ಈ ಸಮಾಜ ಹೆಣ್ಣುಮಕ್ಕಳ ಬಗ್ಗೆ ಸಂವೇದನಾಶೂನ್ಯವಾಗಿದೆ. ಗಂಡು ಮಕ್ಕಳ ನಡವಳಿಕೆಗಳು ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ. ಬಡತನ, ಅದರ ಮುಂದುವರಿಕೆಯಾಗಿ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವ ದೊಡ್ಡ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಅಂತಹ ಯುವಕರೇ ಇಂದು ಸಂಘಟಿತ ಸಮಾಜಘಾತಕ ಕೃತ್ಯಗಳಿಗೂ ಬಳಕೆಯಾಗುತ್ತಿದ್ದಾರೆ.
ಕೊಡಗಿನ ನಾಗರಹೊಳೆ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರಿಬ್ಬರು ತಮ್ಮ ಜೊತೆಗಿದ್ದ ಮೂವರು ಯುವಕರ ಜೊತೆ ಅಪರಿಚಿತರ ಕಾರಿನಲ್ಲಿ ಪ್ರಯಾಣಿಸುವ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೊದಲೇ ಕಾರಿನಲ್ಲಿದ್ದ ಇಬ್ಬರು ಯುವಕರು ಒಬ್ಬ ಬಾಲಕಿಯನ್ನು ಹೊರಗೆಳೆದು ಅತ್ಯಾಚಾರ ಮಾಡಿದರೆ, ಮತ್ತೊಬ್ಬ ಬಾಲಕಿಯ ಮೇಲೆ ಜೊತೆಗಿದ್ದ ಪರಿಚಿತ ಮೂವರು ಯುವಕರೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ ಐವರು ಯುವಕರ ಬಂಧನವಾಗಿದೆ. ಘಟನೆ ನಡೆದು ಮೂರ್ನಾಲ್ಕು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಮುಖ್ಯವಾಹಿನಿಯ ಮಾಧ್ಯಮಗಳಿಗೆ ಇದು ಸುದ್ದಿಯೇ ಅಲ್ಲ. ಶ್ರೀಮಂತರ ಮನೆಯ ಮದುವೆ, ಔತಣ, ಸಂಗೀತ ಕಾರ್ಯಕ್ರಮದ ಲೈವ್ ಪ್ರಸಾರ ಮಾಡುವುದರಲ್ಲಿ ಅವರೆಲ್ಲ ಮಗ್ನರಾಗಿದ್ದಾರೆ. ಅತ್ಯಾಚಾರದಂತಹ ಘೋರ ಪ್ರಕರಣಗಳನ್ನು ಸುದ್ದಿ ಮಾಡುವುದರಲ್ಲೂ ಧರ್ಮ, ವರ್ಗದ ಆಧಾರದಲ್ಲಿ ಮಾಧ್ಯಮಗಳು ಹೇಗೆ ವರ್ತಿಸುತ್ತಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಕೊಡಗಿನಲ್ಲಿ ಇತ್ತೀಚೆಗಷ್ಟೇ ಅತ್ಯಾಚಾರಕ್ಕೊಳಗಾದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು. ಅತ್ಯಾಚಾರಿ ಆಕೆಯ ಕುಟುಂಬದವರನ್ನು ಬೆದರಿಸಿದ ಕಾರಣಕ್ಕೆ ಸಂತ್ರಸ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಹಳ್ಳಿಗಾಡು ಪ್ರದೇಶಗಳಲ್ಲಿ ಅತ್ಯಾಚಾರ ಪ್ರಕರಣದಲ್ಲಿ ದೂರು ದಾಖಲಾಗುವುದು, ಸುದ್ದಿಯಾಗುವುದು ಕೆಲವೇ ಕೆಲವು. ಬಹಳಷ್ಟು ಪ್ರಕರಣಗಳು ಯುವತಿಯರ ಜೊತೆಗೇ ಸಮಾಧಿಯಾಗುತ್ತಿವೆ. ಕುಟುಂಬದ ಮರ್ಯಾದೆ ಹೆಸರಿನಲ್ಲಿ ಹಲವು ಯುವತಿಯರ ಸಾವುಗಳಿಗೆ ಕುಟುಂಬದವರೇ ನ್ಯಾಯವನ್ನು ನಿರಾಕರಿಸುತ್ತಿರುವುದು ವಿಪರ್ಯಾಸ.
