ಮಳೆ ಬಂದರೆ ಕೇಡಿಲ್ಲ ಮಗ ಉಂಡರೆ ಕೇಡಲ್ಲ ಅನ್ನುವ ಗಾದೆ ಮಾತಿದೆ. ಆದರೆ, ಕಳೆದ ಕೆಲವು ವರ್ಷಗಳಿಂದೀಚೆಗೆ ಮಳೆಗಾಲದ ಮಳೆ ಯಾವ ತೆರನಾಗಿರುವುದೋ ಎಂಬುದೇ ಎಲ್ಲರಿಗೂ ತಲೆನೋವಾಗಿ ಪರಿಣಮಿಸಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬದಲಾಗುತ್ತಿರುವ ಮಳೆ-ಬಿಸಿಲಿನ “ಪ್ಯಾಟರ್ನ್” ಎಲ್ಲರಿಗೂ ಹೊಸ ಹೊಸ ಸವಾಲುಗಳನ್ನು ತಂದೊಡ್ಡುತ್ತಿದೆ.
ಉತ್ತರ ಭಾರತದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳಂತೆ, ದಕ್ಷಿಣದಲ್ಲಿ ಪಶ್ಚಿಮ ಘಟ್ಟಗಳು ಭಾರತದ ಹವಾಮಾನ ಮತ್ತು ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉತ್ತರದಲ್ಲಿ ಗುಜರಾತ್ ನಿಂದ ದಕ್ಷಿಣದಲ್ಲಿ ಕೇರಳದವರೆಗೆ ಹರಡಿರುವ, ತಮಿಳುನಾಡು, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರಗಳನ್ನು ಹಾದು ಬರುವ ಈ ಪಶ್ಚಿಮ ಘಟ್ಟಗಳು, ಈ ಪ್ರದೇಶದ ಮಳೆ, ಜೀವ ವೈವಿಧ್ಯ ಮತ್ತು ಹವಾಮಾನದ ಮಾದರಿಗಳ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ಯುನೆಸ್ಕೋ ಪಶ್ಚಿಮ ಘಟ್ಟಗಳನ್ನು ವಿಶ್ವದ ಎಂಟು ʻಅತಿ ಸೂಕ್ಷ್ಮ/ಹಾಟೆಸ್ಟ್ ಹಾಟ್‌ಸ್ಪಾಟ್ ಜೀವವೈವಿಧ್ಯ ತಾಣ’ಗಳಲ್ಲಿ ಒಂದೆಂದು ಘೋಷಿಸಿದೆ.
ಪಶ್ಚಿಮ ಘಟ್ಟಗಳು ದೇಶದ ಭೌಗೋಳಿಕ ಪ್ರದೇಶದ ಕೇವಲ ಶೇಕಡಾ 5ರಷ್ಟಿದ್ದರೂ, ಈ ಪ್ರದೇಶವು ದೇಶದ ಪರಿಸರದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಮುಖ ಪಾತ್ರವಹಿಸುತ್ತವೆ ಇದನ್ನು ದೇಶದ ಆಸ್ತಿ ಎಂದೇ ಹೇಳಬಹುದು. ಕಳೆದ 40 ವರ್ಷಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಇತರ ಅಭಿವೃದ್ಧಿ ಚಟುವಟಿಕೆಗಳಲ್ಲಿನ ಹೆಚ್ಚಳದಿಂದಾಗಿ ಈ ಪರ್ವತ ಪ್ರದೇಶದಲ್ಲಿನ ಅರಣ್ಯ ಪ್ರದೇಶವು ಶೇಕಡಾ ಐದರಷ್ಟು ಕಡಿಮೆಯಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಇದರೊಂದಿಗೆ ಸರಾಸರಿ ತಾಪಮಾನದಲ್ಲಿ 0.5 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಮತ್ತು ಮಳೆ ಸುರಿಯುವ ದಿನಗಳ ಸಂಖ್ಯೆಯಲ್ಲಿ ಇಳಿಕೆಯೂ ಕಂಡುಬಂದಿದೆ.
