ರಿಚರ್ಡ್ ನಿಕ್ಸನ್‌ರ ಶಕ್ತಿಶಾಲಿ ಅಮೆರಿಕ ಮತ್ತು ಘಟಾನುಘಟಿ ಚೀನಾದ ಬೆದರಿಕೆಗಳಿಗೆ ಬಗ್ಗದ ಇಂದಿರಾ ಗಾಂಧಿ ಗುಜರಾತಿನ ವಿದ್ಯಾರ್ಥಿ ಚಳವಳಿ ಮುಂದೆ ಮೆತ್ತಗಾಗಿದ್ದರು. ಇಂದಿರಾ ಈ ನೆಲದ ಕಾನೂನಿನ ಪ್ರಕಾರ ಘೋಷಿಸಿದ್ದ ತುರ್ತುಪರಿಸ್ಥಿತಿಗೆ, ದಮನ ದಬ್ಬಾಳಿಕೆಗೆ ಕಾನೂನಿನ ಪ್ರಕಾರವೇ ಒಂದು ಅಂತ್ಯವಿತ್ತು. ಆದರೆ, ಕಳೆದ ಹನ್ನೊಂದು ವರ್ಷಗಳಿಂದ ಜಾರಿಯಲ್ಲಿರುವ ಅಘೋಷಿತ ತುರ್ತುಪರಿಸ್ಥಿತಿಗೆ ಕೊನೆಯೇ ಇಲ್ಲ.
ಐವತ್ತು ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಇದೇ ದಿನದಂದು (ಜೂನ್ 25) ಆಂತರಿಕ ತುರ್ತುಪರಿಸ್ಥಿತಿ ಘೋಷಿಸಿದ್ದರು. ದೇಶದ ಜನತಂತ್ರ ವ್ಯವಸ್ಥೆಯ ಪಾಲಿಗೆ ಅಂದು ಆರಂಭವಾದ ಕರಾಳ ಅಧ್ಯಾಯ 19 ತಿಂಗಳ ತನಕ ಮುಂದುವರೆಯಿತು. ಇಂದಿರಾ ಆಡಳಿತ ದೇಶದ ಸುದ್ದಿ ಮಾಧ್ಯಮಗಳು ಸಾರ್ವಜನಿಕ ಸಂವಾದ ಬಾಯಿಗೆ ಬೀಗ ಜಡಿಯಿತು. ಪ್ರತಿಪಕ್ಷಗಳ ನಾಯಕರನ್ನು ಪತ್ರಕರ್ತರನ್ನು ಬಂಧಿಸಿ ಜೈಲಿಗೆ ತಳ್ಳಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಯಿತು. ಮೂಲಭೂತ ಹಕ್ಕುಗಳಿಗೆ ಕೂಡ ಚ್ಯುತಿ ಬಂದಿತು. ಸರ್ವೋಚ್ಚ ನ್ಯಾಯಾಲಯ ಕೂಡ ತುರ್ತು ಪರಿಸ್ಥಿತಿಗೆ ತಾಳ ಹಾಕಿತು. ತುರ್ತು ಪರಿಸ್ಥಿಯ ಅವಧಿಯಲ್ಲಿ ಮೂಲಭೂತ ಹಕ್ಕುಗಳನ್ನು ಕೂಡ ಅಮಾನತಿನಲ್ಲಿಡಬಹುದು ಎಂಬ ತೀರ್ಪನ್ನು ನೀಡಿಬಿಟ್ಟಿತು!
1975-77ರ ನಡುವಣ 19 ತಿಂಗಳ ಕಾಲ ಸರ್ಕಾರ ದಬ್ಬಾಳಿಕೆ ನಡೆಸಿತು. ಅಸಂಖ್ಯ ಅತಿರೇಕಗಳನ್ನು ಹರಿಯಬಿಟ್ಟಿತು. ಸ್ವತಂತ್ರ ಭಾರತದ ಕರಾಳ ಅಧ್ಯಾಯಗಳಲ್ಲಿ ಒಂದೆನಿಸಿ ಚರಿತ್ರೆಯನ್ನು ಸೇರಿಹೋಯಿತು.
1974ರ ಜನವರಿ ತಿಂಗಳು. ಗುಜರಾತಿನಲ್ಲಿ ‘ನವನಿರ್ಮಾಣ ಆಂದೋಲನ’ ಸಿಡಿದಿತ್ತು. ಅಹಮದಾಬಾದಿನ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲಿನ ಊಟ ತಿಂಡಿಯ ದರ ಹೆಚ್ಚಳದ ವಿರುದ್ಧದ ಕಿಡಿಯಿದು. ಹಣದುಬ್ಬರ, ಬೆಲೆ ಏರಿಕೆ ಹಾಗೂ ಗುಜರಾತ್ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಆಪಾದನೆಗಳು ಈ ಬೆಂಕಿಗೆ ಎಣ್ಣೆ ಸುರಿದಿದ್ದವು. ವಿದ್ಯಾರ್ಥಿ ಚಳವಳಿ ಭುಗಿಲೆದ್ದಿತು. ಗಲಭೆ, ಅಗ್ನಿಸ್ಪರ್ಶ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆದವು. ಒಂದೇ ತಿಂಗಳಲ್ಲಿ ನೂರು ಸಾವುಗಳು ಮತ್ತು ಸಾವಿರಾರು ದಸ್ತಗಿರಿಗಳಾದವು.
