ಈ ದಿನ ಸಂಪಾದಕೀಯ | ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸಾಂಸ್ಥಿಕ ಹತ್ಯೆಗಳಲ್ಲವೇ?

Date:

Advertisements

ವಿಶ್ವವಿದ್ಯಾಲಯಗಳು ಯುವ ಸಮೂಹವನ್ನು ಸಂಶೋಧನೆ, ಜ್ಞಾನಾರ್ಜನೆಯ ಕಡೆಗೆ ಕೊಂಡೊಯ್ಯುವ ವಾಹಕಗಳಾಗಿ ಕೆಲಸ ಮಾಡಬೇಕಿದೆ. ಆದರೆ ರಾಜಕೀಯ, ಜಾತಿಬಲದಿಂದ ವಿವಿಗಳಿಗೆ ನೇಮಕವಾಗುತ್ತಿರುವ ಕುಲಪತಿಗಳ ಹಿನ್ನೆಲೆ ಗಮನಿಸಿದರೆ ಒಟ್ಟು ಉನ್ನತ ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬ ಅರಿವಾಗುತ್ತಿದೆ. ಹೆಣ್ಣುಮಕ್ಕಳು, ದಲಿತ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಳುವವರಿಲ್ಲ ಎಂಬಂತಾಗಿದೆ.

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (CUK)ಭೂವಿಜ್ಞಾನ ಕೋರ್ಸ್‌ನ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿ, ಒಡಿಶಾ ಮೂಲದ ಜಯಶ್ರೀ ನಾಯಕ್‌ ಜು. 30ರಂದು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಸುತ್ತ ಹಲವಾರು ಅನುಮಾನಗಳು ವ್ಯಕ್ತವಾಗಿದ್ದು, ಕ್ಯಾಂಟಿನ್ ನಡೆಸುತ್ತಿದ್ದ ವ್ಯಕ್ತಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಾಗ ಆಡಳಿತ ಮಂಡಳಿ ಸಂಧಾನ ನಡೆಸಿದೆ ಎನ್ನಲಾಗಿದೆ. ಜಯಶ್ರೀ ದಲಿತೆ ಸಮುದಾಯಕ್ಕೆ ಸೇರಿದಾಕೆ ಎಂದು ವರದಿಯಾಗಿದೆ.

ಜಯಶ್ರೀ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಿಶ್ವವಿದ್ಯಾಲಯದ ಡೀನ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಆಗಿರುವ ಪ್ರೊ. ಬಸವರಾಜ ಕುಬಕಡ್ಡಿ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಅದರಿಂದ ವಿದ್ಯಾರ್ಥಿನಿಗೆ ಯಾವುದೇ ನ್ಯಾಯದ ಭರವಸೆ ಸಿಕ್ಕಿಲ್ಲ ಎಂದು ನೊಂದಿದ್ದ ವಿದ್ಯಾರ್ಥಿನಿ ಮರುದಿನ ತರಗತಿಗೆ ಹಾಜರಾಗದೇ ಹಾಸ್ಟೆಲ್‌ನಲ್ಲೇ ಉಳಿದಿದ್ದರು. ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಇದೇ ರೀತಿ ಒಡಿಶಾದ ಭುವನೇಶ್ವರದ ಬಿಎಡ್‌ ವಿದ್ಯಾರ್ಥಿನಿ ಜು. 12 ರಂದು ಪ್ರಾಂಶುಪಾಲರ ಕೊಠಡಿ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆ ತನಗೆ ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಆದರೆ, ಆಕೆಯ ದೂರನ್ನು ಪರಿಗಣಿಸದ ಕಾರಣ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಂದು ಕಡೆ ಕಿರುಕುಳ, ಮತ್ತೊಂದು ಕಡೆ ಮರೀಚಿಕೆಯಾಗುತ್ತಿರುವ ನ್ಯಾಯ; ಇವು ಯುವ ಸಮುದಾಯವನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ. ಈ ಇಬ್ಬರು ಯುವತಿಯರ ಆರೋಪವನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿ ನ್ಯಾಯ ಕೊಡಿಸಿದ್ದರೆ ಇಬ್ಬರ ಜೀವ ಉಳಿಯುತ್ತಿತ್ತು. ಇಡೀ ಸಮಾಜ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

