ಹರಿಯಾಣದಲ್ಲಿ ಬಿಜೆಪಿಯ ಹತ್ತು ವರ್ಷಗಳ ಆಡಳಿತದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಆಡಳಿತ ವಿರೋಧಿ ಗಾಳಿ ಬಲವಾಗಿಯೇ ಬೀಸತೊಡಗಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳು ರಾಹುಲ್ ನಾಯಕತ್ವಕ್ಕೆ ನಿರ್ಣಾಯಕ ಸವಾಲಾಗಲಿವೆ. ಕಾಂಗ್ರೆಸ್ ಪಕ್ಷ ಹರಿಯಾಣದಲ್ಲಿ ಗೆದ್ದರೆ ಈ ಫಲಿತಾಂಶ ಮಹಾರಾಷ್ಟ್ರದ ಚುನಾವಣೆಗಳ ಮೇಲೆ ಪರಿಣಾಮ ಬೀರುವುದು ಸ್ವಾಭಾವಿಕ.
ಇದೇ ಅಕ್ಟೋಬರ್ ಐದರಂದು ಹರಿಯಾಣ ವಿಧಾನಸಭೆಗೆ ನಡೆಯಲಿರುವ ಮತದಾನ ದೇಶ ರಾಜಕಾರಣವನ್ನು ಹೊರಳು ಹಾದಿಯಲ್ಲಿ ನಿಲ್ಲಿಸಿದೆ. ಹತ್ತು ವರ್ಷಗಳಿಂದ ಬಿಜೆಪಿ ಅಧಿಕಾರ ನಡೆಸಿರುವ ಈ ರೈತಾಪಿ ರಾಜ್ಯದಲ್ಲಿ ಆಡಳಿತ ವಿರೋಧಿ ಭಾವನೆಯ ಗಾಳಿ ಬಲವಾಗಿಯೇ ಬೀಸತೊಡಗಿದೆ.
ರಾಹುಲ್ ಗಾಂಧಿ- ಪ್ರಿಯಾಂಕ ಗಾಂಧಿ- ಭೂಪಿಂದರ್ ಹುಡ್ಡಾ ಅವರ ಕಾಂಗ್ರೆಸ್ ಸಭೆಗಳು ಭಾರೀ ಜನಸ್ತೋಮವನ್ನು ಸೆಳೆಯುತ್ತಲಿವೆ. ಕಾಂಗ್ರೆಸ್ ನೀಡಿರುವ ಹಲವು ಗ್ಯಾರಂಟಿಗಳಿಗೆ ಪ್ರತಿಸ್ಪಂದನವೂ ದೊರೆಯುತ್ತಿದೆ.
2024ರ ಲೋಕಸಭಾ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಬಹುಮುಖ್ಯ ಚುನಾವಣೆಗಳು ಹರಿಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಗಳು. ಈ ಚುನಾವಣೆಗಳ ಬೆನ್ನಿಗೇ ಮಹಾರಾಷ್ಟ್ರ ಮತ್ತು ಝಾರ್ಖಂಡ್ ವಿಧಾನಸಭೆ ಚುನಾವಣೆಗಳು ಜರುಗಲಿವೆ. ದೇಶದ ವ್ಯಾಪಾರೋದ್ಯಮ ರಾಜಧಾನಿ ಎನಿಸಿರುವ ಮುಂಬಯಿಯನ್ನು ಮತ್ತು 48 ಲೋಕಸಭಾ ಸೀಟುಗಳನ್ನು ಹೊಂದಿರುವ ಮಹಾರಾಷ್ಟ್ರದ ಮೇಲಿನ ರಾಜಕೀಯ ನಿಯಂತ್ರಣ ಯಾವುದೇ ರಾಜಕೀಯ ಪಕ್ಷಕ್ಕೆ ಅಮೂಲ್ಯ. ಹೀಗಾಗಿಯೇ ಬಿಜೆಪಿ ಶಿವಸೇನೆ ಮತ್ತು ಎನ್.ಸಿ.ಪಿ.ಯನ್ನು ಒಡೆದು ಅಲ್ಲಿನ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಕೆಡವಿ ತನ್ನ ಸರ್ಕಾರವನ್ನು ಪ್ರತಿಷ್ಠಾಪಿಸಿತ್ತು. ಆದರೆ ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಜನಾಕ್ರೋಶಕ್ಕೆ ಗುರಿಯಾಗಿದೆ. ಲೋಕಸಭಾ ಚುನಾವಣೆಗಳಲ್ಲಿ ಪ್ರಕಟವಾದ ಈ ಅಸಮಾಧಾನ ಮತ್ತಷ್ಟು ಬೆಳೆದಿರುವ ಸೂಚನೆಗಳಿವೆಯೇ ವಿನಾ ಇಳಿದಿರುವ ಸಂಕೇತಗಳಿಲ್ಲ.
