ಈ ದಿನ ಸಂಪಾದಕೀಯ | ಪ್ರಧಾನಿ ಮೋದಿಗೆ ಸ್ವದೇಶದ ಸಮಸ್ಯೆಗಳಿಗಿಂತ ವಿದೇಶದ ಜಯಘೋಷಗಳೇ ಮುಖ್ಯವಾಯಿತೇ?

Date:

Advertisements
ಮಣಿಪುರ, ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವು ರಾಜ್ಯಗಳ ಹಲವು ಭಾಗಗಳು ಹೊತ್ತಿ ಉರಿಯುತ್ತಿವೆ. ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕಿದ್ದ, ಆ ರಾಜ್ಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕಿದ್ದ ಭಾರತದ ಪ್ರಧಾನಿ ಮೋದಿ ವಿದೇಶ ಪ್ರವಾಸಗಳಲ್ಲಿ ನಿರತರಾಗಿದ್ದು, ಜಯಘೋಷಗಳನ್ನು ಕೇಳುವುದರಲ್ಲಿ ಮುಳುಗಿಹೋಗಿದ್ದಾರೆ ಎನ್ನುವ ಟೀಕೆ ವ್ಯಾಪಕವಾಗಿದೆ.     

ಪ್ರಧಾನಿ ಮೋದಿ ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಮಾತುಕತೆ ಸೇರಿದಂತೆ ವಿವಿಧ ಸಭೆ, ಸಮಾರಂಭಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ. ಅಮೆರಿಕದಲ್ಲಿರುವ ಭಾರತೀಯರು ಸೇರಿದಂತೆ ಅನೇಕರು ಮೋದಿಗೆ ಹೋದಲ್ಲೆಲ್ಲ ಜೈಕಾರ ಹಾಕುತ್ತಿರುವುದಾಗಿಯೂ, ಮೋದಿ ಅತ್ಯಂತ ಸಂತಸದಿಂದ ಜನರನ್ನು ಮಾತನಾಡಿಸುತ್ತಾ, ಅವರ ಹೊಗಳಿಕೆ ಸ್ವೀಕರಿಸಿದ್ದಾಗಿಯೂ ವರದಿಯಾಗಿದೆ.

ಇದೇ ಹೊತ್ತಿನಲ್ಲಿ ಭಾರತದಲ್ಲಿ ಭಿನ್ನ ಪರಿಸ್ಥಿತಿ ಏರ್ಪಟ್ಟಿದೆ. ಈಶಾನ್ಯ ಭಾರತದ ಚಿಕ್ಕ ರಾಜ್ಯಗಳಲ್ಲಿ ಒಂದಾದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿರುವ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕೇಂದ್ರ ಸಚಿವ ರಾಜ್‌ಕುಮಾರ್ ರಂಜನ್ ಅವರೇ ಹೇಳಿದ್ದರು. ಅದನ್ನು ಉಲ್ಲೇಖಿಸಿ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಪ್ರಧಾನಿಯವರ ಕಾರ್ಯಶೈಲಿಯನ್ನು ಕಟುವಾಗಿ ವಿಮರ್ಶಿಸುತ್ತಿವೆ.

ಮಣಿಪುರದ ಹಿಂಸಾಚಾರ ಕುರಿತ ಮನವಿ ಪತ್ರವನ್ನು 10 ವಿರೋಧ ಪಕ್ಷಗಳ ನಾಯಕರು ಬಿಡುಗಡೆ ಮಾಡಿದ್ದಾರೆ. ವಾಸ್ತವವಾಗಿ ಅವರು ಈ ಮನವಿ ಪತ್ರವನ್ನು ಮೋದಿಯವರು ಅಮೆರಿಕ ಮತ್ತು ಈಜಿಪ್ಟ್ ಪ್ರವಾಸಕ್ಕೆ ತೆರಳುವ ಮುನ್ನವೇ ಅವರಿಗೆ ಸಲ್ಲಿಸಲು ಮುಂದಾಗಿದ್ದರು. ಆದರೆ, ಪ್ರಧಾನಿಯ ಭೇಟಿಗೆ ಅವಕಾಶ ನೀಡದ ಕಾರಣ ಮನವಿ ಪತ್ರ ಬಿಡುಗಡೆ ಮಾಡಿದ್ದಾಗಿ ವಿರೋಧ ಪಕ್ಷಗಳ ನಾಯಕರು ಹೇಳಿದ್ದಾರೆ. ವಿರೋಧ ಪಕ್ಷಗಳ ನಾಯಕರಿಗೆ 10 ನಿಮಿಷ ಸಮಯ ನೀಡದ ಪ್ರಧಾನಿ, ಅಮೆರಿಕದಲ್ಲಿ ಭಾರತೀಯ ಸಮುದಾಯದ ಹಸ್ತಲಾಘವ, ಹಸ್ತಾಕ್ಷರಗಳಿಗೆ, ಎಲಾನ್ ಮಸ್ಕ್‌ನಂಥ ವಿಕ್ಷಿಪ್ತ ಶೈಲಿಯ ಉದ್ಯಮಿಗಳ ಭೇಟಿಗೆ ಸಮಯ ನೀಡಿರುವುದು ಟೀಕೆಗೆ ಒಳಗಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಕೂಡ ‘ಮನ್‌ ಕಿ ಬಾತ್’ ವೇಳೆ ಪ್ರಧಾನಿಯವರನ್ನು ಟೀಕಿಸಿ, ‘ಅದು ಮನ್‌ ಕಿ ಬಾತ್ ಅಲ್ಲ, ಮಣಿಪುರ್‌ ಕಿ ಬಾತ್ ಆಗಲಿ’ ಎಂದು ಮೋದಿ ಅವರ ಮೌನವನ್ನು ತರಾಟೆಗೆ ತೆಗೆದುಕೊಂಡಿದ್ದರು.

Advertisements

ಅವರದ್ದೇ ಸರ್ಕಾರ ಅಧಿಕಾರದಲ್ಲಿರುವ ಮಣಿಪುರದ ಹಿಂಸಾಚಾರವಿರಲಿ, ದೆಹಲಿಯಲ್ಲೇ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಯಿರಲಿ, ಅಂಬಾನಿ ಅದಾನಿಗಳ ಹೂಡಿಕೆ, ವ್ಯವಹಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರಲಿ, ಪ್ರಧಾನಿ ಮೋದಿ ಅವರದ್ದು ಅದೇ ದಿವ್ಯ ಮೌನ. ಮಣಿಪುರದ ವಿಚಾರದಲ್ಲಂತೂ ಮೋದಿ ಅವರ ಮೌನ ತೀವ್ರ ಕಳವಳಕಾರಿಯೂ, ಅನಾಹುತಕಾರಿಯೂ, ಅಲ್ಲಿಯ ಜನಜೀವನದ ಮಟ್ಟಿಗೆ ಅಪಾಯಕಾರಿಯೂ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿದ್ದು ಮೇ 3ರಂದು; ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಮೀತೀ ಸಮುದಾಯದ ಬೇಡಿಕೆಯನ್ನು ವಿರೋಧಿಸಲು ಕಣಿವೆ ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ನಂತರ ಅಲ್ಲಿ ಘರ್ಷಣೆಗಳು ಆರಂಭವಾದವು. ಹಿಂಸಾಚಾರ ಆರಂಭವಾಗಿ 50 ದಿನಗಳಾಗುತ್ತಾ ಬಂದಿದ್ದರೂ ಇನ್ನೂ ಪರಿಸ್ಥಿತಿ ಉದ್ವಿಗ್ನವಾಗಿಯೇ ಇದೆ. ಹಿಂಸಾಚಾರದಲ್ಲಿ 115ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 60 ಸಾವಿರ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಮೋದಿಯವರ ಸರ್ಕಾರದ ಮಂತ್ರಿಗಳೇ ಅಲ್ಲಿನ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಪಕ್ಷಗಳು ಮಣಿಪುರಕ್ಕೆ ಸರ್ವಪಕ್ಷ ನಿಯೋಗ ಹೋಗುವ ಬಗ್ಗೆ ಸಲಹೆ ನೀಡಿವೆ. ಆದರೆ, ಯಾವುದಕ್ಕೂ ಪ್ರತಿಕ್ರಿಯಿಸದ ಪ್ರಧಾನಿ ಮೋದಿ ಯಥಾಪ್ರಕಾರದ ಮೌನ ತಾಳಿದ್ದಾರೆ. ಅವರ ಮೌನ ಮಣಿಪುರದ ಮಟ್ಟಿಗೆ ವಿನಾಶಕಾರಿಯಾಗಬಲ್ಲದು ಎನ್ನುವ ವಿಶ್ಲೇಷಣೆಗಳಿವೆ.  

ವಾಸ್ತವವಾಗಿ ಅಲ್ಲಿನ ಹಿಂಸಾಚಾರಕ್ಕೆ ಬಿಜೆಪಿಯೇ ಪ್ರಮುಖ ಕಾರಣ. ಅಸ್ಸಾಂನಂತೆ ಮಣಿಪುರದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತಂದು ಅಕ್ರಮ ವಲಸಿಗರನ್ನು ಪತ್ತೆ ಹಚ್ಚಬೇಕು; ಜೊತೆಗೆ ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ತರಬೇಕು ಎನ್ನುವುದು ಕಣಿವೆ ಜಿಲ್ಲೆಗಳ ಸಮುದಾಯವಾದ ಮೀತೀಗಳ ಬೇಡಿಕೆ. ಅದಕ್ಕೆ ಬೆಟ್ಟ ಪ್ರದೇಶದ ಸಮುದಾಯಗಳಾದ ನಾಗಾಗಳು ಮತ್ತು ಕುಕಿಗಳು ತೀವ್ರ ಆಕ್ಷೇಪಣೆಯೆತ್ತಿದ್ದು, ಎನ್‌ಆರ್‌ಸಿ ಹೆಸರಲ್ಲಿ ತಮ್ಮನ್ನು ರಾಜ್ಯ ಬಿಟ್ಟು ಓಡಿಸುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶದಿಂದ ಬೀದಿಗಿಳಿದಿದ್ದಾರೆ; ಜೊತೆಗೆ ಮೀತೀಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಬಾರದು ಎಂದು ಒತ್ತಾಯಿಸತೊಡಗಿದ್ದಾರೆ. ಈ ಸಮಸ್ಯೆ ಮಣಿಪುರದ ಸಮಗ್ರತೆಗೆ ಭಂಗ ತರುವ ಸಾಧ್ಯತೆಯೂ ಇದೆ. ಹಿಂಸಾಚಾರದ ನಂತರ ಬಿಜೆಪಿಯ ಎಂಟು ಮಂದಿ ಶಾಸಕರು ಸೇರಿದಂತೆ ಎಲ್ಲಾ ಕುಕಿ ಶಾಸಕರು ಗುಡ್ಡಗಾಡು ಪ್ರದೇಶಗಳಿಗೆ ಪ್ರತ್ಯೇಕ ಆಡಳಿತಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇದು ಮಣಿಪುರದ ಮುಖ್ಯಮಂತ್ರಿ ಬಿರೇನ್‌ಸಿಂಗ್‌ಗೆ ತಲೆನೋವಾಗಿ ಪರಿಣಮಿಸಿದೆ.  

ಈ ಸುದ್ದಿ ಓದಿದ್ದೀರಾ: ಮಹಾರಾಷ್ಟ್ರ | ಬಿಜೆಪಿ ಔರಂಗಜೇಬ್‌ನನ್ನು ಗೋರಿಯಿಂದ ಎಬ್ಬಿಸಿದ್ದೇಕೆ?

ಬಿರೇನ್‌ಸಿಂಗ್ ಕೂಡ ಹಿಂದೆ ಕಾಂಗ್ರೆಸ್‌ನಲ್ಲಿದ್ದವರೇ. ತಮ್ಮದೇ ಪಕ್ಷದ ಕೇಂದ್ರ ಸರ್ಕಾರವಿದ್ದರೂ ಹಿಂಸಾಚಾರವನ್ನು ತಹಬಂದಿಗೆ ತರಲು ಬಿರೇನ್‌ ಸಿಂಗ್‌ಗೆ ಸಾಧ್ಯವಾಗಿಲ್ಲ. ವಿಪಕ್ಷಗಳ ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚಿಸಿದಷ್ಟು ಸುಲಭ ಅಲ್ಲ ಒಂದು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವುದು ಎನ್ನುವುದು ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಮನದಟ್ಟಾಗಬೇಕಿದೆ.

ಬಿಜೆಪಿ ಜಾರಿಗೆ ತರಲು ಯತ್ನಿಸಿದ ಸಂಘ ಪರಿವಾರದ ಅಜೆಂಡಾ ದೇಶದ ಮೂಲೆ ಮೂಲೆಗಳಲ್ಲೂ ಹಿಂಸಾಚಾರ, ಕ್ಷೋಭೆ ಹುಟ್ಟುಹಾಕಿದೆ. ರಾಜಕೀಯ ಲಾಭಕ್ಕಾಗಿ ಇವರು ಸೃಷ್ಟಿಸುತ್ತಿರುವ ದ್ವೇಷ, ಅಸಹನೆಯ ಬೆಂಕಿಯಲ್ಲಿ ಜನಸಮುದಾಯಗಳು ಅಕ್ಷರಶಃ ಬೇಯುತ್ತಿವೆ. ಮಣಿಪುರ, ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವು ರಾಜ್ಯಗಳ ಹಲವು ಭಾಗಗಳು ಹೊತ್ತಿ ಉರಿಯುತ್ತಿವೆ. ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕಿದ್ದ, ಆ ರಾಜ್ಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕಿದ್ದ ಭಾರತದ ಪ್ರಧಾನಿ ವಿದೇಶ ಪ್ರವಾಸಗಳಲ್ಲಿ ನಿರತರಾಗಿದ್ದು, ಜಯಘೋಷಗಳನ್ನು ಕೇಳುವುದರಲ್ಲಿ ಮುಳುಗಿಹೋಗಿದ್ದಾರೆ ಎನ್ನುವ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.    

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X