ಮುಂದಿನ ದಿನಗಳಲ್ಲಿ ಡಿಎಂಕೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ತಮಿಳುನಾಡಿನ ರಾಜಕಾರಣಕ್ಕಷ್ಟೇ ಅಲ್ಲ, ದೇಶದ ಪ್ರಾದೇಶಿಕ ಪಕ್ಷಗಳ ರಾಜಕಾರಣಕ್ಕೂ ಮಹತ್ವದ ಸಂದೇಶವಾಗಲಿದೆ. ಈ ಬೆಳವಣಿಗೆ ಕೇವಲ ರಾಜಕೀಯ ತಂತ್ರಗಾರಿಕೆಯಾದರೆ, ದ್ರಾವಿಡ ಚಳವಳಿಯ ಸೈದ್ಧಾಂತಿಕ ಪರಂಪರೆಗೆ ಪೆಟ್ಟು ಬೀಳಲಿದೆ.
ಭಾರತೀಯ ರಾಜಕಾರಣದಲ್ಲಿ ಕೆಲವು ಪಕ್ಷಗಳು ತಮ್ಮ ಅಸ್ತಿತ್ವವನ್ನು ಕೇವಲ ಚುನಾವಣಾ ಗೆಲುವಿನ ಮೇಲೆ ಕಟ್ಟಿಕೊಳ್ಳುವುದಿಲ್ಲ; ಸಿದ್ಧಾಂತ, ರಾಜಕೀಯ ತತ್ವಶಾಸ್ತ್ರ ಹಾಗೂ ಐತಿಹಾಸಿಕ ಚಳವಳಿಯ ಮೇಲೆ ಕಟ್ಟಿಕೊಳ್ಳುತ್ತವೆ. ಅಂತಹ ಪಕ್ಷಗಳಲ್ಲಿ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕೂಡ ಒಂದು. ಭಾಷೆ, ಪ್ರಾದೇಶಿಕ ಹಕ್ಕುಗಳು, ರಾಜ್ಯಗಳ ಸ್ವಾಯತ್ತತೆ, ಒಕ್ಕೂಟ ವ್ಯವಸ್ಥೆಯ ರಕ್ಷಣೆ ಹಾಗೂ ಕೇಂದ್ರದ ಅತಿಕ್ರಮಣದ ವಿರುದ್ಧದ ಹೋರಾಟವೇ ಡಿಎಂಕೆಯ ರಾಜಕೀಯ ಗುರುತು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಈ ಗುರುತಿನಲ್ಲೇ ಬದಲಾವಣೆಯ ಸುಳಿವು ನೀಡುತ್ತಿರುವಂತೆ ಕಾಣಿಸುತ್ತಿವೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಹೀನಾಯ ಸೋಲು ಕಂಡಿತು. ದ್ರಾವಿಡ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿರಿಸುವ ಉದ್ದೇಶದಿಂದ ಕಾಂಗ್ರೆಸ್, ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆಗೆ ಬೆಂಬಲ ನೀಡಿತು. ಆದರೆ, ಬೆಂಬಲ ನೀಡುವ ಕುರಿತು ತಮ್ಮೊಂದಿಗೆ ಕಾಂಗ್ರೆಸ್ ಚರ್ಚಿಸಿಲ್ಲವೆಂದು ಡಿಎಂಕೆ ಮುನಿಸಿಕೊಂಡಿದೆ. ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಿಂದ ದೂರು ಉಳಿದಿದೆ. ಈ ಮುನಿಸು ಕೇವಲ ಕಾಂಗ್ರೆಸ್ನಿಂದ ಅಂತರಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ, ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡುವುದಕ್ಕೂ ವಿಸ್ತರಿಸಿದಂತೆ ಕಾಣುತ್ತಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತರಲು ಹವಣಿಸುತ್ತಿರುವ ಕ್ಷೇತ್ರ ಮರುವಿಂಗಡಣೆ (Delimitation) ಪ್ರಸ್ತಾವನೆ ವಿಚಾರದಲ್ಲಿ ಡಿಎಂಕೆ ತಾಳಿರುವ ಹೊಸ ನಿಲುವು ತಮಿಳುನಾಡು ಮತ್ತು ವಿಪಕ್ಷಗಳಲ್ಲಿ ಕಳವಳ ಹುಟ್ಟುಹಾಕಿದೆ. ಈವರೆಗೆ ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಡಿಎಂಕೆ, ಈಗ ತಮಿಳುನಾಡಿನ ಹಿತಾಸಕ್ತಿಗಳಿಗಾಗಿ ವಿಷಯಾಧಾರಿತ ಬೆಂಬಲ ನೀಡಲು ಯೋಜಿಸಿದೆ. ವಿಶೇಷವಾಗಿ ಕಾವೇರಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆಗೆ ಸಂಬಂಧಿಸಿದ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದರೆ, ತನ್ನ 22 ಲೋಕಸಭಾ ಸದಸ್ಯರ ಬೆಂಬಲ ಅಥವಾ ವಿರೋಧವನ್ನು ವಿಷಯಾಧಾರಿತವಾಗಿ ನಿರ್ಧರಿಸುವ ಸೂಚನೆ ನೀಡಿದೆ. ಇದು ಕೇವಲ ತಂತ್ರಗಾರಿಕೆಯೇ ಅಥವಾ ದ್ರಾವಿಡ ರಾಜಕೀಯದ ಮೂಲಭೂತ ಪರಿವರ್ತನೆಯೇ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿದೆ.
ಡಿಎಂಕೆ- ರಾಜ್ಯಗಳ ಹಕ್ಕುಗಳಿಗಾಗಿ ಕೇಂದ್ರದ ವಿರುದ್ಧ ಹೋರಾಡಿದ ಪಕ್ಷ. ಹಿಂದಿ ಹೇರಿಕೆ ವಿರುದ್ಧದ ಹೋರಾಟದಿಂದ ಹಿಡಿದು ಹಣಕಾಸು ಹಂಚಿಕೆ, ಜಿಎಸ್ಟಿ ಪರಿಹಾರ, ನೀಟ್ ಪರೀಕ್ಷೆ, ರಾಜ್ಯಗಳ ಅಧಿಕಾರ ಕುಗ್ಗಿಸುವ ಕ್ರಮಗಳು- ಈ ಎಲ್ಲ ವಿಷಯಗಳಲ್ಲೂ ಡಿಎಂಕೆ ತತ್ವಾಧಾರಿತ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ರಾಷ್ಟ್ರ ರಾಜಕಾರಣದಲ್ಲೂ ಬಿಜೆಪಿಯ ಕೋಮು ರಾಜಕಾರಣದ ವಿರುದ್ಧದ ಪ್ರಮುಖ ಸೈದ್ಧಾಂತಿಕ ಶಕ್ತಿಯಾಗಿ ಗುರುತಿಸಿಕೊಂಡಿದೆ. ಇಂತಹ ಪಕ್ಷವೇ ಈಗ ‘ತಮಿಳುನಾಡಿನ ಹಿತ ಮೊದಲು, ಉಳಿದ ರಾಜಕೀಯ ನಂತರ’ ಎಂಬ ಸಂದೇಶ ನೀಡುತ್ತಿದೆ.
