ಈ ದಿನ ಸಂಪಾದಕೀಯ | ಬುಲ್ಡೋಜರ್‌, ತಲವಾರು ಹೇಳಿಕೆ; ಬಿಜೆಪಿ ಮುಖಂಡರಿಗೆ ಸೌಹಾರ್ದ ಕರ್ನಾಟಕ ಬೇಕಿಲ್ಲವೇ?!

Date:

Advertisements

ನಾಗಮಂಗಲದ ಘಟನೆಯಲ್ಲಿ ಹಿಂದೂಗಳ ಮೆರೆದಾಟ, ಮುಸ್ಲಿಮರ ಹುಚ್ಚಾಟ ಎರಡೂ ಅತಿರೇಕಕ್ಕೆ ಹೋಗಿದೆ. ಇದು ಸೌಹಾರ್ದ ಪರಂಪರೆಯ ಮೇಲೆ ನಿಂತಿರುವ ಕರ್ನಾಟಕದ ಆತ್ಮಕ್ಕೆ ಇರಿಯುವ ಪ್ರಯತ್ನವಷ್ಟೇ. ಈ ಮಧ್ಯೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ರಾಜಕೀಯ ನಾಯಕರಿಗೆ ಏನು ಶಿಕ್ಷೆ ಇದೆ?

ಮಂಡ್ಯದ ನಾಗಮಂಗಲದ ಬದ್ರಿಕೊಪ್ಪಲುವಿನ ಗಜಪಡೆ ಯುವಕ ಸಂಘದವರು ಬುಧವಾರ ಸಂಜೆ ನಡೆಸಿದ ಗಣೇಶ ಮೂರ್ತಿಯ ಮೆರವಣಿಗೆ ಈಗ ಇಡೀ ಗ್ರಾಮವನ್ನು ಕೋಮು ದಳ್ಳುರಿಯ ಬೆಂಕಿಯಲ್ಲಿ ಬೇಯುವಂತೆ ಮಾಡಿದೆ. ಮೆರವಣಿಗೆ ಮಸೀದಿಯ ಬಳಿ ಬಂದಾಗ ಯುವಕರು ಪಟಾಕಿ ಸಿಡಿಸಿ ಜೈಶ್ರೀರಾಮ್‌ ಘೋಷಣೆ ಕೂಗಿದ್ದಾರೆ. ಮುಸ್ಲಿಂ ಯುವಕರ ಗುಂಪು ಅದಕ್ಕೆ ಪ್ರತಿಯಾಗಿ ಅಲ್ಲಾಹು ಅಕ್ಬರ್‌ ಘೋಷಣೆ ಕೂಗಿದೆ. ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಹಿಂದೂ ಯುವಕರು ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆಗ ಕಲ್ಲು ತೂರಾಟ ನಡೆದಿದೆ. ಘರ್ಷಣೆಯಲ್ಲಿ ಪುಂಡರು ಮಳಿಗೆಗಳಿಗೆ ಬೆಂಕಿಯಿಟ್ಟು ಅಪಾರ ಆಸ್ತಿ ಪಾಸ್ತಿ ಹಾಳುಗೆಡಹಿದ್ದಾರೆ. ಎರಡೂ ಕಡೆಯ ಐವತ್ತಕ್ಕೂ ಹೆಚ್ಚು ಯುವಕರು ಬಂಧನಕ್ಕೊಳಗಾಗಿದ್ದಾರೆ. ಸ್ಥಳೀಯ ಕೋರ್ಟ್‌ ಸೆ. 25ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಎಪ್ಪತ್ತು ಮಂದಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಧರ್ಮ ದ್ವೇಷಕ್ಕೆ ಊರಿಗೆ ಊರೇ ನೊಂದಿದೆ, ಬೆಂದಿದೆ. ಅಂಗಡಿಗಳು ಮಾತ್ರವಲ್ಲ ಮನಸ್ಸುಗಳೂ ಕರಕಲಾಗಿವೆ.

