ವಚನಯಾನ | ಶರಣರ ದೃಷ್ಟಿಯಲ್ಲಿ ದೇವರು

Date:

Advertisements

ಸನಾತನ ಬ್ರಾಹ್ಮಣ ಧರ್ಮವು ದೇವರ ವಿಷಯದಲ್ಲಿ ಯಾವುದೇ ಸ್ಪಷ್ಟತೆ ಹೊಂದದೆ ಇರುವ ಜಗತ್ತಿನ ಏಕೈಕ ಧರ್ಮವಾಗಿದೆ. ಬ್ರಾಹ್ಮಣ ಧರ್ಮದ ಈ ದ್ವಂದ್ವವು ಉದ್ದೇಶಪೂರ್ವಕವಾಗಿಯೇ ರೂಪಿಸಲಾಗಿದೆ. ಜನಸಾಮಾನ್ಯರ ಆಚರಣೆಯಲ್ಲಿ ಬಹುದೇವತಾರಾಧನೆಯ ನಂಬಿಕೆಯನ್ನು ಒಂದಿನಿತು ಮುಕ್ಕಾಗದಂತೆ ಖಾಯಂಗೊಳಿಸಲಾಗಿದೆ.

ಸಾಮಾನ್ಯವಾಗಿ “ದೇವರು” ಎಂದರೆ ಒಂದು ಅಗೋಚರ ಶಕ್ತಿಯನ್ನು ಸಂಕೇತಿಸುತ್ತದೆ. ಆರ್ಯ ವೈದಿಕ ಧರ್ಮದ ಪ್ರಕಾರ ಈ ಜಗತ್ತನ್ನು ನಿರ್ಮಿಸಿದ ಸೃಷ್ಟಿಕರ್ತನನ್ನು ಸೂಚಿಸುತ್ತದೆ. ದೇವರ ಪರಿಕಲ್ಪನೆಯು ವೈಯಕ್ತಿಕ ನಂಬಿಕೆಗಳು ಮತ್ತು ಧಾರ್ಮಿಕ ಹಿನ್ನೆಲೆಗಳ ಆಧಾರದ ಮೇಲೆ ಬದಲಾಗುತ್ತದೆ, ಆದರೆ ಸಾಮಾನ್ಯವಾಗಿ ಎಲ್ಲ ಧರ್ಮಗಳಲ್ಲಿಯೂ ದೇವರನ್ನು ಒಬ್ಬ ಮಹಾನ್ ಶಕ್ತಿಯಾಗಿ ಪೂಜಿಸಲಾಗುತ್ತದೆ. ದೇವರು ಎಂದರೆ ಈ ವಿಶಾಲವಾದ ಪ್ರಪಂಚವನ್ನು ಸೃಷ್ಟಿಸಿ, ನಿರ್ವಹಿಸುವ ಶಕ್ತಿ ಎಂಬುದು ಹಲವರ ನಂಬಿಕೆ. ಇದು ವೈಯಕ್ತಿಕ ನಂಬಿಕೆಯಾಗಿದ್ದು, ಬೇರೆಬೇರೆ ಧರ್ಮ ಗ್ರಂಥಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದೆ.
ದೇವರು ಕೇವಲ ಶಬ್ದಗಳಲ್ಲಿ ಸಿಗುವುದಿಲ್ಲ, ಬದಲಿಗೆ ಅನುಭವಿಸಬೇಕು ಎನ್ನುವುದು ಕೆಲವರ ವಾದ. ಹಿಂದೂ ಬ್ರಾಹ್ಮಣ ಧರ್ಮದಲ್ಲಿ ದೇವರು ವಿವಿಧ ರೀತಿಯಲ್ಲಿ ಅಂದರೆ ಒಟ್ಟು 33 ಕೋಟಿಗೂ ಅಧಿಕ ರೂಪಗಳಲ್ಲಿದ್ದಾನೆ ಎನ್ನುವ ನಂಬಿಕೆ ಇದೆ. ಇಸ್ಲಾಂನಲ್ಲಿ, ಕ್ರೈಸ್ತರಲ್ಲಿ ದೇವರು ಒಬ್ಬನೇ ಇದ್ದಾನೆ. ದೇವರು ಮನುಷ್ಯನ ಭಕ್ತಿ ಮತ್ತು ಪೂಜೆಯಿಂದ ಸಂತುಷ್ಟನಾಗುತ್ತಾನೆ ಎಂಬುದು ಮತ್ತೊಂದು ಪ್ರಮುಖ ನಂಬಿಕೆಯಾಗಿದೆ. ಹಿಂದೂ ಬ್ರಾಹ್ಮಣರ ದೃಷ್ಟಿಯಲ್ಲಿ ದೇವರು ಒಬ್ಬ ಶ್ರೇಷ್ಠ ಶಕ್ತಿಯಾಗಿ, ಅಥವಾ ಅನೇಕ ರೂಪದಲ್ಲಿ ಕಾಣಿಸುತ್ತಾನೆ, ಅದು ಪ್ರಮುಖವಾಗಿ ಬ್ರಹ್ಮ, ವಿಷ್ಣು ಮತ್ತು ಮಹೇಶನಂತಹ ತ್ರಿಮೂರ್ತಿಗಳ ಅಂಶಗಳನ್ನು ಪ್ರತಿನಿಧಿಸುತ್ತಾನೆ. ಹಿಂದೂ ಬ್ರಾಹ್ಮಣ ಧರ್ಮವು ಬಹುದೇವತಾವಾದಿ, ಸರ್ವೇಶ್ವರವಾದ ಮತ್ತು ಸರ್ವಬ್ರಹ್ಮಾಂಡವಾದಗಳಂತಹ ಅನೇಕ ಸಿದ್ಧಾಂತಗಳನ್ನು ಒಳಗೊಂಡಿದೆ, ಆದ್ದರಿಂದ ದೇವರ ಪರಿಕಲ್ಪನೆಯು ಪಂಥದಿಂದ ಪಂಥಕ್ಕೆ ಬದಲಾಗುತ್ತದೆ.

