ಈ ಪ್ರಕರಣದ ಸಾಕ್ಷಿಗಳು ತಿರುಗಿಬಿದ್ದುದಕ್ಕೆ ಮುಖ್ಯ ಕಾರಣ ವಿಚಾರಣೆಯಲ್ಲಿ ನಡೆದ ವಿಳಂಬ. ನಮ್ಮ ದೇಶದ ದುರದೃಷ್ಟಕರ ವಾಸ್ತವವಿದು. ಘಟನೆ ನಡೆದದ್ದು 2003ರಲ್ಲಿ. ಆದರೆ ಪ್ರಕರಣ ಸೆಷನ್ಸ್ ಕೋರ್ಟ್ ಮುಟ್ಟಿದ್ದು 2010ರಲ್ಲಿ. ಆಪಾದನಾಪಟ್ಟಿ ಸಲ್ಲಿಸಿದ್ದು 2017ರಲ್ಲಿ. ವಿಚಾರಣಾ ಹಂತದ ನ್ಯಾಯಾಲಯದ ತೀರ್ಪು ಹೊರಬಿದ್ದದ್ದು 2021ರ ಸೆಪ್ಟಂಬರ್ 24ರಂದು. ಅರ್ಥಾತ್ 18 ವರ್ಷಗಳ ಸುದೀರ್ಘ ಅವಧಿ!
ಯುವ ದಂಪತಿಯ ಹೆಸರು ಕಣ್ಣಗಿ ಮತ್ತು ಮುರುಗೇಶನ್. ಇಬ್ಬರಿಗೂ ಬಲವಂತವಾಗಿ ವಿಷ ಕುಡಿಸಿ ಕೊಲ್ಲಲಾಯಿತು. ವಿಷ ಕೊಟ್ಟವನು ಕಣ್ಣಗಿಯ ತಂದೆ. ಬಲವಂತವಾಗಿ ಕುಡಿಸಿದವನು ಕಣ್ಣಗಿಯ ಅಣ್ಣ. ಕಣ್ಣಗಿ ವಣ್ಣಿಯಾರ್ ಎಂಬ ಬಲಿಷ್ಠ ಕುಲಕ್ಕೆ ಸೇರಿದ ಹುಡುಗಿ. ಮುರುಗೇಶನದು ಪರಿಶಿಷ್ಟ ಜಾತಿ. ತಮಿಳುನಾಡಿನ ಚಿದಂಬರಂನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಗಳಿಸಿದ್ದ. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ. ಕಣ್ಣಗಿ ಬಿ.ಕಾಂ.ವಿದ್ಯಾರ್ಥಿನಿ.
ತಮ್ಮ ಪ್ರೇಮವನ್ನು ವ್ಯವಸ್ಥೆ ಒಪ್ಪುವುದಿಲ್ಲವೆಂಬ ಕಹಿಸತ್ಯವನ್ನು ಇವರು ಬಲ್ಲವರಾಗಿದ್ದರು. 2003ರ ಮೇ.05ರಂದು ಕಡಲೂರಿನ ರಿಜಿಸ್ಟ್ರಾರ್ ಮುಂದೆ ‘ಗೋಪ್ಯ’ ಮದುವೆಯಾದರು. ರಿಜಿಸ್ಟರ್ಡ್ ಮದುವೆಯ ಸರ್ಟಿಫಿಕೇಟನ್ನೂ ಪಡೆದರು. ಬಳಿಕ ಇಬ್ಬರೂ ಹಳ್ಳಿಗೆ ವಾಪಸಾಗಿ ಎಂದಿನಂತೆ ತಮ್ಮ ಕುಟುಂಬಗಳೊಂದಿಗೆ ಬೇರೆ ಬೇರೆ ಬದುಕತೊಡಗಿದರು. 2003ರ ಜುಲೈ ಮೊದಲ ವಾರ ಸದ್ದಿಲ್ಲದೆ ಹಳ್ಳಿಯನ್ನು ತೊರೆದರು.
