ಕೊಲೆಯಾಗುವ ಮಟ್ಟಕ್ಕೆ ವೈಷಮ್ಯವನ್ನು ಕಟ್ಟಿಕೊಂಡಿದ್ದ ಸುಹಾಸ್ ಶೆಟ್ಟಿಯನ್ನು ಪಾತಕಿಯಾಗಿ ರೂಪಿಸಿದ್ದು ಯಾರೆಂಬುದನ್ನು ಸಮಾಜ ಯೋಚಿಸಬೇಕು. ಧರ್ಮಾಂಧತೆ ಮತ್ತು ಮಾದಕ ವಸ್ತುಗಳು ಮನುಷ್ಯನನ್ನು ಇರಿಯುತ್ತಿರುವ ನಿಜದ ಚೂರಿಗಳು. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು
ಮಂಗಳೂರು ನಗರದ ಬಜಪೆ ಕಿನ್ನಿಪದವು ಜನನಿಬಿಡ ಪ್ರದೇಶದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಕೊಲೆಯಾದ ರೌಡಿಶೀಟರ್ ಸುಹಾಸ್ ಶೆಟ್ಟಿಯ ಹೆಸರು ಹಿಡಿದು ಹೊರಟ ಬಿಜೆಪಿಯ ಮತೀಯ ರಾಜಕಾರಣ ಎಲ್ಲೆ ಮೀರುತ್ತಿದೆ. ಕೊಲೆಯಲ್ಲಿ ಭಾಗಿಯಾದವರನ್ನು ಹಿಡಿದು ಶಿಕ್ಷಿಸುವ ಕಾನೂನಿನ ಕೆಲಸಗಳು ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸುಹಾಸ್ ಸಾವಿನ ನೆಪದಲ್ಲಿ ಹಿಂಸೆಯನ್ನು ಪ್ರಚೋದಿಸುವ ಕಸರತ್ತಿನಲ್ಲಿ ಬಿಜೆಪಿ ನಾಯಕರು ನಿರತರಾಗಿದ್ದಾರೆ.
2022ನೇ ಇಸವಿಯಲ್ಲಿ ಕರಾವಳಿ ಕರ್ನಾಟಕವು ಕೋಮು ಆಧಾರಿತ ಕೊಲೆಗಳಿಗೆ ಕುಖ್ಯಾತಿಯನ್ನು ಪಡೆದಿತ್ತು. ಕ್ಲುಲ್ಲಕ ಕಾರಣಕ್ಕೆ ಮಸೂದ್ ಎಂಬ ಯುವಕನ ಕೊಲೆಯಾಯಿತು. ತದನಂತರ ಪ್ರವೀಣ್ ನೆಟ್ಟಾರು ಹತ್ಯೆಯಾಯಿತು. ಇದರ ಕೊಲೆಯ ಬೆನ್ನಲ್ಲಿ ಅಮಾಯಕ ಮೊಹಮ್ಮದ್ ಫಾಝಿಲ್ ಅವರಿಗೆ ಇರಿದು ಕೊಲ್ಲಲಾಯಿತು. ಫಾಝಿಲ್ ಮರ್ಡರ್‌ನಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ. ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೋಮು ಆಧಾರಿತ ಕೊಲೆಗಳ ವಿಚಾರದಲ್ಲಿ ಪರಿಹಾರವನ್ನು ವಿತರಿಸುವಲ್ಲಿಯೂ ತಾರತಮ್ಯ ಎಸಗಿತು. ಸುಹಾಸ್ ಕೊಲೆಯಲ್ಲಿ ಫಾಝಿಲ್ ಸಹೋದರ ಆದಿಲ್ ಮೆಹರೂಫ್ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವ ವಿಚಾರ. ಇದೊಂದು ಪ್ರತೀಕಾರದ ಕೊಲೆ ಎಂಬಂತೆ ತೋರುತ್ತಿದೆ.
ಕೊಲೆಗೆ ಕೊಲೆ ಎಂದು ಸಮಾಜ ಹೊರಟಿದೆ. ರಕ್ತಸಿಕ್ತ ಕೈಗಳನ್ನು ಹೊತ್ತು ನಡೆಯುತ್ತಿರುವ ನಾಗರಿಕರನ್ನು ತಿದ್ದುವ ಕೆಲಸಗಳನ್ನು ಸರ್ಕಾರ, ವಿರೋಧ ಪಕ್ಷಗಳು, ಧಾರ್ಮಿಕ ಸಂಸ್ಥೆಗಳು ಮಾಡಬೇಕಿದೆ. ಧರ್ಮ ರಾಜಕಾರಣದ ಅಪಾಯಗಳನ್ನು ಯುವಜನರಿಗೆ ತಿಳಿಸಿ ಹೇಳಬೇಕಾಗಿದೆ. ಸುಹಾಸ್ ಮತ್ತು ಎದುರಾಳಿಗಳು ಪರಸ್ಪರ ಕೊಲೆಯ ಪ್ರತಿತಂತ್ರ ರೂಪಿಸಿದಂತೆಯೂ ಆರಂಭಿಕ ತನಿಖೆಗಳು ಹೇಳುತ್ತಿವೆ. ಬಂಧಿತ ಆರೋಪಿಗಳಲ್ಲಿ ಇಬ್ಬರು ಹಿಂದೂ ಹಿನ್ನೆಲೆಯವರೂ ಇದ್ದಾರೆ. ಇಂತಹ ಸನ್ನಿವೇಶದಲ್ಲಿ ಬಿಜೆಪಿ ಮತ್ತು ಅದರ ನಾಯಕರು, ಬಿಜೆಪಿ ಬೆಂಬಲಿತ ಕೂಗುಮಾರಿ ಮಾಧ್ಯಮಗಳು ವರ್ತಿಸುತ್ತಿರುವ ರೀತಿ ಹಿಂಸೆಯನ್ನು ಮತ್ತಷ್ಟು ಉದ್ದೀಪಿಸುವಂತೆ ಕಾಣುತ್ತಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ರಾಹುಲ್ ಕಾರ್ಯಸೂಚಿಗೆ ಮೋದಿ ಮಣೆ ಹಾಕಿ ಶರಣಾದ ಗುಟ್ಟೇನು?
ಹಿಂದೂ ರಕ್ಷಕ, ಹಿಂದೂ ಕಾರ್ಯಕರ್ತನ ಕೊಲೆ ಎಂಬುದು ಇಲ್ಲಿನ ನರೇಟಿವ್. ಆತ ಫಾಝಿಲ್ ಕೊಲೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಹುತಾತ್ಮನನ್ನಾಗಿ ಬಿಂಬಿಸುವ ಕೆಲಸಗಳಾಗಿವೆ. ಬಿಜೆಪಿ ನಾಯಕರು ತರಹೇವಾರಿ ಹೇಳಿಕೆಗಳನ್ನು ನೀಡಿದ್ದಾರೆ. ಯಾವುದಾದರೂ ಒಂದು ಹಿಂದೂ ಹೆಣ ಬಿದ್ದರೆ ಸಾಕೆಂದು ಕಾಯುತ್ತಾ ಕೂತಂತೆ ಅವರ ವರ್ತನೆಗಳು ಇರುವುದು ಇದೇ ಮೊದಲೇನೂ ಅಲ್ಲ. ಆದರೆ ಸುಹಾಸ್ ಶೆಟ್ಟಿ ಒಬ್ಬ ರೌಡಿ ಶೀಟರ್ ಎಂಬುದನ್ನು ಗಮನಿಸಬೇಕಾಗುತ್ತದೆ. ಆತ ರೌಡಿಯಾಗಿದ್ದು ಏಕೆ? ಆತನನ್ನು ರೌಡಿ ಶೀಟರ್‌ಗೆ ಸೇರಿಸಿದ್ದು ಯಾರು? ಆತನ ಮೇಲಿನ ಕೇಸ್‌ಗಳು ಯಾವುವು?- ಇದ್ಯಾವುದಕ್ಕೂ ಬಿಜೆಪಿಯವರು ಸಂಪೂರ್ಣವಾಗಿ ಉತ್ತರಿಸಲಾರರು.
ಬಿಜೆಪಿ ಸರ್ಕಾರವಿದ್ದಾಗಲೇ ಈತನ ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು ಎಂಬ ಅಂಶ ಹೊರಬಿದ್ದಿದೆ. ಅದೊಂದು ಸಹಜ ಕ್ರಿಯೆ. ಎರಡು ಕೊಲೆ ಪ್ರಕರಣದಲ್ಲಿ ಸಿಲುಕಿದವನು, ಆಗಾಗ್ಗೆ ದೊಂಬಿ ಗಲಾಟೆಗಳಲ್ಲಿ ಭಾಗಿಯಾದವನು ರೌಡಿಶೀಟರ್ ಎಂದು ಗುರುತಿಸಲ್ಪಡುವುದು ಸಹಜ. ಅದು ಕಾನೂನಿನ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸ. ಆದರೆ ಸುಹಾಸ್ ಕೊಲೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಂದ್ ಮಾಡಿದ್ದು ಕೊಟ್ಟ ಸಂದೇಶವೇನು? ಒಬ್ಬ ರೌಡಿಶೀಟರ್‌ಗಾಗಿ ಬಂದ್ ಆಚರಿಸಿದವರೆಂಬ ನಿಂದನೆಯನ್ನು ಬಿಜೆಪಿ ಮತ್ತು ಸಂಘಪರಿವಾರ ಎದುರಿಸಬೇಕಾಗಿದೆ.
ಫಾಝಿಲ್ ಅಷ್ಟೇ ಅಲ್ಲ, ಕೀರ್ತಿ ಎಂಬ ಹಿಂದೂ ಯುವಕನನ್ನು ಕೊಂದ ಆರೋಪ ಸುಹಾಸ್ ಮೇಲಿತ್ತು. ಕೀರ್ತಿ ಪ್ರಕರಣ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲೂ ಕೇಸ್ ದಾಖಲಾಗಿತ್ತು. ಈ ಹಿಂದೆ ಬಾರ್‌ನಲ್ಲಿ ಗಲಾಟೆ ಮಾಡಿಕೊಂಡು ಎಫ್‌ಐಆರ್ ದಾಖಲಾಗಿ, ಅದು ಖುಲಾಸೆಯಾಗಿತ್ತು. ಸುಹಾಸ್ ಮೇಲೆ ಐದು ಪ್ರಕರಣಗಳು ದಾಖಲಾಗಿದ್ದವು. ಒಂದರಲ್ಲಿ ಶಿಕ್ಷೆಯಾಗಿತ್ತು. ಇಂತಹ ಹಿನ್ನೆಲೆಯ ಸುಹಾಸ್‌ನನ್ನು ಧರ್ಮರಕ್ಷಕನ ಪಟ್ಟಕ್ಕೇರಿಸುವುದು ಬಿಜೆಪಿಯ ಸೇರಿರುವ ರಸಾತಳವನ್ನು ಸೂಚಿಸುತ್ತಿದೆ.
ಕೊಲೆ ಮತ್ತು ಪ್ರತೀಕಾರಗಳ ಹಿಂದೆ ಬಿದ್ದ ಮನುಷ್ಯ ಹಿಂಸೆಯನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಬೇಕಾಗುತ್ತದೆ. ಸತ್ತವನ ಹೆಸರಿಡಿದು ರಾಜಕಾರಣ ಮಾಡುವವರಾರೂ ನೊಂದ ತಂದೆ ತಾಯಿಗಳ ಆಕ್ರಂದನವನ್ನು ಹೃದಯ ತುಂಬಿ ಆಲಿಸಲಾರರು. ರೌಡಿಯಾಗಿ ಗುರುತಿಸಿಕೊಂಡ ಸುಹಾಸ್, ಹೆತ್ತವರಿಗೆ ಮಗನಷ್ಟೇ. ”ನಾಯಕರೆನಿಸಿಕೊಂಡವರು ನಾಲ್ಕು ದಿನ ಬರುತ್ತಾರೆ, ಆಮೇಲೆ ನಾವೇ ಅನುಭವಿಸಬೇಕು, ರಾಜಕಾರಣಗಳು ನಮ್ಮ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದಿರುವ ಸುಹಾಸ್‌ನ ತಂದೆಯ ಮಾತುಗಳು ಸಹಜವಾಗಿ ಹೆತ್ತವರ ಸಂಕಟವನ್ನು ಸೂಚಿಸುತ್ತವೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮಂಗಳೂರು ಹತ್ಯೆಗಳಲ್ಲಿ ಮಾಧ್ಯಮಗಳೂ ಆರೋಪಿಗಳಲ್ಲವೇ?
ಕೊಲೆಯಾಗುವ ಮಟ್ಟಕ್ಕೆ ವೈಷಮ್ಯವನ್ನು ಕಟ್ಟಿಕೊಂಡಿದ್ದ ಸುಹಾಸ್‌ನನ್ನು ಪಾತಕಿಯಾಗಿ ರೂಪಿಸಿದ್ದು ಯಾರೆಂಬುದನ್ನು ಸಮಾಜ ಯೋಚಿಸಬೇಕು. ಧರ್ಮಾಂಧತೆ ಮತ್ತು ಮಾದಕ ವಸ್ತುಗಳು ಮನುಷ್ಯನನ್ನು ಇರಿಯುತ್ತಿರುವ ನಿಜದ ಚೂರಿಗಳು. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು.
ಸುಹಾಸ್ ಕೊಲೆಗೂ ಎರಡು ದಿನಗಳ ಹಿಂದಷ್ಟೇ ಕರಾವಳಿ ಮತ್ತೊಂದು ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿತ್ತು. ಮುಸ್ಲಿಂ ಎಂಬ ಕಾರಣಕ್ಕೆ ವಲಸೆ ಕಾರ್ಮಿಕನೊಬ್ಬನನ್ನು ಕೊಂದಿರುವ ಗಂಭೀರ ಆರೋಪ ಬಂದಿತ್ತು. ಕ್ರಿಕೆಟ್ ಪಂದ್ಯಾವಳಿಯ ವೇಳೆ ಗುಂಪು ಹತ್ಯೆಗೆ ಒಳಗಾದ ಕೇರಳ ಮೂಲದ ವಲಸೆ ಕಾರ್ಮಿಕ ಮೊಹಮ್ಮದ್ ಅಶ್ರಫ್‌ನ ಸಾವಿಗೆ ಇವರೇಕೆ ಮಿಡಿಯಲಿಲ್ಲ? ಆತ ಯಾವುದೇ ರೌಡಿ ಶೀಟರ್ ಅಲ್ಲ, ಆತ ಯಾವುದೇ ಕೊಲೆ ಪಾತಕಗಳನ್ನು ಮಾಡಿದವನಲ್ಲ. ಆದರೆ ಭಾರೀ ಜನರ ಗುಂಪೊಂದು ಕೊಂದು ಹಾಕಿತು. ಕಾರಣ ಮಾತ್ರ ತರಹೇವಾರಿ ಹೊರಬೀಳುತ್ತಿವೆ. ಆತ ಬಾಟಲ್ ನೀರು ಕುಡಿದದ್ದಕ್ಕೆ ಕೊಲ್ಲಲಾಗಿದೆ ಎಂಬ ಆರೋಪವೂ ಬಂದಿದೆ. ಮನುಷ್ಯತ್ವದ ಪಸೆ ಇದ್ದವರು ಅಶ್ರಫ್‌ನ ಕೊಲೆಗೂ ಮಿಡಿಯುತ್ತಿದ್ದರು. ಆದರೆ ಆತ ಮುಸ್ಲಿಂ, ಸುಹಾಸ್ ಶೆಟ್ಟಿ ಹಿಂದೂ. ಇದಿಷ್ಟೇ ಸಾಕು, ಧ್ರುವೀಕರಣದ ರಾಜಕೀಯಕ್ಕೆ. ಈ ಎರಡು ಕೊಲೆಗಳ ವಿಚಾರದಲ್ಲೂ ಸರ್ಕಾರದ ಪ್ರತಿನಿಧಿಗಳು ನಿಷ್ಪಕ್ಷಪಾತವಾಗಿ ವರ್ತಿಸಬೇಕಾಗಿದೆ. ಬದುಕುವ ಹಕ್ಕು ಸುಹಾಸ್‌ಗೂ ಇತ್ತು, ಅಶ್ರಫ್‌ಗೂ ಇತ್ತು. ಇದನ್ನು ನಾಗರಿಕ ಸಮಾಜ ಮರೆಯಬಾರದು.
