ಈ ದಿನ ಸಂಪಾದಕೀಯ | ಹೆಣ್ಣಿನ ಮೇಲಿನ ಶೋಷಣೆ ತಡೆಯುವಲ್ಲಿ ಕುಟುಂಬಗಳಿಗಿದೆ ಪ್ರಧಾನ ಪಾತ್ರ!

Date:

Advertisements
ಲಿಂಗ ಸಮಾನತೆ, ಮಹಿಳೆಯರ ಸ್ವಾತಂತ್ರ್ಯ, ಸ್ವಾಭಿಮಾನ, ಲಿಂಗ ಸೂಕ್ಷ್ಮತೆಯ ಬಗ್ಗೆ ಮೊದಲು ಪೋಷಕರಿಗೆ, ನಂತರ ಮಕ್ಕಳಿಗೆ ಪಾಠ ಹೇಳುವ, ಜಾಗೃತಿ ಮೂಡಿಸುವ ಅಗತ್ಯವಿದೆ. ಮಹಿಳೆಯರ ಮೇಲಿನ ಅಪರಾಧಗಳು ನಿಲ್ಲಲು ನಾವು ವಿಭಿನ್ನವಾಗಿ ಏನು ಮಾಡಬೇಕು? ಸ್ತ್ರೀ ಸಮಾನತೆ, ಮಹಿಳಾ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಲು ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿನ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ವಿರುದ್ಧದ ಕಾವು ಹೆಚ್ಚುತ್ತಲೇ ಇದೆ. ನಾನಾ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿರುವ ಕಿರಿಯ ವೈದ್ಯರು ಕಳೆದ 10 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನೂ ನಡಸುತ್ತಿದ್ದಾರೆ. ಉಪವಾಸ ನಿರತರಲ್ಲಿ ಮೂವರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಟ್ರೈನಿ ವೈದ್ಯರನ್ನು ಬೆಂಬಲಿಸಿ ಹಲವರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ, ಓರ್ವ ಯುವತಿಯ ಮೇಲಿನ ದೌರ್ಜನ್ಯಕ್ಕೆ ಇಷ್ಟೊಂದು ಪ್ರತಿಭಟನೆ, ಹೋರಾಟ, ಉಪವಾಸದ ಅಗತ್ಯವಿದೆಯಾ ಎಂಬ ಪ್ರಶ್ನೆಯೂ ಪುರುಷ ಪ್ರಧಾನ ಸಮಾಜದೊಳಗೆ ವ್ಯಕ್ತವಾಗುತ್ತಿದೆ.

ಹೆಣ್ಣು ತನ್ನ ಗುಲಾಮಳು, ಅಧೀನಳು. ಆಕೆ ಅಡುಗೆ ಮನೆ ಮತ್ತು ಮಕ್ಕಳನ್ನು ಹೆರುವುದಕ್ಕೇ ಸೀಮಿತವೆಂದು ನೋಡುತ್ತಿರುವ ಪುರುಷಾಧಿಪತ್ಯದ ಭಾರತೀಯ ಸಮಾಜದಲ್ಲಿ ಈ ಪ್ರಶ್ನೆ ಆಶ್ಚರ್ಯ ಹುಟ್ಟುಹಾಕದು. ಆದರೆ, ಇದು ಮುಂದುವರೆದು ಹೆಣ್ಣನ್ನು ದ್ವೇಷಿಸುವ ಹಂತಕ್ಕೆ ತಲುಪಿದೆ. ತನ್ನ ವಿಕೃತ ಕಾಮ, ದ್ವೇಷಕ್ಕಾಗಿ ಹೆಣ್ಣನ್ನು ಕೊಂದೇಬಿಡುವ ಹಂತಕ್ಕೆ ಗಂಡು ಮನಸ್ಥಿತಿ ಮುಂದು ಸಾಗಿದೆ. ಈ ಕ್ರೌರ್ಯವು ಬಿತ್ತುತ್ತಿರುವ ಮಹಿಳಾ ವಿರೋಧಿ ದ್ವೇಷವನ್ನು ಸಹಿಸಲಾಗದು.

