ತಾವು ಸಭಾಪತಿಯಾದ ನಂತರ ಯಾವುದೇ ಪಕ್ಷಪರ ನಿಲ್ಲದೇ ತನ್ನ ವಿವೇಚನೆಯನ್ನು ನಿಷ್ಪಕ್ಷವಾಗಿ ಬಳಸಬೇಕು ಎಂಬ ಅರಿವು ಬಸವರಾಜ ಹೊರಟ್ಟಿ ಅವರಿಗೆ ಇರಬೇಕಿತ್ತು. ಅಷ್ಟು ಮಾತ್ರವಲ್ಲ ಸಚಿವೆಯೊಬ್ಬರನ್ನು ಪರಿಷತ್ತಿನೊಳಗೇ ವೇಶ್ಯೆ ಎಂದು ಏಳು ಬಾರಿ ನಿಂದಿಸಿರುವ ಆರೋಪ ಬಂದಾಗ ನಿಜಕ್ಕೂ ಸಭಾಪತಿಗಳು ಅದೆಷ್ಟು ಸಂಯಮ ಮತ್ತು ಕಾಳಜಿಯಿಂದ ವರ್ತಿಸಬೇಕಿತ್ತೋ ಹಾಗೆ ವರ್ತಿಸಿಲ್ಲ
ಡಿಸೆಂಬರ್ 19ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಪರಿಷತ್ತಿನ ಕಲಾಪ ಮುಗಿಯುತ್ತಿದ್ದಂತೆ ಆಡಳಿತ ಮತ್ತು ವಿಪಕ್ಷಗಳ ನಡುವೆ ನಡೆದ ಮಾತಿನ ಚಕಮಕಿ ಮಧ್ಯೆ ಪರಿಷತ್ ಸದಸ್ಯ ಸಿ ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ ಆರೋಪ ಕೇಳಿಬಂದಿತ್ತು. ಪ್ರಕರಣ ಪೊಲೀಸ್ ಮೆಟ್ಟಿಲೇರಿ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿ ಬಂಧನ, ಬಿಡುಗಡೆ ಎಲ್ಲವೂ ನಡೆದಿದೆ. ಬಿಜೆಪಿ ಜೊತೆ ಸೇರಿ ಸಕಲ ಮಾಧ್ಯಮಗಳು ಒಂದಾಗಿ ಸಚಿವೆಗೆ ನಿಂದನೆ ಮಾಡಿದ ಪ್ರಕರಣಕ್ಕಿಂತ ಹೆಚ್ಚಾಗಿ ಸಿ ಟಿ ರವಿ ಬಂಧನವನ್ನೇ ಅಕ್ರಮ, ಅಧಿಕಾರ ದುರುಪಯೋಗ ಎಂದು ಬಿಂಬಿಸಿದ್ದವು.
ಇದರ ಮಧ್ಯೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ತೀರ್ಮಾನ, ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದು ಅಷ್ಟೇ ಅಲ್ಲ ಅಶ್ಲೀಲ ಪದ ಬಳಕೆ ಮಾಡಿದ ಬಗ್ಗೆ ಇರುವ ಸಾಕ್ಷಿ, ಪುರಾವೆಗಳನ್ನು ಪರಿಶೀಲಿಸದೆ ರೂಲಿಂಗ್ ಕೊಟ್ಟು ನಾನು ಹೇಳಿದ್ದೇ ಅಂತಿಮ, ಈ ಪ್ರಕರಣ ಇಲ್ಲಿಗೆ ಮುಗಿದಿದೆ ಎಂದು ಹೇಳಿರುವುದು ಆರಂಭದಿಂದಲೂ ಆಕ್ಷೇಪಕ್ಕೆ ಕಾರಣವಾಗಿತ್ತು. ಘಟನೆ ನಡೆದ ತಕ್ಷಣವೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಪರಿಷತ್ತಿನ ಸದಸ್ಯರಾದ ಬಿ ಕೆ ಹರಿಪ್ರಸಾದ್, ಉಮಾಶ್ರೀ ಮುಂತಾದವರು ಸಭಾಪತಿ ಕೊಠಡಿಗೆ ತೆರಳಿ ಅವರ ಗಮನಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲ ತಾವು ಕೇಳಿಸಿಕೊಂಡಿರುವುದಾಗಿ ಡಾ ಯತೀಂದ್ರ ಸಿದ್ದರಾಮಯ್ಯ, ಉಮಾಶ್ರೀ ಅವರೂ ಸಾಕ್ಷಿ ಹೇಳಿದ್ದಾರೆ. ಇಷ್ಟಾದ ಮೇಲೂ ಬಸವರಾಜ ಹೊರಟ್ಟಿ ಅವರು “ಇದು ಮುಗಿದ ಅಧ್ಯಾಯ” ಎಂದಿದ್ದರು.
