ರಾಜ್ಯದ ಪ್ರಮುಖ ಮತ್ತು ವಿಶಿಷ್ಟ ಬುಡಕಟ್ಟು ಸಮುದಾಯಗಳಲ್ಲಿ ಹಕ್ಕಿಪಿಕ್ಕಿ ಜನಾಂಗವೂ ಒಂದು. ಕನ್ನಡದಲ್ಲಿ 'ಹಕ್ಕಿ' ಎಂದರೆ ಪಕ್ಷಿ, 'ಪಿಕ್ಕಿ' ಎಂದರೆ ಹಿಡಿಯುವವರು. ಸಾಂಪ್ರದಾಯಿಕವಾಗಿ ಇವರು ಪಕ್ಷಿಗಳನ್ನು ಮತ್ತು ಸಣ್ಣ ಪ್ರಾಣಿಗಳನ್ನು ಬೇಟೆಯಾಡಿ ಜೀವಿಸುತ್ತಿದ್ದರಿಂದ ಈ ಹೆಸರು ಬಂದಿದೆ. ತುತ್ತು ಅನ್ನಕ್ಕಾಗಿ ದೇಶದ ಯಾವುದೋ ಮೂಲೆ ಮೂಲೆಗಳಿಗೆ ಅಲೆಯುವ ಈ ಜನಾಂಗವು ವಿದೇಶಗಳಿಗೂ ವಲಸೆ ಹೋಗುವುದಿದೆ. ಹಾಗೆಯೇ ಅಲೆದು ಇತ್ತೀಚೆಗೆ ಫಿಜಿ ದ್ವೀಪದಲ್ಲಿ ಒಂದು ತಂಡ ಸಿಕ್ಕಿಬಿದ್ದಿದೆ.
ರಾಜ್ಯದ ಸಾಂಪ್ರದಾಯಿಕ ಅಲೆಮಾರಿ ಸಮುದಾಯ ‘ಹಕ್ಕಿಪಿಕ್ಕಿ’ ಜನಾಂಗ. ಆಗಾಗೇ ಈ ಜನಾಂಗವು ಸುಡಾನ್, ಯೆಮೆನ್ ಹೀಗೆ ದೂರದ ವಿದೇಶಗಳಲ್ಲಿ ಸಿಕ್ಕಿಬೀಳುತ್ತಿರುವುದು ಮುನ್ನೆಲೆಗೆ ಬರುತ್ತಲೇ ಇರುತ್ತಿವೆ. ತುತ್ತು ಅನ್ನಕ್ಕಾಗಿ ದೇಶದ ಯಾವುದೋ ಮೂಲೆ ಮೂಲೆಗಳಿಗೆ ಅಲೆಯುವ ಈ ಜನಾಂಗವು ವಿದೇಶಗಳಿಗೂ ವಲಸೆ ಹೋಗುವುದಿದೆ. ಹಾಗೆಯೇ ಅಲೆದು ಇತ್ತೀಚೆಗೆ ಫಿಜಿ ದ್ವೀಪದಲ್ಲಿ ಸಿಕ್ಕಿಬಿದ್ದಿದ್ದಾರೆ.
ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿರುವ ಫಿಜಿ ದೇಶದಲ್ಲಿ ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಪಕ್ಷಿರಾಜಪುರ ಗ್ರಾಮದ 6 ಜನ ಹಕ್ಕಿಪಿಕ್ಕಿ ಜನಾಂಗದ ಯುವಕರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ತನಿಖೆಗೆ ಒಳಗಾಗಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಲು ಒತ್ತಾಯ
ಸದ್ಯದ ಮಾಹಿತಿ ಪ್ರಕಾರ, ಮನೀಶ್, ಕೃಷ್ಣ ಕುಮಾರ್, ಮಾಲಿನಿ, ಚಂದ್ರನ್ ವಾಸು, ಸಂಜನಾ ಚಂದ್ರನ್ ಮತ್ತು ಹರೀಶ್ ಸಂಪತ್ ಎಂಬುವವರು ಸಾಂಪ್ರದಾಯಿಕ ಗಿಡಮೂಲಿಕೆ ಮತ್ತು ಆಯುರ್ವೇದ ತೈಲಗಳ ವ್ಯಾಪಾರಕ್ಕಾಗಿ ಫಿಜಿ ದ್ವೀಪಗಳಿಗೆ ತೆರಳಿದ್ದರು. ಜುಲೈ 12ರಂದು ಅವರು ತಮ್ಮ ವ್ಯಾಪಾರ ಮುಗಿಸಿ ಭಾರತಕ್ಕೆ ಮರಳಲು ಫಿಜಿ ವಿಮಾನ ನಿಲ್ದಾಣಕ್ಕೆ ಬಂದಾಗ ಈ ಘಟನೆ ನಡೆದಿದೆ.
ಫಿಜಿ ದೇಶದ ನಿಯಮಾವಳಿಗಳ ಪ್ರಕಾರ ವಿಮಾನ ಪ್ರಯಾಣಿಕರು ತಮ್ಮ ಪ್ರಯಾಣದ ಅವಧಿಯಲ್ಲಿ ನಿಗದಿತ ಮಿತಿಗಿಂತ (10 ಡಾಲರ್ಗಿಂತ) ಹೆಚ್ಚು ನಗದು ಹಣವನ್ನು ಕೊಂಡೊಯ್ಯುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಹಣವಿದ್ದರೆ ಅದನ್ನು ಕಸ್ಟಮ್ಸ್ ಅಧಿಕಾರಿಗಳ ಬಳಿ ಮೊದಲೇ ಘೋಷಿಸಬೇಕಾಗುತ್ತದೆ.
ಆದರೆ ಈ ಯುವಕರು ತಮ್ಮ ಬಳಿ ಇದ್ದ ಹಣದ ವಿವರವನ್ನು ಘೋಷಿಸದ ಕಾರಣ, ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಡೆದು ವಿಚಾರಣೆ ನಡೆಸಿದ್ದಾರೆ ಹಾಗೂ ಅವರ ರಿಟರ್ನ್ ಏರ್ ಟಿಕೆಟ್ಗಳನ್ನು ರದ್ದುಗೊಳಿಸಿದ್ದಾರೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಅವರು ವಿಮಾನ ನಿಲ್ದಾಣದಲ್ಲಿಯೇ ಸಿಕ್ಕಿಬಿದ್ದಿದ್ದಾರೆ.
ಇದೀಗ ಸಂತ್ರಸ್ತ ಯುವಕರು ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಆರ್. ಪುನೀತ್ ಅವರನ್ನು ಸಂಪರ್ಕಿಸಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಸಹಾಯ ಯಾಚಿಸಿದ್ದಾರೆ. ಭಾರತ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯವು ತಕ್ಷಣವೇ ಮಧ್ಯಪ್ರವೇಶಿಸಿ ತಮಗಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಿ, ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳಬೇಕೆಂದು ಯುವಕರು ಹಾಗೂ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಯಾರಿವರು ಹಕ್ಕಿಪಿಕ್ಕಿ ಜನರು?
ರಾಜ್ಯದ ಪ್ರಮುಖ ಮತ್ತು ವಿಶಿಷ್ಟ ಬುಡಕಟ್ಟು ಸಮುದಾಯಗಳಲ್ಲಿ ಹಕ್ಕಿಪಿಕ್ಕಿ ಜನಾಂಗವೂ ಒಂದು. ಕನ್ನಡದಲ್ಲಿ ‘ಹಕ್ಕಿ’ ಎಂದರೆ ಪಕ್ಷಿ, ‘ಪಿಕ್ಕಿ’ ಎಂದರೆ ಹಿಡಿಯುವವರು. ಸಾಂಪ್ರದಾಯಿಕವಾಗಿ ಇವರು ಪಕ್ಷಿಗಳನ್ನು ಮತ್ತು ಸಣ್ಣ ಪ್ರಾಣಿಗಳನ್ನು ಬೇಟೆಯಾಡಿ ಜೀವಿಸುತ್ತಿದ್ದರಿಂದ ಈ ಹೆಸರು ಬಂದಿದೆ. ತಮ್ಮ ಸಮುದಾಯದೊಳಗೆ ‘ವಾಗ್ರಿ’ (Vaagri) ಎಂಬ ಇಂಡೋ-ಆರ್ಯನ್ ಮೂಲದ ಭಾಷೆಯನ್ನು ಮಾತನಾಡುತ್ತಾರೆ. ಯುನೆಸ್ಕೋ ಪ್ರಕಾರ ಸದ್ಯ ನಶಿಸುತ್ತಿರುವ ಭಾಷೆಯಿದು.
ಇದನ್ನೂ ಓದಿ: ಮಂಡ್ಯ | ಶಿಕಾರಿಪುರ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯ ಜನರ ಬದುಕು ಅತಂತ್ರ
ಈ ಸಮುದಾಯದ ಮೂಲ ಬೇರುಗಳು ಉತ್ತರ ಭಾರತದ ಗುಜರಾತ್ ಮತ್ತು ರಾಜಸ್ಥಾನ. ಮೊಘಲರೊಂದಿಗಿನ ಯುದ್ಧದ ನಂತರ ಈ ಜನಾಂಗವು ದಕ್ಷಿಣ ಭಾರತಕ್ಕೆ ವಲಸೆ ಬಂದಿದೆ ಎಂಬ ನಂಬಿಕೆಯಿದೆ. ಪ್ರಸ್ತುತ ಶಿವಮೊಗ್ಗ, ದಾವಣಗೆರೆ, ಮೈಸೂರು (ಹುಣಸೂರು), ಹಾಸನ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ (ರಾಮನಗರದ ಭದ್ರಾಪುರ) ಜಿಲ್ಲೆಗಳಲ್ಲಿ ಹೆಚ್ಚಾಗಿ ಈ ಜನಾಂಗದವರು ವಾಸಿಸುತ್ತಿದ್ದಾರೆ. ಮಂಗಳೂರಿನ ಕೆಲವು ಭಾಗಗಳಲ್ಲಿಯೂ ಇರುವ ಈ ಜನಾಂಗದವರು ಮೀನು ಹಿಡಿಯುವ ಕೆಲಸ ಮಾಡಿ ಜೀವನ ದೂಡುತ್ತಿದ್ದಾರೆ.
ಈ ಜನಾಂಗದ ವಿದೇಶ ಪ್ರವಾಸದ ಹಿಂದಿನ ಗುಟ್ಟೇನು?
ಮುಂಚೆ ಸಂಪೂರ್ಣವಾಗಿ ಅರಣ್ಯಗಳನ್ನು ಅವಲಂಬಿಸಿ ಪಕ್ಷಿಗಳನ್ನು ಹಿಡಿಯುವುದು, ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡುವುದು, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಹಕ್ಕಿಪಿಕ್ಕಿ ಜನಾಂಗದ ಜನರು, 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಅವರ ಮೂಲನೆಲೆ ಕಾಡುಗಳಿಂದಲೇ ಹೊರಬರಬೇಕಾಯಿತು. ಅವರ ಜೀವನೋಪಾಯವೂ ಬದಲಾಗುತ್ತಾ ಸಾಗಿತು.
ಪ್ರಸ್ತುತ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳು, ಆಯುರ್ವೇದ ಉತ್ಪನ್ನಗಳು, ಮಸಾಲೆ ಪದಾರ್ಥಗಳು ಮತ್ತು ಪ್ರಸಿದ್ಧವಾದ ಹರ್ಬಲ್ ಹೇರ್ ಆಯಿಲ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಹಕ್ಕಿಪಿಕ್ಕಿ ಸಮುದಾಯದವರು ಯಾವುದೇ ಹೈಟೆಕ್ ಶಿಕ್ಷಣ ಪಡೆಯದಿದ್ದರೂ ಜಗತ್ತಿನ ಮೂಲೆ ಮೂಲೆಗೆ ತಲುಪಲು ಮುಖ್ಯ ಕಾರಣ ಇದೇ ಸಾಂಪ್ರದಾಯಿಕ ಗಿಡಮೂಲಿಕೆ ವೈದ್ಯಪದ್ಧತಿ ಮತ್ತು ಆಯುರ್ವೇದ ತೈಲಗಳು.
ಹಕ್ಕಿಪಿಕ್ಕಿ ಜನಾಂಗದವರು ತಯಾರಿಸುವ ಸಾಂಪ್ರದಾಯಿಕ ಕೇಶ ತೈಲಗಳು ನೋವು ನಿವಾರಕ ತೈಲಗಳು ಮತ್ತು ಗಿಡಮೂಲಿಕೆ ಔಷಧಿಗಳಿಗೆ ಆಫ್ರಿಕನ್ ಹಾಗೂ ಏಷ್ಯನ್ ದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಆರಂಭದಲ್ಲಿ ದೇಶದಲ್ಲೇ ವಲಸೆ ಹೋಗುತ್ತಿದ್ದ ಈ ಸಮುದಾಯದವರು, ನಂತರದ ದಿನಗಳಲ್ಲಿ ಪ್ರವಾಸಿ ವೀಸಾಗಳನ್ನು ಪಡೆದು ಆಫ್ರಿಕಾ, (ಸುಡಾನ್, ಕೀನ್ಯಾ), ಮಧ್ಯಪ್ರಾಚ್ಯ (ಯೆಮೆನ್) ಮತ್ತು ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ (ಫಿಜಿ) ಪ್ರಯಾಣಿಸಲು ಆರಂಭಿಸಿದರು. ಹಾಗೆಯೇ ಒಮ್ಮೆ ಹೋದವರು ಅಲ್ಲಿ ಗಳಿಸುವ ಲಾಭವನ್ನು ನೋಡಿ, ತಮ್ಮ ಕುಟುಂಬವನ್ನೇ, ಗ್ರಾಮಸ್ಥರನ್ನೇ ಅಲ್ಲಿಗೆ ಕರೆಸಿಕೊಳ್ಳುತ್ತಾರೆ. ಇವೆಲ್ಲವುದಕ್ಕೂ ಮುಖ್ಯ ಕಾರಣ, ಭಾರತದಲ್ಲಿ ಸ್ಥಳೀಯವಾಗಿ ಹಕ್ಕಿಪಿಕ್ಕಿ ಜನಾಂಗದ ಜನರಿಗೆ ಸ್ಥಿರವಾದ ಉದ್ಯೋಗ ಅಥವಾ ಜಮೀನು ಇಲ್ಲದಿರುವುದು. ತಾಯ್ನಾಡಿನಲ್ಲಿ ಅನುಭವಿಸುವ ಬಡತನದಿಂದ ಮುಕ್ತಿ ಪಡೆಯಲು ಈ ಜನಾಂಗದ ಜನರು ವಿದೇಶಿ ಮಾರುಕಟ್ಟೆಯಲ್ಲಿ ಸಿಗುವ ಲಾಭ ನಂಬಿ ಹೋಗಿ ಅಲ್ಲಿ ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಇದನ್ನೂ ಓದಿ: ಬಿಡದಿ ಗ್ರೌಂಡ್ ರಿಪೋರ್ಟ್: ಹಕ್ಕಿಪಿಕ್ಕಿ ಬಾಲಕಿಯ ಅತ್ಯಾಚಾರ, ಕೊಲೆ ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದೆಯೇ?
ವಿದೇಶದಲ್ಲಿ ಅಪಾಯದಲ್ಲಿ ಸಿಲುಕುತ್ತಿರುವ ಜನಾಂಗ
ಫಿಜಿ ದ್ವೀಪಗಳಿಗೆ ವ್ಯಾಪಾರಕ್ಕಾಗಿ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ ನೂರಾರು ಜನರು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಕ್ಕಿಪಿಕ್ಕಿ ಜನಾಂಗದವರು ಸಾಮಾನ್ಯವಾಗಿ ಟೂರಿಸ್ಟ್ (ಪ್ರವಾಸಿ) ವೀಸಾದ ಮೇಲೆ ವಿದೇಶಗಳಿಗೆ ತೆರಳುತ್ತಾರೆ. ಆದರೆ ಅಲ್ಲಿಗೆ ಹೋದ ಬಳಿಕ ಗಿಡಮೂಲಿಕೆ ತೈಲಗಳ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾರೆ. ಪ್ರವಾಸಿ ವೀಸಾದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವುದು ಕಾನೂನುಬಾಹಿರ. ಆದ್ದರಿಂದ ಅಲ್ಲಿನ ಸ್ಥಳೀಯ ಆಡಳಿತ ಈ ಜನಾಂಗದವರನ್ನು ನಿಯಮ ಉಲ್ಲಂಘನೆಯಡಿಯಲ್ಲಿ ವಶಕ್ಕೆ ಪಡೆಯುತ್ತದೆ ಅಥವಾ ನಿರ್ಬಂಧ ಹೇರುತ್ತದೆ.
ಇನ್ನೂ ಹಲವು ಬಾರಿ ಸ್ಥಳೀಯ ಏಜೆಂಟರು ಇವರಿಗೆ ವೀಸಾ ನವೀಕರಣ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಾರೆ. ಪಾಸ್ಪೋರ್ಟ್ ಕಳೆದುಕೊಂಡು, ಭಾಷೆಯ ಸಮಸ್ಯೆಯಿಂದಾಗಿ ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಗದೆ ಅಲ್ಲಿಯೇ ಸಿಲುಕಿಕೊಳ್ಳುವುದೂ ಇದೆ.
ಕ್ಕಿಪಿಕ್ಕಿ ಜನಾಂಗದವರು ಆಗಾಗ ಇಂತಹ ಸಂಕಷ್ಟಗಳು ಎದುರಾಗಲು ಹಲವು ಕಾರಣಗಳಿವೆ. ಮುಖ್ಯವಾಗಿ ತಾವು ಹೋಗುವ ದೇಶದ ವೀಸಾ ನಿಯಮಗಳು, ವಲಸೆ ಕಾನೂನುಗಳು ಮತ್ತು ವ್ಯಾಪಾರ ಪರವಾನಗಿಗಳ ಬಗ್ಗೆ ಈ ಜನಾಂಗದವರಿಗೆ ಕನಿಷ್ಠ ಜ್ಞಾನವೂ ಇರುವುದಿಲ್ಲ. ಹೀಗಾಗಿ ಸುಡಾನ್ ಮತ್ತು ಯೆಮೆನ್ನಲ್ಲಿ ಆಂತರಿಕ ಯುದ್ಧ ಭುಗಿಲೆದ್ದಾಗ ಈ ಜನಾಂಗದವರು ಅಲ್ಲಿ ಸಿಕ್ಕಿಬಿದ್ದಿದ್ದರು. ಆಗ ಭಾರತ ಸರ್ಕಾರವು ‘ಆಪರೇಷನ್ ಕಾವೇರಿ’ ಮೂಲಕ ಇವರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತಂದಿತ್ತು. ಫಿಜಿಯಲ್ಲೂ ಸಹ ಇಂತಹದೇ ವೀಸಾ ನಿಯಮಗಳ ಬಿಗಿತದಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ.
ಅದಕ್ಕಿಂತಲೂ ಮುಖ್ಯವಾಗಿ ಕಿತ್ತು ತಿನ್ನುವ ಬಡತನ ಮತ್ತು ಹಕ್ಕಿಪಿಕ್ಕಿ ಜನಾಂಗಕ್ಕೆ ದೇಶದಲ್ಲಿ ಸಿಗದ ಗೌರವ ಕಾರಣ. ಇವೆಲ್ಲವುದರಿಂದಾಗಿ ಸುಲಭವಾಗಿ ಹಣ ಗಳಿಸುವ ಆಸೆಗೆ ಬಿದ್ದು, ಅನಧಿಕೃತ ಟ್ರಾವೆಲ್ ಏಜೆಂಟರ ಮೂಲಕ ಪ್ರವಾಸಿ ವೀಸಾ ಪಡೆದು ಹೋಗಿ ಕಾನೂನಿಗೆ ಸುಳಿಗೆ ಸಿಲುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಈ ಜನಾಂಗದವರ ಸಹಾಯಕ್ಕೆ ನಿಲ್ಲುವುದು ಮುಖ್ಯ. ಹಾಗೆಯೇ ಅವರನ್ನು ಕೇವಲ ‘ಸಂಕಷ್ಟಕ್ಕೆ ಸಿಲುಕುವವರು’ ಎಂದು ನೋಡದೆ, ನಮ್ಮ ಮಣ್ಣಿನ ವಿಶಿಷ್ಟ ಜ್ಞಾನದ ವಾರಸುದಾರರು ಎಂದು ಗೌರವಿಸುವುದು, ಸೂಕ್ತವಾದ ಕಾನೂನು ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಅಗತ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



