ಬಸವಣ್ಣನವರು ಪಿತೃವಾಕ್ಯವನ್ನು ದಿಕ್ಕರಿಸಿದ ದಾರ್ಶನಿಕ. ಹಾಗೆಯೇ ಇಬ್ಬರು ಬಾಳ ಸಂಗಾತಿಯರನ್ನು ಹೊಂದಿರುವ ಬಸವಣ್ಣನವರು ವೈದಿಕರ ಏಕಪತ್ನಿವ್ರತಸ್ಥ ಎನ್ನುವ ಸ್ಥಾಪಿತ ಆದರ್ಶವನ್ನು ಉಲ್ಲಂಘಿಸಿದ ಸಂತ. ರಾಮನ ಕುರಿತು ಬಸವಣ್ಣನವರು ತಮ್ಮ ವಚನದಲ್ಲಿ ರಾಮ ಒಬ್ಬ ‘ಮಾಯಾ ಸಂಸಾರಿ’ ಎಂದು ವರ್ಣಿಸುತ್ತಾರೆ
ಭಾರತೀಯರನ್ನು ಬಹುವಾಗಿ ಆವರಿಸಿರುವ ಹಾಗೂ ಪ್ರಭಾವಿಸಿರುವ ಎರಡು ಕಾಲ್ಪನಿಕ ಮಹಾಕಾವ್ಯಗಳೆಂದರೆ ರಾಮಾಯಣ ಮತ್ತು ಮಹಾಭಾರತ. ೨೫೦೦-೩೫೦೦ ವರ್ಷಗಳ ಹಿಂದಿನ ಐತಿಹಾಸಿಕ ಸಂಗತಿಗಳನ್ನು ಅರಿಯಲು ನಮಗೆ ಈ ಕಾಲ್ಪನಿಕ ಹಾಗೂ ಪೌರಾಣಿಕ ಮಹಾಕಾವ್ಯಗಳು ಹೆಚ್ಚು ಸಹಾಯ ಮಾಡುತ್ತವೆ. ಆ ಕಥಾನಕಗಳಲ್ಲಿನ ಅತಿಮಾನುಷ ಪ್ರಸಂಗಗಳುˌ ಸನಾತನ ವೈದಿಕರ ಸ್ಥಾಪಿತ ಮೌಲ್ಯಗಳುˌ ವಿಜ್ಞಾನಕ್ಕೆ ವಿರುದ್ಧವಾದ ಅವತಾರ ಮುಂತಾದ ವೈದಿಕ ಶೈಲಿಯ ವಿಶಿಷ್ಟ ರೂಪಕಗಳನ್ನು ನಾವು ಉಪೇಕ್ಷಿಸಿದರೂ ಈ ಮಹಾಕಾವ್ಯಗಳು ಸೃಷ್ಠಿಯಾಗಿರುವ ಕಾಲಘಟ್ಟದ ಸಾಮಾಜಿಕ ಸ್ಥಿತಿಗತಿ, ಕಟ್ಟುಪಾಡುಗಳು, ರಾಜಕೀಯ, ಆಡಳಿತ ಮುಂತಾದ ವಾಸ್ತವ ಸಂಗತಿಗಳ ಆಧಾರದಲ್ಲಿ ಆಗಿನ ಇತಿಹಾಸವನ್ನು ಕಂಡುಕೊಳ್ಳಲು ನಮಗೆ ಸೂಕ್ತವಾಗಿ ಮಾರ್ಗದರ್ಶನ ಮಾಡುತ್ತವೆ. ಈ ಮಹಾಕಾವ್ಯಗಳ ಮೇಲೆ ಗ್ರೀಕ್ ಜನಪದ ಕಾವ್ಯಗಳ ಹಾಗೂ ಬೌದ್ದ ಜಾತಕ ಕತೆಗಳ ದಟ್ಟವಾದ ಪ್ರಭಾವವಿರುವುದನ್ನು ಈಗಾಗಲೇ ಅನೇಕ ಜನ ವಿದ್ವಾಂಸರು ಗುರುತಿಸಿದ್ದಾರೆ. ಯಾವ ಮನರಂಜನೆಯೂ ಇರದಿದ್ದ ಆ ಕಾಲಘಟ್ಟದಲ್ಲಿ ಈ ಕಾಲ್ಪನಿಕ ಕತೆಗಳು ನಾಟಕˌ ಬಹುರೂಪಿಗಳ ಪ್ರದರ್ಶನ, ಕಥಾವಾಚನ, ಮುಂತಾದ ಅಭಿವ್ಯಕ್ತಿ ಮಾಧ್ಯಮಗಳ ಮುಖೇನ ನಮ್ಮ ದೇಶದ ಜನಜೀವನದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿರುವುದು ಅಲ್ಲಗಳೆಯಲಾಗದು. ಹಾಗೆಂದು ಈ ಮಹಾಕಾವ್ಯಗಳಿಗೆ ಯಾವುದೇ ಐತಿಹಾಸಿಕ ಮಹತ್ವ ನೀಡುವ ಅಗತ್ಯವಂತೂ ಖಂಡಿತ ಇಲ್ಲ.
