ವಚನಯಾನ | ಕಲ್ಲು ದೇವರ ಪೂಜಿಸುವ ಕತ್ತೆಗಳು

Date:

Advertisements

ಭಾರತೀಯರಲ್ಲಿ ದೇವರ ಪರಿಕಲ್ಪನೆಯು ವಿರೂಪಗೊಂಡಿದ್ದೆ ವಿಗ್ರಹರಾಧನೆಯ ಆರಂಭದಿಂದ. ದೇವರು ಎನ್ನುವ ಅಗೋಚರ ಸೃಷ್ಟಿ ಚೈತನ್ಯಾತ್ಮಕ ಶಕ್ತಿಯ ಇರುವಿಕೆಯ ಕಲ್ಪನೆ ಪ್ರಕೃತಿಯ ಕುರಿತು ಮನುಷ್ಯ ಹೊಂದಿದ ಕೌತುಕದಿಂದ ಉದಯಿಸಿತು. ಆರಂಭದಲ್ಲಿ ಪ್ರಕೃತಿಯನ್ನೇ ದೇವರೆಂದು ಪೂಜಿಸುವ ಪದ್ಧತಿ ವಿಕಸಿತಗೊಂಡು ಮುಂದೆ ಕಾಲಾನಂತರದಲ್ಲಿ ಅದು ವಿರೂಪಗೊಂಡಿತು.

ಪ್ರಕೃತಿಯ ರೌದ್ರತೆ, ಭೀಕರತೆ, ಅಹ್ಲಾದತೆಗಳು ಆರಂಭದಲ್ಲಿ ಮನುಷ್ಯನಲ್ಲಿ ಭಯ ಮತ್ತು ಭಕ್ತಿಯನ್ನು ಹುಟ್ಟಿಸಿದವು. ಆ ಭಯ ಮತ್ತು ಭಕ್ತಿ ಆತನನ್ನು ನಿಸರ್ಗಾರಾಧನೆಗೆ ಹಚ್ಚಿತು. ಗಾಳಿಯನ್ನು ವಾಯುದೇವನೆಂದು, ಮಳೆಯನ್ನು ವರುಣದೇವನೆಂದು, ಬೆಳಕು ಮತ್ತು ಶಕ್ತಿಯನ್ನು ಸೂರ್ಯದೇವನೆಂದು ಹೀಗೆ ಅಷ್ಟತನುಮೂರ್ತಿಗಳನ್ನು ಕಲ್ಪಿಸಿ ಮನುಷ್ಯ ಪ್ರಕೃತಿಯನ್ನು ಆರಾಧಿಸಲಾರಂಭಿಸಿದ. ಕ್ರಮೇಣ ಈ ಕಲ್ಪಿತ ದೇವತಾರಾಧನೆಯು ಇದಿರಿಟ್ಟು ಪೂಜಿಸುವವರೆಗೆ ಬಂದು ನಿಂತಿತು. ಅದು ಮುಂದೆ ಮಂದಿರ ಸಂಸ್ಕೃತಿ ಮತ್ತು ವಿಗ್ರಹರಾಧನೆಯವರೆಗೆ ವಿಸ್ತಾರಗೊಂಡಿತು.

ಭಾರತೀಯರಲ್ಲಿ ದೇವರ ಪರಿಕಲ್ಪನೆಯು ವಿರೂಪಗೊಂಡಿದ್ದೆ ವಿಗ್ರಹರಾಧನೆಯ ಆರಂಭದಿಂದ. ದೇವರು ಎನ್ನುವ ಅಗೋಚರ ಸೃಷ್ಟಿ ಚೈತನ್ಯಾತ್ಮಕ ಶಕ್ತಿಯ ಇರುವಿಕೆಯ ಕಲ್ಪನೆ ಪ್ರಕೃತಿಯ ಕುರಿತು ಮನುಷ್ಯ ಹೊಂದಿದ ಕೌತುಕದಿಂದ ಉದಯಿಸಿತು. ಆರಂಭದಲ್ಲಿ ಪ್ರಕೃತಿಯನ್ನೇ ದೇವರೆಂದು ಪೂಜಿಸುವ ಪದ್ಧತಿ ವಿಕಸಿತಗೊಂಡು ಮುಂದೆ ಕಾಲಾನಂತರದಲ್ಲಿ ಅದು ವಿರೂಪಗೊಂಡಿತು. ಹೀಗೆ ಆ ಅಗಮ್ಯ ಶಕ್ತಿ ಸಂಕೇತದ ಆರಾಧನೆಯು ಸೀಮಿತ ಹಾಗೂ ಕ್ಷುಲ್ಲಕ ವಿಗ್ರಹರಾಧನೆಗೆ ಬಂದು ನಿಲ್ಲಲು ಕಾರಣ ದೇವರು ಮತ್ತು ಭಕ್ತರ ನಡುವೆ ಹುಟ್ಟಿಕೊಂಡ ದಲ್ಲಾಳಿಗಳಾದ ಪುರೋಹಿತಶಾಹಿಗಳ ಹಪಹಪಿತನ ಹಾಗೂ ಸ್ವಾರ್ಥ.

