ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು

Date:

Advertisements
ಚುನಾವಣಾ ಸಮಯದ ಈ ನಗದು ವರ್ಗಾವಣೆಯು ರಾಜಕೀಯ ನ್ಯಾಯಸಮ್ಮತತೆಗೆ ಹಾನಿ ಮಾಡುತ್ತದೆ. ಚುನಾವಣಾ ಕಣವನ್ನು ವಿರೋಪಗೊಳಿಸಿ, ವಿಪಕ್ಷಗಳನ್ನು ನಗಣ್ಯಗೊಳಿಸುವ ಪ್ರಯತ್ನವಾಗಿದೆ. ಚುನಾವಣೆಗೂ ಮುನ್ನ ಸರ್ಕಾರದಿಂದ ಮಹಿಳೆಯರಿಗೆ ಹಣ ಕೊಟ್ಟು, ಮತ ಪಡೆಯುವ ತಂತ್ರವಷ್ಟೇ ಆಗಿದೆ.

ಸೆಪ್ಟೆಂಬರ್ 26ರಂದು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಬಿಹಾರದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಬಿಹಾರದ 75 ಲಕ್ಷ ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ ವಾರ್ಷಿಕ ತಲಾ 10 ಸಾವಿರ ರೂ. ನೇರ ವರ್ಗಾವಣೆ ಮಾಡಲಾಗುತ್ತದೆ ಎಂದು ಘೋಷಿಸಿದರು. ‘ಮಹಿಳಾ ರೋಜ್‌ಗಾರ್’ (ಮಹಿಳಾ ಉದ್ಯೋಗ) ಯೋಜನೆಗೆ ಚಾಲನೆ ನೀಡಿದರು.

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವ ಸಮಯದಲ್ಲಿ ಬಿಹಾರದ ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರವು ‘ಮಹಿಳಾ ರೋಜ್‌ಗಾರ್’ ಯೋಜನೆಯನ್ನು ಆರಂಭಿಸಿದೆ. ಇದು ಮಹಿಳಾ ಮತದಾರರನ್ನು ಎನ್‌ಡಿಎ ಮೈತ್ರಿಕೂಟದತ್ತ ಸೆಳೆಯುವ ಉದ್ದೇಶದಿಂದಲೇ ಘೋಷಿಸಲಾದ ಯೋಜನೆಯೆಂದು ವಿಶ್ಲೇಷಿಸಲಾಗಿದೆ. ಆದಾಗ್ಯೂ, ಈ ಯೋಜನೆಯು ಕರ್ನಾಟಕದ ಐದು ಗ್ಯಾರಂಟಿಗಳಲ್ಲಿ ಒಂದಾದ, ‘ಗೃಹ ಲಕ್ಷ್ಮಿ’ ಯೋಜನೆಯ ನಕಲು ಎಂದು ಹೇಳಲಾಗುತ್ತಿದೆ.

ಬಿಹಾರ ಮಹಿಳೆಯರಿಗೆ ಸರ್ಕಾರದಿಂದ ವಾರ್ಷಿಕ 10 ಸಾವಿರ ರೂ. ಹಣ ಪಾವತಿ ಮಾಡುವುದು ತಪ್ಪೇನು ಅಲ್ಲ. ಇವೆಲ್ಲವೂ ಮಹಿಳಾ ಸಬಲೀಕರಣ ಮತ್ತು ಕಲ್ಯಾಣ ಯೋಜನೆಗಳ ಭಾಗವೇ ಆಗಿರುತ್ತವೆ. ಇಂತಹ ಯೋಜನೆಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯ ಅಳವಡಿಸಿಕೊಳ್ಳುವುದು ಅಪರಾಧವೇನೂ ಅಲ್ಲ!

Advertisements

ಆದರೆ, ವಿಚಾರ ಬೇರೆಯೇ ಇದೆ. ಅದು, ಗ್ಯಾರಂಟಿ ಅಥವಾ ಕಲ್ಯಾಣ ಯೋಜನೆಗಳ ವಿಚಾರದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಬಿಜೆಪಿಯ ನಿಲುವು.