ಗಣೇಶನ ಮೆರವಣಿಗೆ ಸಾಗುವಾಗ ಮಸೀದಿ ಮುಂದೆ ಡಿಜೆ ಹಾಕಿ ಕುಣಿಯುವುದು, ಜೈ ಶ್ರೀರಾಮ್‌ ಘೋಷಣೆ ಕೂಗುವುದು, ಪಟಾಕಿ ಹಚ್ಚುವುದು ಮುಸ್ಲಿಮರನ್ನು ಕೆಣಕುವ ದುರುದ್ದೇಶ ಬಿಟ್ಟರೆ ಬೇರೇನೂ ಇಲ್ಲ. ಇದು ದೇಶದ ಹಲವು ಕಡೆಗಳಲ್ಲಿ ನಡೆಯುವ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಕಾಣುವ ದೃಶ್ಯ. ನಾಗಮಂಗಲದ ಗಣೇಶನ ಮೆರವಣಿಗೆಯಲ್ಲಿ ಶ್ರೀರಾಮ ಸುಮ್ಮನೆ ಬಂದಿಲ್ಲ.

Advertisements

ನಾಗಮಂಗಲದ ಗಲಭೆಕೋರರು ಹಲವು ಅಂಗಡಿ ಮುಂಗಟ್ಟು, ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಪುಂಡರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಪ್ರಕರಣದಲ್ಲಿ ಎರಡೂ ಸಮುದಾಯದ ನಾಯಕರು, ರಾಜಕೀಯ ಮುಖಂಡರು, ಆರೋಪಿಗಳ ಕುಟುಂಬದವರು “ನಮ್ಮವರು ಅಮಾಯಕರು, ಮನೆಯಲ್ಲಿ ಮಲಗಿದ್ದಾಗ ಎತ್ತಾಕಿಕೊಂಡು ಹೋದರು” ಎಂಬ ಹೇಳಿಕೆ ಕೊಡುವುದನ್ನು ಮೊದಲು ಬಿಡಬೇಕು. ಗಲಭೆಯಲ್ಲಿ ತಮ್ಮವರ ಪಾತ್ರ ಇಲ್ಲ ಎಂದಾದರೆ ಅದಕ್ಕೂ ಕೋರ್ಟ್‌ ಪುರಾವೆ ಕೇಳುತ್ತೆ. ಇದೆ ಎಂದಾದರೆ ಅದಕ್ಕೂ ಪೊಲೀಸರು ಪುರಾವೆ ಒದಗಿಸುತ್ತಾರೆ. ಇದು ಒಂದು ಭಾಗ.

ಈ ಮಧ್ಯೆ ಕೋಮುಗಲಭೆಯ ಬೆಂಕಿಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎಂದೇ ಕೆಲವು ರಾಜಕೀಯ ನಾಯಕರು ಕಾಯುತ್ತಿರುತ್ತಾರೇನೋ ಎಂಬುದು ಅನುಮಾನವಲ್ಲ, ವಾಸ್ತವ. ನಾಗಮಂಗಲದಲ್ಲಿ ಕೋಮು ಗಲಭೆ ನಡೆದ ಬೆನ್ನಲ್ಲೇ ಬಿಜೆಪಿಯ ಸಕಲ ನಾಯಕರು ಈ ಗಲಭೆಯನ್ನು ರಾಜ್ಯ ಸರ್ಕಾರವೇ ಮಾಡಿಸಿದೆ ಎಂದು ನೇರ ಆರೋಪ ಮಾಡಿದರು. ಒಂದು ಸಮುದಾಯದ ತುಷ್ಟೀಕರಣ ಮಾಡಿದ ಪರಿಣಾಮ ಇದು, ಸರ್ಕಾರ ರಕ್ಷಣೆ ಸಿಗುವ ಧೈರ್ಯದಿಂದ ಹೀಗೆ ಮಾಡಿದ್ದಾರೆ, ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದೂ ಕಿರುಚಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪ್ರವೀಣ್‌ ನೆಟ್ಟಾರು, ಹರ್ಷ ಕೊಲೆಯಾದಾಗ ಕಾಂಗ್ರೆಸ್‌ನ ಬೆಂಬಲದಿಂದ ಮುಸ್ಲಿಮರು ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುತ್ತಿದ್ದಾರೆ ಎಂದಿದ್ದರು. ಮಂಗಳೂರು ಗಲಭೆ ಗೋಲಿಬಾರ್‌ ನಡೆದಾಗಲೂ ಅದೇ ಆರೋಪ ಮಾಡಿದ್ದರು.

