ತಾವೇ 'ನಿಜವಾದ' ಹಿಂದುಗಳೆಂದು ಹೇಳಿಕೊಳ್ಳುವವರು ಯಾವುದಾದರೊಂದು ಪವಾಡದಿಂದ ದೇವರ ಮೇಲಿನ ಪ್ರೀತಿಯು ಎಲ್ಲ ಮಾನವೀಯತೆಯ ಮೇಲಿನ ಪ್ರೀತಿ ಎಂದು ಅರಿತುಕೊಂಡರೆ, ಅವರು ಇಲ್ಲಿಯವರೆಗೆ ಕಾಣದಾಗಿದ್ದ ಶಾಂತಿ ಮತ್ತು ತೃಪ್ತಿಯನ್ನು ಕಂಡುಕೊಳ್ಳಬಹುದು.
ಭಾರತ– ಬಹುತ್ವದ ನಾಡು. ವಿವಿಧ ಧರ್ಮ, ಭಾಷೆ, ಸಂಸ್ಕೃತಿ, ಆಚರಣೆ, ಆಚಾರ, ವಿಚಾರ ಹಾಗೂ ಹಬ್ಬ– ಹೀಗೆ ಎಲ್ಲದರಲ್ಲೂ ವೈಶಿಷ್ಟ್ಯತೆ, ವೈವಿಧ್ಯತೆಯನ್ನು ಹೊಂದಿದೆ. ಭಾರತದಲ್ಲಿ ಹಬ್ಬಗಳು ಸಾಂಪ್ರದಾಯವೆಂಬಂತೆ ಸಾಮರಸ್ಯ, ಸಹಬಾಳ್ವೆಯನ್ನು ಸಾರುತ್ತವೆ. ಹಿಂದುಗಳು ಇಫ್ತಾರ್ ಕೂಟಗಳಲ್ಲಿ ಭಾಗಿಯಾಗುತ್ತಾರೆ, ಮುಸ್ಲಿಮರು ಮತ್ತು ಸಿಖ್ಖರು ದೀಪಾವಳಿ ಆಚರಿಸುತ್ತಾರೆ. ಹಿಂದು ಮತ್ತು ಮುಸ್ಲಿಂ- ಇಬ್ಬರೂ ಕ್ರಿಶ್ಚಿಯನ್ನರೊಂದಿಗೆ ಕ್ರಿಸ್‌ಮಸ್ ಆಚರಿಸುತ್ತಾರೆ. ಇದೇ ಭಾರತದ ಸೊಗಸು. ಸೊಬಗು.
ಆದರೆ, 21ನೇ ಶತಮಾನ ಪ್ರಸ್ತುತ ಸಂದರ್ಭದಲ್ಲಿ ಏನಾಗುತ್ತಿದೆ. ಭಾರತದ ಬಹುತ್ವದ ಮೇಲೆ ಕರಾಳ ನೆರಳು ಆವರಿಸುತ್ತಿದೆ. ಭಾರತೀಯ ಬಹುತ್ವವನ್ನು ಬುಡಮೇಲು ಮಾಡುವ ಹುನ್ನಾರಗಳು ನಡೆಯುತ್ತಿವೆ. ಕೋಮು ದ್ವೇಷ-ದಳ್ಳುರಿಗಳು ಹರಡುತ್ತಿವೆ. ಮುಖ್ಯವಾಹಿನಿಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ವ್ಯಾಪಿಸುತ್ತಿದೆ. ಬಹುಸಂಖ್ಯಾತ ಹಿಂದು ಯುವಕರು ತೀವ್ರಗಾಮಿಗಳಾಗಿ ಮಾರ್ಪಡುತ್ತಿದ್ದಾರೆ. ಮಸೀದಿಗಳ ಮೇಲೆ ಕೇಸರಿ ಧ್ವಜ ಹಾರಿಸಿ, ಗಲಭೆ ಸೃಷ್ಟಿಸುವ ಹುನ್ನಾರಗಳು ನಡೆಯುತ್ತಿವೆ.
ಶುಕ್ರವಾರ, (ಮಾರ್ಚ್ 14) ಭಾರತದಾದ್ಯಂತ ಹೋಳಿ ಹಬ್ಬ ಆಚರಿಸಲಾಗಿದೆ. ಬಣ್ಣಗಳ ರಂಗು ಹೆಚ್ಚಿಸಬೇಕಿದ್ದ ಹೋಳಿ, ಉತ್ತರ ಪ್ರದೇಶದಲ್ಲಿ ದ್ವೇಷವನ್ನು ಬಿತ್ತಿದೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳು ಇಲ್ಲಿಯವರೆಗೆ ದೇಶ ಕಂಡು-ಕೇಳರಿಯದ ಪ್ರಸ್ತಾಪವನ್ನು ಮುಸ್ಲಿಮರ ಮುಂದಿಟ್ಟರು. “ಜುಮಾ (ಶುಕ್ರವಾರ) ವರ್ಷಕ್ಕೆ 52 ಬಾರಿ ಬರುತ್ತದೆ. ಆದರೆ ಹೋಳಿ ಒಮ್ಮೆ ಮಾತ್ರ ಬರುತ್ತದೆ. ಹೋಳಿಯ ಬಣ್ಣಗಳ ಬಗ್ಗೆ ಸಮಸ್ಯೆ ಇರುವವರು ಮನೆಯೊಳಗೆ ಇರಬೇಕು. ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು” ