ಮುಸ್ಲಿಮರಿಗೆ ಮತದಾನದ ಹಕ್ಕು ಕೊಡಬಾರದು ಎಂಬ ಚಂದ್ರಶೇಖರ ಸ್ವಾಮಿಯವರ ಹೇಳಿಕೆ ಬಾಯಿ ತಪ್ಪಿ ಬಂದಿದ್ದಲ್ಲ, ಮಿದುಳಿನ ಮಾತು ನೇರವಾಗಿ ಫಿಲ್ಟರ್ ಆಗದೇ ಆಚೆ ಬಂದಿದೆ ಮತ್ತು ಇದು ಅವರ ನಿಜರೂಪದ ದರ್ಶನ ಮಾಡಿದೆ. ತಲೆ ತಲಾಂತರದಿಂದ ಬ್ರಾಹ್ಮಣ್ಯದ ದಬ್ಬಾಳಿಕೆಗೆ ಒಳಗಾದ ಶೂದ್ರರ ಮಠಾಧೀಶರೂ ಬ್ರಾಹ್ಮಣ ಮಠಾಧೀಶರ ಹಾದಿಯಲ್ಲೇ ಸಾಗುತ್ತಿದ್ದಾರೆ.
ನವೆಂಬರ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆರೆಸ್ಸೆಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ವಕ್ಫ್ ಬೋರ್ಡ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, “ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನಿರಾಕರಿಸುವ ಕಾನೂನು ತರಬೇಕು” ಎಂದು ಹೇಳಿದ್ದರು. ತಮ್ಮ ಹೇಳಿಕೆ ವಿವಾದಾತ್ಮಕ ಸ್ವರೂಪ ಪಡೆದುಕೊಂಡಿದ್ದರಿಂದ ಎಚ್ಚೆತ್ತ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು.”ಮುಸಲ್ಮಾನರೂ ಸಹ ಈ ದೇಶದ ಪ್ರಜೆಗಳೇ. ಎಲ್ಲರಂತೆ ಅವರಿಗೂ ಮತದಾನದ ಹಕ್ಕು ಇರುತ್ತದೆ. ನಾನು ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ, ಅದಕ್ಕಾಗಿ ಹೃತ್ಪೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು.
ವಿಷಾದ ವ್ಯಕ್ತಪಡಿಸಿದಾಕ್ಷಣ ಕೋಮುವಾದಿ ಕಳಂಕರಹಿತರಾಗುವರೇ? ಅವರು ತಾವೇನು ಹೇಳಬೇಕೆಂದುಕೊಂಡಿದ್ದರೋ ಅದನ್ನೇ ಹೇಳಿದ್ದಾರೆ. ಮೇಲಾಗಿ ಯಾವ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮ ಎಂಬ ಅರಿವು ಇಲ್ಲದವರೇನಲ್ಲ. ಆಯಾ ಸಂಘಟನೆ, ಸಂದರ್ಭಕ್ಕೆ ತಕ್ಕಂತೆ ಮಾತಾಡುವ ಗೋಸುಂಬೆ ಸ್ವಭಾವದ ಸ್ವಾಮೀಜಿ ಇವರು. ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರೂ ಇರುವ ವೇದಿಕೆಯಲ್ಲಿ, “ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ರೆ ಡಿ ಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಸಿಎಂ ಕುರ್ಚಿ ಬಿಟ್ಟುಕೊಡಬೇಕು” ಎಂಬ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದರು.
ಮುಸ್ಲಿಮರಿಗೆ ಮತದಾನದ ಹಕ್ಕು ಕೊಡಬಾರದು ಎಂಬ ಚಂದ್ರಶೇಖರ ಸ್ವಾಮಿಯವರ ಹೇಳಿಕೆ ಬಾಯಿ ತಪ್ಪಿ ಬಂದಿದ್ದಲ್ಲ, ಮಿದುಳಿನ ಮಾತು ನೇರವಾಗಿ ಫಿಲ್ಟರ್ ಆಗದೇ ಆಚೆ ಬಂದಿದೆ ಮತ್ತು ಇದು ಅವರ ನಿಜರೂಪದ ದರ್ಶನ ಮಾಡಿದೆ. ತಲೆ ತಲಾಂತರದಿಂದ ಬ್ರಾಹ್ಮಣ್ಯದ ದಬ್ಬಾಳಿಕೆಗೆ ಒಳಗಾದ ಶೂದ್ರರ ಮಠಾಧೀಶರೂ ಬ್ರಾಹ್ಮಣ ಮಠಾಧೀಶರ ಹಾದಿಯಲ್ಲೇ ಸಾಗುತ್ತಿದ್ದಾರೆ. ಅವರಂತೆ ತಾವೂ ಹಿಂದೂ ಧರ್ಮದ ಗುತ್ತಿಗೆದಾರರು ಎಂಬ ಭ್ರಮೆಯೋ ಏನೋ. ಮುಸ್ಲಿಮರೂ ಈ ದೇಶದ ಪ್ರಜೆಗಳು, ಅವರಿಗೂ ಸಮಾನ ಹಕ್ಕುಗಳಿವೆ ಎಂಬ ಸಂವಿಧಾನದ ಮೂಲಭೂತ ಹಕ್ಕಿನ ಬಗ್ಗೆ ಅವರಿಗೆ ಗೌರವ ಇಲ್ಲ ಎಂಬುದನ್ನು ತೋರಿಸಿದ್ದಾರೆ.
