ನ್ಯಾ. ಶೇಖರ್ ಕುಮಾರ್ ಯಾದವ್ ಮೇಲಿನ ಆಪಾದನೆಗಳ ಕುರಿತು ಆಂತರಿಕ ತನಿಖೆ ನಡೆಸದಂತೆ ರಾಜ್ಯಸಭಾ ಸಚಿವಾಲಯವು ಸುಪ್ರೀಮ್ ಕೋರ್ಟಿಗೆ ಕಳೆದ ಮಾರ್ಚ್ ತಿಂಗಳಿನಲ್ಲಿ ಪತ್ರ ಬರೆದಿದೆ. ಪರಿಣಾಮವಾಗಿ ಯಾದವ್ ವಿರುದ್ಧ ಆಂತರಿಕ ತನಿಖೆಯನ್ನು ಸುಪ್ರೀಮ್ ಕೋರ್ಟು ಕೈ ಬಿಟ್ಟಿರುವ ಕಳವಳಕಾರಿ ಬೆಳವಣಿಗೆ ಇದೀಗ ಬೆಳಕಿಗೆ ಬಂದಿದೆ.
ಆರು ತಿಂಗಳ ಹಿಂದೆ ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ವಿಶ್ವಹಿಂದು ಪರಿಷತ್ತಿನ ಸಮಾರಂಭದಲ್ಲಿ ಭಾಗವಹಿಸಿ ಮುಸಲ್ಮಾನರ ಕುರಿತು ಅತ್ಯಂತ ಕೀಳಾಗಿ ಮಾತನಾಡಿದ್ದರು. ಇವರ ಮಾತುಗಳು ಜಾತ್ಯತೀತತೆ ಮತ್ತು ನ್ಯಾಯಾಂಗ ನಿಷ್ಪಕ್ಷಪಾತ ತತ್ವಗಳ ನಿಚ್ಚಳ ಉಲ್ಲಂಘನೆ ಎಂಬ ವ್ಯಾಪಕ ಖಂಡನೆ ಕೇಳಿ ಬಂದಿತ್ತು.
ಯಾದವ್ ಮೇಲಿನ ಆಪಾದನೆಗಳ ಕುರಿತು ಆಂತರಿಕ ತನಿಖೆ ನಡೆಸದಂತೆ ರಾಜ್ಯಸಭಾ ಸಚಿವಾಲಯವು ಸುಪ್ರೀಮ್ ಕೋರ್ಟಿಗೆ ಕಳೆದ ಮಾರ್ಚ್ ತಿಂಗಳಿನಲ್ಲಿ ಪತ್ರ ಬರೆದಿದೆ. ಪರಿಣಾಮವಾಗಿ ಯಾದವ್ ವಿರುದ್ಧ ಆಂತರಿಕ ತನಿಖೆಯನ್ನು ಸುಪ್ರೀಮ್ ಕೋರ್ಟು ಕೈ ಬಿಟ್ಟಿರುವ ಕಳವಳಕಾರಿ ಬೆಳವಣಿಗೆ ಇದೀಗ ಬೆಳಕಿಗೆ ಬಂದಿದೆ.
ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿ ವರ್ಮ ಅವರ ಅಧಿಕೃತ ನಿವಾಸದಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾದ ಕುರಿತು ಸುಪ್ರೀಮ್ ಕೋರ್ಟು ಆಂತರಿಕ ತನಿಖೆಯನ್ನು ನಡೆಸಿತು. ವರದಿ ಕೈ ಸೇರಿದ ನಂತರ ವರ್ಮ ಅವರ ಪದಚ್ಯುತಿಗೆ ಸಾಂಸದೀಯ ಪ್ರಕ್ರಿಯೆ ನಡೆಸುವಂತೆ ಶಿಫಾರಸನ್ನೂ ಮಾಡಿತು. ಎರಡೇ ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿತ್ತು.
ಯಾದವ್ ವಿರುದ್ಧದ ಆಂತರಿಕ ತನಿಖೆಗೆ ಅಡ್ಡ ಬಂದಿರುವ ರಾಜ್ಯಸಭೆಯ ಸಭಾಪತಿಯವರು, ಹೆಚ್ಚು ಕಡಿಮೆ ಅದೇ ಅವಧಿಯಲ್ಲಿ ನಡೆದಿದ್ದ ನ್ಯಾಯಮೂರ್ತಿ ವರ್ಮ ಕುರಿತ ಆಂತರಿಕ ತನಿಖೆ ಕುರಿತು ಉಸಿರೆತ್ತಿಲ್ಲ. ಒಂದು ಭ್ರಷ್ಟಾಚಾರದ ಪ್ರಕರಣ ಮತ್ತೊಂದು ಕೋಮುವಾದದ ಪ್ರಕರಣ. ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಕೋಮುವಾದ ಪರವಾಗಿಲ್ಲ ಎಂಬ ಧೋರಣೆಯಿದು.
ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೀಡಿದ್ದ ವರದಿ ಕೂಡ ಯಾದವ್ ವಿರುದ್ಧವಿತ್ತು. ಯಾದವ್ ಅವರನ್ನು ಪ್ರಯಾಗರಾಜದಿಂದ ದೆಹಲಿಗೆ ಕರೆಯಿಸಿಕೊಂಡ ಸುಪ್ರೀಮ್ ಕೋರ್ಟು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳುವಂತೆ ಅವರಿಗೆ ನಿರ್ದೇಶನ ನೀಡಿತು. ನ್ಯಾಯಮೂರ್ತಿ ಯಾದವ್ ಅವರು ಈ ನಿರ್ದೇಶನವನ್ನು ನಿರ್ಲಕ್ಷಿಸಿದರು. ರಾಜೀನಾಮೆ ನೀಡಬೇಕೆಂಬ ಸೂಚನೆಗೂ ಅವರು ಸೊಪ್ಪು ಹಾಕಲಿಲ್ಲ. ಆಡಳಿತ ಪಕ್ಷ ಶೇಖರ್ ಪರವಾಗಿ ನಿಂತಿದೆ.
ನಿರ್ದಿಷ್ಟ ನ್ಯಾಯಮೂರ್ತಿಯ ಮೇಲಿನ ಆಪಾದನೆಗಳ ಕುರಿತು ಸುಪ್ರೀಮ್ ಕೋರ್ಟು ಆಂತರಿಕ ತನಿಖೆ ನಡೆಸುತ್ತದೆ. ಈ ತನಿಖೆಯಲ್ಲಿ ಆರೋಪಗಳು ಸಾಬೀತಾದ ನಂತರ ಅವರನ್ನು ಪದಚ್ಯುತರನ್ನಾಗಿಸುವ ಸಂಸದೀಯ ಪ್ರಕ್ರಿಯೆ ಆರಂಭ ಆಗುತ್ತದೆ. ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಕ್ರಮವಿದು.
ಮುಸಲ್ಮಾನರ ವಿರುದ್ಧ ದ್ವೇಷ ಭಾಷಣ ಮಾಡಿರುವ ಯಾದವ್ ಅವರ ಬೆಂಬಲಕ್ಕೆ ನಿಂತಿದೆ ಆಡಳಿತ ಪಕ್ಷ. ಬಹಿರಂಗವಾಗಿ ಹಿಂದೂ ಪರವಾಗಿ ಮಾತನಾಡುವ ಇಂತಹ ಹೈಕೋರ್ಟ್ ನ್ಯಾಯಮೂರ್ತಿಯ ಪದಚ್ಯುತಿಯು ಹಿಂದೂ ವಿರೋಧಿ ಎಂದೇ ನಂಬಿ ನಡೆದುಕೊಳ್ಳುತ್ತಿದೆ.
“ಇಲ್ಲಿನ ಬಹುಸಂಖ್ಯಾತರ ಇಚ್ಛಾನುಸಾರ ಭಾರತ ದೇಶ ನಡೆಯಬೇಕು. ಕೇವಲ ಹಿಂದು ಮಾತ್ರವೇ ಈ ದೇಶವನ್ನು ವಿಶ್ವಗುರು ಮಾಡಬಲ್ಲನು. ಹಿಂದೂಗಳು ಸಾಮಾಜಿಕ ಸುಧಾರಣೆಗಳನ್ನು ಒಪ್ಪಿ ಅಳವಡಿಸಿಕೊಂಡರು. ಮುಸಲ್ಮಾನರು ಅವುಗಳನ್ನು ವಿರೋಧಿಸುತ್ತ ಬಂದಿದ್ದಾರೆ” ಎಂದಿದ್ದ ಯಾದವ್ ‘ಕಠಮುಲ್ಲೇ’ ಎಂಬ ಕೀಳು ಪದವನ್ನು ಮುಸ್ಲಿಮರ ವಿರುದ್ಧ ಬಳಸಿದ್ದರು.
ನ್ಯಾಯಮೂರ್ತಿ ಶೇಖರ್ ಯಾದವ್ ವಿರುದ್ಧ ಪದಚ್ಯುತಿ ಪ್ರಕ್ರಿಯೆಗೆ ಆಗ್ರಹಿಸಿ ರಾಜ್ಯಸಭೆಯ ಪ್ರತಿಪಕ್ಷಗಳ 55 ಮಂದಿ ಸದಸ್ಯರು ಕಳೆದ ಡಿಸೆಂಬರ್ 13ರಂದೇ ಗೊತ್ತುವಳಿ ಸೂಚನೆ ಸಲ್ಲಿಸಿದ್ದಾರೆ. ಈ ಗೊತ್ತುವಳಿ ಸೂಚನೆ ತೆವಳತೊಡಗಿದೆ. ಆರು ತಿಂಗಳುಗಳೇ ಉರುಳಿದರೂ ಸಹಿಗಳನ್ನು ತಾಳೆ ನೋಡುವ ಪ್ರಾಥಮಿಕ ಕೆಲಸವೇ ಇನ್ನೂ ಮುಗಿದಿಲ್ಲ.
ಕ್ಷಮಾಪಣೆ ಕೇಳಲು ಅಥವಾ ರಾಜೀನಾಮೆ ನೀಡಲು ಒಪ್ಪದೆ ಹಠ ಹಿಡಿದ ಯಾದವ್ ವಿರುದ್ಧ ಸುಪ್ರೀಮ್ ಕೋರ್ಟು ಆಂತರಿಕ ತನಿಖೆಗೆ ಮುಂದಾಗಿತ್ತು. ಹೈಕೋರ್ಟು-ಸುಪ್ರೀಮ್ ಕೋರ್ಟಿನ ಯಾವುದೇ ನ್ಯಾಯಮೂರ್ತಿಯ ಮೇಲಿನ ಆಪಾದನೆಗಳ ತನಿಖೆಗೆ ಹೀಗೆ ಆಂತರಿಕ ತನಿಖೆ ನಡೆಸಿ ವರದಿ ಪಡೆಯುವುದು ವಾಡಿಕೆ. ವರ್ಮ ನಿವಾಸದಲ್ಲಿ ಭಾರೀ ಮೊತ್ತದ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಕುರಿತು ದಾಳಿ ಮಾಡಿತ್ತು ಆಡಳಿತ ಪಕ್ಷ. ಅವರ ಪದಚ್ಯುತಿ ಪ್ರಕ್ರಿಯೆಯ ಪರವಾಗಿದೆ.
ಆದರೆ ಶೇಖರ್ ಕುಮಾರ್ ಯಾದವ್ ಮೇಲಿನ ಆಪಾದನೆಗಳ ಕುರಿತು ಆಂತರಿಕ ತನಿಖೆಯನ್ನು ಕೂಡ ನಡೆಸದಂತೆ ರಾಜ್ಯಸಭಾ ಸಚಿವಾಲಯವು ಸುಪ್ರೀಮ್ ಕೋರ್ಟಿಗೆ ಪತ್ರ ಬರೆದಿದೆ. ಪರಿಣಾಮವಾಗಿ ಆಂತರಿಕ ತನಿಖೆಯನ್ನು ಸುಪ್ರೀಮ್ ಕೋರ್ಟು ಕೈ ಬಿಟ್ಟಿದೆ.
ಯಾದವ್ ಅವರಿಂದ ‘ನ್ಯಾಯಾಂಗದ ನೈತಿಕತೆಯ ಗಂಭೀರ ಉಲ್ಲಂಘನೆಯಾಗಿದೆ’ ಎಂದು ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ಕಪಿಲ್ ಸಿಬ್ಬಲ್ ಮುಂತಾದ 55 ಮಂದಿ ರಾಜ್ಯಸಭಾ ಸದಸ್ಯರು ‘ಮಹಾಭಿಯೋಗ’ (ಹೈಕೋರ್ಟ್ ಅಥವಾ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು ಇಲ್ಲವೇ ಮುಖ್ಯ ನ್ಯಾಯಮೂರ್ತಿಗಳನ್ನು ಪದಚ್ಯುತರನ್ನಾಗಿಸುವ ಸಂಸದೀಯ ಪ್ರಕ್ರಿಯೆ- ಇಂಪೀಚ್ಮೆಂಟ್) ಪ್ರಕ್ರಿಯೆಗೆ ಚಾಲನೆ ನೀಡುವಂತೆ ನೋಟಿಸ್ ನೀಡಿದ್ದರು
ತಾವಾಗಿ ರಾಜೀನಾಮೆ ನೀಡದ ಹೊರತು, ಸುಪ್ರೀಮ್ ಕೋರ್ಟು- ಹೈಕೋರ್ಟ್ ಜಡ್ಜುಗಳನ್ನು ಕಿತ್ತು ಹಾಕುವ ಪ್ರಕ್ರಿಯೆ ಬಹಳ ಬಹಳ ದೀರ್ಘವೂ, ಸುತ್ತು ಬಳಸಿನದೂ ಆಗಿರುತ್ತದೆ. ಇಂತಹ ಜಡ್ಜ್ ಗಳಿಗೆ ಕೆಲಸ ಕಾರ್ಯವನ್ನೇ ನೀಡದಿರುವ ‘ಶಿಕ್ಷೆ’ಯನ್ನು ಕೊಡದಿರುವುದು ತಕ್ಷಣವೇ ವಿಧಿಸಬಹುದಾದ ಗರಿಷ್ಠ ‘ಶಿಕ್ಷೆ’.