ಮುಂದಿನದೆಲ್ಲ ಇವರನ್ನು ಪತ್ತೆ ಮಾಡಿ ಬಲಿ ಹಾಕಿದ ಕ್ರೂರ ಜಾತಿಭೇದ ಮತ್ತು ಗಂಡಾಳಿಕೆಯ ಮೆರೆದಾಟ. ಪೊಲೀಸರೂ ಬಲಿಪಶುವನ್ನು ಬಿಟ್ಟು ಬೇಟೆಗಾರರ ಪಕ್ಷ ವಹಿಸಿದ ಅನ್ಯಾಯದ ‘ಆಟ’. ಕಡೆಗೆ ನ್ಯಾಯಾಂಗ ಈ ಆಟವನ್ನು ಭೇದಿಸಿ ನ್ಯಾಯದಾನ ಮಾಡಿತು. ಆದರೆ ಈ ನ್ಯಾಯ ದಕ್ಕಿಸಿಕೊಳ್ಳಲು ದಲಿತ ಕುಟುಂಬ ಮಾಡಿದ ಹೋರಾಟ ಮತ್ತು ಈ ಕುಟುಂಬಕ್ಕೆ ಬೆಂಬಲವಾಗಿ ನಿಂತ ನ್ಯಾಯಾಂಗವನ್ನು ನಮಿಸಬೇಕು.

ಸ್ಥಳೀಯ ಪೊಲೀಸರು ತನಿಖೆಯ ದಿಕ್ಕು ತಪ್ಪಿಸತೊಡಗಿದ್ದರು. ದಲಿತ ಕುಟುಂಬ ಮದ್ರಾಸ್ ಹೈಕೋರ್ಟಿನ ಮೊರೆ ಹೋಗಿ ಸಿಬಿಐ ತನಿಖೆಯ ಆದೇಶ ಪಡೆಯಿತು. 2004ರ ಏಪ್ರಿಲ್ ನಲ್ಲಿ ಹೈಕೋರ್ಟ್ ಈ ಆದೇಶ ಹೊರಡಿಸಿತ್ತು. ಸಿಬಿಐ ಮರು ತನಿಖೆ ಆರಂಭಿಸಿತು. ಈ ಕೇಸು ಸೆಷನ್ಸ್ ನ್ಯಾಯಾಲಯವನ್ನು ತಲುಪಿದ್ದೇ 2010ರಲ್ಲಿ. ವಿಚಾರಣೆ ಮತ್ತೆ ಕುಂಟಿತು. ಆಪಾದನೆಗಳನ್ನು ಪಟ್ಟಿ ಮಾಡಿದ್ದು 2017ರಲ್ಲಿ. ಆನಂತರವೂ ವಿಚಾರಣೆ ಮುಗಿದದ್ದು 2021ರ ಸೆಪ್ಟಂಬರ್ ನಲ್ಲಿ. ಆಪಾದಿತರ ಕಡೆಯಿಂದ ಬಗೆಬಗೆಯ ಅರ್ಜಿಗಳನ್ನು ಸಲ್ಲಿಸಿ ವಿಚಾರಣೆಯನ್ನು ಕುಂಠಿತಗೊಳಿಸಲಾಗುತ್ತಿತ್ತು.
ಕಡೆಗೂ ಹೊರಬಿದ್ದ ತೀರ್ಪಿನಲ್ಲಿ ಕಣ್ಣಗಿಗೆ ಕೈಯಾರೆ ವಿಷ ಕುಡಿಸಿದ ಆಕೆಯ ಅಣ್ಣ ಮರುತಪಾಂಡ್ಯನ್ ಗೆ ಗಲ್ಲು ಶಿಕ್ಷೆಯನ್ನೂ, ವಿಷದ ಬಟ್ಟಲನ್ನು ಮಗ ಮರುತಪಾಂಡ್ಯನ್ ಕೈಗಿಟ್ಟು ಕಣ್ಣಗಿಗೆ ಮತ್ತು ಮುರುಗೇಶನ್ ಗೆ 24 ತಾಸುಗಳ ಅಂತರದಲ್ಲಿ ಕುಡಿಸಿದ್ದ, ಮುರುಗೇಶನ್ ನನ್ನು ಚಿತ್ರಹಿಂಸೆಗೆ ಈಡು ಮಾಡಿದ್ದ, ನ್ಯಾಯಾಲಯವನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸಿದ್ದ ಅಪರಾಧಕ್ಕಾಗಿ ಕಣ್ಣಗಿಯ ತಂದೆಯೂ ಸೇರಿದಂತೆ ಹತ್ತು ಮಂದಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಗಿತ್ತು.
ಯುವ ದಂಪತಿಗೆ ವಿಷ ಕುಡಿಸಿದ ಅಮಾನುಷ ಕೃತ್ಯ ನಡೆದದ್ದು ಗ್ರಾಮಸ್ಥರ ಸಮಕ್ಷಮದಲ್ಲೇ ವಿನಾ ನಾಲ್ಕು ಗೋಡೆಗಳ ನಡುವೆಯೇನೂ ಅಲ್ಲ.
ಈ ಪ್ರಕರಣದ ಸಾಕ್ಷಿಗಳು ತಿರುಗಿಬಿದ್ದುದಕ್ಕೆ ಮುಖ್ಯ ಕಾರಣ ವಿಚಾರಣೆಯಲ್ಲಿ ನಡೆದ ವಿಳಂಬ. ನಮ್ಮ ದೇಶದ ದುರದೃಷ್ಟಕರ ವಾಸ್ತವವಿದು. ಘಟನೆ ನಡೆದದ್ದು 2003ರಲ್ಲಿ. ಆದರೆ ಪ್ರಕರಣ ಸೆಷನ್ಸ್ ಕೋರ್ಟ್ ಮುಟ್ಟಿದ್ದು 2010ರಲ್ಲಿ. ಆಪಾದನಾಪಟ್ಟಿ ಸಲ್ಲಿಸಿದ್ದು 2017ರಲ್ಲಿ. ವಿಚಾರಣಾ ಹಂತದ ನ್ಯಾಯಾಲಯದ ತೀರ್ಪು ಹೊರಬಿದ್ದದ್ದು 2021ರ ಸೆಪ್ಟಂಬರ್ 24ರಂದು. ಅರ್ಥಾತ್ 18 ವರ್ಷಗಳ ಸುದೀರ್ಘ ಅವಧಿ!
ಮುರುಗೇಶನ್ ನನ್ನು ಹಿಡಿದು ತರುವ ಮೊದಲೇ ಕಣ್ಣಗಿಯನ್ನು ಎಳೆತಂದು ಆಕೆಗೂ ವಿಷಕಾರಿ ಕೀಟನಾಶಕ ಕುಡಿಸಿ ಕೊಂದು ದೇಹವನ್ನು ಸುಡಲಾಗಿರುತ್ತದೆ. ವಿಷವನ್ನು ಆಕೆಯ ಅಣ್ಣ ಮರುತಪಾಂಡ್ಯನ್ ಕುಡಿಸುತ್ತಾನೆ. ಕಣ್ಣಗಿಯ ತಂದೆಯೇ ಕುಡಿಸುವಂತೆ ವಿಷವನ್ನು ಮಗ ಮರುತುಪಾಂಡ್ಯನ್ ಕೈಗೆ ಕೊಟ್ಟಿರುತ್ತಾನೆ.
ಹಳ್ಳಿಯ ದೇವಸ್ಥಾನ ಮತ್ತು ನೀರಿನ ಟ್ಯಾಂಕ್ ಬಳಿ ಕನಿಷ್ಠ 50 ಮಂದಿಯ ಗುಂಪಿನ ಎದುರು ಕಣ್ಣಗಿಯ ತಂದೆ ಮತ್ತು ಸೋದರ ಮುರುಗೇಶನ್ ನನ್ನು ಥಳಿಸುತ್ತಾರೆ. ಆ ನಂತರ ವಾಟರ್ ಟ್ಯಾಂಕ್ ನ ಬೋರ್ ವೆಲ್ ಗೆ ತಲೆಕೆಳಗಾಗಿ ನೇತು ಹಾಕಲಾಗಿರುತ್ತದೆ. ಜಾತಿ ನಿಂದನೆ ಮಾಡಿ ಥಳಿಸುತ್ತ ಚಿತ್ರಹಿಂಸೆ ನೀಡಲಾಗುತ್ತದೆ. ತಡೆಯಲಾರದೆ ಕಣ್ಣಗಿ ಮೂಂಗಿಲ್ಥುರೈಪೇಟೆಯಲ್ಲಿ ಇರುವುದಾಗಿ ತಿಳಿಸುತ್ತಾನೆ. ಮುರುಗೇಶನ್ ನನ್ನು ಗೇರುಪೊದೆಗಳತ್ತ ಎಳೆದೊಯ್ದು ಮರವೊಂದಕ್ಕೆ ಕಟ್ಟಿ ಹಾಕಲಾಗುತ್ತದೆ. ಕಣ್ಣಗಿಯ ಅಣ್ಣ ಮರುತುಪಾಂಡ್ಯನ್ ಬಲವಂತವಾಗಿ ಮುರುಗೇಶನ್ ನ ಗಂಟಲಿಗೆ ವಿಷಕಾರಿ ಕೀಟನಾಶಕವನ್ನು ಸುರಿಯುತ್ತಾನೆ. ಈ ದೃಶ್ಯಗಳನ್ನು ಮುರುಗೇಶನ್ ನ ಮಲತಾಯಿ ಚಿನ್ನಪಿಳ್ಳೈ ಕಣ್ಣಾರೆ ಕಂಡಿರುತ್ತಾಳೆ. ಕೊಲೆಗಳು ನಡೆದ ಹಳ್ಳಿಯಿಂದ ಮೂರು ಕಿ.ಮೀ.ದೂರದಲ್ಲಿರುವ ವಿರುಧಾಚಲಂ ಪೊಲೀಸ್ ಠಾಣೆಯಲ್ಲಿ ಮಲತಾಯಿ ಚಿನ್ನಪಿಳ್ಳೈ ದೂರನ್ನು ಯಾರೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಜಾತಿನಿಂದನೆ ಮಾಡಿ ಓಡಿಸುತ್ತಾರೆ. ವಣ್ಣಿಯಾರ್ ‘ಮೇಲ್ಜಾತಿ’ಯ ಆಪಾದಿತರ ವಿರುದ್ಧ ದಲಿತರ ದೂರನ್ನು ಕೂಡ ಸ್ವೀಕರಿಸುವುದಿಲ್ಲ. ಎಫ್.ಐ.ಆರ್. ದಾಖಲಿಸುವುದು ದೂರವೇ ಉಳಿಯಿತು.
ಮುರುಗೇಶನ್ ನ ಮಲತಾಯಿ ಚಿನ್ನಪಿಳ್ಳೈ ಸಾಕ್ಷ್ಯವೇ ಈ ಕೇಸಿನಲ್ಲಿ ನಿರ್ಣಾಯಕ ಆಗುತ್ತದೆ. ಚಾರ್ಜ್ ಶೀಟ್ ನಲ್ಲಿ ಚಿನ್ನಪಿಳ್ಳೈ ಹೆಸರನ್ನು ಪ್ರಾಸಿಕ್ಯೂಷನ್ ತನ್ನ ಸಾಕ್ಷಿಗಳ ಪಟ್ಟಿಯಲ್ಲಿ ದಾಖಲಿಸಿರುವುದಿಲ್ಲ. ಆದರೆ ವಿಚಾರಣಾ ನ್ಯಾಯಾಲಯ ತನಗಿರುವ ವಿಶೇಷಾಧಿಕಾರ ಬಳಸಿ (ಸೆಕ್ಷನ್ 311 ಸಿ.ಆರ್.ಪಿ.ಸಿ- ಸೆಕ್ಷನ್ 165 ಎವಿಡೆನ್ಸ್ ಆ್ಯಕ್ಟ್) ಅಂತಿಮ ಹಂತದಲ್ಲೂ ಆಕೆಯ ಸಾಕ್ಷ್ಯ ದಾಖಲಿಸಲು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತದೆ.
ಮುರುಗೇಶನ್ ನ ದೇಹವನ್ನು ಸುಟ್ಟಿರುವುದು ಸಾಮಿಕಣ್ಣುವಿನ ಕುಟುಂಬಕ್ಕೆ ತಿಳಿಯುತ್ತದೆ. ಎಲ್ಲರೂ ಸ್ಥಳಕ್ಕೆ ಧಾವಿಸುತ್ತಾರೆ. ಅವರಿಗೆ ಸಿಗುವುದು ಮುರುಗೇಶನ್ ಧರಿಸುತ್ತಿದ್ದ ಉಂಗುರ ಮಾತ್ರ. 3003ರ ಜುಲೈ 7 ಮತ್ತು 8ರಂದು ಕಣ್ಣಗಿ ಮತ್ತು ಮುರುಗೇಶನ್ ಹತ್ಯೆ ನಡೆದಿರುತ್ತದೆ. ಪತ್ರಿಕೆಗಳು ಮತ್ತು ಟೀವಿ ಚಾನೆಲ್ ಗಳಲ್ಲಿ ವರದಿಗಳು ಪ್ರಕಟವಾಗುತ್ತವೆ. ರಾಜಕೀಯ ಒತ್ತಡವನ್ನೂ ತಂದ ನಂತರ ಪೊಲೀಸರು ಎಫ್.ಐ.ಆರ್.ದಾಖಲಿಸುತ್ತಾರೆ. ಈ ಕೇಸಿನ ತನಿಖೆಯನ್ನು ಸಿಬಿಐ ಗೆ ಒಪ್ಪಿಸಲಾಗುತ್ತದೆ. ಸಬ್ ಇನ್ಸ್ ಪೆಕ್ಟರ್ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಕೂಡ ಅಪಾದಿತರಾಗುತ್ತಾರೆ. ಸಬ್ ಇನ್ಸ್ ಪೆಕ್ಟರ್ ತನಿಖೆಯನ್ನು ಬೇಕೆಂದೇ ದಲಿತರ ವಿರುದ್ಧ ಹಳ್ಳ ಹಿಡಿಸಿದ ಆರೋಪ ಹೊತ್ತಿರುತ್ತಾನೆ. ಇವರ ತನಿಖೆಯಲ್ಲಿ ಕೊಲೆಗಳನ್ನು ಮಾಡಿದ ವಣ್ಣಿಯಾರರು ಮತ್ತು ಬಲಿಪಶುಗಳಾದ ದಲಿತರು ಇಬ್ಬರನ್ನೂ ಆಪಾದಿತರ ಪಟ್ಟಿಗೆ ಸೇರಿಸಲಾಗಿರುತ್ತದೆ. ಈ ಅನ್ಯಾಯ ಸಿಬಿಐ ತನಿಖೆಯಿಂದ ಬಯಲಿಗೆ ಬರುತ್ತದೆ. ಹತ್ಯೆಗೀಡಾದ ದಲಿತ ಮುರುಗೇಶನ್ ನ ತಂದೆಯನ್ನೇ ಆಪಾದಿತನನ್ನಾಗಿ ಹೆಸರಿಸಿರುತ್ತಾರೆ. ಸಾಕ್ಷ್ಯವನ್ನು ಸೃಷ್ಟಿಸಿ ಒಂದೆಡೆ ಆಪಾದಿತರ ಕೊರಳ ಕುಣಿಕೆಯನ್ನು ಸಡಿಲಗೊಳಿಸಿ, ಮತ್ತೊಂದೆಡೆ ಅಮಾಯಕರ ದಲಿತರನ್ನು ಸಿಕ್ಕಿಸಿ ಹಾಕುವ ಪ್ರಯತ್ನ ಪೊಲೀಸರಿಂದ ನಡೆದಿರುತ್ತದೆ. ಈ ಅನ್ಯಾಯಗಳನ್ನು ಸುಪ್ರೀಮ್ ಕೋರ್ಟು ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿದೆ. ತನಿಖಾಧಿಕಾರಿಯ ದುರುಳ ಹಂಚಿಕೆ ಎಂದು ಕರೆದಿದೆ.

ಹಾಲಿ ಕೇಸಿನಲ್ಲಿ ಮುರುಗೇಶನ್ ಮತ್ತು ಕಣ್ಣಗಿ ಅವರ ಹತ್ಯೆಯ ಸಂಗತಿಯನ್ನು ಘಟನೆ ನಡೆದ ದಿನವೇ (08.07.2003) ಸಬ್ ಇನ್ಸ್ ಪೆಕ್ಟರ್ (ಆಪಾದಿತ -14) ಮತ್ತು ಸರ್ಕಲ್ ಇನ್ಸ್ ಪೆಕ್ಟರ್ (ಆಪಾದಿತ-15) ಬಲ್ಲವರಾಗಿದ್ದರು. ಆದರೂ ಎಫ್.ಐ. . ದಾಖಲಿಸಕೊಳ್ಳದೆ ಕಾನೂನನ್ನು ಉಲ್ಲಂಘಿಸಿದ್ದಾರೆ. ಯಾರೂ ದೂರು ನೀಡಲು ಮುಂದೆ ಬರಲಿಲ್ಲ ಎಂಬುದಾಗಿ ಅವರು ನೀಡಿರುವ ಕಾರಣವನ್ನು ಎರಡು ಕಾರಣಗಳಿಗಾಗಿ ಒಪ್ಪಲಾಗದು. ಒಂದನೆಯದಾಗಿ ಮುರುಗೇಶನ್ ಕುಟುಂಬದ ಸದಸ್ಯರು ದೂರು ನೀಡಲು ಠಾಣೆಗೆ ಹೋದಾಗ ಜಾತಿನಿಂದನೆ ಮಾಡಿ ಅವರನ್ನು ಓಡಿಸಲಾಗುತ್ತದೆ. ದೂರು ನೀಡಲು ಯಾರೂ ಮುಂದೆ ಬರಲಿಲ್ಲ ಎಂಬುದಾಗಿ ಅವರು ನೀಡಿರುವ ಕಾರಣ ನಿಲ್ಲುವುದಿಲ್ಲ. ಒಂದು ವೇಳೆ ದೂರು ನೀಡಲು ಯಾರೂ ಮುಂದೆ ಬರಲಿಲ್ಲ ಎಂಬ ನೆವವನ್ನು ವಾದದ ಕಾರಣಕ್ಕಾಗಿ ಕ್ಷಣಕಾಲ ನಂಬಿದರೂ, ಈ ಜೋಡಿ ಕೊಲೆಯ ಕುರಿತು ಈ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಮಾಹಿತಿಯಿತ್ತು. ಹೀಗಿದ್ದಾಗ ಎಫ್.ಐ.ಆರ್. ದಾಖಲಿಸುವುದು ಅವರ ಕರ್ತವ್ಯವಾಗಿತ್ತು. ಹೀಗಾಗಿ ಹೈಕೋರ್ಟು ಇವರ ವಾದವನ್ನು ತಳ್ಳಿ ಹಾಕಿರುವುದು ಸೂಕ್ತವಾಗಿದೆ. ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಟ ಜನರ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿಸಿ ಅವರನ್ನು ಕೇಸಿನಲ್ಲಿ ಇರುಕಿಸುವುದಕ್ಕೆ ಮತ್ತು ತನ್ನ ಕರ್ತವ್ಯ ನಿರ್ವಹಿಸದೆ ನಿರ್ಲಕ್ಷ್ಯ ತೋರುವುದಕ್ಕೆ ಎಸ್.ಸಿ./ಎಸ್.ಟಿ.ಕಾಯಿದೆಯಲ್ಲಿ (ಸೆಕ್ಷನ್ 3(2)(i) ಮತ್ತು ಸೆಕ್ಷನ್ 4) ಮರಣದಂಡನೆ ಶಿಕ್ಷೆ ವಿಧಿಸಲಾಗಿದೆಎಂದು ಸುಪ್ರೀಮ್ ಕೋರ್ಟು ತನ್ನ ತೀರ್ಪಿನಲ್ಲಿ ವಿಶ್ಲೇಷಿಸಿದೆ. ಯಾವುದೇ ಅಪರಾಧವು ಸ್ಟೇಟ್ (ಪ್ರಭುತ್ವ) ವಿರುದ್ಧ ಎಸಗಿದ್ದಾಗಿರುತ್ತದೆ. ಆದರೆ ಹಾಲಿ ದುರುಳ (wicked) ಮತ್ತು ಅಸಹ್ಯಕರ (Odious) ಅಪರಾಧವು ನಮ್ಮ ಜಾತಿಗ್ರಸ್ತ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಕುರೂಪಿ ವಾಸ್ತವ. ಮರ್ಯಾದೆ ಹತ್ಯೆಯೆಂದು ಕರೆಯಲಾಗುವ ಈ ಹತ್ಯೆಗಳನ್ನು ಅತ್ಯಂತ ಕಠಿಣ ಶಿಕ್ಷೆಯಿಂದ ದಂಡಿಸಬೇಕು. ಮುರುಗೇಶನ್ ತಂದೆ ಸಾಮಿಕಣ್ಣು ಮತ್ತು ಮಲತಾಯಿ ಚಿನ್ನಪಿಳ್ಳೈ ಅವರಿಗೆ ತಮಿಳುನಾಡು ಸರ್ಕಾರ ಐದು ಲಕ್ಷರುಪಾಯಿಗಳ ಪರಿಹಾರ ನೀಡಬೇಕು. ಸೆಷನ್ಸ್ ಮತ್ತು ಹೈಕೋರ್ಟು ನೀಡಿರುವ ಪರಿಹಾರದ ಜೊತೆಗೆ ಈ ಪರಿಹಾರವನ್ನೂ ನೀಡತಕ್ಕದ್ದು ಎಂದು ಸುಪ್ರೀಮ್ ಕೋರ್ಟು ವಿಧಿಸಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕಿದ್ದರೆ ಜಾತಿವಿನಾಶ ಆಗಲೇಬೇಕು
ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿಯಲಾಗಿದೆ. ಮೇಲ್ಮನವಿಗಳನ್ನು ತಿರಸ್ಕರಿಸಲಾಗಿದೆ. ಜಾಮೀನಿನ ಮೇಲೆ ಹೊರಗಿರುವ ಎಲ್ಲ ಮೇಲ್ಮನವಿದಾರರು ಎರಡು ವಾರಗಳ ಒಳಗಾಗಿ ಕಾನೂನಿನ ಮುಂದೆ ಶರಣಾಗಬೇಕು ಮತ್ತು ಉಳಿದ ಸಜೆಯ ಅವಧಿಯನ್ನು ಅನುಭವಿಸಬೇಕು ಎಂದೂ ಸುಪ್ರೀಮ್ ಕೋರ್ಟ್ ವಿಧಿಸಿರುವುದು ಸರಿಯಾಗಿದೆ.
ಜಾತಿವ್ಯವಸ್ಥೆ ನಾಶವಾಗುವ ತನಕ ಈ ಮರ್ಯಾದೆಗೇಡು ಹತ್ಯೆಗಳು ನಿಲ್ಲುವುದಿಲ್ಲ. ಬಾಬಾಸಾಹೇಬ ಅಂಬೇಡ್ಕರ್ ಸಾರಿರುವಂತೆ ಜಾತಿವ್ಯವಸ್ಥೆಯ ಬೇರುಗಳನ್ನು ಮೊದಲು ಕಡಿದು ಹಾಕಬೇಕಿದೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು