ಣ ವ್ಯವಸ್ಥೆಯ ಹೊರತಾಗಿಯೂ ಕ್ಷತ್ರಿಯರು ಬ್ರಾಹ್ಮಣ ವರ್ಣದ ವಿರುದ್ಧ ತಿರುಗಿಬಿದ್ದ ಅನೇಕ ಉದಾಹರಣೆಗಳಿವೆ. ಕ್ಷತ್ರೀಯರಾಗಿದ್ದ ಬುದ್ದ ಮತ್ತು ಮಹಾವೀರರು ಬ್ರಾಹ್ಮಣ ವರ್ಣದವರ ಅನ್ಯಾಯಗಳನ್ನು ಪ್ರಶ್ನಿಸಿ ಹೊಸ ಅವೈದಿಕ ಧರ್ಮಗಳನ್ನು ಹುಟ್ಟುಹಾಕಿದರು. ಇದರಿಂದ ಭಯಭೀತರಾದ ಬ್ರಾಹ್ಮಣ ವರ್ಣದವರು ಕೇವಲ ನಾಲ್ಕು ವರ್ಣಗಳಿರುವಾಗಲೇ ಸಮಾಜ ನಮ್ಮ ನಿಯಂತ್ರಣಕ್ಕೆ ಸಿಗದೆ ಹೊಸ ಧರ್ಮಗಳ ಹುಟ್ಟಿಗೆ ಕಾರಣವಾಯಿತಲ್ಲ ಎಂದು ದೂರಾಲೋಚನೆ ಅಥವಾ ದುರಾಲೋಚನೆಗೆ ತೊಡಗಿದರು. ಕೇವಲ ನಾಲ್ಕು ವರ್ಣಗಳಿರುವಾಗ ಕೆಳಗಿನ ಮೂರು ವರ್ಣಗಳು ತಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿರುವಾಗ ಇಡೀ ಭಾರತೀಯ ಸಮಾಜವನ್ನು ಅಸಂಖ್ಯಾತ ಜಾತಿಗಳಲ್ಲಿ ವಿಭಜಿಸಿದರೆ ಜನರು ತಮ್ಮ ತಮ್ಮ ಜಾತಿಯ ಅಸ್ಮಿತೆಯಲ್ಲಿ ಮುಳುಗುತ್ತಾರೆ. ಆಗ ತಾವು ಸುರಕ್ಷಿತವಾಗಿರಬಹುದು ಎಂದು ಚಿಂತಿಸಿ ಈ ನೆಲದಲ್ಲಿ ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿದರು. ಮೌರ್ಯ ಸಾಮ್ರಾಜ್ಯದ ಕೊನೆಯ ಅರಸ ಬ್ರಹದೃತ ಮೌರ್ಯನನ್ನು ವಂಚನೆಯಿಂದ ಮುಗಿಸಿದ ಪುಷ್ಯಮಿತ್ರ ಶುಂಗ ಈ ನೆಲದಲ್ಲಿ 7000 ಸಾವಿರಕ್ಕೂ ಮಿಕ್ಕು ಜಾತಿಗಳನ್ನು ಸೃಷ್ಟಿಸಿದನು.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಜಾತಿ ವ್ಯವಸ್ಥೆಯನ್ನು ಬ್ರಿಟಿಷರು ಹುಟ್ಟು ಹಾಕಿದರು ಎಂಬ ಹಸಿ ಸುಳ್ಳನ್ನು ಹರಡುತ್ತಿದ್ದಾರೆ. ನಾವು ಚಿಕ್ಕವರಿರುವಾಗಿನಿಂದ ಭಾರತದಲ್ಲಿ ಒಡೆದಾಳುವ ನೀತಿ ಬ್ರಿಟಿಷರ ಬಳುವಳಿ ಎನ್ನುವ ಮಿತ್ಯ ಸಂಗತಿ ಕೇಳಿದ್ದೇವೆ. ಆದರೆ ವಾಸ್ತವಿಕವಾಗಿ ಇಡೀ ಭಾರತೀಯ ಶೇ. 