2024ರ ಲೋಕಸಭಾ ಚುನಾವಣೆಗಳಲ್ಲಿ ಮೋದಿಯವರು ಸೋಲೇ ಇಲ್ಲದ ಅಜೇಯರು ಎಂಬ ಪ್ರಭಾವಳಿ ಛಿದ್ರಗೊಂಡಿದೆ. ‘ಚಾರ್ ಸೌ ಪಾರ್’ ಇರಲಿ, ಸರಳ ಬಹುಮತವನ್ನೂ (272 ಸ್ಥಾನಗಳು) ಗಳಿಸಿಕೊಡುವುದು ಅವರಿಂದ ಆಗಲಿಲ್ಲ. ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಮತ್ತು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳದ ಬೆಂಬಲದೊಂದಿಗೆ ಅವರು ಸರ್ಕಾರ ರಚಿಸಬೇಕಾಯಿತು. ಹೀಗಾಗಿ ಈಗಾಗಲೇ ಹಗ್ಗದ ನಡಿಗೆಯ ನಾಜೂಕು ಸ್ಥಿತಿ ಮೋದಿಯವರದು. ಇನ್ನು ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಒಂದು ವೇಳೆ ಬಿಜೆಪಿ ಸೋತರೆ ಪಕ್ಷದ ಒಳಗೆ ಮತ್ತು ಹೊರಗೆ ಅವರ ಸ್ಥಿತಿ ಇನ್ನಷ್ಟು ದುರ್ಬಲ ಆಗಲಿದೆ.
ಸಾವಿರಾರು ಕೋಟಿ ರುಪಾಯಿಗಳ ಹೂಡಿ ಪಪ್ಪು ಎಂದು ಬಿಂಬಿಸಿಲಾಗಿದ್ದ ಬಿಜೆಪಿ ಪ್ರತಿಸ್ಪರ್ಧಿ ರಾಹುಲ್ ಗಾಂಧಿ ನಾಯಕನಾಗಿ ಹೊರಹೊಮ್ಮಿರುವ ವರ್ಷವಿದು. ಲೋಕಸಭೆಯಲ್ಲಿ ತಮ್ಮ ಪಕ್ಷದ ಸಂಸದೀಯ ಬಲವನ್ನು 52ರಿಂದ 99ಕ್ಕೆ ಒಯ್ದಿದ್ದಾರೆ. ದೇಶಾದ್ಯಂತ ಅವರ ವರ್ಚಸ್ಸು ಸುಧಾರಿಸಿದೆ. ಪರ್ಯಾಯ ನಾಯಕತ್ವ ನೀಡುವ ನಿಚ್ಚಳ ಸೂಚನೆಗಳು ಕಾಣಿಸಿಕೊಂಡಿವೆ. ಹರಿಯಾಣದಲ್ಲಿ ಬಿಜೆಪಿಯ ಹತ್ತು ವರ್ಷಗಳ ಆಡಳಿತದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಆಡಳಿತ ವಿರೋಧಿ ಗಾಳಿ ಬಲವಾಗಿಯೇ ಬೀಸತೊಡಗಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳು ರಾಹುಲ್ ನಾಯಕತ್ವಕ್ಕೆ ನಿರ್ಣಾಯಕ ಸವಾಲಾಗಲಿವೆ. ಕಾಂಗ್ರೆಸ್ ಪಕ್ಷ ಹರಿಯಾಣದಲ್ಲಿ ಗೆದ್ದರೆ ಈ ಫಲಿತಾಂಶ ಮಹಾರಾಷ್ಟ್ರದ ಚುನಾವಣೆಗಳ ಮೇಲೆ ಪರಿಣಾಮ ಬೀರುವುದು ಸ್ವಾಭಾವಿಕ. ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಹೊಸ ವಿಶ್ವಾಸದಿಂದ ಮೋಶಾ ನೀತಿ ನಿರ್ಧಾರಗಳ ವಿರುದ್ಧ ಸೆಣೆಸಲಿವೆ. ರಾಹುಲ್ ಇಂಡಿಯಾ ಮೈತ್ರಿಕೂಟದ ದೊಡ್ಡ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಮೈತ್ರಿಪಕ್ಷಗಳೂ ಅವರನ್ನು ಮುಂದಾಳು ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದ ಒಳಗೆ ರಾಹುಲ್ ನಾಯಕತ್ವದ ವಿರುದ್ಧದ ಭಿನ್ನ ದನಿಗಳು ಅಡಗಿ ಹೋಗಲಿವೆ.
ಜನತಂತ್ರದಲ್ಲಿ ಗುಂಪುಗಾರಿಕೆ ಇರುವುದು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ಇರುವುದು ಸ್ವಾಭಾವಿಕ. ಎಸ್.ಆರ್.ಕೆ. ಸದ್ದಿಲ್ಲದೆ ಹಿಂದೆ ಸರಿದಿದ್ದ ದಲಿತ ನಾಯಕಿ ಕುಮಾರಿ ಸೆಲ್ಜಾ ಅವರನ್ನು ಪುನಃ ಚುನಾವಣಾ ರಂಗ ಮಧ್ಯಕ್ಕೆ ತಂದು ಭೂಪಿಂದರ್ ಹುಡ್ಡಾ ಮತ್ತು ಸೆಲ್ಜಾ ನಡುವೆ ಶಾಂತಿ ಸಂಧಾನ ಮಾಡಿದ್ದಾರೆ ರಾಹುಲ್ ಗಾಂಧಿ.
ಹರಿಯಾಣ ಪುಟ್ಟ ರಾಜ್ಯ. ವಿಧಾನಸಭೆಯ ಒಟ್ಟು ಸದಸ್ಯಬಲ 90. ಸರಳ ಬಹುಮತದ ಸಂಖ್ಯೆ 46. ಒಕ್ಕಲುತನವೇ ಇಲ್ಲಿನ ಜನರ ಜೀವಾಳ. ಮೋದಿಯವರು ಜಾರಿಗೆ ತಂದಿದ್ದ ಮೂರು ರೈತವಿರೋಧಿ ಕಾಯಿದೆಗಳ ವಿರುದ್ಧ ಭುಗಿಲೆದ್ದ ರೈತ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಾಜ್ಯವಿದು.
ಅಧಿಕ ಪ್ರಮಾಣದ ಜಮೀನಿನ ಒಡೆತನ ಜಾಟ್ ಜನಾಂಗದ್ದು. ಕರ್ನಾಟಕದ ಒಕ್ಕಲಿಗರು- ಲಿಂಗಾಯತರಿಗೆ ಹೋಲಿಸಬಹುದಾದ ಜಾತಿ. ದೇವಿಲಾಲ್, ಬನ್ಸಿಲಾಲ್, ಭಜನ್ ಲಾಲ್, ಚೌಟಾಲ ಅವರಂತಹ ರಾಜಕಾರಣಿಗಳು ಆಳಿದ್ದ ರಾಜ್ಯ. ರಾಜಕೀಯವಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಇಂದಿಗೂ ಜಾಟರದೇ ಪ್ರಾಬಲ್ಯ. ಜಾಟ ಮತದಾರರ ಪ್ರಮಾಣ ಶೇ.26. ದಲಿತ ಮತದಾರರ ಪ್ರಮಾಣ ಶೇ.21.
