ಈ ದಿನ ಸಂಪಾದಕೀಯ | ಸರ್ವಾಧಿಕಾರಿಗಳ ಪತನಕ್ಕೆ ಕನ್ನಡಿ ಹಿಡಿದ ಬಾಂಗ್ಲಾದೇಶ

Date:

Advertisements

ಸರ್ವಾಧಿಕಾರಿಗಳ ಪಾಲಿಗೆ ಅಧಿಕಾರ ಎಂಬುದು ಅಪ್ಪಟ ಅಮಲು. ಇದರ ನಶೆ ಒಮ್ಮೆ ನೆತ್ತಿಗೇರಿದರೆ ಇಳಿಯುವ ಮಾತೇ ಇಲ್ಲ. ದರ್ಪ, ದಮನ, ದೌರ್ಜನ್ಯ, ದಬ್ಬಾಳಿಕೆಯ ಹತಾರುಗಳ ಬಳಕೆಗೆ ಹಿಂಜರಿಯುವುದೂ ಇಲ್ಲ. ಅಧಿಕಾರವೆಂಬುದು ವ್ಯಕ್ತಿಗಳನ್ನು- ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತದೆ. ಲಂಗು ಲಗಾಮಿಲ್ಲದ ಅಪ್ಪಟ ನಿರಂಕುಶ ಅಧಿಕಾರ ಲಂಗು ಲಗಾಮೇ ಇಲ್ಲದಷ್ಟು ಭ್ರಷ್ಟಗೊಳಿಸುತ್ತದೆ ಎಂಬ ಮಾತು ಸರ್ವಕಾಲಕ್ಕೂ ಸತ್ಯ.

ಭಾರತದ ಬಹುಮುಖ್ಯ ನೆರೆಹೊರೆ ಬಾಂಗ್ಲಾದೇಶ. ಸ್ವಾತಂತ್ರ್ಯಪೂರ್ವ ಭಾರತದ ಪೂರ್ವ ಬಂಗಾಳ. ದೇಶವಿಭಜನೆಯ ಹೊತ್ತಿನಲ್ಲಿ ಪಾಕಿಸ್ತಾನದ ಪಾಲಾಯಿತು. ಪೂರ್ವ ಪಾಕಿಸ್ತಾನ ಎನಿಸಿಕೊಂಡಿತು. ಇಲ್ಲಿನ ಶೇ.99ರಷ್ಟು ಜನಸಂಖ್ಯೆ ಬಂಗಾಳಿ ಭಾಷಿಕರು. 1952ರಲ್ಲಿ ಆರಂಭವಾದ ಬಂಗಾಳಿ ಭಾಷಾ ಆಂದೋಲನ 1971ರಲ್ಲಿ ವಿಮೋಚನಾ ಹೋರಾಟದ ರೂಪ ತಳೆಯಿತು.

ಪಶ್ಚಿಮ ಪಾಕಿಸ್ತಾನವು ಬಂಗಾಳಿ ಭಾಷಿಕರ ಪೂರ್ವ ಪಾಕಿಸ್ತಾನದ ಮೇಲೆ ಬಲವಂತವಾಗಿ ಉರ್ದುವನ್ನು ರಾಷ್ಟ್ರೀಯ ಭಾಷೆ ಎಂದು ಹೇರಿತ್ತು. ತನ್ನ ತಾಯ್ನುಡಿ ಬಂಗಾಳಿಯ ಮೇಲೆ ನಡೆದಿದ್ದ ಈ ಹಲ್ಲೆಯನ್ನು ಪ್ರತಿಭಟಿಸಿ ಪೂರ್ವ ಪಾಕಿಸ್ತಾನ ಇಡಿಯಾಗಿ ಭುಗಿಲೆದ್ದಿತ್ತು. ಉರ್ದುವಿನ ಬಲವಂತ ಹೇರಿಕೆ ವಿರುದ್ಧ ಸಿಡಿದೆದ್ದ ಆಂದೋಲನ ಅಂತಿಮವಾಗಿ ಪ್ರತ್ಯೇಕ ರಾಷ್ಟ್ರೀಯತೆಯ ಆಂದೋಲನವಾಗಿ ಪರಿಣಮಿಸಿತು. ಉರ್ದು ಹೇರಿಕೆ ವಿರುದ್ಧ ನಡೆದ ವಿದ್ಯಾರ್ಥಿ ಆಂದೋಲನದ ನೇತೃತ್ವ ವಹಿಸಿದ್ದ ಶೇಖ್‌ ಮುಜಿಬುರ್ ರೆಹಮಾನ್ ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆದ ಹೋರಾಟದ ನಾಯಕತ್ವವನ್ನೂ ವಹಿಸಿದ್ದರು. ಪೂರ್ವ ಪಾಕಿಸ್ತಾನವು ಸ್ವತಂತ್ರ ಬಾಂಗ್ಲಾ ದೇಶವಾಗಿ ಉದಯಿಸಿತು.

