ಈ ದಿನ ಸಂಪಾದಕೀಯ | ಮೋದಿ ಯುಗದ ಜನತಂತ್ರ- ಆಡುವುದು ಒಂದು, ಮಾಡುವುದು ಇನ್ನೊಂದು

Date:

Advertisements
ಹತ್ತು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಮನಮೋಹನ ಸಿಂಗ್ ಸಂಸತ್ತಿನ ಅಧಿವೇಶನಗಳಲ್ಲಿ 85 ಪ್ರಶ್ನೆಗಳಿಗೆ ಖುದ್ದು ಉತ್ತರ ನೀಡಿದ್ದಾರೆ. ಮೋದಿಯವರು ಉತ್ತರ ನೀಡಿರುವ ಪ್ರಶ್ನೆಗಳ ಸಂಖ್ಯೆ ಕೇವಲ 13. ಯಾರೂ ತಮ್ಮನ್ನು ಪ್ರಶ್ನಿಸಬಾರದು ಎಂಬ ಧೋರಣೆಯನ್ನು ಸಂಸದೀಯ ಜನತಂತ್ರದಲ್ಲಿ ಒಪ್ಪಲಾಗುವುದಿಲ್ಲ.

 

ದೇಶದ ಜನತಂತ್ರದ ಪಾಲಿಗೆ ಇಲ್ಲಿಯವರೆಗೆ ಒದಗಿ ಬಂದಿರುವ ಅತೀವ ದುರ್ದಿನಗಳ ಸಾಲಿಗೆ ಸೇರಿ ಹೋಗಲಿದೆ 2023ರ ಡಿಸೆಂಬರ್ 19.

ಇದೇ ತಿಂಗಳ 13ರಂದು ಸಂಸತ್ ಭವನದ ಭದ್ರತೆಗೆ ಧಕ್ಕೆ ಒದಗಿತ್ತು. ಈ ಲೋಪವನ್ನು ಕುರಿತು ಸದನಗಳಲ್ಲಿ ಸರ್ಕಾರ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಹೀಗೆ ಆಗ್ರಹಿಸಿದ್ದ ಪ್ರತಿಪಕ್ಷಗಳ ಒಟ್ಟು 141 ಮಂದಿ ಸಂಸದರನ್ನು ಅಮಾನತುಗೊಳಿಸಲಾಗಿದೆ. ಅಧಿವೇಶನ ನಡೆದಾಗ ಸರ್ಕಾರದ ಪ್ರಮುಖ ಹೇಳಿಕೆಗಳು ಸದನಗಳಲ್ಲಿ ಮಂಡಿತವಾಗಬೇಕೇ ವಿನಾ ಹೊರಗೆ ಅಲ್ಲ. ಈ ನಿಯಮದ ಉಲ್ಲಂಘನೆಯನ್ನು ಸದಸ್ಯರ ಹಕ್ಕುಚ್ಯುತಿ ಎಂದೇ ಪರಿಗಣಿಸಲಾಗುತ್ತದೆ. ಆದರೆ ಪ್ರಧಾನಿಯವರು ಈ ಕುರಿತು ತಲೆಕೆಡಿಸಿಕೊಂಡೇ ಇಲ್ಲ. ಸಂಸತ್ ಭವನದ ಭದ್ರತೆಗೆ ಒದಗಿದ ಧಕ್ಕೆಯ ಕುರಿತು ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಇದೇ ಹೇಳಿಕೆಯನ್ನು ಅವರು ಸದನದಲ್ಲಿಯೇ ನೀಡಬಹುದಿತ್ತು. ಪ್ರತಿಪಕ್ಷಗಳ ಆಗ್ರಹವನ್ನು ಈಡೇರಿಸಿದಂತೆಯೂ ಆಗುತ್ತಿತ್ತು. ಆದರೆ ತಾವು ಹೇಳಿದ್ದನ್ನು ಬರೆದುಕೊಂಡು ಪ್ರಕಟಿಸುವ ಪತ್ರಿಕೆ ಅವರ ಆದ್ಯತೆ. ಹೇಳಿಕೆಯ ನಂತರ ಚರ್ಚೆ ನಡೆಸಿ ಸರ್ಕಾರದ ವೈಫಲ್ಯವನ್ನು ಪ್ರತಿಪಕ್ಷಗಳು ಟೀಕೆ ಟಿಪ್ಪಣಿಗೆ ಗುರಿಯಾಗಿಸುವ ಸದನ ಅವರಿಗೆ ಲೆಕ್ಕಕ್ಕಿಲ್ಲ. ಈ ‘ಮುಜುಗರ’ವನ್ನು ಎದುರಿಸುವುದು ಅವರಿಗೆ ಬೇಕಿಲ್ಲ.

