ಈ ದಿನ ಸಂಪಾದಕೀಯ | ಕೋರೆಗಾಂವ್ ಭೀಮಾ ವಿಜಯೋತ್ಸವ ದಲಿತ ಅಸ್ಮಿತೆಯ ಕತೆಯನ್ನು ಬಲ್ಲಿರಾ?

Date:

Advertisements

ದಲಿತ ಅಸ್ಮಿತೆ, ದಲಿತ ಇತಿಹಾಸ ಹಾಗೂ ಸಂಕೇತಗಳನ್ನು ನಿಯಂತ್ರಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಬಹುಸೂಕ್ಷ್ಮ ಹುನ್ನಾರ. ದೀಕ್ಷಾ ಭೂಮಿ, ಚೈತ್ಯಭೂಮಿ ಹಾಗೂ ಕೋರೆಗಾಂವ್ ಭೀಮಾ ವಿಜಯಸ್ತಂಭದಂತಹ ದಲಿತ ಪ್ರತೀಕಗಳನ್ನು ವಶಪಡಿಸಿಕೊಂಡು ಅವುಗಳ ದಲಿತ ಕಥಾನಕವನ್ನು ಬದಲಿಸಿ ಅವುಗಳ ಜಾಗದಲ್ಲಿ ಹಿಂದುತ್ವ ನಿರೂಪಣೆಗಳನ್ನು ಹೆಣೆದು ಸ್ಥಾಪಿಸುವ ಹುನ್ನಾರ ಜರುಗಿದೆಯೇ?

ದಲಿತ ಸ್ವಾಭಿಮಾನದ ಐತಿಹಾಸಿಕ ಅಸ್ಮಿತೆಯ ಪ್ರತೀಕಗಳಲ್ಲೊಂದು ಕೋರೆಗಾಂವ್ ಭೀಮಾ. ಪ್ರತಿವರ್ಷ ಜನವರಿ ಒಂದರಂದು ಇಲ್ಲಿ ನಡೆಯುವ ವಿಜಯೋತ್ಸವದಲ್ಲಿ ಲಕ್ಷಾಂತರ ದಲಿತರು ಪಾಲ್ಗೊಂಡು ಸಂಭ್ರಮಿಸುತ್ತಾರೆ. ಇಂದು ಕೂಡ ಲಕ್ಷ ಲಕ್ಷ ದಲಿತರು ಇಲ್ಲಿ ನೆರೆದಿದ್ದಾರೆ. ಜಾತಿವ್ಯವಸ್ಥೆಯನ್ನು ಪ್ರತಿರೋಧಿಸುವ ಉತ್ಸವವಾಗಿ ಕೋರೆಗಾಂವ್ ಭೀಮಾ ಆಚರಣೆ ರೂಪುಗೊಂಡಿದೆ.

ಪೇಶ್ವೆಗಳ ಸೈನ್ಯದ ಮೇಲೆ ಬ್ರಿಟಿಷರ ಸೇನೆಯ ವಿಜಯವನ್ನು ಆಚರಿಸುವುದು ದೇಶದ್ರೋಹದ ಕೃತ್ಯ ಎನ್ನುವ ಕೂಗನ್ನು 2018ರಲ್ಲಿ ಹಿಂದುತ್ವದ ಶಕ್ತಿಗಳು ಬಡಿದೆಬ್ಬಿಸಿದ್ದವು. ಎಂದಿನಂತೆ ಮೇಲ್ಜಾತಿಗಳ ಮಧ್ಯಮವರ್ಗಗಳು ಈ ಕೂಗಿಗೆ ಧ್ವನಿವರ್ಧಕವನ್ನು ಹಿಡಿದು ನಿಂತಿದ್ದವು. ಜಾತಿಪದ್ಧತಿ ಎಂಬ ದೇಶದ್ರೋಹದ ಕುರಿತು ಉಸಿರೆತ್ತದ ಹಿಂದುತ್ವವಾದಿಗಳು ಮತ್ತು ಮಧ್ಯಮವರ್ಗಿಗಳು ಜಾಣಕಿವುಡರು ಮತ್ತು ಜಾಣ ಕುರುಡರು.

Advertisements

200 ವರ್ಷಗಳಿಂದ ತಣ್ಣಗೆ ಮಲಗಿದ್ದ ಈ ಕೋರೆಗಾಂವ್ ಭೀಮಾ ಗ್ರಾಮ 2018ರ ಜನವರಿಯಲ್ಲಿ ಹಠಾತ್ತನೆ ಸಿಡಿದು ಹಿಂಸಾಚಾರದ ತಪ್ಪು ಕಾರಣಗಳಿಗಾಗಿ ದೇಶವ್ಯಾಪಿ ಪ್ರಚಾರ ಪಡೆಯಿತು. ಹಿಂದುತ್ವ ಶಕ್ತಿಗಳು ಮತ್ತು ದಲಿತ ಅಸ್ಮಿತೆಯ ಪ್ರತಿಪಾದನೆಯಿಂದ ಉಂಟಾಗಿದ್ದ ಬಿಗುವಿನ ಪರಿಸ್ಥಿತಿ ಈ ಹಿಂಸಾಚಾರದ ಹಿಂದಿತ್ತು. ಕೋರೆಗಾಂವ್ ಭೀಮಾ ವಿಜಯೋತ್ಸವವು ಪೇಶ್ವೆಗಳ ಆಳ್ವಿಕೆಯ ಅಂತ್ಯ ಮತ್ತು ಮೂಲಕ ಬ್ರಿಟಿಷ್ ಆಡಳಿತದ ಪ್ರಾಬಲ್ಯ ನೆಲೆಗೊಂಡದ್ದನ್ನು ಪ್ರತಿನಿಧಿಸುತ್ತದೆ.

ಪ್ರತಿವರ್ಷ ಜನವರಿ ಒಂದರಂದು ದಲಿತರು ಅದರಲ್ಲೂ ವಿಶೇಷವಾಗಿ ಮಹಾರರು ವಿಜಯಸ್ತಂಭ ಸ್ಮಾರಕಕ್ಕೆ ಗೌರವ ಸಲ್ಲಿಸಲು ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಸೇರುತ್ತಾರೆ. 1818ರ ಜನವರಿ ಒಂದರಂದು ಬ್ರಿಟಿಷ್ ಸೇನೆಗೆ ಸೇರಿದ ಕೆಲವೇ ನೂರು ಮಹಾರ ಸೈನಿಕರು ಪೇಶ್ವೆಗಳ ಸೈನ್ಯವನ್ನು ಸದೆಬಡಿದು ಹಿಮ್ಮೆಟ್ಟಿಸಿದ್ದರು. 1927ರ ಜನವರಿ ಒಂದರಂದು ಡಾ ಬಿ ಆರ್ ಅಂಬೇಡ್ಕರ್ ಈ ಸ್ಥಳಕ್ಕೆ ಭೇಟಿ ನೀಡಿ ಮಹಾರ ಹುತಾತ್ಮರಿಗೆ ಗೌರವ ಸಲ್ಲಿಸಿದ್ದರು. ಅಂದಿನಿಂದ ಇಂದಿನ ತನಕ ಈ ಪದ್ಧತಿ ಮುಂದುವರೆದಿದೆ.

