ಈ ದಿನ ಸಂಪಾದಕೀಯ | ರಾಜ್ಯಪಾಲರ ಹದ್ದು ಮೀರಿದ ವರ್ತನೆ- ಗೆರೆ ಎಳೆಯುವುದೇ ಕಾಯ್ದಿರಿಸಿರುವ ಸುಪ್ರೀಮ್ ತೀರ್ಪು?

Date:

Advertisements

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಕಳೆದ ಎರಡು ವರ್ಷಗಳಿಂದ ವಾಕೌಟ್ ಮಾಡಿದ್ದಕ್ಕೆ ನೀಡಿರುವ ಸಮರ್ಥನೆ- ಅಧಿವೇಶನದ ಆರಂಭದಲ್ಲಿ ‘ತಮಿಳ್ ತಾಯ್ ವಾಳತ್ತು’ ಎಂಬ ತಮಿಳುನಾಡಿನ ನಾಡಗೀತೆಯನ್ನು ನುಡಿಸಲಾಯಿತು. ರಾಷ್ಟ್ರಗೀತೆಯನ್ನು ಮುಕ್ತಾಯದ ಹಂತಕ್ಕೆ ‘ತಳ್ಳಲಾಯಿತು.’ 2024 ಮತ್ತು 2025ರ ಅಧಿವೇಶನಗಳಲ್ಲಿ ಈ ಕಾರಣ ನೀಡಿಯೇ ಸಭಾತ್ಯಾಗ ಮಾಡಿದ್ದರು

ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ತೀವ್ರ ವಿವಾದಿತ ವ್ಯಕ್ತಿ. ಕಳೆದ ಮೂರು ವರ್ಷಗಳ ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯಪಾಲ ಪದವಿ ಶ್ರೇಷ್ಠ, ಚುನಾಯಿತ ರಾಜ್ಯ ಸರ್ಕಾರ ಕನಿಷ್ಠ ಎಂಬಂತೆ ನಡೆದುಕೊಂಡು ಬಂದಿದ್ದಾರೆ. ಕಳೆದ ತಿಂಗಳು ಅವರು ವಿಧಾನಸಭೆಯಿಂದ ಸತತ ಮೂರನೆಯ ಸಲ ‘ವಾಕೌಟ್’ ಮಾಡಿ ಸಾಧಿಸಿರುವ ‘ಹ್ಯಾಟ್ರಿಕ್’ ವಿಡಂಬನೆಯ ವಿಷಯವೇ ವಿನಾ ಹೆಮ್ಮೆ ತರುವಂತಹುದೇನಲ್ಲ.

ಕಳೆದ ಎರಡು ವರ್ಷಗಳಿಂದ ಅವರು ವಾಕೌಟ್ ಮಾಡಿದ್ದಕ್ಕೆ ನೀಡಿರುವ ಸಮರ್ಥನೆ- ಅಧಿವೇಶನದ ಆರಂಭದಲ್ಲಿ ‘ತಮಿಳ್ ತಾಯ್ ವಾಳತ್ತು’ ಎಂಬ ತಮಿಳುನಾಡಿನ ನಾಡಗೀತೆಯನ್ನು ನುಡಿಸಲಾಯಿತು. ರಾಷ್ಟ್ರಗೀತೆಯನ್ನು ಮುಕ್ತಾಯದ ಹಂತಕ್ಕೆ ‘ತಳ್ಳಲಾಯಿತು.’ 2024 ಮತ್ತು 2025ರ ಅಧಿವೇಶನಗಳಲ್ಲಿ ಈ ಕಾರಣ ನೀಡಿಯೇ ಸಭಾತ್ಯಾಗ ಮಾಡಿದ್ದರು.

2023ರಲ್ಲಿ ರಾಜ್ಯಪಾಲರ ಭಾಷಣದಲ್ಲಿದ್ದ ಪೆರಿಯಾರ್ (ತಮಿಳುನಾಡಿನ ಕ್ರಾಂತಿಕಾರಿ ಸಮಾಜಸುಧಾರಕ ಇವಿ ರಾಮಸ್ವಾಮಿ ನಾಯ್ಕರ್), ಅಣ್ಣಾ (ತಮಿಳುನಾಡಿನ  ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ), ಬಿ.ಆರ್.ಅಂಬೇಡ್ಕರ್  ಹಾಗೂ ಕಲೈಂಗರ್ (ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ) ಅವರ ಹೆಸರುಗಳನ್ನು ಓದಲು ನಿರಾಕರಿಸಿದ್ದರು. ನೀತಿಗಳೂ ಇರಲಿಲ್ಲ, ಕಾರ್ಯಕ್ರಮಗಳೂ ಆಗಿರಲಿಲ್ಲ. ಕೇವಲ ಪ್ರಾಪಗ್ಯಾಂಡ ಆಗಿತ್ತು. ಸುಳ್ಳುಗಳಿಂದ ತುಂಬಿತ್ತು ಎಂದು ಪತ್ರಿಕೆಗಳಿಗೆ ನೆಪ ಹೇಳಿದ್ದರು.

ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರು ವಿಧಾನಮಂಡಲ ಮತ್ತು ಸಂಸತ್ತಿನ ಜಂಟಿ ಅಧಿವೇಶನಗಳನ್ನು ಉದ್ದೇಶಿಸಿ ಮಾಡುವ ಭಾಷಣಗಳನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿಯವರು ಬರೆದಿರುವುದಿಲ್ಲ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಬರೆದ ಭಾಷಣಗಳನ್ನು ಓದುತ್ತಾರೆ. ಅನೂಚಾನವಾಗಿ ನಡೆದುಕೊಂಡ ಬಂದ ಸಂವಿಧಾನಾತ್ಮಕ ಕರ್ತವ್ಯ. ಈವರೆಗಿನ ರಾಜ್ಯಪಾಲರು ರಾಷ್ಟ್ರಪತಿಯವರು ಈ ಸಂವಿಧಾನಾತ್ಮಕ ಪರಂಪರೆಯನ್ನು ಮೀರದೆ ಅನುಸರಿಸಿಕೊಂಡು ಬಂದಿದ್ದಾರೆ. ಕೆ.ಆರ್. ನಾರಾಯಣನ್ ರಾಷ್ಟ್ರಪತಿಯಾಗಿದ್ದ ಕೆಲ ವರ್ಷಗಳಲ್ಲಿ ಕೇಂದ್ರದಲ್ಲಿ ವಾಜಪೇಯಿ ಅವರ ಸರ್ಕಾರವಿತ್ತು. ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿದ್ದ ಕೆಲ ವರ್ಷಗಳ ಕಾಲ ಮೋದಿ ಸರ್ಕಾರವಿತ್ತು. ಈಗಲೂ ಅವರದೇ ಸರ್ಕಾರವಿದೆ. ವಾಜಪೇಯಿ ಸರ್ಕಾರ ಮತ್ತು ಮೋದಿ ಸರ್ಕಾರಗಳು ಬರೆದಿದ್ದ ಭಾಷಣಗಳನ್ನು ಕಾಂಗ್ರೆಸ್ ಹಿನ್ನೆಲೆಯವರಾದರೂ ಓದಿದರು. ಸಂವಿಧಾನಾತ್ಮಕ ಕರ್ತವ್ಯವನ್ನು ಎತ್ತಿ ಹಿಡಿಯಲಿಲ್ಲವೇ? ರಾಜ್ಯ ಸರ್ಕಾರ ತಯಾರು ಮಾಡಿಕೊಟ್ಟ ಭಾಷಣವನ್ನು ಜಂಟಿ ಅಧಿವೇಶನದಲ್ಲಿ ಓದುವುದು ರಾಜ್ಯಪಾಲರ ಕರ್ತವ್ಯ ಎಂದು ಸಂವಿಧಾನದ 176(1) ಅನುಚ್ಛೇದ ಸಾರುತ್ತದೆ.

ನಾಡಗೀತೆಯನ್ನು ಆರಂಭದಲ್ಲಿ ಹಾಡಿ, ಮುಕ್ತಾಯದ ಹಂತದಲ್ಲಿ ರಾಷ್ಟ್ರಗೀತೆಯನ್ನು ಹಾಡುವ ಪರಂಪರೆಯನ್ನು ತಮಿಳುನಾಡು ಸದನದ್ದು. ನಾಡಗೀತೆಯನ್ನು ಆರಂಭದಲ್ಲೇ ಹಾಡಿದ್ದು ರಾಜ್ಯಪಾಲ ರವಿ ಪಾಲಿನ ಅಸಲಿ ಸಮಸ್ಯೆ. ಹಾಗಿದ್ದರೆ ರಾಷ್ಟ್ರಗೀತೆಗೆ ಮುನ್ನ ನಮಸ್ತೇ ಸದಾ ವತ್ಸಲೇ ಮಾತೃಭೂಮೇ ಎಂಬ ಆರೆಸ್ಸೆಸ್ ಪ್ರಾರ್ಥನೆಯನ್ನು ರಾಷ್ಟ್ರಗೀತೆಗೆ ಮುನ್ನ ಹಾಡಿದರೆ ಅಂತಹ ಸಭೆಗಳಿಂದಲೂ ರಾಜ್ಯಪಾಲ ರವಿ ಹೊರನಡೆಯುತ್ತಾರೆಯೇ ಎಂದು ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ಸಂಜಯ ಹೆಗಡೆ ಪ್ರಶ್ನಿಸಿದ್ದರು.

ರಾಜ್ಯಪಾಲ ರವಿ ಅವರು ತಮಿಳುನಾಡು ವಿಧಾನಸಭೆ ರಾಜ್ಯದ ಆಗು ಹೋಗುಗಳಿಗೆ ಸಂಬಂಧಿಸಿದಂತೆ ಅಂಗೀಕರಿಸಿದ ಸಾಲು ಸಾಲು ವಿಧೇಯಕಗಳಿಗೆ ವರ್ಷಗಟ್ಟಲೆ ಅಂಗೀಕಾರ ನೀಡದೆ ಬಾಕಿ ಇರಿಸಿಕೊಂಡು ರಾಷ್ಟ್ರಪತಿಯವರಿಗೆ ಕಳಿಸಿದ್ದರು. ಈ ಸಂಬಂಧದಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆಯನ್ನು ಮೊನ್ನೆಯಷ್ಟೇ ಮುಕ್ತಾಯಗೊಳಿಸಿದ ಸುಪ್ರೀಮ್ ಕೋರ್ಟು, ರವಿಯವರ ಈ ವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸಂವಿಧಾನಬಾಹಿರ ನಡೆಯಲ್ಲವೇ ಎಂದು ಪ್ರಶ್ನಿಸಿದೆ. ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ.

ಕೇಂದ್ರ ಸರ್ಕಾರದ ನಿಲುವಿಗೆ ಅಥವಾ ಕಾಯಿದೆ ಕಾನೂನುಗಳಿಗೆ ಹೋಲಿಸಿ ಸಮಂಜಸವಾಗಿಲ್ಲ ಎಂದು ಈ ವಿಧೇಯಕಗಳನ್ನು ಬಾಕಿ ಇಟ್ಟುಕೊಳ್ಳುವುದು ಸಲ್ಲದು ಎಂದಿತ್ತು. ವಿಧಾನಸಭೆ ಎರಡನೆಯ ಸಲ ಅಂಗೀಕರಿಸಿ ಕಳಿಸಿದ ವಿಧೇಯಕಗಳಿಗೆ ಅಂಕಿತ ಹಾಕುವುದು ಸಂವಿಧಾನದ 200ನೆಯ ಕಲಮಿನ ಪ್ರಕಾರ ಕಡ್ಡಾಯ ಕರ್ತವ್ಯ. ಈ ಕರ್ತವ್ಯವನ್ನು ನೀವು ಉಲ್ಲಂಘಿಸಿದ್ದಾದರೂ ಹೇಗೆ ಪ್ರಶ್ನೆಯನ್ನು ಕೇಳಿತ್ತು.

ಮೈಕ್ರೋಫೈನಾನ್ಸ್ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಹೊರಡಿಸಿದ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಮೊದಲ ಸಲ ತಿರಸ್ಕರಿಸಿದ್ದರು. ಮೈಕ್ರೋ ಫೈನಾನ್ಸ್ ಕಂಪನಿಗಳ ತಪ್ಪಿತಸ್ಥರಿಗೆ ನೀಡಲು ಉದ್ದೇಶಿಸಲಾಗಿರುವ ಶಿಕ್ಷೆ ಬಹಳ ಕಠಿಣವಾಗಿದೆ ಎಂದು ಆಕ್ಷೇಪ ಎತ್ತಿದ್ದರು. ಆದರೆ, ರಾಜ್ಯ ಸರ್ಕಾರ ಇದೇ ಸುಗ್ರೀವಾಜ್ಞೆಯ ಪ್ರತಿಯನ್ನು ಎರಡನೆಯ ಸಲ ಕಳಿಸಿದ ನಂತರ ಬುಧವಾರ ತಡರಾತ್ರಿ ರಾಜ್ಯಪಾಲರು ಅಂಕಿತ ಹಾಕಲೇಬೇಕಾಯಿತು. ಇತ್ತೀಚಿನ ತನಕ ಕೇರಳದ ಎಡಂಪಂಥೀಯ ಸರ್ಕಾರವನ್ನು ಮಗ್ಗುಲ ಮುಳ್ಳಿನಂತೆ ಕಾಡಿದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಕೂಡ ಆರ್.ಎನ್.ರವಿ ಅವರದೇ ಪ್ರವೃತ್ತಿ ಹೊಂದಿದ್ದರು. ಕೇರಳ ಸರ್ಕಾರವೂ ಅವರ ವಿರುದ್ಧ ಸುಪ್ರೀಮ್ ಕೋರ್ಟ್ ಕದ ಬಡಿದಿತ್ತು.

“ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ” ಎಂದು ಸುಪ್ರೀಮ್ ಕೋರ್ಟು ವರ್ಷದ ಹಿಂದೆ ಪಂಜಾಬಿನ ರಾಜ್ಯಪಾಲರಿಗೆ ಚಾಟಿ ಬೀಸಿದ್ದ ಬೆಳವಣಿಗೆ ದೊಡ್ಡ ಅಲೆಗಳನ್ನು ಎಬ್ಬಿಸಬೇಕಿತ್ತು. ಚುನಾಯಿತ ರಾಜ್ಯ ಸರ್ಕಾರಗಳನ್ನು ಕೆಡವುವ ರಾಜಕಾರಣದಲ್ಲಿ ರಾಜ್ಯಪಾಲರು ಸಕ್ರಿಯವಾಗಿ ಭಾಗಿಗಳಾಗುತ್ತಿದ್ದಾರೆಂದು ಸುಪ್ರೀಮ್ ಒಂದೂವರೆ ವರ್ಷದ ಹಿಂದೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ರಾಜ್ಯಪಾಲರ ಪಕ್ಷಪಾತ, ಪೂರ್ವಗ್ರಹದ ನಡೆಗಳ ಕುರಿತು ಸರ್ವೋಚ್ಚ ನ್ಯಾಯಾಲಯ ಬಿರುನುಡಿಗಳನ್ನು ಬಹುಕಾಲದಿಂದ ಆಡುತ್ತ ಬಂದಿದೆ.

ತಮಿಳುನಾಡು, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ ಹೀಗೆ ಹಲವು ರಾಜ್ಯಗಳು ರಾಜ್ಯಪಾಲರು ಪಕ್ಷ ರಾಜಕಾರಣದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಸುಪ್ರೀಮ್ ಕೋರ್ಟ್ ಕದ ಬಡಿದಿವೆ. ಸಂವಿಧಾನದ ಅಡಿಪಾಯವನ್ನೇ ಅಲುಗಿಸುವ ಕೃತ್ಯಗಳಲ್ಲಿ ರಾಜ್ಯಪಾಲರು ತೊಡಗಿದ್ದಾರೆಂಬ ಆರೋಪ ಕಳೆದ ಏಳೆಂಟು ವರ್ಷಗಳಲ್ಲಿ ಅತ್ಯಧಿಕವಾಗಿ ಕೇಳಿಬರುತ್ತಿದೆ. ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ವಿಧೇಯಕಗಳನ್ನು ಅನಿರ್ದಿಷ್ಟ ಕಾಲ ತಡೆಹಿಡಿಯುತ್ತಿರುವುದು ಇತ್ತೀಚಿನ ದುಷ್ಟ ತಂತ್ರ. ಅಂಕಿತ ನೀಡುವ ಈ ಅಧಿಕಾರವನ್ನು ರಾಜ್ಯಪಾಲರು ಅಸ್ತ್ರವನ್ನಾಗಿ ಬಳಸತೊಡಗಿದ್ದಾರೆ. ಈ ತಂತ್ರವನ್ನು ಅಕ್ರಮ, ಸಂವಿಧಾನಬಾಹಿರವೆಂದು ಸಾರುವಂತೆ ರಾಜ್ಯ ಸರ್ಕಾರಗಳು ಸುಪ್ರೀಮ್ ಕೋರ್ಟನ್ನು ವಿನಂತಿಸಿವೆ.

ರಾಜ್ಯಪಾಲರುಗಳ ಅಸಹನೆ ಅಸಹಕಾರ ವಿಶೇಷವಾಗಿ ಪ್ರತಿಪಕ್ಷಗಳ ಸರ್ಕಾರಗಳಿಗೆ ಮೀಸಲು. ಪ್ರತಿಪಕ್ಷಗಳ ಸರ್ಕಾರಗಳಿಗೆ ಅಡ್ಡಿ ಆತಂಕಗಳನ್ನು ಒಡ್ಡುವುದು ಕೇಂದ್ರ ಬಿಜೆಪಿ ಸರ್ಕಾರ ನೇಮಕ ಮಾಡಿದ ರಾಜ್ಯಪಾಲರ ನೇರ ಕಾರ್ಯಸೂಚಿಯೇ ಆಗಿಬಿಟ್ಟಿದೆ. ಕೇರಳ ವಿಧಾನಸಭೆ ಅಂಗೀಕರಿಸಿದ ಕೆಲ ವಿಧೇಯಕಗಳು ಎರಡು ವರ್ಷಗಳಿಗೂ ಮೀರಿ ತಿರುವನಂತಪುರದ ರಾಜಭವನದಲ್ಲಿ ಧೂಳು ಹಿಡಿಯುತ್ತಿವೆ. ಇಷ್ಟು ದೀರ್ಘಕಾಲ ಅಂಗೀಕಾರ ನೀಡದೆ ರಾಜ್ಯಪಾಲರು ಅವುಗಳನ್ನು ಬಾಕಿ ಇರಿಸಿಕೊಳ್ಳಲು ಕಾರಣಗಳೇ ಇಲ್ಲ. ಅಗತ್ಯವಿದ್ದರೆ ಸ್ಪಷ್ಟೀಕರಣಗಳನ್ನು ಕೇಳಬಹುದು, ವಿಧಾನಸಭೆಗೆ ವಾಪಸು ಕಳಿಸಬಹುದು ಇಲ್ಲವೇ ರಾಷ್ಟ್ರಪತಿಯವರ ಅಂಕಿತಕ್ಕೆ ರವಾನಿಸಬಹುದು. ನ್ಯಾಯಬದ್ಧ ಕಾರಣವಿಲ್ಲದೆ ಅವುಗಳನ್ನು ತಡೆದು ಇರಿಸಿಕೊಳ್ಳುವುದು ಉದ್ದೇಶಪೂರ್ವಕ ಅಡಚಣೆ. ಮತದಾರರು ಆರಿಸಿದ ವಿಧಾನಸಭೆಗೆ ಮಾಡುವ ಅವಹೇಳನ, ಚುನಾಯಿತ ಸರ್ಕಾರಗಳು ಕೆಲಸ ಮಾಡದಂತೆ ತಡೆಯುವ ಕುಕೃತ್ಯ. ರಾಜ್ಯ ಸರ್ಕಾರಗಳ ಆಡಳಿತದಲ್ಲಿ ವಿನಾಕಾರಣ ಮೂಗುತೂರಿಸುವ ಜನತಂತ್ರ ವಿರೋಧಿ ನಡೆ. ಸಂವಿಧಾನವನ್ನು ಕಾಯಬೇಕಾದವರೇ ಅದರ ಆಶಯಗಳನ್ನು ಕೆಡವುವ ದುರುಳತನ.

ಸಂವಿಧಾನದ ಪ್ರಕಾರ ಚುನಾಯಿತ ವಿಧಾನಸಭೆ ಮತ್ತು ಸರ್ಕಾರಗಳಲ್ಲೇ ನೈಜ ಅಧಿಕಾರ ಅಂತರ್ಗತ. ಈ ಅಧಿಕಾರವನ್ನು ರಾಜ್ಯಪಾಲರು ಗೌರವಿಸಬೇಕು. ಸಂವಿಧಾನದ 200ನೆಯ ಪರಿಚ್ಛೇದವು ರಾಜ್ಯಪಾಲರಿಗೆ ಮೂರು ಆಯ್ಕೆಗಳನ್ನು ನೀಡಿದೆ. ಅಂಕಿತ ಹಾಕುವುದು, ರಾಷ್ಟ್ರಪತಿಯವರಿಗೆ ಕಳಿಸುವುದು ಹಾಗೂ ಮೂರನೆಯದಾಗಿ ಒಪ್ಪಿಗೆಯನ್ನು ತಡೆಹಿಡಿದು ಟೀಕೆ ಟಿಪ್ಪಣಿಗಳ ಸಹಿತ ವಿಧಾನಮಂಡಲಕ್ಕೆ ಆದಷ್ಟೂ ಶೀಘ್ರವಾಗಿ ವಾಪಸು ಕಳಿಸುವುದು. ಹೀಗೆ ವಾಪಸು ಕಳಿಸಿದ ವಿಧೇಯಕವನ್ನು ವಿಧಾನಮಂಡಲ ಮತ್ತೊಮ್ಮೆ ಅಂಗೀಕರಿಸಿ ಕಳಿಸಿದರೆ ಅದಕ್ಕೆ ಅಂಕಿತ ಹಾಕದೆ ರಾಜ್ಯಪಾಲರಿಗೆ ಬೇರೆ ದಾರಿಯೇ ಇಲ್ಲ. ಆದರೆ ರಾಜ್ಯಪಾಲರು ಈ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದೆ ವಿಧೇಯಕವನ್ನು ಎಷ್ಟು ಕಾಲ ಇಟ್ಟುಕೊಳ್ಳಬಹುದು ಎಂಬುದನ್ನು ಸಂವಿಧಾನ ನಿರ್ದಿಷ್ಟವಾಗಿ ಗೊತ್ತುಪಡಿಸಿಲ್ಲ. ರಾಜ್ಯಪಾಲರು ಈ ಅಂಶದ ದುರ್ಲಾಭ ಪಡೆಯುತ್ತಿದ್ದಾರೆ. ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರ ವರ್ತನೆಯಂತೂ ಹದ್ದು ಮೀರಿದ್ದು.

ರಾಜ್ಯಪಾಲರಾಗಿ ನೇಮಕಗೊಳ್ಳುವ ಮುನ್ನ ಆ ವ್ಯಕ್ತಿ ಯಾವುದೇ ಪಕ್ಷದ ಸದಸ್ಯನಾಗಿರಬಹುದು, ಭಿನ್ನ ‘ಸೈದ್ಧಾಂತಿಕ ಚಿಂತನೆಯ ಶಾಲೆ’ಗೆ ಸೇರಿದಾತನೇ ಇರಬಹುದು. ಆದರೆ ಒಮ್ಮೆ ರಾಜ್ಯಪಾಲ ಹುದ್ದೆಗೆ ನೇಮಕ ಹೊಂದಿದ ನಂತರ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆದರೆ ಇಂದಿನ ಬಹುತೇಕ ರಾಜ್ಯಪಾಲರು ರಾಜ್ಯದ ಹಿತಕ್ಕಿಂತ ತಮ್ಮನ್ನು ನೇಮಕ ಮಾಡಿದ ರಾಜಕೀಯ ಪಕ್ಷದ ಹಿತವನ್ನೇ ಕಾಯುತ್ತಿದ್ದಾರೆ.

ರಾಜ್ಯಪಾಲರು ರಬ್ಬರ್ ಸ್ಟ್ಯಾಂಪುಗಳಲ್ಲ, ಆದರೆ ಅವರು ರಾಜ್ಯ ಸರ್ಕಾರಗಳ ತಲೆಯ ಮೇಲೆ ಕುಳಿತುಕೊಂಡು ಕಾರುಬಾರು ನಡೆಸುವ ‘ಸೂಪರ್ ಸರ್ಕಾರ’ಗಳೂ ಅಲ್ಲ. ರಾಜ್ಯಪಾಲರು ರಾಜ್ಯಗಳಲ್ಲಿ ರಾಷ್ಟ್ರಪತಿಯವರ ಪ್ರತಿನಿಧಿಗಳೇ ವಿನಾ ಕೇಂದ್ರ ಸರ್ಕಾರದ ರಾಜಕೀಯ ಏಜೆಂಟರಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X