ಅತಿಯಾಗಿ ಫೋನ್ ಬಳಕೆಯು ನಿದ್ರೆಯನ್ನು ಕಸಿದುಕೊಳ್ಳುತ್ತದೆ. ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಎದುರಾಗುತ್ತದೆ. ನೆನಪಿನ ಶಕ್ತಿಯೂ ಕುಂದುತ್ತದೆ. ಆಲೋಚನಾ ಸಾಮರ್ಥ್ಯ, ಕ್ರಿಯಾಶೀಲತೆಯ ಕೌಶಲ್ಯವೂ ನಶಿಸುತ್ತದೆ. ಚಡಪಡಿಕೆ, ಕೋಪ, ಕಿರಿಕಿರಿ, ಒತ್ತಡ, ಆತಂಕ, ಖಿನ್ನತೆಯಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ...!
ಜಗತ್ತು ಡಿಜಿಟಲೀಕರಣಕ್ಕೆ ಹೊರಳಿದಂತೆಲ್ಲ ಮೊಬೈಲ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಬಳಕೆ ಹೆಚ್ಚುತ್ತಿದೆ. ಹೆಚ್ಚಿನ ಇಂಟರ್‌ನೆಟ್ ಲಭ್ಯತೆಯಿಂದಾಗಿ ಜನರು ಅದರಲ್ಲೂ ಮಕ್ಕಳು ಮತ್ತು ಯುವಜನರು ಮೊಬೈಲ್ ಮತ್ತು ಅಂತರ್ಜಾಲದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ. ತಮ್ಮೆಲ್ಲ ಚಟುವಟಿಕೆಗಳಿಗೂ ಸ್ಮಾರ್ಟ್‌ಫೋನ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಸಾಧನಗಳ ಅತಿಯಾದ ಬಳಕೆಯು ಈಗ ಚಟವಾಗಿ ಉಳಿದಿಲ್ಲ. ಮಾರಕ ರೋಗವಾಗಿ ಬದಲಾಗುತ್ತಿದೆ.
ದೈಹಿಕವಾಗಿ ಅಥವಾ ಮಾನಸಿಕವಾಗಿ ಜನರೊಂದಿಗೆ ಸಂವಹನ ನಡೆಸುವುದಕ್ಕಿಂತ ಹೆಚ್ಚಿನ ಸಮಯವು ಸಾಮಾಜಿಕ ಮಾಧ್ಯಮ ಅಥವಾ ಆನ್‌ಲೈನ್ ಆಟಗಳಲ್ಲಿ ಕಳೆದುಹೋಗುತ್ತಿದೆ. ಸ್ಮಾರ್ಟ್ ಫೋನ್‌ಗಳ ಬಳಕೆಯು ಅತಿಯಾದಂತೆಲ್ಲ ಕೆಲಸ, ಶಾಲೆ ಹಾಗೂ ಸಂಬಂಧಗಳಿಗೂ ಅಡ್ಡಿಯುಂಟಾಗತೊಡಗಿದೆ, ಆತಂಕ ಎದುರಾಗುತ್ತಿದೆ. ಇದು ಮನುಷ್ಯ ಜೀವನದಲ್ಲಿ ಋಣಾತ್ಮಕ ಪರಿಣಾಮಗಳನ್ನು ಹೊತ್ತು ತರುತ್ತಿದೆ.
ಇಂಟರ್‌ನೆಟ್ ಅಥವಾ ಫೋನ್ ಚಟದಿಂದಾಗಿ ಮಕ್ಕಳು ಮತ್ತು ಯುವಜನರಲ್ಲಿ ‘ನೋಮೋಫೋಬಿಯಾ’ (ಮೊಬೈಲ್ ಫೋನ್ ಇಲ್ಲದಿದ್ದರೆ ಭಯ) ಎದುರಾಗುತ್ತಿದೆ. ಮೊಬೈಲ್ ಇಲ್ಲದೆ ಹೆಚ್ಚಿನ ಸಮಯ ಕಳೆಯಲಾಗದ ಸ್ಥಿತಿಗೆ ವರ್ತಮಾನ ಮತ್ತು ಭವಿಷ್ಯದ ಜಗತ್ತು ಹೊರಳುತ್ತಿದೆ.