1818ರ ಜನವರಿ ಒಂದರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ 900 ಸೈನಿಕರು ಶಿರೂರಿನಿಂದ ಪುಣೆಗೆ ಹೆಜ್ಜೆ ಹಾಕಿದ್ದರು. ಎರಡನೆಯ ಬಾಜೀರಾವ್ ಪೇಶ್ವೆಯ 20 ಸಾವಿರ ಯೋಧರ ಸೇನೆ ಎದುರಾಗಿತ್ತು. ಕೋರೆಗಾಂವ್‌ನ ಈ ಯುದ್ಧ ಹೆಚ್ಚು ಕಾಲ ನಡೆಯಲಿಲ್ಲ. ಬ್ರಿಟಿಷರ 200 ಸೈನಿಕರು ಮತ್ತು ಪೇಶ್ವೆಯ 500 ಸೈನಿಕರು ಹತರಾಗಿದ್ದರು. ಆಂಗ್ಲೋ-ಮರಾಠಾ ಯುದ್ಧದಲ್ಲಿ ಅಂತಿಮ ಗೆಲುವು ಬ್ರಿಟಿಷರದಾಗಿತ್ತು. ಹೀಗಾಗಿ ಕೋರೆಗಾಂವ್ ನಲ್ಲಿ ಗೆಲುವಿನ ರಣಸ್ತಂಭ ಸ್ಮಾರಕವನ್ನು ನಿರ್ಮಿಸಿದರು. ಗೆದ್ದದ್ದು ಬ್ರಿಟಿಷ್ ಸೇನೆಯಾದರೂ ಸೇನೆಯಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವರು ‘ಅಸ್ಪೃಶ್ಯ’ ಜನಾಂಗದ ಮಹಾರರು. ಮೇಲ್ಜಾತಿ ಪೇಶ್ವಾ ಸೇನೆಯ ವಿರುದ್ಧ ಮಹಾರ್ ಗೆಲುವು ದಲಿತ ಹೆಮ್ಮೆಗೆ ಕಾರಣವಾಯಿತು. ವಿಶೇಷವಾಗಿ ಮಹಾರರು ಬಲಿಷ್ಠ ದೇಹವುಳ್ಳವರೂ, ಬಹುತೇಕರು ಸುಂದರಾಂಗರೂ, ಬುದ್ಧಿವಂತರೂ, ತ್ವರಿತ ಗ್ರಹಿಕೆಯವರೂ ಹಾಗೂ ಧೈರ್ಯಶಾಲಿಗಳೂ ಆಗಿದ್ದರೆಂದು ಮಹಾರರ ಕುರಿತು ಬ್ರಿಟಿಷ್ ಅಧಿಕಾರಿ ಹೆನ್ರಿ ಬೇಡನ್ ಪೊವೆಲ್ ಉಲ್ಲೇಖಿಸಿದ್ದಾನೆ.

ಮಹಾರರ ಸಮರಮೌಲ್ಯವನ್ನು ಬ್ರಿಟಿಷರು ಗುರುತಿಸಿದ್ದರು. ಶಿವಾಜಿ ಮಹಾರಾಜ ಕೂಡ ಮಹಾರರ ಈ ಗುಣವನ್ನು ಗುರುತಿಸಿದ್ದ. ಜ್ಯೋತಿರಾವ್ ಫುಲೆ ಅವರು ಶಿವಾಜಿ ಕುರಿತು ರಚಿಸಿರುವ ಲಾವಣಿಯಲ್ಲಿ ಈ ಉಲ್ಲೇಖ ಉಂಟು. ಮರಾಠಾ ಜಾತಿ ಅಸ್ಮಿತೆ ಕ್ಷತ್ರಿಯ ರೂಪ ತಾಳದೆ ಇನ್ನೂ ಕೃಷಿಯ ಜೊತೆ ತಳಕು ಹಾಕಿಕೊಂಡಿದ್ದ ಶಿವಾಜಿಯ ಕಾಲದಲ್ಲಿ ಮರಾಠರು ಮತ್ತು ಮಹಾರರ ನಡುವಣ ಕಂದಕ ಹಿರಿದಾಗಿರಲಿಲ್ಲ ಎನ್ನುತ್ತಾರೆ ಇತಿಹಾಸಕಾರರು. ಶಿವಾಜಿಯ ಕಾಲದಲ್ಲಿ ಮಹಾರ ಸೈನಿಕರು ಅನೇಕರು ಉನ್ನತ ಹುದ್ದೆಗೆ ಏರಿದ್ದರು. ಮುಂದೆ ಪೇಶ್ವೆಗಳ ಕಾಲದಲ್ಲಿ ಮಹಾರರ ಈ ಸ್ಥಾನಮಾನ ಕುಸಿಯಿತು. ಪೇಶ್ವೆಗಳು ಉನ್ನತಕುಲ ಕರ್ಮಠರೂ, ಅಸ್ಪೃಶ್ಯ ಪೀಡಕರೂ ಆಗಿದ್ದರು ಎಂದು ಇತಿಹಾಸಜ್ಞೆ ಶ್ರದ್ಧಾ ಕುಂಭೋಜ್ಕರ್ ಬರೆಯತ್ತಾರೆ. ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸದಂತೆ ಮಹಾರರ ಮೇಲೆ ನಿಷೇಧ ಹೇರಿದ್ದರು ಪೇಶ್ವೆಗಳು. ಜಾತಿಯ ಕಟ್ಟುಪಾಡುಗಳ ಉಲ್ಲಂಘನೆಗೆ ಕ್ರೂರ ಶಿಕ್ಷೆ ವಿಧಿಸುತ್ತಿದ್ದರು. ಶಿವಾಜಿಯ ಕಾಲದಲ್ಲಿ ಮಹಾರರಿಗೆ ಇದ್ದ ಸಾಮಾಜಿಕ ಮತ್ತು ವೃತ್ತಿ ಸಂಬಂಧದ ಚಲನೆಯನ್ನು ಪೇಶ್ವೆಗಳು ಕತ್ತರಿಸಿ ಒಗೆದಿದ್ದರು. ಈ ಬಗೆಯ ಜಾತಿ ಆಧಾರಿತ ಕ್ರೌರ್ಯ ಮಹಾರರ ಸಾಮೂಹಿಕ ನೆನಪಿನಿಂದ ಈವರೆಗೂ ಅಳಿಸಿಲ್ಲ ಎನ್ನುತ್ತಾರೆ ಕುಂಭೋಜ್ಕರ್.

