ವಚನಯಾನ | ಬೌದ್ಧಿಕ ದಾರಿದ್ರ್ಯದ ಸಂಕೇತವೇ ಸನಾತನಿಗಳ ವೈದಿಕ ಪುರಾಣಗಳು

Date:

Advertisements

ಭಾರತದಲ್ಲಿನ ಪುರಾಣದ ಕಥೆಗಳು ಆರಂಭದಲ್ಲಿ ಸಾಮಾನ್ಯ ಜನರ ಮನರಂಜನೆಯ ಮಾಧ್ಯಮವಾಗಿದ್ದವು. ಕಾಲಕ್ರಮೇಣ ಅವು ಭಾರತೀಯರ ನಂಬಿಕೆಗಳಾಗಿ ಮಾರ್ಪಟ್ಟವು. ಯಾವಾಗ ಭಾರತೀಯರು ವೈದಿಕ ಪುರಾಣಗಳನ್ನು ನಂಬತೊಡಗಿದರೊ ಆವಾಗಿನಿಂದ ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕ ಚಿಂತನೆಗಳು ನಶಿಸಲಾರಂಭಿಸಿದವು. ವೈದಿಕತೆಯ ಅಜ್ಞಾನದ ವಿರುದ್ಧ ಆಗಾಗ ಈ ನೆಲದಲ್ಲಿ ವೈಚಾರಿಕ ಆಂದೋಲನಗಳು ಹುಟ್ಟುಪಡೆದವು.

ಭಾರತೀಯತೆಯ ಕುರಿತು ತಪ್ಪು ವ್ಯಾಖ್ಯಾನದ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾರತೀಯತೆ ಎಂದರೆ ವೈದಿಕತೆ ಅಥವಾ ಸನಾತನ ಸಂಸ್ಕೃತಿ ಎಂದು ತಪ್ಪಾಗಿ ಅರ್ಥೈಸುವ ಅಭಿಯಾನ ತೀವ್ರತೆ ಪಡೆದಿದೆ. ಅಸಲಿಗೆ ಸನಾತನ ಸಂಸ್ಕೃತಿ ಮತ್ತು ವೈದಿಕತೆಯ ಹೊರತಾದ ನೆಲಮೂಲದ ಜನಪದ ಸಂಸ್ಕೃತಿಯೆ ನೈಜ ಭಾರತೀಯತೆಯಾಗಿದೆ. ಇಲ್ಲಿನ ಪ್ರಾದೇಶಿಕ ಆಚರಣೆಗಳು, ಅಸ್ಮಿತೆಗಳು, ವೈವಿದ್ಯಮಯ ಉಡುಪು, ಆಹಾರ, ಭಾಷೆಗಳು ಈ ನೆಲದ ನಿಜವಾದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಇಲ್ಲಿ ಸುಮಾರು ಎರಡು ಸಾವಿರ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಆ ಎಲ್ಲಾ ಭಾಷೆಗಳ ಸೊಗಡು, ಘಮಲು ವಿಭಿನ್ನ ಹಾಗೂ ಅನನ್ಯ. ಆ ಎಲ್ಲಾ ಭಾಷೆಗಳು ಭಾರತದ ರಾಷ್ಟ್ರ ಭಾಷೆಗಳು. ವಿದೇಶಿ ಮೂಲದ ಸಂಸ್ಕೃತವಾಗಲಿˌ ಸಿಮಿತ ಜನರು ಮಾತನಾಡುವ ಹಿಂದಿಯಾಗಲಿ ಇಡೀ ಭಾರತೀಯರನ್ನು ಪ್ರತಿನಿಧಿಸಲಾರವು. ಕನ್ನಡ, ತಮಿಳು, ತೆಲುಗು, ಉರ್ದು ಇತ್ಯಾದಿ ಎಲ್ಲ ಭಾಷೆಗಳಂತೆ ಹಿಂದಿಯೂ ಕೂಡ ಭಾರತೀಯ ಭಾಷೆಗಳಲ್ಲಿ ಒಂದು. ವಿದೇಶಿ ಮೂಲದ್ದಾದರೂ ಭಾರತೀಯ ಭಾಷೆಯಗಳ ಸತ್ವವನ್ನು ಹೀರಿಕೊಂಡು ಬೆಳೆದ ಸಂಸ್ಕೃತ ಕೂಡ ಭಾರತೀಯ ಭಾಷೆ ಎಂದು ಈಗ ನಾವು ಪರಿಗಣಿಸಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಮಿಟ್ಟಾನಿ ರಾಜಮನೆತನದ ಹಾಗೂ ಹುರಿಯನ್ ಜನರು ಮಾತನಾಡುತ್ತಿದ್ದ ಬುಡಕಟ್ಟು ಭಾಷೆಯೊಂದು ಮೂರು ಸಾವಿರದ ಐನೂರು ವರ್ಷಗಳ ಹಿಂದೆ ಅಲ್ಲಿನ ಜನರ ವಲಸೆಯಿಂದ ಪಶ್ಚಿಮದ ಮೂಲಕ ಭಾರತವನ್ನು ತಲುಪಿ ವೇದ ಕಾಲದಲ್ಲಿ ಇಂಡಿಕ್ ಎಂದು ಗುರುತಿಸಿಕೊಂಡು ಮುಂದೆ ಪ್ರಾಕೃತ ಭಾಷೆಯೊಂದಿಗಿನ ಸ್ಪರ್ಧೆಯಿಂದ ಸಂಸ್ಕೃತ ಎಂದು ನಾಮಕರಣಗೊಂಡಿತು.

