ಬಿಜೆಪಿಯ ಅಗ್ರಗಣ್ಯ ನಾಯಕ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ಜೋರಾಗಿ ನಕ್ಕಾಗ ಶೂರ್ಪನಖಿಗೆ ಹೋಲಿಕೆ ಮಾಡಿದ್ದರು. ತಾನು ದೇಶದ ಪ್ರಧಾನಿ ಎಂಬ ಘನತೆ ಮರೆತು ಮೋದಿಯವರು ಸಂಸದೆಯೊಬ್ಬರನ್ನು ಸಂಸತ್ತಿನಲ್ಲೇ ಅವಮಾನಿಸಿದ್ದರು. ಅದಕ್ಕಾಗಿ ಅವರು ಕ್ಷಮೆಯನ್ನೂ ಕೇಳಲಿಲ್ಲ. ಇದು ಬಿಜೆಪಿಯವರು ಮಹಿಳೆಯರಿಗೆ ನೀಡುತ್ತಿರುವ ಗೌರವದ ಸ್ಯಾಂಪಲ್
ನಿನ್ನೆ (ಡಿ.19) ಸುವರ್ಣ ಸೌಧದ ವಿಧಾನಪರಿಷತ್ತಿನ ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ನಡೆದ ಮಾತಿನ ಚಕಮಕಿ ಮಧ್ಯೆ ಸಿ ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ್ದು, ನಂತರ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿ ಬಂಧನವೂ ಆಗಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಜಾಮೀನು ಸಿಗುವುದು ಕಷ್ಟವೇನಲ್ಲ. ಹಾಗೆಯೇ ರಾಜಕೀಯ ನಾಯಕರು ತಮ್ಮ ಸ್ಥಾನದ ಘನತೆ ಮರೆತು ಸಾರ್ವಜನಿಕವಾಗಿ ಮಹಿಳೆಯರ ಬಗ್ಗೆ ಲಘುವಾಗಿ, ನಿಂದನಾತ್ಮಕ ಪದ ಬಳಸೋದು ಮಾಮೂಲಿಯಾಗಿದೆ. ಅದಕ್ಕಿಷ್ಟು ವಿರೋಧ ಬಂದ ಕೂಡಲೇ ವಿಷಾದ, ಕ್ಷಮೆಯ ಹೇಳಿಕೆ ಕೊಟ್ಟು ಸುಮ್ಮನಾಗುತ್ತಾರೆ. ಈ ಸಮಾಜವೂ ಅಷ್ಟೇ ಅಂತಹ ವ್ಯಕ್ತಿಗಳನ್ನು ದೂರವಿಡುವ ಕೆಲಸ ಮಾಡಲ್ಲ. ಚುನಾವಣೆಗೆ ನಿಂತಾಗ ಮತ್ತೆ ಮತ ಹಾಕಿ ಆರಿಸುತ್ತಾರೆ.
ಸಿ ಟಿ ರವಿ ಹೇಳಿಕೆ ಪುರುಷಾಹಂಕಾರದ ಪರಮಾವಧಿ. ಯಾಕೆಂದರೆ, ಎದುರಿಗೆ ಕೂತಿದ್ದ ಮಹಿಳೆ, ಈ ರಾಜ್ಯದ ಸಚಿವೆ. ಸ್ಥಳ ಜನತಂತ್ರದ ದೇಗುಲವೆಂದು ಕರೆಯಲಾಗುವ ವಿಧಾನಮಂಡಲದ ಮೇಲ್ಮನೆ. ಹಿರಿಯರ ಸದನವೆಂದು ಕರೆಯುವುದು ವಾಡಿಕೆ. ಇಂತಹ ಸದನದಲ್ಲಿ ಸದಸ್ಯನೊಬ್ಬ ಸಚಿವೆಗೆ ಕೀಳು ನಿಂದನೆ ಮಾಡುವುದರ ಹಿಂದೆ ನೂರಾರು ವರ್ಷಗಳ ಪುರುಷಾಧಿಪತ್ಯದ ನೆರಳಿದೆ. ಹೆಣ್ಣು ಪುರುಷನ ಅಡಿಯಾಳಾಗಿಯೇ ಇರಬೇಕು, ಮನೆಯ ಹೊಸ್ತಿಲು ದಾಟಬಾರದು, ಅಧಿಕಾರ ನಡೆಸಬಾರದು, ಪುರುಷನನ್ನು ಪ್ರಶ್ನಿಸಲೇಬಾರದು ಎಂಬ ಮನುವಾದಿ ಅಹಂ ಇದೆ. ಇದು ಬಹುತೇಕ ಪುರುಷರ ರಕ್ತದಲ್ಲಿ ಬೆರೆತುಹೋಗಿರುವ ದುರ್ಗುಣ. ನಮ್ಮೆಲ್ಲ ಬೈಗುಳಗಳು ಮಹಿಳೆಯನ್ನು ನಿಂದಿಸಿಯೇ ಶುರುವಾಗುತ್ತವೆ. ಸಾರ್ವಜನಿಕ ಸ್ಥಳ, ದುಡಿಯುವ ಸ್ಥಳ, ಮನೆ ಎಂಬ ಯಾವುದೇ ವ್ಯತ್ಯಾಸವಿಲ್ಲದೇ ಇಂತಹ ಬೈಗುಳ ಬಳಸುವುದು ಸಾಮಾನ್ಯವಾಗಿಬಿಟ್ಟಿದೆ. ಮತ್ತೆ ಅವು ಈ ತಲೆಮಾರಿನವರೆಗೂ ಬಳಕೆಯಾಗುತ್ತಾ ಬಂದಿದೆ, ಮುಂದಿನ ತಲೆಮಾರುಗಳಿಗೂ ದಾಟುತ್ತಿವೆ. ಹೆಣ್ಣು ತನ್ನ ಸೊತ್ತು ಎಂಬ ಗಂಡಿನ ಅಹಂಕಾರ ಕಳೆದ ದಿನ ಸ್ತ್ರೀಯರಿಗೆ ಘನತೆ, ಗೌರವ ಸಿಗಲಿದೆ. ಸೀತೆಯ ಅಗ್ನಿಪರೀಕ್ಷೆ ರಾಮಾಯಣಕ್ಕೆ ಕೊನೆಯಾಗಿಲ್ಲ. ಭವ್ಯ ಭಾರತದಲ್ಲಿ ನಿತ್ಯ ಕೋಟಿ ಕೋಟಿ ಸೀತೆ, ಶೂರ್ಪನಖಿ, ಮಂಡೋದರಿ, ದ್ರೌಪದಿಯರು, ಮನುವಾದಿ ಅಗ್ನಿಯಲ್ಲಿ ನಿತ್ಯ ದಹಿಸುತ್ತಿದ್ದಾರೆ.
ಜನಪ್ರತಿನಿಧಿಗಳು ಎನಿಸಿಕೊಳ್ಳುವವರಾದರೂ ಸದನದಂತಹ ಜನಪ್ರಾತಿನಿಧಿಕ ಜಾಗಗಳಲ್ಲಿ ತಮ್ಮ ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕಿದೆ. ಇಲ್ಲವಾದರೆ ನಿನ್ನೆಯ ನಡೆದ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಈ ದೇಶದಲ್ಲಿ ಲಕ್ಷ ಲಕ್ಷ ಹೆಣ್ಣು ದೇವತೆಗಳಿದ್ದಾರೆ. ಊರೂರಲ್ಲಿ ಗ್ರಾಮ ದೇವತೆಗಳಿವೆ. ಆಕೆಯ ಮುಂದೆ ವಿನಯದಿಂದ ಕೈ ಮುಗಿದು ನಿಲ್ಲುವ ಜನ ಮನೆಯಲ್ಲಿ ಮಹಿಳೆಯನ್ನು ಆಳಿನಂತೆ ನಡೆಸಿಕೊಳ್ಳುತ್ತಾರೆ. ಭಾರತದಲ್ಲಿ ಮಹಿಳೆಯರನ್ನು ಪೂಜ್ಯ ಸ್ಥಾನದಲ್ಲಿ ನೋಡಲಾಗುತ್ತಿದೆ ಎಂದು ಬೊಗಳೆ ಬಿಡುವ ಪಕ್ಷದ ಪ್ರತಿನಿಧಿ ಸಿ ಟಿ ರವಿ. ಇದೇ ಪರಿಷತ್ತಿನಲ್ಲಿ ಕಳೆದ ಅಧಿವೇಶದಲ್ಲಿ ಕಾಂಗ್ರೆಸ್ ನಾಯಕಿಯರಿಗೆ ನಿತ್ಯಸುಮಂಗಲಿಯರು ಎಂದು ನಾಲಗೆ ಹರಿಯಬಿಟ್ಟಿದ್ದರು. ಮೂರು ವರ್ಷಗಳ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಚ್ಚೆಹರುಕ ಎಂದು ಕರೆದಿದ್ದ ಸಿಟಿ ರವಿ ಅಶ್ಲೀಲ ಪದ ಬಳಕೆಯಲ್ಲಿ ಮುಂಚೂಣಿ ಬಿಜೆಪಿಗ. ಆದರೆ ನಿನ್ನೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಆಕ್ಷೇಪಾರ್ಹ ಪದ ಬಳಸಿದ ಬಗ್ಗೆ ಪಕ್ಷದ ಅಧ್ಯಕ್ಷ ವಿಜಯೇಂದ್ರ, “ಸಿ ಟಿ ರವಿ ಹಾಗೆಲ್ಲ ಹೇಳಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ” ಎಂದಿರುವುದು, ದೆಹಲಿಯಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ, “ಸಿ ಟಿ ರವಿ ಬುದ್ದಿವಂತ, ಹಾಗೆಲ್ಲ ಹೇಳಿದ್ನಾ” ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದು, ಪಕ್ಕದಲ್ಲೇ ಇದ್ದ ಜೆಡಿಎಸ್ ಸದಸ್ಯ ಶರವಣ, ಛಲವಾದಿ ನಾರಾಯಣಸ್ವಾಮಿ ತಮಗೆ ಕೇಳಿಸಿಲ್ಲ ಎಂದು ನಟಿಸಿರುವುದನ್ನು ನೋಡಿದರೆ, ಇವರಿಗೆಲ್ಲ ಅವಕಾಶವಾದಿ ರಾಜಕಾರಣ ಮುಖ್ಯವೇ ವಿನಾ ಹೆಣ್ಣಿನ ಘನತೆ ಹುಲ್ಲುಕಡ್ಡಿಗೆ ಸಮ ಎಂಬುದು ನಿಚ್ಚಳ ವೇದ್ಯ. ಸಿ ಟಿ ರವಿ ಬಂಧನ ವಿರೋಧಿಸಿ ಮಾತನಾಡುವಾಗ ಬಿಜೆಪಿ ಶಾಸಕ ಡಾ. ಅಶ್ವತ್ಥನಾರಾಯಣ, “ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ” ಎಂದಿದ್ದಾರೆ. ಅಂದ್ರೆ ಬಳೆ ತೊಡುವ ಹೆಣ್ಣು ಕೈಲಾಗದವಳು ಎಂದು ಅರ್ಥವೇ?
ಮಾರಿಕೊಂಡ ಮಾಧ್ಯಮಗಳು ಸಿ ಟಿ ರವಿ ಹೇಳಿಕೆಯ ಸತ್ಯಾಸತ್ಯತೆ ಬಯಲಿಗೆಳೆಯುವ ಮತ್ತು ಮಹಿಳೆಯರ ಘನತೆಯ ಪರ ನಿಲ್ಲುವ ಬದಲು ರವಿಯನ್ನು ಸಂತ್ರಸ್ತ, ಬಲಿಪಶು ಎಂಬಂತೆ ಸುದ್ದಿಯನ್ನು ತಿರುಚಿ ಪ್ರಸಾರ ಮಾಡುತ್ತಿವೆ. ರವಿಯವರ ಮೇಲೆ ಸಚಿವೆಯ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದಾರೆ ಎಂಬುದನ್ನು ನಿರಂತರವಾಗಿ ಪ್ರಸಾರ ಮಾಡಿರುವ ಮಾಧ್ಯಮಗಳು ಆತನ ಹೇಯ ಕೃತ್ಯವನ್ನು ಖಂಡಿಸುವ ಗೋಜಿಗೇ ಹೋಗಿಲ್ಲ. ಇಂದು ಪ್ರಕರಣಕ್ಕೆ ಬೇರೆಯದೇ ಆಯಾಮ ಕೊಡಲಾಗಿದೆ. ಸಿ ಟಿ ರವಿಗೆ ರಾತ್ರಿಯೆಲ್ಲ ಪೊಲೀಸರು ಹಿಂಸೆ ನೀಡಿದ್ದಾರೆ, ಊಟ ಕೊಟ್ಟಿಲ್ಲ, ವಕೀಲರನ್ನು ಭೇಟಿಯಾಗಲು ಬಿಟ್ಟಿಲ್ಲ, ರಾತ್ರಿ ಕಾಡಿನಲ್ಲೆಲ್ಲ ಸುತ್ತಾಡಿಸಿದ್ದಾರೆ ಎಂದೆಲ್ಲ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ಮಾಡುತ್ತಿರುವ ಆರೋಪಗಳು, ಆರೋಪಿಯ ಹೇಳಿಕೆಗಳನ್ನು ಯಥಾವತ್ ಗಿಳಿಪಾಠ ಒಪ್ಪಿಸುತ್ತಿರುವ ಮಾಧ್ಯಮಗಳ ನಡೆ ರವಿಯವರ ನಡವಳಿಕೆಯಷ್ಟೇ ಅಪಾಯಕಾರಿ.
ಬಿಜೆಪಿಯ ಅಗ್ರಗಣ್ಯ ನಾಯಕ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ಜೋರಾಗಿ ನಕ್ಕಾಗ ಶೂರ್ಪನಖಿಗೆ ಹೋಲಿಕೆ ಮಾಡಿದ್ದರು. ದೇಶದ ಪ್ರಧಾನಿ ಹುದ್ದೆಯ ಘನತೆಯನ್ನೇ ಮರೆತು ವರ್ತಿಸಿದ್ದಾರೆ. ಅವರು ಕ್ಷಮೆ ಕೇಳುವುದಂತೂ ದೂರ ದೂರದ ಮಾತು. ಇದು ಬಿಜೆಪಿಯವರು ಮಹಿಳೆಯರಿಗೆ ನೀಡುತ್ತಿರುವ ಗೌರವದ ಮಾದರಿ. ತಮ್ಮ ಪಕ್ಷದವರು ಮಾತ್ರವೇ ಗೌರವಕ್ಕೆ ಅರ್ಹರಾದ ಮಹಿಳೆಯರು ಎಂದು ಅವರು ಭಾವಿಸಿದಂತಿದೆ. ದೇಶದಲ್ಲಿ ಬಿಜೆಪಿಯ ಹಲವು ನಾಯಕರು ಮಹಿಳೆಯರನ್ನು ಅತ್ಯಂತ ತುಚ್ಛವಾಗಿ ನಡೆಸಿಕೊಂಡ, ಅಸಹ್ಯವಾಗಿ ನಿಂದಿಸಿದ, ಲೈಂಗಿಕ ಕಿರುಕುಳ, ಅತ್ಯಾಚಾರ ನಡೆಸಿದ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ.
ಮೋದಿ ಬೆಂಬಲಿಗರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಬಾರ್ ಡಾನ್ಸರ್, ವೇಶ್ಯೆ ಎಂದೆಲ್ಲ ಪದ ಬಳಸಿ ನಿಂದಿಸುತ್ತಲೇ ಬಂದಿದ್ದಾರೆ. ಹಾಲಿವುಡ್ ನಟಿಯ ಫೋಟೋಗೆ ಸೋನಿಯಾ ಅವರ ಮುಖ ಅಂಟಿಸಿ ವಿಕೃತತೆ ಮೆರೆದಿದ್ದಾರೆ. ವಿದೇಶದ ಅತಿಥಿ ಜೊತೆ ಪಕ್ಕದ ಕುರ್ಚಿಯಲ್ಲಿ ಕೂತು ಮಾತುಕತೆ ನಡೆಸಿದ ಫೋಟೋವನ್ನು ಅಸಭ್ಯವಾಗಿ ತಿರುಚಿ ಟ್ರೋಲ್ ಮಾಡಿದ್ದಾರೆ. ಮಹಿಳೆಯರನ್ನು ಅತ್ಯಂತ ಅಶ್ಲೀಲವಾಗಿ ನಿಂದಿಸಿ ಟ್ರೋಲ್ ಮಾಡುವ, ತಿರುಚಿದ ಫೋಟೋ- ವಿಡಿಯೋ ಹಂಚುವ ತಮ್ಮ ಬೆಂಬಲಿಗರ ನಡವಳಿಕೆಯ ಬಗ್ಗೆ ಬಿಜೆಪಿ ಯಾವತ್ತೂ ಖಂಡಿಸಿಲ್ಲ. ಪ್ರಧಾನಿ ಮೋದಿ ಅವರು ನಾರಿಶಕ್ತಿ ಬಗ್ಗೆ ಬೊಗಳೆ ಬಿಡುತ್ತಾರೆ. ತಮ್ಮದೇ ಸಂಸದನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಕುಸ್ತಿ ಪಟುಗಳ ನೋವು ಅವರನ್ನು ಬಾಧಿಸಲೇ ಇಲ್ಲ. ಬೇಟಿ ಬಚಾವೊ, ಬೇಟಿ ಪಡಾವೋ ಅಂತಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶದ ಹಾಥರಸ್, ಉನ್ನಾಂವದಲ್ಲಿ ಸಾಮೂಹಿಕ ಅತ್ಯಾಚಾರ, ಮಣಿಪುರದ ಮಹಿಳೆಯರ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಅತ್ಯಾಚಾರ, ಹತ್ಯೆಗಳು ಅವರ ಆತ್ಮಸಾಕ್ಷಿಯನ್ನು ಕಲಕಿಯೇ ಇಲ್ಲ. ಬಿಜೆಪಿ ನಾಯಕರನ್ನೇ ಹನಿಟ್ರ್ಯಾಪ್‌ಗೆ ಒಳಪಡಿಸಿದ, ಏಡ್ಸ್ ಸೋಂಕು ಹರಡಿದ ಗಂಭೀರ ಆರೋಪದಲ್ಲಿ ಎರಡು ತಿಂಗಳು ಜೈಲುವಾಸ ಅನುಭವಿಸಿದರೂ ಮುನಿರತ್ನ ಎಂಬ ದುರುಳನನ್ನು ಪಕ್ಷದಿಂದ ಅಮಾನತು ಕೂಡ ಮಾಡಿಲ್ಲ.
ಸಿ ಟಿ ರವಿ ಪ್ರಕರಣವನ್ನು ಸರ್ಕಾರ ಮತ್ತು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಬೇಕಿದೆ. ಮಹಿಳೆಯ ಘನತೆಯನ್ನು ಎತ್ತಿ ಹಿಡಿಯಬೇಕಿದೆ. ಪುರುಷಾಧಿಪತ್ಯದ ಮಾನಸಿಕ ದಾಸ್ಯದಿಂದ ಹೆಣ್ಣುಮಕ್ಕಳು ಹೊರಬರಬೇಕಿದೆ. ಇಂತಹ ಹೇಯ ಘಟನೆಗಳನ್ನು ಕೊರಳೆತ್ತಿ ಖಂಡಿಸಬೇಕಿದೆ. ಸಿಡಿದೆದ್ದು ಬೀದಿಗಿಳಿಯಬೇಕಿದೆ. ಪುರುಷದಾಸ್ಯದ ಬೇಡಿಗಳನ್ನು ಕಳಚಿ ಒಗೆಯುವ ಮನಸ್ಥಿತಿಯನ್ನು ಪ್ರಕಟಿಸಬೇಕಿದೆ. ನಿಷ್ಕ್ರಿಯ ಮೌನವು ರವಿಯಂತಹ ಸ್ತ್ರೀದ್ವೇಷಿ ಮನಸ್ಥಿತಿಗೆ ಮತ್ತಷ್ಟು ಉತ್ತೇಜನ ನೀಡುವುದೆಂಬ ಕಟು ಸತ್ಯವನ್ನು ಅರಿಯಬೇಕಿದೆ.