ಭಾರತದ ಅಂದಿನ ಇಂದಿರಾ ಗಾಂಧಿ ಸರ್ಕಾರ ಈ ಹೋರಾಟವನ್ನು ಬೆಂಬಲಿಸಿ ಪಾಕಿಸ್ತಾನದೊಂದಿಗೆ ಯುದ್ಧ ನಡೆಸಿ ಗೆದ್ದಿತ್ತು. ಶೇಖ್‌ ಮುಜಿಬುರ್ ರೆಹಮಾನ್ ನಾಯಕತ್ವದಲ್ಲಿ ಬಾಂಗ್ಲಾದೇಶ ಎಂಬ ಹೊಸ ದೇಶ ಉದಯವಾಗಿತ್ತು. ಬಡತನ, ಭ್ರಷ್ಟಾಚಾರ, ಸರ್ವಾಧಿಕಾರ, ಇಸ್ಲಾಂ ಮೂಲಭೂತವಾದದಿಂದ ತ್ರಸ್ತವಾಗಿರುವ ದೇಶವಿದು.

ಕಳೆದ ಐದು ದಶಕಗಳ ಇತಿಹಾಸದಲ್ಲಿ ಹಲವು ಸಲ ತೀವ್ರ ತಳಮಳಗಳನ್ನು ಎದುರಿಸಿರುವ ದೇಶ. ಮಿಲಿಟರಿ ಆಡಳಿತಗಳು ಮತ್ತು ಚುನಾವಣೆಗಳ ನಡುವೆ ಜೀಕುತ್ತಿರುವ ದುರ್ಬಲ ಜನತಂತ್ರ. ಮಿಲಿಟರಿ ಆಡಳಿತ ಮಾತು ಬಂದರೆ ತಾನು ಸಿಡಿದು ಬೇರೆಯಾದ ಪಾಕಿಸ್ತಾನದ ಕರಿನೆರಳಿನಿಂದ ಈಗಲೂ ಹೊರಬಿದ್ದಿಲ್ಲ ಈ ದೇಶ. ಹತ್ಯೆ, ಹಿಂಸಾಚಾರ, ಸರ್ವಾಧಿಕಾರ, ರಕ್ತಪಾತ, ಸೆರೆಮನೆ, ಮಿಲಿಟರಿ ಆಡಳಿತ, ಚುನಾವಣಾ ಅಕ್ರಮಗಳು ಬಾಂಗ್ಲಾದೇಶ ರಾಜಕಾರಣಕ್ಕೆ ಚಿರಪರಿಚಿತ. ಬಾಂಗ್ಲಾದೇಶ ವಿಮೋಚನಾ ಹೋರಾಟದ ಅಗ್ರಣಿ ಆಗಿದ್ದ ಶೇಖ್ ಮುಜಿಬುರ್ ರೆಹಮಾನ್ ಅವರನ್ನೇ ಹತ್ಯೆ ಮಾಡಿತ್ತು ಬಾಂಗ್ಲಾಸೇನೆ.