ವಲಸೆ ಆರ್ಯರು ಈ ನೆಲದಲ್ಲಿ ಶಾಶ್ವತವಾಗಿ ನೆಲೆಗೊಂಡ ಮೇಲೆ ಆ ಭಾಷೆಯನ್ನು ಇಲ್ಲಿನ ಸ್ಥಾನೀಯ ಜನರಿಂದ ಮುಚ್ಚಿಟ್ಟರು. ಸಂಸ್ಕೃತ ಭಾಷೆಯ ಕಲಿಕೆಯನ್ನು ಅನಾರ್ಯರಿಗೆ ನಿರ್ಬಂಧಿಸಲಾಗಿತ್ತು. ಬೌದ್ದ ಸಾಹಿತ್ಯಕ್ಕೆ ಪ್ರತಿಸ್ಪರ್ಧಿಯಾಗಿ ಒಂದನೇ ಶತಮಾನದ ಈಚೆಗೆ ಸಂಸ್ಕೃತ ಸಾಹಿತ್ಯ ನಿರ್ಮಾಣವಾಯಿತು. ಸಂಸ್ಕೃತವು ಬಹುಸಂಖ್ಯಾತ ಭಾರತೀಯರಿಗೆ ಅಪರಿಚಿತವಾದ್ದರಿಂದ ಆ ಸಾಹಿತ್ಯದಲ್ಲಿ ಏನೆಲ್ಲ ಮಿಥ್ಯಗಳಿದ್ದಾವೆ ಎನ್ನುವುದು ಜನರಿಗೆ ತಿಳಿಯಲಿಲ್ಲ. ಬ್ರಿಟಿಷರು ಕುತೂಹಲಕ್ಕಾಗಿ ಸಂಸ್ಕೃತವನ್ನು ಕಲಿತು ಅದರ ಸಾಹಿತ್ಯದೊಳಗಿನ ಬಂಡವಾಳವನ್ನು ಬಯಲುಗೊಳಿಸಿದರು. ಸಂಸ್ಕೃತ ಸಾಹಿತ್ಯದ ವೇದ, ಉಪನಿಷತ್ತು, ಪುರಾಣಗಳು, ಮಹಾಕಾವ್ಯಗಳು ಇತ್ಯಾದಿ ನಮ್ಮ ನೆಲದ ಸಾಮಾನ್ಯ ಜನರು ಸೃಷ್ಟಿಸಿದ ಜನಪದ ಸಾಹಿತ್ಯ, ಬೌದ್ದ ಜಾತಕ ಕತೆಗಳು, ರಷ್ಯಾದ ಸ್ಲಾವಿಕ್ ಆರ್ಯನ್ನರ ವೇದಗಳು, ಪಾರ್ಸಿಗಳ ಧರ್ಮಗ್ರಂಥ ಜೆಂಡ್ ಅವೆಸ್ತಾ, ಗ್ರೀಕ್ ಜನಪದ ಪುರಾಣಗಳು ಮುಂತಾದ ಸಾಹಿತ್ಯಗಳಿಂದ ಎರವಲು ಪಡೆದು ನಿರ್ಮಾಣಗೊಂಡಿವೆ ಎನ್ನುವುದು ತಿಳಿದುಬಂದಿತು. ಭಾರತೀಯ ವೈದಿಕ ಪುರಾಣಗಳು ವಿಜ್ಞಾನಕ್ಕೆ ಅತೀತವಾದ ಅನೇಕ ಅತಿರಂಜಿತ, ಅವೈಜ್ಞಾನಿಕ ಸಂಗತಿಗಳನ್ನೊಳಗೊಂಡಿವೆ. ಆ ಪುರಾಣಗಳನ್ನೆ ಪವಿತ್ರ ಇತಿಹಾಸವೆಂದು ಭಾರತೀಯರ ಮೇಲೆ ಹೇರಲಾಗಿದೆ. ಜನರು ಕೂಡ ಈ ಅತಿಮಾನುಷ ಸಂಗತಿಗಳುಳ್ಳ ಪುರಾಣಗಳನ್ನು ಸತ್ಯವೆಂದು ನಂಬಿದ್ದಾರೆ. ಇದು ಅನೇಕ ಶತಮಾನಗಳವರೆಗೆ ಮುಂದುವರೆದಿದೆ.

