ಈ ದಿನ ಸಂಪಾದಕೀಯ | ಮೀಸಲಾತಿಗೇ ಕುತ್ತು ಬಂದಿರುವಾಗ, ಒಳಮೀಸಲಿನ ನಿಜವನ್ನು ಇನ್ನೆಷ್ಟು ಕಾಲ ಮುಂದೂಡುತ್ತೀರಿ?

Date:

Advertisements

ಒಳಮೀಸಲಾತಿ ಜಾರಿಯ ತನಕ ರಾಜ್ಯದ ಎಲ್ಲ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿಯಲಾಗುವುದು ಎಂಬುದಾಗಿ ಸಿದ್ದರಾಮಯ್ಯ ಸರ್ಕಾರ ನೀಡಿರುವ ಭರವಸೆಯೊಂದೇ ಸದ್ಯದ ಆಶಾಕಿರಣ. ಆದರೆ ಸರ್ಕಾರಿ ನೇಮಕಾತಿಗಳು ನಡೆಯುವುದೇ ವಿರಳವಾಗಿರುವ ದಿನಮಾನಗಳಿವು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವುದಾಗಿ ಸಾರಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಪೈಕಿ ಅತಿ ಹಿಂದುಳಿದ ಮತ್ತು ಅತಿ ಶೋಷಿತ ಜಾತಿಗಳಿಗೆ ಒಳಮೀಸಲಾತಿಯನ್ನು ಸುಪ್ರೀಮ್ ಕೋರ್ಟಿನ ಸಂವಿಧಾನ ಪೀಠ ಎರಡು ತಿಂಗಳ ಹಿಂದೆ (ಆ.1.2024) ಎತ್ತಿ ಹಿಡಿಯುತ್ತದೆ. ಈ ಮೀಸಲಾತಿಯನ್ನು ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆಯೆಂದೂ ಐತಿಹಾಸಿಕ ತೀರ್ಪು ನೀಡುತ್ತದೆ. ಒಳಮೀಸಲಾತಿ ಜಾರಿಯನ್ನು ವರ್ಷಗಟ್ಟಲೆ ಮುಂದೆ ಹಾಕುತ್ತ ಬಂದಿದ್ದ, ಕೇಂದ್ರ ಸರ್ಕಾರದ ಅಂಗಳಕ್ಕೆ ಹೊತ್ತು ಹಾಕುತ್ತ ಬಂದಿದ್ದ ರಾಜ್ಯ ಸರ್ಕಾರಗಳನ್ನು ಸುಪ್ರೀಮ್ ಕೋರ್ಟ್ ತೀರ್ಪು ಕಟ್ಟಿ ಹಾಕಿದೆ. ನಿರ್ಧಾರ ತೆಗೆದುಕೊಳ್ಳದೆ ವಿಧಿಯಿಲ್ಲ ಎಂಬ ಅನಿವಾರ್ಯ ಸನ್ನಿವೇಶವನ್ನು ಸೃಷ್ಟಿಸಿದೆ.

ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬ (ಅ)ನೀತಿಯನ್ನು ಕರ್ನಾಟಕ ಮತ್ತು ತೆಲಂಗಾಣದ ಕಾಂಗ್ರೆಸ್ ಸರ್ಕಾರಗಳು ಅನುಸರಿಸಿವೆ ಎಂದು ಮೇಲ್ನೋಟಕ್ಕೆ ತೋರಿ ಬರುತ್ತಿದೆ.

Advertisements

ಹರಿಯಾಣದಲ್ಲಿ ಸತತ ಮೂರನೆಯ ಸಲ ಆಯ್ಕೆಯಾಗಿರುವ ಬಿಜೆಪಿ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ನಾಯಬ್ ಸಿಂಗ್ ಸೈನಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಮೊಟ್ಟಮೊದಲ ಸಚಿವ ಸಂಪುಟ ಸಭೆಯಲ್ಲಿ (ಅ.19.2024) ಈ ನಿರ್ಧಾರ ತೆಗೆದುಕೊಂಡಿದೆ. ಒಳಮೀಸಲಾತಿ ಜಾರಿಗೆ ಸಮಿತಿ, ಆಯೋಗ ಮುಂತಾದ ಕಾಲಹರಣ ತಂತ್ರಗಳಿಗೆ ಶರಣಾಗಲಿಲ್ಲ ಎಂಬುದು ಗಮನಾರ್ಹ.

ಮೂರು-ನಾಲ್ಕು ದಶಕಗಳ ಹೋರಾಟದ ನಂತರವೂ ಮಾದಿಗ ಒಳಪಂಗಡ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪುನಃ ಬೀದಿಗಿಳಿದು ಪ್ರತಿಭಟನೆಗಳು ಸಿಡಿದಿವೆ. ಸುದೀರ್ಘ ಹೋರಾಟಗಳನ್ನು ರೂಪಿಸುವ ಎಚ್ಚರಿಕೆ ನೀಡಿವೆ. ಒಳಮೀಸಲಾತಿ ಜಾರಿ ಮಾಡುವ ತನಕ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿಯುವುದಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಾವಾಗಿಯೇ ಹೇಳಿದ್ದರು. ಆದರೆ ಶಿಕ್ಷಕರ ನೇಮಕಾತಿ ಪತ್ರಗಳನ್ನು ಸದ್ದಿಲ್ಲದೆ ನೀಡಲಾಗುತ್ತಿದೆ ಎಂಬುದು ತೆಲಂಗಾಣದ ಮಾದಿಗ ದಂಡೋರದ ಮುಖ್ಯಸ್ಥ ಕೃಷ್ಣ ಮಾದಿಗ ಅವರ ಆಪಾದನೆಯಾಗಿತ್ತು.

ಸುಪ್ರೀಮ್ ಕೋರ್ಟ್ ತೀರ್ಪನ್ನು ಜಾರಿ ಮಾಡಿ ತಕ್ಷಣವೇ ಸುಗ್ರೀವಾಜ್ಞೆ ಹೊರಡಿಸಲಾಗುವುದು, ತೆಲಂಗಾಣವು ಒಳಮೀಸಲಾತಿಯನ್ನು ಜಾರಿ ಮಾಡುವ ಮೊದಲ ರಾಜ್ಯವಾಗಲಿದೆ ಎಂದು ಆ ರಾಜ್ಯದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಆಗಸ್ಟ್ ಒಂದರಂದೇ ವಿಧಾನಸಭೆಯಲ್ಲಿ ಸಾರಿದ್ದರು. ಆದರೆ ಸುಗ್ರೀವಾಜ್ಞೆಯ ಭರವಸೆಯನ್ನು ಈಡೇರಿಸಿಲ್ಲ. ಬದಲಿಗೆ ವಿಷಯವನ್ನು ಸಚಿವ ಸಂಪುಟ ಉಪಸಮಿತಿಗೆ ವಹಿಸಿದರು. ಈ ಉಪಸಮಿತಿಯು ಸುಪ್ರೀಮ್ ಕೋರ್ಟ್ ಅಥವಾ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ಆಯೋಗ ರಚಿಸುವಂತೆ ಶಿಫಾರಸ್ಸು ಮಾಡಿದೆ. ನ್ಯಾಯಮೂರ್ತಿ ಶಮೀಮ್ ಅಖ್ತರ್ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ರೇವಂತರೆಡ್ಡಿ ಗಡುವು ವಿಧಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಕೂಡ ರೇವಂತರೆಡ್ಡಿ ಅವರ ಹಾದಿಯಲ್ಲಿ ಹೆಜ್ಜೆ ಇರಿಸಿದ್ದಾರೆ. ಆಯೋಗವೊಂದನ್ನು ರಚಿಸಿ ಅದರಿಂದ ಅಂಕಿ-ಅಂಶಗಳನ್ನು ಪಡೆದುಕೊಂಡು ಮುಂದಿನ ಹೆಜ್ಜೆ ಇರಿಸುವುದಾಗಿ ಹೇಳಿದ್ದಾರೆ. ಅಕ್ಷರಶಃ ಕನಿಷ್ಠ ಮೂರು ತಿಂಗಳ ಕಾಲಾವಕಾಶ ಪಡೆದಿದ್ದಾರೆ. ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರ ಈ ಹೊತ್ತಿನಲ್ಲೂ ನಡೆದಿದೆ.