2009-2014 ಯೂಪಿಎ-2 ಸರ್ಕಾರ ಇತ್ತು. ಆಗ ಸಂಸತ್ತಿನ ಎರಡೂ ಸದನಗಳಲ್ಲಿ ಬಿಜೆಪಿಯೇ ಅಧಿಕೃತ ಪ್ರತಿಪಕ್ಷ. ಹಲವು ಹಗರಣಗಳನ್ನು ಮುಂದಿಟ್ಟುಕೊಂಡು ಪಾರ್ಲಿಮೆಂಟನ್ನು ಸ್ಥಗಿತಗೊಳಿಸಿತ್ತು ಬಿಜೆಪಿ. PRS Legislative Research ಪ್ರಕಾರ ಕಳೆದ ಐದಾರು ದಶಕಗಳಲ್ಲಿ ಸಂಸತ್ತಿನ ಅಧಿಕೃತ ಕಾರ್ಯಕಲಾಪಗಳಿಗೆ ಅತಿ ಹೆಚ್ಚು ಭಂಗ ಉಂಟಾಗಿದ್ದ ಕಾಲಘಟ್ಟ. ಸುಮಾರು 800 ತಾಸುಗಳು ‘ಆಹುತಿ’ಯಾಗಿದ್ದವು. ಹಲವು ವಾರಗಳ ಕಾಲ ಕಲಾಪ ನಿತ್ಯ ಮುಂದೂಡಿಕೆಗೆ ಗುರಿಯಾಗುತ್ತಿತ್ತು.

Advertisements

ಐದು ವರ್ಷದ ಪೂರ್ಣಾವಧಿ ಬಾಳುವ ಲೋಕಸಭೆಗಳು ಸರಾಸರಿ 2,689 ತಾಸುಗಳ ಕಾಲ ಕೆಲಸ ಮಾಡ್ತವೆ. ಆದರೆ, ಯುಪಿ ಎ-2 ಸರ್ಕಾರದ ಈ ಅವಧಿ 1350 ತಾಸುಗಳಿಗೆ ಸೀಮಿತಗೊಂಡಿತು.

2012ರ ಸೆಪ್ಟಂಬರ್ ತಿಂಗಳಲ್ಲಿ ಅಂದಿನ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಬಿಜೆಪಿಯ ಈ ಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದರು. ‘ಈ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಲು ನಾವು ಪಾರ್ಲಿಮೆಂಟನ್ನು ಸ್ಥಗಿತಗೊಳಿಸಬೇಕಾಯ್ತು. ಅದೇನೇ ಇದ್ರೂ, ಪಾರ್ಲಿಮೆಂಟನ್ನು ನಡೆಸೋದು ಸರ್ಕಾರದ ಹೊಣೆಯೇ ವಿನಾ ಪ್ರತಿಪಕ್ಷದ್ದಲ್ಲ. ಸದನದ ಕಲಾಪ ಸ್ಥಗಿತವಾಗುವ ಹಂತಕ್ಕೆ ಪ್ರತಿಭಟನೆಯನ್ನು ಒಯ್ಯುವುದು ಕೂಡ ಜನತಾಂತ್ರಿಕ ಕ್ರಿಯೆ’ ಎಂದಿದ್ದರು. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಅರುಣ್ ಜೇಟ್ಲಿ ಇದೇ ಹೇಳಿಕೆಯನ್ನು ಪುನರುಚ್ಚರಿಸಿದ್ದರು. ಆಗ ಸರಿ ಎಂದದ್ದನ್ನು ಈಗ ತಪ್ಪೆಂದು ಹೇಳಿ ಶಿಕ್ಷಿಸುವುದು ಅಪ್ಪಟ ಆಷಾಢಭೂತಿತನದ ಮತ್ತು ಜನತಂತ್ರ ವಿರೋಧದ ನಡೆ.

141 ಮಂದಿ ಸಂಸದರ ಅಮಾನತಿನ ನಂತರ ಇಂದು ಪ್ರಧಾನಿಯವರು ಜನತಾಂತ್ರಿಕ ಮೌಲ್ಯಗಳು ಮತ್ತು ಜನತಂತ್ರ ವ್ಯವಸ್ಥೆಯನ್ನು ಕುರಿತು ಪ್ರಸ್ತಾಪಿಸಿದರು. 2014ರಲ್ಲಿ ಅವರು ಅಧಿಕಾರಕ್ಕೆ ಬಂದ ಹೊಸತರಲ್ಲಿ ಸಂಸದ್ ಭವನದ ಮೆಟ್ಟಿಲುಗಳಿಗೆ ಹಣೆ ಮುಟ್ಟಿಸಿ ನಮಿಸಿದ್ದರು. ಸಂಸದ್ ಭವನವನ್ನು ಜನತಂತ್ರದ ಮಂದಿರವೆಂದು ಬಣ್ಣಿಸಿದ್ದರು. ಪ್ರಧಾನಿಯಾಗುವ ಮುನ್ನ ಸತತ ಹದಿನಾಲ್ಕು ವರ್ಷಗಳ ಕಾಲ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಅವರ ಆ ಅವಧಿಯಲ್ಲಿ ಗುಜರಾತ್ ವಿಧಾನಸಭಾ ಅಧಿವೇಶನದ ಸರಾಸರಿ ಅವಧಿ ವರ್ಷಕ್ಕೆ ಕೇವಲ 30 ದಿನಗಳಿಗೆ ಮೊಟಕಾಗಿತ್ತು. ಪ್ರಧಾನಿಯಾಗಿ ಸಂಸತ್ತಿನ ಕಲಾಪಗಳಲ್ಲಿ ಅವರು ಭಾಗವಹಿಸಿರುವುದು ಅತಿ ಕಡಿಮೆ. ಸಂಸತ್ ಅಧಿವೇಶನಕ್ಕಿಂತ ಹೆಚ್ಚಾಗಿ ಸಾರ್ವಜನಿಕ ರ್‍ಯಾಲಿಗಳನ್ನು ಅವರು ಹೆಚ್ಚು ಮುಖ್ಯವೆಂದು ಪರಿಗಣಿಸುತ್ತ ಬಂದಿದ್ದಾರೆ.

ಉದಾಹರಣೆಗೆ 2021ರ ಪಶ್ಚಿಮಬಂಗಾಳದ ವಿಧಾನಸಭೆ ಚುನಾವಣೆ ರ್‍ಯಾಲಿಗಳಲ್ಲಿ ಹನ್ನೊಂದೂವರೆ ತಾಸುಗಳ ಕಾಲ ಭಾಷಣ ಮಾಡಿದ್ದರು. ಆದರೆ ಅದೇ ವರ್ಷ ಸಂಸತ್ತಿನ ಬಜೆಟ್ ಅಧಿವೇಶನ, ಮಳೆಗಾಲದ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳಲ್ಲಿ ಅವರು ಸದನಗಳ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದ ಒಟ್ಟು ಅವಧಿ ನಾಲ್ಕು ತಾಸುಗಳಿಗೂ ಕಡಿಮೆ.

ಹತ್ತು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಮನಮೋಹನ ಸಿಂಗ್ ಸಂಸತ್ತಿನ ಅಧಿವೇಶನಗಳಲ್ಲಿ 85 ಪ್ರಶ್ನೆಗಳಿಗೆ ಖುದ್ದು ಉತ್ತರ ನೀಡಿದ್ದಾರೆ. ಮೋದಿಯವರು ಉತ್ತರ ನೀಡಿರುವ ಪ್ರಶ್ನೆಗಳ ಸಂಖ್ಯೆ ಕೇವಲ 13. ಯಾರೂ ತಮ್ಮನ್ನು ಪ್ರಶ್ನಿಸಬಾರದು ಎಂಬ ಧೋರಣೆಯನ್ನು ಸಂಸದೀಯ ಜನತಂತ್ರದಲ್ಲಿ ಒಪ್ಪಲಾಗುವುದಿಲ್ಲ. ಸರ್ಕಾರದ ಮುಖ್ಯಸ್ಥರಾಗಿ ಅವರು ಸದನಗಳ ಕಲಾಪಗಳಲ್ಲಿ ಸಂವಾದಗಳಲ್ಲಿ ಹೆಚ್ಚು ಭಾಗವಹಿಸಬೇಕು. ಪ್ರತಿಪಕ್ಷಗಳಿಗೆ ಸಾಂವಿಧಾನಿಕ ಹೊಣೆಗಾರಿಕೆಯಿದೆ. ಬಲಿಷ್ಠ ಪ್ರತಿಪಕ್ಷವು ಬಲಿಷ್ಠ ಜನತಂತ್ರದ ದ್ಯೋತಕವೆಂದು ಸಂವಿಧಾನಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹೇಳಿದ್ದಾರೆ. ಅಲ್ಪಸಂಖ್ಯೆಯ ಮೇಲೆ ಬಹುಸಂಖ್ಯೆಯ ದಬ್ಬಾಳಿಕೆ ಸಂಸದೀಯ ಜನತಂತ್ರ ವ್ಯವಸ್ಥೆಗೆ ಶೋಭೆ ತರುವುದಿಲ್ಲ ಎಂದಿದ್ದಾರೆ. ಆದರೆ ಮೋದಿಯವರು ಪ್ರತಿಪಕ್ಷಮುಕ್ತ ಭಾರತವನ್ನು ಬಯಸುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಪ್ರತಿಪಕ್ಷಗಳ ಸಂಖ್ಯೆ ಇನ್ನಷ್ಟು ಕುಸಿಯಬೇಕೆಂದು ಬಯಸಿದ್ದಾರೆ.

ಶಾಸಕಾಂಗಕ್ಕೆ ಅವರು ತೋರುತ್ತ ಬಂದಿರುವ ಗೌರವಾದರಗಳು ಮಾತುಗಳಿಗೆ ಸೀಮಿತವೇ ವಿನಾ ಆಚರಣೆಗೆ ಇಳಿದೇ ಇಲ್ಲ. ಮುಂಬರುವ ದಿನಗಳಲ್ಲಿ ಈ ಧೋರಣೆ ಹೆಚ್ಚಲಿದೆಯೇ ವಿನಾ ತಗ್ಗುವ ಸೂಚನೆಗಳಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ

ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿಚಾರದಲ್ಲಿ 84 ಮಕ್ಕಳ ಪೋಷಕರು...

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

Download Eedina App Android / iOS

X