ಕಾಂಗ್ರೆಸ್ ತನ್ನ ಗೆಲುವಿಗೆ ಮುಖ್ಯವಾಗಿ ಜಾಟರು ಮತ್ತು ದಲಿತರ ಬೆಂಬಲವನ್ನು ನೆಚ್ಚಿದೆ. ಇಂಡಿಯನ್ ನ್ಯಾಶನಲ್ ಲೋಕದಳ ಮತ್ತು ಜನನಾಯಕ ಜನತಾ ಪಾರ್ಟಿ ಜಾಟ್ ಪಾರ್ಟಿಗಳೇ. ಈ ಸಲ ದಲಿತ ಮತಗಳಿಕೆಗಾಗಿ ಮಾಯಾವತಿಯವರ ಬಿ.ಎಸ್.ಪಿ. ಮತ್ತು ಚಂದ್ರಶೇಖರ ಆಜಾದ್ ರಾವಣ ಅವರ ಎ.ಎಸ್.ಪಿ. ಜೊತೆ ಮೈತ್ರಿ ಮಾಡಿಕೊಂಡಿವೆ.
ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಗಮನಿಸಿದರೆ ಕಾಂಗ್ರೆಸ್ ಮೈತ್ರಿ ಕೂಟ 46 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿತ್ತು. 44 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುಂದಿತ್ತು. ಜನನಾಯಕ ಜನತಾ ಪಾರ್ಟಿ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ ಒಂದೇ ಒಂದು ಕ್ಷೇತ್ರದಲ್ಲೂ ಮುಂದಿರಲಿಲ್ಲ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಆಮ್ ಆದ್ಮೀ ಪಾರ್ಟಿ ನಾಲ್ಕು ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿತ್ತು.
ಈ ಸಲ ಆಪ್ ಮತ್ತು ಕಾಂಗ್ರೆಸ್ ಮೈತ್ರಿ ಕೈಗೂಡಿಲ್ಲ. ಆಪ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಕಾಂಗ್ರೆಸ್ ವರಿಷ್ಠರಿಗೆ ಒಲವಿತ್ತು. ಆದರೇ ಪ್ರಾದೇಶಿಕ ನಾಯಕತ್ವ ಅದರಲ್ಲೂ ಪ್ರಮುಖವಾಗಿ ಜಾಟ್ ಜನಾಂಗದ ಪ್ರಬಲ ನಾಯಕ ಭೂಪಿಂದರ್ ಹುಡ್ಡಾ ಈ ಮೈತ್ರಿಗೆ ಅಡ್ಡ ಬಂದರು. ಜನಬೆಂಬಲವಿಲ್ಲದ ಆಪ್ ಗೆ ವಿನಾಕಾರಣ ಸೀಟುಗಳನ್ನು ಬಿಟ್ಟುಕೊಡುವ ಅಗತ್ಯವಿಲ್ಲ ಎಂಬುದು ಅವರ ವಾದವಾಗಿತ್ತು. ಹರಿಯಾಣದ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಆಪ್ ಗಳಿಸಿದ್ದ ಮತಗಳ ಪ್ರಮಾಣ ‘ನೋಟಾ’ ಮತಗಳಿಗಿಂತ ಕಡಿಮೆಯಿತ್ತು.
ಬಿಜೆಪಿಯ ವಿರುದ್ಧ ಆಕ್ರೋಶಗೊಂಡಿರುವ ಹರಿಯಾಣದ ರೈತರು, ಯುವಜನರು ಹಾಗೂ ಪೈಲ್ವಾನರ ಸಮಸ್ಯೆಗಳನ್ನು ಬಿಡಿಸಲು ಮೋಶಾ ಜೋಡಿ ಯಾವುದೇ ಪ್ರಯತ್ನ ಮಾಡಿಲ್ಲ. ರೈತರು ಕನಿಷ್ಠ ಬೆಂಬಲ ಬೆಲೆಗಳಿಗಾಗಿ, ಯುವಜನರು ಅಗ್ನಿವೀರ್ ಯೋಜನೆಯ ವಿರುದ್ಧ ಸಿಡಿದೆದ್ದಿದ್ದಾರೆ. ಹರಿಯಾಣದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರಪ್ರದೇಶ ಬಿಜೆಪಿ ಮುಖಂಡ ಬ್ರಿಜಭೂಷಣ ಶರಣ್ ಸಿಂಗ್ ವಿರುದ್ಧ ಮೋದಿ ಮತ್ತು ಅವರ ಸಂಗಾತಿಗಳು ಚಕಾರ ಎತ್ತದಿರುವುದು ಹರಿಯಾಣದ ಪೈಲ್ವಾನರನ್ನು ಕೆರಳಿಸಿದೆ. ತಮ್ಮ ಹೆಣ್ಣಮಕ್ಕಳ ಮೈಮೇಲೆ ಕೈ ಹಾಕಿದವನನ್ನು ಶಿಕ್ಷಿಸದೆ ಬಿಟ್ಟಿರುವ ಕುರಿತು ಹರಿಯಾಣದ ಜನಸಾಮಾನ್ಯರಲ್ಲೂ ಸಿಟ್ಟಿದೆ. ನಿರುದ್ಯೋಗದ ದಳ್ಳುರಿಗೆ ಬಿದ್ದಿರುವ ಯುವಜನರು ಮಾದಕದ್ರವ್ಯಗಳ ಚಟಕ್ಕೆ ಬಿದ್ದಿದ್ದಾರೆ. ಸತ್ಯಾಗ್ರಹ ನಿರತ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಲ್ಲದೆ, ಮೊಕದ್ದಮೆಗಳಲ್ಲಿ ಇರುಕಿಸುವ ಹತ್ತು ಹಲವು ಬಗೆಯ ದಮನಕಾರಿ ಕ್ರಮಗಳು, ಧರಣಿ ನಿರತ ಗಣ್ಯ ಮಹಿಳಾ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ರಸ್ತೆಗಳಲ್ಲಿ ಎಳೆದಾಡಿ ತುಳಿದಾಡಿ ಪೊಲೀಸ್ ವ್ಯಾನ್ ಹತ್ತಿಸಿ ಎಳೆದೊಯ್ದ ಕೃತ್ಯಗಳು ಬಿಜೆಪಿಗೆ ದುಬಾರಿ ಆಗಲಿವೆ. ಎಷ್ಟು ದುಬಾರಿ ಎಂಬುದನ್ನು ಫಲಿತಾಂಶಗಳೇ ಹೇಳಬೇಕು.