ಸನಾತನ ಬ್ರಾಹ್ಮಣ ಧರ್ಮವು ದೇವರ ವಿಷಯದಲ್ಲಿ ಯಾವುದೇ ಸ್ಪಷ್ಟತೆ ಹೊಂದದೆ ಇರುವ ಜಗತ್ತಿನ ಏಕೈಕ ಧರ್ಮವಾಗಿದೆ. ಬ್ರಾಹ್ಮಣ ಧರ್ಮದ ಈ ದ್ವಂದ್ವವು ಉದ್ದೇಶಪೂರ್ವಕವಾಗಿಯೇ ರೂಪಿಸಲಾಗಿದೆ. ಜನಸಾಮಾನ್ಯರ ಆಚರಣೆಯಲ್ಲಿ ಬಹುದೇವತಾರಾಧನೆಯ ನಂಬಿಕೆಯನ್ನು ಒಂದಿನಿತು ಮುಕ್ಕಾಗದಂತೆ ಖಾಯಂಗೊಳಿಸಲಾಗಿದೆ. ತಾತ್ವಿಕ ಚರ್ಚೆಗಳಲ್ಲಿ ಉಪನಿಷತ್ತಿನ ಅದೈತ್ವ ಪರಿಕಲ್ಪನೆ ಬಳಸಲಾಗುತ್ತದೆ. ದೇಶದ ನಾಲ್ಕೂ ಭಾಗಗಳಲ್ಲಿ ಮಠ ಹಾಗೂ ಮಂದಿರಗಳು ಸ್ಥಾಪಿಸಿ ಬ್ರಾಹ್ಮಣ್ಯವನ್ನು ಗಟ್ಟಿಗೊಳಿಸಿದ ಶಂಕರಾಚಾರ್ಯ ಬಾಯುಪಚಾರಕ್ಕೆ ಅದ್ವೆತ ಮತ್ತು ಮಾಯಾವಾದವನ್ನು ಪ್ರತಿಪಾದಿಸಿದ್ದಾನೆ. ಅಂದರೆ, ಶಂಕರನ ಅದ್ವೈತವಾಗಲಿ, ರಾಮಾನುಜನ ವಿಶಿಷ್ಟಾದ್ವೈತವಾಗಲಿ ಪ್ರಾಯೋಗಿಕವಲ್ಲದ ತೋರಿಕೆಯ ಸಿದ್ಧಾಂತಗಳು. ಇನ್ನು ಮಾಧ್ವನ ದ್ವೈತವು ಹೆಚ್ಚು ಪ್ರಾಯೋಗಿಕವಾಗಿದ್ದು ಅದು ಬಹುದೇವೋಪಾಸನೆ ಮತ್ತು ದೇವರು-ಭಕ್ತರು ಬೇರೆ ಬೇರೆ ಎನ್ನುವ ತತ್ವವನ್ನು ಅನುಸರಣೆಯಲ್ಲಿ ಇಟ್ಟಿದೆ. ಗ್ರಂಥಗಳಲ್ಲಿನ ಲಿಖಿತ ತಾತ್ವಿಕ ಪ್ರತಿಪಾದನೆಗಳ ಹೊರತಾಗಿ ದೇವರ ಕುರಿತು ಪ್ರಾಯೋಗಿಕ ಹಾಗು ಆಚರಣಾತ್ಮಕ ನಂಬಿಕೆಗಳಲ್ಲಿ ಶಂಕರ, ರಾಮಾನುಜ ಹಾಗು ಮಾಧ್ವ ಈ ಮೂರು ಜನ ಆಚಾರ್ಯರ ಅನುಯಾಯಿಗಳಾದ ತ್ರಿಮತಸ್ಥರಲ್ಲಿ ಯಾವುದೆ ಮೂಲಭೂತ ವ್ಯತ್ಯಾಸಗಳು ಕಾಣುವುದಿಲ್ಲ. ಅಷ್ಟೆ ಅಲ್ಲದೆ, ಈ ಮೂರು ವಿಭಿನ್ನ ತತ್ವಗಳು ಪ್ರತಿಪಾದಿಸಿದ ಆಚಾರ್ಯರೂ ಸಹ ತಾವು ಪ್ರತಿಪಾದಿಸಿದ ತತ್ವಗಳ ಅನುಸಾರ ಬದುಕಿರುವಂತೆ ಕಾಣುವುದಿಲ್ಲ.

bramha vishnu

ದೇವರು ಮತ್ತು ಭಕ್ತ ಇವೆರಡೂ ಬೇರೆ ಬೇರೆ ಎನ್ನುವ ನಂಬಿಕೆಯನ್ನು ದ್ವೈತ ಎಂದು ಕರೆಯುತ್ತಾರೆ. ಇದು ಹಿಂದೂ ಬ್ರಾಹ್ಮಣ ಧರ್ಮದ ಆಚರಣಾತ್ಮಕ ಮತ್ತು ಪ್ರಾಯೋಗಿಕ ನಂಬಿಕೆಯಾಗಿದೆ. ತ್ರಿಮತಸ್ಥ ಬ್ರಾಹ್ಮಣರು ದ್ವೈತವನ್ನು ನುಡಿದು ಅದರಂತೆ ನಡೆಯುತ್ತಾರೆ. ಆದರೆ, ಅದ್ವೈತ ಧರ್ಮದ ಸವಾಲುಗಳನ್ನು ಮತ್ತು ಪ್ರಶ್ನೆಗಳನ್ನು ಎದುರಿಸುವಾಗ ಮಾತ್ರ ಉಪನಿಷತ್ತು ಹಾಗು ಶಂಕರನ ಮಾಯಾವಾದಕ್ಕೆ ಗಂಟುಬಿದ್ದು ತಾವೂ ಅದ್ವೈತಿಗಳು ಎಂದು ವಿತಂಡವಾದ ಮಾಡುತ್ತಾರೆ. ಬ್ರಾಹ್ಮಣನೊಬ್ಬ “ಪೂಜೆ ಮಾಡುತ್ತೇನೆ” ಎಂದು ಹೇಳುತ್ತಾನೆ. ಹಾಗೆಂದರೆ ಪೂಜೆ ಮಾಡುವ ಹಾಗು ಮಾಡಿಸಿಕೊಳ್ಳುವ ವಸ್ತುಗಳು ಬೇರೆ ಬೇರೆ ಇವೆ ಎಂದರ್ಥ. ಇದನ್ನು ದ್ವೈತ ಅಥವಾ ಎರಡು ಎನ್ನಲಾಗುತ್ತದೆ. ಇದೆ ಮಾನದಂಡವನ್ನು ಉಳಿದ ಏಕದೇವೋಪಾಸಕ ಧರ್ಮಗಳೂ ಅನುಸರಿಸುವ ಮೂಲಕ ಅವೆಲ್ಲವೂ ದ್ವೈತ ಸಿದ್ಧಾಂತವನ್ನೆ ನಂಬುತ್ತವೆ. ಅಂದರೆ ದ್ವೈತ ಸಿದ್ಧಾಂತದ ಪ್ರಕಾರ ದೇವರೇ ಬೇರೆ, ಭಕ್ತನೇ ಬೇರೆ. ದೇವರು ಮತ್ತು ಭಕ್ತನ ನಡುವೆ ಒಂದು ಅಗಾಧವಾದ ಕಂದಕವಿದೆ. ಈ ಜಗತ್ತು ದೇವನ ಅಣತಿಯಂತೆ ನಡೆಯುತ್ತದೆ, ಆತನ ಅನುಮತಿ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ. ಅಂದರೆ ಇದು ದೈವ ಕೇಂದ್ರಿತ ಜಗತ್ತು, ಇಲ್ಲಿ ಮನುಷ್ಯನ ಅಸ್ತಿತ್ವ ನಗಣ್ಯ. ಹಿಂದೂ ಬ್ರಾಹ್ಮಣ ಧರ್ಮವು ದೈವ ಕೇಂದ್ರಿತ ಧರ್ಮವಾಗಿದ್ದು ಅದರಲ್ಲಿ ಮನುಷ್ಯನಿಗೆ ಯಾವುದೆ ಬೆಲೆಯಿಲ್ಲ. ಮನುಷ್ಯ ಸದಾ ದೇವರ ಅಣತಿಯಂತೆ ಬದುಕುವ ಒಂದು ಪರಾವಲಂಬಿ ಪ್ರಾಣಿಯಾಗಿದ್ದಾನೆ ಅಷ್ಟೆ.