2023ರಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತನ್ನ ಐದು ‘ಗ್ಯಾರಂಟಿ’ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿತು. ಆ ಸಮಯದಲ್ಲಿ, ಗ್ಯಾರಂಟಿಗಳನ್ನು ಬಿಜೆಪಿ ವಿರೋಧಿಸಿತು. ಗ್ಯಾರಂಟಿಗಳು ರಾಜ್ಯದ ಆರ್ಥಿಕ ಸ್ಥಿತಿಯನ್ನು ಅಸ್ಥಿರಗೊಳಿಸುತ್ತವೆ. ರಾಜ್ಯದ ಆರ್ಥಿಕತೆ ದಿವಾಳಿಯಾಗುತ್ತದೆ. ಇವು ಆರ್ಥಿಕ ಅಜಾಗರೂಕತೆಯ ಯೋಜನೆಗಳು, ತೆರಿಗೆದಾರರ ಮೇಲೆ ಹೊರೆಯಾಗುತ್ತವೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಉದ್ಯಮ ಸ್ನೇಹಿ ನೀತಿಗಳಿಗೆ ಹಾನಿಯುಂಟು ಮಾಡುತ್ತವೆ. ಹೂಡಿಕೆದಾರರನ್ನು ದೂರವಿಡುತ್ತವೆ ಎಂದು ಟೀಕಿಸಿತು. ಪ್ರಧಾನಿ ಮೋದಿ ಅವರು ‘ರೇವ್ಡಿ ಸಂಸ್ಕೃತಿ’ ಎಂಬ ಹೊಸ ಪದಗುಚ್ಛವನ್ನೇ ಸೃಷ್ಟಿಸಿ ಟೀಕಿಸಿದರು.

ಬಿಜೆಪಿ ಮತ್ತು ಮೋದಿ ಅವರ ಇಂತಹ ಟೀಕೆಗಳು 2023ರಲ್ಲಿ ಹುಟ್ಟಿಕೊಂಡವೂ ಅಲ್ಲ. ಈ ಹಿಂದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ)ಯನ್ನೂ ಅವರು ‘ಬಡತನ ನಿರ್ಮೂಲನೆಯ ತಪ್ಪು ಮಾರ್ಗ’ ಎಂದು ಟೀಕಿಸುತ್ತಿದ್ದರು.  

ಈಗ, ಬಿಹಾರದಲ್ಲಿ ಬಿಜೆಪಿಯೇ/ಮೋದಿ ಅವರೇ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದಕ್ಕೂ ಮುಂಚಿತವಾಗಿ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ನಗದು ವರ್ಗಾವಣೆ ಮಾಡುವ ‘ಲಡ್ಕಿ ಬಹಿನ್’ ಮತ್ತು ‘ಲಾಡ್ಲಿ ಬೆಹನ್’ ಯೋಜನೆಗಳನ್ನು ಬಿಜೆಪಿ ಜಾರಿಗೆ ತಂದಿತ್ತು. ತಾವೇ ಖಂಡಿಸಿದ್ದ ಯೋಜನೆಗಳನ್ನು ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾರಿಗೊಳಿಸತ್ತಿರುವುದು ತಮಾಷೆಯಾಗಿಯೂ, ಬಿಜೆಪಿಯ ಇಬ್ಬಂದಿತನವನ್ನು ತೋರುವ ಎಡಬಿಡಂಗಿತನವನ್ನೂ ಸ್ಪಷ್ಟವಾಗಿ ತೋರಿಸುತ್ತದೆ.

ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಬಿಜೆಪಿ ವಿರೋಧಿಸಿದ್ದು ಎರಡು ಕಾರಣಕ್ಕಾಗಿ ಎಂದು ವಿಶ್ಲೇಷಿಸಲಾಗಿದೆ. ಮೊದಲನೆಯದ್ದಾಗಿ, ಈ ಯೋಜನೆಗಳು ಬಡವರಿಗೆ, ಮಹಿಳೆಯರಿಗೆ ಹಾಗೂ ಯುವಕರಿಗೆ – ಒಟ್ಟಾರೆಯಾಗಿ ಬಡ-ಹಿಂದುಳಿದ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುತ್ತಿದ್ದವು. ಆದರೆ, ಬಡ ಜನರ ಕೈಗೆ ಹಣ ಸಿಗುವುದು, ಬಡವರ ಬದುಕು ಹಸನಾಗುವುದು, ಆರ್ಥಿಕವಾಗಿ ಮುನ್ನೆಲೆಗೆ ಬರುವುದು ಬಿಜೆಪಿಯ ಸಿದ್ಧಾಂತಕ್ಕೆ ಸಮ್ಮತಿಸಲಾಗದ ಸಂಗತಿ. ಬಡವರು ಬಡವರಾಗಿಯೇ ಇರಬೇಕು, ಜಾತಿ ಆಧಾರದ ತಾರತಮ್ಯದಲ್ಲಿ ಬೆಂದು ಬಸವಳಿಯಬೇಕು, ಆಳುವವರನ್ನು ಪ್ರಶ್ನಿಸುವಂತಾಗಬಾರದು ಎಂಬುದು ಬಿಜೆಪಿಯ ‘ಹಿಡನ್ ಅಜೆಂಡಾ’. ಇದು ಸಾಕಾರವಾಗಬೇಕಾದರೆ, ಬಡವರು ಆರ್ಥಿಕವಾಗಿ ಮುನ್ನೆಲೆಗೆ ಬರಬಾರದು.

ಎರಡನೆಯದಾಗಿ, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಜನಪ್ರಿಯತೆ ತಂದುಕೊಟ್ಟವು. ಈ ಜನಪ್ರಿಯತೆಯಿಂದ ತಮ್ಮ ರಾಜಕೀಯ ನೆಲೆ ಅಸ್ಥಿರಗೊಳ್ಳುತ್ತದೆ ಎಂಬ ಆತಂಕ, ತನ್ನ ‘ಓಟ್ ಬ್ಯಾಂಕ್’ ಛಿದ್ರವಾಗುತ್ತದೆ ಎಂಬ ಭಯ ಬಿಜೆಪಿಯಲ್ಲಿ ಗಾಢವಾಗಿ ಬೇರೂರಿತು.

ಆ ಕಾರಣಕ್ಕಾಗಿ, ಗ್ಯಾರಂಟಿ ಯೋಜನೆಗಳಿಗೆ ‘ಆರ್ಥಿಕತೆಯ ಆತ್ಮಹತ್ಯೆ’ ಎಂಬ ಪಟ್ಟ ಕಟ್ಟಿತು. ಆದರೆ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ಕೊಳ್ಳುವ ಸ್ಥಿತಿ ಸುಧಾರಿಸಿತು. ಅದು ರಾಜ್ಯದ ಆರ್ಥಿಕತೆಗೂ ನೆರವಾಯಿತು. ಕರ್ನಾಟಕ ತಲಾ ಆದಾಯ ಗಳಿಕೆಯಲ್ಲಿ ದೇಶದಲ್ಲಿಯೇ ಅಗ್ರ ಸ್ಥಾನಕ್ಕೆ ಏರಿತು. ಬಿಜೆಪಿಯ ಟೀಕೆಗಳು ನಗೆಪಾಟಲಿಗೀಡಾದವು.

ಈಗ, ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಮೋದಿ ಅವರೇ ‘ಕಲ್ಯಾಣ ಯೋಜನೆ’ಗೆ ಚಾಲನೆ ನೀಡಿದ್ದಾರೆ. ಸೆಪ್ಟೆಂಬರ್ 26 ರಂದು, ಮೋದಿ ಅವರು ಯೋಜನೆಯನ್ನು ಘೋಷಿಸಿ, ಮೊದಲ ಕಂತನ್ನು ಬಿಡುಗಡೆ ಮಾಡಿದರೆ, ಇದಾದ, ಒಂದೇ ವಾರದಲ್ಲಿ (ಅಕ್ಟೋಬರ್ 3) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯೋಜನೆಯ ಮತ್ತೊಂದು ಕಂತನ್ನು ಘೋಷಿಸಿ, ಬಿಡುಗಡೆ ಮಾಡಿದರು. ಹತ್ತು ದಿನಗಳ ಅವಧಿಯಲ್ಲಿ, ಕೇಂದ್ರ ಮತ್ತು ರಾಜ್ಯವು ಒಟ್ಟಾಗಿ ಸುಮಾರು 10 ಸಾವಿರ ಕೋಟಿ ರೂ.ಗಳನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡಿದೆ.

ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ನಗದು ವರ್ಗಾವಣೆಯು ಬಿಜೆಪಿ-ಜೆಡಿಯುಗೆ ಮತಗಳನ್ನು ತಂದುಕೊಡುತ್ತವೆ ಎಂದು ಆಡಳಿತ ಪಕ್ಷಗಳು ಭಾವಿಸಿವೆ. ಆದರೆ, ಕೇವಲ 10 ದಿನಗಳಲ್ಲಿ 10 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿದ ಈ ಯೋಜನೆಯು ರಾಜ್ಯದ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎಂದು ಬಿಜೆಪಿ ಭಾವಿಸಲಿಲ್ಲ. ಗಮನಾರ್ಹವೆಂದರೆ, ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಬಿಜೆಪಿ ಟೀಕಿಸಿದ ಮಾದರಿಯಲ್ಲಿ ಬಿಹಾರದ ವಿಪಕ್ಷಗಳು ‘ಮಹಿಳಾ ರೋಜ್‌ಗಾರ್’ ಯೋಜನೆಯನ್ನು ಟೀಕಿಸಲಿಲ್ಲ.

ಈ ಲೇಖನ ಓದಿದ್ದೀರಾ?: ಹಿಂದುಳಿದ ವರ್ಗಗಳ ಹಿತಕ್ಕೆ ಕೊಳ್ಳಿ ಇಡಲು ಹೊರಟ ಬಿಜೆಪಿ

ಆದಾಗ್ಯೂ, ಮಹಾರಾಷ್ಟ್ರದಲ್ಲಿ ಬಿಜೆಪಿ ಜಾರಿಗೆ ತಂದಿರುವ ‘ಲಡ್ಕಿ ಬಹಿನ್’ ಯೋಜನೆಯಲ್ಲಿ ಈಗಾಗಲೇ ಅಕ್ರಮ ನಡೆದಿರುವ ಆರೋಪಗಳು ಮುನ್ನೆಲೆಗೆ ಬಂದಿವೆ. ಬಿಹಾರದಲ್ಲಿ, ಚುನಾವಣೆಗೂ ಮುನ್ನ ಬಿಜೆಪಿ-ಜೆಡಿಯು ಜಾರಿಗೊಳಿಸಿರುವ ಯೋಜನೆಯು ಮಹಿಳಾ ಸಬಲೀಕರಣದ ಸಾಧನಗಳಾಗಿ ಕಾರ್ಯನಿರ್ವಹಿಸುವುದಕ್ಕಿಂತ, ಚುನಾವಣಾ ಕಾರ್ಯತಂತ್ರದ ಸಾಧನಗಳಾಗಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತವೆ ಎಂಬ ಅಭಿಪ್ರಾಯಗಳಿವೆ. ಚುನಾವಣೆಯ ನಂತರ, ಈ ಯೋಜನೆಗಳು ಸ್ಥಗಿತಗೊಳ್ಳಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಯಾಕೆಂದರೆ, ಬಿಹಾರವು ಸೀಮಿತ ಉದ್ಯೋಗಾವಕಾಶಗಳು, ಸೀಮಿತ ಆರ್ಥಿಕತೆಯನ್ನು ಹೊಂದಿರುವ ರಾಜ್ಯ. ಭಾರತದ ಅತ್ಯಂತ ಬಡ ರಾಜ್ಯಗಳಲ್ಲಿ ಬಿಹಾರವೂ ಒಂದು. ಇಲ್ಲಿನ ಬಹುಸಂಖ್ಯಾತ ಜನರು ಜೀವನೋಪಾಯಕ್ಕಾಗಿ ಉದ್ಯೋಗ ಹರಸುತ್ತಾ, ನಾನಾ ರಾಜ್ಯಗಳಿಗೆ ಬೃಹತ್ ಸಂಖ್ಯೆಯಲ್ಲಿ ವಲಸೆ ಹೋಗಿದ್ದಾರೆ. ಹೋಗುತ್ತಿದ್ದಾರೆ. ಬಿಹಾರದ ಆರ್ಥಿಕತೆಯಲ್ಲಿ ಗಮನಾರ್ಹ ಚೇತರಿಗೆ-ಬೆಳವಣಿಗೆ ಇಲ್ಲ. ಬಿಹಾರದಲ್ಲಿ ಸ್ಥಳೀಯ ತೆರಿಗೆ ಸಂಗ್ರಹ ತೀರಾ ಕಡಿಮೆ. ಭಾರತದ ಒಟ್ಟು ಜಿಡಿಪಿಯಲ್ಲಿ ಬಿಹಾರದ ಪಾಲು 2.8% ಮಾತ್ರ. ಆದ್ದರಿಂದ, ಬಿಹಾರವು ಅತ್ಯಂತ ಕನಿಷ್ಠ ಆದಾಯದ ನೆಲೆ ಹೊಂದಿರುವ ರಾಜ್ಯವೆಂದು ಗುರುತಿಸಲಾಗಿದೆ. ಇಂತಹ ರಾಜ್ಯದಲ್ಲಿ, ಇದ್ದಕ್ಕಿದ್ದಂತೆ, 10 ಸಾವಿರ ಕೋಟಿ ರೂ.ಗಳನ್ನು ಎಲ್ಲಿಂದ ಹೊಂದಿಸಬಹುದು? ಅದಕ್ಕಾಗಿ, ಆಡಳಿತಾರೂಢ ಪಕ್ಷಗಳಲ್ಲಿ ಮುನ್ನೋಟವಾಗಲೀ, ಯೋಜನೆಗಳಾಗಲೀ ಇಲ್ಲ! ಬಿಜೆಪಿಗೆ ಆರ್ಥಿಕ ಹೊರೆಯೊಂದಿಗೆ ಇಂತಹ ಯೋಜನೆಗಳನ್ನು ಮುನ್ನಡೆಸುವ ಇಚ್ಛಾಶಕ್ತಿಯೂ ಇಲ್ಲ.