ಸನಾತನಿ ಆರ್ಯ ವೈದಿಕರು ಈ ಮಹಾಕಾವ್ಯದ ಘಟನೆಗಳು ಮತ್ತು ವ್ಯಕ್ತಿಗಳು ಐತಿಹಾಸಿಕವೆಂದು ಸಾಧಿಸಲು ಇತ್ತೀಚಿಗೆ ದೊಡ್ಡ ಮಟ್ಟದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಏಕೆಂದರೆ ವೇದ ಕಾಲದ ನಂತರದಲ್ಲಿ ಆಗಿಹೋದ ಅನೇಕ ಜನಪದಗಳು, ಸಾಮ್ರಾಜ್ಯಗಳು, ಮಹಾವೀರ, ಬುದ್ದರು ಸ್ಥಾಪಿಸಿದ ನೂತನ ಪರ್ಯಾಯ ಧರ್ಮಗಳು ಅಥವಾ ಅನೇಕ ಅವೈದಿಕ ಶ್ರಮಣಧಾರೆಗಳಿಂದ ತುಂಬಾ ಆತಂಕಕ್ಕೊಳಗಾಗಿರುವ ಸನಾತನಿ ಆರ್ಯ ವೈದಿಕರು ಹೇಗಾದರೂ ಮಾಡಿ ಸನಾತನ ಬ್ರಾಹ್ಮಣ ಧರ್ಮವು ಜಗತ್ತಿನಲ್ಲಿಯೆ ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠವೆಂತಲು ಹಾಗೂ ಭಾರತೀಯ ಉಪಖಂಡದಲ್ಲಿ ಜನ್ಮತಳೆದ ಉಳಿದೆಲ್ಲ ದರ್ಶನಗಳು ಸನಾತನ ಬ್ರಾಹ್ಮಣ ದರ್ಶನದ ಕವಲುಗಳೆಂತಲೂ ಸಾಧಿಸುವ ಅನಿವಾರ್ಯತೆಗೆ ಸಿಲುಕಿದರು. ಸನಾತನ ಬ್ರಾಹ್ಮಣರಲ್ಲಿ ಹುಟ್ಟಿದ ಈ ಆತಂಕವು ಕ್ರಿ.ಪೂ. 175ರ ಕಾಲದಿಂದ ಕ್ರಿ.ಶ. 5ನೇ ಶತಮಾನದ ನಡುವೆ ಈ ಮಹಾಕಾವ್ಯಗಳು, ಪುರಾಣಗಳು, ವೇದ, ಉಪನಿಷತ್ತು, ಮನುಸ್ಮೃತಿ ಮುಂತಾದ ಸನಾತನ ವೈದಿಕ ಸಾಹಿತ್ಯಗಳನ್ನು ಸೃಷ್ಟಿಸುವ ಒತ್ತಡ ಹೇರಿತು. ಮೌರ್ಯ ಸಾಮ್ರಾಜ್ಯದ ಆಡಳಿತದಲ್ಲಿ ಬೌದ್ದ ಧರ್ಮ ತತ್ವಗಳು ಹಾಗೂ ಸಾಹಿತ್ಯಕ್ಕೆ ನೀಡಿದ ಮಹತ್ವದಿಂದ ಸನಾತನ ಬ್ರಾಹ್ಮಣ ಧರ್ಮ ಅಳಿವಿನಂಚಿಗೆ ದೂಡಲ್ಪಟ್ಟಿತು. ಪುಷ್ಯಮಿತ್ರ ಶುಂಗನಿಂದ ಮೊದಲ್ಗೊಂಡು ಶಂಕರಾಚಾರ್ಯರವರೆಗೆ ಸನಾತನ ಬ್ರಾಹ್ಮಣ ಧರ್ಮದ ಪುನರುತ್ಥಾನದ ಪ್ರಯತ್ನಗಳ ಭಾಗವಾಗಿ ವೈದಿಕ ಸಾಹಿತ್ಯಗಳು ಸೃಷ್ಟಿಯಾದವು ಎನ್ನುವುದು ಜಗತ್ತಿನ ಅನೇಕ ಭಾಷಾ ತಜ್ಞರು ಹಾಗೂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಕಾಲ್ಪನಿಕ ರಾಮಾಯಣ ಮಹಾಕಾವ್ಯದ ಕಥಾನಕದಲ್ಲಿ ಕ್ಷತ್ರೀಯ ರಾಮ ಅದರ ಕಥಾನಾಯಕ. ವೈದಿಕ ಪ್ರಣೀತ ಸ್ಥಾಪಿತ ಆದರ್ಶಗಳ ರಕ್ಷಕನಂತೆ ರಾಮ ಈ ಕತೆಯುದ್ದಕ್ಕೂ ಚಿತ್ರಿತನಾಗಿದ್ದಾನೆ. ರಾಮ ಮತ್ತು ಆತನ ಮೂರು ಜನ ಸಹೋದರರ ಹುಟ್ಟಿನ ಹಿನ್ನೆಲೆಯೆ ಅತ್ಯಂತ ವಿವಾದಾತ್ಮಕ ಹಾಗೂ ಅವೈಜ್ಞಾನಿಕವಾಗಿದೆ. ದಶರಥನು ಆಯೋಜಿಸಿದ ಪುತ್ರಕಾಮೇಷ್ಠಿಯಾಗ ಅಥವಾ ಅಶ್ವಮೇಧ ಯಾಗದ ಯಜ್ಞ ಕುಂಡದಿಂದ ವಿಸ್ಮಯಕಾರಿಯಾಗಿ ಉದ್ಭವಿಸಿದ ಸುಂದರಾಂಗ ಪುರುಷನೊಬ್ಬ ನೀಡಿದ ಪಾಯಸವನ್ನು ದಶರಥನ ಮೂರು ಜನ ಪತ್ನಿಯರಾದ ಕೌಶಲ್ಯˌ ಕೈಕೇಯಿ ಹಾಗೂ ಸುಮಿತ್ರೆಯರು ಕುಡಿದ ಫಲದಿಂದ ಕೌಶಲ್ಯೆಗೆ ರಾಮˌ ಕೈಕೇಯಿಗೆ ಭರತ ಹಾಗೂ ಸುಮಿತ್ರೆಗೆ ಲಕ್ಷ್ಮಣ ಹಾಗೂ ಶತ್ರುಘ್ನರೆಂಬ ಇಬ್ಬರು ಅವಳಿ ಮಕ್ಕಳು ಜನಿಸಿದರು ಎನ್ನುವುದು ಅವರ ಹುಟ್ಟಿನ ಹಿನ್ನೆಲೆ. ಇಡೀ ಮಹಾಕಾವ್ಯದ ಉದ್ದಕ್ಕೂ ರಾಮ ಎರಡು ವಿಷಯಗಳಿಂದ ಆದರ್ಶ ವ್ಯಕ್ತಿ ಎಂದು ಬಿಂಬಿತವಾಗುತ್ತಾನೆ. ಆತ ಪಿತುೃವಾಕ್ಯ ಪರಿಪಾಲಕನೆನ್ನುವ ಹಾಗೂ ಏಕಪತ್ನಿವೃತಸ್ಥನೆನ್ನುವುದೆ ಆ ಎರಡು ಸಂಗತಿಗಳು. ರಾಮಾಯಣ ಬರೆದಿರುವ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆಯಲ್ಲಿ ಬಹುಪತ್ನಿತ್ವವು ವ್ಯಾಪಕವಾಗಿ ಇತ್ತೆಂದು ಊಹಿಸಬಹುದು. ಅದೇ ರೀತಿ, ಪುರುಷ ಪ್ರಧಾನ ವೈದಿಕ ವ್ಯವಸ್ಥೆಯಲ್ಲಿ ಮಕ್ಕಳು ಅಪ್ಪನ ಮಾತು ಮೀರಬಾರದು ಎನ್ನುವ ಸ್ಥಾಪಿತ ಕಟ್ಟಳೆಯೂ ಆ ಕಾಲದಲ್ಲಿ ಇತ್ತು. ಈಗಲೂ ಅದನ್ನು ನಿರೀಕ್ಷಿಸಲಾಗುತ್ತದೆ. ರಾಮನ ಸಮಕಾಲೀನರಲ್ಲಿಯೆ ಅಸಂಖ್ಯಾತ ಜನಸಾಮಾನ್ಯರು ಏಕಪತ್ನಿವೃತಸ್ಥರು ಹಾಗೂ ಪಿತೃವಾಕ್ಯ ಪರಿಪಾಲಕರು ಇದ್ದಿರಲೂಬಹುದು.