ಭಾರತದ ಹವಾಮಾನ, ನೀರು ಮತ್ತು ಆಹಾರ ಎಲ್ಲವೂ ಇಲ್ಲಿನ ಮುಂಗಾರು ಋತುವನ್ನು ಅವಲಂಬಿಸಿದೆ. ಪಶ್ಚಿಮ ಘಟ್ಟಗಳಲ್ಲಿ ವಿವಿಧ ಉದ್ಧೇಶಗಳಿಂದಾಗಿ ಬದಲಾಗುತ್ತಿರುವ ಭೂಪ್ರದೇಶವು ಮಳೆಯ ನೀರಿನ ಹರಿವನ್ನು ಅಡ್ಡಿಪಡಿಸಿದಾಗ ಇವೆಲ್ಲವೂ ಏರುಪೇರಾಗುತ್ತವೆ. ಹೀಗಾಗಿ ಪದೇ ಪದೇ ತಜ್ಞರ ವರದಿಗಳು ಮತ್ತು ಸಮಿತಿಗಳು ಈ ಪ್ರದೇಶವನ್ನು ʻನೈಸರ್ಗಿಕ ಸೂಕ್ಷ್ಮ ಪ್ರದೇಶʼ ಎಂದು ಘೋಷಿಸಿ ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿವೆ. ಆದರೆ ಎಂದಿನಂತೆ ಪರಿಸರದ ವಿಷಯದಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಹಾಗೆಯೇ ಮುಂದುವರೆದಿದೆ. ಇನ್ನೊಂದೆಡೆ ಭೂಕುಸಿತಗಳು, ಪ್ರವಾಹಗಳು ಮತ್ತು ಇತರ ಹವಾಮಾನ ವೈಪರೀತ್ಯ ಸಂಬಂಧಿತ ಘಟನೆಗಳು ನಿರಂತರವಾಗಿ ತೀವ್ರಗೊಳ್ಳುತ್ತಿದ್ದು, ಘಟ್ಟಗಳನ್ನು ನಾಶಮಾಡುತ್ತಿವೆ.
ʻಪಶ್ಚಿಮ ಘಟ್ಟ ಉಳಿಸಿʼ ಅಭಿಯಾನದ ಹಿನ್ನಲೆ
ಪಶ್ಚಿಮ ಘಟ್ಟವನ್ನು ರಕ್ಷಿಸಿ ಎಂಬ ಕೂಗು ಸುಮಾರು 80ರ ದಶಕದ ಅಂತ್ಯದ ವೇಳೆಗೆ ತೀವ್ರವಾಗಿತ್ತು ಮತ್ತು ಈ ಸಂಬಂಧ ʻಪಶ್ಚಿಮ ಘಟ್ಟ ಉಳಿಸಿʼ ಎಂಬ ಬೃಹತ್ ಅಭಿಯಾನವೇ ಆರಂಭಗೊಂಡಿತು. ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ಪರಿಸರಪರ ಹೋರಾಟಗಾರರು, ಪತ್ರಿಕೋದ್ಯಮಿಗಳು, ಸ್ಥಳೀಯ ಸಮುದಾಯಗಳನ್ನು ಒಳಗೊಂಡ 100 ದಿನಗಳ ಬೃಹತ್ ಜಾಥಾ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಸುಮಾರು 2,000 ಚದರ ಕಿಲೋ ಮೀಟರ್‌ಗಳವರೆಗೆ ಹಬ್ಬಿರುವ, ದಟ್ಟ ಅರಣ್ಯಗಳ ಹಾಗು ಅಪೂರ್ವ ಜೀವ ವೈವಿಧ್ಯತೆಯನ್ನು ಹೊಂದಿರುವ ಈ ಪರ್ವತ ಶ್ರೇಣಿಗಳ ಪ್ರದೇಶವನ್ನು ʻನೈಸರ್ಗಿಕ ಸೂಕ್ಷ್ಮ ಪ್ರದೇಶʼ ಎಂದು ಘೋಷಿಸಬೇಕೆಂದು ಅಂದೇ ಸರ್ಕಾರವನ್ನು ಆಗ್ರಹಿಸಿತ್ತು.