Advertisements

ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಮಾಣ ಶೇ 55 ಹೆಚ್ಚಳವಾಗಿದೆ ಎಂದು ವರದಿಗಳು ಹೇಳುತ್ತದೆ. ಖರಗಪುರ ಐಐಟಿಯಲ್ಲಿ ಈ ವರ್ಷ ಜನವರಿಯಿಂದ ಜುಲೈವರೆಗೆ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸುಪ್ರೀಂ ಕೋರ್ಟ್‌ ಹದಿನೈದು ಅಂಶಗಳ ಮಾರ್ಗಸೂಚಿಯನ್ನುಇತ್ತೀಚೆಗೆ ಪ್ರಕಟಿಸಿದೆ. ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜಾತಿ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಯ ಕಾರಣಕ್ಕೆ ನಡೆಯುವ ಆತ್ಮಹತ್ಯೆಗಳನ್ನು ಸಾಂಸ್ಥಿಕ ಕೊಲೆ ಎಂದೇ ಪರಿಗಣಿಸಬೇಕಿದೆ.

ಉನ್ನತ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿನಿಯರು ವಿವಿ ಸಿಬ್ಬಂದಿ, ಶಿಕ್ಷಕರಿಂದ, ಹಾಸ್ಟೆಲ್‌ ಮೇಲ್ವಿಚಾರಕರಿಂದ ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ. ದುರಂತವೆಂದರೆ ಅದರ ವಿರುದ್ಧ ದೂರು ನೀಡಿದರೆ ನ್ಯಾಯವೂ ಸಿಗುತ್ತಿಲ್ಲ. ಆಡಳಿತ ಮಂಡಳಿ ದೂರುಗಳನ್ನೇ ಮುಚ್ಚಿ ಹಾಕಲು ನೋಡುತ್ತದೆ. ಅಥವಾ ಆರೋಪಿ ಪರ ನಿಲುವು ತೆಗೆದುಕೊಳ್ಳುತ್ತದೆ. ಮತ್ತೊಂದೆಡೆ ದಲಿತರು ಎಂಬ ಕಾರಣಕ್ಕೆ ಜಾತಿ ತಾರತಮ್ಯ. ಇದು ಬಡವರ್ಗದ ವಿದ್ಯಾರ್ಥಿಗಳನ್ನು ಹತಾಶೆಗೆ ನೂಕುತ್ತಿದೆ. ಅವರ ಉನ್ನತ ಶಿಕ್ಷಣದ ಕನಸನ್ನು ಹೊಸಕಿ ಹಾಕುತ್ತಿವೆ.  ಶಿಕ್ಷಣ ಸಂಸ್ಥೆಗಳಲ್ಲಿ ವರದಿಯಾಗುವ ಬಹುತೇಕ ಆತ್ಮಹತ್ಯೆಗಳು ಒಂದೋ ಜಾತಿ ನಿಂದನೆಯ ಅವಮಾನ ಅಥವಾ ಲೈಂಗಿಕ ಕಿರುಕುಳ ಇವೆರಡರಿಂದಲೇ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಉನ್ನತ ಶಿಕ್ಷಣ ಅರಸಿ ಬರುವ ವಿದ್ಯಾರ್ಥಿಗಳು ಬಹುತೇಕ ವಿಶ್ವವಿದ್ಯಾಲಯದ ಆವರಣದಲ್ಲಿಯೇ ಜೀವಿಸಿರುತ್ತಾರೆ. ಅಲ್ಲಿ ಅವರ ಯೋಗಕ್ಷೇಮ ನೋಡಿಕೊಳ್ಳುವುದು, ಅವರ ನೋವುಗಳನ್ನು ಆಲಿಸುವುದು ಆಡಳಿತ ಮಂಡಳಿಯ ಜವಾಬ್ದಾರಿ. ಆದರೆ ಆಡಳಿತ ಮಂಡಳಿಯ ವ್ಯಕ್ತಿಗಳೇ ಅಥವಾ ಶಿಕ್ಷಕರೇ ಕಿರುಕುಳ, ಜಾತಿ ತಾರತಮ್ಯ ಎಸಗಿದರೆ ನ್ಯಾಯ ಕೊಡುವವರು ಯಾರು? ಕಿರುಕುಳದಿಂದ ನೊಂದ ವಿದ್ಯಾರ್ಥಿಗಳು ನ್ಯಾಯದ ಭರವಸೆಯನ್ನೂ ಕಳೆದುಕೊಂಡಾಗ ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ.

ದೇಶದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯ ಮತ್ತು ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಕಳೆದೊಂದು ದಶಕದಲ್ಲಿ ಸಾಮಾನ್ಯ ಎಂಬಂತಾಗಿದೆ. 2016, ಜನವರಿ 17ರಂದು ಹೈದರಾಬಾದ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆಡಳಿತ ಮಂಡಳಿಯ ಜಾತಿ ತಾರತಮ್ಯ ಮತ್ತು ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. 2017, ಮಾರ್ಚ್‌ 13 ರಂದು ದೆಹಲಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ದಲಿತ ಸಮುದಾಯದ ಮುತ್ತುಕೃಷ್ಣನ್‌ ಆತ್ಮಹತ್ಯೆಗೆ ಶರಣಾಗಿದ್ದರು. 2019ರಲ್ಲಿ ಮುಂಬೈನಲ್ಲಿ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಪಾಯಲ್‌ ತಡ್ವಿ ತನ್ನ ಸಹೋದ್ಯೋಗಿಗಳ ಜಾತಿ ತಾರತಮ್ಯ, ಕಿರುಕುಳ ತಡೆಯಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದರು. ದೇಶದ ಪ್ರತಿಷ್ಠಿತ ಐಐಟಿ ಕ್ಯಾಂಪಸ್‌ಗಳಲ್ಲಿ ಹಲವು ದಲಿತ ವಿದ್ಯಾರ್ಥಿಗಳು ಜಾತಿನಿಂದನೆಯ ಅಪಮಾನ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವುಗಳನ್ನು ಸಾಂಸ್ಥಿಕ ಕೊಲೆ ಎಂದೇ ಪರಿಗಣಿಸಬೇಕಾಗುತ್ತದೆ.

ವಿಶ್ವವಿದ್ಯಾಲಯಗಳು ಯುವ ಸಮೂಹವನ್ನು ಸಂಶೋಧನೆ, ಜ್ಞಾನಾರ್ಜನೆಯ ಕಡೆಗೆ ಕೊಂಡೊಯ್ಯುವ ವಾಹಕಗಳಾಗಿ ಕೆಲಸ ಮಾಡಬೇಕಿದೆ. ಆದರೆ ರಾಜಕೀಯ, ಜಾತಿಬಲದಿಂದ ವಿವಿಗಳಿಗೆ ಕುಲಪತಿಗಳು ಮುಂತಾದವರ ನೇಮಕಗಳಾಗುತ್ತಿರುವುದು ವಾಸ್ತವ. ಇತ್ತೀಚೆಗೆ ದೇಶದ ಕೆಲವು ವಿವಿಗಳಿಗೆ ನೇಮಕವಾಗುತ್ತಿರುವ ಕುಲಪತಿಗಳ ಹಿನ್ನೆಲೆ ಗಮನಿಸಿದರೆ ಒಟ್ಟು ಉನ್ನತ ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬ ಅರಿವಾಗುತ್ತಿದೆ. ಐಐಟಿಯಂತಹ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೇಲ್ವರ್ಗದ ಶಿಕ್ಷಕರು ವಿದ್ಯಾರ್ಥಿಗಳ ಮಧ್ಯೆ ಜಾತಿಯ ವಿಷ ಬಿತ್ತಿ ಇಡೀ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತಿದ್ದಾರೆ. ಬನಾರಸ್‌ ಹಿಂದೂ ವಿವಿಗೆ  ಮುಸ್ಲಿಂ ಸಮುದಾಯದ ಪ್ರೊಫೆಸರ್‌ ನೇಮಕವಾದಾಗ ವಿದ್ಯಾರ್ಥಿಗಳು ಬಹಿರಂಗವಾಗಿ ಪ್ರತಿಭಟಿಸಿದ್ದರು. ಯುವ ಸಂಶೋಧಕರು, ವಿಜ್ಞಾನಿಗಳಾಗಬೇಕಾದ ಉನ್ನತ ಶಿಕ್ಷಣಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಕೋಮುವಾದಿಗಳ ಕೈವಶವಾಗಿ ವಿಶ್ವವಿದ್ಯಾಲಯಗಳು ಜಾತಿ ತಾರತಮ್ಯ, ಮೇಲು-ಕೀಳೆಂಬ ಕುಲುಮೆಯಲ್ಲಿ ಬೇಯುವಂತೆ ಮಾಡಲಾಗಿದೆ.

ಇದನ್ನೂ ಓದಿ ‘ಕೀಳಡಿ’ ಉತ್ಖನನ- ಇತಿಹಾಸದಲ್ಲೊಂದು ಹೊಸ ಪುಟ

ಸರ್ಕಾರಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯಪ್ರೇರಿತ ನೇಮಕಾತಿಗಳನ್ನು ನಿಲ್ಲಿಸಬೇಕು. ಪಠ್ಯಗಳಲ್ಲಿ ತಮ್ಮ ತಮ್ಮ ಸಿದ್ಧಾಂತ ತುರುಕುವುದು, ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ನಡುವೆ ಒಡಕು ಮೂಡಿಸುವ ಚಟುವಟಿಕೆಗಳನ್ನು ನಡೆಸುವುದು ಅಪಾಯಕಾರಿ. ದೇಶದ ಬಹುತೇಕ ವಿವಿಗಳು ಕೋಮುವಾದ, ತಾರತಮ್ಯವಾದಿಗಳಿಂದ ತುಂಬಿ ಹೋಗಿವೆ. ಈ ರೋಗಗಳಿಂದ ವಿವಿಗಳನ್ನು ಮುಕ್ತಗೊಳಿಸುವುದೇ ದೊಡ್ಡ ಸವಾಲಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಪ್ರಗತಿಪರ ಸಂಘಟನೆಗಳು ವಿವಿಗಳಲ್ಲಿ ದಲಿತ ದೌರ್ಜನ್ಯ ಪ್ರಕರಣ ತಡೆಯಲು ವೇಮುಲ ಕಾಯ್ದೆ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿವೆ. ಕಲಬುರಗಿಯ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಈ ಬೇಡಿಕೆಗೆ ಇನ್ನಷ್ಟು ಬಲ ತುಂಬಲಿ. ಕರ್ನಾಟಕದ ಮಾದರಿಯ ವೇಮುಲ ಕಾಯ್ದೆ ಇಡೀ ದೇಶಕ್ಕೆ ಮಾದರಿಯಾಗಲಿ. ಕೇಂದ್ರೀಯ ವಿವಿಗಳಲ್ಲೂ ಜಾರಿಗೆ ಬರಲಿ. ಜಯಶ್ರೀ ದಲಿತೆ ಎಂಬ ಕಾರಣಕ್ಕೆ ಆಕೆಯ ದೂರನ್ನು ನಿರ್ಲಕ್ಷ್ಯ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ ಜಾತಿ ಮತ್ತು ಲೈಂಗಿಕ ದೌರ್ಜನ್ಯ ಎರಡರ ಬಲಿಪಶು ಈ ವಿದ್ಯಾರ್ಥಿನಿ. 

ಹಿಂದುಳಿದವರಿಗೆ ಶಿಕ್ಷಣವೇ ಬಿಡುಗಡೆಯ ದಾರಿ ಎಂದು ಅಂಬೇಡ್ಕರ್‌ ಹೇಳಿದ್ದರು. ಆದರೆ ಅಂತಹ ಮಹದಾಸೆಯಿಂದ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಯುವಜನರು ಹತಾಶೆಯಿಂದ ಆತ್ಮಹತ್ಯೆಯ ಹಾದಿ ಹಿಡಿಯದಂತೆ ತಡೆಯುವುದು ಎಲ್ಲರ ಜವಾಬ್ದಾರಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X