ಈ ದಿನ ಸಂಪಾದಕೀಯ | ಮೊಹರಂ ನಿಷೇಧ; ರಾಯಚೂರು ಜಿಲ್ಲಾಧಿಕಾರಿ ಕೊಟ್ಟ ಸಂದೇಶವೇನು?

Date:

Advertisements
ಕಿಡಿಗೇಡಿಗಳನ್ನು ಬಂಧಿಸಿ, ಜನರ ಸಂಭ್ರಮಕ್ಕೆ ಭದ್ರತೆಯನ್ನು ಒದಗಿಸುವುದು ಸರಿಯಾದ ನಡೆಯಾಗುತ್ತದೆ. ಇಂದು ಮೊಹರಂಗೆ ನಿಷೇಧ, ನಾಳೆ ಮಾರಮ್ಮನ ಜಾತ್ರೆಗೆ ನಿಷೇಧ ಹೇರುತ್ತಾ ಹೋದರೆ ಅರ್ಥವಿರುವುದಿಲ್ಲ ಅಲ್ಲವೇ?

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಯಚೂರು ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧಿಸಿ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಆದೇಶ ಹೊರಡಿಸಿದ್ದಾರೆ. ಇದು ಅತ್ಯಂತ ಗಂಭೀರವಾಗಿ ಚರ್ಚೆಗೆ ಒಳಪಡಬೇಕಾದ ಸಂಗತಿ.

ಸಿಂಧನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗಿಣಿವಾರ, ಅರಳಹಳ್ಳಿ, ಉಪ್ಪಳ, ಗೋರೆಬಾಳ ಹಾಗೂ ಗುಂಡಾ; ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ನಿಡಿಗೋಳ-ತಿಡಿಗೋಳ, ಎಲೆಕೂಡ್ಲಿಗಿ, ಚಿಕ್ಕಬೇರಿ; ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಹಾಳ, ಜಾಗೀರ ಪನ್ನೂರು, ಜಾನೇಕಲ್ ಹಾಗೂ ಮದಾವೂರು; ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಿರವಾರ ಪಟ್ಟಣ, ಕಡದಿನ್ನಿ, ಬೊದ್ದುನಾಳ; ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕವಿತಾಳ ಪಟ್ಟಣ, ಹಿರೇ ಬಾದರದಿನ್ನಿ, ಬಾಗಲವಾಡ, ಅಮೀನಗಡ, ಗೊಗಬಾಳ; ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ತಲೇಖಾನ್; ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಖಾನಾಪೂರ, ಚಂಚೋಡಿ ಸೇರಿ 23 ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಮೊಹರಂ ಆಚರಣೆ ಮೇಲೆ ನಿರ್ಬಂಧ ಹೇರಲಾಗಿದೆ.

ಅದಕ್ಕೆ ಜಿಲ್ಲಾಧಿಕಾರಿಯವರು ಕೊಟ್ಟಿರುವ ಕಾರಣವನ್ನು ಗಮನಿಸಬೇಕು. ”ಮೊಹರಂ ಆಚರಣೆಯಲ್ಲಿ ಅನ್ಯ ಸಮುದಾಯಗಳ ಯುವಕರ ಮಧ್ಯೆ ಗಲಾಟೆ, ಹಲವು ಬಾರಿ ಹಳೆ ವೈಷಮ್ಯ ಉಂಟಾಗಿ ಪ್ರಕರಣಗಳು ದಾಖಲಾಗಿವೆ. ಗ್ರಾಮದಲ್ಲಿ ಜೀವ ಹಾನಿ ಹಾಗೂ ಆಸ್ತಿ ಪಾಸ್ತಿಗೆ ಹಾನಿಯಾಗುವ, ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ನಿಷೇಧಿಸಲಾಗಿದೆ” ಎಂದಿದ್ದಾರೆ ಡಿಸಿ.

Advertisements

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಇಂದಿರಾ ಕಾಲದ ಸತ್ಯ, ಮೋದಿ ಕಾಲಕ್ಕೆ ಮಿಥ್ಯೆಯಾದದ್ದು ಹೇಗೆ?