ಇತ್ತೀಚೆಗೆ, ಹೊರಬಂದ ಹೇಮಾ ಸಮಿತಿಯ ವರದಿ, ಮಲಯಾಳಂ ಚಿತ್ರರಂಗದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದೆ. ಕೇರಳ ಚಿತ್ರರಂಗದ ಸ್ಟಾರ್‌ ನಟರು, ನಿರ್ಮಾಪಕರು ಸೇರಿದಂತೆ 17 ಮಂದಿ ವಿರುದ್ಧ ಲೈಂಗಿಕ ಪ್ರಕರಣಗಳು ದಾಖಲಾಗಿವೆ. AMMA (ಅಸೋಸಿಯೇಷನ್‌ ಆಫ್‌ ಮಲಯಾಳಂ ಚಲನಚಿತ್ರ ಕಲಾವಿದರು) ಛಿದ್ರಗೊಂಡಿದೆ. ಮೇಕಪ್ ಆರ್ಟಿಸ್ಟ್‌ಗಳು ಮತ್ತು ಮಹಿಳಾ ನಿರ್ದೇಶಕರು ಅನುಭವಿಸಿರುವ ಯಾತನೆ, ಹಿಂಸೆಗಳು ಬಹಿರಂಗಗೊಳ್ಳುತ್ತಿವೆ. ಕುಸ್ತಿಪಟುಗಳ ಪ್ರತಿಭಟನೆ ಆಳುವ ಸರ್ಕಾರದ ಮಹಿಳಾ ವಿರೋಧ ಧೋರಣೆಯನ್ನು ಬಿಚ್ಚಿಟ್ಟಿದೆ. ದೇಶಾದ್ಯಂತ ಬಾಲಕಿಯರಿಂದ ಹಿಡಿದು ವೃದ್ದೆಯವರೆಗೆ ಎಲ್ಲರ ಮೇಲೂ ಲೈಂಗಿಕ ದೌರ್ಜನ್ಯ, ಹಿಂಸೆಗಳು ನಡೆಯುತ್ತಿವೆ.

Advertisements

ಆಳುವ ಪಕ್ಷಗಳ, ಸರ್ಕಾರಗಳ ಪ್ರತಿನಿಧಿಗಳು ಅತ್ಯಾಚಾರಿಗಳ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅತ್ಯಾಚಾರವನ್ನು ಸಮರ್ಥಿಸುತ್ತಿದ್ದಾರೆ. ಅತ್ಯಾಚಾರವು ಗಂಡಿನ ಹಕ್ಕು ಎಂಬಂತೆ ವರ್ತಿಸುತ್ತಿದ್ದಾರೆ. ಹೆಣ್ಣನ್ನು ಭೋಗದ ಸರಕಾಗಿ ನೋಡುತ್ತಿರುವ ಸಮಾಜದಲ್ಲಿ ಹೆಣ್ಣಿನ ಸಂಕಟಗಳ ಬಗ್ಗೆ ಉದಾಸೀನತೆ ಹೆಚ್ಚುತ್ತಿದೆ. ಇದು ಬೆಳೆಯುವ ಮಕ್ಕಳ ಮನಸ್ಸನ್ನೂ ಆವರಿಸುತ್ತಿದೆ. ಹೆಣ್ಣಿನ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಲು ನಾವು ಗಂಡು ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ. ಅವರಲ್ಲಿ, ಯಾವ ರೀತಿಯ ಆಲೋಚನೆಗಳನ್ನು ಹುಟ್ಟುಹಾಕುತ್ತಿದ್ದೇವೆ ಎಂಬುದನ್ನು ಪರಾಮರ್ಶಿಸುವ ಅಗತ್ಯವಿದೆ. ಜೊತೆಗೆ, ಅದರಲ್ಲಿ ನಮ್ಮ ತಪ್ಪುಗಳನ್ನೂ ನಾವು ಒಪ್ಪಿಕೊಳ್ಳಬೇಕಿದೆ.

ಭಾರತೀಯ ವ್ಯವಸ್ಥೆಯು ಆಚಾರ, ವಿಚಾರ, ಸಂಸ್ಕೃತಿ ಹಾಗೂ ಸಾಗುವ ಹಾದಿಯಲ್ಲಿ ಲಿಂಗ ತಾರತಮ್ಯವನ್ನೇ ಅನುಸರಿಸುತ್ತಿದೆ. ಗಂಡು ಮಗು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಭಾವನೆಯನ್ನು ಬಾಲ್ಯದಲ್ಲೇ ಮಕ್ಕಳ ತಲೆಗೆ ತುಂಬಲಾಗುತ್ತಿದೆ. ಗಂಡು ಮಗುವನ್ನು ಸ್ವತಂತ್ರವಾಗಿ ಹಾರಾಡಲು ಬಿಟ್ಟು, ಹೆಣ್ಣು ಮಗುವಿಗೆ ನಾನಾ ಕಟ್ಟುಪಾಡುಗಳೊಂದಿಗೆ ಗೋಡೆಗಳ ನಡುವೆ ಕಟ್ಟಿಹಾಕಲಾಗುತ್ತಿದೆ. ಇದು ಗಂಡು ಮಕ್ಕಳಲ್ಲಿ ಹೆಣ್ಣು ಸ್ವತಂತ್ರಳಾಗಿರಲು ಯೋಗ್ಯಳಲ್ಲ ಎಂಬ ಚಿಂತನೆಯನ್ನು ಬೆಳೆಸುತ್ತದೆ. ಇದೇ ಹೆಮ್ಮರವಾಗಿ, ಗಂಡು ಮಕ್ಕಳು ಹೆಣ್ಣನ್ನು ತನ್ನ ಅಧೀನಳು ಎಂಬ ಭಾವನೆ ಹೆಚ್ಚಿಸುತ್ತದೆ.

ದೆಹಲಿಯ ನಿರ್ಭಯಾ ಪ್ರಕರಣದ ಅಪರಾಧಿಗಳು, ‘ಅತ್ಯಾಚಾರಕ್ಕೆ ಹುಡುಗಿಯರೇ ಜವಾಬ್ದಾರರು’ ಎಂದು ಹೇಳಿದ್ದರು. ತಮ್ಮ ಕೃತ್ಯಕ್ಕೆ ಸಹಜವೆಂಬಂತೆ ಮಾತನಾಡಿದ್ದರು. ಈ ಆಲೋಚನೆ ಎಲ್ಲಿಂದ ಬಂದಿತು. ಪಿತೃಪ್ರಭುತ್ವದ ಈ ಸಮಾಜದಲ್ಲಿ ಹೆಣ್ಣಿನ ಮೇಲಾಗುವ ಕ್ರೌರ್ಯಗಳಿಗೆ ಆಕೆಯ ಉಡುಗೆ, ತೊಡುಗೆ, ನಡೆ, ನುಡಿಗಳೇ ಕಾರಣವೆಂಬ ವಿಷ ದೇಶದ ಉದ್ದಗಲಕ್ಕೂ ಹರಡಿದೆ. ಇದನ್ನು, ಸ್ವತಃ ಹೆಣ್ಣು ಮಕ್ಕಳೇ ಒಪ್ಪಿಕೊಳ್ಳುವಂತೆ ಅವರ ಆಲೋಚನೆಗಳ ಮೇಲೆ ಹೇರಲಾಗಿದೆ.

ಜೊತೆಗೆ, ಮಹಿಳೆಯರ ಮೇಲಿನ ಶೋಷಣೆಯ ಇತಿಹಾಸವು ‘ಭಾರತದಲ್ಲಿ ಗಂಡಾಗಿ ಹುಟ್ಟುವುದು ಯಾವಾಗಲೂ ಸುಲಭ. ಗಂಡಾಗಿಯೇ ಹುಟ್ಟಬೇಕು ಅಥವಾ ಹುಟ್ಟಬೇಕಿತ್ತು’ ಎಂಬುದನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತದೆ.  

