ಈ ದಿನ ಸಂಪಾದಕೀಯ | ಕಾಂಗ್ರೆಸ್ ಪ್ರಣಾಳಿಕೆ- ಸುಳ್ಳು ಸುಳ್ಳೇ ಮುಸ್ಲಿಮ್ ಲೀಗ್ ಮೊಹರು ಹಾಕಿದ ಮೋದಿ

Date:

Advertisements
ಮೋದಿಯವರ ಹೇಳಿಕೆ ಕೀಳು ಉದ್ದೇಶದ ‘ಹಿಟ್ ಅಂಡ್ ರನ್’ ತಂತ್ರ. ಆದರೆ ದೇಶದ ಎಲ್ಲ ಪತ್ರಿಕೆಗಳೂ ಮುಖಪುಟದಲ್ಲಿ ದೊಡ್ಡ ದೊಡ್ಡ ತಲೆಬರೆಹಗಳನ್ನು ಲೀಡ್ ಗಳನ್ನು ಸಾರಾಸಗಟಾಗಿ ಪ್ರಕಟಿಸಿವೆ. ಒಂದೇ ಒಂದು ಪತ್ರಿಕೆ ಕೂಡ ಮೋದಿ ಹೇಳಿಕೆಯನ್ನು ಪ್ರಶ್ನಿಸುವ ಇಲ್ಲವೇ ಪರಾಮರ್ಶಿಸುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ.

 

ಮುಸಲ್ಮಾನ ಯುವಕರು ಹಿಂದೂ ಹೆಣ್ಣುಮಕ್ಕಳನ್ನು ‘ವಿವಾಹಜಾಲ’ಕ್ಕೆ ಕೆಡವಿಕೊಳ್ಳುವರೆಂಬ ಹುಸಿ ಹುಯಿಲೆಬ್ಬಿಸಿದೆ ಮೋದಿ ಪರಿವಾರ. ಇದಕ್ಕೆ ಲವ್ ಜಿಹಾದ್ ಎಂದು ಹೆಸರನ್ನು ಬೇರೆ ಇರಿಸಿದ್ದಾರೆ. ಈ ಲವ್ ಜಿಹಾದ್ ಮತ್ತು ಬುರ್ಖಾ ಧರಿಸುವಿಕೆಗೆ ಕಾಂಗ್ರೆಸ್ ಪ್ರಣಾಳಿಕೆ ಬೆಂಬಲ ನೀಡಿದೆ ಎಂಬ ಮಿಥ್ಯಾಪ್ರಚಾರ ಜರುಗಿದೆ. ಸಲಿಂಗ ವಿವಾಹ ಮತ್ತು ದೇಶದ್ರೋಹವನ್ನೂ ಕಾಂಗ್ರೆಸ್ ಬೆಂಬಲಿಸಿದೆ ಎಂಬುದು ಮತ್ತೊಂದು ಹಸೀ ಸುಳ್ಳು.

ನ್ಯಾಯಾಂಗದಲ್ಲಿ ಮುಸ್ಲಿಮ್ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಲಿದೆ. ದನದ ಮಾಂಸ ಸೇವನೆಯನ್ನು ಕಾನೂನುಬದ್ಧಗೊಳಿಸಲಿದೆ ಹಾಗೂ ಮುಸಲ್ಮಾನರಿಗೆ ತಗ್ಗಿಸಿದ ಬಡ್ಡಿದರಗಳಲ್ಲಿ ಸಾಲ ಒದಗಿಸಲಿದೆ ಎಂಬ ಮಿಥ್ಯಾ ಪ್ರಚಾರದ ಆಂದೋಲನವೇ ನಡೆದಿದೆ. ಸುಳ್ಳನ್ನು ನೂರು ಸಲ ಹೇಳಿದರೆ ಅದು ನಿಜವಾಗಲಿದೆ ಎಂಬುದು ಹಿಟ್ಲರ್ ಕಾಲದ ನಾಜೀವಾದಿ ತಂತ್ರ. ಮೋದಿ ಪರಿವಾರದ ನವ ನಾಜೀವಾದಿಗಳು ಈ ತಂತ್ರವನ್ನು ಬಹುದೊಡ್ಡ ಪ್ರಮಾಣದಲ್ಲಿ ಅನುಸರಿಸುತ್ತ ಬಂದಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಈ ಅನ್ಯಾಯದ ಅಸ್ತ್ರವನ್ನು ಪ್ರಯೋಗಿಸುತ್ತಲೇ ಬಂದಿದ್ದಾರೆ. ಈ ದುಷ್ಕೃತ್ಯವನ್ನು ಮೋದಿಯವರ ಬೂಟು ನೆಕ್ಕುವ ಮೀಡಿಯಾ ಕೂಡ ಎತ್ತಿ ಹಿಡಿಯುತ್ತಲೂ, ತುತ್ತೂರಿಯಾಗಿ ಊದುತ್ತಲೂ ಇದೆ.

