ಈ ದಿನ ಸಂಪಾದಕೀಯ | ಜೈಲುಗಳಲ್ಲಿ ಜಾತಿಭೂತ- ಸುಪ್ರೀಮ್ ಕೋರ್ಟ್ ಕಳವಳ

Date:

Advertisements

ಕನಿಷ್ಠ ಪಕ್ಷ ನಮ್ಮ ಜೈಲುಗಳಾದರೂ ಜಾತಿಮುಕ್ತವಾಗಲಿ. ಈ ಸಂಗತಿಯನ್ನು ಸುಪ್ರೀಂ ಕೋರ್ಟು ತಾರ್ಕಿಕ ಅಂತ್ಯಕ್ಕೆ ಒಯ್ದು ಮುಟ್ಟಿಸಲಿ

ಜಾತಿ ವ್ಯವಸ್ಥೆಯ ತಾರತಮ್ಯ ಜೈಲುಗಳಲ್ಲೂ ಜಾರಿಯಲ್ಲಿರುವ ಕುರಿತು ಸುಪ್ರೀಂಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ. ಜೈಲುಗಳಲ್ಲಿ ದೈಹಿಕ ಶ್ರಮವನ್ನು ಜಾತಿಯ ಏಣಿಶ್ರೇಣಿಯ ಪ್ರಕಾರ ವಹಿಸಿಕೊಡಲಾಗುತ್ತಿರುವುದು ಮತ್ತು ಬುಡಕಟ್ಟುಗಳಿಗೆ ಸೇರಿದ ಕೈದಿಗಳನ್ನು ಅನುದಿನದ ಅಥವಾ ಅಭ್ಯಾಸಕ್ಕೆ ಬಿದ್ದ ಅಪರಾಧಿಗಳೆಂದು ನಡೆಸಿಕೊಳ್ಳಲಾಗುತ್ತಿದೆ. ಸರಿಪಡಿಸಬೇಕಿರುವ ಬಹುಮುಖ್ಯ ಸಂಗತಿಯಿದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಹೇಳಿದೆ. ನಾಲ್ಕು ವಾರಗಳ ಒಳಗಾಗಿ ಈ ಕುರಿತು ತಮ್ಮ ಪತ್ರಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

ಉತ್ತರಪ್ರದೇಶ, ಪಶ್ಚಿಮಬಂಗಾಳ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಾತಿ ಆಧಾರಿತ ಬಲವಂತದ ಚಾಕರಿ ಮತ್ತು ಜಾತಿ ಆಧಾರಿತ ತಾರತಮ್ಯದ ಚಾಕರಿ ಮಾಡಿಸಲಾಗುತ್ತಿದೆ ಎಂಬ ಸಂಗತಿ ತಡವಾಗಿಯಾದರೂ ನ್ಯಾಯಪೀಠದ ಗಮನಕ್ಕೆ ಬಂದಿರುವುದು ಸ್ವಾಗತಾರ್ಹ.

Advertisements

ಈ ತಾರತಮ್ಯ ಕುರಿತು ಪತ್ರಕರ್ತೆ ಸುಕನ್ಯಾ ಶಾಂತಾ ಅವರ ಅರ್ಜಿಯ ವಿಚಾರಣೆ ನಡೆಸಿದೆ ನ್ಯಾಯಾಲಯ. ಈ ಅನಿಷ್ಟದ ಕುರಿತು ವಿಸ್ತೃತ ಅಧ್ಯಯನ ನಡೆಸಿ, ಅದರ ವಿರುದ್ಧ ಇದೀಗ ನ್ಯಾಯಾಲಯದ ಕದ ಬಡಿದಿರುವ ಸುಕನ್ಯಾ ಅವರ ಹಟ ಹೋರಾಟ ಅಭಿನಂದನೀಯ. ನೂರಾರು ವರ್ಷಗಳಷ್ಟು ಹಳೆಯದಾದ ಜಾತಿವ್ಯವಸ್ಥೆ ಜೈಲುಗಳಲ್ಲಿಯೂ ಯಾವುದೇ ಅಂಕೆಶಂಕೆಯಿಲ್ಲದೆ ಮುಂದುವರೆದಿದೆ. ದಲಿತರನ್ನು ಪ್ರತ್ಯೇಕ ವಾರ್ಡುಗಳಲ್ಲಿ ಇಡಲಾಗಿದೆ. ಜೈಲು ಕೈಪಿಡಿಗಳಲ್ಲಿ ಎಷ್ಟೋ ಬದಲಾವಣೆ ತರಲಾಗಿದೆ. ಆದರೆ ಈ ಬದಲಾವಣೆ ಆಚರಣೆಗೆ ಬಂದಿಲ್ಲ. ರಾಜ್ಯ ಸರ್ಕಾರಗಳು ಜಾತಿಪದ್ಥತಿಯನ್ನು ಜೈಲು ಕೈಪಿಡಿಗಳಿಂದ ರದ್ದುಗೊಳಿಸಬೇಕು ಎಂದು ಅರ್ಜಿದಾರೆಯ ಪರ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದ್ದಾರೆ.