ಒಂದು ವೇಳೆ, ಬಿಜೆಪಿಗೆ ಜನ ಕಲ್ಯಾಣದ ಇಚ್ಛಾಶಕ್ತಿ ಇದ್ದರೆ, ಚುನಾವಣೆಗಳ ಬಳಿಕ ಯೋಜನೆಗಳನ್ನು ಜಾರಿಗೊಳಿಸಬಹುದಿತ್ತು. ಅಥವಾ ಯೋಜನೆಗಳನ್ನು ಘೋಷಿಸಿ, ನಗದು ವರ್ಗಾವಣೆಯನ್ನು ಚುನಾವಣೆಯ ಬಳಿಕ ಮಾಡಬಹುದಿತ್ತು. ಚುನಾವಣಾ ಸಮಯದ ಈ ನಗದು ವರ್ಗಾವಣೆಯು ಚುನಾವಣಾ ಸ್ಪರ್ಧೆಯನ್ನು ನಗದು ಸ್ಪರ್ಧೆಗಳಾಗಿ ಪರಿವರ್ತಿಸುತ್ತವೆ. ರಾಜಕೀಯ ನ್ಯಾಯಸಮ್ಮತತೆಗೆ ಹಾನಿ ಮಾಡುತ್ತವೆ. ಚುನಾವಣಾ ಕಣವನ್ನು ವಿರೋಪಗೊಳಿಸಿ, ವಿಪಕ್ಷಗಳನ್ನು ನಗಣ್ಯಗೊಳಿಸುವ ಪ್ರಯತ್ನವಾಗಿದೆ. ಚುನಾವಣೆಗೂ ಮುನ್ನ ಸರ್ಕಾರದಿಂದ ಮಹಿಳೆಯರಿಗೆ ಹಣ ಕೊಟ್ಟು, ಮತ ಪಡೆಯುವ ತಂತ್ರವಷ್ಟೇ ಆಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ವಿರೋಧದ ನಡುವೆಯೂ ಕಾವೇರಿಗೆ ಕಾಂಗ್ರೆಸ್ಸಿಗರ ಮೊಂಡಾರತಿ

ಸಿದ್ದರಾಮಯ್ಯನವರ ಸರ್ಕಾರ ಕಾವೇರಿ ಆರತಿಯಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ತಡೆಯೊಡ್ಡಿ, ನಾಡಿನ...

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

Download Eedina App Android / iOS

X