Advertisements
ಪುರಾಣಗಳು

ಭಾರತದಲ್ಲಿನ ಪುರಾಣದ ಕಥೆಗಳು ಆರಂಭದಲ್ಲಿ ಸಾಮಾನ್ಯ ಜನರ ಮನರಂಜನೆಯ ಮಾಧ್ಯಮವಾಗಿದ್ದವು. ಕಾಲಕ್ರಮೇಣ ಅವು ಭಾರತೀಯರ ನಂಬಿಕೆಗಳಾಗಿ ಮಾರ್ಪಟ್ಟವು. ಯಾವಾಗ ಭಾರತೀಯರು ವೈದಿಕ ಪುರಾಣಗಳನ್ನು ನಂಬತೊಡಗಿದರೊ ಆವಾಗಿನಿಂದ ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕ ಚಿಂತನೆಗಳು ನಶಿಸಲಾರಂಭಿಸಿದವು. ವೈದಿಕತೆಯ ಅಜ್ಞಾನದ ವಿರುದ್ಧ ಆಗಾಗ ಈ ನೆಲದಲ್ಲಿ ವೈಚಾರಿಕ ಆಂದೋಲನಗಳು ಹುಟ್ಟುಪಡೆದವು. ಆ ಆಂದೋಲನಗಳನ್ನು ಪ್ರತಿ ಚಳುವಳಿಯ ಮೂಲಕ ಸನಾತನಿಗಳು ನಾಶಗೊಳಿಸಿದರು. ದೇವರು ಹಾಗೂ ಧರ್ಮಗಳನ್ನು ಸನಾತನಿಗಳು ತಮ್ಮ ಪರಾವಲಂಬಿ ಬದುಕಿನ ಊರುಗೋಲಾಗಿ ಬಳಸಿದರು. ಮನುಷ್ಯನ ದುಃಖಕ್ಕೆ ಅವನ ಪೂರ್ವ ಜನ್ಮದ ಪಾಪಗಳೆ ಕಾರಣವೆಂದು ನಂಬಿಸಲಾಯಿತು. ಜನರು ತಮ್ಮ ಕಾರ್ಯಗಳ ಮೇಲಿನ ಭರವಸೆಯನ್ನು ಕಳೆದುಕೊಂಡು ಪಾಪ-ಪುಣ್ಯ, ಸ್ವರ್ಗ-ನರಕ, ಪುನರ್ಜನ್ಮ ಮುಂತಾದ ಕರ್ಮಸಿದ್ಧಾಂತದ ಟೊಳ್ಳುವಾದಗಳ ಮೇಲೆ ಭರವಸೆಯನ್ನು ಇಡತೊಡಗಿದರು. ಜನರನ್ನು ಮಾನಸಿಕವಾಗಿ ದುರ್ಬಲಗೊಳಿಸಿ ಸನಾತನಿಗಳು ಅವರನ್ನು ಗುಲಾಮರನ್ನಾಗಿಸಿಕೊಂಡರು. ಅವರ ಅಸಹಾಯಕತೆ, ದೇವರ ಬಗೆಗಿನ ಹಾಗೂ ಕರ್ಮ ಸಿದ್ಧಾಂತದ ಬಗೆಗಿನ ಭಯವನ್ನು ಬಂಡವಾಳವಾಗಿಸಿಕೊಂಡು ಪುರೋಹಿತರು ಅನಾಯಾಸವಾಗಿ ಹೊಟ್ಟೆ ಹೊರೆದರು.

ಮನುಷ್ಯನ ಹುಟ್ಟು ಹಾಗೂ ಸಾವುಗಳು ಅತ್ಯಂತ ನೈಸರ್ಗಿಕ ಆಗುಹೋಗುಗಳು. ಆದರೆ ಪುರೋಹಿತರು ಈ ನೈಸರ್ಗಿಕ ಬೆಳವಣಿಗೆಗಳಲ್ಲಿ ಜನನ ಹಾಗೂ ಮರಣದ ಸೂತಕದ ಪರಿಕಲ್ಪನೆಯನ್ನು ಬಿತ್ತಿ ಜನರನ್ನು ಹೆದರಿಸಿ ಹಣ ದೋಚುತ್ತಿದ್ದರು. ಸೃಷ್ಠಿ, ಸ್ಥಿತಿ ಹಾಗೂ ಲಯಗಳು ಅಂದರೆ ಭೂಮಿಯ ಮೇಲೆ ಹೊಸದರ ಉತ್ಪತ್ತಿ, ಅದರ ಪೋಷಣೆ ಹಾಗೂ ನಾಶ ಇವು ನಿಸರ್ಗದತ್ತ ಬೆಳವಣಿಗೆಗಳು. ಸನಾತನಿಗಳು ಈ ಮೂರು ಪ್ರಕ್ರಿಯೆಗಳು ದೇವರ ಮರ್ಜಿಯಿಂದ ನಡೆಯುತ್ತವೆ ಎಂದು ಬಿಂಬಿಸಿದರು. ಈ ಜಗತ್ತನ್ನು ಸೃಷ್ಟಿಸುವವ ಬ್ರಹ್ಮ, ಅದನ್ನು ಪೋಷಿಸುವವ ವಿಷ್ಣು ಹಾಗೂ ಅದನ್ನು ನಾಶಗೊಳಿಸುವವ ರುದ್ರ ಎನ್ನುವ ಕಪೋಲಕಲ್ಪಿತ ಕತೆಯನ್ನು ಕಟ್ಟಿ ಜನರನ್ನು ನಂಬಿಸಿದರು. ಈ ಮೂರು ಪ್ರಕ್ರಿಯೆಗಳು ಒಬ್ಬೊಬ್ಬ ದೇವತೆಗಳ ಮನಸ್ಸಿನಂತೆ ನಡೆಯುತ್ತವೆ ಎನ್ನುವ ಮಿಥ್ಯವನ್ನು ಹರಡಲಾಯಿತು. ಪುರಾಣದ ಕತೆಗಳಲ್ಲಿ ನಿಸರ್ಗಕ್ಕೆ ವಿರುದ್ಧವಾಗಿ ಮಂತ್ರಗಳಿಂದ ಹಾಗೂ ಅಯೋನಿ ಮೂಲದಿಂದ ಮನುಷ್ಯನನ್ನು ಹುಟ್ಟಿಸುವ ಕತೆ ಹೆಣೆಯಲಾಯಿತು. ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಪ್ರತ್ಯಕ್ಷವಾಗಿ ಯಾವತ್ತೂ ನೋಡಿರದ ಅತಿಮಾನುಷ ಪವಾಡ ಹಾಗೂ ಪುರಾಣದ ಮಿಥ್ಯಗಳನ್ನು ಸುಲಭವಾಗಿ ನಂಬಲಾರಂಭಿಸಿದ. ಕಾರಣ ಆತನಲ್ಲಿ ಹುಟ್ಟಿಸಲಾದ ಭಯ ಹಾಗೂ ಕರ್ಮ ಸಿದ್ಧಾಂತದ ನಂಬಿಕೆಗಳು. ಈ ಎಲ್ಲಾ ಮಿಥ್ಯಗಳನ್ನು ಜನಸಾಮಾನ್ಯರಿಂದ ಮುಚ್ಚಿಡಲಾಗಿದ್ದ ಸಂಸ್ಕೃತವೆಂದ ವಿದೇಶಿ ಭಾಷೆಯಲ್ಲಿ ಬರೆಯಲಾಗಿತ್ತು. ಜನರು ಪುರೋಹಿತರು ಹೇಳಿದ್ದನ್ನೆ ಸತ್ಯವೆಂದು ನಂಬಿದರು.

WhatsApp Image 2025 06 27 at 12.39.28 PM
ಶರಣ ಮನುಮುನಿ ಗುಮ್ಮಟದೇವ

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶರಣರು ಜನರಲ್ಲಿ ವೈಜ್ಞಾನಿಕ ವಿಚಾರಗಳನ್ನು ಬಿತ್ತುತ್ತ ಜನ ಜಾಗೃತಾ ಕಾರ್ಯ ಆರಂಭಿಸಿದ್ದರು. ಸನಾತನಿಗಳು ಹರಡಿದ್ದ ಮಿಥ್ಯಗಳನ್ನು, ಮೌಢ್ಯಗಳನ್ನು ಹಾಗೂ ಹುಸಿ ನಂಬಿಕೆಗಳನ್ನು ಶರಣರು ತಮ್ಮ ವಚನಗಳ ಮೂಲಕ ಹುಡಿಗೊಳಿಸುವ ಕಾರ್ಯ ಮಾಡಿದರು. ಶರಣ ಮನುಮುನಿ ಗುಮ್ಮಟದೇವನ ಸೃಷ್ಟಿ, ಸ್ಥಿತಿ ಹಾಗೂ ಲಯ ಎಂಬ ಕ್ರಿಯೆಗಳು ನಿಸರ್ಗದ ಕ್ರಿಯೆಗಳೆಂದು ಹೇಳುವ ಒಂದು ವಚನ:

“ಕೂಟದಿಂದ ಕೂಸು ಹುಟ್ಟುವಡೆ
ಬ್ರಹ್ಮನ ಆಟಕೋಟಲೆಯೇಕೆ?
ಸ್ಥಿತಿ ಆಟದಿಂದ ನಡೆವಡೆ
ವಿಷ್ಣುವಿನ ಭೂತಹಿತವೇಕಯ್ಯಾ?
ಘಾತಕದಿಂದ ಕೊಲುವಡೆ
ರುದ್ರನ ಆಸುರವೇತಕ್ಕೆ?
ಇಂತಿವೆಲ್ಲವೂ ಜಾತಿಯುಕ್ತವಲ್ಲದೆ
ತಾ ಮಾಡುವ ನೀತಿಯುಕ್ತವಲ್ಲ.
ಇದಕಿನ್ನಾವುದು ಗುಣ?
ಭೇದಿಸಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.”

ಭಾವಾರ್ಥ

ಗಂಡು ಹೆಣ್ಣು ಕೂಡಿದರೆ ಮಾತ್ರ ಗರ್ಭಕಟ್ಟುವುದು ಹಾಗೂ ಮಗು ಹುಟ್ಟುವುದು. ಇಲ್ಲಿ ಬ್ರಹ್ಮನಿಗೆ ಯಾವ ಕೆಲಸವೂ ಇಲ್ಲ. ಪ್ರತಿಯೊಂದು ಜೀವಿ ಈ ಭೂಮಿಯ ಮೇಲೆ ಹುಟ್ಟಿದ ಮೇಲೆ ಬದುಕುವುದು ಅನಿವಾರ್ಯ ಮತ್ತು ಅದೊಂದು ನೈಸರ್ಗಿಕ ನಿಯಮ. ಇದರಲ್ಲಿ ವಿಷ್ಣುವಿನ ಪಾತ್ರವಿಲ್ಲ. ಭೂಮಿಯಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅನೇಕ ಕೊಲೆಗಳು ಮಾಡುತ್ತಾನೆ. ಹುಟ್ಟಿದ ಜೀವಿಯ ಅಂತ್ಯ ಅನಿವಾರ್ಯ. ಅದರಲ್ಲಿ ಲಯಕರ್ತನೆನ್ನುವ ರುದ್ರನದ್ದು ಯಾವ ಪಾತ್ರವೂ ಇಲ್ಲ. ಸೃಷ್ಟಿ, ಸ್ಥಿತಿ, ಲಯ ಅಥವಾ ಹುಟ್ಟು ಬದುಕು ಮತ್ತು ಸಾವಿಗೆ ಒಬ್ಬೊಬ್ಬ ದೇವರು ಜವಾಬ್ದಾರರು ಎಂಬ ಸುಳ್ಳನ್ನು ಹರಡಿರುವ ಸನಾತನಿಗಳ ನಡೆಯು ಜಾತಿಯುಕ್ತವೇ ಹೊರತು ಅದರಲ್ಲಿ ಯಾವ ನೀತಿಯೂ ಇಲ್ಲ. ಇದರಲ್ಲಿ ಯಾವುದೇ ಗುಣಾತ್ಮಕ ಚಿಂತನೆಗಳೂ ಇಲ್ಲ ಎನ್ನುವುದು ಶರಣರ ಖಚಿತಾಭಿಪ್ರಾಯ.

ಇದನ್ನೂ ಓದಿ ಯುಗಧರ್ಮ | ಟ್ರಂಪ್ vs ಮೋದಿ: ಯಾರ ಸುಳ್ಳುಗಳು ಅತ್ಯಂತ ಪ್ರಬಲವಾಗಿವೆ?

ಟಿಪ್ಪಣಿ

ಭಾರತೀಯ ಸನಾತನ ಪರಂಪರೆಯು ಸುಳ್ಳುಗಳಿಂದ ಕೂಡಿದ ಒಂದು ಅಪ್ಪಟ ಟೊಳ್ಳು ಸಿದ್ಧಾಂತ. ಮುಗ್ಧ ಮೂಲನಿವಾಸಿ ಶೂದ್ರರನ್ನು ಧಾರ್ಮಿಕ ಭಯದಲ್ಲಿಟ್ಟು ಶೋಷಣೆ ಮಾಡಲು ಪರಾವಲಂಬಿ ಸನಾತನಿಗಳು ಕಂಡುಕೊಂಡ ಸುಲಭದ ಮಾರ್ಗವೆ ದೇವರು-ಧರ್ಮ, ಸಂಪ್ರದಾಯ-ಆಚರಣೆಗಳು. ನಿಸರ್ಗಕ್ಕೆ ವಿರುದ್ಧವಾದದ್ದನ್ನು ಪ್ರತಿಪಾದಿಸುವ ಸನಾತನ ಧರ್ಮ ಇಲ್ಲಿನ ಜನರ ಕಡುವೈರಿ. ಆದರೆ ಮುಗ್ಧ ಜನರಿಗೆ ಸನಾತನಿಗಳೇ ತನ್ನ ಹಿತಶತೃಗಳೆನ್ನುವ ಸಂಗತಿ ತಿಳಿಯಲಿಲ್ಲ. ಈ ಜಗತ್ತಿನಲ್ಲಿ ಜೀವಿಗಳು ಹುಟ್ಟುವುದು ದೇವರ ಕೃಪೆಯಿಂದಲಲ್ಲ. ಹುಟ್ಟು ಈ ನಿಸರ್ಗದ ಸಹಜ ನಿಯಮ. ಹುಟ್ಟಿಸಲೆಂದೆ ಒಂದು ದೇವರು, ಬದುಕಿಸಲು ಮತ್ತೊಬ್ಬ ದೇವರು, ಸಾಯಿಸಲು ಮಗದೊಬ್ಬ ದೇವರು ಎನ್ನುವ ಸನಾತನಿಗಳ ಸುಳ್ಳು ವಾದವು ಬಹುದೇವರನ್ನು ಸೃಷ್ಟಿಸಿದೆ. ಹುಟ್ಟು, ಬದುಕು ಹಾಗೂ ಸಾವುಗಳು ಸೃಷ್ಟಿಯ ಸಹಜ ಕ್ರಿಯೆಗಳು. ಇದೆಲ್ಲವನ್ನು ನಿಯಂತ್ರಿಸುವ ಒಂದು ಅಗೋಚರ ಶಕ್ತಿ ಅದು ವಿಶ್ವ ಚೈತನ್ಯವೆ ಹೊರತು ಮೂರ್ತರೂಪದ ದೇವರಲ್ಲ. ಗಂಡು, ಹೆಣ್ಣುಗಳು ಕೂಡಿದರೆ ಮಾತ್ರ ಗರ್ಭ ನಿಂತು ಪಿಂಡ ಉತ್ಪತ್ತಿಯಾಗಿ ಹೊಸ ಜೀವ ಉದಿಸಬಲ್ಲುದು. ಅದರಲ್ಲಿ ಯಾವ ದೇವರ ಪಾತ್ರವೂ ಇಲ್ಲ. ದೇವರು ಮಕ್ಕಳನ್ನು ಹುಟ್ಟಿಸುವಂತಿದ್ದರೆ ಗಂಡು-ಹೆಣ್ಣುಗಳ ಅಗತ್ಯವೆ ಇರುವುದಿಲ್ಲ. ಇದು ಅತ್ಯಂತ ಸರಳವಾದ ವಿಜ್ಞಾನದ ಸಂಗತಿ. ಹುಟ್ಟಿಸುವಾತ ಬ್ರಹ್ಮ, ಬದುಕಿಸುವಾತ ವಿಷ್ಣು ಹಾಗೂ ಸಾಯಿಸುವಾತ ರುದ್ರ ಎನ್ನುವ ಸನಾತನಿಗಳ ಕಪೋಲ ಕಲ್ಪಿತ ಪೊಳ್ಳುವಾದವನ್ನು ವಚನಕಾರ ಮನಮುನಿ ಗುಮ್ಮಟದೇವ ಮೇಲಿನ ವಚನದಲ್ಲಿ ಮಾರ್ಮಾಕವಾಗಿ ವಿವರಿಸಿದ್ದಾನೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X