ಅತ್ತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರದ್ದು ಬೇರೆಯದೇ ಆಯಾಮ. ಅವರ ಪ್ರಕಾರ ಮುಡಾ ಪ್ರಕರಣ ಡೈವರ್ಟ್‌ ಮಾಡಲು ನಾಗಮಂಗಲದಲ್ಲಿ ಗಲಭೆ ಮಾಡಿಸಲಾಗಿದೆ. ಎಲ್ಲಿಯ ನಾಗಮಂಗಲ, ಎಲ್ಲಿಯ ಮುಡಾ, ಒಂದಕ್ಕೊಂದು ಸಂಬಂಧವೇ ಇಲ್ಲ. ಇದೇ ಜೋಶಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ ಸಿಗರೇಟು ಸೇದುತ್ತಿರುವ ಫೋಟೋ ಹೊರಬಂದಾಗಲೂ, “ಮುಡಾ ಹಗರಣವನ್ನು ಡೈವರ್ಟ್‌ ಮಾಡಲು ಸರ್ಕಾರವೇ ಫೋಟೋ ಲೀಕ್‌ ಮಾಡಿದೆ” ಎಂದಿದ್ದರು.

ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಬೇಜವಾಬ್ದಾರಿ ಹೇಳಿಕೆ ನೀಡುವುದರಲ್ಲಿ ನಿಸ್ಸೀಮ ಪ್ರತಿಭೆ. ಯೋಗಿ ರೀತಿಯ ಬುಲ್ಡೋಜರ್‌ ಕಾರ್ಯಾಚರಣೆ ಇಲ್ಲೂ ನಡೆಯಬೇಕು ಎಂದು ಆದೇಶ ನೀಡಿದ್ದಾರೆ. “ರಾಜ್ಯದಲ್ಲೂ ಉತ್ತರಪ್ರದೇಶದ ಮಾದರಿಯ ಸರ್ಕಾರ ರಚನೆಯಾಗುವುದು ಇಂದಿನ ತುರ್ತು ಅಗತ್ಯ” ಎಂದು ಸಿ ಟಿ ರವಿ ಹೇಳಿದ್ದಾರೆ. ಆದರೆ, ಇದೇ ಉತ್ತರಪ್ರದೇಶದಲ್ಲಿ ನಡೆಸಿದ ಬುಲ್ಡೋಜರ್‌ ಕಾರ್ಯಾಚರಣೆ ಸಂವಿಧಾನ ಬಾಹಿರ ಎಂದು ಸುಪ್ರೀಂ ಕೋರ್ಟ್‌ ವಾರದಲ್ಲಿ ಎರಡು ಬಾರಿ ಹೇಳಿದೆ. ಅದನ್ನು ವಿಪಕ್ಷ ನಾಯಕರು ಗಮನಿಸಿಲ್ಲವೇ? ಗಲಭೆಯಲ್ಲಿ ಭಾಗಿಯಾಗುವ ಎಲ್ಲರ ಮನೆಗಳ ಮೇಲೆ ಬುಲ್ಡೋಜರ್‌ ಹರಿಸಿದರೆ ಅದರಲ್ಲಿ ಹಲವು ಹಿಂದೂ ಕುಟುಂಬಗಳೂ ಬೀದಿಗೆ ಬರಲಿವೆ. ರಾಜಕೀಯ ನಾಯಕರು ಹೇಳಿಕೆ ನೀಡುವಾಗ ಸ್ವಲ್ಪವಾದರೂ ಜವಾಬ್ದಾರಿ ತೋರುವ ಅಗತ್ಯ ಇದೆ. ಇವರಿಗೆಲ್ಲ ಈ ದೇಶದ ಸಂವಿಧಾನ, ಕಾನೂನು ಸುಪ್ರೀಂ ಕೋರ್ಟ್ ಮೇಲೆ ಗೌರವ ಇಲ್ಲ ಎಂಬುದಕ್ಕೆ ಇವರ ಹೇಳಿಕೆಗಳೇ ಸಾಕ್ಷಿ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ರಾಜಕೀಯ ನಾಯಕರಿಗೆ ಏನು ಶಿಕ್ಷೆ?

ಅತ್ತ ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹ “ನಾವೂ ತಲ್ವಾರ್ ಹಿಡಿಯುತ್ತೇವೆ” ಎಂದಿದ್ದಾರೆ. ಸಿಂಹ ಸಂಸದ ಆಗಿದ್ದಾಗಲೂ ಕಾನೂನು ವಿರೋಧಿ ಹೇಳಿಕೆ ನೀಡುತ್ತಲೇ ಬಂದವರು. ತಾವೇ ಹನುಮ ಜಯಂತಿ ಮೆರವಣಿಗೆ ನಡೆಸಿ ಬ್ಯಾರಿಕೇಡ್‌ ಮೇಲೆ ವಾಹನ ಹತ್ತಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗೂಂಡಾಗಿರಿ ತೋರಿದವರು. ಮೈಸೂರಿನ ಶಾಸಕ ಎ ರಾಮದಾಸ್‌ ಅವರು ಕಟ್ಟಿಸಿದ ಬಸ್‌ ಶೆಲ್ಟರ್‌ ಮೇಲೆ ಮಸೀದಿಯ ಗುಂಬಜ್‌ ರೀತಿಯ ವಿನ್ಯಾಸ ಇದೆ ಎಂದು ಪ್ರತಿಭಟನೆ ಮಾಡಿ ತೆಗೆಸಿದ್ದು, ಮಾಜಿ ಆದ ನಂತರ ಇದ್ರಿಸ್‌ ಪಾಷಾ ಕೊಲೆ ಪ್ರಕರಣದ ಆರೋಪಿ ಪುನೀತ್‌ ಕೆರೆಹಳ್ಳಿ ಬೆಂಬಲಿಸಿ ಬೆಂಗಳೂರಿನಲ್ಲಿ ಪೊಲೀಸ್‌ ಠಾಣೆಯ ಮುಂದೆ ದೊಂಬಿ ಎಬ್ಬಿಸಿದ್ದರು. ಅಷ್ಟೇ ಅಲ್ಲ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಲ್ಲಿ ಭಾಗಿಯಾಗಿ ಜಾಮೀನಿನಲ್ಲಿ ಬಿಡುಗಡೆಯಾದ ನವೀನ್‌ ಕುಮಾರ್‌ ನನ್ನು ಭೇಟಿಯಾಗಿ ಸುದ್ದಿಯಾಗಿದ್ದರು.

ಇತ್ತೀಚೆಗೆ ಸುಳ್ಯದಲ್ಲಿ ಭಾಷಣ ಮಾಡುತ್ತಾ, ಅಲ್ಲಿನ ಪ್ರವೀಣ್‌ ನೆಟ್ಟಾರು ಮತ್ತು ಶಿವಮೊಗ್ಗದ ಹರ್ಷನ ಕೊಲೆ ಆರೋಪಿಗಳನ್ನು ಬಿಜೆಪಿ ಸರ್ಕಾರ ಶೂಟೌಟ್‌ ಮಾಡಬೇಕಿತ್ತು ಎಂದು ಹೇಳಿದ್ದರು. ಅತ್ತ ಬಿಜೆಪಿಗೆ ಬಲ ತುಂಬಿರುವ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಕೂಡಾ ಕೋಮುಜ್ವಾಲೆಗೆ ತುಪ್ಪ ಸುರಿದಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರ ಗಲಭೆ ಮಾಡಿಸಿದೆಯಂತೆ! ಯಾವುದೇ ಸರ್ಕಾರ ಸಮಾಜದಲ್ಲಿ ಗಲಭೆ ಮಾಡಿಸಿ ಸಾಧಿಸುವುದು ಏನಿದೆ? ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ನಡೆದ ಗಲಭೆಗಳನ್ನೂ ಅವರ ಸರ್ಕಾರವೇ ಮಾಡಿಸಿತ್ತೇ? ಏನಾಗಿದೆ ಇವರಿಗೆಲ್ಲ!

ಇವರೆಲ್ಲರ ಹೇಳಿಕೆ, ನಡವಳಿಕೆ ಗಮನಿಸಿದರೆ ಇವರಿಗೆ ಸೌಹಾರ್ದ ಕರ್ನಾಟಕ, ಶಾಂತಿಯುತ ಸಮಾಜ ಬೇಕಿಲ್ಲ ಎಂಬುದು ಅರ್ಥವಾಗುತ್ತದೆ. ತಮ್ಮ ಧರ್ಮ, ಪಕ್ಷದ ಕಾರ್ಯಕರ್ತರಿಗೆ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗದಂತೆ ಬುದ್ದಿ ಹೇಳುವ ಕೆಲಸ ಇವರು ಎಂದೂ ಮಾಡಿಲ್ಲ. ಯುವಕರು ವೈಯಕ್ತಿಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡರೂ, ಕೊಲೆ ನಡೆದರೂ ಅಲ್ಲಿ ಮುಸ್ಲಿಂ ಆರೋಪಿಗಳಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ರಾಜ್ಯದ ಮೂಲೆ ಮೂಲೆಯಿಂದ ನಾಯಕರು ಜಮಾಯಿಸುತ್ತಾರೆ. ಉರಿಯುತ್ತಿರುವ ಬೆಂಕಿಗೆ ನೀರು ಹಾಕುವ ಬದಲು ತುಪ್ಪ ಸುರಿಯುತ್ತಾರೆ.

ಚುನಾವಣೆಯ ಸಮಯದಲ್ಲಿ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಲ್ಲಿ ರಾಜ್ಯದ ಬಿಜೆಪಿ ನಾಯಕರು ಸಾಲದೆಂಬಂತೆ ದೆಹಲಿಯ ನಾಯಕರೂ ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಬಂದಿದ್ದರು. ಕೊಲೆ ಆರೋಪಿ ಒಂದೇ ಗಂಟೆಯಲ್ಲಿ ಬಂಧಿತನಾಗಿದ್ದರೂ, ಕಾರಣ ಬಹಿರಂಗಗೊಂಡಿದ್ದರೂ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಅದೇ ರೀತಿಯಲ್ಲಿ ಹುಬ್ಬಳ್ಳಿಯಲ್ಲೊಂದು, ಕೊಡಗಿನ ಸೋಮವಾರಪೇಟೆಯಲ್ಲೊಂದು ಯುವತಿಯ ಕೊಲೆ ನಡೆದಾಗ ಬಿಜೆಪಿಯವರಿಂದ ಯಾವ ಪ್ರತಿಭಟನೆಯೂ ಇಲ್ಲ. ಯಾಕೆಂದರೆ ಕೊಲೆಗಾರರು ತಮ್ಮದೇ ಧರ್ಮದವರಾಗಿದ್ದರು.

ಇನ್ನು ಗಣೇಶನ ಮೆರವಣಿಗೆ, ಹನುಮ ಜಯಂತಿ ಮೆರವಣಿಗೆ, ಜಾತ್ರೆ ಹೆಸರಿನಲ್ಲಿ ಪುಂಡಾಟ ಮೆರೆಯುವ, ಮಸೀದಿಯ ಧ್ವಜ ಕಿತ್ತು ಹಾಕುವುದು, ಮಸೀದಿ ಮುಂದೆ ಡಿಜೆ ಹಾಕಿ ಕುಣಿಯುವುದು, ಪಟಾಕಿ ಸುಡುವುದು, ಕಲ್ಲು ತೂರುವುದು, ಜೈ ಶ್ರೀರಾಮ್‌ ಘೋಷಣೆ ಕೂಗುವುದು ಇವೆಲ್ಲ ಹಿಂದೂ ಧರ್ಮದ, “ಸರ್ವೇಜನಾಃ ಸುಖೀನೋ ಭವಂತು” ಎಂದು ಆಶಯಕ್ಕೆ ವಿರುದ್ಧ, ಶ್ರದ್ಧಾ ಭಕ್ತಿಗೆ ಕಳಂಕ ಎಂದು ಹೇಳಲು ಸಮುದಾಯದ ಮುಖಂಡರು ಯಾಕೆ ತಯಾರಿಲ್ಲ? ಧರ್ಮ ರಾಜಕೀಯದೊಂದಿಗೆ ಬೆರೆತು ಹೋದ ಕಾರಣ, ಧರ್ಮದ ಗುತ್ತಿಗೆ ಪಡೆದವರಂತೆ ವರ್ತಿಸುವವರ ರಾಜಕೀಯ ನಿಲುವುಗಳು ಇದಕ್ಕೆ ಅಡ್ಡಿಯಾಗಿದೆ. ಮಠಾಧೀಶರುಗಳೂ ಬಹಿರಂಗವಾಗಿಯೇ ಕೋಮುದ್ವೇಷದ ಹೇಳಿಕೆ ನೀಡುವುದು, ಧಮ್ಕಿ ಹಾಕುವುದರಲ್ಲಿ ಹಿಂದೆ ಬಿದ್ದಿಲ್ಲ.

ನಾಗಮಂಗಲದ ಘಟನೆಯಲ್ಲಿ ಹಿಂದೂಗಳ ಮೆರೆದಾಟ, ಮುಸ್ಲಿಮರ ಹುಚ್ಚಾಟ ಎರಡೂ ಅತಿರೇಕಕ್ಕೆ ಹೋಗಿದೆ. ಮಸೀದಿಯ ಆವರಣದಿಂದ ಕಲ್ಲು, ಬಾಟಲಿ ತೂರಿ ಬಂದಿದ್ದು ಹೇಗೆ? ಅದು ಅಲ್ಲಿನ ಮುಖ್ಯಸ್ಥರಿಗೆ ಗೊತ್ತಿರಲಿಲ್ಲವೇ? ಪೇಟೆ ಬೀದಿಯ ಅಂಗಡಿಗಳಿಗೆ ಕಿಚ್ಚು ಹಚ್ಚಿದವರು ಅಮಾಯಕರೇ? ಯಾರದ್ದೋ ಬದುಕು ಛಿದ್ರಗೊಳ್ಳಲು ಗಣೇಶನ ಮೆರವಣಿಗೆ ಕಾರಣವಾಯಿತಲ್ಲಾ? ಇದು ಸೌಹಾರ್ದ ಪರಂಪರೆಯ ಮೇಲೆ ನಿಂತಿರುವ ಕರ್ನಾಟಕದ ಆತ್ಮಕ್ಕೆ ಇರಿಯುವ ಪ್ರಯತ್ನವಷ್ಟೇ.

ಕಳೆದ ವರ್ಷವೂ ಈ ಪ್ರದೇಶದ ದರ್ಗಾದ ಬಳಿ ಘರ್ಷಣೆ ನಡೆದಿತ್ತು. ಈ ವರ್ಷವಾದರೂ ಎರಡು ಸಮುದಾಯದ ನಡುವೆ ಘರ್ಷಣೆಯಾಗುವುದನ್ನು ತಡೆಯಲು ಪೊಲೀಸರು ವಿಫಲರಾಗಿದ್ದಾರೆ. ಪರಿಣಾಮವಾಗಿ ಯಾರದ್ದೋ ದ್ವೇಷದ ಕಿಚ್ಚಿಗೆ ಮತ್ಯಾರದ್ದೋ ಬದುಕು ಸರ್ವನಾಶವಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X