ಪ್ರತಿಯೊಂದು ಪ್ರಾದೇಶಿಕ ಪಕ್ಷವೂ ತನ್ನ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ಹೊಣೆಗಾರಿಕೆ ಹೊಂದಿದೆ. ಕೇಂದ್ರ ಸರ್ಕಾರದ ಬಳಿ ನಿರ್ಣಾಯಕ ಸಂಖ್ಯಾಬಲ ಇಲ್ಲದ ಸಂದರ್ಭಗಳಲ್ಲಿ, ರಾಜ್ಯಕ್ಕೆ ಅನುಕೂಲವಾಗುವ ಒಪ್ಪಂದಗಳನ್ನು ಮಾಡಿಕೊಂಡು ಸರ್ಕಾರ ರಚನೆಗೆ ಬೆಂಬಲ ನೀಡುವುದು ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಹೊಸತೇನೂ ಅಲ್ಲ. ಬಿಹಾರದಲ್ಲಿ ಜೆಡಿಯು, ಆಂಧ್ರಪ್ರದೇಶದಲ್ಲಿ ಟಿಡಿಪಿ, ಮಹಾರಾಷ್ಟ್ರದಲ್ಲಿ ಶಿವಸೇನೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ತಮ್ಮ ಬೆಂಬಲವನ್ನು ರಾಜ್ಯದ ಅಭಿವೃದ್ಧಿ ಯೋಜನೆಗಳು ಅಥವಾ ವಿಶೇಷ ಸೌಲಭ್ಯಗಳೊಂದಿಗೆ ಜೋಡಿಸಿರುವ ಉದಾಹರಣೆಗಳಿವೆ. ಆ ದೃಷ್ಟಿಯಿಂದ ಡಿಎಂಕೆಯ ನಡೆ ರಾಜಕೀಯವಾಗಿ ಅಸಹಜವಲ್ಲ.
ಆದರೆ, ಡಿಎಂಕೆ- ತನ್ನನ್ನು ಕೇವಲ ಪ್ರಾದೇಶಿಕ ಹಿತಾಸಕ್ತಿಯ ಪಕ್ಷವಾಗಿ ಮಾತ್ರವಲ್ಲ, ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಕನಾಗಿಯೂ ಬಿಂಬಿಸಿಕೊಂಡ ಪಕ್ಷ. ಕ್ಷೇತ್ರ ಮರುವಿಂಗಡಣೆಯು ‘ಸಂಸತ್ತಿನಲ್ಲಿ ದಕ್ಷಿಣ ಭಾರತದ ಪ್ರತಿನಿಧಿತ್ವವನ್ನು ಕಡಿತಗೊಳಿಸುತ್ತದೆ, ಒಕ್ಕೂಟ ವ್ಯವಸ್ಥೆಯನ್ನು ತಲೆಕೆಳಗು ಮಾಡುತ್ತದೆ’ ಎಂದು ಡಿಎಂಕೆ ನಿರಂತರವಾಗಿ ಆರೋಪಿಸಿತ್ತು. ಮಾತ್ರವಲ್ಲ, ಕೇಂದ್ರದ ವಿರುದ್ಧ ಬೃಹತ್ ಹೋರಾಟವನ್ನೂ ಕಟ್ಟಿತ್ತು. ದಕ್ಷಿಣದ ರಾಜ್ಯಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲೂ ತೊಡಗಿತ್ತು. ಆದರೆ, ಈಗ ಅದೇ ವಿಷಯವನ್ನು ಕಾವೇರಿ ಅಥವಾ ಮೇಕೆದಾಟು ವಿಷಯಗಳಿಗೆ ಜೋಡಿಸುತ್ತಿದೆ. ತನ್ನ ಸೈದ್ಧಾಂತಿಕ ಹೋರಾಟವನ್ನು ರಾಜಕೀಯ ಚೌಕಾಶಿಗೆ ಇಳಿಸಿದೆ.
ಕಾಂಗ್ರೆಸ್ ಜೊತೆಗಿನ ಸಣ್ಣ ಮುನಿಸಿಗಾಗಿ, ಡಿಎಂಕೆ ತನ್ನ ಸಿದ್ಧಾಂತವನ್ನೇ ಚೌಕಾಶಿಗೆ ಇಟ್ಟುಬಿಡುವುದು ಸೂಕ್ತವೇ? ಈ ಹಿಂದೆಯೂ, ಹಲವು ವಿಚಾರಗಳಲ್ಲಿ ಕಾಂಗ್ರೆಸ್ನ ರಾಜಕೀಯ ತಂತ್ರದ ಬಗ್ಗೆ ಡಿಎಂಕೆ ಅಸಮಾಧಾನ ವ್ಯಕ್ತಪಡಿಸಿತ್ತು. ದಕ್ಷಿಣ ಭಾರತದ ಪ್ರಶ್ನೆಗಳಿಗೆ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಆದ್ಯತೆ ನೀಡುತ್ತಿಲ್ಲ ಎಂಬ ಭಾವನೆಯೂ ಪಕ್ಷದೊಳಗಿತ್ತು. ಅಂತಹ ಸಂದರ್ಭದಲ್ಲಿ ಡಿಎಂಕೆ ತನ್ನ ಸ್ವತಂತ್ರ ರಾಜಕೀಯ ಅಸ್ತಿತ್ವವನ್ನು ಹೆಚ್ಚು ಸ್ಪಷ್ಟವಾಗಿ ಪ್ರದರ್ಶಿಸಲು ಯತ್ನಿಸುತ್ತಿತ್ತು. ತನ್ನ ವಿರೋಧವನ್ನು ಆಂತರಿಕವಾಗಿ ವ್ಯಕ್ತಪಡಿಸುತ್ತಿತ್ತು.
ಆದರೀಗ, ಕಾಂಗ್ರೆಸ್ನಿಂದ ದೂರ ಸರಿಯುವ ಪ್ರಯತ್ನದಲ್ಲಿ ಡಿಎಂಕೆ ತನ್ನದೇ ಸೈದ್ಧಾಂತಿಕ ನೆಲೆಯನ್ನು ದುರ್ಬಲಗೊಳಿಸುತ್ತಿದೆ ಎಂಬಂತೆ ಕಾಣುತ್ತಿದೆ. ಇದನ್ನು ಅಪಾಯವೆಂದೂ ನೋಡಲಾಗುತ್ತಿದೆ.
ಆದಾಗ್ಯೂ, ಡಿಎಂಕೆ ನಾಯಕರು, ‘ಸಿದ್ಧಾಂತಗಳು ಜನರ ಬದುಕಿಗೆ ಉಪಯೋಗವಾಗದಿದ್ದರೆ ಅವುಗಳ ಅರ್ಥವೇನು? ತಮಿಳುನಾಡಿಗೆ ನೀರು, ರೈತರ ಹಿತ, ರಾಜ್ಯದ ಹಕ್ಕುಗಳು ಮತ್ತು ಅಭಿವೃದ್ಧಿಯೇ ಮುಖ್ಯವಾದರೆ, ಆ ಗುರಿ ಸಾಧಿಸಲು ರಾಜಕೀಯ ಮಾತುಕತೆ ನಡೆಸುವುದರಲ್ಲಿ ತಪ್ಪೇನಿದೆ? ವಿರೋಧಕ್ಕಾಗಿ ವಿರೋಧ ಮಾಡುವುದಕ್ಕಿಂತ, ರಾಜ್ಯಕ್ಕೆ ಸ್ಪಷ್ಟ ಲಾಭವಾಗುವ ರೀತಿಯಲ್ಲಿ ತನ್ನ ರಾಜಕೀಯ ಪ್ರಭಾವ ಬಳಸುವುದು ಜವಾಬ್ದಾರಿಯುತ ಪ್ರಾದೇಶಿಕ ರಾಜಕೀಯ’ ಎಂದು ವಾದಿಸುತ್ತಿದ್ದಾರೆ.
ಅಧಿಕಾರದಲ್ಲಿರುವವರೊಂದಿಗೆ ವ್ಯವಹಾರ ನಡೆಸುವುದು ತಪ್ಪಲ್ಲ; ಆದರೆ, ಆ ವ್ಯವಹಾರವು ಸಿದ್ಧಾಂತದ ಬೆಲೆ ತೆರುವಂತಾಗಬಾರದು ಎಂಬುದೇ ದ್ರಾವಿಡ ಚಳವಳಿಯ ಮೂಲಭೂತ ಸಂದೇಶ. ಈಗ ಡಿಎಂಕೆ ತನ್ನ ಬೆಂಬಲವನ್ನು ವಿಷಯಾಧಾರಿತವಾಗಿ ನಿರ್ಧರಿಸುತ್ತೇವೆ ಎನ್ನುವುದು ಪ್ರಾಯೋಗಿಕವೇ ಆಗಿದ್ದರೂ, ಭವಿಷ್ಯದಲ್ಲಿ ಸೈದ್ಧಾಂತಿಕ ರಾಜಕೀಯದ ದುರ್ಬಲತೆಯೂ ಆಗಬಹುದು!
ಈ ಲೇಖನ ಓದಿದ್ದೀರಾ?: ಕಾಡಿನಿಂದ ಕಡಲಾಚೆಗೆ : ಅಲೆಮಾರಿ ಹಕ್ಕಿಪಿಕ್ಕಿ ಜನಾಂಗ ವಿದೇಶಗಳಲ್ಲಿ ಸಿಕ್ಕಿಬೀಳುತ್ತಿರುವುದು ಯಾಕೆ?
ಕಾವೇರಿ ಅಥವಾ ಮೇಕೆದಾಟು ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಭರವಸೆ ಪಡೆದರೆ ಕ್ಷೇತ್ರ ಮರುವಿಂಗಡಣೆ ಕುರಿತ ತನ್ನ ನಿಲುವು ಬದಲಾಗುವುದಾದರೆ, ಅದು ನಿಜವಾಗಿಯೂ ತತ್ವದ ಮೇಲಿನ ರಾಜಕಾರಣವೇ, ಅಥವಾ ವ್ಯವಹಾರದ ಮೇಲಿನ ರಾಜಕಾರಣವೇ? ಒಕ್ಕೂಟ ವ್ಯವಸ್ಥೆಯ ರಕ್ಷಣೆಯ ವಿಷಯವನ್ನು ರಾಜ್ಯವೊಂದರ ತಾತ್ಕಾಲಿಕ ಹಿತಾಸಕ್ತಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದೇ? ಇಂತಹ ಪ್ರಶ್ನೆಗಳು ಈಗ ಡಿಎಂಕೆ ಮುಂದಿವೆ.
ಮುಂದಿನ ದಿನಗಳಲ್ಲಿ ಡಿಎಂಕೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ತಮಿಳುನಾಡಿನ ರಾಜಕಾರಣಕ್ಕಷ್ಟೇ ಅಲ್ಲ, ದೇಶದ ಪ್ರಾದೇಶಿಕ ಪಕ್ಷಗಳ ರಾಜಕಾರಣಕ್ಕೂ ಮಹತ್ವದ ಸಂದೇಶವಾಗಲಿದೆ. ಈ ಬೆಳವಣಿಗೆ ಕೇವಲ ಒಂದು ತಂತ್ರಗಾರಿಕೆಯಾದರೆ, ಅದು ಕಾಲಕ್ರಮೇಣ ಸ್ಪಷ್ಟವಾಗಬಹುದು. ಆದರೆ, ಇದೇ ರಾಜಕಾರಣದ ದಿಕ್ಕಾಗಿದ್ದರೆ, ದ್ರಾವಿಡ ಚಳವಳಿಯ ಸೈದ್ಧಾಂತಿಕ ಪರಂಪರೆಗೆ ಪೆಟ್ಟು ಬೀಳಲಿದೆ.
ಇದು ಕೇವಲ ಡಿಎಂಕೆಯ ರಾಜಕೀಯ ನಿರ್ಧಾರದ ವಿಷಯ ಮಾತ್ರವಲ್ಲ, ‘ಸಿದ್ಧಾಂತಗಳು ಅಧಿಕಾರಕ್ಕಾಗಿ ಇವೆಯೇ ಅಥವಾ ಅಧಿಕಾರವೇ ಸಿದ್ಧಾಂತಗಳನ್ನು ಮೀರಬಹುದೇ?’ ಎಂಬ ಮೂಲಭೂತ ಪ್ರಶ್ನೆಯ ವಿಷಯ!