ಇಸ್ಲಾಮಿಕ್‌ ಕ್ಯಾಲೆಂಡರ್‌ನ ಮೊದಲ ತಿಂಗಳು ಮತ್ತು ಹೊಸ ಇಸ್ಲಾಮಿಕ್‌ ವರ್ಷದ ಆರಂಭವನ್ನು ಸೂಚಿಸುವ ಹಬ್ಬವೇ ಮೊಹರಂ. ಈ ಪವಿತ್ರ ಮಾಸವನ್ನು ‘ಹಿಜ್ರಿ’ ಮತ್ತು ‘ಅಲ್ಲಾಹನ ತಿಂಗಳು’ ಎಂದೂ ಕರೆಯುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ 61ನೇ ವರ್ಷದಲ್ಲಿ 10ನೇ ಮೊಹರಂ (ಅಶುರಾ ದಿನ) ಕರ್ಬಲಾ ಯುದ್ಧ ನಡೆಯಿತು ಹಾಗೂ ಪ್ರವಾದಿಯ ಪ್ರೀತಿಯ ಮೊಮ್ಮಗ ಇಮಾಮ್ ಹುಸೇನ್‌ರನ್ನು ಕೊಲ್ಲಲಾಯಿತು. ಅದರಲ್ಲೂ ಹೊಡೆದಾಟವನ್ನು ನಿಷೇಧಿಸಿದ ತಿಂಗಳಲ್ಲೇ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಹೀಗಾಗಿ ಈ ಹಬ್ಬವನ್ನು ಶೋಕಾಚರಣೆಯ ಹಬ್ಬವೆಂದೂ ಗುರುತಿಸಲಾಗುತ್ತದೆ. ಅಶುರಾ ಎಂದರೆ ಮೊಹರಂನ 10ನೇ ದಿನ. ಅಂದು ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಮೆರವಣಿಗೆಗಳನ್ನು ನಡೆಸುತ್ತಾರೆ. ಅವರು ಶೋಕಾಚರಣೆಯನ್ನು ಮಾಡುತ್ತಾರೆ. ಕೆಲವರು ಮಸೀದಿಗಳಿಗೆ ಭೇಟಿ ನೀಡುತ್ತಾರೆ, ಪ್ರಾರ್ಥನೆ ಸಲ್ಲಿಸುತ್ತಾರೆ, ಹುಸೇನ್ ಅವರ ಸಾವಿನ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತಾರೆ ಮತ್ತು ಅವರ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ. ಅನೇಕ ಜನರು ಎದೆಗೆ ಹೊಡೆದುಕೊಳ್ಳುವುದು, ಹಣೆಯನ್ನು ಬಡಿದುಕೊಳ್ಳುವಂತಹ ಆಚರಣೆಗಳನ್ನೂ ಮಾಡುತ್ತಾರೆ. ಆದರೆ ಮೊಹರಂ ಅಂದರೆ ಇಷ್ಟೇ ಅಲ್ಲ. ಯಾವುದೇ ಧಾರ್ಮಿಕ ಆಚರಣೆಯ ಹಿನ್ನೆಲೆ ಏನೇ ಇರಲಿ, ಅವುಗಳು ಪ್ರಾದೇಶಿಕ ಸ್ವರೂಪವನ್ನು ಪಡೆದುಕೊಳ್ಳುವುದನ್ನು ಗಮನಿಸಬೇಕು. ಕರ್ನಾಟಕದ ನೆಲದ ಮಟ್ಟಿಗೆ ಮೊಹರಂ ಕೇವಲ ಮುಸ್ಲಿಮರ ಹಬ್ಬವಲ್ಲ; ಅದೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತ.

ಹಿಂದೂ-ಮುಸ್ಲಿಂ ಧರ್ಮಗಳ ಮಿಶ್ರಣವಾಗಿ ಕಾಣುವ ಪಿಂಜಾರ ಸಮುದಾಯವು ಹೆಚ್ಚಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮೊಹರಂ ಆಚರಣೆ ವಿಶಿಷ್ಟವಾಗಿ ಗೋಚರಿಸುತ್ತದೆ. ದೇವರುಗಳನ್ನು ಪೂಜಿಸಲಾಗುತ್ತದೆ. ಇದರೊಂದಿಗೆ ಹಿಂದೂ ಧರ್ಮದ ಹಲವು ಜಾತಿ, ಜನಾಂಗದ ಜನರು ಸಂಭ್ರಮಾಚರಣೆ ಮತ್ತು ಮೆರವಣಿಗೆಯಲ್ಲಿ ತೊಡಗುತ್ತಾರೆ. ಹೀಗಾಗಿ ಮೊಹರಂ ಆಚರಣೆಯು ‘ಸಂಕರ ಸಂಸ್ಕೃತಿ’ಯ ಪ್ರತೀಕವಾಗಿ ನಮ್ಮ ಮುಂದೆ ನಿಂತಿದೆ.