ಕಾಂಗ್ರೆಸ್ ಪ್ರಣಾಳಿಕೆಯ ಇಂಗ್ಲಿಷ್ ಇಲ್ಲವೇ ಹಿಂದಿ ಅವತರಣಿಕೆಗಳಲ್ಲಿ ಎಲ್ಲಿಯೂ ಇಂತಹ ದೂರ ದೂರದ ಪ್ರಸ್ತಾಪ ಕೂಡ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ್ರೋಹ ಅಪರಾಧ ಅಲ್ಲವೆಂದು ಕಾನೂನಿಗೆ ತಿದ್ದುಪಡಿ ತರುವ ಮಾತು ಆಡಿಲ್ಲ. ಮಾನನಷ್ಟದ ಕಾಯಿದೆಯನ್ನು ಅಪರಾಧೀಕರಣದಿಂದ ಮುಕ್ತಗೊಳಿಸುವುದಾಗಿ ವಚನ ನೀಡಿದೆ. ಆದರೆ ಸಾಮಾಜಿಕ ಸಾಮರಸ್ಯಕ್ಕೆ ಬೇಕೆಂದೇ ಬೆಂಕಿ ಇಡುವ ಕ್ರೂರಿಗಳು ಮತ್ತು ಅವಿವೇಕಿಗಳಿಗೆ ದೇಶದ್ರೋಹ ಮತ್ತು ಮಾನನಷ್ಟದ ನಡುವೆ ಅಂತರ ತಿಳಿಯದಾಗಿದೆ.

Advertisements

ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟುಗಳಲ್ಲಿನ ನ್ಯಾಯಮೂರ್ತಿಗಳ ಹುದ್ದೆಗಳಲ್ಲಿ ಈ ದೇಶದ ಬಹುಜನರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಬಹುತೇಕ ಕಾಣೆಯಾಗಿ ಹೋಗಿದ್ದಾರೆ. ಅವರಿಗೆ ಪ್ರಾತಿನಿಧ್ಯವೇ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗುವುದು ಎಂಬ ಕಾಂಗ್ರೆಸ್ ಆಶ್ವಾಸನೆಯಲ್ಲಿ ಸಾಮಾಜಿಕ ನ್ಯಾಯದ ಆಶಯ ಅಡಗಿದೆ. ಈ ಆಶಯವನ್ನು ಕೇವಲ ಹೆಚ್ಚು ಮುಸ್ಲಿಮರನ್ನು ನ್ಯಾಯಮೂರ್ತಿಗಳ ಹುದ್ದೆಗಳಿಗೆ ನೇಮಿಸುವ ಆಶ್ವಾಸನೆ ನೀಡಲಾಗಿದೆ ಎಂದು ಗಳುಹಿರುವುದು ಮೋದಿವಾದಿಗಳ ವಿಪರೀತ ವಿಕೃತಿ.

ದೇಶದ ಬಹುತೇಕ ಮೀಡಿಯಾ ಇಂದು ಮೋದಿಯವರ ಬೂಟು ನೆಕ್ಕಿ ಧನ್ಯವಾಗುತ್ತಿದೆ. ತಾನು ಅಧಿಕಾರಕ್ಕೆ ಬಂದರೆ ಮೀಡಿಯಾಗೆ ಪೂರ್ಣ ಸ್ವಾತಂತ್ರ್ಯ ನೀಡುವುದೇ ಅಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪುನಃ ಪ್ರತಿಷ್ಠಾಪಿಸುವುದಾಗಿಯೂ ಕಾಂಗ್ರೆಸ್ ಆಶ್ವಾಸನೆ ನೀಡಿದೆ.

ಬುಲ್ಡೋಜರ್ ಹರಿಸುವ ಮತ್ತು ದೊಂಬಿಹತ್ಯೆ ನಿಷೇಧಿಸುವುದಾಗಿ ನೇರವಾಗಿ ಹೇಳಿಲ್ಲ. ಬುಲ್ಡೋಜರ್ ಗಳನ್ನು ಅಸ್ತ್ರಗಳನ್ನಾಗಿ ಬಳಸುತ್ತಿರುವುದನ್ನೂ ಮತ್ತು ದೊಂಬಿಹತ್ಯೆಯನ್ನು ಹಾಗೂ ಹುಸಿ ಎನ್‌ಕೌಂಟರುಗಳನ್ನು ತಕ್ಷಣವೇ ನಿಲ್ಲಿಸುವುದಾಗಿ ಹೇಳಿರುವುದು ಹೌದು.

ಮನಬಂದಂತೆ ಇಂಟರ್ನೆಟ್ ಸೌಲಭ್ಯವನ್ನು ಅಮಾನತುಗೊಳಿಸುವ ಮೋದಿ ಸರ್ಕಾರದ ಕೃತ್ಯಕ್ಕೆ ಅಂತ್ಯ ಹಾಡುವುದಾಗಿ ಹೇಳಿದೆ.

ತ್ರಿವಳಿ ತಲಾಖ್ ಪದ್ಧತಿಯನ್ನು ಪುನಃ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ. ವೈಯಕ್ತಿಕ ಕಾನೂನು ಸುಧಾರಣೆಗೆ ಉತ್ತೇಜನ ನೀಡುವುದಾಗಿ ಮತ್ತು ಇಂತಹ ಸುಧಾರಣೆಯಲ್ಲಿ ಸಂಬಂಧಪಟ್ಟ ಸಮುದಾಯಗಳ ಸಮ್ಮತಿ ಮತ್ತು ಭಾಗವಹಿಸುವಿಕೆ ಅತ್ಯಗತ್ಯ ಎಂದು ಹೇಳಿರುವುದು ಉಂಟು.

ಉಡುಗೆತೊಡುಗೆ, ಆಹಾರ, ಆಡುನುಡಿ ಹಾಗೂ ಪರ್ಸನಲ್ ಲಾ ಗಳ ವಿಚಾರದಲ್ಲಿ ಉಳಿದ ಎಲ್ಲ ನಾಗರಿಕರಿಗೆ ಇರುವಂತೆಯೇ ಅಲ್ಪಸಂಖ್ಯಾತರಿಗೂ ಆಯ್ಕೆಯ ಸ್ವಾತಂತ್ರ್ಯ ನೀಡುವುದಾಗಿ ಹೇಳಿರುವುದರಲ್ಲಿ ತಪ್ಪೇನಿದೆ? ಸಂವಿಧಾನ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳನ್ನು ನೀಡಿರುವುದು ಸುಳ್ಳೇನು?

ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮುಸಲ್ಮಾನರಿಗೆ ಮೀಸಲಾತಿ ನೀಡುತ್ತಿದೆ ಎಂಬ ಅಸತ್ಯದ ಡಂಗುರ ಹೊಡೆಯಲಾಗಿದೆ. ಎಸ್ಸಿ, ಎಸ್ಟಿ ಹಾಗೂ ಒಬೀಸಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲಾತಿ ಒದಗಿಸಲು ಸೂಕ್ತ ಕಾನೂನು ಜಾರಿ ಮಾಡುವ ಆಶ್ವಾಸನೆಯನ್ನು ಕಾಂಗ್ರೆಸ್ ನೀಡಿದೆ. ಮೀಸಲಾತಿ ಪ್ರಮಾಣದ ಗರಿಷ್ಠ ಮಿತಿಯನ್ನು ಈಗಿನ ಶೇ.50ರಿಂದ ಏರಿಸಲು ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ಮಾಡಲಾಗುವುದು. ಈ ಮೂಲಕ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಸಮಾಜದಲ್ಲಿ ಕೆಲವೇ ಜಾತಿ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೋದಿ ಸರ್ಕಾರ ಶೇ.10ರ ಮೀಸಲಾತಿ ನೀಡಿದೆ. ಈ ಮೀಸಲಾತಿಯನ್ನು ತಾರತಮ್ಯವಿಲ್ಲದೆ ಎಲ್ಲ ಜಾತಿ ಸಮುದಾಯಗಳಿಗೂ ವಿಸ್ತರಿಸಲಾಗುವುದು ಎಂದೂ ಸಾರಿದೆ. ಪರಿಶಿಷ್ಟ ಜಾತಿ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲು ಹುದ್ದೆಗಳ ಮೀಸಲಾತಿ ಬಾಕಿಯನ್ನು ಒಂದು ವರ್ಷದೊಳಗೆ ತೀರಿಸುವ ಭರವಸೆ ನೀಡಿದೆ.

ಒಂದಲ್ಲ ಒಂದು ಬಗೆಯಲ್ಲಿ ಮುಸ್ಲಿಮ್ ದ್ವೇಷದ ಕಿಡಿಯನ್ನು ಹಾರಿಸದಿದ್ದರೆ ಅದು ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರ ಭಾಷಣವೇ ಅಲ್ಲ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮುಸ್ಲಿಮ್ ಲೀಗ್ ಪಕ್ಷದ ಪ್ರಣಾಳಿಕೆ ಎಂದು ಜರೆದಿದ್ದಾರೆ. ಈ ಪ್ರಣಾಳಿಕೆಯಲ್ಲಿ ತುಕಡೇ ತುಕಡೇ ಗ್ಯಾಂಗ್‌ನ ದುರ್ವಾಸನೆಯಿದೆ ಎಂದು ಆರೋಪಿಸಿದ್ದಾರೆ. ಆದರೆ ಇಡೀ ಪ್ರಣಾಳಿಕೆಯನ್ನು ಹುಡುಕಿದರೂ ಹಿಂದೂ ಅಥವಾ ಮುಸಲ್ಮಾನ ಎಂಬ ಒಂದೇ ಒಂದು ಪದ ಕೂಡ ಇಲ್ಲ.

ಮೋದಿಯವರ ಹೇಳಿಕೆ ಕೀಳು ಉದ್ದೇಶದ ‘ಹಿಟ್ ಅಂಡ್ ರನ್’ ತಂತ್ರ. ಆದರೆ ದೇಶದ ಎಲ್ಲ ಪತ್ರಿಕೆಗಳೂ ಮುಖಪುಟದಲ್ಲಿ ದೊಡ್ಡ ದೊಡ್ಡ ತಲೆಬರೆಹಗಳನ್ನು ಲೀಡ್ ಗಳನ್ನು ಸಾರಾಸಗಟಾಗಿ ಪ್ರಕಟಿಸಿವೆ. ಒಂದೇ ಒಂದು ಪತ್ರಿಕೆ ಕೂಡ ಮೋದಿ ಹೇಳಿಕೆಯನ್ನು ಪ್ರಶ್ನಿಸುವ ಇಲ್ಲವೇ ಪರಾಮರ್ಶಿಸುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ. ಭಾರತದ ಮೀಡಿಯಾ ಮೋದಿ ಮಡಿಲಲ್ಲಿ ನಲಿದಾಡುವ ಮೀಡಿಯಾ ಎಂಬ ಹಣೆಪಟ್ಟಿಯನ್ನು ಹೆಮ್ಮೆಯಿಂದ ಧರಿಸಿಬಿಟ್ಟಿದೆ.

ಮ್ಮ ಹತ್ತು ವರ್ಷಗಳ ಆಡಳಿತದ ಸಾಧನೆಯ ಯಾವ ಬಂಡವಾಳವೂ ಮೋದಿ ಬಳಿ ಇಲ್ಲ. ಹೀಗಾಗಿ ಹಿಂದುಮುಸ್ಲಿಮ್ ದ್ವೇಷದ ಮೊರೆ ಹೋಗಿದ್ದಾರೆ. ಮುಸ್ಲಿಮ್ ದ್ವೇಷದ ಮಂಕುಬೂದಿಯನ್ನು ಮತ್ತೊಮ್ಮೆ ಹಿಂದೂಗಳ ಮೇಲೆ ಎರಚಿದ್ದಾರೆ. ವಾಸ್ತವವಾಗಿ ಸ್ವಾತಂತ್ರ್ಯಪೂರ್ವದ ಭಾರತದ ಸಿಂಧ್ ಮತ್ತು ಬಂಗಾಳದಲ್ಲಿ ಮುಸ್ಲಿಮ್ ಲೀಗ್ ಜೊತೆ ಸೇರಿ ಸರ್ಕಾರ ರಚಿಸಿದ್ದು ಹಿಂದೂ ಮಹಾಸಭಾ. ಬಂಗಾಳದ ಇಂತಹ ಸರ್ಕಾರದಲ್ಲಿ ಜನಸಂಘದ ಮಹಾನ್ ನಾಯಕ ಶ್ಯಾಮಪ್ರಸಾದ್ ಮುಖರ್ಜಿ ಪಾಲ್ಗೊಂಡಿದ್ದರು.

ತನ್ನ ಪ್ರಣಾಳಿಕೆಯನ್ನು ನ್ಯಾಯಪತ್ರ ಎಂದು ಕಾಂಗ್ರೆಸ್ ಪಕ್ಷ ಕರೆದಿರುವುದು ಸೂಕ್ತವಾಗಿದೆ. ಸಾಮಾಜಿಕ ನ್ಯಾಯಗಳ ಐದು ಸ್ತಂಭಗಳ ಕುರಿತು 25 ಖಾತ್ರಿಗಳನ್ನು ನೀಡಲಾಗಿದೆ. ನಿಜಕ್ಕೂ ಸಾಮಾಜಿಕ ನ್ಯಾಯ ನೀಡಿಕೆಯ ದಸ್ತಾವೇಜೇ ಹೌದು. ಆದರೆ ವೋಟು ಗಳಿಕೆಗಾಗಿ ರಾಜಕೀಯ ಪಕ್ಷಗಳು ಬಾನಿನ ತಾರೆಗಳನ್ನು ಭುವಿಗೆ ಇಳಿಸುವುದಾಗಿ ಮತದಾರರಿಗೆ ಆಮಿಷ ಒಡ್ಡುವುದುಂಟು. ಈ ದಸ್ತಾವೇಜು ಅಂತಹ ಸಾಲಿಗೆ ಸೇರಬಾರದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X