ಬ್ರಿಟಿಷರು ಬಾಂಬೆ ಆರ್ಮಿಗೆ ಸೈನಿಕರನ್ನು ನೇಮಕ ಮಾಡಿಕೊಂಡ ಅವಕಾಶವನ್ನು ಮಹಾರರು ಬಳಸಿಕೊಂಡರು. ಸೇನೆಗೆ ಸೇರುವ ಅವಕಾಶವನ್ನು ಸಾಮಾಜಿಕ ಮತ್ತು ಆರ್ಥಿಕ ಬಿಡುಗಡೆಯ, ತಮ್ಮ ಕಳೆದು ಹೋದ ವೈಭವವನ್ನು ಮರಳಿ ಗಳಿಸುವ ದಾರಿಯನ್ನಾಗಿ ಕಂಡುಕೊಂಡರು. ರಮೋಶಿ, ಮಹಾರ್ ಹಾಗೂ ಮಾಂಗ್ ನಂತಹ ಕೆಳಜಾತಿಗಳ ಯೋಧರನ್ನು ಒಳಗೊಂಡ ಪದಾತಿ ದಳವನ್ನು ಶಿವಾಜಿ ಕಟ್ಟಿದ್ದ ರೀತಿಯನ್ನು ಬ್ರಿಟಿಷರೂ ಅನುಕರಿಸಿದರು. ಪೇಶ್ವೆಗಳ ಆಡಳಿತದಲ್ಲಿ ಗುಲಾಮ ಬದುಕನ್ನು ಎದುರಿಸಿದ್ದ ಮಹಾರರು, ತಮ್ಮ ಪೀಡಕರ ಅಧೋಗತಿಯನ್ನು ಕಾಣಲು ಬ್ರಿಟಿಷ್ ಸೇನೆ ಸೇರಲು ಹಿಂದೆ ಮುಂದೆ ನೋಡಲಿಲ್ಲ. ಬ್ರಿಟಿಷ್ ಸೇನೆಯಲ್ಲಿ ಪರಾಕ್ರಮ ಮತ್ತು ನಿಯತ್ತಿನಿಂದ ದುಡಿದರು ಕದನದಲ್ಲಿ ಪ್ರಾಣತೆತ್ತ 22 ಮಹಾರ ಸೈನಿಕರ ಹೆಸರುಗಳನ್ನು ಬ್ರಿಟಿಷರು  ಕೋರೆಗಾಂವ್ ನಲ್ಲಿ ತಾವು ನಿರ್ಮಿಸಿದ ವಿಜಯಸ್ತಂಭದಲ್ಲಿ ಕೆತ್ತಿಸಿದರು. ಆನಂತರದ ವರ್ಷಗಳಲ್ಲಿ ಮಹಾರರ ನೇಮಕವನ್ನು ಬ್ರಿಟಿಷರೂ ನಿಲ್ಲಿಸಿದರು. ದಲಿತರ ಪಾಲಿಗೆ ಮೇಲ್ಜಾತಿಗಳ ದೌರ್ಜನ್ಯದ ವಿರುದ್ಧದ ವಿಜಯದ ಪ್ರತೀಕವಾಯಿತು ಕೋರೆಗಾಂವ್ ವಿಜಯಸ್ತಂಭ. ಬ್ರಿಟಿಷರು ಕಡೆಗಣಿಸಿದಂತೆಯೇ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸ ರಚನೆಯಲ್ಲೂ ಮಹಾರರ ಸಮರ ಕೌಶಲ್ಯವನ್ನು ಮೂಲೆಗುಂಪು ಮಾಡಲಾಯಿತು. ಆದರೆ ತಮ್ಮ ಪಾಲಿನ ಪರಮಪೀಡಕರಾದ ಪೇಶ್ವೆಗಳ ಆಡಳಿತವನ್ನು ಕೊನೆಗಾಣಿಸಿದ ಕದನದಲ್ಲಿ ತಾವು ಮೆರೆದ ಪರಾಕ್ರಮದ ಹೆಮ್ಮೆಯು ಮಹಾರರ ಸಾಮೂಹಿಕ ನೆನಪಿನ ಕೋಶದಲ್ಲಿ ಎಂದೆಂದಿಗೂ ಜೀವಂತ ಉಳಿಯಿತು.