ಗಣಿಗಾರಿಕೆ, ಹೊಸ ಆರ್ಥಿಕ ನೀತಿಗಳಿಗೆ ಮಣೆ ಹಾಕಿದ್ದ ಅಭಿವೃದ್ಧಿ ಚಟುವಟಿಕೆಗಳು ಮತ್ತು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದ ಕೃಷಿ ಈ ಪ್ರಸ್ತಾಪವನ್ನು ತಳ್ಳಿಹಾಕುವಂತೆ ಮಾಡಿತ್ತು. ಆದರೆ ಇತ್ತೀಚೆಗೆ ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ ಪ್ರದೇಶದಲ್ಲಿ ಹವಾಮಾನ ಬದಲಾವಣೆಯಿಂದಾಗಿ ನಡೆದ ಭೂಕುಸಿತಗಳಂತಹ ನೈಸರ್ಗಿಕ ವಿಕೋಪಗಳು ಈ ಪ್ರಸ್ತಾಪವನ್ನು ಮತ್ತೆ ಮುನ್ನಲೆಗೆ ತಂದಿವೆ. ಇವೇ ಕಾಳಜಿಗಳನ್ನು ಮುಂದಿಟ್ಟುಕೊಂಡು ಸಲ್ಲಿಕೆಯಾಗಿದ್ದ ಮಾಧವ ಗಾಡ್ಗೀಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿಗಳು ಮತ್ತೆ ಚರ್ಚಿಸಲ್ಪಡುತ್ತಿವೆ.
ಕೊಡಗು ಹಾಗು ವಯನಾಡು ಭೂಕುಸಿತ ಮತ್ತು ಹವಾಮಾನ ಬದಲಾವಣೆ
ಹೆಚ್ಚು ಜೀವಗಳನ್ನು ಬಲಿ ಪಡೆದ ಕೊಡಗು ಮತ್ತು ವಯನಾಡಿನ ಭೂಕುಸಿತದ ನಂತರ, ವಿಶ್ವದೆಲ್ಲೆಡೆ ಹವಾಮಾನ ವೈಪರೀತ್ಯಗಳ ಅಧ್ಯಯನ ನಡೆಸುವ ವರ್ಲ್ಡ್ ವೆದರ್ ಅಟ್ರಿಬ್ಯೂಷನ್ (ಹವಾಮಾನಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಶೋಧಕರು ಕಟ್ಟಿಕೊಂಡ ಗುಂಪು) ತಂಡದ ವಿಜ್ಞಾನಿಗಳು ಭೂ ಕುಸಿತದಂತಹ ವಿದ್ಯಮಾನಗಳು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಶೇಕಡಾ 11 ರಷ್ಟು ಉಲ್ಬಣಗೊಂಡಿದೆ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಪಶ್ಚಿಮ ಘಟ್ಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಇತರ ವಿಜ್ಞಾನಿಗಳು, ಇತ್ತೀಚಿನ ವರ್ಷಗಳಲ್ಲಿ ಸಂಭವಿಸುತ್ತಿರುವ ಪ್ರತಿಯೊಂದು ಭೂಕುಸಿತಕ್ಕೂ ಜಾಗತಿಕ ತಾಪಮಾನ ಏರಿಕೆಯತ್ತಲೇ ಬೊಟ್ಟು ಮಾಡುತ್ತಾರೆ. ಕರ್ನಾಟಕದ ಕೊಡಗು ಜಿಲ್ಲೆಯಿಂದ ಕೇರಳದ ಕೋಝಿಕ್ಕೋಡ್ ಜಿಲ್ಲೆಯವರೆಗೆ ಪಶ್ಚಿಮ ಘಟ್ಟಗಳ ಪೂರ್ವ ಇಳಿಜಾರುಗಳಲ್ಲಿ ಸಂಭವಿಸುತ್ತಿರುವ ಭೂಕುಸಿತಗಳೆಲ್ಲವೂ ಹವಾಮಾನ ಬದಲಾವಣೆಗೆ ಸಂಬಂಧಿಸಿವೆ ಎಂದು ಸ್ಪಷ್ಟಪಡಿಸುತ್ತಾರೆ.