ರಿಚರ್ಡ್ ನಿಕ್ಸನ್‌ರ ಶಕ್ತಿಶಾಲಿ ಅಮೆರಿಕ ಮತ್ತು ಘಟಾನುಘಟಿ ಚೀನಾದ ಬೆದರಿಕೆಗಳಿಗೆ ಬಗ್ಗದ ಇಂದಿರಾ ಗಾಂಧಿ ಗುಜರಾತಿನ ವಿದ್ಯಾರ್ಥಿ ಚಳವಳಿ ಮುಂದೆ ಮೆತ್ತಗಾದರು. ಕಾಂಗ್ರೆಸ್ ಮುಖ್ಯಮಂತ್ರಿ ಚಿಮಣ್ ಭಾಯಿ ಪಟೇಲ್ ಫೆಬ್ರವರಿಯಲ್ಲಿ ರಾಜೀನಾಮೆ ಕೊಟ್ಟರು. ರಾಷ್ಟ್ರಪತಿ ಆಡಳಿತ ಜಾರಿಯಾಯಿತು.
ಏಪ್ರಿಲ್ ತಿಂಗಳಿನಲ್ಲಿ ಜಯಪ್ರಕಾಶ ನಾರಾಯಣ ಸಂಪೂರ್ಣ ಕ್ರಾಂತಿಯ ಕರೆ ನೀಡಿದ್ದರು. ತಮ್ಮ ಸಂಪುಟ ಸೇರುವಂತೆ ನೆಹರೂ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದ ಅಧಿಕಾರ ವೈರಾಗ್ಯ ತೋರಿದ್ದವರು ಜೆಪಿ. ಕಾಲಪ್ರವಾಹದಲ್ಲಿ ನೆಹರು ಪುತ್ರಿಯ ವಿರುದ್ಧ ಚಳವಳಿಯ ಮುಂಚೂಣಿ ವಹಿಸುವಂತಾಯಿತು. ಭ್ರಷ್ಟಾಚಾರ, ನಿರುದ್ಯೋಗದ ವಿರುದ್ಧ ಬಿಹಾರದ ವಿದ್ಯಾರ್ಥಿಗಳು ಗುಜರಾತನ್ನು ಅನುಕರಿಸಿದರು. ಇಂದಿರಾ ಸರ್ಕಾರ ನಡೆಸಿದ ಪರಮಾಣು ಪರೀಕ್ಷೆಗೆ ಅಮೆರಿಕೆಯ ವಿರೋಧ ಎದುರಾಗಿತ್ತು. ಭಾರತದ ಮೇಲೆ ನಿರ್ಬಂಧಗಳನ್ನು ಹೇರಲಾಯಿತು. ಆಹಾರ ಕೊರತೆಯ ಹಾಹಾಕಾರ ಎದ್ದಿತ್ತು.
ಅಂದಿನ ದಿನಗಳಲ್ಲಿ ಬೆಂಕಿಯುಂಡೆ ಎಂದೇ ಬಣ್ಣಿಸಲಾಗಿದ್ದ ಸಮಾಜವಾದಿ ಜಾರ್ಜ್ ಫರ್ನಾಂಡಿಸ್ ರೇಲ್ವೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದರು. ಉತ್ತಮ ವೇತನ ಮತ್ತು ಸೇವಾ ಸೌಲಭ್ಯಗಳಿಗೆ ಆಗ್ರಹಿಸಿ ರೇಲ್ವೆ ನೌಕರರು 20 ದಿನಗಳ ಕಾಲ ದೀರ್ಘ ಮುಷ್ಕರ ನಡೆಸಿದರು. ಮುಷ್ಕರದ ನೇತಾರರನ್ನು ಸರ್ಕಾರ ಬಂಧಿಸಿತು. ಜಾರ್ಜ್ ಭೂಗತರಾದರು.
ಬಿಹಾರದಲ್ಲಿ ಚಳವಳಿ ರಭಸ ಪಡೆದು ಬಿಹಾರ ಛಾತ್ರ ಸಂಘರ್ಷ ಸಮಿತಿಯನ್ನು ರಚಿಸಿದರು ಜೆಪಿ. ಇಂದಿರಾ ಸರ್ಕಾರ ಭ್ರಷ್ಟ, ಅನೈತಿಕ. ಇದರ ವಿರುದ್ಧ ಬಂಡೇಳಿರಿ ಎಂದು ಕರೆ ನೀಡಿದ ಜೆಪಿ ರ್ಯಾಲಿಗಳಿಗೆ ಭಾರೀ ಜನ ಸೇರತೊಡಗಿದ್ದರು. ದೇಶಾದ್ಯಂತ ಪ್ರವಾಸ ಕೈಗೊಂಡರು ಜೆಪಿ. ಕಾರ್ಮಿಕರು ವಿದ್ಯಾರ್ಥಿಗಳನ್ನು ಭಾರೀ ಸಂಖ್ಯೆಯಲ್ಲಿ ಸೆಳೆದರು.
1975ರ ಮಾರ್ಚ್ ಆರರಂದು ಸಂಸತ್ ಚಲೋ ಎಂಬ ಭಾರೀ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದರು ಜೆಪಿ. ಇಂದಿರಾ ರಾಜೀನಾಮೆಗಾಗಿ ಆಗ್ರಹಿಸಿದ್ದರು. ಇಂದಿರಾ ಅವರ ಅನೈತಿಕ ಆದೇಶಗಳನ್ನು ಪಾಲಿಸಕೂಡದೆಂದು ಪೊಲೀಸ್ ಮತ್ತು ಅಧಿಕಾರಶಾಹಿಯನ್ನು ಒತ್ತಾಯಿಸಿದ್ದರು.
1975ರ ಏಪ್ರಿಲ್ ತಿಂಗಳಿನಲ್ಲಿ ಜೆಪಿ ಬೆಂಬಲಿತ ಜನತಾ ಫ್ರಂಟ್ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಭಾರೀ ಪ್ರಮಾಣದ ಗೆಲುವು ಕಂಡಿತು. ಈ ಮೈತ್ರಿಕೂಟ ಸಂಸ್ಥಾ ಕಾಂಗ್ರೆಸ್, ಭಾರತೀಯ ಜನಸಂಘ, ಭಾರತೀಯ ಲೋಕದಳ, ಹಾಗೂ ಸೋಶಲಿಸ್ಟ್ ಪಾರ್ಟಿಯನ್ನು ಒಳಗೊಂಡಿತ್ತು. ಗೋಡೆಯ ಮೇಲಿನ ಬರೆಹವನ್ನು ಓದಿಕೊಂಡರು ಇಂದಿರಾ.
ಇದೇ ಹೊತ್ತಿನಲ್ಲಿ ಜೂನ್ 12ರಂದು ಅಲಹಾಬಾದ್ ಹೈಕೋರ್ಟಿನ ತೀರ್ಪು ಇಂದಿರಾ ಪಾಲಿಗೆ ಸಿಡಿಲಿನಂತೆ ಎರಗಿತ್ತು. ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಇಂದಿರಾ ಅವರ 1971ರ ಚುನಾವಣಾ ಗೆಲುವನ್ನು ಅನೂರ್ಜಿತ ಎಂದು ಸಾರಿತ್ತು. ಇಂದಿರಾ ಅವರು ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆಂಬ ರಾಜನಾರಾಯಣ್ ಆರೋಪವನ್ನು ಎತ್ತಿ ಹಿಡಿದಿತ್ತು. ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲಕೂಡದೆಂಬ ನಿಷೇಧವನ್ನೂ ಇಂದಿರಾ ಮೇಲೆ ಹೇರಲಾಗಿತ್ತು. ಪ್ರತಿಪಕ್ಷಗಳು ಇಂದಿರಾ ರಾಜೀನಾಮೆಗೆ ಪಟ್ಟು ಹಿಡಿದವು. ಅಲಹಾಬಾದ್ ಹೈಕೋರ್ಟಿನ ತೀರ್ಪಿಗೆ ಆಂಶಿಕ ತಡೆಯಾಜ್ಞೆ ನೀಡಿತು ಸುಪ್ರೀಮ್ ಕೋರ್ಟು. ಇಂದಿರಾ ಪ್ರಧಾನಿಯಾಗಿ ಮುಂದುವರೆಯಬಹುದಿತ್ತು, ಆದರೆ ಲೋಕಸಭೆಯಲ್ಲಿ ಮತ ಚಲಾಯಿಸುವಂತಿರಲಿಲ್ಲ. ಸಿಂಹಾಸನ ಖಾಲಿ ಮಾಡಿ ಎಂದು ಜೆಪಿ ಗುಡುಗಿದ್ದರು. ಮರುದಿನವೇ ಆಂತರಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿ ಪ್ರತಿದಾಳ ಉರುಳಿಸಿದ್ದರು ಇಂದಿರಾಗಾಂಧೀ. ಆಂತರಿಕ ಪ್ರಕ್ಷುಬ್ದತೆಯ ಕಾರಣ ನೀಡಿದ್ದರು.