95ರಷ್ಟು ಬಹುಜನ ಸಮಾಜವನ್ನು ಕೇವಲ ಶೇ. 5ರಷ್ಟಿರುವ ಬ್ರಾಹ್ಮಣರು ನಿಯಂತ್ರಿಸುತ್ತಿದ್ದುದ್ದನ್ನು ನೋಡಿ ಬ್ರಿಟಿಷರಿಗೆ ಆಶ್ಚರ್ಯವಾಗುತ್ತದೆ. ಹಿಂದಿನ 500-6000 ವರ್ಷಗಳು ಯಾವ ಅಪಸ್ವರವೂ ಇಲ್ಲದೆ ಮುಸ್ಲಿಮರು ಈ ದೇಶವನ್ನು ಆಳಿದ್ದು, ಆ ಎಲ್ಲಾ ಮುಸ್ಲಿಮ್ ಆಳರಸರ ಆಸ್ಥಾನದಲ್ಲಿ ಬ್ರಾಹ್ಮಣರೇ ದಿವಾನರಾಗಿ ಕಾರ್ಯ ಮಾಡಿದ್ದು ಹಾಗೂ ಮುಸ್ಲಿಮ್ ಆಳ್ವಿಕೆಯಲ್ಲಿ ಚಾತುರ್ವರ್ಣ ವ್ಯವಸ್ಥೆಯನ್ನು ಕಾಪಿಟ್ಟುಕೊಂಡದ್ದು ಬ್ರಿಟಿಷರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಮುಸ್ಲಿಮ್ ಆಳರಸರ ಕಾಲದಲ್ಲಿ ಜಹಗೀರದಾರ್, ದೇಶಪಾಂಡೆ, ದೇಸಾಯಿ, ಇನಾಮದಾರ್, ಚಟ್ನಿಸ್, ಸರಚಟ್ನಿಸ್, ಕಾರ್ಕೂನ ಮುಂತಾದ ಕೆಳ ಹಂತದ ಹಾಗೂ ದಿವಾನˌ ಮಂತ್ರಿ ಮುಂತಾದ ಮೇಲು ಹಂತದ ಪ್ರಮುಖ ಹುದ್ದೆಗಳಲ್ಲಿದ್ದದ್ದು ಬ್ರಾಹ್ಮಣರು ಮಾತ್ರ. ಗೋದಾನ, ಭೂದಾನ, ದೇವಸ್ಥಾನ, ದತ್ತಿ, ದಾನಗಳನ್ನು ಗರಿಷ್ಠ ಮಟ್ಟದಲ್ಲಿ ಪಡೆದದ್ದು ಕೂಡ ಬ್ರಾಹ್ಮಣರೇ. ಇದನ್ನು ಸರಿಯಾಗಿ ಗಮನಿಸಿದ ಬ್ರಿಟಿಷರು ಭಾರತೀಯ ಬ್ರಾಹ್ಮಣರ ಒಡೆದಾಳುವ ನೀತಿಯನ್ನು ಚೆನ್ನಾಗಿ ಕಲಿತು ಅದನ್ನು ಕೊನೆಕೊನೆಗೆ ಹಿಂದುತ್ವವಾದಿ ಸಾವರ್ಕರ್, ಶ್ಯಾಮಪ್ರಸಾದರನ್ನು ಬಳಸಿಕೊಂಡು ಹಿಂದೂ-ಮುಸ್ಲಿಮ್ ವಿಭಜನೆಯ ಮೂಲಕ ಸ್ವಾತಂತ್ರ್ಯ ಸಂಗ್ರಾಮವನ್ನು ಹಣಿಯಲು ಪ್ರಯತ್ನಿಸಿದ ಸಂಗತಿ ನಮಗೆಲ್ಲ ತಿಳಿದಿದೆ.

Advertisements

ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಸೃಷ್ಠಿಸಿ, ಅದು ಯಾವತ್ತೂ ಸಡಿಲಗೊಳ್ಳದಂತೆ ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸಿದ ಬ್ರಾಹ್ಮಣರು ಈ ನೆಲದಲ್ಲಿ ತಮ್ಮ ವಿರುದ್ಧ ಘಟಿಸಿದ ಪ್ರತಿಯೊಂದು ಬಂಡಾಯ ಚಳವಳಿಗಳನ್ನು ತಮ್ಮ ಪರಂಪರಾಗತˌ ರಕ್ತಗತ ಕುಟಿಲ ಹುನ್ನಾರಗಳಿಂದ ಹುಡಿಗೊಳಿಸಿದ್ದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಬುದ್ದನ ಕ್ರಾಂತಿಗೆ ಪ್ರತಿಕ್ರಾಂತಿಯನ್ನು ಹೂಡಿ ಬೌದ್ದ ಧರ್ಮವನ್ನು ನಾಶಗೊಳಿಸಿದ ಬ್ರಾಹ್ಮಣರು ಮುಂದೆ ಬುದ್ದನನ್ನು ತಮ್ಮ ವಿಷ್ಣುವಿನ ಒಂಬತ್ತನೇ ಅವತಾರದಲ್ಲಿ ಸೇರಿಸಿ ಕಾಲ್ಪನಿಕ ಕತೆಗಳನ್ನು ಸೃಷ್ಠಿಸಿದರು. ಲೋಕಾಯತ, ಜೈನ, ಬೌದ್ದ, ಅಜೀವಕ, ಆರೂಢ, ಅವಧೂತ, ಸಿದ್ಧ, ನಾಥ ಮುಂತಾದ ಎಲ್ಲಾ ಬಗೆಯ ನೆಲಮೂಲದ ಅವೈದಿಕ ಶ್ರಮಣಧಾರೆಗಳನ್ನು ಪ್ರತಿಕ್ರಾಂತಿಯ ಮೂಲಕ ಬ್ರಾಹ್ಮಣರು ನಿವಾರಿಸಿಕೊಂಡಿದ್ದು ಈಗ ಇತಿಹಾಸ. ಬುದ್ದೋತ್ತರ ಕಾಲಘಟ್ಟದಲ್ಲಿ ಅಕ್ಷರಶಃ ಬಡಬ್ರಾಹ್ಮಣರಾಗಿದ್ದ ವೈದಿಕರು ಬಹಳ ಚಾಣಾಕ್ಷತೆಯಿಂದ ಮುಂದೆ ಭಾರತೀಯ ಸಮಾಜದ ಮೇಲೆ ತಮ್ಮ ಹಿಡಿತವನ್ನು ಮನುಸ್ಮೃತಿಯ ಯಶಸ್ವಿ ಅನುಷ್ಠಾನದ ಮೂಲಕ ಬಿಗಿಗೊಳಿಸುತ್ತಾರೆ. ಬುದ್ದೋತ್ತರದ ಕಾಲದಲ್ಲಿ ಪುಷ್ಯಮಿತ್ರ ಶುಂಗನಿಂದ ಮೊದಲ್ಗೊಂಡು ಶಂಕರ, ರಾಮಾನುಜರು ನೆಲಮೂಲದ ಧರ್ಮಗಳನ್ನು ದುರ್ಬಲಗೊಳಿಸಿ ಅಥವಾ ಆಪೋಶನಕೊಂಡು ಅಥವಾ ಅವನ್ನು ವೈದಿಕೀಕರಿಸಿ ಬ್ರಾಹ್ಮಣ ಧರ್ಮವನ್ನು ಬಲಗೊಳಿಸುತ್ತಾರೆ.