ವಯನಾಡಿನಲ್ಲಿ 2018 ರಿಂದ ದಿನಕ್ಕೆ 300 ಮಿ.ಮೀ ಗಿಂತ ಹೆಚ್ಚಿನ ಮಳೆ ಬೀಳುವ ಘಟನೆಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ಕೃಷಿ ಹವಾಮಾನ ಕೇಂದ್ರದ ದಾಖಲೆಗಳು ಕಳೆದ ದಶಕದಲ್ಲಿ ವಯನಾಡ್ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ತಾಪಮಾನ ದಾಖಲಿಸಿದೆ ಎಂದು ತೋರಿಸುತ್ತವೆ. ಈ ದಾಖಲೆಗಳು ಏರುತ್ತಿರುವ ತಾಪಮಾನ ಹಾಗು ಬೀಳುವ ಮಳೆಯ ಪ್ರಮಾಣದ ನಡುವೆ ಇರುವ ಸಂಬಂಧವನ್ನು ಸೂಚಿಸುತ್ತವೆ.
ಕರ್ನಾಟಕ ಮತ್ತು ಕೇರಳದ ಪಶ್ಚಿಮ ಘಟ್ಟಗಳ ಉದ್ದಕ್ಕೂ ಆರು ಅರಣ್ಯ ಪ್ರದೇಶಗಳು ಭಾರತೀಯ ಅರಣ್ಯ ಸಮೀಕ್ಷೆ (FSI) ಸಿದ್ಧಪಡಿಸಿದ “ಹವಾಮಾನ ಬದಲಾವಣೆಯ ಹಾಟ್‌ಸ್ಪಾಟ್” ಪಟ್ಟಿಯಲ್ಲಿ ಗುರುತಿಸಲ್ಪಟ್ಟಿವೆ. ಇತ್ತೀಚಿನ ದಶಕಗಳಲ್ಲಿ ಈ ಕಾಡುಗಳು 1.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ಏರಿಕೆಯನ್ನು ದಾಖಲಿಸಿವೆ ಮತ್ತು ಅದರ ಜೊತೆಜೊತೆಗೆ ಈ ಪ್ರದೇಶಗಳು ಇತ್ತೀಚಿನ ದಶಕಗಳಲ್ಲಿ ಸಾಮಾನ್ಯವಾಗಿ ಈ ಪ್ರದೇಶಗಳಲ್ಲಿ ಬೀಳುತ್ತಿದ್ದ ಮಳೆಗಿಂತ ಶೇಕಡಾ 20 ಅಥವಾ ಅದಕ್ಕಿಂತ ಹೆಚ್ಚಾಗಿ ಮಳೆಯ ಪ್ರಮಾಣವನ್ನು ಪಡೆದಿವೆ. ಇಲ್ಲಿಯೂ ಮತ್ತೊಮ್ಮೆ ಏರುತ್ತಿರುವ ತಾಪಮಾನ ಹಾಗು ಬೀಳುವ ಮಳೆಯ ಪ್ರಮಾಣದ ನಡುವೆ ಸಂಬಂಧವಿದೆ ಎಂಬುದು ಸಾಬೀತಾಗುತ್ತದೆ.
ಜಾಗತಿಕವಾಗಿ ಮಳೆಯ ಮಾದರಿಗಳಲ್ಲಿ ಕಂಡುಬರುತ್ತಿರುವ ಗಮನಾರ್ಹ ಬದಲಾವಣೆಗಳು ಭೀಕರ ಪ್ರವಾಹಗಳು, ಭೂಕುಸಿತಗಳು ಮತ್ತು ಬರಗಳಿಗೆ ಕಾರಣವಾಗಿವೆ, ಇದು ಜೀವನ, ಮೂಲಸೌಕರ್ಯ ಮತ್ತು ಪರಿಸರದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.