ಆದರೆ, ಶರಣ ಧರ್ಮದ ಪ್ರಕಾರ ದೇವರ ಪರಿಕಲ್ಪನೆ ವಿಶಿಷ್ಟ ಮತ್ತು ಸಂಪೂರ್ಣ ವಿಭಿನ್ನ. ಇಲ್ಲಿ ದೇವರು ಎಂದರೆ ನಿರ್ಗುಣ, ನಿರಾಕಾರ, ಅಗಮ್ಯ, ಅಗೋಚರ, ಅಪ್ರತಿಮವಾದ ಈ ಸೃಷ್ಟಿಯ ಚೈತನ್ಯ ಶಕ್ತಿ. ಆ ಶಕ್ತಿಯು ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ವಸ್ತುಗಳಲ್ಲಿ ಇರುತ್ತದೆ. ಅದು ಭಕ್ತನಲ್ಲೂ ಇರುವುದರಿಂದ ಭಕ್ತನು ಅದನ್ನು ಜಾಗೃತಿಗೊಳಿಸಿಕೊಂಡು ಆ ಶಕ್ತಿಯೆ ತಾನಾಗಬಹುದು. ಅಂದರೆ ನರನೊಳಗೆ ಹರನಿಹನು, ಆ ಕುರಿತು ನರ ಜಾಗೃತಗೊಂಡರೆ ಆತನೇ ಹರ. ಇದನ್ನು ಶರಣರು ಅದ್ವೈತ ಎನ್ನುತ್ತಾರೆ. ದೇವರು ಮತ್ತು ಭಕ್ತ ಎರಡಲ್ಲದೆ, ಇಬ್ಬರೂ ಒಂದೆ, ದೇವನೆ ಭಕ್ತ, ಭಕ್ತನೆ ದೇವರು. ಆ ಕಾರಣದಿಂದ ಲಿಂಗಾಯತನೊಬ್ಬನನ್ನು ಏನು ಮಾಡುತ್ತೀ ಎಂದು ಕೇಳಿದಾಗ ಆತ ಬ್ರಾಹ್ಮಣನಂತೆ ಪೂಜೆ ಮಾಡುವೆ ಎನ್ನುವ ಬದಲಿಗೆ ಪೂಜೆ ಮಾಡಿಕೊಳ್ಳುವೆ ಎಂದು ಹೇಳುತ್ತಾನೆ. ಇಲ್ಲಿ ಪೂಜೆ ಮಾಡುವ ಮತ್ತು ಮಾಡಿಸಿಕೊಳ್ಳುವ ವಸ್ತು ಒಂದೇ ಆಗಿರುವುದರಿಂದ ಪೂಜೆ ಮಾಡಿಕೊಳ್ಳುವೆ ಎಂದು ಹೇಳಲಾಗುತ್ತದೆ. ಹಾಗಾಗಿ, ಶರಣ ಧರ್ಮವು ಮನುಷ್ಯ ಕೇಂದ್ರಿತ ಧರ್ಮವೇ ಹೊರತು ದೈವ ಕೇಂದ್ರಿತ ಧರ್ಮವಲ್ಲ. ಮುಂದುವರೆದು ಶರಣರು ದೇವರಿಗಿಂತ ತಾನು ಮಾಡುವ ಕೆಲಸದಲ್ಲಿನ ಶ್ರದ್ಧೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಆ ಕೆಲಸವನ್ನು ಅವರು ಕಾಯಕ ಎನ್ನುವ ವಿಶಿಷ್ಟ ಪಾರಿಭಾಷಿಕ ಪದದಿಂದ ಗುರುತಿಸುತ್ತಾರೆ. ಆ ಕಾರಣದಿಂದ ಅವರು ಕಾಯಕವೇ ಕೈಲಾಸವೆಂದು ಘೋಷಿಸಿದ್ದಾರೆ. ಆ ಕಾಯಕವು ದೇಹವನ್ನು ದಂಡಿಸಿ, ಬೆವರು ಸುರಿಸಿ ಮಾಡುವ ಸತ್ಯ, ಶುದ್ಧ ಕಾಯಕವಾಗಿರಬೇಕು ಎಂಬ ಕಟ್ಟಳೆಯನ್ನು ಹೇರುತ್ತಾರೆ.