ಹಿಂದುತ್ವ ಶಕ್ತಿಗಳೇ 2018ರ ಹಿಂಸೆಯನ್ನು ಭುಗಿಲೆಬ್ಬಿಸಿದ್ದವು. ಕೋರೆಗಾಂವ ಸನಿಹದ ಮತ್ತೊಂದು ಗ್ರಾಮದಲ್ಲಿ ಶಿವಾಜಿಯ ಮಗ ಸಂಭಾಜಿಯ ಸಮಾಧಿಯಿದೆ. ಅದರ ಪಕ್ಕದಲ್ಲಿರುವ ಮತ್ತೊಂದು ಪುಟ್ಟ ಸಮಾಧಿಯನ್ನು ‘ಅಸ್ಪೃಶ್ಯ’ ಮಹಾರ್ ಜಾತಿಗೆ ಸೇರಿದ ಗೋವಿಂದ ಗಾಯಕ್ವಾಡನದು ಎಂದು ವ್ಯಾಪಕವಾಗಿ ನಂಬಲಾಗಿದೆ. 1689ರಲ್ಲಿ ಔರಂಗಜೇಬನಿಂದ ಚಿತ್ರಹಿಂಸೆಗೀಡಾಗಿ ಕೊಲ್ಲಲ್ಪಟ್ಟ ಸಂಭಾಜಿಯ ದೇಹದ ಭಾಗಗಳನ್ನು ಹೊಲಿದು ಒಂದು ಮಾಡಿ ಆನಂತರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು ಇದೇ ಗೋವಿಂದ ಗಾಯಕ್ವಾಡ ಎಂದೂ ನಂಬಲಾಗಿದೆ. ಮರಾಠರು ಈ ಮಾತನ್ನು ಒಪ್ಪುವುದಿಲ್ಲ. ಸಂಭಾಜಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು ಮರಾಠರೇ ವಿನಾ ದಲಿತರಲ್ಲ ಎಂಬುದು ಅವರ ವಾದ. ಕೀಳು ಕುಲದವರು ಬೇಡುವವರೇ ವಿನಾ ನೀಡುವವರಲ್ಲ. ಅವರಿಂದ ನೀಡಿಸಿಕೊಳ್ಳುವುದಕ್ಕಿಂತ ಅವಮಾನ ಮತ್ತೊಂದಿಲ್ಲ ಎಂಬ ಭೇದ ಭಾವದ ಮನುಷ್ಯವಿರೋಧಿ ಮನಸ್ಥಿತಿಯಿದು.

ಗೋವಿಂದ ಗಾಯಕ್ವಾಡನದೆಂದು ಹೇಳಲಾದ ಸಮಾಧಿಯ ಪಕ್ಕ ಫಲಕವೊಂದನ್ನು ನೆಡಲಾಗಿತ್ತು. ಸಂಭಾಜಿಯ ಅಂತ್ಯಕ್ರಿಯೆ ನೆರವೇರಿಸಿದ ಗಾಯಕ್ವಾಡನ ಸಮಾಧಿಯಿದು ಎಂದು ಸಾರುವ ಫಲಕವದು. 2018ರ ಜನವರಿ ಒಂದರಂದು ದಲಿತರ ಕೋರೆಗಾಂವ್ ಭೀಮಾ ವಿಜಯೋತ್ಸವ ಆಚರಣೆಗೆ ಮುನ್ನ ಈ ಫಲಕವನ್ನು ಕಿತ್ತೆಸೆದು ಸಮಾಧಿಯನ್ನು ವಿರೂಪಗೊಳಿಸಲಾಯಿತು. ಲಕ್ಷಾಂತರ ದಲಿತರು ಕೋರೆಗಾಂವ್‌ಗೆ ಭೇಟಿ ನೀಡಲು ಒಂದೆರಡು ದಿನಗಳ ಮುನ್ನ ನಡೆದ ಈ ಕೃತ್ಯ ದಲಿತರು ಮತ್ತು ಮರಾಠರನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟಲಾಗುತ್ತದೆ. ಹರಿದು ಹಂಚಿ ಹೋಗಿರುವ ದಲಿತರ ನಾಯಕ ರಾಮದಾಸ್ ಅಠಾವಳೆ ಈಗಾಗಲೆ ಎನ್‌ಡಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿ, ಅವರಿಗೆಂದು ಬೃಹತ್ ಸ್ಮಾರಕ ಸೌಧ ನಿರ್ಮಿಸಿ ದಲಿತರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ.

ಸಮಸ್ತ ಹಿಂದೂ ಅಘಡಿ ಎಂಬ ಹಿಂದೂ ಸಂಘಟನೆಯ ಮುಖ್ಯಸ್ಥ ಮಿಲಿಂದ್ ಏಕಬೋಟೆ ಮತ್ತು ಶಿವ ಪ್ರತಿಷ್ಠಾನದ ಮನೋಹರ ಅಲಿಯಾಸ್ ಸಂಭಾಜಿ ಭಿಡೆ ಗುರೂಜಿ ಎಂಬುವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದರು. ತುದಿಯಂಚಿನಲ್ಲೇ ಬಿದ್ದಿರುವ ತಮ್ಮ ಇತಿಹಾಸವನ್ನು ಮುಖ್ಯಧಾರೆಗೆ ತಂದು ಸ್ಥಾಪಿಸುವ ದಲಿತ ಅಸ್ಮಿತೆಯ ಮರುಪ್ರತಿಪಾದನೆ- ದಲಿತ ಮುಂದಾಳುಗಳ ಮೇಲಾಟ ಮತ್ತು ಅದಕ್ಕೆ ಎದುರಾಗಿ ತಲೆಯೆತ್ತಿದ ಬಲಪಂಥೀಯ ಶಕ್ತಿಗಳ ಕತೆಯಿದು

ಬ್ರಿಟಿಷರ ಅಡಿಯಲ್ಲಿ ದಲಿತ ಸೇನೆಯು, ಪೇಶ್ವೆಗಳ ಬಲಿಷ್ಠ ಜಾತಿಗಳ ಸೇನೆಯನ್ನು ಸೋಲಿಸಿದ ಐತಿಹಾಸಿಕ ಯುದ್ಧದ ಸಂಸ್ಮರಣೆಗಾಗಿ ಭೀಮಾ ಕೋರೆಗಾಂವ್‌ನಲ್ಲಿ ಲಕ್ಷಾಂತರ ದಲಿತರನ್ನು ಪ್ರಚೋದಿಸಿದ ಆಪಾದನೆಯನ್ನು ಸ್ವಾಮಿ ಮತ್ತು ಇತರೆ ಹದಿನೈದು ಮಂದಿಯ ಮೇಲೆ ಹೊರಿಸಿ ಬಂಧಿಸಲಾಗಿತ್ತು. ಪ್ರಧಾನಿಯವರ ಹತ್ಯೆಗೆ ಸಂಚು ನಡೆಸಿದರೆಂಬ ಆಪಾದನೆಯನ್ನೂ ಇವರ ಮೇಲೆ ಹೇರಲಾಗಿದೆ.

ಭೀಮಾ ಕೋರೆಗಾಂವ್ ಪ್ರಕರಣದ ಇತರೆ 13 ಮಂದಿ ಬಂಧಿತರೂ ಹ್ಯಾಕಿಂಗ್ ಸಂಚಿನ ಬಲಿಪಶುಗಳಾಗಿದ್ದರೆ ಆಶ್ಚರ್ಯವಿಲ್ಲ ಎಂದೂ ಆರ್ಸೆನಾಲ್- ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ.

ಆಚರಣೆಯಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಇಡಿಯಾಗಿ ವಿರೋಧಿಸಿ, ನಿತ್ಯದ ಬದುಕಿನಲ್ಲಿ ದಲಿತ ದ್ವೇಷವನ್ನು ಕಾರುವ ಜಾತಿ ವರ್ಗಗಳ ಜೊತೆ ನಿಲ್ಲುತ್ತಿರುವ ಆಳುವವ ವರ್ಗ ಅಂಬೇಡ್ಕರ್ ಅವರಿಗೆ ತೋರುವ ಆದರವು ಅಪ್ಪಟ ಕಪಟ.

ದಲಿತರ ಮತಗಳನ್ನು ಸೆಳೆಯುವ ಒಂದು ಪ್ರತಿಮೆ- ಪ್ರತೀಕ- ಸ್ಮಾರಕವಾಗಿ ಪಕ್ಷ ಪರಿವಾರಗಳು ಅಂಬೇಡ್ಕರ್ ವರ್ಚಸ್ಸನ್ನು ದೋಚತೊಡಗಿವೆ. ನಿಜದ ಅಂಬೇಡ್ಕರ್ ಮತ್ತು ಅವರ ವಿಚಾರಧಾರೆಯನ್ನು ಬಗೆ ಬಗೆಯಾಗಿ ಕೊಲ್ಲಲಾಗುತ್ತಿದೆ. ಫಾದರ್ ಸ್ಟ್ಯಾನ್ ಸ್ವಾಮಿ ಅವರಿಗೆ ಅಗತ್ಯ ಚಿಕಿತ್ಸೆ ನೀಡದೆ ಜೈಲಿನಲ್ಲಿಯೇ ‘ಕೊಲ್ಲಲಾಯಿತು’. ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ, ವರವರರಾವ್, ಅರುಣ್ ಫೆರೀರ, ವೆರ್ನನ್ ಗೊನ್ಸಾಲ್ವಿಸ್, ಗೌತಮ್ ನವಲಖಾ ವರ್ಷಗಟ್ಟಲೆ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಬಿದ್ದಿದ್ದಾರೆ.

ಜ್ಯೋತಿ ರಘೋಬ ಜಗತಾಪ್, ಸಾಗರ್ ತಾತ್ಯರಾಮ್ ಗೋರ್ಖೆ, ರಮೇಶ್ ಮುರಳೀಧರ್ ಗೈಚೊರ್, ಸುಧೀರ್ ಧವಳೆ, ಸುರೇಂದ್ರ ಗಾಡ್ಲಿಂಗ್, ಮಹೇಶ್ ರಾವತ್, ಶೋಮಾ ಸೇನ್, ರೋನಾ ವಿಲ್ಸನ್ ಹನಿಬಾಬು ಈಗಲೂ ವಿಚಾರಣೆಯೇ ಇಲ್ಲದೆ ಜೈಲಿನಲ್ಲಿದ್ದಾರೆ.

2018ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ‘ಹಿಂಸಾಚಾರ’ ಕುರಿತು ವಿಚಾರಣಾ ಆಯೋಗವನ್ನು ನೇಮಿಸಿದ್ದರು. ವರದಿ ಸಲ್ಲಿಸಲು ನಾಲ್ಕು ತಿಂಗಳ ಗಡುವು ನೀಡಲಾಗಿತ್ತು. 16 ಬಾರಿ ಗಡುವು ವಿಸ್ತರಿಸಲಾಗಿದೆ. ನೇಮಕ ಮಾಡಿ ಏಳು ವರ್ಷಗಳೇ ಉರುಳಿವೆ. ಈಗಲೂ ವರದಿ ಸಲ್ಲಿಕೆಯಾಗಿಲ್ಲ. ಇತ್ತೀಚೆಗೆ ಬಿಜೆಪಿ ಮತ್ತು ಮಿತ್ರಪಕ್ಷಗಳು ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿದಿವೆ. ಪೇಶ್ವೆ ವಂಶಸ್ಥ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿಯಾಗಿದ್ದಾರೆ. ಅಂತಿಮವಾಗಿ ಇಂದಿನ ಸರ್ಕಾರದ ಬೇಕು ಬೇಡಗಳೇ ವರದಿಯಲ್ಲಿ ಬಿಂಬಿತವಾಗಲಿವೆ ಎಂಬ ಅನುಮಾನವನ್ನು ಆನಂದ್ ತೇಲ್ತುಂಬ್ಡೆ ವ್ಯಕ್ತಪಡಿಸಿದ್ದಾರೆ.

ದೇವೇಂದ್ರ ಫಡಣವೀಸ್ ಸರ್ಕಾರ ಕೋರೆಗಾಂವ್ ಭೀಮಾ ವಿಜಯೋತ್ಸವವನ್ನು ಬೆಂಬಲಿಸಿ ಭಾರೀ ಏರ್ಪಾಡುಗಳನ್ನು ಮಾಡಿರುವ ಹಿಂದಿನ ಉದ್ದೇಶಗಳನ್ನು ತೇಲ್ತುಂಬ್ಡೆ ಶಂಕಿಸಿದ್ದಾರೆ. ಈಗ ನೀಡಿರುವ ಭಾರೀ ಪೊಲೀಸ್ ಬಂದೋಬಸ್ತನ್ನು 2018ರಲ್ಲಿ ನೀಡದೇ ಹೋದದ್ದು ಯಾಕೆ? ಕೇಸರಿ ಬ್ರಿಗೇಡುಗಳ ಹಿಂಸಾಚಾರ ಯಾವುದೇ ಅಡಚಣೆ ಇಲ್ಲದೆ ನಡೆಯಲೆಂದೇನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ ಉತ್ತರ ಪ್ರದೇಶ | ಗೋಹತ್ಯೆ ಶಂಕೆ: ವ್ಯಕ್ತಿಯನ್ನು ಥಳಿಸಿ ಕೊಂದ ಸ್ವಘೋಷಿತ ಗೋರಕ್ಷಕರು

ಭಿನ್ನದನಿಗಳ ಆವರಣವನ್ನು ನಿಷ್ಕ್ರಿಯಗೊಳಿಸಿ ಅದನ್ನು ಪ್ರಭುತ್ವವೇ ಸ್ವಾಧೀನಪಡಿಸಿಕೊಳ್ಳುವ ದುರುದ್ದೇಶವಿದು. ದಲಿತ ಅಸ್ಮಿತೆ, ದಲಿತ ಇತಿಹಾಸ ಹಾಗೂ ಸಂಕೇತಗಳನ್ನು ನಿಯಂತ್ರಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಬಹುಸೂಕ್ಷ್ಮ ಹುನ್ನಾರ. ದೀಕ್ಷಾ ಭೂಮಿ, ಚೈತ್ಯಭೂಮಿ ಹಾಗೂ ಕೋರೆಗಾಂವ್ ಭೀಮಾ ವಿಜಯಸ್ತಂಭದಂತಹ ದಲಿತ ಪ್ರತೀಕಗಳನ್ನು ವಶಪಡಿಸಿಕೊಂಡು ಅವುಗಳ ದಲಿತ ಕಥಾನಕವನ್ನು ಬದಲಿಸಿ ಅವುಗಳ ಜಾಗದಲ್ಲಿ ಹಿಂದುತ್ವ ನಿರೂಪಣೆಗಳನ್ನು ಹೆಣೆದು ಸ್ಥಾಪಿಸುವುದೇ ಈ ಹುನ್ನಾರದ ದೂರಗಾಮಿ ದುರುದ್ದೇಶ ಎಂದಿದ್ದಾರೆ ತೇಲ್ತುಂಬ್ಡೆ.

ವಾಸ್ತವತೆಗೆ ಅತ್ಯಂತ ಸಮೀಪದಲ್ಲಿರುವ ವಿಶ್ಲೇಷಣೆಯಿದು. ದಮನಿತ ಜನಾಂಗಗಳು ಈ ಬೆಳವಣಿಗೆಗಳನ್ನು ಹೆಚ್ಚು ಎಚ್ಚರದಿಂದ ಗಮನಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X