ಈ ದಿನ ಸಂಪಾದಕೀಯ | ಜಾತಿ ದೌರ್ಜನ್ಯ ಪ್ರಕರಣ: ಶಿಕ್ಷೆಯ ಪ್ರಮಾಣ ಕುಸಿತ; ದಲಿತ ಕಳಕಳಿಯ ವಕೀಲರ ನೇಮಕವಾಗಲಿ  

Date:

Advertisements

ಸರ್ಕಾರದ ದಾಖಲೆಗಳ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ಪೈಕಿ ಇನ್ನೂ 665 ಪ್ರಕರಣಗಳ ವಿಚಾರಣೆ ಬಾಕಿ ಇವೆ! ವಿಷಾದನೀಯ ಸಂಗತಿ ಎಂದರೆ ಇಂತಹ ಪ್ರಕರಣಗಳನ್ನು ನಿರ್ವಹಿಸಲೆಂದೇ ಸರ್ಕಾರಿ ವಕೀಲರನ್ನು ನೇಮಕ ಮಾಡಲಾಗಿರುತ್ತದೆ. ಸರ್ಕಾರಕ್ಕೊಬ್ಬರು ಅಡ್ವೊಕೇಟ್‌ ಜನರಲ್‌ ಇದ್ದಾರೆ. ಕಾನೂನು ತಜ್ಞರ ಪಡೆ ಇರುತ್ತದೆ. ಹಾಗಿದ್ದರೆ ಇವರೆಲ್ಲ ಏನು ಮಾಡುತ್ತಿದ್ದಾರೆ?

ರಾಜ್ಯದಲ್ಲಿ ಜಾತಿ ದೌರ್ಜನ್ಯ ಕೇಸುಗಳ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ 2020ರಲ್ಲಿ ಶೇ 10ರಷ್ಟು ಇತ್ತು. ಈಗ ಅದು ಶೇ 7ಕ್ಕೆ ಇಳಿದಿದೆ. ಶಿಕ್ಷೆಯ ಪ್ರಮಾಣ ದಶಕಗಳಿಂದ ಶೇ.3ಕ್ಕಿಂತ ಹೆಚ್ಚಾಗಿಲ್ಲ. ದೌರ್ಜನ್ಯ ಪ್ರಕರಣಗಳು ಮಾತ್ರ ಹೆಚ್ಚುತ್ತಲೇ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಸಂಗತಿ ತೀವ್ರ ಕಳವಳಕಾರಿ.

ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳು ನ್ಯಾಯಾಲಯಗಳಿಂದ  ತಡೆಯಾಜ್ಞೆ ತಂದರೆ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. 60 ದಿನಗಳ ಒಳಗಾಗಿ ಆರೋಪಪಟ್ಟಿ ದಾಖಲಿಸಬೇಕು ಎಂದು ಮುಖ್ಯಮಂತ್ರಿ ಮೂರು ದಿನಗಳ ಹಿಂದೆ ನಡೆದ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ. 