ಬುದ್ದೋತ್ತರ ಕಾಲಘಟ್ಟದಲ್ಲಿ ವೈದಿಕರು ಸಾಮೂಹಿಕವಾಗಿ ಬೌದ್ದ ವಿಹಾರಗಳನ್ನು ಮಂದಿರಗಳಾಗಿ ಪರಿವರ್ತಿಸಿದರು. ಅಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮೊದಲ್ಗೊಂಡಿತು. ವೇದಗಳ ಮೂಲ ಆಶಯಗಳನ್ನು ತಿಳಿಗೊಳಿಸಿ ಆಗಮಗಳು ರೂಪುಗೊಂಡವು. ಅಲ್ಲಿಂದ ಶಾಸ್ತ್ರೋಕ್ತ ಪೂಜೆ, ಆರಾಧನೆ, ಅರ್ಚನೆ, ಶೋಡಷೋಪಚಾರದಂತ ಕರ್ಮಠ ಆಚರಣೆಗಳನ್ನು ಹುಟ್ಟು ಹಾಕಲಾಯಿತು. ಆಗಿನಿಂದ ದೇವರನ್ನು ಅರಸಿ ಮಂದಿರಗಳಿಗೆ ಬರುವ ಭಕ್ತರ ಅಮಾನುಷ ಶೋಷಣೆ ಮೊದಲ್ಗೊಂಡಿತು. ಸಮಾಜದ ಅನುತ್ಪಾದಕ ವರ್ಗವು ಉತ್ಪಾದಕ ವರ್ಗದ ದುಡಿಮೆಯ ಫಲವನ್ನು ಅನಾಯಾಸವಾಗಿ ಕಬಳಿಸುವ ಕಾರ್ಯ ಆರಂಭಗೊಂಡಿತು. ಮಂದಿರ ಕಲ್ಪನೆ ಮತ್ತು ಪೌರೋಹಿತ್ಯಗಳು ರಾಕ್ಷಸ ರೂಪ ತಾಳಿದ ಮೇಲೆ ಸಮಾಜದಲ್ಲಿ ಶೋಷಣೆ ಮಿತಿಮೀರಿತು. ಮೌಢ್ಯ ಹಾಗೂ ಕಂದಾಚಾರಗಳು ಮೇಳೈಸತೊಡಗಿದವು. ಆಗ ಮತ್ತೆ ಇವನ್ನು ವಿರೋಧಿಸಿ ಪರ್ಯಾಯ ಚಳವಳಿಗಳು ಹುಟ್ಟು ಪಡೆದವು. ಹನ್ನೆರಡನೇ ಶತಮಾನದಲ್ಲಿ ಮಂದಿರ ಸಂಸ್ಕೃತಿ ಮತ್ತು ಸ್ಥಾವರ ಪೂಜೆಯನ್ನು ದಿಕ್ಕರಿಸಿದ ವಚನ ಚಳವಳಿ ವೈದಿಕತೆ ಮತ್ತು ಸನಾತನ ವಿಕೃತಿಗಳನ್ನು ಮೆಟ್ಟಿ ನಿಂತಿತು.

Advertisements

ಬಸವಾದಿ ಶರಣರು ಕಲ್ಲು, ಮಣ್ಣು, ಮರ, ಲೋಹದಿಂದ ಮಾಡಿದ ವಿಗ್ರಹ ರೂಪದ ದೇವರುಗಳ ಆರಾಧನೆಯನ್ನು ಅಲ್ಲಗಳೆದರು. ಕಲ್ಲು ದೇವರು ದೇವರಲ್ಲ ಎನ್ನುವುದು ಶರಣರ ಖಚಿತ ನಿಲುವಾಗಿತ್ತು. ಕಂಡ ಕಂಡ ವಸ್ತುಗಳನ್ನೆಲ್ಲ ದೇವರೆಂದು ಪೂಜಿಸುವ ಮೌಢ್ಯವನ್ನು ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರು ತಮ್ಮ ಒಂದು ವಚನದಲ್ಲಿ ಹೀಗೆ ಖಂಡಿಸಿದ್ದಾರೆ:

“ಕಲ್ಲು ದೇವರ ಪೂಜೆಮಾಡಿ
ಕಲಿಯುಗದಿ ಕತ್ತೆಗಳಾಗಿ ಹುಟ್ಟಿದರು.
ಮಣ್ಣದೇವರ ಪೂಜಿಸಿ ಮಾನಹೀನರಾದರು.
ಮರನ ದೇವರೆಂದು ಪೂಜಿಸಿ
ಮಣ್ಣ ಕೂಡಿದರು. ಇಂತೀ
ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು.
ಜಗದ್ಭರಿತನಾದ ಶಿವನೊಳಗೆ
ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜ ಶರಣನು”

ಭಾವಾರ್ಥ

ಕಲ್ಲನ್ನು ದೇವರು ಮಾಡಿ ಪೂಜಿಸುವಾತ ಈ ಭೂಮಿಯ ಮೇಲೆ ಕತ್ತೆಯಾಗಿ ಹುಟ್ಟುತ್ತಾನೆ ಎನ್ನುವ ಮಾತಿನ ಅರ್ಥ “ವಿಚಾರ ಶಕ್ತಿ ಇಲ್ಲದೇ ಯಜಮಾನ ಹೇರಿದಷ್ಟೂ ಭಾರವನ್ನು ಹೊತ್ತು ತಿರುಗುವ ಪ್ರಾಣಿಯಂತೆ ಈ ಕಲ್ಲು ಮಣ್ಣು ಪೂಜಿಸುವ ಮನುಷ್ಯ” ಎನ್ನುವ ಅರ್ಥದಲ್ಲಿ ಶರಣ ಚೌಡಯ್ಯ ಈ ಮಾತನ್ನು ಹೇಳಿದ್ದಾರೆ. ಹಾಗೆಂದು ಪುನರ್ಜನ್ಮವನ್ನು ಶರಣರು ನಂಬುವುದಿಲ್ಲ. ಸ್ಥಾವರ ಪೂಜೆಯನ್ನು ನಿರಾಕರಿಸುವ ಸಲುವಾಗಿ ‘ಕಲ್ಲುದೇವರ ಪೂಜಿಸುವವರು ಕತ್ತೆಗಳಾಗಿ ಹುಟ್ಟಿದರು’ ಎನ್ನುವ ಸಾಂದರ್ಭಿಕ ರೂಪಕವನ್ನು ಚೌಡಯ್ಯ ಇಲ್ಲಿ ಬಳಸಿದ್ದಾರೆ.

ಅದೇ ರೀತಿಯಲ್ಲಿ “ನೀರಿನಲ್ಲಿ ಕರಗಿ ಹೋಗುವ ಮಣ್ಣಿನಿಂದ ಮಾಡಿದ ದೇವರ ವಿಗ್ರಹವನ್ನು ಪೂಜಿಸುವ ಮೂಢ ಮನುಷ್ಯ ಮಾನ ಮರ್ಯಾದೆ ಇಲ್ಲದವನು” ಎನ್ನುತ್ತಾರೆ ಶರಣರು. ಕಟ್ಟಿಗೆಯಿಂದ ಮಾಡಿದ ದೇವರ ಮೂರ್ತಿ ಪೂಜಿಸುವವರು ಮಣ್ಣಿನಲ್ಲಿ ಮಣ್ಣಾಗಿ ಹೋದರು ಎನ್ನುತ್ತಾರೆ ಶರಣರು. ಹೀಗೆಲ್ಲ ಕಂಡಕಂಡ ದೇವರನ್ನು ಪೂಜಿಸುವಾತ ಜೀವನ್ಮೋಕ್ಷ ಹೊಂದದೆ ತ್ರಿಶಂಕುವಾಗುತ್ತಾನೆ ಎನ್ನುವ ಚೌಡಯ್ಯನವರು ಸ್ವರ್ಗ ನರಕದ ಪರಿಕಲ್ಪನೆ ನಂಬುವುದಿಲ್ಲ. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎನ್ನುವುದು ಶರಣವಾಣಿ. ಹಾಗೆ, ಈ ಸ್ಥಾವರ ದೇವರುಗಳನ್ನು ಪೂಜಿಸುವವರು ಅನಾಚಾರಿಗಳು ಎನ್ನುವ ಅರ್ಥ ಈ ಮಾತಿನೊಳಗಡಗಿದೆ.