mcms 4

ಅಂತಹ ಸಂಕೀರ್ಣ ಹಾಗೂ ಸಂದಿಗ್ಧ ಕಾಲದಲ್ಲಿ ಕನ್ನಡ ನೆಲದಲ್ಲಿ ಸನಾತನ ಆರ್ಯ ವೈದಿಕರ ವಿರುದ್ಧ ಮತ್ತೊಂದು ಬಂಡಾಯದ ಚಳವಳಿ ಹುಟ್ಟುಪಡೆಯುತ್ತದೆ. ಆಶ್ಚರ್ಯದ ಸಂಗತಿ ಏನೆಂದರೆ ಬ್ರಾಹ್ಮಣ ಧರ್ಮದ ವಿರುದ್ಧ ಸ್ವತಃ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಆ ಬ್ರಾಹ್ಮಣ್ಯವನ್ನು ಎಡಗಾಲಿನಿಂದ ಒದ್ದು ಹೊರಬಂದ ಬಸವಣ್ಣನವರು ವಚನ ಚಳವಳಿಯನ್ನು ಹುಟ್ಟುಹಾಕಿದ್ದು, ಬಸವಣ್ಣನವರು ವಚನ ಚಳವಳಿಯ ನಾಯಕತ್ವ ವಹಿಸಿದ್ದರೂ, ಇಡೀ ಚಳವಳಿಯನ್ನು ತಳವರ್ಗದ ಶರಣರ ಮುಖೇನ ಸಂಘಟಿಸುತ್ತಾರೆ. ಶರಣರು ಜನರು ಆಡುವ ಭಾಷೆಯಲ್ಲಿ ಸರಳವಾಗಿ ವಚನಗಳನ್ನು ಬರೆದು ಅವನ್ನು ಚಳವಳಿಯ ಪರಿಣಾಮಕಾರಿ ಮಾಧ್ಯಮವಾಗಿ ಬಳಸುತ್ತಾರೆ. ವಚನ ಚಳವಳಿ ಸನಾತನಿಗಳು ಹುಟ್ಟುಹಾಕಿದ ಜಾತಿ ವ್ಯವಸ್ಥೆಯನ್ನು ಹುಡಿಗೊಳಿಸಲು ಹುಟ್ಟಿದ ಒಂದು ಸರ್ವಾಂಗೀಣ ಆಂದೋಲನವಾಗಿರುತ್ತದೆ. ಬಸವಣ್ಣನವರು ಸನಾತನಿ ಬ್ರಾಹ್ಮಣರು ಹುಟ್ಟುಹಾಕಿದ್ದ ವರ್ಣವ್ಯವಸ್ಥೆಯ ಪಿರಮಿಡ್ಡನ್ನು ತಲೆಕೆಳಗೆ ಮಾಡುತ್ತಾರೆ. ಅಶುದ್ಧವಾಗಿದ್ದ ವಿಪ್ರಕರ್ಮವನ್ನು ನೀಗಿ ಲಿಂಗಾಯತವೆಂಬ ಶುದ್ಧ ಧರ್ಮವನ್ನು ಸ್ಥಾಪಿಸುತ್ತಾರೆ. ಬ್ರಾಹ್ಮಣ್ಯ ಸೃಷ್ಟಿಸಿದ್ದ ಜಡತ್ವದ ಬೇರುಗಳನ್ನು ಬುಡಸಮೇತ ಕಿತ್ತಿಹಾಕುವ ಬಹುದೊಡ್ಡ ಪ್ರಯತ್ನ ವಚನ ಚಳವಳಿ ಮಾಡುತ್ತದೆ.

ಬ್ರಾಹ್ಮಣರು ಹುಟ್ಟುಹಾಕಿದ ಕ್ರೂರ ಜಾತಿ ವ್ಯವಸ್ಥೆಯನ್ನು ನಿರಾಕರಿಸುವ ಬಸವಣ್ಣನವರ ಒಂದು ವಚನ:
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲಬಿಂದುವಿನ ವ್ಯವಹಾರವೊಂದೆ, ಆಸೆ ಆಮಿಷ ರೋಷˌ ಹರುಷಾದಿಗಳೆಲ್ಲ ಒಂದೆ. ಏನನೋದಿ ಏನಕೇಳಿದರೇನು ಫಲˌ ಕುಲಜನೆಂಬುವದಕ್ಕಾವುದು ದೃಷ್ಟ.
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣ ದೊಳಗೆ ಜನಿಸಿದವರುಂಟೆ ಜಗದೊಳಗೆ? ಇದು ಕಾರಣˌ ಕೂಡಲಸಂಗಮದೇವಾ, ಲಿಂಗ ಸ್ಥಲವನರಿತವನೆ ಕುಲಜನು…