ಒಳಮೀಸಲಾತಿ ಜಾರಿಯ ತನಕ ರಾಜ್ಯದ ಎಲ್ಲ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿಯಲಾಗುವುದು ಎಂಬುದಾಗಿ ಸಿದ್ದರಾಮಯ್ಯ ಸರ್ಕಾರ ನೀಡಿರುವ ಭರವಸೆಯೊಂದೇ ಸದ್ಯದ ಆಶಾಕಿರಣ. ಆದರೆ ಸರ್ಕಾರಿ ನೇಮಕಾತಿಗಳು ನಡೆಯುವುದೇ ವಿರಳವಾಗಿರುವ ದಿನಮಾನಗಳಿವು.

ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಎರಡು ತಿಂಗಳಾದರೂ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ. ಪಕ್ಷದೊಳಗೆ ಒಳಮೀಸಲಾತಿಯ ಪರ ಮತ್ತು ವಿರೋಧದ ನಿಲುವುಗಳೆರಡೂ ಬಲವಾಗಿರುವ ಕಾರಣ ‘ಎಚ್ಚರಿಕೆಯ’ ಹೆಜ್ಜೆ ಇಡುತ್ತಿರುವುದಾಗಿ ಕಾಂಗ್ರೆಸ್ ಮೂಲಗಳು ಹೇಳಿವೆ. ಪರಾಮರ್ಶೆಗೆ ಸಮಿತಿಯೊಂದನ್ನು ರಚಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಆಗಸ್ಟ್ ಎರಡನೆಯ ವಾರದಲ್ಲಿ ಹೇಳಿದ್ದುಂಟು. ಜಾತಿ ಜನಗಣತಿ ನಡೆದು  ಜಾತಿಗಳ ಜನಸಂಖ್ಯೆಯ ಆಧಾರದ ಪ್ರಕಾರ ಪಾಲು ಹಂಚಿಕೆಯಾಗಬೇಕೆಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿಯ ಆಗ್ರಹ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುಕ್ಷಣವೇ ಜಾತಿಜನಗಣತಿ ನಡೆಯಲಿದೆ. ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ರಾಹುಲ್ ಗಾಂಧಿ ಪರಿಶಿಷ್ಟರ ಒಳಮೀಸಲಾತಿ ತೀರ್ಪು ಕುರಿತು ಬಾಯಿ ಬಿಟ್ಟಿಲ್ಲ.

ತಾವು ಪಂಜಾಬಿನ ಮುಖ್ಯಮಂತ್ರಿಯಾಗಿದ್ದಾಗ 1975ರಲ್ಲಿ ದಲಿತರಿಗೆ ಒಳ ಮೀಸಲಾತಿ ಕಲ್ಪಿಸಿದ ಮೊದಲಿಗರು ಗ್ಯಾನಿ ಜೈಲ್ ಸಿಂಗ್. ಹಿಂದುಳಿದ ವರ್ಗಕ್ಕೆ ಸೇರಿದ ಜೈಲ್ ಸಿಂಗ್ ಪರಿಶಿಷ್ಟ ಜಾತಿಗಳ ಪೈಕಿ ಅತ್ಯಂತ ಹಿಂದುಳಿದಿದ್ದ ವಾಲ್ಮೀಕಿ ಮತ್ತು ಮಜಹಬಿ ಸಿಖ್ ಪಂಗಡಗಳಿಗೆ ಶೇ.50ರ ಒಳಮೀಸಲಾತಿ ನೀಡುತ್ತಾರೆ. ಮಜಹಬಿ ಸಿಖ್ಖರನ್ನು ಅಕಾಲಿದಳದಿಂದ ಕಾಂಗ್ರೆಸ್ಸಿನತ್ತ ಸೆಳೆಯುವುದು ಜೈಲ್ ಸಿಂಗ್ ನಡೆಯ ಲೆಕ್ಕಾಚಾರವಾಗಿತ್ತು.

ವಾಸ್ತವವಾಗಿ 1994ರಲ್ಲಿ ಹರಿಯಾಣದ ಕಾಂಗ್ರೆಸ್ ಸರ್ಕಾರ ಪಂಜಾಬ್ ಮಾದರಿಯ ಒಳಮೀಸಲನ್ನು ಜಾರಿಗೆ ತಂದಿತ್ತು.   ನೆರೆಹೊರೆಯ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿನ ದಲಿತ ಮತಗಳು ಬಹುಜನ ಸಮಾಜ ಪಾರ್ಟಿಯತ್ತ ಗುಳೆ ಹೊರಟಿದ್ದ ದಿನಗಳವು.
ಒಳಮೀಸಲಾತಿಯನ್ನು 1997ರಲ್ಲೇ ಬೆಂಬಲಿಸಿದ ಅವಿಭಜಿತ ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, 2000-01ರಲ್ಲಿ ತಾವು ಎರಡನೆಯ ಸಲ ಮುಖ್ಯಮಂತ್ರಿಯಾದಾಗ ಒಳಮೀಸಲನ್ನು ಜಾರಿಗೆ ತಂದಿದ್ದರು.

ಪಂಜಾಬ್- ಹರಿಯಾಣ, ಆಂಧ್ರಪ್ರದೇಶದ ಒಳಮೀಸಲಾತಿ ಪ್ರಶ್ನೆ ನ್ಯಾಯಾಲಯಗಳ ಕಟ್ಟೆ ತುಳಿದು ಏಳುಬೀಳುಗಳನ್ನು ಕಾಣುತ್ತದೆ. ದಕ್ಷಿಣ ಭಾರತದ ಇಂದಿನ ರಾಜಕಾರಣ ಹೆಚ್ಚುಕಡಿಮೆ ಒಳಮೀಸಲಾತಿಯ ಪರವಾಗಿದ್ದರೆ ಉತ್ತರ ಭಾರತದ ಇಂದಿನ ರಾಜಕಾರಣ ಬಹುತೇಕ ಒಳಮೀಸಲಾತಿಯನ್ನು ವಿರೋಧಿಸಿದೆ.

ಜಾಟವ ಜಾತಿಗೆ ಸೇರಿದ ಕುಮಾರಿ ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿ ಮತ್ತು ಅದೇ ಜಾತಿಗೆ ಸೇರಿದ ಚಂದ್ರಶೇಖರ ಆಜಾದ್ ಅವರ ಆಜಾದ್ ಸಮಾಜ್ ಪಾರ್ಟಿ (ಕಾನ್ಶೀರಾಮ್), ಪಾಸ್ವಾನ್ ಜಾತಿಗೆ ಸೇರಿದ ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ, ರಾಮದಾಸ್ ಅಠಾವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಒಳಮೀಸಲಾತಿಯನ್ನು ವಿರೋಧಿಸಿವೆ. ದಲಿತರ ಒಗ್ಗಟ್ಟನ್ನು ಒಡೆಯುವ ಹುನ್ನಾರ ಎಂದು ಪ್ರತಿಭಟಿಸಿವೆ. ದಲಿತರು ಮತ್ತು ಮಹಾದಲಿತರು ಎಂದು ನಿತೀಶ್ ಕುಮಾರ್ ಅವರು ಬಹಳ ಹಿಂದೆಯೇ ಒಳಮೀಸಲಾತಿಯನ್ನು ಬಿಹಾರದಲ್ಲಿ ಜಾರಿಗೊಳಿಸಿದ್ದರು. ರಾಜಕೀಯ ಒತ್ತಡಗಳ ಕಾರಣದಿಂದಾಗಿ ಪಾಸ್ವಾನ್ ಜಾತಿಯನ್ನೂ ಮಹಾದಲಿತ ಜಾತಿಗಳ ಪಟ್ಟಿಗೆ ಸೇರಿಸಿದ ನಂತರ ಇದೀಗ ಬಿಹಾರದಲ್ಲಿ ಎಲ್ಲ ದಲಿತರೂ ಮಹಾದಲಿತರಾಗಿದ್ದಾರೆ. ಒಳಮೀಸಲಾತಿ ಅರ್ಥ ಕಳೆದುಕೊಂಡಿದೆ. ಈ ಅಂಶವನ್ನು ಮನಗಂಡಿರುವ ರಾಷ್ಟ್ರೀಯ ಜನತಾದಳ ಒಳಮೀಸಲಾತಿಯನ್ನು ವಿರೋಧಿಸಿದರೆ ತನಗೇನೂ ಹಾನಿಯಿಲ್ಲ ಎಂಬ ಕಾರಣಕ್ಕಾಗಿ ವಿರೋಧ ಪ್ರಕಟಿಸಿದೆ.

ಕೆನಪದರ ಅಥವಾ ಕ್ರೀಮೀ ಲೇಯರ್ ಸುಪ್ರೀಮ್ ಕೋರ್ಟ್ ತೀರ್ಪಿನ ಭಾಗವೇ ಅಲ್ಲ. ಆದರೂ ರಾಜಕೀಯ ಪಕ್ಷಗಳು ಕೆನೆಪದರದ ನೆವವನ್ನು ಮುಂದೆ ಮಾಡಿ ಒಳಮೀಸಲಾತಿಯನ್ನೂ ಅದರೊಂದಿಗೆ ಲಗತ್ತಿಸಿ ವಿರೋಧ ಮಾಡುತ್ತಿರುವುದು ವಿಡಂಬನೆಯೇ ಸರಿ.
ಸಿಪಿಐ(ಎಂ) ಮತ್ತು ಸಿಪಿಐ ಒಳಮೀಸಲನ್ನು ಸ್ವಾಗತಿಸಿವೆ. ತೀರ್ಪಿನ ಭಾಗ ಅಲ್ಲದೆ ಹೋದರೂ, ಏಳು ಮಂದಿಯ ಪೈಕಿ ನಾಲ್ವರು ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮೀಸಲಾತಿಗೆ ‘ಕೆನೆಪದರ’ ಅನ್ವಯ ಆಗಬೇಕು ಎಂದಿರುವುದನ್ನು ತಾನು ವಿರೋಧಿಸುವುದಾಗಿ ಹೇಳಿದೆ.

ಮೀಸಲಾತಿಯ ಮೂಲ ಪರಿಕಲ್ಪನೆಗೇ ಕುತ್ತು ಬಂದಿದ್ದು, ಸರ್ಕಾರಿ ವಲಯದಲ್ಲಿ ಅದನ್ನು ಕುಗ್ಗಿಸಲಾಗಿದೆ. ಇನ್ನಷ್ಟು ಮತ್ತಷ್ಟು ಕುಗ್ಗಿಸುವ ಪ್ರಯತ್ನಗಳು ಜರುಗಿವೆ. ಖಾಸಗಿ ವಲಯದಲ್ಲಿ ಮೀಸಲಾತಿ ಇಲ್ಲ. ದಲಿತರು ಬಹುಜನರು ಸಮಾನ ವೇದಿಕೆಗೆ ಬಂದು ಮೀಸಲಾತಿಯನ್ನು ಅರ್ಥಪೂರ್ಣವಾಗಿ ಉಳಿಸಿಕೊಳ್ಳಲು ಇನ್ನೂ ಬಹುದೊಡ್ಡ ಅಸ್ತಿತ್ವದ ಹೋರಾಟಗಳನ್ನು ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಒಳಪಂಗಡಗಳು ಇಲ್ಲದವರಿಗೆ ಕೊಟ್ಟು ಇದ್ದವರು ಕೊಂಚ ಹಿಂದೆ ಸರಿಯದೆ ಹೋದರೆ ದಲಿತವಿರೋಧಿ ಶಕ್ತಿಗಳು ಸನ್ನಿವೇಶದ ದುರ್ಲಾಭ ಪಡೆಯುವುದು ನಿಶ್ಚಿತ.

 ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು….’ ಎಂಬ ಬಸವ ವಚನವನ್ನು ನೆನೆಯಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X