ಈ ವಿಶ್ವವನ್ನೆಲ್ಲ ವ್ಯಾಪಿಸಿರುವ ಜಗದ್ಭರಿತನಾದ ನಿರಾಕಾರ ಶಿವನ ಸೇವಕನಂತಿರುವ ಶರಣನೇ ಸರ್ವ ಶ್ರೇಷ್ಠನಾದವನು ಎನ್ನುವ ಮೂಲಕ ಶರಣ ಅಂಬಿಗರ ಚೌಡಯ್ಯ ಆ ವಿಶ್ವಚೈತನ್ಯ ಶಕ್ತಿ ಸ್ವರೂಪವನ್ನು ಸಿಮಿತ, ಅಶಾಶ್ವತ, ಕ್ಷುಲ್ಲಕ ಭೌತ ವಸ್ತುಗಳಲ್ಲಿ ಕಲ್ಪಿಸಿ ಪೂಜಿಸುವುದನ್ನು ತನ್ನ ಮೇಲಿನ ವಚನದಲ್ಲಿ ಬಲವಾಗಿ ವಿರೋಧಿಸುತ್ತಾರೆ.

ಟಿಪ್ಪಣಿ

ಬಸವಾದಿ ಶರಣರು ಸನಾತನ ಧರ್ಮದ ವಿಕೃತಿಗಳನ್ನು ವಿರೋಧಿಸಿ ಹುಟ್ಟು ಹಾಕಿದ ವಚನಾಂದೋಲನವನ್ನು ಹಿಂದೂ ಧರ್ಮದ ಸುಧಾರಣೆಯ ಚಳವಳಿ ಎನ್ನುವ ಅಪವ್ಯಾಖ್ಯಾನವು ಆರಂಭಗೊಳ್ಳಲು ಕಾರಣ ಸನಾತನಿಗಳಿಗೆ ವಚನ ಚಳವಳಿಯ ಅವೈದಿಕ ಸಿದ್ಧಾಂತಗಳಿಂದ ಉದ್ಭವಿಸಿದ ಭಯದ ಪರಿಣಾಮದಿಂದ. ಶರಣರ ವಚನಗಳು ಅತ್ಯಂತ ನಿಖರ ಹಾಗೂ ಸ್ಪಷ್ಟವಾಗಿ ವೈದಿಕತೆಯ ಎಲ್ಲಾ ಅವಗುಣಗಳನ್ನು ಅಲ್ಲಗಳೆಯುತ್ತವೆ. ಗುಡಿ, ಗುಂಡಾರ, ದೇಗುಲ, ಮಂದಿರ, ಎಲ್ಲವನ್ನು ನಿರಾಕರಿಸುವ ಶರಣರು ಅಲ್ಲಿರುವ ಸ್ಥಾವರ ವಿಗ್ರಹಗಳ ಆರಾಧನೆಗೆ ಪರ್ಯಾಯವಾಗಿ ‘ನರನೊಳಗೆ ಹರ’ನನ್ನು ಹುಡುಕಿ ಕೊನೆಗೆ ನರನನ್ನೆ ಹರನನ್ನಾಗಿಸುವ ಇಷ್ಟಲಿಂಗ ಅನುಸಂಧಾನವನ್ನು ಆವಿಷ್ಕರಿಸಿದರು. ಶರಣ ಅಂಬಿಗರ ಚೌಡಯ್ಯನವರ ಮೇಲಿನ ವಚನವು ಬಹಳ ಸ್ಪಷ್ಟವಾಗಿ ಭೌತಿಕ ವಸ್ತುಗಳನ್ನು ದೇವರೆಂದು ಪೂಜಿಸುವ ಸನಾತನ ಧರ್ಮದ ವಿಕೃತಿ ಹಾಗೂ ಶೋಷಣೆಯ ಆಯುಧವನ್ನು ತೀವ್ರವಾಗಿ ಭಂಜಿಸುತ್ತದೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

2 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X