ಈ ದಿನ ಸಂಪಾದಕೀಯ | ಕಡೆಗೂ ಗೆದ್ದ ಬಿಲ್ಕಿಸ್‌; ದಶಕದಿಂದ ಅತ್ಯಾಚಾರಿಗಳ ರಕ್ಷಣೆಗೆ ನಿಂತ ಗುಜರಾತ್‌ ಸರ್ಕಾರ ನೀಡಿದ ಸಂದೇಶವೇನು?  

Date:

Advertisements

ಗೋಧ್ರಾ ಗಲಭೆ ನಡೆದಾಗ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಬಿಲ್ಕಿಸ್‌ ಅತ್ಯಾಚಾರಿಗಳ ಬಿಡುಗಡೆಯಾದಾಗ ಅವರು ದೇಶದ ಪ್ರಧಾನಿ. ಬಿಡುಗಡೆಯಾದದ್ದು ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭ! ಇವರೆಲ್ಲರೂ ಮೇಲ್ವರ್ಗದವರು ಮತ್ತು ಸಂಘ ಪರಿವಾರದವರು. ಇದೇ ಕಾರಣಕ್ಕೆ ಇವರನ್ನು ಶತಾಯಗತಾಯ ಬಚಾವ್‌ ಮಾಡಲು ಗುಜರಾತ್‌ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿತ್ತು.

ಗುಜರಾತಿನ ಬಿಲ್ಕಿಸ್‌ ಬಾನೊ ಅವರ ಎರಡು ದಶಕಗಳ ಹೋರಾಟಕ್ಕೆ ಇಂದು ಅಂತಿಮ ತೆರೆ ಬಿದ್ದಿದೆ. ಈ ಹೆಣ್ಣುಮಗಳು ಘನತೆಯ ಹೋರಾಟದ ಸಂಕೇತವಾಗಿ ಶತಮಾನದ ಕಾಲ ನೆನಪಿನಲ್ಲುಳಿಯಲಿದ್ದಾರೆ. ಆ ಪಾತಕ ಕೃತ್ಯವೂ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

2002ರಲ್ಲಿ ಗೋಧ್ರಾ ರೈಲು ದುರಂತದ ಬಳಿಕ ಗುಜರಾತ್‌ನಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಬಿಲ್ಕಿಸ್‌ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅವರ ಮೂರು ವರ್ಷದ ಮಗಳೂ ಸೇರಿದಂತೆ, ಕುಟುಂಬದ 7 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಆಗ ಬಿಲ್ಕಿಸ್‌ ಬಾನೊ ಐದು ತಿಂಗಳ ಗರ್ಭಿಣಿಯಾಗಿದ್ದರು. ಈ ಪ್ರಕರಣದ 11 ಅಪರಾಧಿಗಳಿಗೆ 2008ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಈ ಎಲ್ಲ ಅಪರಾಧಿಗಳನ್ನು 2022ರ ಆಗಸ್ಟ್‌ 15ರಂದು ಗುಜರಾತ್‌ ಸರ್ಕಾರ ಸನ್ನಡತೆಯ ಹೆಸರಿನಲ್ಲಿ ಜೈಲಿನಿಂದ ಬಿಡುಗಡೆ ಮಾಡಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಜೊತೆಗೆ ಈ ಅತ್ಯಾಚಾರಿಗಳಿಗೆ  ತಿಲಕವಿಟ್ಟು, ಹಾರ ಹಾಕಿ, ಆರತಿ ಬೆಳಗಿ ಸಿಹಿ ತಿನ್ನಿಸಿದ ಚಿತ್ರಗಳು ನಾಗರಿಕ ಸಮಾಜಕ್ಕೆ ಮುಜುಗರ ತರುವಂತಿತ್ತು.

Advertisements

ತನ್ನ ಅತ್ಯಾಚಾರಿಗಳಿಗೆ ಶಿಕ್ಷೆಯಾದ ಸಮಾಧಾನದಲ್ಲಿದ್ದ ಬಿಲ್ಕಿಸ್‌ಗೆ ಹನ್ನೆರಡು ವರ್ಷಗಳ ನಂತರ ಮತ್ತೆ ಅದೇ ಕಾರಣಕ್ಕೆ ಕಾನೂನು ಹೋರಾಟ ನಡೆಸುವ ಸಂದರ್ಭವನ್ನು ಗುಜರಾತ್‌ ಸರ್ಕಾರವೇ ತಂದೊಡ್ಡಿತ್ತು. ಆದರೂ ಸೋಲೊಪ್ಪಿಕೊಳ್ಳದ ಬಿಲ್ಕಿಸ್‌ ಬಾನೋ ಗುಜರಾತ್‌ ಸರ್ಕಾರದ ನಡೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಬಿ ನಾಗರತ್ನ ಅವರಿದ್ದ ಪೀಠ ಕಳೆದ ಜನವರಿಯಲ್ಲಿ ಕೈದಿಗಳ ಬಿಡುಗಡೆಯ ಆದೇಶವನ್ನು ರದ್ದುಪಡಿಸಿತ್ತು. ಜನವರಿ 19 ತಡರಾತ್ರಿ 11 ಅಪರಾಧಿಗಳಾದ, ಬಕಾಭಾಯಿ ವೋಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಗೋವಿಂದ್ ನಾಯ್, ಜಸ್ವಂತ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಚಂದನಾ ಮತ್ತು ಶೈಲೇಶ್ ಭಟ್ ಜೈಲಿಗೆ ಶರಣಾಗಿದ್ದರು. ಇವರೆಲ್ಲರೂ ಮೇಲ್ವರ್ಗದವರು ಮತ್ತು ಸಂಘ ಪರಿವಾರದವರು. ಇದೇ ಕಾರಣಕ್ಕೆ ಇವರನ್ನು ಶತಾಯಗತಾಯ ಬಚಾವ್‌ ಮಾಡಲು ಗುಜರಾತ್‌ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿತ್ತು.

ಈ ಗಲಭೆ ನಡೆದಾಗ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಕೈದಿಗಳ ಬಿಡುಗಡೆಯಾದಾಗ ಅವರು ದೇಶದ ಪ್ರಧಾನಿಯಾಗಿದ್ದರು. ಬಿಡುಗಡೆಯಾದದ್ದು ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭ! ವಿಶೇಷ ಸಂದರ್ಭಗಳಲ್ಲಿ ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡುವ ಪದ್ಧತಿ ಬಹಳ ವರ್ಷಗಳಿಂದ ಇದೆ. ಹಾಗಂತ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ರೆ ಸಂತ್ರಸ್ತೆಯರಿಗೆ, ಆ ಕುಟುಂಬಕ್ಕೆ ಯಾವ ಸಂದೇಶ ಕೊಟ್ಟಂತಾಗುತ್ತದೆ? ಬಿಲ್ಕಿಸ್‌ ಅತ್ಯಾಚಾರಿಗಳು ಶಿಕ್ಷೆಯ ಅವಧಿಯಲ್ಲಿ ಹೆಚ್ಚು ಸಮಯ ಪೆರೋಲ್‌ನಲ್ಲಿ ಹೊರಗಿದ್ದರು ಎಂಬುದು ಕೂಡಾ ನಮ್ಮ ನ್ಯಾಯಾಂಗ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿ.  