ಮಠಾಧೀಶರೆಲ್ಲ ಒಂದು ಪಕ್ಷ ಸಿದ್ಧಾಂತದ ಪರ ನಿಂತಾಗಲೇ ಸನ್ಯಾಸಿ, ಆಧ್ಯಾತ್ಮಿಕ ಜೀವಿ, ಯೋಗಿ, ಸರ್ವಸಂಘ ಪರಿತ್ಯಾಗಿ, ಸರಳ ಜೀವಿ ಎಂಬ ವಿಶೇಷಣಗಳೆಲ್ಲ ಮಣ್ಣು ಪಾಲಾಗಿವೆ. ಈಗ ಹೆಚ್ಚಿನವರು ಅಪ್ಪಟ ರಾಜಕಾರಣಿಗಳಂತೆ ಮತ್ತು ಪ್ರಜ್ಞಾಶೂನ್ಯರಾಗಿ ನಡೆದುಕೊಳ್ಳುತ್ತಿದ್ದಾರೆ. ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ ಸ್ವಾಮಿ ಎಂಬ ಭೇದವೂ ಇಲ್ಲ. ಎಲ್ಲರೂ ಅಲ್ಲದಿದ್ದರೂ ಬಹುತೇಕರು ಒಂದು ಪಕ್ಷ, ಸರ್ಕಾರದ ಫಲಾಪೇಕ್ಷಿಗಳು. ನಮ್ಮ ಸಮುದಾಯದವರು ಮುಖ್ಯಮಂತ್ರಿಯಾಗಬೇಕು, ನಮ್ಮ ಅಧಿಕಾರಿಗಳಿಗೆ ಆಯಕಟ್ಟಿನ (ಪ್ರಭಾವಿ ಮತ್ತು ಚೆನ್ನಾಗಿ ಲಂಚ ಸಿಗುವ) ಸ್ಥಾನ ಕೊಡಬೇಕು, ಚುನಾವಣೆಗಳಲ್ಲಿ ನಮಗಿಷ್ಟು ಟಿಕೆಟ್, ನಮಗಿಷ್ಟು ಮಂತ್ರಿ ಸ್ಥಾನ ಹೀಗೆ ಅವರ ಬಯಕೆಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಆಧ್ಯಾತ್ಮ ಚಿಂತನೆಗಿಂತ ಹೆಚ್ಚು ರಾಜಕೀಯ ಚಿಂತನೆಯಲ್ಲೇ, ಲಾಬಿ ಮಾಡುವುದರಲ್ಲೇ
ಕಳೆಯುತ್ತಾರೇನೋ.
ಇನ್ನು ಈ ಒಂದು ದಶಕದಲ್ಲಿ ಕಾವಿಧಾರಿಗಳು ಸಮಾಜದಲ್ಲಿ ಜನರನ್ನು ಬೆಸೆಯುವ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಸಮಾಜವನ್ನು ಒಡೆಯುವ ಕೆಲಸ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಉತ್ತರಭಾರತದ ಉಗ್ರಹಿಂದುತ್ವದ ಮಾದರಿಯನ್ನು ಕರ್ನಾಟಕದ ಕಾವಿಧಾರಿಗಳು ಅನುಸರಿಸಲು ಶುರು ಮಾಡಿದ್ದಾರೆಯೇ ಎಂಬ ಸಂದೇಹ ಹುಟ್ಟಿಸಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಸ್ವಾಮಿಗಳಲ್ಲಿ ಬಹುತೇಕರು ಉಗ್ರ ಹಿಂದುತ್ವವಾದವನ್ನು ಪೋಷಿಸುತ್ತಿರುವವರು. ಧರ್ಮ ಸಂಸತ್ತಿನ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಕೊಲೆ ಮಾಡಲೂ ಪ್ರಚೋದಿಸಿದ ಉದಾಹರಣೆಗಳಿವೆ. ಆದರೆ, ಈ ಘಾತಕ ಪ್ರವೃತ್ತಿ ಕರ್ನಾಟಕದಲ್ಲಿ ಏಳೆಂಟು ವರ್ಷಗಳಲ್ಲಿ ಬಲಿಯತೊಡಗಿದೆ.
ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವುದರ ವಿರುದ್ಧ ಲಿಂಗಾಯತ ಮಠಾಧೀಶರು ಬೀದಿಗಿಳಿದು ಭಾರೀ ಪ್ರತಿಭಟನೆ ಮಾಡಿದ್ದರು. ಅದೂ ರಾಜ್ಯದಲ್ಲೇ ಅತಿಹೆಚ್ಚು ಅಪೌಷ್ಟಿಕತೆ ತಾಂಡವವಾಡುತ್ತಿರುವ ಜಿಲ್ಲೆಯ ಬಡ ಮಕ್ಕಳ ತಟ್ಟೆಯ ತುತ್ತಿನ ಕುರಿತು ರಾಜಕೀಯ ಮಾಡಲು ಹೊರಟಿದ್ದರು. ಬಸವಣ್ಣನ ಹೆಸರಿನಲ್ಲಿ ಲಿಂಗ ಧರಿಸಿ ಸನಾತನ- ವೈದಿಕ ಆಚರಣೆ, ಅಸಮಾನತೆಯನ್ನು ಬೆಂಬಲಿಸುತ್ತ ಬಸವ ತತ್ವಕ್ಕೆ ಅಪಮಾನ ಮಾಡಿದವರು ಇವರಲ್ಲವೇ? ಸಮಾನತೆ-ಸೋದರ ಭಾವವನ್ನು ಸಾರಬೇಕಿರುವ ಬಹುತೇಕ ಲಿಂಗಾಯತ ಪೀಠಗಳು ಕೋಮುವಾದಿ ಶಕ್ತಿಗಳ ಪದತಲದಲ್ಲಿ ಬಿದ್ದಿವೆ.
ಇತ್ತ ಬ್ರಾಹ್ಮಣ ಸ್ವಾಮಿಗಳು ತಲೆತಲಾಂತರದಿಂದ ಪಾಲಿಸಿಕೊಂಡು ಬಂದ ಪಂಕ್ತಿಭೇದ, ಅಸ್ಪೃಶ್ಯತೆಯನ್ನು ತೊಲಗಿಸುವ ಮಾತಾಡುತ್ತಿಲ್ಲ. ಧರ್ಮ ಸಭೆಗಳಲ್ಲೂ ಮುಸ್ಲಿಮರ ವಿರುದ್ಧ ಹೇಳಿಕೆ ಕೊಟ್ಟು ಬಿಜೆಪಿ ಸಂಘಪರಿವಾರವನ್ನು ಸಂತೋಷಪಡಿಸುವುದರಲ್ಲೇ ಧನ್ಯರಾಗುತ್ತಿದ್ದಾರೆ. ಒಕ್ಕಲಿಗ ಮಠಗಳ ಸ್ವಾಮಿಗಳೂ ಇವರೊಂದಿಗೆ ಸ್ಪರ್ಧೆಗೆ ಬಿದ್ದಿದ್ದಾರೆ. ಹಿಂದೂಗಳೆಲ್ಲ ಒಗ್ಗಟ್ಟಾಗಬೇಕು. ʼಹಿಂದು ನಾವೆಲ್ಲ ಒಂದುʼ ಎಂಬ ಘೋಷಣೆ ಬಡ ಮನೆಯ ಹುಡುಗರನ್ನು ಬೀದಿಗೆ ತಂದು ಜೈಲಿಗೆ ತಳ್ಳಿಸುವ ಉದ್ದೇಶಕ್ಕಷ್ಟೇ ಸೀಮಿತ. ಈ ಹುನ್ನಾರವನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಪ್ರಗತಿಪರರು, ಕಾಂಗ್ರೆಸ್ ರಾಜಕಾರಣಿಗಳು ಸೋತಿದ್ದಾರೆ.
“ನಮ್ಮನ್ನು ಗೌರವಿಸುವ ಸಂವಿಧಾನ ಬೇಕು” ಎಂದು ಹೊಸ ವಿವಾದ ಸೃಷ್ಟಿಸಿರುವ ಉಡುಪಿಯ ಪೇಜಾವರ ಸ್ವಾಮಿ ಆರಾರು ತಿಂಗಳಿಗೂ ಕೋಮುದ್ವೇಷದ ರಾಜಕೀಯ ಹೇಳಿಕೆ ಕೊಡುತ್ತಲೇ ಇರುತ್ತಾರೆ. ಮಂಗಳೂರಿನ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಕೋಮುವಾದಿ ಹೇಳಿಕೆ ನೀಡುವ ಮೂಲಕವೇ ಕರ್ನಾಟಕಕ್ಕೆ ಹೆಚ್ಚು ಪರಿಚಯವಾದವರು. “ಮುಸ್ಲಿಮರನ್ನು ಗುಜರಿ ಹೆಕ್ಕಲೂ ಮನೆ ಬಳಿ ಬರಲು ಬಿಡಬೇಡಿ” ಎಂದು ಒಮ್ಮೆ ಹೇಳಿದ್ದರು. ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಮಾಡುವ ಮುಸ್ಲಿಮರ ಕಣ್ಣು ಕಿತ್ತು ಹಾಕುವ ಮಾತಾಡಿದ್ದರು. ಹೀಗೆ ಸದಾ ಸಮಾಜದ ಶಾಂತಿ ಕದಡುವ ಹೇಳಿಕೆ ನೀಡುವ ಇವರೆಲ್ಲ ಯಾವ ಆಧ್ಯಾತ್ಮ ಸಾಧಕರೆಂದು ಪ್ರಶ್ನಿಸಬೇಕಿದೆ.
ಸಾಮಾಜಿಕ ಕಾರ್ಯಕರ್ತ ಸೈಯ್ಯದ್ ಅಬ್ಬಾಸ್ ಅವರು ಚಂದ್ರಶೇಖರ ಸ್ವಾಮಿಯ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಆಗ್ರಹಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತ 299ರ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು. ಕೋಮು ಸೌಹಾರ್ದತೆ ಕದಡುವ ಹೇಳಿಕೆ ನೀಡಿದ ವ್ಯಕ್ತಿ ಯಾರೇ ಆಗಿದ್ದರೂ ಕಾನೂನು ಕ್ರಮ ಜರುಗಿಸಬೇಕು ಎಂಬುದು ನಮ್ಮ ಅರಣ್ಯರೋದನವಷ್ಟೇ. ರಾಜ್ಯ ಗೃಹಇಲಾಖೆ ಇಂತಹ ಹೇಳಿಕೆಯನ್ನು ನಿರ್ಲಕ್ಷಿಸುತ್ತಿದೆ ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಮುಂದಿವೆ. ಹಿಂದೂ ಉಗ್ರವಾದಿಗಳಾದ ಪ್ರಮೋದ್ ಮುತಾಲಿಕ್, ಪುನೀತ್ ಕೆರೆಹಳ್ಳಿ, ಚಕ್ರವರ್ತಿ ಸೂಲಿಬೆಲೆ ತರಹದವರು ದ್ವೇಷ ಭಾಷಣ ಮಾಡುತ್ತಾ ಯಾವ ಭಯವೂ ಇಲ್ಲದೇ ಓಡಾಡುತ್ತಿದ್ದಾರೆ.
ಕೋಮುದ್ವೇಷ ಹರಡುವುದರ ವಿರುದ್ಧ ಸರ್ಕಾರ ಯಾವುದೇ ಮುಲಾಜಿಗೆ ಒಳಗಾಗದೆ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಕೋರ್ಟ್ಗಳೂ ಕೋಮುವಾದಿ ಭಾಷಣಕಾರರ ವಿರುದ್ಧ ದಾಖಲಾದ ಹಲವು ಪ್ರಕರಣಗಳನ್ನು ಬಿಗಿಯಾಗಿ ಪರಿಗಣಿಸಬೇಕಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ
ಇದನ್ನೂ ಓದಿ ಈ ದಿನ ಸಂಪಾದಕೀಯ | ಕೇವಲ ಕಾಗದದ ಹುಲಿಯಾಯಿತೇ ಪೂಜಾಸ್ಥಳಗಳ ಕಾಯಿದೆ?