ಹೆಚ್ಚಿನ ಮಳೆ ಮತ್ತು ಬದಲಾಗುವ ಭೂ ಪ್ರದೇಶ
ಕೇರಳದ ಕೊಟ್ಟಾಯಂನ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಚೇಂಜ್ ಸ್ಟಡೀಸ್ ಸ್ಥಳೀಯ ಜಲಶಾಸ್ತ್ರದ ಮೇಲೆ ಹವಾಮಾನ ಬದಲಾವಣೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತಾಗಿ ಅಧ್ಯಯನವೊಂದನ್ನು ನಡೆಸಿದೆ. ಈ ಅಧ್ಯಯನವು ಕಪಲ್ಡ್ ಮಾಡೆಲ್ ಇಂಟರ್‌ಕಂಪರಿಸನ್ ಪ್ರಾಜೆಕ್ಟ್ ಹಂತ 6 ದಿಂದ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಬಳಸಿಕೊಂಡಿದೆ. ಈ ಅಧ್ಯಯನವು ದಕ್ಷಿಣ ಭಾಗದ ಪಶ್ಚಿಮ ಘಟ್ಟಗಳು ಮತ್ತು ಪಶ್ಚಿಮ ಕರಾವಳಿ ಬಯಲು ಪ್ರದೇಶಗಳ ಮೇಲೆ ಕೇಂದ್ರೀಕರಿಸಿದೆ.
ವಿವಿಧ ಮಾದರಿಯ ದತ್ತಾಂಶಗಳ ವಿಶ್ಲೇಷಣೆ ಮೂಲಕ ಪ್ರಸ್ತುತ ಅಧ್ಯಯನವು ಈ ಪ್ರದೇಶವು ಪ್ರತಿ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಗೆ ಸಾಮಾನ್ಯವಾಗಿ ಇಲ್ಲಿ ವಾರ್ಷಿಕವಾಗಿ ಬೀಳುವ ಮಳೆಯ ಪ್ರಮಾಣದಿಂದ 20% ರಷ್ಟು ಹೆಚ್ಚು ಮಳೆಯನ್ನು ಪಡೆಯುವ ಸಾಧ್ಯತೆ ಇದೆ ಎನ್ನುತ್ತದೆ. ಅದೇ ರೀತಿ, ತೀವ್ರ ಮಳೆಯ ಸಾಧ್ಯತೆಗಳು ಪ್ರತಿ ಡಿಗ್ರಿ ತಾಪಮಾನ ಏರಿಕೆಗೆ 16%ರಷ್ಟು ಸಂಭವಿಸಬಹುದಾದ ಸಾಧ್ಯತೆ ಇದೆ ಎಂದು ಸೂಚಿಸುತ್ತದೆ. ಜಲಾನಯನ ಪ್ರದೇಶಗಳು ಈ ಮೊದಲಿನ ಅವಧಿಗೆ ಹೋಲಿಸಿದರೆ, ಮಳೆಗಾಲ (ಜೂನ್-ಸೆಪ್ಟೆಂಬರ್) ಅವಧಿಯಲ್ಲಿ ಗಮನಾರ್ಹವಾಗಿ ಹೆಚ್ಚು ಆರ್ದ್ರತೆ ಮತ್ತು ಬೇಸಗೆಯಲ್ಲಿ ಹೆಚ್ಚು ಶುಷ್ಕತೆಯನ್ನು ಅನುಭವಿಸುತ್ತವೆ, ಇದು ಪ್ರವಾಹ/ಭೂಕುಸಿತಗಳು ಮತ್ತು ಬರಗಳಿಗೆ ಸಂಬಂಧಿಸಿದ ಅಪಾಯಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನವು ಆತಂಕವನ್ನು ವ್ಯಕ್ತಪಡಿಸುತ್ತದೆ.