ಆದರೆ ಅವರಲ್ಲಿ ಯಾರಿಗೂ ಸಿಗದ ಮನ್ನಣೆ ರಾಮನಿಗೆ ಸಿಕ್ಕಿದ್ದು ಆತ ಯಥಾಸ್ಥಿತಿವಾದಿ ಹಾಗೂ ಪ್ರಖರ ಚಾತುರ್ವರ್ಣ ಧರ್ಮದ ಪರಿಪಾಲಕನಾಗಿದ್ದ ಕ್ಷತ್ರೀಯ ಅರಸ ಎನ್ನುವ ಕಾರಣಕ್ಕಾಗಿ ಇರಬಹುದು. ಇನ್ನು ರಾಮನ ಮಲತಾಯಿಯ ಮೋಹಪಾಶದಲ್ಲಿ ದಶರಥನು ರಾಮನಿಗೆ ಅನ್ಯಾಯ ಮಾಡಿದಾಗ ರಾಮ ತಂದೆಯ ಅನ್ಯಾಯವನ್ನು ಪ್ರಶ್ನಿಸುವ ಜವಾಬ್ದಾರಿಯನ್ನು ಮರೆಯುತ್ತಾನೆ. ಕಾಡಿನಲ್ಲಿ ಪ್ರಕೃತಿ ಸಹಜವಾಗಿ ಪ್ರೀತಿಸಲು ಬಂದ ಸೂರ್ಪನಖಿಯನ್ನು ಅವಮಾನಿಸಿದ ಲಕ್ಷ್ಮಣನನ್ನು ರಾಮ ಸಮರ್ಥಿಸುತ್ತಾನೆ. ಸೀತೆಯ ಅಪಹರಣವಾದಾಗ ರಾಮನು ಜನಸಾಮಾನ್ಯರಂತೆ ಅಸಹಾಯಕನಾಗಿ ಪರಿತಪಿಸುತ್ತಾನೆ. ಶಂಭುಕ ಹಾಗೂ ವಾಲಿಯ ಹತ್ಯೆಗಳಲ್ಲಿ ಯುದ್ಧನೀತಿಯನ್ನು ಮರೆತು ಬಿಡುತ್ತಾನೆ. ರಾವಣನ ವಧೆಯ ನಂತರ ಪ್ರಜೆಗಳ ಮಾತಿಗೆ ಕಟ್ಟುಬಿದ್ದು ತುಂಬು ಗರ್ಭಿಣಿ ಸೀತೆಯನ್ನು ಸಂಶಯಿಸಿ ಕಾಡಿಗಟ್ಟುತ್ತಾನೆ. ಕೊನೆಗಾಲದಲ್ಲಿ ಸಹೋದರ ಲಕ್ಷ್ಮಣನ ಸಾವಿನಿಂದ ಮನೋವೇದನೆಗೊಳಗಾಗಿ ರಾಮ ಜಲಸಮಾಧಿಯಾಗುತ್ತಾನೆ. ಮಹಾಕಾವ್ಯದ ಉದ್ದಕ್ಕೂ ರಾಮ ಬ್ರಾಹ್ಮಣರು ಸ್ಥಾಪಿಸಿದ ಚಾತುರ್ವರ್ಣ ವ್ಯವಸ್ಥೆಯ ಒಬ್ಬ ಸಮರ್ಥ ಪರಿಪಾಲಕನಾಗಿ ಕ್ಷತ್ರೀಯ ಧರ್ಮವನ್ನು ನಿಭಾಯಿಸುವಂತೆ ಕಂಗೊಳಿಸುತ್ತಾನೆಯೆ ಹೊರತು ಯಾವುದೆ ಬಗೆಯಲ್ಲಿ ದೈವಾಂಶಸಂಭೂತನಂತೆ, ಅವತಾರಿಯಂತೆ, ಆತ್ಮವಿಮರ್ಶಕನಂತೆ, ಪ್ರಾಜ್ಞನಂತೆ, ದಾರ್ಶನಿಕನಂತೆ, ಪ್ರವಾದಿಯಂತೆ, ಸಮಾಜ ಸುಧಾರಕನಂತೆ, ಸಮಕಾಲೀನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಾಯಕನಂತೆ ಕಾಣುವುದಿಲ್ಲ.

ರಾಮಾಯಣ, ಮಹಾಭಾರತ, ಭಗವದ್ಗೀತೆ, ಗಾಯತ್ರಿ ಮಂತ್ರ, ವೇದ, ಶಾಸ್ತ್, ಶೃತಿ, ಸ್ಮೃತಿ, ಪುರಾಣ, ಆಗಮ, ಉಪನಿಷತ್ ಮುಂತಾದ ಸಮಗ್ರ ವೈದಿಕ ಸಾಹಿತ್ಯವನ್ನೆ ಶರಣರು ಸಾರಸಗಟಾಗಿ ತಿರಷ್ಕರಿಸಿದ್ದಾರೆ. ಯಜ್ಞ, ಯಾಗ, ಹೋಮ, ಹವನ, ಜಪ, ತಪ, ತೀರ್ಥಯಾತ್ರೆ, ಮಡಿ, ಮೈಲಿಗೆ, ಮೀಸಲು, ಎಂಜಲು ಮುಂತಾದ ಸನಾತನ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳನ್ನು ಬಸವಾದಿ ಶರಣರು ವಿಡಂಬಿಸಿದ್ದಾರೆ. ವೈದಿಕರ ಪುರಾಣಗಳಲ್ಲಿ ಬರುವ ಪ್ರತಿಯೊಂದು ಪಾತ್ರಗಳನ್ನು ಶರಣರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಕೃಷ್ಣ, ರಾಮ, ಇಂದ್ರ, ಚಂದ್ರ, ಗಣಪತಿ, ರುದ್ರ ಮುಂತಾದ ಕಾಲ್ಪನಿಕ ಪಾತ್ರಗಳ ಅವಗುಣಗಳನ್ನು ಶರಣರು ಹಂಗಿಸಿದ್ದಾರೆ. ರಾಮನ ಕುರಿತಂತೂ ಶರಣರು ಹೆಜ್ಜೆ ಹೆಜ್ಜೆಗೆ ಟೀಕಿಸಿದ ವಚನಗಳಿವೆ. ಬಸವಣ್ಣನವರು ತನ್ನ ಅಕ್ಕನಿಗೂ ಧಾರ್ಮಿಕ ಸಂಸ್ಕಾರವಾಗಬೇಕು. ಯಜ್ಞೋಪವಿತ್ ಧಾರಣೆ ಮಾಡಬೇಕು ಎಂದು ಹಟ ಹಿಡಿದು ಮನೆಯನ್ನು ತೊರೆಯುತ್ತಾರೆ. ಇಲ್ಲಿ ಸ್ಪಷ್ಟವಾಗಿ ಸಾಂಪ್ರದಾಯದ ಹೆಸರಿನಲ್ಲಿ ತಂದೆ ಮಾಡುತ್ತಿದ್ದ ಅನ್ಯಾಯವನ್ನು ಪ್ರಶ್ನಿಸುವ ಪ್ರಜ್ಞಾವಂತ ಹಾಗೂ ಪ್ರಜಾಪ್ರಭುತ್ವವಾಗಿ ಮಗನಾಗಿ ಬಸವಣ್ಣನವರು ಎದ್ದು ಕಾಣುತ್ತಾರೆˌ ಆ ಪ್ರಜ್ಞಾವಂತಿಕೆ ಹಾಗೂ ಪ್ರಜಾಪ್ರಭುತ್ವದ ಕಲ್ಪನೆ ರಾಮನಲ್ಲಿ ಇಲ್ಲದಿರುವುದನ್ನು ನಾವು