ಭಾವಾರ್ಥ
ಹೊಲಸು ಅಥವಾ ಮೈಲಿಗೆ ಎನ್ನುವುದರ ಮೂಲವೇ ಸ್ತ್ರೀಯ ಮುಟ್ಟು. ಆ ಮುಟ್ಚು ನಿಲ್ಲದೆ ಸ್ತ್ರೀಯ ಗರ್ಭದಲ್ಲಿ ಪಿಂಡೋತ್ಪತ್ತಿ ಸಾಧ್ಯವಿಲ್ಲ. ಪಿಂಡ ನಿಲ್ಲದಿದ್ದರೆ ಜೀವಿ ಜನ್ಮ ತಳೆಯುವುದಿಲ್ಲ. ‘ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ’ ಎನ್ನುವ ಈ ವಚನದ ಸಾಲು ಜೀವಿಯ ಹುಟ್ಟಿನ ವಿಧಾನವನ್ನು ಅತ್ಯಂತ ವೈಜ್ಞಾನಿಕವಾಗಿ ಸಮರ್ಥಿಸುತ್ತದೆ. ಗರ್ಭಾಶಯದ ಹೊರಗೆ ಮಕ್ಕಳು ಹುಟ್ಟಿಸುವ ಇಂದಿನ ಪ್ರನಾಳ ಶಿಶು ತಂತ್ರಜ್ಞಾನ ಸನಾತನ ಧರ್ಮದಲ್ಲಿ ಪುರಾತನ ಕಾಲದಿಂದಲೂ ಇತ್ತು ಎಂದು ವಾದಿಸುವ ಧರ್ಮಾಂಧರು ವಿಜ್ಞಾನ ದ್ವೇಷಿಗಳು ಮಾತ್ರವಲ್ಲದೆ ತಮ್ಮಲ್ಲಿರುವ ಮೌಢ್ಯವನ್ನು ವಿಜ್ಞಾನದ ಸಹಾಯದಿಂದ ಸಮರ್ಥಿಸುತ್ತಾರೆ. ಬ್ರಾಹ್ಮಣ ಮೊದಲ್ಗೊಂಡು ಅಸ್ಪ್ರಶ್ಯರವರೆಗೆ ಈ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗಳು ಬಳಸುವ ನೀರು ಒಂದೇ. ಪ್ರತಿ ಜೀವಿಗಳಲ್ಲಿ ಅಷ್ಟಮದಗಳು, ಆಸೆ, ಆಕಾಂಕ್ಷೆ, ಸಿಟ್ಟು, ಸೆಡವು, ಸುಖ, ದುಃಖ, ಸಂತೋಷ, ಖಿನ್ನತೆಗಳು ಒಂದೇ ತೆರನಾಗಿರುತ್ತವೆ. ಬ್ರಾಹ್ಮಣರು ಎಷ್ಟೇ ವಿದ್ಯಾವಂತರಾದರೂ ಅವರ ಕುಲದ ಮೂಲವು ಅತ್ಯಂತ ಹೀನ ಕುಲದಲ್ಲಿ ಹುಟ್ಟಿದ ಋಷಿ ಮೂಲದ್ದು. ಬ್ರಾಹ್ಮಣರು ಜಾತಿಯತೆ, ಶ್ರೇಷ್ಠತೆಯ ವ್ಯಸನಗಳಿಂದ ಮುಕ್ತರಾಗಲಾರರು. ಕುಲುಮೆಯನ್ನು ಕಾಸಿ ಕಮ್ಮಾರ, ವಸ್ತ್ರವನ್ನು ಬೀಸಿ ತೊಳೆದು ಮಡಿವಾಳ, ವೇದವನ್ನು ಓದಿ ಬ್ರಾಹ್ಮಣ ಈ ರೀತಿ ತಮ್ಮ ಕಾಯಕಗಳಿಂದ ಗುರುತಿಸಿಕೊಂಡವರೆಲ್ಲ ಒಂದೊಂದು ಜಾತಿಯಲ್ಲಿ ಒಡೆದುಹೋಗಿದ್ದಾರೆ.

ಪ್ರತಿಯೊಬ್ಬ ಜೀವಿಯು ಪ್ರಕೃತಿ ಸಹಜವಾಗಿ ಭಿನ್ನ ಲಿಂಗಗಳ ಸಮಾಗಮದಿಂದಲೆ ಜನಿಸುತ್ತದೆ. ಇದು ಜೀವವಿಕಾಶವಾದ ಹಾಗೂ ಜೀವಿಯ ಉತ್ಪತ್ತಿಯ ಸಹಜ ಹಾಗೂ ವೈಜ್ಞಾನಿಕ ವಿಧಾನ. ಇದಕ್ಕೆ ಹೊರತಾದ ಜೀವೋತ್ಪತ್ತಿ ಅಸಾಧ್ಯ, ಅನೈಸರ್ಗಿಕ ಹಾಗೂ ಅವೈಜ್ಞಾನಿಕ. ಇಂತಹ ಹುಟ್ಟನ್ನು ಸಮರ್ಥಿಸಲು ಸೂಕ್ತ ವೈಜ್ಞಾನಿಕ ಪ್ರಕ್ರೀಯಾ ವಿಧಾನಗಳ ಅಗತ್ಯವಿದೆ. ಸನಾತನಿಗಳ ಪುರಾಣದ ಕತೆಯಲ್ಲಿ ಕಿವಿಯಿಂದ, ಮಂತ್ರದಿಂದ ಹುಟ್ಟಿದರು ಎನ್ನುವ ಘಟನೆಗಳು ತುಂಬಾ ಅಸಹಜ, ಬಾಲಿಶ, ಅನೈಸರ್ಗಿಕ, ಅತಿರಂಜಿತ ಹಾಗೂ ಕಪೋಲಕಲ್ಪಿತ ಊಹಾತ್ಮಕ ಕಥಾನಕಗಳು.