ಆದ್ದರಿಂದ ಶರಣರ ದೃಷ್ಟಿಯಲ್ಲಿ ದೇವರು ಎಂದರೆ ಹೊರಗೆಲ್ಲಿಯೂ ಇರದೆ, ಅದು ಸ್ವಯಂ ಭಕ್ತನೆ ದೇವರು. ಈ ಸೃಷ್ಟಿಯ ಚೈತನ್ಯ ಶಕ್ತಿಯ ಅಂಶ ಭಕ್ತನೊಳಗಿದ್ದು ಅದನ್ನು ಪ್ರತಿಯೊಬ್ಬರು ಜಾಗೃತಿಗೊಳಿಸಿಕೊಂಡು ಸ್ವಯಂ ದೇವರಾಗಬೇಕು, ದೇವರನ್ನು ಹೊರಗೆ ಬೇರೆಲ್ಲೂ ಹುಡುಕಬಾರದು, ದೇವರನ್ನು ತೋರಿಸುತ್ತೇವೆ ಎನ್ನುವ ದಲ್ಲಾಳಿ ವ್ಯವಸ್ಥೆಯಿಂದ ಎಚ್ಚರಿಕೆ ಹೊಂದಿ ದೂರವಿರಬೇಕು ಎನ್ನುವುದೆ ಶರಣ ಸಿದ್ಧಾಂತ. ದುಡಿಮೆಯೇ ದೇವರು ಎನ್ನುವ ಮೂಲಕ ದುಡಿಯದೇ ದೇವರ ಪೂಜೆ ಮಾಡುತ್ತ ಹೊಟ್ಟೆ ಹೊರೆಯುವ ಪುರೋಹಿತಶಾಹಿ ವ್ಯವಸ್ಥೆಯನ್ನು ಶರಣರು ಮಾನ್ಯ ಮಾಡುವುದಿಲ್ಲ. “ಕಾಯಕದಲ್ಲಿ ನಿರತನಾದಡೆ, ಗುರುವಾರವೂ ಮರೆಯಬೇಕು, ಲಿಂಗದ ಹಂಗು ಹರಿಯಬೇಕು…”ಎನ್ನುತ್ತಾರೆ ಶರಣರು. ದುಡಿಯದೆ ಪೂಜೆ, ವ್ರತ, ಅನುಷ್ಠಾನ, ತಪಸ್ಸು ಮುಂತಾದವುಗಳ ಮೂಲಕ ಆತ್ಮೋನ್ನತಿ ಹೊಂದುವ ಹಿಂದೂ ಬ್ರಾಹ್ಮಣ ಧರ್ಮದಂತಲ್ಲದೆ ಶರಣ ಧರ್ಮವು ದುಡಿಮೆ ಮತ್ತು ಆ ಮೂಲಕ ಸಮಾಜೋನ್ನತಿ ಸಾಧಿಸಬೇಕು ಎಂದು ಹೇಳುತ್ತದೆ. ಇನ್ನೊಂದು ಅರ್ಥದಲ್ಲಿ ಶರಣ ಧರ್ಮದಲ್ಲಿ ದೇವರು ಅಂದರೆ ಕಣ್ಣಿಗೆ ಕಾಣುವ ಸಮಾಜ. ಏಕೆಂದರೆ ಶರಣರ ಚಳುವಳಿಯು ಸಮಾಜ ಕೇಂದ್ರಿತ ಚಳುವಳಿಯಾಗಿದ್ದು ಅದು ಸಮಾಜವನ್ನೆ ದೇವರೆಂದು ಪರಿಗಣಿಸುತ್ತದೆ. ಶರಣರ ದೃಷ್ಟಿಯಲ್ಲಿ ಸಮಾಜ ಚಲನಶೀಲವಾಗಿರಬೇಕು, ಅದಕ್ಕೆ ಅವರು ಜಂಗಮ ಎಂದೂ ಸಹ ಕರೆಯುತ್ತಾರೆ. ಯಾವುದು ಚಲನೆ ಹೊಂದಿಲ್ಲವೋ ಅದು ಸ್ಥಾವರ.

ಏಸು

ಭಾರತೀಯ ತತ್ವ ಪರಂಪರೆಯು ಹಿಂದೂ ಬ್ರಾಹ್ಮಣ ಧರ್ಮದ ಅತಾರ್ಕಿಕ ನಂಬಿಕೆ ಹಾಗು ಆಚರಣೆಗಳಿಂದ ಕಲುಷಿತಗೊಂಡಿದೆ. ಬ್ರಾಹ್ಮಣ ಧರ್ಮದ ದೇವರ ಕುರಿತ ದ್ವಂದ್ವಗಳು, ಅನುಕೂಲಸಿಂಧು ವ್ಯಾಖ್ಯಾನಗಳು ಭಕ್ತರಲ್ಲಿ ಸ್ಪಷ್ಟತೆ ಮೂಡಿಸದೆ ಅನೇಕ ಬಗೆಯ ಮೌಢ್ಯಗಳು, ಅಂಧಶ್ರದ್ಧೆಗಳಿಗೆ ಹಾದಿ ಮಾಡಿಕೊಟ್ಟಿದೆ. ಬಹು ದೇವತಾರಾಧನೆ, ಗುಡಿ ಸಂಸ್ಕೃತಿ, ದೇವರು ಮತ್ತು ಭಕ್ತರ ನಡುವಿನ ದಲ್ಲಾಳಿ ವ್ಯವಸ್ಥೆಯು ದೇವರನ್ನು ಒಂದು ವ್ಯಾಪಾರದ ಸರಕಾಗಿಸಿದೆ. ಮೈಗಳ್ಳ ಪುರೋಹಿತರು ದುಡಿಯದೆ ಕುಳಿತು ತಿನ್ನುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿದ್ದಾರೆ. ದೇವರನ್ನು ಸಂತೃಪ್ತಗೊಳಿಸಲು ಭಕ್ತರು ಪಡಬಾರದ ಪಾಡು ಪಡುವುದು ಸಾಮಾನ್ಯವಾಗಿದೆ. ದೇವರ ಕುರಿತು ಭಕ್ತಿಗಿಂತ ಭಯವನ್ನೆ ಹೆಚ್ಚು ಬಿತ್ತಲಾಗಿದೆ. ಭಯದಿಂದ ಜನರು ಮಾಡಬಾರದನ್ನು ಮಾಡುತ್ತಿದ್ದಾರೆ. ಮನುಷ್ಯನ ಕಷ್ಟಗಳ ನಿವಾರಣೆಗೆ ದೇವರಲ್ಲಿ ಹರಕೆ ಹೊರುವಂತೆ ಪುರೋಹಿತರು ಸಲಹೆ ನೀಡುತ್ತಾರೆ, ಅದನ್ನು ಈಡೇರಿಸಲು ಆಗದಿದ್ದರೆ ದೇವರು ಕೆಡುಕು ಮಾಡುತ್ತಾನೆ ಎನ್ನುವ ಭಯ ಹುಟ್ಟಿಸಿಲಾಗುತ್ತದೆ. ಅದರ ಪರಿಹಾರಕ್ಕೆ ಅನೇಕ ಪೂಜೆಗಳು ಹೇಳುವ ಮೂಲಕ ಪುರೋಹಿತರು ಹಣವನ್ನು ಗಳಿಸುತ್ತಾರೆ. ಹಿಂದೂ ಬ್ರಾಹ್ಮಣ ಧರ್ಮದ ಈ ಎಲ್ಲಾ ನಂಬಿಕೆಗಳನ್ನು ಶರಣರು ಅಲ್ಲಗಳೆಯುತ್ತಾರೆ. ಬಸವಣ್ಣನವರ ಈ ಕೆಳಗಿನ ವಚನವು, ದೇವರು ಎಂದರೆ ನೈಜ ಅರ್ಥದಲ್ಲಿ ಏನು, ನಾವು ಯಾವುದನ್ನು ದೇವರೆಂದು ಭಾವಿಸಬೇಕು ಎನ್ನುವ ಕುರಿತು ತುಂಬಾ ಮಾರ್ಮಿಕವಾಗಿ ವಿವರಿಸುತ್ತದೆ:

“ಮರಕ್ಕೆ ಬೇರು ಬಾಯೆಂದು ತಳಕ್ಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಳಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ.”