ಹೊಸ ಜನರನ್ನು ಭೇಟಿ ಮಾಡಲು, ಹಳೆಯ ಸ್ನೇಹಿತರನ್ನು ಮರುಸಂಪರ್ಕಿಸಲು ಇಂಟರ್ನೆಟ್ ನೆರವಾಗುತ್ತಿದೆ. ಆದರೆ, ಆನ್‌ಲೈನ್ ಸಂಬಂಧಗಳು ನಿಜ ಜೀವನದ ಸಂವಹನಗಳನ್ನು ನಾಶಗೊಳಿಸುತ್ತಿದೆ. ನೈಜ ಪ್ರಪಂಚದಲ್ಲಿ ಎಂದಿಗೂ ಎದುರಾಗದಿದ್ದರೂ, ಆನ್‌ಲೈನ್ ಸ್ನೇಹಗಳು ಜನರನ್ನು ಹೆಚ್ಚು ಆಕರ್ಷಿಸುತ್ತಿವೆ. ಈ ವರ್ಚುವಲ್ ಸಂಬಂಧಗಳು, ಆನ್‌ಲೈನ್ ನೆಟ್‌ವರ್ಕಿಂಗ್, ಡೇಟಿಂಗ್ ಅಪ್ಲಿಕೇಶನ್‌ಗಳು, ಆನ್‌ಲೈನ್ ಚಾಟ್‌ಗಳ ವ್ಯಸನವು ನೈಜ-ಜೀವನದ ಸಂಬಂಧಗಳಿಗಿಂತ ಹೆಚ್ಚು ಮುಖ್ಯವಾಗುತ್ತಿವೆ. ಪರಿಣಾಮ, ಹೋಟೆಲ್‌ಗೆ ಜೊತೆಯಾಗಿ ಹೋಗುವ, ಮನೆಯಲ್ಲಿ ಒಟ್ಟಿಗೆ ಜೀವಿಸುವ ದಂಪತಿಗಳು ಪರಸ್ಪರರನ್ನು ನಿರ್ಲಕ್ಷಿಸಿ ತಮ್ಮ ಫೋನ್‌ಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ. ಮಕ್ಕಳು, ಯುವಜನರು ತುಂಬು ಕುಟುಂಬದ ನಡುವೆಯೂ ಏಕಾಂಗಿಯಾಗುತ್ತಿದ್ದಾರೆ.
ಆರಂಭದಲ್ಲಿ ಏಕಾಂಗಿ ಸಮಯ ಕಳೆಯಲು ಬಳಸಲಾಗುತ್ತಿದ್ದ ಮೊಬೈಲ್, ಈಗ ಇಡೀ ಬದುಕನ್ನೇ ಏಕಾಂಗಿಯಾಗಿಸುವಷ್ಟು ರೋಗವಾಗಿ ಮಾರ್ಪಟ್ಟಿದೆ. ಜನರಿಂದ ಮಾತ್ರವಲ್ಲ ಸ್ವಂತದವರಿಂದಲೂ ದೂರ ಇರಿಸುತ್ತಿದೆ. ಕುಟುಂಬ ಮತ್ತು ಸ್ನೇಹಿತರನ್ನು ದೂರ ಮಾಡುತ್ತಿದೆ.
ಸೈಬರ್ ಸೆಕ್ಸ್ ಚಟಗಳೂ ಹೆಚ್ಚುತ್ತಿವೆ. ಆನ್‌ಲೈನ್ ಅಶ್ಲೀಲತೆ ಮತ್ತು ಸೈಬರ್‌ಸೆಕ್ಸ್ ವ್ಯಸನಗಳು ಲೈಂಗಿಕ ವ್ಯಸನದ ಭಾಗವೇ ಆಗಿದ್ದರೂ, ಇಂಟರ್ನೆಟ್ ಅದನ್ನು ಹೆಚ್ಚಾಗಿ ಮತ್ತು ಆರಾಮದಾಯಕವಾಗಿ ಪ್ರವೇಶಿಸಬಹುದಾದ ರೀತಿಯಲ್ಲಿ ಒದಗಿಸುತ್ತಿದೆ. ಸಾಂದರ್ಭಿಕ ಲೈಂಗಿಕ ಆಸಕ್ತಿಗಳನ್ನು ತಣಿಸಲು ‘ಡೇಟಿಂಗ್ ಅಪ್ಲಿಕೇಶನ್’ಗಳ ಅತಿಯಾದ ಬಳಕೆಯು ದೀರ್ಘಾವಧಿಯ ನಿಕಟ ಸಂಬಂಧಗಳನ್ನು ಹೊಂದುವುದು ಅಥವಾ ಅಸ್ತಿತ್ವದಲ್ಲಿರುವ ಸಂಬಂಧಗಳನ್ನು ಹಾನಿಗೊಳಿಸುತ್ತಿದೆ.
ವಿಡಿಯೋ ವೀಕ್ಷಣೆ, ಆನ್‌ಲೈನ್ ಆಟಗಳು ಮತ್ತು ಜೂಜುಗಳು, ಆನ್‌ಲೈನ್ ಶಾಪಿಂಗ್‌ಗಳು ಹಾಗೂ ಸ್ಟಾಕ್ ಟ್ರೇಡಿಂಗ್ ಮತ್ತು ಬಿಡ್ಡಿಂಗ್‌ನಂತಹ ಆಮಿಷಗಳು ಸಾಮಾನ್ಯವಾಗಿ ಹಣಕಾಸಿನ ಒತ್ತಡ ಮತ್ತು ಉದ್ಯೋಗ-ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಇಂದಿನ ದಿನಗಳಲ್ಲಿ ಬಹುತೇಕ ಮಂದಿ ತಮ್ಮ ಫೋನ್‌ಗಳಿಗೆ ಹೆಚ್ಚೆಂದರೆ, 5 ಅಡಿಗಳಷ್ಟು ದೂರದಲ್ಲಿರುತ್ತಾರೆ. ಅದೂ ಅಪರೂಪಕ್ಕೆ. ಈ ಮೊಬೈಲ್ ಬಳಕೆಯು ಡ್ರಗ್ಸ್ ಮತ್ತು ಆಲ್ಕೋಹಾಲ್‌ಗಿಂತಲೂ ಹೆಚ್ಚು ವ್ಯಸನವಾಗುತ್ತಿದೆ. ಮೊಬೈಲ್ ಬಳಕೆಯು ಆಲ್ಕೋಹಾಲ್‌ನಂತೆಯೇ ಮೆದುಳಿನ ರಾಸಾಯನಿಕ ಡೋಪಮೈನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಇದು, ಆಲೋಚನಾ ಶಕ್ತಿಯನ್ನು ಕುಂದಿಸುತ್ತದೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ, ಸಹಿಷ್ಣುತೆ ವೇಗವಾಗಿ ಕುಂದುತ್ತದೆ. ಒತ್ತಡ, ಆತಂಕ, ಖಿನ್ನತೆ ಅಥವಾ ಒಂಟಿತನದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
2024ರ ಅಧ್ಯಯನವೊಂದು ಹೇಳುವಂತೆ, ಹೆಚ್ಚಿನ ಸಾಮಾಜಿಕ ಮಾಧ್ಯಮ ಬಳಕೆ ಮತ್ತು ಖಿನ್ನತೆ, ಆತಂಕದ ನಡುವಿನ ಪರಸ್ಪರ ಸಂಬಂಧವನ್ನು ಕಂಡುಹಿಡಿದಿದೆ. ಬಳಕೆದಾರರು, ವಿಶೇಷವಾಗಿ ಹದಿಹರೆಯದವರು, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಗೆಳೆಯರೊಂದಿಗೆ ತಮ್ಮನ್ನು ನಕಾರಾತ್ಮಕವಾಗಿ ಹೋಲಿಸಿಕೊಳ್ಳುತ್ತಾರೆ. ಜೊತೆಗೆ, ಒಂಟಿತನ ಮತ್ತು ಖಿನ್ನತೆಯ ಭಾವನೆಗಳಿಗೆ ಒಳಗಾಗುತ್ತಿದ್ದಾರೆ.
ಕೆಲಸದ ಸಮಯದಲ್ಲಿಯೂ ಮೊಬೈಲ್ ಬಳಕೆ ಕೆಲಸದ ಮೇಲಿನ ನಿರಾಸಕ್ತಿ ಮತ್ತು ಗುರಿ ಸಾಧಿಸುವಲ್ಲಿ ಕಳಪೆ ಕಾರ್ಯನಿರ್ವಹಣೆಗೆ ಕಾರಣವಾಗುತ್ತಿದೆ. ಫೋನ್‌ಗಳ ಮೇಲಿನ ಗೀಳು ಜನರನ್ನು ಕೆಲಸಗಳಿಂದ ದೂರವಿರುವಂತೆ ಮಾಡುತ್ತಿದೆ. ಆನ್‌ಲೈನ್ ಸಂದೇಶಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚು ಸಮಯ ಕಳೆಯುವಂತೆ ಪ್ರೇರೇಪಿಸುತ್ತಿದೆ. ಅದಕ್ಕೆ ತಕ್ಕಂತೆ ಮಾನವನ ಮೆದುಳು ಹೊಂದಿಕೊಳ್ಳುತ್ತಿದೆ. ಇದು, ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಉಲ್ಬಣಗೊಳಿಸುತ್ತಿದೆ. ಕೆಲವು ನಿಮಿಷಗಳಿಗಿಂತ ಹೆಚ್ಚು ಕಾಲ ಯಾವುದೇ ಒಂದು ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗದ ಪರಿಸ್ಥಿತಿಗೆ ದೂಡುತ್ತಿದೆ ಎಂದು ಅಧ್ಯಯನವು ಹೇಳಿದೆ.
ಈ ವರದಿ ಓದಿದ್ದೀರಾ?: ಹಳಿಗೆ ಬಂದ ಸರ್ಕಾರ: ಆಡಳಿತ ಚುರುಕುಗೊಳ್ಳಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ
ಮೊಬೈಲ್ ಮೇಲಿನ ಅವಲಂಬನೆಯು ಔದ್ಯೋಗಿಕ ಕೆಲಸ ಅಥವಾ ಮನೆಯಲ್ಲಿನ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿಯೂ ನಿರುತ್ಸಾಹವನ್ನು ಹೆಚ್ಚಿಸುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದ, ಮನೆಯಲ್ಲಿ ಅಗತ್ಯ ಕೆಲಸಗಳನ್ನು ಮಾಡಲಾಗದಂತೆ ಮೊಬೈಲ್ ಬಳಕೆಯು ಕೆಲಸಗಳನ್ನು ತಡೆಯುತ್ತಿದೆ. ಪರಿಣಾಮ ಅನೇಕ ಕೆಲಸಗಳು ಹಾಗೆಯೇ ಉಳಿದುಹೋಗುತ್ತಿವೆ.
ರಾತ್ರಿಯ ವೇಳೆಯು ಅತಿಯಾಗುತ್ತಿರುವ ಸ್ಮಾರ್ಟ್‌ಫೋನ್ ಬಳಕೆಯು ನಿದ್ರೆಯನ್ನು ಕಸಿದುಕೊಳ್ಳುತ್ತಿದೆ. ನಿದ್ರೆಗೆ ಭಂಗವಾದಂತೆಲ್ಲ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಎದುರಾಗುತ್ತವೆ. ನೆನಪಿನ ಶಕ್ತಿಯೂ ಕುಂದುತ್ತದೆ. ಆಲೋಚನಾ ಸಾಮರ್ಥ್ಯ, ಕ್ರಿಯಾಶೀಲತೆಯ ಕೌಶಲ್ಯವೂ ನಶಿಸುತ್ತದೆ.
ಪರಿಣಾಮವಾಗಿ, ಚಡಪಡಿಕೆ, ಕೋಪ, ಕಿರಿಕಿರಿ, ನಿರ್ದಿಷ್ಟ ವಿಷಯದ ಮೇಲೆ ಕೇಂದ್ರೀಕರಿಸಲಾಗದ ಸಮಸ್ಯೆ, ನಿದ್ರಾಹೀನತೆ ಹೆಚ್ಚುತ್ತದೆ. ಮೊಬೈಲ್ ಬಳಕೆ ಈಗ ವ್ಯಸನ ಅಥವಾ ಚಟವಾಗಿ ಉಳಿದಿಲ್ಲ, ಅದು ಮಾರಕ ರೋಗವಾಗಿ ಪರಿಣಮಿಸಿದೆ. ಮನುಷ್ಯದ ದೈನಂದಿನ ಆರೋಗ್ಯವನ್ನೇ ಹಾಳು ಮಾಡುತ್ತಿದೆ. ಮಾನಸಿಕ ಸ್ಥಿತಿ, ಸ್ಥಿಮಿತ ಎರಡನ್ನೂ ನಾಶ ಮಾಡುತ್ತಿದೆ.
ಈ ಮೊಬೈಲ್ ಗೀಳಿನಿಂದ ಹೊರಬರದಿದ್ದರೆ ಭವಿಷ್ಯವು ನಿರ್ಣಾಯಕವಾಗಿ ಆತಂಕ ಮತ್ತು ಅಪಾಯವನ್ನು ಎದುರಿಸಬೇಕಾಗುತ್ತದೆ. ಮಕ್ಕಳು ಮತ್ತು ಯುವಜನರು ಮೊಬೈಲ್ ಬಳಕೆಯಿಂದ ಹಂತ-ಹಂತವಾಗಿ ವಿಮುಖರಾಗುವಂತೆ ಮಾಡಬೇಕಾದ ಸಂದರ್ಭ ಈಗಾಗಲೇ ಬಂದಿದೆ. ಎಲ್ಲ ವಯಸ್ಸಿನ ಜನರು ಆನ್‌ಲೈನ್‌ನಿಂದ ದೂರ ಸರಿದು, ಆಫ್‌ಲೈನ್‌ಗೆ ಮರಳುವಂತೆ ಮಾಡಬೇಕಾಗಿದೆ. ಮೊಬೈಲ್‌ಗಳ ಬಳಕೆಗೆ ನಿರ್ದಿಷ್ಟ ಸಮಯ ಗುರುತಿಸಿಕೊಂಡು, ಉಳಿದ ಸಮಯದಲ್ಲಿ ತಮ್ಮ ಕೆಲಸಗಳು ಹಾಗೂ ಇತರರೊಂದಿಗೆ ಭೌತಿಕವಾಗಿ ತೊಡಗಿಸಿಕೊಳ್ಳಬೇಕಿದೆ. ಕೆಲಸದ ಸಮಯದಲ್ಲಿ ಅಥವಾ ಅನಗತ್ಯವಾದ ಸಮಯದಲ್ಲಿ ಫೋನ್‌ಗಳನ್ನು ಆಫ್ ಮಾಡಿ ಇಡುವುದು ಸೂಕ್ತವಾಗಿದೆ. ರಾತ್ರಿಯ ವೇಳೆ ಮಲಗುವ ಸ್ಥಳಕ್ಕೆ ಮೊಬೈಲ್ ಕೊಂಡೊಯ್ಯುವುದನ್ನು ನಿಲ್ಲಿಸಬೇಕಿದೆ. ಸಾಧ್ಯವಾದರೆ, ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್‌ಗಳನ್ನು ಡಿಲೀಟ್ ಮಾಡುವುದು ಅತ್ಯಂತ ಅಗತ್ಯ ಕೆಲಸವಾಗಿದೆ. ಜೊತೆಗೆ, ದೈಹಿಕ ಕೆಲಸಗಳು, ವ್ಯಾಯಾಮಗಳಲ್ಲಿಯೂ ತೊಡಗಿಸಿಕೊಳ್ಳಬೇಕಿದೆ. ಆಗ ಮಾತ್ರವೇ ವರ್ತಮಾನ ಮತ್ತು ಭವಿಷ್ಯದ ಆರೋಗ್ಯ ಉಜ್ವಲವಾಗಲಿದೆ.