ಇತ್ತ ತುಮಕೂರಿನಲ್ಲಿ ಹನ್ನೊಂದು ವರ್ಷದ ಬಾಲಕಿಯನ್ನು ಆಕೆಯ ಚಿಕ್ಕಮ್ಮ ಆಂಧ್ರಪ್ರದೇಶದ ವ್ಯಕ್ತಿಗೆ 35,000 ರೂಪಾಯಿಗೆ ಮಾರಾಟ ಮಾಡಿದ ಪ್ರಕರಣ ವರದಿಯಾಗಿದೆ. ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಬಾತುಕೋಳಿ ಮಾರಿಕೊಂಡು ಬಂದಿದ್ದ ವ್ಯಾಪಾರಿಗೆ ಬಾಲಕಿಯನ್ನು ಮಾರಲಾಗಿತ್ತು. ಹನ್ನೊಂದು ವರ್ಷದ ಬಾಲಕಿಯನ್ನು ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡಿದ ಆಕೆಯ ಮನಸ್ಥಿತಿ ಎಂಥದ್ದು? ಇದರ ಹಿಂದಿನ ಅಸಹಾಯಕತೆಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ.
ಒಂದು ಕಡೆ ಪ್ರೀತಿ ನಿರಾಕರಣೆಯ ಕಾರಣಕ್ಕೆ ಪ್ರೀತಿಸಿದವರಿಂದಲೇ ಯುವತಿಯರು ಕೊಲೆಯಾಗುತ್ತಿದ್ದಾರೆ. ಮತ್ತೊಂದು ಕಡೆ ಅತ್ಯಾಚಾರ ಎಂಬ ಪಿಡುಗು ನಿತ್ಯ ನಿರಂತರವಾಗಿ ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ಕಾಡುತ್ತಿದೆ. ಬಡತನ, ಅಸಹಾಯಕತೆಯ ಕಾರಣಕ್ಕೆ ಭ್ರೂಣಹತ್ಯೆ, ಹೆಣ್ಣುಮಕ್ಕಳ ಮಾರಾಟ, ಬಾಲ್ಯವಿವಾಹ, ವೇಶ್ಯಾವಾಟಿಕೆಗೆ ತಳ್ಳುವ ವಿಕೃತಿ ಹೀಗೆ ಎಲ್ಲದಕ್ಕೂ ಬಡ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಸರ್ಕಾರ, ಕಾನೂನು, ಕೋರ್ಟು ಅಷ್ಟೇ ಅಲ್ಲ, ಇಡೀ ನಾಗರಿಕ ಸಮಾಜ ಹೆಣ್ಣುಮಕ್ಕಳಿಗೆ ಘನತೆಯ ಬದುಕು ಕಲ್ಪಿಸುವಲ್ಲಿ ಸೋತಿವೆ ಎಂದೇ ಹೇಳಬೇಕಾಗಿದೆ.
ಇರುವುದರಲ್ಲಿಯೇ ಕಠಿಣ ನಿಯಮ ಒಳಗೊಂಡ ʼಪೋಕ್ಸೊʼದಂತಹ ಅಪ್ರಾಪ್ತ ಮಕ್ಕಳ (ಹೆಣ್ಣು, ಗಂಡು) ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗೇ ನಮ್ಮ ಪೊಲೀಸರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಅದು ಉಳ್ಳವರಿಗೊಂದು, ಸಾಮಾನ್ಯರಿಗೊಂದು ಎಂಬಂತಾಗಿದೆ. ಬಿಜೆಪಿ ಮುಖಂಡ ಬಿ ಎಸ್ ಯಡಿಯೂರಪ್ಪ ಮೇಲಿನ ಪೋಕ್ಸೊ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿ ಇದಕ್ಕೊಂದು ಉತ್ತಮ ಉದಾಹರಣೆ. ಪೋಕ್ಸೊ ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಯ ಬಂಧನವಾಗಬೇಕು ಎಂದು ಪೋಕ್ಸೊ ನಿಯಮ ಹೇಳುತ್ತದೆ. ಆದರೆ, ಯಡಿಯೂರಪ್ಪ ಅವರ ಪ್ರಕರಣದಲ್ಲಿ ಬಂಧನ ಆಗಿಲ್ಲ ಎಂಬುದು ಒಂದು ಲೋಪವಾದರೆ, ಸಿಐಡಿ ಅಧಿಕಾರಿಗಳು ಮೂರು ತಿಂಗಳು ಯಾವುದೇ ಪ್ರಕ್ರಿಯೆ ನಡೆಸಿಯೇ ಇಲ್ಲ. ಬಾಲಕಿಯ ತಾಯಿ ನಿಧನರಾಗಿದ್ದು, ಸಹೋದರ ಹೈಕೋರ್ಟ್ ಮೊರೆ ಹೋದ ನಂತರ ಯಡಿಯೂರಪ್ಪ ವಿರುದ್ಧ ಬಂಧನ ವಾರಂಟ್ ಜಾರಿಯಾಗಿತ್ತು. ಬಂಧನ ಭೀತಿಯಿಂದ ಮೂರು ದಿನ ನಾಪತ್ತೆಯಾಗಿದ್ದ ಆರೋಪಿ ನಿರೀಕ್ಷಣಾ ಜಾಮೀನು ಪಡೆದು ನಂತರ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದರು. ಇದು ಎಂತಹ ಕಠಿಣ ಕಾನೂನನ್ನೂ ನಮ್ಮ ಅಧಿಕಾರಸ್ಥರು, ಅಧಿಕಾರಿಗಳು ನಗಣ್ಯ ಮಾಡಿಬಿಡುತ್ತಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ.
ಈ ಸಮಾಜ ಹೆಣ್ಣುಮಕ್ಕಳ ಬಗ್ಗೆ ಸಂವೇದನಾಶೂನ್ಯವಾಗಿದೆ. ಗಂಡು ಮಕ್ಕಳ ನಡವಳಿಕೆಗಳು ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ. ಬಡತನ, ಅದರ ಮುಂದುವರಿಕೆಯಾಗಿ ಅರ್ಧಕ್ಕೆ ಶಿಕ್ಷಣವನ್ನು ಮುಕ್ತಾಯ ಮಾಡುತ್ತಿರುವ ದೊಡ್ಡ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಅಂತಹ ಯುವಕರೇ ಸಂಘಟಿತ ಸಮಾಜಘಾತಕ ಕೃತ್ಯಗಳಿಗೆ ಬಳಕೆಯಾಗುತ್ತಿದ್ದಾರೆ. ನಟ ದರ್ಶನ್ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡ ಯುವಕರ ಹಿನ್ನಲೆ ನೋಡಿದರೆ ಅರ್ಥವಾಗುತ್ತದೆ. ದುಶ್ಚಟ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ್ರೋಹಿಗಳಾಗುತ್ತಿರುವ ಯುವ ಸಮೂಹವನ್ನು ತಿದ್ದುವ ಕಡೆಗೆ ಸಮಾಜ ಸಾಗುತ್ತಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಅಂತಹ ವಿದ್ಯಾರ್ಥಿಗಳನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡುತ್ತಿಲ್ಲ. ಮನೆಯಲ್ಲೂ ಸರಿಯಾದ ಮಾರ್ಗದರ್ಶನ ಇಲ್ಲ. ಎಲ್ಲರೂ ಯಾಂತ್ರಿಕವಾಗಿ ತಮ್ಮ ತಮ್ಮ ಕೆಲಸ ಮಾಡುತ್ತಾ, ನಮಗ್ಯಾಕೆ ಇಲ್ಲದ ಉಸಾಬರಿ ಎಂಬ ಉದಾಸೀನತೆಯಲ್ಲಿರುತ್ತಾರೆ. ಈ ಸಾಮೂಹಿಕ ನಿರ್ಲಕ್ಷ್ಯದ ನಡವಳಿಕೆಗಳ ಪರಿಣಾಮ ಬಲಿಪಶುವಾಗುತ್ತಿರುವುದು ಹೆಣ್ಣುಮಕ್ಕಳು.
ಹೆಣ್ಣುಮಕ್ಕಳ ಸುರಕ್ಷತೆ ಎಲ್ಲರ ಹೊಣೆ. ಸಾಮೂಹಿಕ ಅತ್ಯಾಚಾರ, ಕೊಲೆ, ಮಕ್ಕಳ ಮಾರಾಟ, ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ ಸಾಮಾಜಿಕ ಪಿಡುಗು. ಇದರ ನಿರ್ಮೂಲನೆಯಾಗದ ಹೊರತು ಯಾವುದೇ ಸಮಾಜ ಸ್ವಸ್ಥ ಸಮಾಜ ಎನಿಸದು. ಸರ್ಕಾರ, ಅಧಿಕಾರಿಗಳು, ಜವಾಬ್ದಾರಿಯುತ ನಾಗರಿಕರು ಎಲ್ಲರೂ ಸೇರಿ ಈ ಸಮಾಜದ ಮುಖ್ಯ ಭಾಗವಾದ ಮಹಿಳಾ ಸಮೂಹವನ್ನು ರಕ್ಷಿಸುವ ಪಣ ತೊಡಬೇಕಿದೆ.