ಮೊನ್ನೆ ಮೊನ್ನೆಯ ತನಕ ಈ ದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಪ್ರಾಣ ಉಳಿಸಿಕೊಳ್ಳಲು ಪರಾರಿಯಾಗಿದ್ದಾರೆ. ಭಾರತದಲ್ಲಿ ತಲೆಮರೆಸಿಕೊಂಡಿರುವ ಅನಧಿಕೃತ ವರದಿಗಳಿವೆ. ಜನತಂತ್ರದ ಹೆಸರಿನಲ್ಲಿ ದಮನ ದಬ್ಬಾಳಿಕೆಯನ್ನು ನಡೆಸಿದ್ದ ಈ ಸರ್ವಾಧಿಕಾರಿ ಪ್ರಧಾನಿಯ ವಿರುದ್ಧ ಪ್ರಚಂಡ ಜನಾಂದೋಲನ ಸಿಡಿದಿತ್ತು. ಜನಶಕ್ತಿ ಭೋರ್ಗರೆದು ಉಕ್ಕಿ ಹರಿದರೆ ಸರ್ವಾಧಿಕಾರಿಗಳಿಗೆ ತಲೆ ಮರೆಸಿಕೊಳ್ಳಲೂ ತಾವು ಸಿಗುವುದಿಲ್ಲ ಎಂಬುದು ಐತಿಹಾಸಿಕ ಸತ್ಯ. ಈ ಚರಿತ್ರೆ ಮಗ್ಗುಲು ಹೊರಳಿಸುತ್ತಲೇ ಇರುತ್ತದೆ. ಆದರೆ ಸರ್ವಾಧಿಕಾರಿಗಳು ಪಾಠ ಕಲಿಯುವುದಿಲ್ಲ. ಸರ್ವಾಧಿಕಾರಿಗಳ ಪಾಲಿಗೆ ಅಧಿಕಾರ ಎಂಬುದು ಅಪ್ಪಟ ಅಮಲು. ಇದರ ನಶೆ ಒಮ್ಮೆ ನೆತ್ತಿಗೇರಿದರೆ ಇಳಿಯುವ ಮಾತೇ ಇಲ್ಲ. ದರ್ಪ ದಮನ ದೌರ್ಜನ್ಯ ದಬ್ಬಾಳಿಕೆಯ ಹತಾರುಗಳ ಬಳಕೆಗೆ ಹಿಂಜರಿಯುವುದೂ ಇಲ್ಲ. ಅಧಿಕಾರವೆಂಬುದು ವ್ಯಕ್ತಿಗಳನ್ನು- ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತದೆ. ಲಂಗು ಲಗಾಮಿಲ್ಲದ ಅಪ್ಪಟ ನಿರಂಕುಶ ಅಧಿಕಾರ ಲಂಗು ಲಗಾಮೇ ಇಲ್ಲದಷ್ಟು ಭ್ರಷ್ಟಗೊಳಿಸುತ್ತದೆ ಎಂಬ ಮಾತು ಸರ್ವಕಾಲಕ್ಕೂ ಸತ್ಯ.

ಇಲ್ಲಿ ಭ್ರಷ್ಟ ಎಂಬ ಮಾತು ಕೇವಲ ಹಣಕಾಸಿಗೆ ಸೀಮಿತವಾದದ್ದಲ್ಲ. ತಮ್ಮ ಮನಸ್ಸು ಬಯಸಿದ್ದನ್ನು ಮಾತ್ರ ಕಾಣುತ್ತಾರೆ, ಬೇಕಾದ್ದನ್ನು ಮಾತ್ರ ಕೇಳಿಸಿಕೊಳ್ಳುತ್ತಾರೆ. ತಮ್ಮ ಮನದ ಮಾತೇ ದೇಶದ ಮನಸ್ಸಿನ ಮಾತು ಎಂದು ಭ್ರಮೆಯಲ್ಲಿ ತೇಲುತ್ತಾರೆ. ಅವರನ್ನು ಜಗ್ಗಿಸಿ ಬಲವಂತದ ಭೂಸ್ಪರ್ಶ ಮಾಡಿಸಿ ಕಠೋರ ವಾಸ್ತವಕ್ಕೆ ಕುಕ್ಕುವ ಶಕ್ತಿ ಇರುವುದು ಜನಸಮೂಹಗಳಿಗೆ ಮಾತ್ರ.

ಮೂರು ಅವಧಿಗಳ ಹದಿನೈದು ವರ್ಷಗಳ ಸತತ ಅಧಿಕಾರದ ನಂತರ ನಾಲ್ಕನೆಯ ಅವಧಿಗೂ ‘ಆಯ್ಕೆ’ ಆಗಿದ್ದರು ಹಸೀನಾ. ಭಿನ್ನದನಿಗಳನ್ನು ಬಗ್ಗು ಬಡಿಯತೊಡಗಿದ್ದರು. ಅಕ್ರಮಗಳ ಮೂಲಕ ಚುನಾವಣೆ ಗೆಲ್ಲುವ ಆರೋಪಗಳನ್ನು ಅಪನಂಬಿಕೆಗಳನ್ನು ಹೊತ್ತಿದ್ದರು. ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಹಿಂಸೆ, ಬೆದರಿಕೆ, ಕಿರುಕುಳ, ಬಂಧನ, ಸುಳ್ಳು ಮೊಕದ್ದಮೆಗಳನ್ನು ಎದುರಿಸುತ್ತ ಬಂದಿವೆ. ಹುಸಿ ಆಪಾದನೆಗಳನ್ನು ಹೊರಿಸಿ ತಮ್ಮ ರಾಜಕೀಯ ವಿರೋಧಿಗಳನ್ನು, ಪತ್ರಕರ್ತರನ್ನು, ಜನಪರ ಹೋರಾಟಗಾರರನ್ನು ಜೈಲಿಗೆ ಅಟ್ಟಿದ್ದರು. ಹಸೀನಾ ಸರ್ಕಾರದ ಚುನಾವಣಾ ನ್ಯಾಯಬದ್ಧತೆಯನ್ನು ಬಾಂಗ್ಲಾದೇಶದ ವಿರೋಧ ಪಕ್ಷಗಳು ಪ್ರಶ್ನಿಸಿವೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಹೊಸದಾಗಿ ನಡೆಸಬೇಕೆಂದು ಆಗ್ರಹಪಡಿಸಿವೆ. ಅಂತಾರಾಷ್ಟ್ರೀಯ ಸಮುದಾಯ ಕೂಡ ಶಂಕೆ ಪ್ರಕಟಿಸಿದೆ. ಮತದಾನಕ್ಕೆ ಮುನ್ನ ವ್ಯಾಪಕ ಹಿಂಸಾಚಾರದಲ್ಲಿ ಸಾವು ನೋವುಗಳು ಸಂಭವಿಸುತ್ತ ಬಂದಿವೆ. ಹಸೀನಾ ಸರ್ಕಾರದ ಚುನಾವಣಾ ನ್ಯಾಯಬದ್ಧತೆಯನ್ನು ಬಾಂಗ್ಲಾದೇಶದ ವಿರೋಧ ಪಕ್ಷಗಳು ಪ್ರಶ್ನಿಸಿದ್ದವು. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಹೊಸದಾಗಿ ನಡೆಸಬೇಕೆಂದು ಆಗ್ರಹಪಡಿಸಿದ್ದವು. ಅಂತಾರಾಷ್ಟ್ರೀಯ ಸಮುದಾಯ ಕೂಡ ಶಂಕೆ ಪ್ರಕಟಿಸಿತ್ತು. ಮತದಾನಕ್ಕೆ ಮುನ್ನ ಜರುಗಿದ್ದ ವ್ಯಾಪಕ ಹಿಂಸಾಚಾರದಲ್ಲಿ ಸಾವು ನೋವುಗಳು ಸಂಭವಿಸಿದ್ದವು.

ಆದರೆ ಹಸೀನಾ ಆಡಳಿತದಲ್ಲಿ ಬಾಂಗ್ಲಾದೇಶ ಆರ್ಥಿಕ ದರ ವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಅಭಿವೃದ್ಧಿಯನ್ನು ಕಂಡಿದೆ ಎಂಬುದನ್ನು ಅವರ ಕಡುವಿರೋಧಿಗಳೂ ಒಪ್ಪುತ್ತಾರೆ. ಆದರೆ ಅಭಿವೃದ್ಧಿಗಾಗಿ ಜನತಂತ್ರದ ದುಬಾರಿ ಬೆಲೆ ತೆರುವುದು ಅನಿವಾರ್ಯ ಎಂಬ ವಾದವನ್ನು ಒಪ್ಪುವುದು ಸಾಧ್ಯವಿಲ್ಲ. ಉದ್ಯೋಗಾವಕಾಶಗಳೇ ಇಲ್ಲದ ಅಭಿವೃದ್ಧಿಗೆ ಯಾವ ಅರ್ಥವೂ ಇಲ್ಲ. ಈಗಿನ ಆಶಾಂತಿಯ ಹಿಂದೆ ಹಣದುಬ್ಬರ, ನಿರುದ್ಯೋಗದ ತೀವ್ರ ಅತೃಪ್ತಿಯಿದೆ.