ಪಶ್ಚಿಮ ಘಟ್ಟಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆ ಉಂಟು ಮಾಡುವ ಹಾನಿಯ ಪ್ರಮಾಣ ಹೆಚ್ಚಿನ ಮಟ್ಟದ್ದು ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. 2050ರ ವೇಳೆಗೆ ಹವಾಮಾನ ವೈಪರೀತ್ಯದಿಂದಾಗಿ ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಶೇಕಡಾ 33 ರಷ್ಟು ಭಾಗ ನಷ್ಟವಾಗುವುದು ಖಂಡಿತ. ಇದರಿಂದಾಗಿ ಇಲ್ಲಿನ ಕಾಡುಗಳು ನಿತ್ಯಹರಿದ್ವರ್ಣದಿಂದ ಎಲೆ ಉದುರುವ ಕಾಡುಗಳಾಗಿ ಬದಲಾಗುತ್ತವೆ. ಅಲ್ಪಾವಧಿಯಲ್ಲಿ ಹೆಚ್ಚಿನ ತೀವ್ರತೆಯಿಂದ ಮಳೆ ಸುರಿದರೆ ಅದು ಇನ್ನು 30 ವರ್ಷಗಳಲ್ಲಿ ಈಗಿರುವ ನೀರಿನ ಹರಿವಿನ ಮಾರ್ಗಗಳನ್ನು ಮುಳುಗಿಸುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಾರೆ. ಮಳೆಯ ತೀವ್ರತೆಯಿಂದ ಹೆಚ್ಚಿದ ನೀರಿನ ಹರಿವಿನೊಂದಿಗೆ ರಭಸವಾಗಿ ಹರಿಯುವ ನದಿಗಳು ತಮ್ಮ ನದಿಪಾತ್ರವನ್ನು ಹಿಗ್ಗಿಸುತ್ತಾ ಹೋಗುತ್ತವೆ. ತಮ್ಮ ಹರಿಯುವಿಕೆಯ ಮಾರ್ಗದ ಭೂಪ್ರದೇಶದಲ್ಲಿ ಪಶ್ಚಿಮಘಟ್ಟದಂತಹ ಪ್ರದೇಶದಲ್ಲಿ ಅಡೆತಡೆಗಳನ್ನು ಎದುರಿಸಿದಾಗ ಜಲಪ್ರಳಯಗಳು ಸಂಭವಿಸುತ್ತವೆ.
ಪಶ್ಚಿಮ ಘಟ್ಟ ಪ್ರದೇಶಗಳ ಭೂಮಿಯನ್ನು ಹೆಚ್ಚು ಹೆಚ್ಚು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದು, ಅರಣ್ಯನಾಶ, ಇವೇ ಮುಂತಾದವು ಇಲ್ಲಿನ ತಾಪಮಾನ 0.5 ದಿಗ್ರಿ ಸೆಲ್ಸಿಯಸ್ ಹೆಚ್ಚಾಗುವಂತೆ ಮಾಡಿದೆ ಜೊತೆಗೆ ಒಟ್ಟಾರೆಯಾಗಿ ಮಳೆ ಬೀಳುತ್ತಿದ್ದ ದಿನಗಳನ್ನು ಕಡಿಮೆ ಮಾಡಿದೆ ಆದರೆ ಅದೇ ಪ್ರಮಾಣದ ಮಳೆ ಕಡಿಮೆ ದಿನಗಳಲ್ಲಿ ಒಮ್ಮೆಲೆ ಬಿದ್ದು ದುರಂತಗಳಿಗೆ ದಾರಿ ಮಾಡಿಕೊಡುತ್ತಿವೆ ಎಂದು ಅಧ್ಯಯನಗಳು ಹೇಳುತ್ತವೆ.