ಖಾಸಗಿ ಸುದ್ದಿ ವಾಹಿನಿಯೊಂದು ಆ ಪದ ಬಳಕೆ ಮಾಡಿರುವುದು ನಿಜ ಎಂದು ವಿಡಿಯೋವನ್ನು ಪ್ರಸಾರ ಮಾಡಿತ್ತು. ಆದರೆ ಅದರ ಸತ್ಯಸತ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಕೊಟ್ಟ ನಂತರ ತನಿಖೆ ಚುರುಕುಗೊಳಿಸಿದೆ. ಇದೀಗ ಪತ್ರಿಕೆಯೊಂದು ವರದಿ ಮಾಡಿದ ಪ್ರಕಾರ ಸದನದ ಕ್ಯಾಮೆರಾದಲ್ಲಿಯೇ ಈ ದೃಶ್ಯ ಸೆರೆಯಾಗಿದ್ದು ಅದನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿತ್ತು. ನಾಲ್ಕು ತಾಸುಗಳ ವಿಡಿಯೋದಲ್ಲಿ ಸಿ ಟಿ ರವಿ ಅವರು ಆ ಪದ ಬಳಸಿದ್ದು ನಿಜ ಮತ್ತು ಅದು ಅವರದ್ದೇ ಧ್ವನಿ ಎಂದು ಸಾಬೀತಾಗಿದೆ. ಈ ಕಾರಣಕ್ಕೆ ಸಿ ಟಿ ರವಿ ಅವರು ಧ್ವನಿ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಮಾಡಿದೆ.
ಆ ಪದವನ್ನು ಸಿ ಟಿ ರವಿ ಅವರು ಒಂದು ಬಾರಿಗೆ ಬಳಸಿದ್ದರೆ ಅದು ಬಾಯಿ ತಪ್ಪಿ ಬಂತು ಅಥವಾ ಸಿಟ್ಟಿನ ಭರದಲ್ಲಿ ಬಂತು ಎಂದುಕೊಳ್ಳಬಹುದು. ಆದರೆ ಸತತವಾಗಿ ಏಳು ಬಾರಿ ಆ ಪದವನ್ನು ಬಳಸಿ ನಿಂದಿಸಿರುವುದಾಗಿ ವಿಡಿಯೋ ದಾಖಲೆ ಹೇಳಿದೆ . ಇದು ಉದ್ದೇಶಪೂರ್ವಕ ಮತ್ತು ತಾನು ಯಾವ ಸ್ಥಾನದಲ್ಲಿದ್ದೇನೆ, ಯಾವ ಪದ ಬಳಸುತ್ತಿದ್ದೇನೆ, ಯಾವ ಜಾಗದಲ್ಲಿ ನಿಂತು ಹೇಳುತ್ತಿದ್ದೇನೆ, ಯಾರಿಗೆ ಆ ಪದ ಬಳಸುತ್ತಿದ್ದೇನೆ ಎಂಬ ಅರಿವಿದ್ದೇ ಹೇಳಿದ ಧಿಮಾಕಿನ, ಪುರುಷಾಹಂಕಾರದ ಮಾತು. ಏಳು ಬಾರಿ ಬಳಸಿದ ಪದ ಪಕ್ಕದಲ್ಲಿಯೇ ಇದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಮಗೆ ಕೇಳಿಸಿಲ್ಲ ಎಂದಿರುವುದೂ ಅಷ್ಟೇ ನಾಚಿಕೆಗೇಡಿನ ಸಂಗತಿ. “ನಾನು ಫ್ರಸ್ಟ್ರೇಷನ್ ಅಂದಿದ್ದು” ಎಂದು ಸಿ ಟಿ ರವಿ ಸಮರ್ಥಿಸಿಕೊಂಡಿದ್ದರು. ಅಷ್ಟೇ ಅಲ್ಲ ತಮ್ಮ ಬಂಧನದ ವಿಚಾರವನ್ನು ನಾಟಕೀಯವಾಗಿ ಬೆಳೆಸಲು ನೋಡಿ ತಮ್ಮ ಮೇಲಿನ ಆರೋಪವನ್ನು ತೆಳುಗೊಳಿಸಲೂ ಹೊರಟಿದ್ದರು. ಇಡೀ ಪಕ್ಷ ಅದಕ್ಕೆ ಸಾಥ್ ನೀಡಿತ್ತು. ಸಿಟಿ ರವಿ ಪೊಲೀಸ್ ಕಸ್ಟಡಿಯಿಂದ ಬಿಡುಗಡೆಯಾಗಿ ಚಿಕ್ಕಮಗಳೂರಿಗೆ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹೂಮಳೆಗರೆದು ಸ್ವಾಗತಿಸಿದ್ದರು. ಸತ್ಯಕ್ಕೆ ಸಂದ ಜಯ ಎಂದು ಬಿಜೆಪಿ ನಾಯಕರು ಹೇಳಿದ್ದರು.
ಇಂತಹ ಗಂಭೀರ ಅಪರಾಧವನ್ನು ವಿಧಾನ ಪರಿಷತ್ತಿನ ಅತ್ಯಂತ ಹಿರಿಯ 30 ವರ್ಷಗಳಿಂದ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಿ ಬಂದಿರುವ, ಮುತ್ಸದ್ದಿ ಎಂದು ಕರೆಸಿಕೊಂಡಿರುವ ಸಭಾಪತಿ ಬಸವರಾಜ ಹೊರಟ್ಟಿ “ಮುಗಿದು ಹೋದ ಅಧ್ಯಾಯ” ಎಂದು ಹೇಳಿರುವುದು ಇಡೀ ಸ್ತ್ರೀ ಕುಲಕ್ಕೆ ಮಾಡಿರುವ ಅವಮಾನ. ಹೊರಟ್ಟಿ ಅವರೇ ಸದನ ನಡೆಯುತ್ತಿರುವಾಗ ನಡೆದ ಘಟನೆಯಲ್ಲ, ಸದನ ಮುಂದೂಡಿದ ನಂತರ ನಡೆದ ಘಟನೆ. ಅದಕ್ಕೆ ಯಾವುದೇ ದಾಖಲೆ ಇಲ್ಲ ಎಂದು ಹೇಳುತ್ತಾರೆ. ಮತ್ತೊಂದೆಡೆ ಪರಿಷತ್ತಿನ ಒಳಗೆ ನಡೆದ ಘಟನೆಗೆ ನನ್ನ ಹೊರತು ಪೊಲೀಸರ ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಹೇಳುತ್ತಾರೆ. ತಾವೇ ‘ಸುಪ್ರೀಂ’ ಎಂದ ಮೇಲೆ ಎಲ್ಲ ಪುರಾವೆ, ಸಾಕ್ಷ್ಯಗಳು- ಸಾಕ್ಷಿಗಳನ್ನು ಪರಿಶೀಲಿಸುವ ಅಥವಾ ಶಿಸ್ತು ಸಮಿತಿಗೆ ವಹಿಸುವ ಕೆಲಸ ಮಾಡಿಲ್ಲ ಯಾಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಬಸವರಾಜ ಹೊರಟ್ಟಿ ಅವರು ಈ ಪ್ರಕರಣವನ್ನು ನಾಜೂಕಾಗಿ ನಿರ್ವಹಿಸಿಬೇಕಿತ್ತು. ಶಾಸನಸಭೆಗಳನ್ನು ಜನತಂತ್ರದ ದೇಗುಲಗಳೆಂದೇ ಬಣ್ಣಿಸುವುದುಂಟು. ಹೆಣ್ಣುಮಗಳೊಬ್ಬಳನ್ನು ಇಂತಹ ದೇಗುಲದಲ್ಲಿ ಅತ್ಯಂತ ಹೀನಾಯವಾಗಿ ನಿಂದಿಸಿರುವ ವ್ಯಕ್ತಿಗೆ ತಕ್ಕ ಶಾಸ್ತಿ ಮಾಡುವುದರಿಂದ ಹೊರಟ್ಟಿ ಅವರ ಘನತೆಯೇ ಹೆಚ್ಚುತ್ತಿತ್ತು. ಅಷ್ಟೇ ಅಲ್ಲ ಇಂತಹ ಪ್ರಕರಣಕ್ಕೆ ನೀಡಿದ ತೀರ್ಪು ಶಾಸಕಾಂಗದ ಇತಿಹಾಸದಲ್ಲಿ ದಾಖಲಾಗುತ್ತಿತ್ತು. ಅಂತಹ ಅವಕಾಶವನ್ನು ಹೊರಟ್ಟಿ ಅವರು ಕೈ ಚೆಲ್ಲಿದ್ದು ಮಾತ್ರವಲ್ಲ, ತಮ್ಮ ವ್ಯಕ್ತಿತ್ವಕ್ಕೆ ತಾವೇ ಮಸಿ ಬಳಿದುಕೊಂಡಿದ್ದಾರೆ. ಈಗ ಸಿಐಡಿ ತನಿಖೆಯಿಂದ ಹೊರಬರುವ ಸತ್ಯ ಹೊರಟ್ಟಿ ಅವರ ಕರ್ತವ್ಯಲೋಪ ಮತ್ತು ಪಕ್ಷಪಾತವನ್ನು ವಿಧಾನಪರಿಷತ್ತಿನ ಚರಿತ್ರೆಯಲ್ಲಿ ದಾಖಲಿಸುತ್ತದೆ.
