ಈ ದಿನ ಸಂಪಾದಕೀಯ | ಬೆಂಗಳೂರು: ಅಂಡರ್‌ಪಾಸ್, ಫ್ಲೈಓವರ್, ರಸ್ತೆ ಗುಂಡಿ; ಹೆಜ್ಜೆ ಹೆಜ್ಜೆಗೂ ಕಾಡುವ ಸಾವು!

Date:

Advertisements
ಬೆಂಗಳೂರು ನಗರದಲ್ಲಿ ಯಾವುದು ಸರಿ ಇದೆ ಎಂದು ಜನ ಕೇಳುವಂತಾಗಿದೆ. ರಸ್ತೆಗಳು ಗುಂಡಿಮಯವಾಗಿವೆ. ಅಂಡರ್‌ಪಾಸ್‌ಗಳಲ್ಲಿ ವಾಹನಗಳು ಮುಳುಗಿಹೋಗುವಷ್ಟು ನೀರು ನಿಲ್ಲುತ್ತದೆ. ಫ್ಲೈಓವರ್‌ಗಳು ಬಿರುಕು ಬಿಟ್ಟಿವೆ. ಪಾದಚಾರಿ ಮಾರ್ಗಗಳಲ್ಲಿ ಕೇಬಲ್‌ಗಳು ಬಿದ್ದಿರುತ್ತವೆ. ಹಾಗಿದ್ದರೆ ಜನ ಎಲ್ಲಿ ಓಡಾಡಬೇಕು?

ಮಳೆಗಾಲ ಆರಂಭವಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದ ಅವಘಡಗಳೂ ಆರಂಭವಾಗಿವೆ. ಕೆ ಆರ್ ಸರ್ಕಲ್‌ ಅಂಡರ್‌ಪಾಸ್‌ನ ನೀರಿನಲ್ಲಿ ಕಾರೊಂದು ಮುಳುಗಿ ಅದರಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಓರ್ವ ಯುವತಿ ಸಾವನ್ನಪ್ಪಿರುವ ಘಟನೆ ಮನ ಕಲಕುವಂತಿದೆ. ಆಂಧ್ರದ ವಿಜಯವಾಡ ಮೂಲದ ಯುವತಿ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಊರಿನಿಂದ ಬಂದಿದ್ದ ನೆಂಟರನ್ನು ಕರೆದುಕೊಂಡು ಬೆಂಗಳೂರು ತೋರಿಸಲು ಕಾರಿನಲ್ಲಿ ಹೊರಟ ಯುವತಿ ಮತ್ತೆ ಮನೆ ಸೇರಿದ್ದು ಶವವಾಗಿ.   

ಅದಾದ ಎರಡು ದಿನಕ್ಕೇ ಮತ್ತೊಂದು ಅವಘಡ ಸಂಭವಿಸಿದೆ. ನೈಸ್ ರಸ್ತೆಯ ಕಾಚೋಹಳ್ಳಿ ಅಂಡರ್‌ಪಾಸ್‌ನಲ್ಲಿ ಬೈಕ್‌ನಿಂದ ಯುವಕನೊಬ್ಬ ಬಿದ್ದು ಸಾವಿಗೀಡಾಗಿದ್ದಾನೆ. ಮಾಗಡಿ ರಸ್ತೆಯ ಜಿ ಟಿ ಮಾಲ್‌ನಲ್ಲಿ ಆ ಯುವಕ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಎಂಬುದಾಗಿ ತಿಳಿದುಬಂದಿದೆ.

ಈ ಘಟನೆಗಳು ಆರಂಭವೂ ಅಲ್ಲ, ಅಂತ್ಯವೂ ಅಲ್ಲ; ಬೆಂಗಳೂರಿನ ಮೂಲಸೌಕರ್ಯಕ್ಕೆ ಹಿಡಿದ ಈಚಿನ ಕನ್ನಡಿಗಳಷ್ಟೇ. ವಾಸ್ತವ ಸ್ಥಿತಿ ಹೇಗಿದೆ ಎಂದರೆ, ಬೆಂಗಳೂರಿನಲ್ಲಿ ಜನರ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ. ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕೇಬಲ್‌ಗಳು ಬಿದ್ದಿರುತ್ತವೆ. ಅವು ಯಾವುದೋ ದೂರಸಂಪರ್ಕ ಕಂಪನಿಯ ಕೇಬಲ್ ಎಂದು ಜನ ಮೈ ಮರೆಯುವಂತಿಲ್ಲ. ಹಾಗೆ ರಸ್ತೆಯಲ್ಲಿ ಬಿದ್ದಿದ್ದ ಕೇಬಲ್ ಮೇಲೆ ಕಾಲಿಟ್ಟು ಸಂಜಯನಗರದಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಶವವಾಗಿದ್ದ. ಇನ್ನು ಮಳೆ ಬರುತ್ತಿದೆ ಎಂದು ಹೆಬ್ಬಾಳದ ಬಳಿಯ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದಿದ್ದ ವ್ಯಕ್ತಿಯೊಬ್ಬ ಅಲ್ಲಿ ನೇತಾಡುತ್ತಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಅಲ್ಲೇ ಸತ್ತುಹೋಗಿದ್ದ. ಮಳೆ ಬರುತ್ತಿದ್ದಾಗ ವಾಹನ ಆಯತಪ್ಪಿ ಕೆಳಗೆ ಬೀಳುವಂತಾಗಿ ರಕ್ಷಣೆಗೆಂದು ರಸ್ತೆ ಮಧ್ಯೆದಲ್ಲಿದ್ದ ವಿದ್ಯುತ್ ಕಂಬ ಹಿಡಿದ ಯುವತಿಯೊಬ್ಬಳು ಮಹದೇವಪುರದಲ್ಲಿ ಶವವಾಗಿದ್ದಳು. ಇಂಥ ನೂರೆಂಟು ಘಟನೆಗಳು. ಸಾವಿರಾರು ಸಾವು ನೋವುಗಳು. ಇದಕ್ಕೆ ಹೊಣೆ ಯಾರು?

Advertisements

ಇಂಥ ಪ್ರಕರಣಗಳಲ್ಲಿ ಮೊದಲ ಆರೋಪಿ ಎಂದರೆ, ಅದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ). ಇಲ್ಲಿನ ಸಿಬ್ಬಂದಿ ಮತ್ತು ಪ್ರತಿನಿಧಿಗಳ ಬೇಜವಾಬ್ದಾರಿತನ ಮತ್ತು ಅದಕ್ಷ ಕಾರ್ಯವೈಖರಿಯೇ ಇವೆಲ್ಲದಕ್ಕೂ ಮೂಲ ಕಾರಣ. ನಗರದ ಆಡಳಿತ, ಮೂಲಸೌಕರ್ಯ ನೋಡಿಕೊಳ್ಳಬೇಕಾದ ಹೊಣೆ ಬಿಬಿಎಂಪಿಯದ್ದು. ಆದರೆ, ಪ್ರತಿ ಸಣ್ಣ ಕೆಲಸಕ್ಕೂ ಜನರ ಜೀವ ಹಿಂಡಿ ರಕ್ತ ಹೀರುವ ಜಿಗಣಿಗಳಿರುವ ಜಾಗ ಎಂದೇ ಕರೆಸಿಕೊಳ್ಳುವ ಪಾಲಿಕೆ, ಜನರ ಯೋಗಕ್ಷೇಮದ ಬಗ್ಗೆ ಲಕ್ಷ್ಯವನ್ನೇ ಮಾಡುವುದಿಲ್ಲ ಎನ್ನುವ ಆರೋಪಗಳಿವೆ. ಪಾಲಿಕೆ ಎಂದರೆ, ನುಂಗಣ್ಣರ ಕಚೇರಿ ಎನ್ನುವ ಕೆಟ್ಟ ಹೆಸರು ಸಾರ್ವಜನಿಕ ವಲಯದಲ್ಲಿದೆ. ಬಿಬಿಎಂಪಿ ಎಂದರೆ ನೌಕರರ ಪಾಲಿಗೆ ಚಿನ್ನದ ಗಣಿ. ಅಲ್ಲಿ ಅಗೆದಷ್ಟೂ ಚಿನ್ನ. ಅದಕ್ಕಾಗಿಯೇ ಅಲ್ಲಿಗೆ ನಾನಾ ಇಲಾಖೆಗಳಿಂದ ನಿಯೋಜನೆ ಮೇಲೆ ಕೆಲಸ ಮಾಡಲು ನಾ ಮುಂದು ತಾ ಮುಂದು ಎಂದು ಸರ್ಕಾರಿ ನೌಕರರು ಪೈಪೋಟಿ ನಡೆಸುತ್ತಾರೆ.

ಕಳೆದ ಆರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ 28,356 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇದರಲ್ಲಿ 17,014 ಕೋಟಿ ರೂಪಾಯಿಗಳನ್ನು ಅಂದರೆ ಶೇ.60ರಷ್ಟು ಹಣವನ್ನು, ಫ್ಲೈಓವರ್, ಅಂಡರ್‌ಪಾಸ್ ನಿರ್ಮಾಣ ಸೇರಿದಂತೆ ರಸ್ತೆ ಕಾಮಗಾರಿಗಳಿಗಾಗಿಯೇ ಬಳಸಲಾಗಿದೆ. ಇಷ್ಟೆಲ್ಲ ಹಣ ಖರ್ಚಾದರೂ ಅಂದುಕೊಂಡ ಕೆಲಸ ಆಗಿಲ್ಲ.

ಬೆಂಗಳೂರಿನಲ್ಲಿ ಯಾವುದು ಸರಿ ಇದೆ ಎಂದು ಜನ ಕೇಳುವಂತಾಗಿದೆ. ರಸ್ತೆಗಳು ಗುಂಡಿಮಯವಾಗಿವೆ. ಅಂಡರ್‌ಪಾಸ್‌ಗಳಲ್ಲಿ ವಾಹನಗಳು ಮುಳುಗಿಹೋಗುವಷ್ಟು ನೀರು ನಿಲ್ಲುತ್ತದೆ. ಫ್ಲೈಓವರ್‌ಗಳು ಬಿರುಕು ಬಿಟ್ಟಿವೆ. ಪಾದಚಾರಿ ಮಾರ್ಗಗಳಲ್ಲಿ ಕೇಬಲ್‌ಗಳು ಬಿದ್ದಿರುತ್ತವೆ. ಹಾಗಿದ್ದರೆ ಜನ ಎಲ್ಲಿ ಓಡಾಡಬೇಕು, ಏನು ಮಾಡಬೇಕು?

ಇಂಥ ದುರಂತಗಳು ಸಂಭವಿಸಿದಾಗಲೆಲ್ಲ ಪರಿಹಾರದ ಮಾತುಗಳು ಜೋರಾಗಿ ಕೇಳಿಬರುತ್ತವೆ. ತಕ್ಷಣವೇ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು, ಸಚಿವರು ಹೇಳುತ್ತಾರೆ. ಹಾಗಿದ್ದರೆ, ಇಷ್ಟೆಲ್ಲ ವರ್ಷವಾದ ಮೇಲೂ ಗೊರಗುಂಟೆ ಪಾಳ್ಯ ಫ್ಲೈಓವರ್ ಏಕೆ ಇನ್ನೂ ರಿಪೇರಿ ಆಗಿಲ್ಲ? ಹೆಬ್ಬಾಳ ಫ್ಲೈಓವರ್ ಸುತ್ತಮುತ್ತ ಜನ ಇನ್ನೂ ಎಷ್ಟು ವರ್ಷ ನರಕ ಅನುಭವಿಸಬೇಕು? ಈಜಿಪುರದ ಫ್ಲೈಓವರ್ ಕಾಮಗಾರಿ ಮುಗಿಸಲು ಇನ್ನೆಷ್ಟು ಕೋಟಿ ಬೇಕು? ಇಂಥ ನೂರೆಂಟು ಕಾಮಗಾರಿಗಳು, ರಿಪೇರಿ ಕೆಲಸಗಳು ಬಾಕಿ ಇವೆ. ಅಥವಾ ವರ್ಷಗಳಿಂದ ನಡೆಯುತ್ತಲೇ ಇವೆ. ಹೊಸದಾಗಿ ನಿರ್ಮಾಣವಾದ ಶಿವಾನಂದ ವೃತ್ತದಂಥ ಮೇಲ್ಸೇತುವೆಗಳೂ ಕೂಡ ಲೋಪಗಳಿಂದ ಕೂಡಿವೆ ಎಂದರೆ, ಈ ನಗರದ ಸಮಸ್ಯೆಗಳಿಗೆ ಕೊನೆ ಎನ್ನುವುದುಂಟೆ?

ಸಿದ್ದರಾಮಯ್ಯನವರ ಸರ್ಕಾರ ಬೆಂಗಳೂರಿನ ಅಭಿವೃದ್ಧಿಯತ್ತ ಗಮನ ಕೊಡಬೇಕಿದೆ. ಮುಖ್ಯವಾಗಿ ಗುತ್ತಿಗೆದಾರರು ಸೇರಿದಂತೆ 40% ಭ್ರಷ್ಟಾಚಾರದಿಂದ ಹಳ್ಳ ಹಿಡಿದಿರುವ ಪಾಲಿಕೆ ಸಿಬ್ಬಂದಿ, ಶಾಸಕರು, ಸಚಿವರು ಎಲ್ಲರನ್ನೂ ಮಟ್ಟ ಹಾಕಬೇಕಿದೆ. ತಪ್ಪುಗಳು ಕಂಡುಬಂದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಹೀಗಾಗದ ಹೊರತು ಬೆಂಗಳೂರು ಬಡವರು, ಶ್ರಮಿಕರು ಸೇರಿದಂತೆ ನಗರವಾಸಿಗಳ ಬಲಿ ಕೇಳುತ್ತಲೇ ಇರುತ್ತದೆ.  

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X