ಬಸವಣ್ಣ 1

ಹಾಗಾಗಿˌ ಮನುಷ್ಯ ಸತ್ಯಶುದ್ಧವಾದ ಕಾಯಕವನ್ನು ಮಾಡಬೇಕು. ಕಾಯಕ ಮಾಡಿ ಬದುಕುವುದೆ ಶ್ರೇಷ್ಟ ಬದುಕು. ನಿಸ್ವಾರ್ಥ ಕಾಯಕದ ಜೊತೆಗೆ ಇಷ್ಟಲಿಂಗ ಅನುಸಂಧಾನ ಮಾರ್ಗದ ಮೂಲಕ ಲಿಂಗಾಂಗ ಸಾಮರಸ್ಯ ಸಿದ್ಧಿ ಪಡೆಯುವವರು ನಿಜವಾದ ಕುಲಜರು ಎನ್ನುವುದು ಬಸವಣ್ಣನವರ ಸ್ಪಷ್ಟ ನುಡಿ. ಮೇಲಿನ ವಚನ ಬಹಳ ಸ್ಪಷ್ಟವಾಗಿ ಜಾತಿ ವ್ಯವಸ್ಥೆಯ ನಿರಾಕರಣೆˌ ಖಂಡನೆಯ ಜೊತೆಗೆ ಜೀವೋತ್ಪತ್ತಿಯ ವೈಜ್ಞಾನಿಕ ವಿಧಾನವನ್ನು ಸಮರ್ಥಿಸುತ್ತದೆ. ಹಾಗೆಯೇ ಸನಾತನಿಗಳು ಹೇಳಿರುವ ಅನೈಸರ್ಗಿಕ ಹಾಗೂ ಅವೈಜ್ಞಾನಿಕ ಜೀವೋತ್ಪತ್ತಿಯನ್ನು ಈ ವಚನ ತೀಕ್ಷ್ಣವಾಗಿ ವಿಡಂಬಿಸುತ್ತದೆ.

ಟಿಪ್ಪಣಿ

ಮೇಲಿನ ವಚನದಲ್ಲಿ ಬಸವಣ್ಣನವರು ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸಿದ್ದಾರೆ. ವೈದಿಕ ಸಾಹಿತ್ಯದಲ್ಲಿನ ಅತಿರಂಜಿತ ಕತೆಗಳನ್ನು ಶರಣರು ಪರಿಹಾಸ್ಯ ಮಾಡುತ್ತಾರೆ. ಹನುಮಂತ ಕಿವಿಯಲ್ಲಿ ಹುಟ್ಟಿದˌ ಪಾಂಡವರು ಮಂತ್ರದಿಂದ ಹುಟ್ಟಿದರು ಮುಂತಾದ ಕಪೋಲಕಲ್ಪಿತ ಕತೆಗಳನ್ನು ಶರಣರು ತೀಕ್ಷ್ಣವಾಗಿ ವಿಡಂಬಿಸುತ್ತಾರೆ. ಕಿವಿಯಲ್ಲಿ ಹುಟ್ಟುವ, ಮಡಿಕೆಯಲ್ಲಿ ಹುಟ್ಟುವ ಹಾಗೂ ಮಂತ್ರದಿಂದ ಹುಟ್ಟುವ ಸನಾತನಿಗಳ ನಿಸರ್ಗ ವಿರೋಧಿ ಮತ್ತು ಅಸಹಜ ಕಾಲ್ಪನಿಕ ಕತೆಗಳನ್ನು ನಿರಾಕರಿಸುವ ಬಸವಣ್ಣನವರು ಜಾತಿಗಳನ್ನು ಜನರ ಕಾಯಕದಿಂದ ಹುಟ್ಟಿವೆ ಎನ್ನುವುದನ್ನು ದೃಢಪಡಿಸುತ್ತಾರೆ. ಮನುಷ್ಯನ ಜನ್ಮವು ಹೊಲೆಯಿಂದಾಗಿದೆ. “ಹೊಲೆಯಿಂದಲ್ಲದೆ ಜಗವು ತಲೆಯಿಂದ ಹುಟ್ಟಿತೆ?” ಎಂದು ಶರಣರು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ. ಎಲ್ಲರ ಹುಟ್ಟು ಹೊಲೆಯಿಂದಲೇ ಆಗಿರುವಾಗ ಹೊಲೆಯ, ಬ್ರಾಹ್ಮಣ ಎನ್ನುವ ಅಸಂಖ್ಯಾತ ಜಾತಿಗಳನ್ನು ಹುಟ್ಟಿಸಿ ಸನಾತನಿಗಳು ಈ ನೆಲಮೂಲದ ಜನರನ್ನು ವಿಭಜಿಸಿದ್ದಾರೆ. ಜಾತಿ ವ್ಯವಸ್ಥೆಯು ಬ್ರಾಹ್ಮಣರ ಸೃಷ್ಠಿ ಹಾಗೂ ಇಡೀ ಜಗತ್ತೆ ಹೊಲೆಯೊಳಗೆ ಹುಟ್ಟಿದೆ. ಹಾಗಾಗಿ ಹೊಲೆಯ, ಮಾದಿಗ ಮುಂತಾದ ಜಾತಿಗಳು ಭಿನ್ನವಲ್ಲ ಮತ್ತು ಜಾತಿವಾದವೇ ಒಂದು ಅರ್ಥಹೀನ ಎನ್ನುವುದೇ ವಚನದ ಆಶಯವಾಗಿದೆ.

ಇದನ್ನೂ ಓದಿ ವಚನಯಾನ | ಉದರ ವೈರಾಗ್ಯವುಳ್ಳ ನಕಲಿ ಫಕೀರರು

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

3 COMMENTS

  1. Trade & work decides caste hierarchy?
    Warriors are group, so are traders, then tillers are another?
    Tradition and pracises add or enhance it?
    Dirt picker is dirty, so is a cleaner of filth?
    Thus came grouping of people into castes by trade ,
    & profession practised?

  2. ಬಸವಣ್ಣ ತಮ್ಮ ವಚನಗಳ ಮೂಲಕ ಬ್ರಹ್ಮಣ್ಯ ಆಚಾರ ಗಳನ್ನು ವಿರೋಧಿಸಿದರೆ ವಿನಃ ಧರ್ಮವನ್ನು ವಿರೋಧಿಸಿಲ್ಲ…ಬ್ರಾಹ್ಮಣರು ಕೆಲವು ಅಸಂಬದ್ಧ ಆಚರಣೆಗಳನ್ನು ತಂದರು ಅದನ್ನು ವಿರೋಧಿಸಿದರು ಬಸವಣ್ಣ…..ಒಂದು ವೇಳೆ ವಿರೋಧಿಸಿದ್ದರೆ ಬಸವಣ್ಣ ವಿಭೂತಿ ಏಕೆ ಹಚ್ಚಿದರು? ರುದ್ರಾಕ್ಷಿ ಯಾಕೆ ಹಾಕಿದರು ಲಿಂಗವ ಅಂಗೈ ಯಲ್ಲಿ ಯಾಕೆ ಹಿಡಿದರು? ಬಸವ ಮಠದ ಸ್ವಾಮಿಗಳು ಕಾವಿ ಯಾಕೆ ಹಾಕುವರೋ? ಅದೆಲ್ಲವೂ ಹಿಂದೂ ಧರ್ಮದ ಸೂಚನೆಗಳು ಅಲ್ಲವಾ? ಹಿಂದೂ ಧರ್ಮದ ಕಲ್ಪಿತ ಆಚರಣೆಗಳನ್ನು ತಿದ್ದಿ ತೀಡಲು ಅವರು ಶ್ರಮ ಪಟ್ಟರೇ ಹೊರತು ನಿಮ್ಮಂತೆ ಹೊಸ ಧರ್ಮ ಕಟ್ಟಲು ಅಲ್ಲ ನೆನಪಿಡಿ….