ಭಾವಾರ್ಥ

ಬೀಜವೊಂದು ಅಂಕುರಿಸುತ್ತಿದ್ದಂತೆ ಅದು ನೆಲಕ್ಕೆ ತನ್ನ ಬೇರುಗಳನ್ನು ಇಳಿಸಲು ಆರಂಭಿಸುತ್ತದೆ. ಮುಂದೆ ಅದು ಸಸಿಯಾಗಿ, ಗಿಡವಾಗಿ, ನಂತರ ಮರವಾಗಿ ಎದ್ದು ನಿಲ್ಲುತ್ತದೆ. ಮರದ ಬೆಳವಣಿಗೆಯ ಉದ್ದಕ್ಕೂ ಅದನ್ನು ಪೋಷಿಸುವುದು ಅದರ ಬೇರುಗಳು. ಭೂಮಿಯಲ್ಲಿ ಆಳಕ್ಕೆ ಇಳಿಯುವ ಬೇರುಗಳು ಅಲ್ಲಿನ ತೇವಾಂಶ, ಖನಿಜಾಂಶಗಳನ್ನು ಹೀರಿಕೊಂಡು ಮರದ ಬೆಳವಣಿಗೆಗೆ ಕಾರಣವಾಗುತ್ತವೆ. ಮಗುವೊಂದು ತಾಯಿಯ ಗರ್ಭದಲ್ಲಂಕುರಿಸಿ ಹೊರಬಂದು ಮೇಲೆ ತಾಯಿಯ ಹಾಲು ಕುಡಿಯುತ್ತದೆ, ಆಮೇಲೆ ತನ್ನ ಬಾಯಿಯಿಂದ ಆಹಾರವನ್ನು ತಿಂದು ದೊಡ್ಡದಾಗಿ ಬೆಳೆಯುತ್ತದೆ. ಮಗು ಬೆಳೆಯಲು ಅದರ ಬಾಯಿಗೆ ಆಹಾರ ಹೇಗೆ ಮುಖ್ಯವೋ ಮರದ ಬೆಳವಣಿಗೆಗೆ ಅದರ ಬೇರುಗಳೇ ಬಾಯಿಗಳು. ಹಾಗೆ ಮರದ ಬೇರು ಬಾಯಿಯಂತೆ, ನಾವು ತಳಕ್ಕೆ ಹಾಕಿದ ನೀರು ಬೇರೆಂಬ ಮರದ ಬಾಯಿಗೆ ಹೋಗಿ ಮರ ಚಿಗುರೊಡೆಯುತ್ತದೆ. ಈ ಸಮಾಜವೆಂಬುದು ನಾವು ದೇವರೆಂದು ಪರಿಭಾವಿಸಿ ಪೂಜಿಸುವ ಲಿಂಗದ ಬಾಯಿ ಇದ್ದಂತೆ. ಆ ಸಮಾಜವೆಂಬ ಬಾಯಿಯನ್ನು ಉಣ್ಣಿಸಿದರೆ, ಅರ್ಥಾತ್ ಸಮಾಜವನ್ನು ಸರಿಯಾಗಿ ಪೋಷಿಸಿದರೆ ಅದು ಲಿಂಗಕ್ಕೆ(ದೇವರು) ನೇರವಾಗಿ ಸಲ್ಲುತ್ತದೆ. ಹಾಗಾಗಿ, ನಾವು ದೇವರನ್ನು ಪೂಜಿಸುವ ಬದಲಿಗೆ ದೇವರ ಬಾಯಿಯಂತಿರುವ ಸಮಾಜವನ್ನು ಉಣ್ಣಿಸಿದರೆ, ಅದು ದೇವರ ಪೂಜೆಗೆ ಸಮನಾದ ಫಲವನ್ನು ನೀಡುತ್ತದೆ ಎನ್ನುವುದೆ ವಚನದ ಭಾವಾರ್ಥವಾಗಿದೆ.