ಪ್ರತಿಭಟನಾಕಾರರಿಗೆ ದೇಶದ್ರೋಹಿಗಳು ಮತ್ತು ರಜಾಕಾರರು (ಪಾಕಿಸ್ತಾನಿ ಸೇನೆಯ ಬೆಂಬಲವಿರುವ ಅತ್ಯಾಚಾರಿಗಳು) ಎಂಬ ಹಣೆಪಟ್ಟಿಯನ್ನು ಹಸೀನಾ ಹಚ್ಚಿ ಉರಿಯುವ ಬೆಂಕಿಯನ್ನು ಮತ್ತಷ್ಟು ಕೆದಕಿದ್ದರು. 1971ರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಕ್ ಸೇನೆ 30 ಲಕ್ಷ ಬಾಂಗ್ಲಾದೇಶಿಗಳ ಮಾರಣಹೋಮ ನಡೆಸಿತ್ತು. ಅತ್ಯಂತ ಕ್ರೂರ ಅತ್ಯಾಚಾರಗಳನ್ನು ಎಸಗಿತ್ತು. ರಜಾಕಾರರು ಎಂಬ ಪದಪ್ರಯೋಗದ ಹಿನ್ನೆಲೆಯಿದು.

ತಮ್ಮ ಎಲ್ಲ ಕುಕೃತ್ಯಗಳಿಗೆ ತಮ್ಮ ತಂದೆಯೂ ಆದ ಬಾಂಗ್ಲಾ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರ ಹೆಸರನ್ನು ಗುರಾಣಿಯಾಗಿ ಹಿಡಿದಿದ್ದರು. ರೋಸಿ ಹೋದ ಜನಮನದಲ್ಲಿ ಮುಜಿಬುರ್ ರೆಹಮಾನ್ ಅವರೂ ಖಳನಾಯಕರಾಗಿ ಹೋಗಿದ್ದಾರೆ. ಬಂಗಬಂಧು ಎಂಬ ಬಿರುದಾಂಕಿತ ಮುಜಿಬುರ್ ರೆಹಮಾನ್ ಅವರ ಪ್ರತಿಮೆಗಳನ್ನು ಕುಟ್ಟಿ ಕೆಡವಲಾಗುತ್ತಿದೆ. ತನ್ನಿಂದ ದೂರ ಸಿಡಿದು ಸ್ವತಂತ್ರವಾದ ಬಾಂಗ್ಲಾದೇಶವನ್ನು ಪಾಕಿಸ್ತಾನ ಎಂದಿಗೂ ಸಹಿಸಿದ್ದಿಲ್ಲ. ವರ್ತಮಾನದ ಪ್ರತಿಭಟನೆಗಳ ಬೆಂಕಿಗೆ ಎಣ್ಣೆ ಸುರಿಯುತ್ತಿದೆ ಎಂಬ ಮಾತುಗಳಲ್ಲಿ ಸತ್ಯಾಂಶ ಇದ್ದಿರಬಹುದು. ತಮ್ಮ ಎಲ್ಲ ಅಕೃತ್ಯಗಳ ನಡುವೆಯೂ ಸೆಕ್ಯೂಲರಿಸಂನ ಬಲಿಷ್ಠ ಹಂದರವನ್ನು ಹಬ್ಬಿಸಿದ್ದ ಶ್ರೇಯಸ್ಸು ಹಸೀನಾ ಅವರದು. ಇದೀಗ ಇಸ್ಲಾಂ ಮೂಲಭೂತವಾದಿ ಶಕ್ತಿಗಳು ಈ ಜಾತ್ಯತೀತ ಭಾವನೆಗೆ ಬೆಂಕಿ ಇಟ್ಟಾರು ಎಂಬ ಕಳವಳ ಕಾಡಿದ್ದರೆ ಅದು ನಿರಾಧಾರವೇನೂ ಅಲ್ಲ.

ಒಂದೊಮ್ಮೆ ಬಾಂಗ್ಲಾ ದೇಶದ ಯುವಶಕ್ತಿಯ ಭರವಸೆ ಎನಿಸಿದ್ದವರು ಶೇಖ್ ಹಸೀನಾ. ಜನತಂತ್ರದ ಪರ ಆಂದೋಲನಗಳ ಮುಂಚೂಣಿಯಲ್ಲಿ ನಿಂತು ಕಾದಾಡಿದ್ದವರು. ಪ್ರಧಾನಿಯಾಗಿ ಹಿಂದುಳಿದ ಬಾಂಗ್ಲಾ ದೇಶದ ಅರ್ಥವ್ಯವಸ್ಥೆಗೆ ಹೊಸ ಉಸಿರು ತುಂಬಿದ್ದವರು. ಸತತ 15 ವರ್ಷಗಳ ಅಧಿಕಾರ ಅವರನ್ನು ಎಣೆಯಿಲ್ಲದಷ್ಟು ಭ್ರಷ್ಟಗೊಳಿಸಿತು. ಸಿಡಿದು ಗುಡುಗಿದ ವಿದ್ಯಾರ್ಥಿ ಚಳವಳಿ ಕಳೆದ ಎರಡು ತಿಂಗಳಲ್ಲಿ ಪ್ರಚಂಡ ಪ್ರವಾಹವಾಗಿ ಮೈದುಂಬಿ ಅವರ ಹುಟ್ಟಡಗಿಸಿದೆ. ಅನಧಿಕೃತ ಅಂಕಿಅಂಶಗಳ ಪ್ರಕಾರ ಸಾವಿರಕ್ಕೂ ಹೆಚ್ಚಿನ ಪ್ರತಿಭಟನಾಕಾರರು ಈ ಆಂದೋಲನದಲ್ಲಿ ಹುತಾತ್ಮರಾಗಿದ್ದಾರೆ.

2009ರಲ್ಲಿ ಭಯೋತ್ಪಾದಕ ಶಿಬಿರಗಳನ್ನು ಧ್ವಂಸ ಮಾಡಿ, ಭಾರತ ವಿರೋಧಿ ಸಂಘಟನೆಗಳ ಮುಖ್ಯಸ್ಥರನ್ನೇ ಹಿಡಿದು ಕೊಟ್ಟಿದ್ದರು ಹಸೀನಾ. ಮುಸ್ಲಿಮ್ ತೀವ್ರವಾದವನ್ನು ಹಣಿದು ಹತ್ತಿಕ್ಕಿದ್ದರು. ಆದರೆ ಈ ದಮನಕಾರಿ ತಂತ್ರಗಳನ್ನು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧವೂ ಬಳಸಿಕೊಂಡದ್ದು ಅವರ ಪತನಕ್ಕೆ ದಾರಿಯಾಯಿತು. ಮದ್ದಿಕ್ಕುವ ಮಾಟಗಾರ ಮಾಂತ್ರಿಕರು ಯಾರೂ ಸಿಗದೆ ಹೋದರೆ ತಮ್ಮ ಮನೆಮಂದಿಗೇ ಮದ್ದು ಉಣಿಸುತ್ತಾರಂತೆ ಎಂಬ ಗಾದೆ ಮಾತೊಂದಿದೆ. ಆಗಿ ಹೋಗಿರುವ ಹತ್ತಾರು ಸರ್ವಾಧಿಕಾರಿಗಳು ಈ ಮಾತನ್ನು ನಿಜವಾಗಿಸಿದ್ದಾರೆ. ಹಸೀನಾ ಕೂಡ ಅಂತಹ ಸಾಲನ್ನು ಸೇರಿದ್ದಾರೆ.

ಕಳೆದ ತಿಂಗಳು ಸ್ಫೋಟಿಸಿದ ಮೀಸಲಾತಿ ವಿರೋಧಿ ಆಂದೋಲನ ಅವರ ದಮನ ಪರ್ವದ ಬುಡಕ್ಕೇ ಸಿಡಿಮದ್ದು ಇರಿಸಿತ್ತು. ವರ್ಷಗಳ ಕಾಲ ಅದುಮಿರಿಸಿದ್ದ ಅಗ್ನಿಪರ್ವತ ಆಕಾಶದೆತ್ತರಕ್ಕೆ ಕೆಂಡ ಕಾರಿತ್ತು. ಸ್ವಾತಂತ್ರ್ಯ ಹೋರಾಟಗಾರರು, ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೆ ಉದ್ಯೋಗ-ಶಿಕ್ಷಣದಲ್ಲಿ ಶೇ.3ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಬಾಂಗ್ಲಾ ವಿಮೋಚನೆಗೆ ಹೋರಾಡಿದ್ದವರ ಹೆಸರಿನಲ್ಲಿ ಸರ್ಕಾರ ತನಗೆ ಬೇಕಾದವರಿಗೆಲ್ಲ ಈ ಮೀಸಲನ್ನು ದಯಪಾಲಿಸುತ್ತಿತ್ತು ಎಂಬ ಗಂಭೀರ ಆರೋಪಗಳಿವೆ.

Advertisements

ಹಸೀನಾ ಅವರ ಆವಾಮಿ ಲೀಗ್ ಬಾಂಗ್ಲಾ ರಾಜಕಾರಣದಲ್ಲಿ ಎಡಪಂಥದತ್ತ ವಾಲಿದ ಪಕ್ಷವೆಂದು ಪ್ರತೀತಿ. ಅಲ್ಲಿನ ಹಿಂದೂ ಅಲ್ಪಸಂಖ್ಯಾತರಿಗೆ ಅಭಯ ನೀಡುತ್ತ ಬಂದಿರುವ ಪಕ್ಷ. ಆರಂಭದಿಂದಲೂ ಭಾರತದ ಪರ. ಈಶಾನ್ಯ ಭಾರತದ ರಾಜ್ಯಗಳ ಬಂಡುಕೋರ ಉಗ್ರವಾದಿಗಳು ಒಂದು ಕಾಲದಲ್ಲಿ ಬಾಂಗ್ಲಾದೇಶ ಆಶ್ರಯ ತಾಣವಾಗಿತ್ತು. ಈ ಬಂಡುಕೋರರನ್ನು ಹಿಡಿದು ಭಾರತ ಸರ್ಕಾರಕ್ಕೆ ಒಪ್ಪಿಸಿದರು ಹಸೀನಾ. ಬಂಡುಕೋರರು ಮತ್ತು ಐಎಸ್ಐ ಬೆಂಬಲಿತ ಭಾರತ ವಿರೋಧಿ ಇಸ್ಲಾಂ ಉಗ್ರವಾದಿಗಳ ಅಂಗಡಿಗಳನ್ನು ಬಂದ್ ಮಾಡಿಸಿದರು. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಭಾರತ- ಬಾಂಗ್ಲಾ ಗಡಿ ಗ್ರಾಮಗಳ ಅತಂತ್ರ ಸ್ಥಿತಿಯನ್ನು ಕೊನೆಗಾಣಿಸಲು ಸಹಕರಿಸಿದವರು.

ಬಾಂಗ್ಲಾದೇಶದ ಉದಯದಲ್ಲಿ ಭಾರತದ ಪಾತ್ರ ಮಹತ್ತರವಾದದ್ದು. ಅಲ್ಲಿನ ಆಗುಹೋಗುಗಳ ಮೇಲೆ ಪ್ರಭಾವ ಬೀರುವಷ್ಟು ಶಕ್ತಿ ಭಾರತಕ್ಕಿದೆ. ದಮನ ದಬ್ಬಾಳಿಕೆಗಳ ಸರ್ವಾಧಿಕಾರದ ಸಾಧಕ ಬಾಧಕಗಳ ಕುರಿತು ಹಸೀನಾ ಅವರಿಗೆ ಕಿವಿಮಾತು ಹೇಳಬಹುದಿತ್ತು. ಆದರೆ ಕುರುಡು ಬೆಂಬಲ ನೀಡಲಾಯಿತು. ಮೋದಿಯವರು ನಡೆದು ಬಂದಿರುವ ದಾರಿ ಕೂಡ ಹಸೀನಾಗಿಂತ ಭಿನ್ನವಾಗಿಯೇನೂ ಇಲ್ಲ. ಹೀಗಾಗಿ ಅವರ ಸರ್ಕಾರದಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವಂತೆಯೂ ಇಲ್ಲ. ಶರಣು ಬಂದಿರುವ ಹಸೀನಾ ಅವರಿಗೆ ರಕ್ಷಣೆ ನೀಡುವ ಜೊತೆ ಜೊತೆಗೆ ಬಾಂಗ್ಲಾದೇಶದಲ್ಲಿ ಜನತಂತ್ರ ಮತ್ತೆ ನೆಲೆಯೂರಲು ಪೂರಕ ಪಾತ್ರ ವಹಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X