ರಾಜಸ್ತಾನದ 1951ರ ಜೈಲು ನಿಯಮಗಳು ಪಾಯಿಖಾನೆ ಸ್ವಚ್ಛಗೊಳಿಸುವ ಕೆಲಸವನ್ನು ಮೆಹ್ತಾರ್ ಜಾತಿಯ ಕೈದಿಗಳಿಗೂ, ಹಿಂದೂ ‘ಮೇಲ್ಜಾತಿ’ ಕೈದಿಗಳಿಗೆ ಅಡುಗೆ ಕೆಲಸವನ್ನೂ ವಹಿಸಲಾಗಿದೆ. ತಮಿಳುನಾಡಿನ ಪಾಳಯಮ್ ಕೋಟ್ಟೈ ಕೇಂದ್ರೀಯ ಕಾರಾಗಾರದಲ್ಲಿ ತೇವರ್, ಪಾಲಾರ್, ನಾಡಾರ್ ಜಾತಿಗಳಿಗೆ ಸೇರಿದ ಕೈದಿಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಇರಿಸಿರುವ ಉದಾಹರಣೆಯನ್ನು ಅರ್ಜಿದಾರರು ನೀಡಿದ್ದಾರೆ.

ಈ ಮೊಕದ್ದಮೆಯಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನ್ಯಾಯಾಲಯಕ್ಕೆ ಕರೆಸಲಾಗಿತ್ತು. ತಾವು ಇಂತಹ (ಜಾತಿ ಆಧಾರಿತ) ವಿಂಗಡಣೆಯನ್ನು ನೋಡಿಲ್ಲವೆಂದೂ, ವಿಚಾರಣಾಧೀನ ಕೈದಿಗಳನ್ನು ಮತ್ತು ಶಿಕ್ಷೆಗೀಡಾಗಿರುವ ಕೈದಿಗಳನ್ನು ಪ್ರತ್ಯೇಕವಾಗಿ ಇರಿಸಿರುವುದನ್ನು ಕಂಡಿರುವುದಾಗಿಯೂ ಮೆಹ್ತಾ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದಾರೆ. ಜಾತಿ ತಾರತಮ್ಯ ಆಧರಿಸಿ ಕೈದಿಗಳನ್ನು ಪ್ರತ್ಯೇಕವಾಗಿ ಇರಿಸುವುದು ಗಂಭೀರ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ.

“….ವಾಸ್ತವದಲ್ಲಿ ಜಾತಿ ವ್ಯವಸ್ಥೆಯು ಶ್ರಮ ವಿಭಜನೆ ಮಾತ್ರವೇ ಅಲ್ಲ, ಶ್ರಮಿಕರ ವಿಭಜನೆಯೂ ಹೌದು. ಈ ಶ್ರಮವಿಭಜನೆಯಲ್ಲಿ ವ್ಯಕ್ತಿಯ ಆಯ್ಕೆಗೆ, ಭಾವನೆಗೆ, ಆದ್ಯತೆಗೆ ಅವಕಾಶವೇ ಇಲ್ಲ. ವಿಧಿವಾದವೇ ಈ ವಿಭಜನೆಯ ಆಧಾರ” ಎಂದಿದ್ದರು ಡಾ.ಬಾಬಾಸಾಹೇಬ ಅಂಬೇಡ್ಕರ್.

“ಹಿಂದೂ ಸಮಾಜವು ಏಣಿ ಅಥವಾ ಪ್ರವೇಶ ದ್ವಾರವೇ ಇಲ್ಲದ ಹಲವು ಅಂತಸ್ತುಗಳ ಗೋಪುರವಿದ್ದಂತೆ. ಕೆಳ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಯೋಗ್ಯನಾದರೂ ಮೇಲಿನ ಅಂತಸ್ತನ್ನು ಪ್ರವೇಶಿಸಲಾರ. ಮೇಲಿನ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಅಯೋಗ್ಯನಾದರೂ ಅವನನ್ನು ಕೆಳ ಅಂತಸ್ತಿಗೆ ಓಡಿಸುವುದು ಸಾಧ್ಯವಿಲ್ಲ…. ಈ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳು ಹಿಂದೂ ಸಮಾಜದ ಭಾಗವೇ ಆಗಿದ್ದರೂ, ವಾಸ್ತವದಲ್ಲಿ ಬೇರೆ ಬೇರೆಯೇ ಜಗತ್ತುಗಳಾಗಿ ಜೀವಿಸುತ್ತಿವೆ” ಎಂಬುದಾಗಿ ಬಾಬಾಸಾಹೇಬರು ಹೇಳಿದ ಘೋರಸತ್ಯ ಸಮಾಜದಲ್ಲಿ ಮತ್ತು ಜೈಲುಗಳಲ್ಲಿ ಕೂಡ ಜೀವಂತವಿದೆ. ಸಮಾಜ ಜೀವನ ಮತ್ತು ರಾಜಕಾರಣದಲ್ಲಿನ ಆಳುವ ಬಲಿಷ್ಠ ವರ್ಗಗಳು ಈ ದೇಶದ ದಮನಿತರನ್ನು ವಂಚಿಸುತ್ತಲೇ ಬಂದಿರುವುದಕ್ಕೆ ಸುಡುಸುಡು ನಿದರ್ಶನವಿದು.

ಬಡತನ, ನಿರುದ್ಯೋಗ, ಶೋಷಣೆ, ಧಾರ್ಮಿಕ ಕಟ್ಟರ್ ಪಂಥೀಯತೆಯ ವಿರುದ್ಧದ ಪ್ರತಿಭಟನೆಯ ಕೈಗಳಿಗೆ ಸಂಕೋಲೆ ಬಿಗಿಯುತ್ತಲೇ ಬರಲಾಗಿದೆ. ಹಾಲಿ ಅಧಿಕಾರ ಹಿಡಿದಿರುವ ಬಿಜೆಪಿ-ಆರೆಸ್ಸೆಸ್ ಕುಟುಂಬವು ಇಂತಹ ಪ್ರತಿಭಟನೆಗಳಿಗೆ ದೇಶದ್ರೋಹದ ಹಣೆಪಟ್ಟಿ ಅಂಟಿಸಿಬಿಟ್ಟಿದೆ. ಮನುಷ್ಯರ ಮಲವನ್ನು ಮನುಷ್ಯರಿಂದಲೇ ಬಳಿಸುವ ಮತ್ತು ಜಾತಿ ಆಧಾರಿತ ತಾರತಮ್ಯಗಳನ್ನು ಸಮರ್ಥಿಸಿ, ಇನ್ನಷ್ಟು ಬಿಗಿದು ಬಲಪಡಿಸುವ ದುಷ್ಟತನವನ್ನು ಪ್ರತ್ಯಕ್ಷ-ಪರೋಕ್ಷವಾಗಿ ಎತ್ತಿ ಹಿಡಿದಿದೆ. ಈ ಅಮಾನುಷತೆಯು ನಿಜ ಅರ್ಥದಲ್ಲಿ ಎಸಗುವ ದೇಶದ್ರೋಹ.

ಜಾತಿಪದ್ಥತಿಯನ್ನು ಅದರ ಶೋಷಣೆಯ ಸಾವಿರಾರು ಬಗೆಗಳನ್ನು ದೇಶದ್ರೋಹ ಎಂದು ಕರೆದು ಯಾಕೆ ಶಿಕ್ಷಿಸಲಾಗುತ್ತಿಲ್ಲ? ದೇಶದ ರಾಜಕೀಯ ಮತ್ತು ಸಾಮಾಜಿಕ ಅಧಿಕಾರಸೂತ್ರಗಳನ್ನು ಹಿಡಿದಿರುವ ಹಿಂದುತ್ವದ ಪ್ರತಿಪಾದಕರು ಇಂತಹ ಮನುಷ್ಯತ್ವವನ್ನು ತೋರುವುದು ಯಾವ ಕಾಲಕ್ಕೆ?

ಜಾತಿವಿನಾಶವನ್ನು ಎತ್ತಿ ಹಿಡಿಯುವ ಸಂವಿಧಾನ ಅಸ್ತಿತ್ವಕ್ಕೆ ಬಂದು ಏಳು ದಶಕಗಳೇ ಉರುಳಿವೆ. ಆದರೆ ಸರ್ಕಾರಗಳೇ ನಡೆಸುವ ಜೈಲುಗಳು ಜಾತಿಯ ಅಮಾನುಷ ಅವಹೇಳನಗಳಿಂದ ಇಂದಿಗೂ ಮುಕ್ತವಾಗಿಲ್ಲ. ಈ ದೇಶದ ಆಷಾಢಭೂತಿ ವ್ಯವಸ್ಥೆ ಹೊರಗೆ ಒಂದನ್ನೂ ಒಳಗೆ ಮತ್ತೊಂದನ್ನೂ ಪಾಲಿಸಿಕೊಂಡು ಬರುತ್ತಿರುವುದು ದೈತ್ಯಗಾತ್ರ ವಿಡಂಬನೆ. ಕಂಡೂ ಕಾಣದಂತೆ ನಟಿಸುವುದು ಬಹುದೊಡ್ಡ ಡಾಂಭಿಕತನ. ವಿಶ್ವಗುರು ಎಂದು ಎದೆಯೆತ್ತುವವರು ತಮ್ಮ ನಡುಮನೆಯ ಹೊಲಸನ್ನು ಮೊದಲು ತೊಳೆದುಕೊಳ್ಳಲಿ.

ಕನಿಷ್ಠ ಪಕ್ಷ ನಮ್ಮ ಜೈಲುಗಳಾದರೂ ಜಾತಿಮುಕ್ತವಾಗಲಿ. ಈ ಸಂಗತಿಯನ್ನು ಸುಪ್ರೀಂ ಕೋರ್ಟು ತಾರ್ಕಿಕ ಅಂತ್ಯಕ್ಕೆ ಒಯ್ದು ಮುಟ್ಟಿಸಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X