  3. ತಮ್ಮ ಲೇಖನಗಳು ಸತ್ಯಕ್ಕೆ ಬಹು ದೂರದವು. ನಿಮ್ಮನ್ನು ಬಣ್ಣಿಸಲು ಇನ್ನೊಬ್ಬರನ್ನು ಹಳಿಯುತ್ತಿದ್ದೀರಿ. ಅದು ಜಾತಿಯ ಹೆಸರೇಳಿ. ತಿಳಿಯದೇ ಮಾತಾಡುವುದು ತಪ್ಪು. ವಿಗ್ರಹಾರಾಧನೆ ನಿನ್ನೆ ಮೊನ್ನೆಯದಲ್ಲ. ಕಲ್ಲು ಮಣ್ಣುಗಳ ಪೂಜೆ ಮಾಡುತ್ತಾರೆ ಎಂದು ತಿಳಿದರೆ ಅದು ನಿಮ್ಮ ಜ್ಞಾನದ ಕೊರತೆ, ನಾವು ಮಾಡುವುದು ಅದರಲ್ಲಿರುವ, ಪ್ರತಿಯೊಂದು ಅಣು, ಮಹತ್ತಿನಲ್ಲಿರುವ ಸಚ್ಚಿದಾನಂದನನ್ನು, ಅದು ತಪ್ಪೆಂದರೆ ನೀವು ಮಾಡುವ ಲಿಂಗ ಪೂಜೆ ಹೇಗೆ ಸರಿಯಾದೀತು? ಭಗವಂತ ಸಾಕಾರನೂ ಹೌದು, ನಿರಾಕರನೂ ಹೌದು. ಎಲ್ಲವೂ ಅವನಿಂದ ಸಾಧ್ಯ ಅದಕ್ಕೆ ಅವನನ್ನು ಭಗವಂತನೆನ್ನುವುದು.
    ಸಾಧಕನ ಪ್ರಾರಂಭಿಕ ಹಂತದಲ್ಲಿ ಮೂರ್ತಿಪೂಜೆ, ಅವನು ಎತ್ತರಕ್ಕೆ ಹೋಗುತ್ತಾ ಕಂಡದ್ದೆಲ್ಲಾ ಭಗವಂತನ ಪ್ರತಿರೂಪ. ಋಷಿ ಮುನಿಗಳ ತಪಸ್ಸೆಂದರೆ ಇನ್ನೇನು?
    ಕರ್ಮದ ಬಗ್ಗೆ ಹೇಳುತ್ತೀರಿ , ವೇದ, ಉಪನಿಷತ್, ಗೀತೆ, ಪುರಾಣಗಳನ್ನು ಮುಕ್ತ ಮನಸ್ಸಿನಿಂದ ಓದಿ ಅವುಗಳು ಎಲ್ಲಾದರೂ ಕರ್ಮಸಿದ್ಧಾಂತವನ್ನು ಬಿಟ್ಟಿದ್ದರೆ ದಯವಿಟ್ಟು ತಿಳಿಸಿ.
    ಜಗತ್ತೇ ತಲೆಬಾಗಿದೆ ಭಾರತದ ಸಂಸ್ಕೃತಿಗೆ ತಾವು ಹೀಗೆ ಹೇಳಿದರೆ ಹೇಗೆ? ಈ ಸಂಸ್ಕೃತಿಯನ್ನು ನೀವು ಬ್ರಾಹ್ಮಣರದ್ದು ಅನ್ನುತ್ತೀರಾ ಅದೇ ತಪ್ಪು, ಭಗವಂತ ಜಾತ್ಯತೀತ, ವರ್ಣಾತೀತ. ದಯವಿಟ್ಟು ಜನರಿಗೆ ತಪ್ಪು ಹೇಳಬೇಡಿ. ಎಲ್ಲರೂ ಸೌಹಾರ್ದದಿಂದ ಬಾಳುವ ಮಾತುಗಳನ್ನು ಹೇಳಿ.
    ನಮಸ್ಕಾರಗಳು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X