ಟಿಪ್ಪಣಿ

ಶರಣರ ದೃಷ್ಟಿಯಲ್ಲಿ ದೇವರ ಪರಿಕಲ್ಪನೆ ಅನನ್ಯವಾಗಿದೆ. ವಚನ ಚಳವಳಿಯು ಮನುಷ್ಯ ಘನತೆಯನ್ನು ಎತ್ತಿಹಿಡಿದ ಜಗತ್ತಿನ ಮೊಟ್ಟ ಮೊದಲ ಚಳವಳಿಯಾಗಿದೆ. ಕಾಣದ ದೇವರಿಗೆ ಮಹತ್ವ ನೀಡುವ ಹಿಂದೂ ಬ್ರಾಹ್ಮಣ ಧರ್ಮದಲ್ಲಿ ದೇವರು ಹೆಸರಿನಲ್ಲಿ ವ್ಯಾಪಾರ ನಡೆಯುತ್ತದೆ. ದೇವರನ್ನು ವಾಣಿಜ್ಯೋದ್ಯಮ ಮಾಡಿಕೊಂಡಿರುವ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಬಂಡೆದ್ದ ಶರಣರು ದೇವರನ್ನು ಮಧ್ಯವರ್ತಿಗಳ ಕಪಿಮುಷ್ಟಿಯಿಂದ ವಿಮೋಚನೆಗೊಳಿಸಿ ಭಕ್ತನ ಅಂಗೈಯಲ್ಲಿ ಪ್ರತಿಷ್ಠಾಪಿಸಿದರು. ದುಡಿಮೆ ಹಾಗೂ ಕಣ್ಣಿಗೆ ಕಾಣುವ ಸಮಾಜವನ್ನು ದೇವರೆಂದು ಪರಿಗಣಿಸಿದರು. ನಾವು ಸಮಾಜಕ್ಕೆ ಸಲ್ಲಿಸುವ ಸೇವೆಯು ದೇವರಿಗೆ ಸಲ್ಲುತ್ತದೆ ಎನ್ನುವ ಉದಾತ್ತ ಸಂದೇಶವನ್ನು ಜನರಿಗೆ ನೀಡಿದರು. ದೈವ ಹಾಗು ಪುರೋಹಿತ ಕೇಂದ್ರಿತ ವ್ಯವಸ್ಥೆಯನ್ನು ಬುಡಮೇಲು ಮಾಡಿ ಮನುಷ್ಯ ಹಾಗು ಸಮಾಜ ಕೇಂದ್ರಿತ ವ್ಯವಸ್ಥೆಯನ್ನು ಸ್ಥಾಪಿಸಿದರು. ಹಿಂದೂ ಬ್ರಾಹ್ಮಣವಾದದ ಪ್ರತಿಯೊಂದು ಜೀವವಿರೋಧಿ, ಮನುಷ್ಯ ವಿರೋಧಿ, ಸಮಾಜವಿರೋಧಿ ಸಿದ್ಧಾಂತಗಳನ್ನು ದಿಕ್ಕರಿಸಿ ಹೊಸ ಜೀವನ್ಮುಖಿ, ಸಮಾಜಮುಖಿ ಸಿದ್ಧಾಂತಗಳನ್ನು ಜನಮನದಲ್ಲಿ ಜಾರಿಗೆ ತಂದರು. ಮೇಲಿನ ಬಸವಣ್ಣನವರ ವಚನವು ಸಮಾಜವನ್ನೆ ದೇವರೆಂದು ಪ್ರತಿಪಾದಿಸುವ ಮೂಲಕ ವೈದಿಕಶಾಹಿಗಳ ದೈವ ಕೇಂದ್ರಿತ ವ್ಯವಸ್ಥೆಯನ್ನು ಮುರಿದು ಕಟ್ಟಿರುವುದನ್ನು ಸಾಂಕೇತಿಸುತ್ತದೆ. ಇಂತಹ ಸಮಾಜಮುಖಿ ಚಳುವಳಿಯ ಉಪ ಉತ್ಪನ್ನಗಳಾಗಿರುವ ವಚನಗಳು ಕನ್ನಡಿಗರ ಸ್ವಾಭಿಮಾನದ ಪ್ರತಿಮೆಗಳಾಗಿವೆ.

ಇದನ್ನೂ ಓದಿ ಚುನಾವಣಾ ಅಕ್ರಮ ಆಳಂದಕ್ಕೆ ಮಾತ್ರವಲ್ಲ, ದೇಶಕ್ಕೆ ವ್ಯಾಪಿಸಿದ ಅಕ್ರಮ ಜಾಲ: ಸಿಎಂ ಸಿದ್ದರಾಮಯ್ಯ

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಿರ್ಣಯವನರಿಯದ ಮನ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಸುತ್ತಾಟ | ಆಸ್ಟ್ರೇಲಿಯಾದ ಕೋಸಿಯಸ್ಕೋ ಪರ್ವತ ಚಾರಣ

ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು,...

ವೈಚಾರಿಕತೆ ಹಾಗೂ ವೈಜ್ಞಾನಿಕತೆ ಬೆಳೆಯಲು ಶಿಕ್ಷಣ ಅತ್ಯಗತ್ಯ: ಸಿಎಂ ಸಿದ್ದರಾಮಯ್ಯ

ಸರ್ಕಾರಿ ಶಾಲಾಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಾರ್ಷಿಕ...

Download Eedina App Android / iOS

X