ಕುಂದುತ್ತಿರುವ ʻಕಾರ್ಬನ್ ಸಿಂಕ್ʼ ಸಾಮರ್ಥ್ಯ
ಅರಣ್ಯ ಪರಿಸರ ವ್ಯವಸ್ಥೆಗಳು ಬೃಹತ್ ʻಇಂಗಾಲದ ಸಿಂಕ್ʼ (ಕಾರ್ಬನ್ ಡೈ ಆಕ್ಸೈಡ್/ಇಂಗಾಲವನ್ನು ಹೀರಿಕೊಳ್ಳುವ ) ಗಳಾಗಿರುವುದರಿಂದ ಅವು ಮಾನವರ ಉಳಿವಿಗೆ ಮುಖ್ಯವಾಗಿವೆ. ಕಾಡುಗಳು ವಾತಾವರಣದಿಂದ ಇಂಗಾಲವನ್ನು ಹೀರಿಕೊಳ್ಳುತ್ತವೆ ಮತ್ತು ಅದನ್ನು ಮರದಲ್ಲಿ, ಬೇರಿನಲ್ಲಿ ಮತ್ತು ಮಣ್ಣಿನಲ್ಲಿ ಸಂಗ್ರಹಿಸುತ್ತವೆ. ಇಂಗಾಲವನ್ನು ಹೀರಿಕೊಳ್ಳುವ ಮತ್ತು ಸಂಗ್ರಹಣೆಯ ಈ ಪ್ರಕ್ರಿಯೆಯನ್ನು ʻಇಂಗಾಲದ ಸೀಕ್ವೆಸ್ಟ್ರೇಶನ್ʼ ಎಂದು ಕರೆಯಲಾಗುತ್ತದೆ.

2018 ಮತ್ತು 2031ರ ನಡುವೆ ಭೂ-ಬಳಕೆಯ ಬದಲಾವಣೆಗಳಿಂದಾಗಿ ಅರಣ್ಯ ವ್ಯಾಪ್ತಿಯ ನಿರಂತರ ಕುಸಿತದಿಂದಾಗಿ ಈ ಘಟ್ಟಶ್ರೇಣಿಯು ಇಂಗಾಲವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಐಐಟಿ ಬಾಂಬೆ ಮತ್ತು ಇತರ ಸಂಸ್ಥೆಗಳು ನಡೆಸಿದ ಸಂಶೋಧನೆಗಳು ಪಶ್ಚಿಮ ಘಟ್ಟವನ್ನು ಹವಾಮಾನ ಬದಲಾವಣೆಯ ತೀವ್ರ ಪರಿಣಾಮಕ್ಕೆ ಒಳಗಾದ ಅರಣ್ಯಪ್ರದೇಶ ಎಂಬುದಾಗಿ ಗುರುತಿಸಿದೆ. ಈ ಅಧ್ಯಯನ ಇಲ್ಲಿನ ಇಂಗಾಲದ ಸಿಂಕ್ ಸಾಮರ್ಥ್ಯ ಕಡಿಮೆಯಾಗಿದೆ ಎನ್ನುತ್ತದೆ. ಇದು ಮತ್ತೆ ವಾತಾವರಣದಲ್ಲಿ ಇಂಗಾಲದ ಹೆಚ್ಚಳಕ್ಕೆ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ.
ಪ್ರಸ್ತುತ ಭಾರತವು ವಿಶ್ವದಾದ್ಯಂತ ಹೊರಹೊಮ್ಮುವ ಹಸಿರುಮನೆ ಅನಿಲದಲ್ಲಿ ಶೇಕಡಾ 7 ರಷ್ಟು ಹೊರಸೂಸುತ್ತದೆ. ಚೀನಾ ಅತೀ ಹೆಚ್ಚು ಎಂದರೆ 27 ಶೇಕಡಾ, ನಂತರ ಯುಎಸ್‌ಎ 15 ಶೇಕಡಾ ಮತ್ತು ಯುರೋಪಿಯನ್ ಒಕ್ಕೂಟ 10 ಶೇಕಡಾ ಇಂಗಾಲವನ್ನು ಹೊರಸೂಸುತ್ತದೆ. ಭಾರತ ನಾಲ್ಕನೇ ಅತಿ ಹೆಚ್ಚು ಇಂಗಾಲ ಹೊರಸೂಸುವ ದೇಶವಾಗಿದೆ. ಇಷ್ಟೇ ಅಲ್ಲದೆ ಪ್ರತಿ ವರ್ಷ, ಪಶ್ಚಿಮಘಟ್ಟಗಳ ಅಡಿಯಲ್ಲಿ ಬರುವ ರಾಜ್ಯಗಳು ವಾರ್ಷಿಕ 37.5 ಮಿಲಿಯನ್ ಟನ್ ಹೆಚ್ಚಿನ ಪ್ರಮಾಣದ ಇಂಗಾಲವನ್ನು ಹೊರಸೂಸುತ್ತವೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಜೀವವೈವಿಧ್ಯದ ತಾಣವಾಗಿರುವ ಈ ಪಶ್ಚಿಮ ಘಟ್ಟಗಳು ಮುಂದಿನ ದಶಕಗಳಲ್ಲಿ ತಮ್ಮ ಇಂಗಾಲವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ವಾರ್ಷಿಕವಾಗಿ 7.5 ಶೇಕಡಾರಷ್ಟು ಕಳೆದುಕೊಳ್ಳಲಿದೆ ಎನ್ನುತ್ತದೆ. ಏಕಜಾತೀಯ ಸಸ್ಯಗಳ ಬೆಳೆಸುವುದು, ಕೃಷಿ ಭೂಮಿಯ ವಿಸ್ತರಣೆ ಮತ್ತು ಗಣಿಗಾರಿಕೆ ಹಾಗು ಜಲವಿದ್ಯುತ್ ಯೋಜನೆಯಂತಹ ಇತರ ಅಭಿವೃದ್ಧಿ ಚಟುವಟಿಕೆಗಳು 2031ರ ವೇಳೆಗೆ ಇಲ್ಲಿಯ ಕಾರ್ಬನ್ ಸಿಂಕ್ ಸಾಮರ್ಥ್ಯವನ್ನು ಇನ್ನಷ್ಟು ಕುಗ್ಗಿಸಬಹುದು.
ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದ ಸಮಯದಲ್ಲಿ, 2030ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೇಕಡಾ 33 ರಿಂದ ಶೇಕಡಾ 35ರಷ್ಟು ಕಡಿಮೆ ಮಾಡಲು ಭಾರತ ಬದ್ಧವಾಗಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಘಟ್ಟಗಳ ಇಂಗಾಲವನ್ನು ಬೇರ್ಪಡಿಸುವ ಸಾಮರ್ಥ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಕೊಡಗು ಮತ್ತು ವಯನಾಡಿನಲ್ಲಿ ಮಳೆ ಸೃಷ್ಟಿಸಿದ ವಿಕೋಪಗಳು ಪಶ್ಚಿಮ ಘಟ್ಟ ಶ್ರೇಣಿಯ ಜನರು ಪ್ರತಿ ಮಳೆಗಾಲವನ್ನೂ ಈ ಮಳೆ ಅದಿನ್ಯಾವ ದುರಂತ ಹೊತ್ತು ತರಲಿದೆಯೋ ಎಂದು ಆತಂಕದಿಂದ ಎದುರು ನೋಡುವಂತಾಗಿದೆ. ʻಪಶ್ಚಿಮ ಘಟ್ಟ ಉಳಿಸಿʼ ಅಭಿಯಾನ ಹಾಗು ಮಾಧವ ಗಾಡ್ಗೀಳ್ ವರದಿಯ ಹಕ್ಕೊತ್ತಾಯಗಳು ಈಗಲಾದರೂ ಅನುಷ್ಠಾನಗೊಳ್ಳುವಂತಾದರೆ ಪಶ್ಚಿಮ ಘಟ್ಟಗಳು ನಿಟ್ಟುಸಿರು ಬಿಟ್ಟಾವು.
ಇದನ್ನೂ ಓದಿ ಭೂಮ್ತಾಯಿ | ಬಿಸಿಗಾಳಿಯ ಸವಾಲು: ಬಾಣಲೆಯಿಂದ ಬೆಂಕಿಗೆ ಬಿದ್ದ ಬದುಕು
ಇದನ್ನೂ ಓದಿ ಭೂಮ್ತಾಯಿ | ಹವಾಮಾನ ಬದಲಾವಣೆಯ ಸುಳಿಯೊಳಗೆ ಸಿಲುಕಿರುವ ಆಹಾರ ಭದ್ರತೆ
ಇದನ್ನೂ ಓದಿ ಭೂಮ್ತಾಯಿ | ಎಚ್ಚರಿಕೆ: ಇದು ಹಿಮನದಿಗಳು ಕರಗುವ ಸಮಯ!

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