ಮುಖ್ಯಮಂತ್ರಿಗಳ ಈ ಬಿಗಿ ಸೂಚನೆ ಶ್ಲಾಘನೀಯ. ಆದರೆ, ಇಂತಹ ಖಡಕ್‌ ಸೂಚನೆಗಳಿಗೆ ಅಧಿಕಾರಿಗಳು ಮೂರು ಕಾಸಿನ ಬೆಲೆಯನ್ನೂ ಕೊಡುತ್ತಿಲ್ಲ, ಒಂದು ಕಿವಿಯಿಂದ ಕೇಳಿಸಿಕೊಂಡು ಮತ್ತೊಂದು ಕಿವಿಯಿಂದ ಹೊರಬಿಡುತ್ತಾರೆ ಎಂಬುದು ಕೂಡಾ ಅಷ್ಟೇ ನಿಜ. ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023 ಸೆ. 7ರಂದು ನಡೆದ ʼಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆʼಯಲ್ಲಿ ಇದೇ ಸೂಚನೆಯನ್ನು ನೀಡಿದ್ದರು. ಅಂದಿನ ಸಭೆಯಲ್ಲಿ “ರಾಜ್ಯದಲ್ಲಿ ಶಿಕ್ಷೆ ಪ್ರಮಾಣ ಶೇ. 3.44 ರಷ್ಟಿರುವುದು ನಾಚಿಕೆಯ ಸಂಗತಿ. ಪ್ರಜ್ಞಾವಂತ ಜನರಿರುವ ನಮ್ಮ ರಾಜ್ಯದಲ್ಲಿ ಇಷ್ಟು ಕಡಿಮೆ ಇರುವುದು ತಲೆ ತಗ್ಗಿಸುವ ವಿಚಾರ. ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು ಇದರ ಪ್ರಗತಿ ಪರಿಶೀಲನೆ ಮಾಡಬೇಕು. ಪೊಲೀಸ್‌ ವರಿಷ್ಠಾಧಿಕಾರಿಗಳು ಈ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ, ಡಿ.ಜಿ.ಪಿ. ಅವರಿಗೆ ವರದಿ ಕಳುಹಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದರು.

Advertisements

ಆದರೆ, ಆ ನಂತರ ಏನಾಯ್ತು? ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದರೇ? ಡಿ ಜಿ ಪಿ ಯವರಿಗೆ ವರದಿ ಕೊಟ್ಟರೇ? ಜಾತಿ ದೌರ್ಜನ್ಯ ಪ್ರಕರಣ ತಗ್ಗಿತೇ? ಕೇಳುವವರು ಯಾರು? ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತಿನಂತೆ ನಡೆದುಕೊಂಡಿದ್ದರೆ, ಅವರ ಆದೇಶ ಪಾಲಿಸಿದ್ದರೆ, 2025ರಲ್ಲಿ ಮತ್ತದೇ ಎಚ್ಚರಿಕೆ ನೀಡುವ, ಖಡಕ್‌ ಸಂದೇಶ ರವಾನಿಸುವ ಅಗತ್ಯ ಬರುತ್ತಿರಲಿಲ್ಲ. ಮುಂದಿನ  ವರ್ಷ ಮತ್ತೆ ನಡೆಯುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿಗಳು ಇದೇ ಎಚ್ಚರಿಕೆ ನೀಡಬೇಕಾದ ಸಂದರ್ಭ ಬಂದರೂ ಅಚ್ಚರಿಯಲ್ಲ. ನಮ್ಮ ಅಧಿಕಾರಿಗಳ ಕಾರ್ಯವೈಖರಿ ಹಾಗಿದೆ.

ಸರ್ಕಾರದ ದಾಖಲೆಗಳ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ಪೈಕಿ ಇನ್ನೂ 665 ಪ್ರಕರಣಗಳ ವಿಚಾರಣೆ ಬಾಕಿ ಇವೆ! ವಿಷಾದನೀಯ ಸಂಗತಿ ಎಂದರೆ ಇಂತಹ ಪ್ರಕರಣಗಳನ್ನು ನಿರ್ವಹಿಸಲೆಂದೇ ಸರ್ಕಾರಿ ವಕೀಲರನ್ನು ನೇಮಕ ಮಾಡಲಾಗಿರುತ್ತದೆ. ಸರ್ಕಾರಕ್ಕೊಬ್ಬರು ಅಡ್ವೊಕೇಟ್‌ ಜನರಲ್‌ ಇದ್ದಾರೆ. ಕಾನೂನು ತಜ್ಞರ ಪಡೆ ಇರುತ್ತದೆ. ಹಾಗಿದ್ದರೆ ಇವರೆಲ್ಲ ಏನು ಮಾಡುತ್ತಿದ್ದಾರೆ? ಆರೋಪಿಯೊಬ್ಬ ಕೋರ್ಟಿನಿಂದ ಜಾಮೀನು ಪಡೆದನೆಂದರೆ, ಅದನ್ನು ರದ್ದು ಮಾಡಲು ಸರ್ಕಾರದ ವಕೀಲರು ಮೇಲಿನ ಕೋರ್ಟ್‌ ಮೊರೆ ಹೋಗಬೇಕಲ್ಲವೇ? ಮೊದಲೇ ಹಿಂದುಳಿದ ಬಡ ಕುಟುಂಬಗಳು. ತಮ್ಮ ಕೇಸಿನ ಸಂಬಂಧ ವ್ಯಯ ಮಾಡಲು ಅವರ ಬಳಿ ಹಣ, ಸಮಯ ಯಾವುದೂ ಇಲ್ಲ. ಅಂಥವರ ಪಾಲಿಗೆ ನ್ಯಾಯ ಒದಗಿಸಬೇಕಿರುವುದು ಸರ್ಕಾರದ ಕೆಲಸ. ಆದರೆ, ಸರ್ಕಾರದಲ್ಲಿ ಅಂತಹ ಕಾಳಜಿ ಇರುವ ಅಧಿಕಾರಿಗಳು ಇಲ್ಲದಿದ್ದರೆ ಬಡವರಿಗೆ ನ್ಯಾಯ ಮರೀಚಿಕೆಯೇ ಸರಿ.