ಇಷ್ಟಾದರೂ ಸುಮ್ಮನಿರದ ಗುಜರಾತ್‌ ಸರ್ಕಾರ ಸುಪ್ರಿಂ ಕೋರ್ಟಿನ ತೀರ್ಪನ್ನು ಪುನರ್‌ ಪರಿಶೀಲಿಸಲು ಅರ್ಜಿ ಸಲ್ಲಿಸಿತ್ತು. ಆ ಅರ್ಜಿ ಇಂದು ವಜಾ ಆಗಿದೆ. ಅಲ್ಲಿಗೆ ಬಿಲ್ಕಿಸ್‌ ದೊಡ್ಡದೊಂದು ನಿಟ್ಟುಸಿರುವ ಬಿಡುವಂತಾಗಿದೆ. ಕೋರ್ಟ್‌ ಗುಜರಾತ್‌ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ. ಒಂದು ಭೀಕರ ಪಾತಕ ಕೃತ್ಯದಲ್ಲಿ ಭಾಗಿಯಾದ ಘೋಷಿತ ಅಪರಾಧಿಗಳನ್ನೂ ರಕ್ಷಿಸಲು ಮುಂದಾದ ಸರ್ಕಾರ ಸಾಮಾನ್ಯ ನಾಗರಿಕರು, ಅಸಹಾಯಕ ಮಹಿಳೆಯರಿಗೆ ಯಾವ ರೀತಿಯಲ್ಲಿ ರಕ್ಷಣೆ ಕೊಡಲು ಸಾಧ್ಯ?

ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿದ್ದ ಬಿಜೆಪಿ ಶಾಸಕನೊಬ್ಬ, “ಅವರೆಲ್ಲ ಬ್ರಾಹ್ಮಣರು, ಸಂಸ್ಕಾರಿಗಳು. ಅತ್ಯಾಚಾರ ಮಾಡಿರಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದು ನ್ಯಾಯಾಂಗ ವ್ಯವಸ್ಥೆಯನ್ನು ಅಣಕಿಸಿದಂತಿತ್ತು. ಅತ್ಯಾಚಾರ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವವರು ಕೆಳವರ್ಗದವರು ಎಂದು ಸಾರಿ ಹೇಳಿದಂತಿತ್ತು. ಇವರಿಗೆಲ್ಲ ಸಂಸ್ಕಾರ ಪದದ ಅರ್ಥವೇ ಗೊತ್ತಿಲ್ಲ. ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಜನಪ್ರತಿನಿಧಿಗಳಲ್ಲಿ ಬಹುತೇಕರು ಬಿಜೆಪಿಯವರು ಎಂಬುದನ್ನು ಎಡಿಆರ್‌ ವರದಿಯೇ ಹೇಳುತ್ತದೆ. ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲ್‌ದೀಪ್‌ ಸೆಂಗಾರ್‌ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಯುಪಿ ಸಂಸದನಾಗಿದ್ದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಮೇಲೆ ಕುಸ್ತಿಪಟುಗಳು ಪ್ರಕರಣ ದಾಖಲಿಸಿದ್ದಾರೆ. ಕರ್ನಾಟಕದಲ್ಲಿ ಬಿ ಎಸ್‌ ಯಡಿಯೂರಪ್ಪ ಪೋಕ್ಸೊ ಆರೋಪಿ. ಶಾಸಕರಾದ ರಮೇಶ್‌ ಜಾರಕಿಹೊಳಿ, ಮುನಿರತ್ನ ಅತ್ಯಾಚಾರದ ಆರೋಪಿಗಳು. ಇನ್ನೂ ಅನೇಕರು ಸ್ತ್ರೀ ಪೀಡಕರ ಸಾಲಿನಲ್ಲಿ ನಿಂತಿದ್ದಾರೆ.