ದುರದೃಷ್ಟವಶಾತ್ ಇತ್ತೀಚಿನ ವರ್ಷಗಳಲ್ಲಿ ಈ ಹಬ್ಬವು ಹಿಂದೂ ಮತ್ತು ಇಸ್ಲಾಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವುದು ಸುಳ್ಳಲ್ಲ. ಪಿಂಜಾರ ಸಮುದಾಯದ ಸಂಶೋಧಕರು ಹೇಳುವ ಪ್ರಕಾರ, ”ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ. ಇದು ಶೋಕಾಚರಣೆಯ ಹಬ್ಬವಾಗಿದ್ದು, ಮೆರವಣಿಗೆ ಮಾಡಿ ಸಂಭ್ರಮಿಸಬಾರದು ಎನ್ನುವಂತಹ ಕಟ್ಟಲೆಗಳನ್ನು ಇಸ್ಲಾಂ ಮೂಲಭೂತವಾದಿಗಳು ಸಮುದಾಯಗಳ ನಡುವೆ ಬಿತ್ತಲು ಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಹಿಂದೂ ಮೂಲಭೂತವಾದಿಗಳು ಇದು ಮುಸ್ಲಿಮರ ಹಬ್ಬ, ಹಿಂದೂಗಳು ಭಾಗಿಯಾಗಬಾರದು ಎಂದು ಗಲಾಟೆ ಶುರುಮಾಡುತ್ತಾರೆ. ಟಿಪ್ಪು ಸುಲ್ತಾನ್ ನೆನಪಿನಲ್ಲಿ ನಡೆಯುತ್ತಿದ್ದ ಸಲಾಂ ಆರತಿಯನ್ನು ಹೇಗೆ ಹಿಂದೂ ಮೂಲಭೂತವಾದಿಗಳು ವಿರೋಧಿಸಿದರೋ ಹಾಗೆಯೇ ಇಸ್ಲಾಂ ಮೂಲಭೂತವಾದಿಗಳಿಗೂ ಮೊಹರಂನಲ್ಲಿ ಕಾಣಿಸುವ ಧಾರ್ಮಿಕ ಸಾಮರಸ್ಯ, ವ್ಯಕ್ತಿಪೂಜೆ ಕೆಟ್ಟದ್ದಾಗಿ ಕಾಣುತ್ತದೆ.”

ಆದರೆ ಕೆಲವೊಂದು ಅಪವಾದಗಳ ಹೊರತಾಗಿಯೂ ಮೊಹರಂ ಹಬ್ಬವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ರಾಜ್ಯದ ವಿವಿಧೆಡೆ ಆಚರಿಸಲ್ಪಡುತ್ತದೆ. ಕಿಡಿಗೇಡಿಗಳು ಕೇವಲ ಮೊಹರಂ ಆಚರಣೆಗಷ್ಟೇ ಅಲ್ಲ ಗಣಪತಿ ಉತ್ಸವಕ್ಕೂ, ಉಗಾದಿ ಹಬ್ಬದ ವರ್ಸತೊಡಕಿಗೂ, ಮಾರಮ್ಮನ ಜಾತ್ರೆಗೂ, ಇನ್ಯಾವುದೇ ಆಚರಣೆಗೂ ಅಡಚಣೆ ಮಾಡಿಯೇ ತೀರುತ್ತಾರೆ. ಅದು ಅವರ ಮನಸ್ಥಿತಿಯಾಗಿರುತ್ತದೆ. ಇಂಥವರಿಗೆ ಸೊಪ್ಪು ಹಾಕಿದರೆ, ಯಾವುದೇ ಸಂಭ್ರಮಾಚರಣೆ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಹಿಂದುಗಳೆಲ್ಲ ಒಂದು ಎನ್ನುವ ಆರೆಸ್ಸೆಸ್‌ಗೆ ಜಾತ್ಯತೀತ, ಸಮಾಜವಾದ ಅಂದರೇಕೆ ಅಸಹನೆ?