ಹೈಕೋರ್ಟ್, ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳನ್ನು ತೆಗೆದು ಹಾಕುವ, ರಾಜೀನಾಮೆ ಪಡೆಯುವ ಅಧಿಕಾರ ಸುಪ್ರೀಮ್ ಕೋರ್ಟ್‌ಗೆ ಇಲ್ಲ. ಈ ಅಧಿಕಾರವನ್ನು ಸಂಸತ್ತು ತನ್ನ ಬಳಿ ಇಟ್ಟುಕೊಂಡಿದೆ. ಇಂಪೀಚ್ಮೆಂಟ್ ಪ್ರಸ್ತಾವವನ್ನು ಸೋಲಿಸುವ ಅಥವಾ ಗೆಲ್ಲಿಸುವ ಮೂಲಕ ಸಂಸತ್ತು ನಿರ್ಧರಿಸುತ್ತದೆ. ನಿರ್ದಿಷ್ಟ ನ್ಯಾಯಮೂರ್ತಿಯ ಮೇಲಿನ ಆಪಾದನೆಗಳು ತನಿಖೆಯ ನಂತರ ಸಾಬೀತಾದ ನಂತರ ಇಂಪೀಚ್ಮೆಂಟ್ ಪ್ರಸ್ತಾವ ಮಂಡಿಸುವಂತೆ ಸುಪ್ರೀಮ್ ಕೋರ್ಟು ಮಾಡುವ ಶಿಫಾರಸನ್ನು ಸಂಸತ್ತು ತಿರಸ್ಕರಿಸಿದರೆ ನ್ಯಾಯಾಂಗ ಏನೂ ಮಾಡುವಂತಿಲ್ಲ.
ಆದರೆ ತಮಗೆ ಬೇಕಾದ ಆಪಾದಿತ ನ್ಯಾಯಮೂರ್ತಿಯ ಅಂತರಿಕ ತನಿಖೆಯನ್ನೂ ನಡೆಸದಂತೆ ರಾಜ್ಯಸಭೆಯು ಅಡ್ಡ ಬರುವುದು ಅತಿರೇಕವೇ ಸರಿ. ಯಾದವ್ ಕುರಿತ ಮಹಾಭಿಯೋಗದ ಅರ್ಜಿ ರಾಜ್ಯಸಭೆಯ ಮುಂದಿರುವುದು ವಾಸ್ತವ. ಆದರೆ ಆ ಅರ್ಜಿ ಸಹಿಗಳ ಪರಿಶೀಲನೆಯ ಹಂತದಲ್ಲೇ ಉಳಿದಿದೆ. ಆರು ತಿಂಗಳಾದರೂ ಅರ್ಜಿಯ ಅಂಗೀಕಾರವೇ ಇನ್ನೂ ಆಗಿಲ್ಲ. 55 ಸಹಿಗಳ ಪರಿಶೀಲನೆಗೆ ರಾಜ್ಯಸಭೆಯ ಸಚಿವಾಲಯಕ್ಕೆ ಎಷ್ಟು ಕಾಲ ಬೇಕು ಎಂದು ಕಪಿಲ್ ಸಿಬ್ಬಲ್ ಪ್ರಶ್ನಿಸಿರುವುದು ಸೂಕ್ತವಾಗಿದೆ. ಒಂದು ವೇಳೆ ಅಂಗೀಕಾರ ಅದರೂ, ಸುಪ್ರೀಮ್ ಕೋರ್ಟಿನ ಆಂತರಿಕ ತನಿಖೆಗೂ ಇದಕ್ಕೂ ಸಂಬಂಧವೇ ಇಲ್ಲ.
ಆಂತರಿಕ ತನಿಖೆಯೇ ನಡೆಯದೆ ಪದಚ್ಯುತಿ ಪ್ರಕ್ರಿಯೆಯನ್ನು ಹತ್ತು ಹಲವು ನೆವವೊಡ್ಡಿ ಮುಂದೂಡುವುದು, ಇಲ್ಲವೇ ಪ್ರಕ್ರಿಯೆಗೆ ಚಾಲನೆ ನೀಡಿ ಬಹುಮತದಿಂದ ಅದನ್ನು ಸೋಲಿಸಿ ಯಾದವ್ ಅವರನ್ನು ರಕ್ಷಿಸುವ ಸಂವಿಧಾನ ವಿರೋಧಿ ಹುನ್ನಾರ ನಡೆದಿದೆ. ನ್ಯಾಯಾಂಗವನ್ನು ನಿಯಂತ್ರಿಸುವ ಪರೋಕ್ಷ ಪ್ರಯತ್ನವಿದು ಎಂದು ಸಿಬ್ಬಲ್ ಆರೋಪಿಸಿದ್ದಾರೆ. ತಮಿಳುನಾಡಿನ ರಾಜ್ಯಪಾಲ ರವಿ ಅವರು ಆ ಸರ್ಕಾರದ ಮಸೂದೆಗಳನ್ನು ವರ್ಷಗಟ್ಟಲೆ ಬಾಕಿ ಇಟ್ಟುಕೊಂಡ ಕುರಿತು ಸುಪ್ರೀಮ್ ಕೋರ್ಟ್ ನೀಡಿದ ಕಡುನಿಷ್ಠುರ ತೀರ್ಪನ್ನು ಉಪರಾಷ್ಟ್ರಪತಿ ಧನಕರ್ ಕಟುವಾಗಿ ಟೀಕಿಸಿ ನ್ಯಾಯಾಂಗದ ಮೇಲೆ ದಾಳಿ ನಡೆಸಿದ್ದುಂಟು.
ನ್ಯಾಯಮೂರ್ತಿ ಯಾದವ್ ಅವರು 2026ರಲ್ಲಿ ನಿವೃತ್ತರಾಗಲಿದ್ದಾರೆ. ಅಲ್ಲಿಯ ತನಕ ಅವರನ್ನು ರಕ್ಷಿಸಲು ಕಾಲಹರಣ ತಂತ್ರವನ್ನು ಅನುಸರಿಸುವ ಎಲ್ಲ ಸಾಧ್ಯತೆಯಿದೆ.
ಭ್ರಷ್ಟಾಚಾರಕ್ಕಿಂತ ದೊಡ್ಡ ಅಪಾಯ ಕೋಮುವಾದ. ಈ ಅಪಾಯದ ಹುಲಿಸವಾರಿ ಮಾಡಿಕೊಂಡು ಬಂದಿರುವ ಆಳುವ ಪಕ್ಷ ಸಾಮಾಜಿಕ ಕ್ಷೋಭೆಗೆ ತಿದಿ ಒತ್ತತೊಡಗಿದೆ. ದೇಶದ ಕೆಳಹಂತದ ನ್ಯಾಯಾಲಯಗಳು ಮೇಲ್ಪಂಕ್ತಿ- ಮಾರ್ಗದರ್ಶನಕ್ಕಾಗಿ ಹೈಕೋರ್ಟು ಮತ್ತು ಸುಪ್ರೀಮ್ ಕೋರ್ಟುಗಳ ನ್ಯಾಯಮೂರ್ತಿಗಳತ್ತ ನೋಡುತ್ತಿರುತ್ತವೆ. ಇಂತಹ ಸನ್ನಿವೇಶದಲ್ಲಿ ಕೋಮುವಾದಿ ಮನಸ್ಥಿತಿಗಳನ್ನು ಶಿಕ್ಷಿಸದೆ ರಕ್ಷಿಸಿ ಪ್ರೋತ್ಸಾಹಿಸುವುದು ಅತ್ಯಂತ ಅಪಾಯಕರ. ಹುಲಿಸವಾರಿ ಮಾಡುತ್ತಿರುವವರು ಹುಲಿಯ ಬಾಯಿಗೆ ಬೀಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಗಾಳಿಗೆ ತೂರಕೂಡದು.