ಅಂಬೇಡ್ಕರ್‌ ಕನಸು ಕಂಡ ಸಮಸಮಾಜದ ಕಡೆಗೆ ಹೋಗಬೇಕಿರುವ ನಾವು ಇನ್ನೂ ಜಾತಿ, ಧರ್ಮದ ಹೆಸರಿನಲ್ಲಿ ಅಸಹಾಯಕ ಜನರನ್ನು ತುಳಿಯುತ್ತಲೇ ಇದ್ದೇವೆ.  ಈ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಜಾರಿಗೆ ತರುತ್ತಿರುವ ಎಲ್ಲ ಕಾಯ್ದೆಗಳೂ ಕೋರ್ಟಿನ ಕಟಕಟೆಯಲ್ಲಿಯೇ ಸತ್ತು ಹೋಗುತ್ತಿವೆ. ಜಾತಿನಿಂದನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿರುವ ಶಾಸಕ ಮುನಿರತ್ನನಾಯ್ಡು, ಕೂಲಿ ಕಾರ್ಮಿಕರ ಶೆಡ್‌ಗಳನ್ನು ಧ್ವಂಸ ಮಾಡಿದ್ದೇ ಅಲ್ಲದೇ, “ಪೊಲೀಸರು ನ್ಯಾಯಾಧೀಶರು ನನ್ನ ಜೇಬಿನಲ್ಲಿದ್ದಾರೆ. ಏನೂ ಮಾಡಲು ಸಾಧ್ಯವಿಲ್ಲ” ಎಂದು ಧಮ್ಕಿ ಹಾಕಿರುವುದಾಗಿ ಮಹಿಳೆಯೊಬ್ಬರು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆ ಗಂಭೀರವಾಗಿ ಯೋಚಿಸಬೇಕಿರುವ ಸಂಗತಿ. ಹೀಗೆ ಕ್ರಿಮಿನಲ್‌ಗಳ ಕಿಸೆಗಳಲ್ಲಿ ನ್ಯಾಯದೇವತೆ ‘ಬಂಧಿತ’ಳಾದರೆ ನ್ಯಾಯ ಎಂಬ ಪದಕ್ಕೆ ಅರ್ಥವೇನಿದೆ?

2020ರಿಂದ 2024ರವರೆಗೆ ದೇಶದ ಮಟ್ಟದಲ್ಲಿ 47,000 ಕ್ಕೂ ಹೆಚ್ಚು ದೂರುಗಳನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಸ್ವೀಕರಿಸಿದೆ. ಆರ್‌ಟಿಐಗೆ ಪ್ರತಿಕ್ರಿಯೆಯಾಗಿ ಎನ್‌ಸಿಎಸ್‌ಸಿ ಹಂಚಿಕೊಂಡ ಮಾಹಿತಿಯ ಪ್ರಕಾರ , 2020-21ರಲ್ಲಿ 11,917 ದೂರುಗಳು, 2021-22ರಲ್ಲಿ 13,964 ದೂರುಗಳು, 2022-23ರಲ್ಲಿ 12,402  ದೂರುಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಪೈಕಿ ಶೇ 81% ಉತ್ತರಪ್ರದೇಶ ಒಂದರಲ್ಲೇ ದಾಖಲಾಗಿದೆ. ರಾಜಸ್ತಾನ, ಮಧ್ಯಪ್ರದೇಶ, ಬಿಹಾರ, ಒಡಿಶಾ, ಮಹಾರಾಷ್ಟ್ರ ನಂತರದ ಸ್ಥಾನಗಳಲ್ಲಿವೆ.

2000ನೇ ಇಸವಿಯ ಮಾರ್ಚ್‌ನಲ್ಲಿ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿಯಲ್ಲಿ ಪ್ರಬಲ ರೆಡ್ಡಿ ಜಾತಿಯ ಗುಂಪೊಂದು ದಲಿತರನ್ನು ಮನೆಯೊಳಗೆ ಕೂಡಿ ಹಾಕಿ ಸೀಮೆ ಎಣ್ಣೆ ಸುರಿದು ಮನೆಗಳಿಗೆ ಬೆಂಕಿಯಿಟ್ಟು ಏಳು ಮಂದಿಯನ್ನು ಜೀವಂತವಾಗಿ ಸುಟ್ಟು ಹಾಕಿತ್ತು. ಈ ಘಟನೆ ಸಂಬಂಧ ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪೊಲೀಸರು 32 ಮಂದಿ ಆಪಾದಿತರ ಮೇಲೆ ಆರೋಪಪಟ್ಟಿ ಸಿದ್ಧಪಡಿಸಿದ್ದರು. ವಿಚಾರಣೆಯನ್ನು ಕೋಲಾರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 2004ರಲ್ಲಿ ಸಾಕ್ಷ್ಯಗಳ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು. ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿ 2014ರಲ್ಲಿ ಅಲ್ಲಿಯೂ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳು ಖುಲಾಸೆಯಾದರು. ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟಿನಿಂದ ನ್ಯಾಯ ಸಿಕ್ಕಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿ ಹತ್ತು ವರ್ಷಗಳೇ ಕಳೆದಿವೆ. ಇದುವರೆಗೂ ಸುಪ್ರೀಂ ತೀರ್ಪು ಬಂದಿಲ್ಲ. ಹೀಗೇ ಒಂದೊಂದು ಅರ್ಜಿಯನ್ನೂ ಹತ್ತಾರು ವರ್ಷಗಳವರೆಗೆ ಇತ್ಯರ್ಥಪಡಿಸದ ನ್ಯಾಯಾಂಗ ವ್ಯವಸ್ಥೆ ನಮ್ಮದು. ಈ ಪ್ರಕರಣದಲ್ಲಿ ಆರೋಪ ಸಾಬೀತುಪಡಿಸಲು ನಮ್ಮ ಸರ್ಕಾರಿ ವಕೀಲರು ಸಂಪೂರ್ಣವಾಗಿ ವಿಫಲವಾಗಿದ್ದಾರೆ.

2014ರ ಆಗಸ್ಟ್ 28ರಂದು ಕೊಪ್ಪಳದ ಗಂಗಾವತಿಯಲ್ಲಿ ರೆಡ್ಡಿ ಮತ್ತು ದಲಿತ ಸಮುದಾಯದ ನಡುವಿನ ಘರ್ಷಣೆಯಲ್ಲಿ ಆರೋಪಿಗಳಾಗಿದ್ದ ಮರಕುಂಬಿಯ 117  ಮಂದಿಯ ವಿಚಾರಣೆ ನಡೆಸಿದ ಕೋರ್ಟ್‌ ಹತ್ತು ವರ್ಷಗಳ ನಂತರ 2024ರ ಅಕ್ಟೋಬರ್‌ನಲ್ಲಿ ಪ್ರಬಲ ಜಾತಿಗೆ ಸೇರಿದ 101 ಮಂದಿಗೆ ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಶಿಕ್ಷೆ ವಿಧಿಸಿದ ತೀರ್ಪು ನೀಡಿದ್ದು ದೇಶದಲ್ಲೇ ಸಂಚಲನ ಮೂಡಿಸಿತ್ತು. ಅದರೆ ಒಂದೇ ವಾರದಲ್ಲಿ ಧಾರವಾಡ ಹೈಕೋರ್ಟ್‌ ಪೀಠ ಜಾಮೀನು ಅರ್ಜಿ ಸಲ್ಲಿಸದ ಪ್ರಮುಖ ಆರೋಪಿಯನ್ನು ಬಿಟ್ಟು ಮಿಕ್ಕ ಎಲ್ಲರಿಗೂ  ಜಾಮೀನು ನೀಡಿದೆ. ಈಗ ಎಲ್ಲ ಅಪರಾಧಿಗಳೂ ಹೊರಗಿದ್ದಾರೆ.  ಆದರೆ ಈ ತೀರ್ಪು ಕೊಟ್ಟ ಸಂದೇಶ ಐತಿಹಾಸಿಕ. ಇಂತಹ ತೀರ್ಪುಗಳು ಜಾತಿ ಹೆಸರಿನಲ್ಲಿ ನಡೆಸುವ ಕ್ರೌರ್ಯಕ್ಕೆ ಸ್ವಲ್ಪ ಮಟ್ಟಿನ ಕಡಿವಾಣ ಬೀಳಬಹುದು ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ.

ಈ ದಿನ ಸಂಪಾದಕೀಯ | ಎಸ್‌ಸಿಎಸ್‌ಪಿ / ಟಿಎಸ್‌ಪಿ ಅನುದಾನ ಬಳಕೆಯಾಗುತ್ತಿಲ್ಲವೇಕೆ?

ಜಾತಿ ದೌರ್ಜನ್ಯ ಕೇಸುಗಳಿಗೆ ಸರ್ಕಾರಿ ವಕೀಲರನ್ನು ನೇಮಿಸುವಾಗ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕಿದೆ. ದಲಿತರ ಮೇಲಿನ ದಬ್ಬಾಳಿಕೆ ದೌರ್ಜನ್ಯಗಳ ಕುರಿತು ಆತ್ಮಪೂರ್ವಕ ಕಳಕಳಿ ಹೊಂದಿದವರನ್ನೇ ಆರಿಸಿ ನೇಮಕ ಮಾಡಬೇಕಿದೆ. ತನಿಖೆ ನಡೆಸುವ ಪೊಲೀಸ್ ಅಧಿಕಾರಿಗಳ ಸೇವಾ ದಾಖಲೆಯಲ್ಲಿ ಜಾತಿ ದೌರ್ಜನ್ಯ ಕೇಸುಗಳಲ್ಲಿ ಯಶಸ್ವಿಯಾಗಿ ಶಿಕ್ಷೆ ಕೊಡಿಸಿದ್ದಾರೆಯೇ ಇಲ್ಲವೇ ಎಂಬ ಅಂಶವೂ ನಮೂದಾಗಲಿ. ಇಲ್ಲವಾದರೆ ಮುಖ್ಯಮಂತ್ರಿಯವರು ಪ್ರತಿ ವರ್ಷವೂ ಖಡಕ್ ಸೂಚನೆ ನೀಡುತ್ತಲೇ ಇರಬೇಕಾಗುತ್ತದೆ. ಅವರ ಈ ಖಡಕ್ ಸೂಚನೆಗಳು ನೀರಿನ ಮೇಲೆ ಬರೆದ ಬರೆಹಗಳಾಗುತ್ತವೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X