ಬಸವರಾಜ ಹೊರಟ್ಟಿ ಅವರು ದೀರ್ಘ ಕಾಲ ಜೆಡಿಎಸ್‌ನಲ್ಲಿ ಇದ್ದವರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನ ಪರಿಷತ್ತಿನ ಆಯ್ಕೆ ವೇಳೆ ಬಿಜೆಪಿಗೆ ಪಕ್ಷಾಂತರ ಆಗಿ ಸಭಾಪತಿ ಸ್ಥಾನ ಗಿಟ್ಟಿಸಿಕೊಂಡವರು. ಹಾಗಾಗಿ ಬಿಜೆಪಿ ಸದಸ್ಯನ ರಕ್ಷಣೆಗೆ ಸಭಾಪತಿ ಹೊರಟ್ಟಿ ಆರಂಭದಿಂದಲೂ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಅವರಿಗೆ ತಾವು ಸಭಾಪತಿಯಾದ ನಂತರ ಯಾವುದೇ ಪಕ್ಷಪರ ನಿಲ್ಲದೇ ತಮ್ಮ ವಿವೇಚನಾಧಿಕಾರವನ್ನು ನಿಷ್ಪಕ್ಷವಾಗಿ ಬಳಸಬೇಕು ಎಂಬ ಅರಿವು ಇರಬೇಕಿತ್ತು. ಅಷ್ಟು ಮಾತ್ರವಲ್ಲ ಸಚಿವೆಯೊಬ್ಬರನ್ನು ಪರಿಷತ್ತಿನೊಳಗೇ ವೇಶ್ಯೆ ಎಂದು ಏಳು ಬಾರಿ ನಿಂದಿಸಿರುವ ಆರೋಪ ಬಂದಾಗ ನಿಜಕ್ಕೂ ಸಭಾಪತಿಗಳು ಅದೆಷ್ಟು ಸಂಯಮ ಮತ್ತು ಕಾಳಜಿಯಿಂದ ವರ್ತಿಸಬೇಕಿತ್ತೋ ಹಾಗೆ ವರ್ತಿಸಿಲ್ಲ. ಹಾಗೆ ಮಾಡಿ ಸಿ ಟಿ ರವಿಯ ಮಟ್ಟಕ್ಕೆ ಸ್ವತಃ ಸಭಾಪತಿ ಹೊರಟ್ಟಿ ತಮ್ಮನ್ನು ಇಳಿಸಿಕೊಂಡಂತೆ ಆಗಲಿಲ್ಲವೇ?
ಜನಪ್ರತಿನಿಧಿಗಳಲ್ಲಿ ಸಭ್ಯತೆ, ಸಚ್ಚಾರಿತ್ರ್ಯ ನಿರೀಕ್ಷಿಸೋದು ಈಗ ಅಪ್ರಸ್ತುತ. ಆದರೆ, ಸಾರ್ವಜನಿಕ ವೇದಿಕೆಗಳಲ್ಲಿ, ಕನಿಷ್ಠ ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳುವಷ್ಟಾದರೂ ಘನತೆಯಿಂದ ವರ್ತಿಸಬೇಕಾಗುತ್ತದೆ. ಈಗ ಸಿಐಡಿ ತನಿಖೆಯನ್ನಾದರೂ ಸಲೀಸಾಗಿ ನಡೆಯಲು ಸಹಕರಿಸಿ ಹೊರಟ್ಟಿ ತಮ್ಮ ಮೇಲಿನ ಕಳಂಕವನ್ನು ತೊಳೆದುಕೊಳ್ಳಬೇಕಿದೆ.