ಇತ್ತೀಚಿನ ದಿನಗಳಲ್ಲಿ, ಹೆಣ್ಣು ಮಕ್ಕಳು ತಮ್ಮ ಆಲೋಚನೆಗಳನ್ನು ಬದಲಿಸುತ್ತಿದ್ದಾರೆ. ಶಾಲೆ, ಕಾಲೇಜು ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹುಡುಗರನ್ನು ಹುಡುಗಿಯರು ಮೀರಿಸುತ್ತಿದ್ದಾರೆ. ಸಮಾಜ ಮತ್ತು ವ್ಯವಸ್ಥೆಯ ಬಗ್ಗೆ ಅರಿತುಕೊಳ್ಳುತ್ತಿದ್ದಾರೆ. ಪುರುಷ ಪ್ರಾಧಾನ್ಯತೆಯನ್ನು ವ್ಯವಸ್ಥಿತವಾಗಿ ಒಡೆಯಲು ಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಗಂಡು ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದರ ಬಗ್ಗೆ ಪೋಷಕರು ಚಿಂತಿಸಬೇಕಿದೆ.

ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರಕ್ಕೆ ಅರಿವಾಗುವುದು ಯಾವಾಗ?

ಇಂದಿನ ಪೋಷಕರು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು, ಹೋಮ್‌ ವರ್ಕ್‌ಗಳಲ್ಲಿಯೇ ಸಿಕ್ಕಿಕೊಂಡಿದ್ದಾರೆ. ತಮ್ಮ ಮಕ್ಕಳ ಅಂಕಪಟ್ಟಿ ಮೇಲೆ ಅವಲಂಬಿತರಾಗಿದ್ದಾರೆ. ಹೆಚ್ಚು ಅಂಕ ಗಳಿಸಬೇಕೆಂದು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಮಕ್ಕಳ ಚಲನ-ವಲನ, ಆಲೋಚನೆಗಳ ಬಗ್ಗೆ ಪೋಷಕರಲ್ಲಿ ಗಂಭೀರತೆ ಇದೆ. ಆ ಬಗ್ಗೆ ಚಿಂತನೆಯೂ ಇಲ್ಲ. ಅವರ ಬದುಕುವ ರೀತಿಯಲ್ಲಿ ಪ್ರಭಾವ ಬೀರುವ ವಿಚಾರಗಳ ಬಗ್ಗೆಯೂ ಎಚ್ಚರಿಕೆ ಇಲ್ಲ.

ಕುಟುಂಬದೊಳಗೆ ಪತ್ನಿಯನ್ನು ಪತಿ ಶೋಷಿಸುವುದು, ತನ್ನ ವ್ಯವಹಾರಗಳಿಂದ ದೂರವಿಡುವುದು, ತಾನು ಹೇಳಿದಂತೆ ಕೇಳಬೇಕೆಂದು ಒತ್ತಾಯಿಸುವುದು, ತನ್ನ ಅಧೀನಳಂತೆ ನೋಡುವುದು ಮಕ್ಕಳ ಆಲೋಚನೆಗಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ.

ಮಕ್ಕಳ ಆಲೋಚನೆ ಬದಲಾಗಬೇಕೆಂದರೆ, ಪೋಷಕರಿಗೂ ಶಿಕ್ಷಣದ ಅಗತ್ಯವಿದೆ. ಲಿಂಗ ಸಮಾನತೆ, ಮಹಿಳೆಯರ ಸ್ವಾತಂತ್ರ್ಯ, ಸ್ವಾಭಿಮಾನ, ಲಿಂಗ ಸೂಕ್ಷ್ಮತೆಯ ಬಗ್ಗೆ ಮೊದಲು ಪೋಷಕರಿಗೆ, ನಂತರ ಮಕ್ಕಳಿಗೆ ಪಾಠ ಹೇಳುವ, ಜಾಗೃತಿ ಮೂಡಿಸುವ ಅಗತ್ಯವಿದೆ. ಮಹಿಳೆಯರ ಮೇಲಿನ ಅಪರಾಧಗಳು ನಿಲ್ಲಲು ನಾವು ವಿಭಿನ್ನವಾಗಿ ಏನು ಮಾಡಬೇಕು? ಸ್ತ್ರೀ ಸಮಾನತೆ, ಮಹಿಳಾ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಲು ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X