ನೌಕರಶಾಹಿಯ ಭ್ರಷ್ಟಾಚಾರ ಮತ್ತು ನಾನಾ ಬಗೆಯ ಸರ್ಟಿಫಿಕೇಟುಗಳು, ದಾಖಲೆ ದಸ್ತಾವೇಜುಗಳಿಗಾಗಿ ಜನಸಾಮಾನ್ಯರು ಕಂಬ ಸುತ್ತುವಂತೆ ಮಾಡಿರುವ ಮನೋಹರಲಾಲ್ ಖಟ್ಟರ್ ಸರ್ಕಾರ ಮತದಾರರ ತೀವ್ರ ಅಪ್ರಿಯತೆಗೆ ತುತ್ತಾಗಿದೆ. ಹತ್ತು ವರ್ಷಗಳ ಹಿಂದೆ ಬಿಜೆಪಿ ಹರಿಯಾಣವನ್ನು ಗೆದ್ದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಮನೋಹರ ಲಾಲ್ ಖಟ್ಟರ್ ಅವರನ್ನು ನೇಮಕ ಮಾಡಿದ್ದು ಮೋಶಾ ಜೋಡಿಯೇ. ಆದರೆ ಅವರು ಒಂಬತ್ತೂವರೆ ವರ್ಷಗಳ ಕಾಲ ಅತ್ಯಂತ ಹದಗೆಟ್ಟ ಆಡಳಿತ ನೀಡಿದ ಕಾರಣ ಜನತೆಯ ಅನಾದರ ಗಳಿಸಿದ್ದಾರೆಂದು ಮೋದಿ ಕಡೆಗೂ ತಿಳಿದುಕೊಂಡರು. ಚುನಾವಣೆಗೆ ಕೇವಲ ಆರು ತಿಂಗಳಿರುವಾಗ ಖಟ್ಟರ್ ಅವರನ್ನು ಕೆಳಗಿಳಿಸಿ ಹಿಂದುಳಿದ ವರ್ಗಗಳಿಗೆ ಸೇರಿದ ನಾಯಬ್ ಸಿಂಗ್ ಸೈನಿ ಅವರನ್ನು ಕುಳ್ಳಿರಿಸಿದರು. ಆ ವೇಳೆಗೆ ಬಹಳವೇ ತಡವಾಗಿ ಹೋಗಿತ್ತು.
77 ವರ್ಷ ವಯಸ್ಸಿನ ಜಾಟ್ ನಾಯಕ ಭೂಪಿಂದರ್ ಸಿಂಗ್ ಹುಡ್ಡಾ ಹರಿಯಾಣ ರಾಜಕಾರಣದ ಪಳಗಿದ ಚಿರಪರಿಚಿತ ಚಹರೆ. ಈ ಕಾಂಗ್ರೆಸ್ ನಾಯಕನ ಮುಂದೆ ಬಿಜೆಪಿಯ ನಾಯಬ್ ಸಿಂಗ್ ಸೈನಿ ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಅಕ್ಟೋಬರ್ ಐದರ ಮತದಾನ ಮೋದಿ- ರಾಹುಲ್ ಅವರ ಗೆಲುವು ಸೋಲುಗಳನ್ನು ತೀರ್ಮಾನಿಸಲಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಇತರೆ ಎಲ್ಲ ಪಕ್ಷಗಳಿಗಿಂತ ಮುಂದಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ, ದೊಡ್ಡ ಸಂಖ್ಯೆಯಲ್ಲಿ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿಗಳು ಹಾಗೂ ದಲಿತರ ಮತಕ್ಕಾಗಿ ಬಿ.ಎಸ್.ಪಿ. ಮತ್ತು ಎ.ಎಸ್.ಪಿ.ಗಳನ್ನು ಬಳಸಿಕೊಂಡು ಐ.ಎನ್.ಎಲ್.ಡಿ. ಮತ್ತು ಜೆಜೆಪಿ ಎಸೆದಿರುವ ಗಾಳಗಳ ಒಳಸುಳಿಗಳು ಕಾಂಗ್ರೆಸ್ ಆಟವನ್ನು ಕೆಡಿಸಲಿವೆಯೇ, ಗೆಲುವನ್ನು ಸೋಲಾಗಿ ಬದಲಾಯಿಸಿಕೊಳ್ಳುವಲ್ಲಿ ಪರಿಣಿತ ಪಕ್ಷ ಎಂದು ತಾನು ಗಳಿಸಿರುವ ಬಿರುದನ್ನು ಕಾಂಗ್ರೆಸ್ ಸುಳ್ಳೆಂದು ರುಜುವಾತು ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈಗಾಗಲೇ ಇಳಿಮುಖದಲ್ಲಿರುವ ಮೋಶಾ ನಾಯಕತ್ವದ ಬಿಜೆಪಿ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಸೋತರೆ ಪಕ್ಷದ ಒಳಗಿನಿಂದಲೂ ಆಕ್ರಮಣ ಎದುರಿಸಬೇಕಾಗುತ್ತದೆ