ವಾಸ್ತವದಲ್ಲಿ ಬಿಜೆಪಿ ಸಂಘ ಪರಿವಾರದವರಿಗೆ ಹೆಣ್ಣುಮಕ್ಕಳ ಮೇಲೆ ಗೌರವವೇ ಇಲ್ಲ. ಹೆಣ್ಣೆಂದರೆ ಗಂಡಿನ ಅಡಿಯಾಳು ಎಂಬ ಸಿದ್ಧಾಂತ ಅವರದು. ಮನುಸ್ಮೃತಿಯ ಅನುಯಾಯಿಗಳು. ಮರ್ಯಾದಾ ಪುರುಷೋತ್ತಮ ಶ್ರೀರಾಮನೇ ನೆಲೆಗೊಂಡಿರುವ ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ. ಅಯೋಧ್ಯೆಯ ರಾಮಮಂದಿರದ ಸ್ವಚ್ಛತೆಯ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ ಜರುಗಿದೆ. ಯೋಗಿಯವರ ಎರಡನೇ ಅವಧಿಯ ಮುಕ್ಕಾಲು ಅವಧಿ ಮುಗಿದಿದೆ. ಅತ್ಯಾಚಾರ ತಡೆಯಲು ಯಾವುದೇ ಕಠಿಣ ಕಾನೂನು ರೂಪಿಸದ ಯೋಗಿ ಸರ್ಕಾರ, ಗಲಭೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಧರ್ಮ ನೋಡಿ, ಅವರು ಮುಸ್ಲಿಮರಾಗಿದ್ದರೆ ಅವರ ಮನೆಗಳನ್ನೇ ಬುಲ್ಡೋಜರ್‌ ನಿಂದ ನೆಲಸಮ ಮಾಡಿದೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ ಬುಲ್ಡೋಜರ್‌ ಕಾರ್ಯಾಚರಣೆಗೆ ತಡೆ ನೀಡಿದೆ. ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಬೇಕಿದ್ದ, ಸಂವಿಧಾನದ ಅಡಿಯಲ್ಲಿ ಚುನಾಯಿತವಾದ ಸರ್ಕಾರವೊಂದು ಅಲ್ಪಸಂಖ್ಯಾತರನ್ನು ಈ ದೇಶದ ಪ್ರಜೆಗಳು, ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹೊಣೆ ಸರ್ಕಾರದ್ದು ಎಂದು ಪರಿಗಣಿಸದೆ ಇರುವುದು ದುರಂತ.

ಬಿಲ್ಕಿಸ್‌ ಬಾನೊ ಪ್ರಕರಣದಲ್ಲಿ ಗುಜರಾತ್‌ ಸರ್ಕಾರ ಆರಂಭದಿಂದ ಇಂದಿನವರೆಗೆ ನಡೆದುಕೊಂಡ ರೀತಿ ಅತ್ಯಂತ ನಾಚಿಕೆಗೇಡಿನದ್ದು.  ತಾನೇ ಸಂತ್ರಸ್ತೆಯ ಬೆಂಬಲವಾಗಿ ನಿಂತು ಸ್ತ್ರೀಕುಲಕ್ಕೆ ಉತ್ತಮ ಸಂದೇಶವೊಂದನ್ನು ಕೊಡುವ ಅವಕಾಶ ಸರ್ಕಾರಕ್ಕೆ, ಬಿಜೆಪಿಗೆ ಇತ್ತು. ಅದನ್ನು ಬಿಟ್ಟು ಎರಡು ದಶಕಗಳಿಂದ ಆಕೆಯನ್ನು ಕಾನೂನು ಸಂಘರ್ಷಕ್ಕೆ ತಳ್ಳಿದ ಗುಜರಾತ್‌ ಸರ್ಕಾರ, ಪ್ರಧಾನಿಯ ಢೋಂಗಿತನ ಬಟಾ ಬಯಲಾಗಿದೆ. ಬಿಜೆಪಿಯಿಂದ ಹೆಣ್ಣುಮಕ್ಕಳಿಗೆ ಘನತೆಯ ಬದುಕು, ಗೌರವ ಸಿಗಲು ಸಾಧ್ಯವೇ ಇಲ್ಲ ಎಂಬುದನ್ನು ಈ ಪ್ರಕರಣ ಸಾರಿ ಹೇಳಿದೆ.  

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X