ಈ ದಿನ ಸಂಪಾದಕೀಯ | ಗೋಪಾಲ್ ಜೋಶಿ ಪ್ರಕರಣ ಮತ್ತು ಮಾರಿಕೊಂಡ ಮಾಧ್ಯಮಗಳು

Date:

ರಾಜ್ಯ ರಾಜಕಾರಣದಲ್ಲಿ ಹಗರಣ, ಭ್ರಷ್ಟಾಚಾರ, ವಂಚನೆ, ಆಮಿಷ, ಬೆದರಿಕೆಗಳ ಸದ್ದು ಹೆಚ್ಚಾಗಿದೆ. ಡಿನೋಟಿಫಿಕೇಷನ್ ಹಗರಣ, ಕೋವಿಡ್ ಹಗರಣ, ಮುಡಾ ಹಗರಣಗಳ ಸುತ್ತ ಭಾರೀ ಚರ್ಚೆಯಾಗುತ್ತಿದೆ. ಮಾಧ್ಯಮಗಳು ಇಬ್ಬಂದಿ ಧೋರಣೆಯೊಂದಿಗೆ ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು, ಡಿನೋಟಿಫೈ ಮತ್ತು ಕೋವಿಡ್ ಹಗರಣವನ್ನು ಮರೆಮಾಚುತ್ತಿವೆ. ಈಗ ಈ ಸಾಲಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿಯ ವಂಚನೆ ಕೃತ್ಯವೂ ಸೇರಿಕೊಂಡಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇಂದು ಭರವಸೆ ನೀಡಿ, ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಅವರ ಪತ್ನಿ ಸುನೀತಾ ಅವರಿಂದ ಗೋಪಾಲ್ ಜೋಶಿ 2 ಕೋಟಿ ರೂ. ಹಣ ಪಡೆದುಕೊಂಡು ವಂಚಿಸಿದ್ದಾರೆ. ಹಣ ವಾಪಸ್ ಕೇಳಲು ಹೋದವರಿಗೆ ಗೋಪಾಲ್ ಮಗ ಅಜಯ್ ಜೋಶಿ ಮತ್ತು ವಿಜಯಕುಮಾರಿ ಎಂಬುವವರು ಜಾತಿ ನಿಂದನೆ ಮಾಡಿ, ಬೆದರಿಕೆ ಹಾಕಿ ಕಳಿಸಿದ್ದಾರೆ. ಬೇಸತ್ತ ಸುನೀತಾ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಬಿಎನ್‌ಎಸ್‌ ಮತ್ತು ಎಸ್‌ಸಿ/ಎಸ್‌ (ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಗೋಪಾಲ್ ಜೋಶಿ ತಮ್ಮನ್ನು ಆತನ ಸಹೋದರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯ ಕಚೇರಿಗೆ ಕರೆಸಿಕೊಂಡು ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಇಲ್ಲಿನ ಮುಖ್ಯವಾದ ವಿಚಾರ. ಜೊತೆಗೆ, ಆ ಹಣವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಿಎಗೆ ಕಳಿಸುತ್ತೇನೆ ಎಂದಿದ್ದರು ಎನ್ನುವುದು ಮತ್ತೊಂದು ಅಂಶ. ಪರಿಣಾಮ, ಗೋಪಾಲ್ ಜೋಶಿಯ ವಂಚನೆ ಪ್ರಕರಣದಲ್ಲಿ ಪ್ರಲ್ಹಾದ್ ಜೋಶಿ ಮತ್ತು ಅಮಿತ್‌ ಶಾ ಹೆಸರುಗಳೂ ತಳಕು ಹಾಕಿಕೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಈ ವಂಚನೆ ಪ್ರಕರಣ ಮುನ್ನೆಲೆಗೆ ಬಂದರೆ, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾದರೆ ಬಿಜೆಪಿಗೆ ಮುಜುಗರ. ಅದರಲ್ಲೂ ಸಚಿವ ಪ್ರಲ್ಹಾದ್ ಜೋಶಿ ಮತ್ತು ಅಮಿತ್‌ ಶಾಗಳಿಗೆ ಉತ್ತರಿಸುವುದು ಕಷ್ಟವಾಗುತ್ತದೆ. ಆ ಕಾರಣಕ್ಕಾಗಿಯೇ, ಗೋಪಾಲ್ ಅವರ ಕರ್ಮಕಾಂಡ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜೊತೆಗೆ, ಜನರ ಚಿತ್ತವನ್ನು ಬೇರೆಡೆಗೆ ತಿರುಗಿಸುವ (ಕು)ತಂತ್ರವೂ ನಡೆದಿದೆ.

ಈ ತಂತ್ರದಿಂದಲೇ ಶನಿವಾರ ಇದ್ದಕ್ಕಿದ್ದಂತೆ ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಮುಡಾ ಕಚೇರಿ ಮೇಲೆ ಇಡಿ ದಾಳಿ ನಡೆದಿದೆ. ಇಡಿ ದಾಳಿಯನ್ನು ಹಿಂದೆಯೇ ನಿರೀಕ್ಷಿಸಲಾಗಿತ್ತು. ಆದರೆ, ಸಿದ್ದರಾಮಯ್ಯರನ್ನು ಭ್ರಷ್ಟರೆಂದು ಬಿಂಬಿಸ ಹೊರಟ ಬಿಜೆಪಿಗೆ ಈ ಪ್ರಕರಣದಲ್ಲಿ, ಅವರನ್ನು ದೂರಿದಂತೆಲ್ಲ ಬಿಜೆಪಿಯ ವಿರುದ್ಧವೇ ಜನಾಭಿಪ್ರಾಯ ರೂಪುಗೊಳ್ಳಲಾರಂಭಿಸಿತು. ಪರಿಣಾಮ, ಮುಡಾ ಪ್ರಕರಣದಲ್ಲಿ ಆರಂಭದಲ್ಲಿ ಅಬ್ಬರಿಸಿದ್ದ ಬಿಜೆಪಿ, ನಂತರದಲ್ಲಿ ಮೌನ ತಾಳಿತು. ವಿಚಾರಗಳನ್ನು ಬೇರೆಡೆಗೆ ಸೆಳೆಯಲಾರಂಭಿಸಿತು.

ಆದರೆ, ಗೋಪಾಲ್ ಜೋಶಿ ವಂಚನೆ ಬಹಿರಂಗವಾಗುತ್ತಿದ್ದಂತೆಯೇ ಮುಡಾ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಇ.ಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಆಸಕ್ತಿದಾಯಕ ವಿಚಾರವೆಂದರೆ, ಶನಿವಾರ ನಡೆದ ಇ.ಡಿ ದಾಳಿಯ ನೇತೃತ್ವ ವಹಿಸಿದ್ದವರು ಐಪಿಎಸ್ ಅಧಿಕಾರಿ ಅಭಿಷೇಕ್ ಗೋಯೆಲ್‌. ಇವರನ್ನು ಇ.ಡಿಯ ಕರ್ನಾಟಕ ವಿಭಾಗಕ್ಕೆ ವಿಶೇಷ ನಿರ್ದೇಶಕರಾಗಿ ನೇಮಿಸಿದವರೇ ಪ್ರಲ್ಹಾದ್ ಜೋಶಿ ಎಂಬ ಮಾತುಗಳಿವೆ. ಇದೇ, ಅಭಿಷೇಕ್ ಗೋಯೆಲ್ ಅವರು 2015ರಲ್ಲಿ ಹೈದ್ರಾಬಾದ್‌ನ ನ್ಯಾಷನಲ್‌ ಪೊಲೀಸ್ ಅಕ್ಯಾಡೆಮಿಯಲ್ಲಿ ತರಬೇತಿ ಪಡೆಯುವಾಗ ತರಬೇತುದಾರ ಪೊಲೀಸ್ ಅಧಿಕಾರಿಗಳಿಗೇ ಕಂಟಕವಾಗಿದ್ದವರು. ಅವರ ಉಪಟಳವನ್ನು ಸಹಿಸಲಾರದೆ, ಅಂದಿನ ಟ್ರೈನಿಂಗ್ ಆಫೀಸರ್ ಕರ್ನಾಟಕದ ಡಿಜಿ-ಐಜಿಪಿಯಾಗಿದ್ದ ಓಂ ಪ್ರಕಾಶ್ ಅವರಿಗೆ ಪತ್ರ ಬರೆದಿದ್ದರು. ನಡವಳಿಕೆ ಸರಿಯಿಲ್ಲ ಎಂದು ದೂರಿದ್ದರು. ಗೋಯೆಲ್ ವಿರುದ್ಧ ತನಿಖೆಯನ್ನೂ ನಡೆಸಲಾಗಿತ್ತು. ಆಗ, ಗೋಯೆಲ್ ರಕ್ಷಣೆಗೆ ಬಂದದ್ದೂ ಕೂಡ ಇದೇ ಪ್ರಲ್ಹಾದ್ ಜೋಶಿ ಎಂಬ ಮಾತುಗಳಿವೆ.

ಈಗ, ಜೋಶಿಯವರ ಆಪ್ತರಾಗಿದ್ದ ಇದೇ ಗೋಯೆಲ್, ಮುಡಾ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ದಾಳಿಯ ಹಿಂದೆ ಜೋಶಿ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆ. ಜೋಶಿ ಸಹೋದರನ ವಂಚನೆಯನ್ನು ಬಿತ್ತರಿಸಲಾಗದೆ ತಿಣುಕಾಡುತ್ತಿದ್ದ ಮಾಧ್ಯಮಗಳಿಗೆ ಈಗ ಮುಡಾ ಕಚೇರಿ ಮೇಲಿನ ಇ.ಡಿ ದಾಳಿ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವಾಗಿದೆ. ಮುಡಾ ಪ್ರಕರಣವನ್ನು ಮತ್ತೆ ಚರ್ಚೆಗೆ ತಂದಿವೆ. ಗಂಟೆಗಟ್ಟಲೆ ಕಾರ್ಯಕ್ರಮಗಳನ್ನು ಮಾಡುತ್ತಿವೆ. ಜೋಶಿ ಪ್ರಕರಣವನ್ನು ಮರೆ ಮಾಚುತ್ತಿವೆ.

ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಎಚ್‌ಡಿಕೆ V/s ಎಡಿಜಿಪಿ ಚಂದ್ರಶೇಖರ್‌- ಇದು ಸಾಮಾನ್ಯ ವಿದ್ಯಮಾನವಲ್ಲ

ಮುಡಾ ಕಚೇರಿ ಮೇಲೆ ದಾಳಿ ನಡೆಸಿರುವ ಇಡಿ, ಹಣ ಪಡೆದು ವಂಚಿಸಿರುವ ಗೋಪಾಲ್ ಜೋಶಿ ವಿರುದ್ಧ ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಇ.ಡಿ ವಂಚನೆ ಪ್ರಕರಣ ಯಾವಾಗ ದಾಖಲಿಸಿಕೊಳ್ಳುತ್ತದೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಈ ನಡುವೆ, ಜೋಶಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ ಎಂಬ ಒತ್ತಾಯಗಳೂ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ‘ಪಂಜರದ ಗಿಳಿ’ಯಾಗಿರುವ ಸಿಬಿಐ ಕೈಗೆ ಪ್ರಕರಣದ ತನಿಖೆ ದೊರೆತರೆ, ಪ್ರಕರಣ ಏನಾಗಬಹುದು ಎಂಬುದು ಎಲ್ಲರಿಗೂ ಗೊತ್ತಿದೆ.

ಅಂದಹಾಗೆ, 2009-10ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಗೋಪಾಲ್ ಜೋಶಿ ಕೆನರಾ ಬ್ಯಾಂಕ್‌ನಲ್ಲಿ ಮಾರ್ಕೆಟಿಂಗ್ ಆಫೀಸರ್ ಆಗಿದ್ದರು. ಸಹೋದರ, ಬಿಜೆಪಿ ಸಂಸದ ಪ್ರಲ್ಹಾದ್ ಜೋಶಿ ರಾಜಕೀಯ ಪ್ರಭಾವ ಬಳಸಿ ಮೈಸೂರು ಮಿನರಲ್ಸ್, ಕರ್ನಾಟಕ ಬೆವರೇಜಸ್, ಬಿಎಂಆರ್‍‌ಡಿಎ, ಹಟ್ಟಿ ಗೋಲ್ಡ್ ಮೈನ್ಸ್, ರಾಜೀವ್ ಗಾಂಧಿ ಆರೋಗ್ಯ ವಿವಿ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳಿಂದ ಬರೋಬ್ಬರಿ 1,200 ಕೋಟಿ ರೂ. ನಿಶ್ಚಿತ ಠೇವಣಿ ಸಂಗ್ರಹಿಸಿದ್ದರು. ಆ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾಯಿಸಿ, ಹೆಚ್ಚಿನ ಬಡ್ಡಿಗೆ ಬಿಟ್ಟು, ಹಣ ಲೂಟಿ ಮಾಡಿದ್ದನ್ನು ಕೆನರಾ ಬ್ಯಾಂಕ್ ಅಧಿಕಾರಿಗಳೇ ಸಿಬಿಐಗೆ ದೂರು ದಾಖಲಿಸಿದ್ದರು. ಪ್ರಕರಣ ಬಯಲಾದಾಗ ಪ್ರಲ್ಹಾದ್ ಜೋಶಿ ಸಂಸದರಾಗಿದ್ದರು. ತೆವಳುತ್ತಲೇ ತನಿಖೆ ನಡೆಸಿದ ಸಿಬಿಐ, 2014ರಲ್ಲಿ ಮೋದಿ ಪ್ರಧಾನಿಯಾಗುತ್ತಿದ್ದಂತೆ ಗೋಪಾಲ್ ಜೋಶಿ ನಿರ್ದೋಷಿ ಎಂದು ಸಿಬಿಐ ಘೋಷಿಸಿತು. ಪ್ರಕರಣ ಮುಚ್ಚಿಹೋಯಿತು.

ಸಿಬಿಐ ನಡೆಸಿದ ಹಲವಾರು ಪ್ರಕರಣಗಳು ಇದೇ ರೀತಿ ಹಳ್ಳ ಹಿಡಿದಿರುವ ನಿದರ್ಶನಗಳು ಕಣ್ಣೆದುರೇ ಇವೆ. ಹೀಗಾಗಿಯೇ, ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ತಮ್ಮ ಪಕ್ಷದೊಳಗಿನವರ ವಿರುದ್ಧ ಕೇಳಿ ಬರುವ ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೊಡುವಂತೆ ಒತ್ತಾಯಿಸುತ್ತಾರೆ. ಈಗ, ಜೋಶಿ ಪ್ರಕರಣವನ್ನೂ ಮುಚ್ಚಿಹಾಕುವ ಉದ್ದೇಶಕ್ಕಾಗಿಯೇ ಸಿಬಿಐ ತನಿಖೆ ಎಂಬ ದಾಳ ಉರುಳಿಸಲಾಗಿದೆ. ಇದೆಲ್ಲ ಗೊತ್ತಿದ್ದರೂ, ಮಾಧ್ಯಮಗಳು ಮೌನವಾಗಿವೆ. ಮಾತ್ರವಲ್ಲ, ಮಾರಿಕೊಂಡಿವೆ. ಕಳೆದ 10 ವರ್ಷಗಳಲ್ಲಿ ನೈತಿಕವಾಗಿ ದಿವಾಳಿಯಾಗಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಎಚ್‌ಡಿಕೆ V/s ಎಡಿಜಿಪಿ ಚಂದ್ರಶೇಖರ್‌- ಇದು ಸಾಮಾನ್ಯ ವಿದ್ಯಮಾನವಲ್ಲ

ಕಾನೂನಿನ ಪ್ರಕಾರ ಹಾಗೂ ನ್ಯಾಯಸಂಹಿತೆಯಂತೆ ಎಡಿಜಿಪಿ ಚಂದ್ರಶೇಖರ್‌ ಸರಿಯಾಗಿಯೇ ಮಾಡುತ್ತಿದ್ದಾರೆ. ಈ...

ಈ ದಿನ ಸಂಪಾದಕೀಯ | ಮುಂಬೈನ ಧಾರಾವಿ ಕೊಳೆಗೇರಿ ಪುನರಭಿವೃದ್ಧಿ ಎಂಬ ದೈತ್ಯ ಹಗರಣ

ಮುಂಬೈನ ಧಾರಾವಿ ಕೊಳೆಗೇರಿಯನ್ನು ಪುನರಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯ...

ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು

187 ಕೋಟಿ ಖರ್ಚು ಮಾಡಿ, ನಾಲ್ಕು ವರ್ಷ ನಾಡಿನ ಶಿಕ್ಷಕರು ರಾಜ್ಯದಾದ್ಯಂತ...

ಈ ದಿನ ಸಂಪಾದಕೀಯ | ಜಮ್ಮು- ಕಾಶ್ಮೀರ ; ಚುನಾಯಿತ ಸರ್ಕಾರ ಬಂದರೂ ಉಪರಾಜ್ಯಪಾಲರೇ ಸರ್ವಾಧಿಕಾರಿ!

ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ...