ಧಾರ್ಮಿಕ ಸ್ಥಳಗಳ ವಿಚಾರವು ರಾಷ್ಟ್ರದ ಸಾಮಾಜಿಕ ರಚನೆಗೆ ಅಡ್ಡಿಯುಂಟುಮಾಡುವ ಅಸ್ತ್ರವಾಗದಂತೆ ನೋಡಿಕೊಳ್ಳಬೇಕು. ನ್ಯಾಯಾಂಗವು ಸಂಯಮ ಮತ್ತು ಪೂಜಾ ಸ್ಥಳಗಳ ಕಾಯಿದೆಯಲ್ಲಿ ಪ್ರತಿಪಾದಿಸಲಾದ ತತ್ವಗಳಿಗೆ ನಿಷ್ಠೆಯಿಂದ ನಿರ್ಧಾರ, ಆದೇಶಗಳನ್ನು ಹೊರಡಿಸಬೇಕು.
ನವೆಂಬರ್ 18 ರಂದು, ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಸಿವಿಲ್ ನ್ಯಾಯಾಲಯವು ದೇವಸ್ಥಾನವಿದ್ದ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸಲ್ಲಿಸಿದ ಅರ್ಜಿಯ ಮೇಲೆ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಆದೇಶ ನೀಡಿತು. ಸಮೀಕ್ಷೆಯ ವರದಿಯನ್ನು ನವೆಂಬರ್ 29 ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿತು. ಕೋರ್ಟ್ ಸೂಚನೆಯ ಬಳಿಕ ಸಮೀಕ್ಷೆಗಾಗಿ ಅಧಿಕಾರಗಳ ತಂಡ ತೆರಳಿತ್ತು. ಅದು ಪ್ರತಿಭಟನೆ, ಹಿಂಸಾಚಾರವನ್ನು ಹುಟ್ಟುಹಾಕಿದೆ. ಈಗ ಸಂಭಲ್ ಕೋಮುದ್ವೇಷ ಮತ್ತು ಘರ್ಷಣೆಯ ಕೇಂದ್ರವಾಗಿದೆ.
ಸಂಭಲ್ ಸಿವಿಲ್ ನ್ಯಾಯಾಲಯದ ಆದೇಶದ ಬಳಿಕ ʼಪೂಜಾ ಸ್ಥಳಗಳ ಕಾಯಿದೆ-1991ʼ ಭಾರೀ ಚರ್ಚೆಯಲ್ಲಿದೆ. ಕಾಯ್ದೆಯ ಪ್ರಕಾರ, ಯಾವುದೇ ಪೂಜಾ ಸ್ಥಳದ ಪರಿವರ್ತನೆಯನ್ನು ಮಾಡುವಂತಿಲ್ಲ. 1947ರ ಆಗಸ್ಟ್ 17ರಂದು ಯಾವ ಸ್ಥಳದಲ್ಲಿ ಯಾವ ಧಾರ್ಮಿಕ ಕಟ್ಟಡಗಳು ಇದ್ದವೋ, ಅವುಗಳ ಸ್ವರೂಪವನ್ನು ಕಾಯ್ದೆಯು ರಕ್ಷಿಸುತ್ತದೆ. ಆದಾಗ್ಯೂ, ಧಾರ್ಮಿಕ ಸ್ಥಳಗಳ, ನಿರ್ದಿಷ್ಟವಾಗಿ ಹೇಳಬೇಕೆಂದರೆ ಮಸೀದಿಗಳ ಜಾಗದಲ್ಲಿ ಈ ಹಿಂದೆ ದೇವಾಲಯಗಳು ಅಸ್ತಿತ್ವದಲ್ಲಿದ್ದವು ಎಂಬ ವಾದದ ಆಧಾರದ ಮೇಲೆ ಸಮೀಕ್ಷೆಗಳನ್ನು ಅನುಮತಿಸಿ ಜಿಲ್ಲಾ ನ್ಯಾಯಾಲಯಗಳು ಹಲವಾರು ಆದೇಶಗಳನ್ನು ನೀಡಿವೆ. ಅದರಲ್ಲಿ ಸಂಭಲ್ ಮಸೀದಿಯೂ ಒಂದು.
ಅಯೋಧ್ಯೆಯ ಬಾಬ್ರಿ ಮಸೀದಿ-ರಾಮಲಲ್ಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ, ಮಸೀದಿ ಜಾಗದಲ್ಲಿ ದೇವಾಲಯವಿತ್ತೆಂಬ ವಾದಗಳೊಂದಿಗೆ ಹಲವಾರು ದಾವೆಗಳು ಕೋರ್ಟ್ ಮೆಟ್ಟಿಲು ಹತ್ತಿರುವ ನಿದರ್ಶನಗಳಿವೆ. ವಾರಣಾಸಿಯ ಕಾಶಿಯಲ್ಲಿರುವ ಗ್ಯಾನವಾಪಿ ಮಸೀದಿ ಪ್ರಕರಣ, ಮಥುರಾದ ಶಾಹಿ ಈದ್ಗಾ ಹಾಗೂ ಮಧ್ಯಪ್ರದೇಶದ ಕಮಲ್-ಮೌಲಾ ಮಸೀದಿಯಂತಹ ಹಲವು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ. ಕರ್ನಾಟಕದ ಶ್ರೀರಂಗಪಟ್ಟಣದಲ್ಲಿರುವ ಮಸೀದಿಯನ್ನು ವಿವಾದದ ತಾಣವನ್ನಾಗಿ ಮಾಡಲು ಹಿಂದುತ್ವವಾದಿ ಸಂಘಟನೆಗಳು ಹವಣಿಸುತ್ತಿವೆ.
ಇಂತಹ ಪ್ರಕರಣಗಳನ್ನು ನ್ಯಾಯಾಲಯಗಳು ಪೂಜಾ ಸ್ಥಳಗಳ ಕಾಯ್ದೆಯಡಿ ಕಟ್ಟುನಿಟ್ಟಾಗಿ ಗಮನಿಸಿದರೆ ಆ ದಾವೆಗಳಿಗೆ ಅವಕಾಶವೇ ಇರುವುದಿಲ್ಲ. ಆದರೆ ಈಗ, ಕಾಯಿದೆಯ ಸಿಂಧುತ್ವವೇ ಪ್ರಶ್ನೆಯಲ್ಲಿದೆ. ಕಾಯ್ದೆಯ ಅಸ್ತಿತ್ವವನ್ನು ಅಳಿಸಿಹಾಕುವ ಯತ್ನಗಳು ನಡೆಯುತ್ತಿವೆ. ಇದೇ ವೇಳೆ, ನ್ಯಾಯಾಲಯಗಳು ಕಾಯ್ದೆಯನ್ನು ಕಡೆಗಣಿಸಿ, ದಾವೆಗಳಿಗೆ ಆಸ್ಪದ ಕೊಡುತ್ತಿವೆ. ಈ ದಾವೆಗಳು ಕಾನೂನನ್ನು ಕಡೆಗಣಿಸುವುದು ಮಾತ್ರವಲ್ಲದೆ, ಜಾತ್ಯತೀತತೆ ಮತ್ತು ಕೋಮು ಸೌಹಾರ್ದತೆಯ ಸಾಂವಿಧಾನಿಕ ಬದ್ಧತೆಗೆ ಧಕ್ಕೆ ತರುತ್ತವೆ.
ಸಂಭಲ್ ಪ್ರಕರಣದಲ್ಲಿ, ಸಿವಿಲ್ ನ್ಯಾಯಾಲಯವು ಚಂದೌಸಿಯಲ್ಲಿರುವ ಶಾಹಿ ಜಾಮಾ ಮಸೀದಿಯನ್ನು ಸರ್ವೇ ಮಾಡಲು ಸೂಚಿಸಿತು. ಗಮನಾರ್ಹವೆಂದರೆ, ವಿಚಾರಣೆಯ ಮೊದಲ ದಿನವೇ, ಅದೂ ದಾವೆಯಲ್ಲಿನ ಆಧಾರವನ್ನು ಸಹ ಪರಿಗಣಿಸದೆ ಸಮೀಕ್ಷೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ. ಇಂತಹ ಆದೇಶಗಳು ನಿಜಕ್ಕೂ ವಿಚಿತ್ರವೆನಿಸುತ್ತದೆ. ಪ್ರತಿವಾದಿಗಳು ದಾವೆಯನ್ನು ಪ್ರಶ್ನಿಸಲು ಅವಕಾಶ ಪಡೆಯುವ ಮೊದಲೇ ಆದೇಶವನ್ನು ಜಾರಿಗೆ ತರಲಾಗಿದೆ. ಅಂದರೆ, ನ್ಯಾಯಾಲಯದ ಆದೇಶ ಬಂದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಸಮೀಕ್ಷೆಗಾಗಿ ಮಸೀದಿಗೆ ಧಾವಿಸಿದರು.
ನವೆಂಬರ್ 24ರಂದು, ಸಮೀಕ್ಷಾ ತಂಡವು ಮಸೀದಿಯನ್ನು ಪ್ರವೇಶಿಸಿದ ನಂತರ ಘರ್ಷಣೆಗಳು ಆರಂಭವಾದವು. ವರದಿಗಳ ಪ್ರಕಾರ, ಘರ್ಷಣೆಯಲ್ಲಿ 6 ಮಂದಿ ಸಾವನ್ನಪ್ಪಿದ್ದರು. ಅವರಲ್ಲಿ, 19 ವರ್ಷದ ಯುವಕನೊಬ್ಬ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ.
ಗ್ಯಾನವಾಪಿ ಪ್ರಕರಣದ ಸಂದರ್ಭದಲ್ಲಿ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ʼಆರಾಧನಾ ಸ್ಥಳದ ಧಾರ್ಮಿಕ ಸ್ವರೂಪದ ನಿರ್ಣಯವನ್ನು ಸ್ಪಷ್ಟವಾಗಿ ನಿರ್ಬಂಧಿಸಲಾಗಿಲ್ಲʼ ಎಂಬುದರ ಬಗ್ಗೆ ಮಾತನಾಡಿದ್ದರು. ಆ ನಂತರ, ಇದು ಕೇವಲ ಸಂಭಾಷಣೆಯೇ ಹೊರತು ನ್ಯಾಯಾಲಯದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು. ಅದು ಕೇವಲ ಸಂಭಾಷಣೆಯೇ ಆಗಿದ್ದರೂ, ಆರಾಧನಾ ಸ್ಥಳಗಳ ಸಿಂಧುತ್ವವನ್ನು ಕಾಯ್ದೆಯ ನಿರ್ಬಂಧದ ಹೊರತಾಗಿಯೂ ನಿರ್ಧರಿಸಬಹುದು ಎಂಬುದನ್ನು ಹೇಳುವಂತಿತ್ತು.
1991ರಲ್ಲಿ ಕಾಯ್ದೆಯನ್ನು ಜಾರಿಗೆ ತಂದಾಗ, ʼʼಆರಾಧನೆಯ ಸ್ಥಳಗಳ ಕಾಯಿದೆಯು ಜಾತ್ಯತೀತ ವ್ಯವಸ್ಥೆಯ ಕಟ್ಟುಪಾಡುಗಳಿಗೆ ಸಂಬಂಧಿಸಿದೆ. ಇದು ಎಲ್ಲ ಧರ್ಮಗಳ ಸಮಾನತೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಆರಾಧನಾ ಸ್ಥಳಗಳ ಕಾಯಿದೆಯು ಸಂವಿಧಾನದ ಮೂಲಭೂತ ಸ್ಥಾನಮಾನವನ್ನು ಹೊಂದಿದ್ದು, ಎಲ್ಲ ಧರ್ಮಗಳ ಸಮಾನತೆಯನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಸರ್ಕಾರದ ಮೇಲೆ ವಿಧಿಸಲಾದ ಗಂಭೀರ ಕರ್ತವ್ಯಗಳ ದೃಢೀಕರಣವಾಗಿದೆ. ಆರಾಧನಾ ಸ್ಥಳಗಳ ಕಾಯ್ದೆಯ ಜಾರಿಯಲ್ಲಿ ಒಂದು ಉದ್ದೇಶವಿದೆ. ಇದು ನಮ್ಮ ಇತಿಹಾಸ ಮತ್ತು ರಾಷ್ಟ್ರದ ಭವಿಷ್ಯದ ಬಗ್ಗೆ ಮಾತನಾಡುತ್ತದೆ. ಜನರು ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಸಾರ್ವಜನಿಕ ಪೂಜಾ ಸ್ಥಳಗಳ ಸ್ವರೂಪವನ್ನು ಸಂರಕ್ಷಿಸುವಲ್ಲಿ, ಇತಿಹಾಸ ಮತ್ತು ವರ್ತಮಾನದ ತಪ್ಪುಗಳು ಭವಿಷ್ಯವನ್ನು ದಮನಿಸುವ ಸಾಧನಗಳಾಗಬಾರದುʼʼ ಎಂದು ಸಂಸತ್ತು ಹೇಳುತ್ತಿದೆ.
ಇದರ ಹೊರತಾಗಿಯೂ, ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ನ್ಯಾಯಾಲಯಗಳು ಸ್ವೀಕರಿಸುತ್ತಿರುವುದು ಮತ್ತು ಸಮೀಕ್ಷೆಗೆ ಆದೇಶಿಸುತ್ತಿರುವುದು ಆರಾಧನಾ ಸ್ಥಳಗಳ ಕಾಯ್ದೆಯ ಮೂಲಭೂತ ತತ್ವಗಳಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ.
ಈ ವರದಿ ಓದಿದ್ದೀರಾ?: ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?
ಗ್ಯಾನವಾಪಿ ಪ್ರಕರಣದ ನಂತರ, ವಿವಿಧ ಸ್ಥಳಗಳ ಧಾರ್ಮಿಕ ಗುರುತನ್ನು ಪ್ರಶ್ನಿಸುವ ಸವಾಲುಗಳು ಉಲ್ಬಣಗೊಳ್ಳುತ್ತಿವೆ. ಉದಾಹರಣೆಗೆ, ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ಕಲಾಕೃತಿಗಳು ಇವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯವು ಸ್ವೀಕರಿಸಿದೆ. ಅದೇ ರೀತಿ, ಕರ್ನಾಟಕದಲ್ಲಿ, ನರೇಂದ್ರ ಮೋದಿ ವಿಚಾರ ಮಂಚ್ ಶ್ರೀರಂಗಪಟ್ಟಣದ ಮಸೀದಿಯೊಳಗೆ ಪ್ರಾರ್ಥನೆ ನಡೆಸಲು ಅನುಮತಿ ಕೇಳಿದೆ. ಆ ಮಸೀದಿಯನ್ನು ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಹನುಮಾನ್ ಮಂದಿರದ ಮೇಲೆ ನಿರ್ಮಿಸಲಾಗಿದೆ ಎಂದು ಹಿಂದುತ್ವವಾದಿ ಸಂಘಟನೆ ವಾದಿಸಿದೆ.
ಇಂತಹ ಪ್ರಕರಣಗಳು ಸಮೀಕ್ಷೆಗಳನ್ನು ಅವಲಂಬಿಸುತ್ತಿವೆ. ಇದರಿಂದಾಗಿ ಅಯೋಧ್ಯೆ ತೀರ್ಪು ನೀಡುವಾಗ, ʼ1991ರ ಕಾಯ್ದೆಯು ಎಲ್ಲ ಧರ್ಮಗಳ ಸಮಾನತೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆʼ ಎಂದು ಸುಪ್ರೀಂ ಕೋರ್ಟ್ ನಿಸ್ಸಂದಿಗ್ಧವಾಗಿ ಹೇಳಿತ್ತು. ಅಧೀನ ನ್ಯಾಯಾಲಯಗಳು ಅರ್ಜಿಗಳನ್ನು ಸ್ವೀಕರಿಸುವಾಗ, ಸುಪ್ರೀಂ ಕೋರ್ಟ್‌ನ ಮೇಲಿನ ಹೇಳಿಕೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಸಿದ್ಧತೆ ನಡೆಸುತ್ತಿದೆ. ಇಂತಹ ಸಮಯದಲ್ಲಿ ಈಗ ಸಲ್ಲಿಕೆಯಾಗಿರುವ ಮತ್ತು ಸಲ್ಲಿಕೆಯಾಗಲಿರುವ ದಾವೆಗಳು ಕಾನೂನಿನ ನಿಯಮ ಮತ್ತು ಧಾರ್ಮಿಕ ಸಾಮರಸ್ಯದ ಮೇಲೆ ಬೀರುವ ವ್ಯಾಪಕ ಪರಿಣಾಮಗಳ ಬಗ್ಗೆಯೂ ಅವಲೋಕಿಸಬೇಕು. ಧಾರ್ಮಿಕ ಸ್ಥಳಗಳ ವಿಚಾರವು ರಾಷ್ಟ್ರದ ಸಾಮಾಜಿಕ ರಚನೆಗೆ ಅಡ್ಡಿಯುಂಟುಮಾಡುವ ಅಸ್ತ್ರವಾಗದಂತೆ ನೋಡಿಕೊಳ್ಳಬೇಕು. ನ್ಯಾಯಾಂಗವು ಸಂಯಮ ಮತ್ತು ಪೂಜಾ ಸ್ಥಳಗಳ ಕಾಯಿದೆಯಲ್ಲಿ ಪ್ರತಿಪಾದಿಸಲಾದ ತತ್ವಗಳಿಗೆ ನಿಷ್ಠೆಯಿಂದ ನಿರ್ಧಾರ, ಆದೇಶಗಳನ್ನು ಹೊರಡಿಸಬೇಕು.