ಕಾನೂನು ಸುವ್ಯವಸ್ಥೆಯ ಬಗ್ಗೆ ರಾಯಚೂರು ಜಿಲ್ಲಾಧಿಕಾರಿಯವರಿಗೆ ಇರುವ ಕಳಕಳಿ ಮೆಚ್ಚುವಂತಹದ್ದೆ. ಆದರೆ ಊರುಗಳಲ್ಲಿ ಇರುವ ಕೆಲವು ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ಇಡೀ ಊರಿನ ಸಂಭ್ರಮವನ್ನು ಕಿತ್ತುಕೊಳ್ಳುವುದು ಎಷ್ಟು ಸರಿ? ಸದಾ ಕೋಮು ಗಲಭೆಯ ಕೇಂದ್ರವಾಗುವ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಮೊಹರಂ ಹಿನ್ನೆಲೆಯಲ್ಲಿ ಒಂದು ವಿದ್ಯಮಾನ ಜರುಗಿದೆ. ಅದನ್ನು ರಾಯಚೂರಿನ ಜಿಲ್ಲಾಧಿಕಾರಿಯವರು ಗಮನಿಸಬಹುದು. ಅಪರಾಧ ಹಿನ್ನೆಲೆಯ ಮತ್ತು ಕೋಮುಸಾಮರಸ್ಯ ಕದಡುವ 900 ಜನರ ಮೇಲೆ ಅಲ್ಲಿನ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಇದರಿಂದ ಒಂದು ಪಾಠವಿದೆ. ಈ ಹಿಂದೆ ಗಲಭೆಗಳಲ್ಲಿ ಭಾಗಿಯಾದವರ ಮೇಲೆ ಮತ್ತು ಸಮಾಜದ ಸ್ವಾಸ್ಥ್ಯ ಹಾಳುಗೆಡುವ ದುಷ್ಕರ್ಮಿಗಳ ಮೇಲೆ ಹದ್ದಿನ ಕಣ್ಣು ಇಡುವುದು ಬಿಟ್ಟು, ಇಡೀ ಸಂಭ್ರಮದ ಮೇಲೆ ನಿಷೇಧ ಹೇರುವುದು ಸರಿಯಾದ ಕ್ರಮವಲ್ಲ.

ಕೋಮು ಸಾಮರಸ್ಯವನ್ನು ಹಾಳು ಮಾಡಲು ಮತಾಂಧ ರಾಜಕೀಯ ಶಕ್ತಿಗಳು ತಮ್ಮೆಲ್ಲ ಶ್ರಮವನ್ನು ಹಾಕುತ್ತಿರುವ ಹೊತ್ತಿನಲ್ಲಿ ಮೊಹರಂ ಹಬ್ಬವನ್ನು ಸಾಂಸ್ಕೃತಿಕ ಹಿರಿಮೆಯ ಸಂಕೇತವಾಗಿ ನೋಡಬೇಕು. ಕಾನೂನು ಸುವ್ಯವಸ್ಥೆ ಎಂಬುದು ಸಾಂವಿಧಾನಿಕ ಧಾರ್ಮಿಕ ಆಚರಣೆಗೆ ಅಡ್ಡಿಯಾಗಬಾರದು. ಧರ್ಮಾಚರಣೆಯನ್ನು ಹೀಗೆಯೇ ಮಾಡಬೇಕು ಎಂದು ಸೂಚಿಸುವುದು ಸರ್ಕಾರದ ಕೆಲಸವಲ್ಲ. ಕಿಡಿಗೇಡಿಗಳನ್ನು ಬಂಧಿಸಿ, ಜನರ ಸಂಭ್ರಮಕ್ಕೆ ಭದ್ರತೆಯನ್ನು ಒದಗಿಸುವುದು ಸರಿಯಾದ ನಡೆಯಾಗುತ್ತದೆ. ಇಂದು ಮೊಹರಂಗೆ ನಿಷೇಧ, ನಾಳೆ ಮಾರಮ್ಮನ ಜಾತ್ರೆಗೆ ನಿಷೇಧ ಹೇರುತ್ತಾ ಹೋದರೆ ಅರ್ಥವಿರುವುದಿಲ್ಲ ಅಲ್ಲವೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X