ಗಮನಿಸಬಹುದು. ಬಸವಣ್ಣನವರು ಪಿತೃವಾಕ್ಯವನ್ನು ದಿಕ್ಕರಿಸಿದ ದಾರ್ಶನಿಕ. ಹಾಗೆಯೆ ಇಬ್ಬರು ಬಾಳ ಸಂಗಾತಿಯರನ್ನು ಹೊಂದಿರುವ ಬಸವಣ್ಣನವರು ವೈದಿಕರ ಏಕಪತ್ನಿವ್ರತಸ್ಥ ಎನ್ನುವ ಸ್ಥಾಪಿತ ಆದರ್ಶವನ್ನು ಉಲ್ಲಂಘಿಸಿದ ಸಂತ. ರಾಮನ ಕುರಿತು ಬಸವಣ್ಣನವರು ತಮ್ಮ ಈ ಕೆಳಗಿನ ವಚನದಲ್ಲಿ ರಾಮ ಒಬ್ಬ ‘ಮಾಯಾ ಸಂಸಾರಿ’ ಎಂದು ವರ್ಣಿಸುತ್ತಾರೆ:
“ಎಚ್ಚು ಬಾಲಿಯ ಕೊಂದ, ಕಟ್ಟಿದನು ಶರಧಿಯನು,
ಹತ್ತು ತಲೆಯ ರಾವಳನ ಒಂದೆ ಅಂಬಿನಲ್ಲಿ ಮಡಿಹಿದ,
ಛಲದಿ ಲಂಕಾದ್ವೀಪವ ನೆಲವಣ್ಣ ಮಾಡಿದ,
ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರಾ.
ಮಾಯದ ಸಂಸಾರವ ನಚ್ಚಿ, ಕೆಟ್ಟು ಬರುದೊರೆವೊಗಬೇಡ.
ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ”
ಭಾವಾರ್ಥ
ಬಸವಣ್ಣನವರ ಮೇಲಿನ ವಚನವು ಬಹಳ ಮಾರ್ಮಿಕ ಮತ್ತು ಅಷ್ಟೇ ಗೂಢಾರ್ಥವನ್ನು ಹೊಂದಿದೆ. ಇಂದು ಸಾಂಪ್ರದಾಯವಾದಿಗಳು ರಾಜಕೀಯ ಅಧಿಕಾರದ ದುರುದ್ದೇಶದಿಂದ ದೇಶದ ಉದ್ದಗಲ ರಾಮನ ಹೆಸರಿನಲ್ಲಿ ಸಾರ್ವಜನಿಕರನ್ನು ಉನ್ಮಾದಕ್ಕೆ ದೂಡಿ ಸಮೂಹ ಸನ್ನಿಯ ಮೂಲಕ ವಿಷಮ ವಾತಾವರಣವನ್ನು ಸೃಷ್ಟಿಸಿದ್ದಾರೆ. ರಾಮ ಒಬ್ಬ ಅತ್ಯಂತ ಸಾಮಾನ್ಯ ಕಾಲ್ಪನಿಕ ಕ್ಷತ್ರೀಯ ವ್ಯಕ್ತಿಯಾಗಿದ್ದ ಎನ್ನುವುದನ್ನು ಮೇಲಿನ ವಚನ ಅರ್ಥಪೂರ್ಣವಾಗಿ ವಿವರಿಸುತ್ತದೆ. ಸಹೋದರರಾದ ವಾಲಿ ಹಾಗೂ ಸುಗ್ರೀವರ ನಡುವಿನ ಕಲಹದಲ್ಲಿ ರಾಮ ಸೀತೆಯ ಅನ್ವೇಷಣೆಯಲ್ಲಿ ತನಗೆ ಸಹಾಯ ಮಾಡುವುದಾದಲ್ಲಿ ತಾನು ಸುಗ್ರೀವನ ಪರವಾಗಿ ವಾಲಿಯನ್ನು ವಧಿಸುವುದಾಗಿ ಭರವಸೆ ಕೊಡುತ್ತಾನೆ ಮತ್ತು ವಾಲಿಯನ್ನು ಕೊಲ್ಲುತ್ತಾನೆ. ಸಮುದ್ರಕ್ಕೆ ಅಡ್ಡಗಟ್ಟಿ ಸೇತುವೆಯನ್ನು ಕಟ್ಟಿ ಲಂಕೆಗೆ ಲಗ್ಗೆ ಇಟ್ಟು ರಾವಣನನ್ನು ಒಂದೇ ಬಾಣದಲ್ಲಿ ಕೊಲ್ಲುತ್ತಾನೆ. ಲಂಕಾ ಪಟ್ಟಣವನ್ನು ಧ್ವಂಸ ಮಾಡಿ ರಾವಣನ ಸಹೋದರ ವಿಭಿಷಣನಿಗೆ ಪಟ್ಟಗಟ್ಟುತ್ತಾನೆ. ಅಂತಹ ಅಪರೂಪದ ಸಾಹಸವನ್ನು ಮೆರೆದ ರಾಮ ಈಗ ಎಲ್ಲಿದ್ದಾನೆ, ಕೊನೆಗಾಲದಲ್ಲಿ ಏನಾದನು ಎಂದು ಮಾರ್ಮಿಕವಾಗಿ ಬಸವಣ್ಣನವರು ಪ್ರಶ್ನಿಸುತ್ತಾರೆ. ಈ ಮಾಯಾ ಸಂಸಾರಕ್ಕೆ ಶರಣಾಗಿದ್ದ ರಾಮನು ಹೇಳಹೆಸರಿಲ್ಲದಂತೆ ಕೊನೆಯಾಗಿರುವಾಗ ನಾವು ರಾಮನ ಮಾರ್ಗದಲ್ಲಿ ನಡೆಯುವುದು ಸಲ್ಲ. ಹಾಗೆ ನಡೆಯುವುದು ಬರುದೊರೆ ಹೊಕ್ಕಂತೆ ಅಂದರೆ ಬತ್ತಿದ ನದಿಯಲ್ಲಿ ಹಾಯ್ದಂತೆ ಎನ್ನುತ್ತಾರೆ ಬಸವಣ್ಣ.

ಟಿಪ್ಪಣಿ
ವೈದಿಕ ಸಾಹಿತ್ಯದ ಟೊಳ್ಳುತನವನ್ನು ಶರಣರು ವಿಮರ್ಶಿಸಿದಷ್ಟು ಹಾಗೂ ವಿಡಂಬಿಸಿದಷ್ಟು ಬಹುಶಃ ಭಾರತೀಯ ಸಾಹಿತ್ಯದಲ್ಲಿ ಯಾರೂ ಮಾಡಿರಲಿಕ್ಕಿಲ್ಲ. ರಾಮನನ್ನು ಆದರ್ಶ ಪುರುಷ ಎಂದು ವೈದಿಕ ಸಾಹಿತ್ಯ ಬಿಂಬಿಸಿಕೊಂಡು ಬಂದಿದೆ. ಆದರೆ ಶರಣ ಸಾಹಿತ್ಯವು ರಾಮನ ಕುರಿತು ಅನೇಕ ತಾರ್ಕಿಕ ಪ್ರಶ್ನೆಗಳನ್ನು ಎತ್ತಿದೆ. ಶರಣ ಸೊಡ್ಡಳ ಬಾಚರಸನವರು ತನ್ನ ಒಂದು ವಚನದಲ್ಲಿ “ವಿಷ್ಣು ಪರಿಪೂರ್ಣ” ಎನ್ನುವ ವೈದಿಕರ ವಾದವನ್ನು ತರ್ಕಬದ್ಧವಾಗಿ ಪ್ರಶ್ನಿಸಿದ್ದಾರೆ ಹಾಗೂˌ ವಿಷ್ಣು ಮತ್ತು ಆತನ ದಶಾವತಾರದಲ್ಲಿ ಬರುವ ಪಾತ್ರಗಳ ಟೊಳ್ಳುತನವನ್ನು ವಿವರಿಸುತ್ತಾ ವಿಷ್ಣು ಪರಿಪೂರ್ಣನಲ್ಲ ಎಂದು ನಿರೂಪಿಸಿದ್ದಾರೆ. ಮೇಲಿನ ವಚನದಲ್ಲಿ ಬಸವಣ್ಣನವರು ವೈದಿಕ ಸಾಹಿತ್ಯದ ಶೈಲಿಯಲ್ಲಿಯೆ ರಾಮನನ್ನು ವಿಡಂಬಿಸಿದ್ದು ವಿಶೇಷವಾಗಿದೆ. ವಾಲಿಯ ಕೊಲೆಯ ಹಿಂದಿನ ರಾಮನ ಸ್ವಾರ್ಥˌ ಸಮುದ್ರಕ್ಕೆ ಸೇತುವೆ ಕಟ್ಟಿದನೆಂಬ ಬಾಲೀಶ ಕಲ್ಪನೆ, ಹತ್ತು ತಲೆಯ ರಾವಣ ಎನ್ನುವ ಕಲ್ಪನೆಯ ವ್ಯಕ್ತಿಯನ್ನು ರಾಮ ಕೇವಲ ಒಂದೇ ಬಾಣ ಹೂಡಿ ಹತ್ಯೆ ಮಾಡಿದ್ದು, ಲಂಕಾದ್ವೀಪವನ್ನು ಹಾಳು ಮಾಡಿದ್ದು, ಲಂಕೆಯ ಗೌಪ್ಯತೆಗಳನ್ನೆಲ್ಲ ರಾಮನಿಗೆ ತಿಳಿಸಿದ ಸಹೋದರ ದ್ರೋಹಿ ವಿಭೀಷಣನಿಗೆ ಲಂಕೆಯ ಸಿಂಹಾಸನದಲ್ಲಿ ಕೂಡಿಸಿದ್ದು ಹೀಗೆ ರಾಮನ ಅನೇಕ ಕಾರ್ಯಗಳನ್ನು ಪ್ರಸ್ತಾಪಿಸುವ ಮೂಲಕ ರಾಮನ ಗುಣಗಾನ ಮಾಡಿದಂತೆ ತೋರುವ ಬಸವಣ್ಣನವರ ಮೇಲಿನ ವಚನದಲ್ಲಿ ಕೊನೆಗೆ ಆಶ್ಚರ್ಯಕರ ರೀತಿಯಲ್ಲಿ ಪ್ರಶ್ನಾರ್ಥಕ ಚಿನ್ಹೆ ಬರುತ್ತದೆ.
ಇಷ್ಟೆಲ್ಲ ಘನ ಕಾರ್ಯಗಳು ಮಾಡಿದ ಪುರಾಣದ ಕಾಲ್ಪನಿಕ ಪುರುಷ ರಾಮನನ್ನು ಎನಗೆ ತೋರಾ ಎನ್ನುವ ಪ್ರಶ್ನೆಯ ಮುಖೇನ ಬಸವಣ್ಣನವರು ರಾಮ ಈಗ ಎಲ್ಲಿದ್ದಾನೆ ಎನ್ನುವ ಗಂಭೀರ ಪ್ರಶ್ನೆ ಎತ್ತಿ ರಾಮ ಒಬ್ಬ ಸಾಮಾನ್ಯ ಸಂಸಾರಿ, ಮಾಯಾ ಸಂಸಾರವನ್ನು ನಂಬಿದವನಾಗಿದ್ದನೇ ಹೊರತು ದೇವರಲ್ಲ ಎನ್ನುವ ಸಂದೇಶವನ್ನು ನೀಡುತ್ತಾರೆ. ಆದ್ದರಿಂದ ರಾಮನು ಭಾರತೀಯರಿಗೆ ಆದರ್ಶ ವ್ಯಕ್ತಿಯಾಗಬಾರದು ಎನ್ನುವುದೇ ಈ ವಚನದ ಮೂಲ ಆಶಯವಾಗಿದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