ಈ ಲೇಖನ ಓದಿದ್ದೀರಾ?: ಪಾದಚಾರಿಗಳನ್ನು ‘ಬೇವರ್ಸಿ’ಗಳಂತೆ ನಡೆಸಿಕೊಳ್ತಿದೆ ಬೆಂಗಳೂರು ನಗರ!
ಯಾವುದೇ ಅಧಿಕೃತ ಅಧಿಕಾರವಿಲ್ಲದಿದ್ದರೂ ಪ್ರಚಂಡ ಅಧಿಕಾರ ದಂಡ ಬೀಸಿದ್ದರು ಇಂದಿರಾ ಅವರ ಮಗ ಸಂಜಯಗಾಂಧೀ. ಆಂತರಿಕ ಸುರಕ್ಷತಾ ಕಾಯಿದೆಯಡಿ (ಮೀಸಾ) ದಿನ ಬೆಳಗಾಗುವುದರ ಒಳಗೆ ಪ್ರತಿಪಕ್ಷಗಳ 600 ಮಂದಿ ನಾಯಕರನ್ನು ದಸ್ತಗಿರಿ ಮಾಡಿಸಿದರು. ವಾಜಪೇಯಿ, ಆಡ್ವಾಣಿ, ಮುರಾರ್ಜಿ ದೇಸಾಯಿ ಆದಿಯಾಗಿ ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರನ್ನು ಜೈಲಿಗೆ ತಳ್ಳಲಾಯಿತು. ಜನಸಮೂಹಗಳಿಗೆ ಬಂಧನದ ಸುದ್ದಿಯೇ ತಿಳಿಯದಂತೆ ಹಿಂದಿನ ದಿನ ರಾತ್ರಿಯೇ ಪತ್ರಿಕೆಗಳ ಮುದ್ರಣಾಲಯಗಳಿಗೆ ವಿದ್ಯುಚ್ಛಕ್ತಿ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ಮೀಸಾ ಕಾಯಿದೆಯಡಿಯ ಬಂಧನಗಳನ್ನು ಮರುವಿಮರ್ಶಿಸದಂತೆ ನ್ಯಾಯಾಲಯಗಳನ್ನು ಪ್ರತಿಬಂಧಿಸಲಾಯಿತು. ಹೇಬಿಯಸ್ ಕಾರ್ಪಸ್ ನ್ನು ತಟಸ್ಥಗೊಳಿಸಲಾಯಿತು. 1976ರ ಹೊತ್ತಿಗೆ ಬಂಧಿತರ ಸಂಖ್ಯೆ ಒಂದು ಲಕ್ಷ ದಾಟಿತು.
ಸರ್ಕಾರಿ ಅಂಕಿಅಂಶಗಳ ಪ್ರಕಾರ ಹೀಗೆ ದಸ್ತಗಿರಿಯಾದ ಪತ್ರಕರ್ತರ ಸಂಖ್ಯೆ 200ಕ್ಕೂ ಹೆಚ್ಚು. ಈ ಪತ್ರಕರ್ತರು ಸರ್ಕಾರದ ತಾಳಕ್ಕೆ ಕುಣಿಯಲು ನಿರಾಕರಿಸಿದ್ದರು.
ಸುದ್ದಿ ಮಾಧ್ಯಮಗಳ ವರದಿಗಾರಿಕೆಯು ತೀವ್ರ ನಿರ್ಬಂಧಕ್ಕೆ ಒಳಪಟ್ಟಿತು. ಕೇವಲ ಇಂದಿರಾ ಸರ್ಕಾರ ದ ಭಜನೆ ಮಾಡುವ ವರದಿಗಳನ್ನು ಮಾತ್ರವೇ ಪ್ರಕಟಿಸಲು ಅನುಮತಿಯಿತ್ತು. ಹೀಗೆ ಸುದ್ದಿಮನೆಗಳಿಗೆ ಕಾವಲುಗಾರರನ್ನಾಗಿ ಇಂಡಿಯನ್ ಪೊಲೀಸ್ ಸರ್ವಿಸ್ ಅಧಿಕಾರಿಗಳನ್ನು ನೇಮಕ ಮಾಡಲಾಯಿತು.
ಇಂದಿರಾ ಗಾಂಧಿ ಅವರ ಎರಡನೆಯ ಮಗ ಸಂಜಯ ಗಾಂಧಿ ಅವರ 21 ಅಂಶದ ಕಾರ್ಯಕ್ರಮಗಳನ್ನು ಹಾಡಿ ಹೊಗಳುವ ವರದಿಗಳನ್ನು ಮಾತ್ರವೇ
ಇಂದಿರಾಗಾಂಧೀ ಅವರ 20 ಅಂಶಗಳ ಕಾರ್ಯಕ್ರಮದ ಜೊತೆಗೆ ಸಂಜಯ ಗಾಂಧಿ ಅವರ ಐದು ಅಂಶಗಳ ಕಾರ್ಯಕ್ರಮಗಳ ಜಾರಿಯನ್ನು ಕಡ್ಡಾಯಗೊಳಿಸಲಾಗಿತ್ತು. ಸಾಕ್ಷರತೆ, ಕುಟುಂಬ ಯೋಜನೆ, ಸಸಿ ನೆಡುವಿಕೆ, ಜಾತಿಪದ್ಧತಿ ನಿರ್ಮೂಲನ ಹಾಗೂ ವರದಕ್ಷಿಣೆ ನಿಷೇಧದ ಅಂಶಗಳಾಗಿದ್ದವು. ಈ ಪೈಕಿ ಇಂತಿಷ್ಟು ಸಂಖ್ಯೆಯ ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕೆಂದು ಸರ್ಕಾರಿ ಆಸ್ಪತ್ರೆಗಳಿಗೆ ಗುರಿಯನ್ನು ನಿಗದಿ ಮಾಡಲಾಗಿತ್ತು. ಈ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಯಿತು. ಅವಿವಾಹಿತರು, ವೃದ್ಧ ಪುರುಷರನ್ನೂ ಬಿಡದೆ ವ್ಯಾನುಗಳಲ್ಲಿ ಹಿಡಿದು ತಂದು ಬಲವಂತದ ವ್ಯಾಸೆಕ್ಟಮಿಗೆ (ನರಕತ್ತರಿಸುವ ‘ನಸಬಂದಿ’ ಶಸ್ತ್ರಚಿಕಿತ್ಸೆ) ಗುರಿ ಮಾಡಿತು. ಬಡವರು ಅಲ್ಪಸಂಖ್ಯಾತರ ಪಾಲಿಗೆ ಇದೊಂದು ಬಗೆಯ ದುಃಸ್ವಪ್ನವಾಗಿ ಪರಿಣಮಿಸಿತು. ಸುಮಾರು ಒಂದು ಕೋಟಿ ಜನರನ್ನು (ಬಹುತೇಕ ಪುರುಷರು) ಸಂತಾನಹರಣ ಶಸ್ತ್ರಚಿಕಿತ್ಸೆಗೆ ಗುರಿಪಡಿಸಲಾಯಿತು. ಕೊಳೆಗೇರಿಗಳ ನಿರ್ಮೂಲನೆ ಕೈಗೆತ್ತಿಕೊಂಡ ಸಂಜಯ ಗಾಂಧಿ ಸಾವಿರಾರು ಮಂದಿಯನ್ನು ನಿರಾಶ್ರಿತಗೊಳಿಸಿದರು. ದೆಹಲಿಯ ತುರ್ಕಮಾನ್ ಗೇಟ್ ಮೇಲೆ ಬುಲ್ಡೋಜರ್ ಹರಿಸಿದ ಪ್ರಕರಣ ಕುಖ್ಯಾತಿ ಪಡೆಯಿತು. ರುಖ್ಸಾನಾ ಸುಲ್ತಾನಾ, ಸಿದ್ಧಾರ್ಥ ಶಂಕರ್ ರೇ, ಬನ್ಸೀಲಾಲ್, ವಿದ್ಯಾಚರಣ ಶುಕ್ಲಾ, ಧೀರೇಂದ್ರ ಬ್ರಹ್ಮಚಾರಿ ಕುಖ್ಯಾತರಾದರು. ಸರ್ವಾಧಿಕಾರವನ್ನು ಗಟ್ಟಿಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರಲಾಯಿತು. ಲೋಕಸಭೆಯ ಅವಧಿಯನ್ನು ಐದು ವರ್ಷಗಳಿಂದ ಆರು ವರ್ಷಗಳಿಗೆ ಹೆಚ್ಚಿಸಲಾಯಿತು.
ಸರ್ಕಾರದ ವಿರುದ್ಧದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಜಯಪ್ರಕಾಶ ನಾರಾಯಣ ಅವರಿಗೆ ಸಹಾನುಭೂತಿಯ ಮತ್ತು ಇಂದಿರಾಗಾಂಧೀ ಅವರ ಮಗ ಸಂಜಯಗಾಂಧೀ ಕುರಿತು ಕೋಲಾಹಲಕಾರಿ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ‘ಇಂಡಿಯನ್ ಎಕ್ಸ್ ಪ್ರೆಸ್’ ನ ಕುಲದೀಪ್ ನಯ್ಯರ್ ಮತ್ತು ‘ದಿ ಮದರ್ ಲ್ಯಾಂಡ್’ ಪತ್ರಿಕೆಯ ಕೆ.ಆರ್ ಮಲ್ಕಾನಿಯವರನ್ನು ಬಂಧಿಸಲಾಯಿತು.
ಗಾಂಧೀಜಿಯವರು ಸ್ಥಾಪಿಸಿದ್ದ ನವಜೀವನ ಪತ್ರಿಕೆಯ ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಅವರ ಮೊಮ್ಮಗ ರಾಜಮೋಹನ ಗಾಂಧೀ ಸಂಪಾದಕರಾಗಿದ್ದ ‘ಹಿಮ್ಮತ್’ ಪತ್ರಿಕೆ ಆಕ್ಷೇಪಾರ್ಯ ವರದಿಗಳನ್ನು ಪ್ರಕಟಿಸಿತೆಂದು ಭಾರೀ ಮೊತ್ತದ ಠೇವಣಿ ಇಡುವಂತೆ ದಂಡಿಸಲಾಯಿತು
ಇತರೆ ಕೈಗಾರಿಕೆಗಳನ್ನು ಹೊಂದಿದ್ದ ಪತ್ರಿಕಾ ಮಾಲೀಕರು ತಮ್ಮ ದಂಧೆಗಳನ್ನು ಕಾಪಾಡಿಕೊಳ್ಳಲು ಚಾಚೂತಪ್ಪದೆ ಸರ್ಕಾರದ ದಾರಿ ತುಳಿದರು. “ಸಮೂಹ ಮಾಧ್ಯಮಗಳು ಬಗ್ಗಬೇಕೆಂಬ ಆದೇಶವನ್ನು ಇಂದಿರಾಗಾಂಧೀ ನೀಡಿದ್ದರು. ಆದರೆ ಭಾರತದ ಮೀಡಿಯಾ ತೆವಳಿಬಿಟ್ಟಿತು” ಎಂಬ ಎಲ್.ಕೆ.ಅಡ್ವಾಣಿ ಅವರ ಟೀಕೆ ಜಗತ್ಪ್ರಸಿದ್ಧವಾಯಿತು.
ಮರುದಿನದ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ಸುದ್ದಿಗಳಿಗೆ ಇಂದೇ ಸೆನ್ಸಾರ್ ಅನುಮತಿ ಪಡೆಯಬೇಕಿತ್ತು. ಪತ್ರಿಕೆಗಳನ್ನು ಮುದ್ರಿಸಲು ಅಗತ್ಯವಿರುವ ಮುದ್ರಣ ಕಾಗದದ ಪೂರೈಕೆಯನ್ನೂ ಸರ್ಕಾರ ನಿಯಂತ್ರಿಸಿತು. ಈ ಮೂಲಕ ಪತ್ರಿಕೆಗಳ ಪ್ರಸಾರದ ಮೇಲೆ ಹಿಡಿತ ಸಾಧಿಸಿತು. ರಾಷ್ಟ್ರಮಟ್ಟದ ಬಹುತೇಕ ಇಂಗ್ಲಿಷ್ ಪತ್ರಿಕೆಗಳ ಕಚೇರಿಗಳು ದೆಹಲಿಯ ಬಹಾದೂರ್ ಶಾ ಝಫರ್ ಮಾರ್ಗದಲ್ಲಿವೆ. ಅದನ್ನು ‘ಫ್ಲೀಟ್ ಸ್ಟ್ರೀಟ್ ಅಫ್ ಇಂಡಿಯಾ’ ಎಂದು ಕರೆಯುವುದು ವಾಡಿಕೆ. ಪ್ರಮುಖ ರಾಜಕೀಯ ಬೆಳವಣಿಗೆಗಳ ಸುದ್ದಿ ಪ್ರಸಾರವನ್ನು ತಡೆಯಲು ವಿದ್ಯುಚ್ಛಕ್ತಿ ಪೂರೈಕೆಯನ್ನು ಕೆಲ ದಿನಗಳಂದು ಕಡಿತಗೊಳಿಸಲಾಗುತ್ತಿತ್ತು. ಸರ್ಕಾರದ ನೀತಿ ನಿರ್ಧಾರಗಳನ್ನು ವಿರೋಧಿಸುವ ಪತ್ರಿಕೆಗಳನ್ನು ಬಗ್ಗಿಸಲು ಅವುಗಳಿಗೆ ಜಾಹೀರಾತುಗಳನ್ನು ನಿರಾಕರಿಸಲಾಗುತ್ತಿತ್ತು. ದೊಡ್ಡ ಮೊತ್ತದ ಆದಾಯದಿಂದ ಈ ಪತ್ರಿಕೆಗಳು ವಂಚಿತವಾಗುತ್ತಿದ್ದವು.
ಆಕ್ಷೇಪಾರ್ಹ ವಿಷಯಗಳ ಪ್ರಕಟಣೆ ತಡೆ ಕಾಯಿದೆಯನ್ನು ಜಾರಿಗೊಳಿಸಲಾಯಿತು. ತೆರಿಗೆ ಪಾವತಿ ಮಾಡಿಲ್ಲವೆಂಬ ನೆವದಲ್ಲಿ ಪತ್ರಕರ್ತರನ್ನು ಜೈಲಿಗೆ ಕಳಿಸಲಾಯಿತು. ಅವರ ಮುದ್ರಣಾಲಯಗಳನ್ನು ಮುಚ್ಚುವ ನೋಟಿಸುಗಳನ್ನು ಕಳಿಸಲಾಯಿತು.
ಸಂಪಾದಕೀಯದ ಜಾಗವನ್ನು ಖಾಲಿ ಉಳಿಸಿ ಸೆನ್ಸಾರ್ಶಿಪ್ ಕುರಿತ ಮೌನಪ್ರತಿಭಟನೆಯನ್ನೂ ಹತ್ತಿಕ್ಕಲಾಯಿತು. ಪತ್ರಿಕೆಗಳಲ್ಲಿ ಖಾಲಿ ಜಾಗ ಉಳಿಸದಂತೆ ಎಚ್ಚರಿಕೆ ನೀಡಲಾಯಿತು. ಸರ್ಕಾರದ ವಿರುದ್ಧದ ಇಲ್ಲವೇ ಮುಜುಗರ ಉಂಟು ಮಾಡುವ ಯಾವುದೇ ಸುದ್ದಿಗಳ ಪ್ರಕಟಿಸದಂತೆ ಸರ್ಕಾರಿ ಅಧಿಕಾರಿಗಳು ದಿನನಿತ್ಯ ಫೋನ್ ಮಾಡಿ ನಿರ್ದೇಶನ ನೀಡುತ್ತಿದ್ದರು. ಪ್ರತಿಪಕ್ಷಗಳು ಮತ್ತು ಇಂದಿರಾ ಅವರ ರಾಜಕೀಯ ವಿರೋಧಿಗಳಿಗೆ ಸಂಬಂಧಿಸಿದ ಸುದ್ದಿ ಒಂದೆರಡು ಪ್ಯಾರಾಗಳನ್ನು ಮೀರುವಂತಿರಲಿಲ್ಲ. ಜಯಪ್ರಕಾಶ ನಾರಾಯಣ ಭಾರೀ ರ್ಯಾಲಿಗಳ ಸುದ್ದಿಗಳೂ ಈ ಮಾತಿಗೆ ತಪ್ಪುವಂತಿರಲಿಲ್ಲ.
ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದರು- “ನಾನು ಭಾರತದ ಸಂವಿಧಾನದ ಪ್ರಕಾರ ನಡೆದುಕೊಂಡಿದ್ದೇನೆ. ಆಂತರಿಕ ಮತ್ತು ಬಾಹ್ಯ ತುರ್ತುಪರಿಸ್ಥಿತಿ ಹೇರಲು ಸಂವಿಧಾನದಲ್ಲಿ ಅವಕಾಶವಿದೆ. ಸರ್ಕಾರದ ಆದೇಶಗಳ ವಿರುದ್ಧ ಬಂಡೇಳುವಂತೆ ಸೇನೆ ಮತ್ತು ಪೊಲೀಸರಿಗೆ ಕರೆ ನೀಡಿದರೆ, ಸಂವಿಧಾನ ನೀಡಿರುವ ಅಧಿಕಾರಗಳನ್ನು ಸರ್ಕಾರದ ಮುಖ್ಯಸ್ಥೆಯಾಗಿ ಪ್ರಯೋಗಿಸುವುದು ನನ್ನ ಕರ್ತವ್ಯ. ವ್ಯವಸ್ಥೆಯ ವಿರುದ್ಧ ದಂಗೆಯೇಳುವಂತೆ ನೀಡಲಾಗುವ ಕರೆಯನ್ನು ಯಾವುದೇ ಆಡಳಿತ ಸಹಿಸಿಕೊಳ್ಳುವುದು ಸಾಧ್ಯವಿಲ್ಲ” ಎಂದಿದ್ದರು.
ಇಂದಿರಾ ಸಂಪುಟದ ಹಿರಿಯ ನಾಯಕರಾದ ಜಗಜೀವನರಾಮ್, ಹೇಮವತೀ ನಂದನ ಬಹುಗುಣ ಸಂಜಯಗಾಂಧೀ ಅವರ ಅಧಿಕಾರ ದುರುಪಯೋಗದ ವಿರುದ್ಧ ಪ್ರತಿಭಟಿಸಿ ದೂರ ಸರಿಯಲಾರಂಭಿಸಿದರು.
ತುರ್ತು ಪರಿಸ್ಥಿತಿ ವಿರುದ್ಧ ಪ್ರಚಂಡ ಪ್ರತಿರೋಧ ಎದ್ದಿತ್ತು. ಚುನಾವಣೆಗಳನ್ನು ಗೆಲ್ಲುವ ವಿಶ್ವಾಸದಿಂದಲೋ, ಅಂತಾರಾಷ್ಟ್ರೀಯ ಒತ್ತಡದಿಂದಲೋ, ತಮ್ಮ ವರ್ಚಸ್ಸಿಗೆ ತಗುಲಿದ ಕಳಂಕವನ್ನು ತೊಳದುಕೊಳ್ಳುವ ಪ್ರಯತ್ನವಾಗಿಯೋ ಇಂದಿರಾ ಗಾಂಧೀ 1977ರ ಜನವರಿ 18ರಂದು ಲೋಕಸಭಾ ಚುನಾವಣೆಗಳನ್ನು ಘೋಷಿಸಿದರು. ತುರ್ತುಪರಿಸ್ಥಿತಿಯ ಅಂತ್ಯ ಸಮೀಪಿಸಿತ್ತು. ಪ್ರತಿಪಕ್ಷಗಳ ನಾಯಕರನ್ನು ಜೈಲುಗಳಿಂದ ಬಿಡುಗಡೆ ಮಾಡಲಾಯಿತು.
ಅವಸರದಲ್ಲಿ ಜನತಾ ಪಾರ್ಟಿ ಹುಟ್ಟಿಕೊಂಡಿತು. ಈ ಹೊಸ ಪಕ್ಷ 295 ಸೀಟುಗಳನ್ನು ಗೆದ್ದು ಸರ್ಕಾರ ರಚಿಸಿತು. 154 ಕ್ಷೇತ್ರಗಳಲ್ಲಿ ಇಂದಿರಾ ಪಕ್ಷ ಗೆದ್ದಿತ್ತು. ಅದರ ರೆಕ್ಕೆಪುಕ್ಕಗಳನ್ನು ಕತ್ತರಿಸಿದ್ದರು ಮತದಾರರು. ಖುದ್ದು ಇಂದಿರಾಗಾಂಧೀ ರಾಯಬರೇಲಿಯಲ್ಲಿ, ಸಂಜಯಗಾಂಧೀ ಅಮೇಠಿಯಲ್ಲಿ ಸೋತಿದ್ದರು.
ನಾಯಕರುಗಳ ಸ್ವಪ್ರತಿಷ್ಠೆ, ಅಹಂಕಾರಗಳ ತಾಕಲಾಟದಲ್ಲಿ ಜನತಾಪಕ್ಷ 1979ರಲ್ಲೇ ಅಧಿಕಾರ ಕಳೆದುಕೊಂಡಿತು. 1977ರಲ್ಲಿ ಹೀನಾಯವಾಗಿ ಸೋಲಿಸಿದ್ದ ಅದೇ ಇಂದಿರಾಗಾಂಧೀ ಮತ್ತು ಅವರ ಪಕ್ಷವನ್ನು ದೇಶದ ಮತದಾರರು 1980ರ ಲೋಕಸಭಾ ಚುನಾವಣೆಗಳಲ್ಲಿ ಘನವಾಗಿ ಗೆಲ್ಲಿಸಿದ್ದರು. ಸಂಜಯ ಗಾಂಧಿ ಅದೇ ವರ್ಷ ವಿಮಾನ ಅಪಘಾತದಲ್ಲಿ ಮೃತರಾದರು. ತುರ್ತುಪರಿಸ್ಥಿತಿಯ ಕಹಿ ಪಾಠಗಳು ಮತ್ತು ಮಗನ ಅಕಾಲಿಕ ಮರಣದಿಂದ ಇಂದಿರಾ ಬಹಳ ಮೆತ್ತಗಾಗಿ ಹೋಗಿದ್ದರು.
ಇಂದಿರಾ ಈ ನೆಲದ ಕಾನೂನಿನ ಪ್ರಕಾರ ಘೋಷಿಸಿದ್ದ ತುರ್ತುಪರಿಸ್ಥಿತಿಗೆ, ದಮನ ದಬ್ಬಾಳಿಕೆಗೆ ಕಾನೂನಿನ ಪ್ರಕಾರವೇ ಒಂದು ಅಂತ್ಯವಿತ್ತು.
ಕಳೆದ ಹನ್ನೊಂದು ವರ್ಷಗಳಿಂದ ಜಾರಿಯಲ್ಲಿರುವ ಅಘೋಷಿತ ತುರ್ತುಪರಿಸ್ಥಿತಿಗೆ ಕೊನೆಯೇ ಇಲ್ಲ ಎಂಬ ಕುರಿತು ಜಾಗೃತ ಮತದಾರರು ಆಲೋಚಿಸಬೇಕಿದೆ. ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯಲು ತೆರಬೇಕಾದ ಬೆಲೆಯೆಂದರೆ ಅದು, ನಿರಂತರ ಜಾಗೃತಿಯೊಂದೇ ಎಂಬ ಗಾದೆ ಮಾತು ಇಂದಿರಾ ಕಾಲಕ್ಕೆ ಮಾತ್ರವಲ್ಲ, ಮೋದಿ ಕಾಲಕ್ಕೂ ಅಷ್ಟೇ ಸತ್ಯ.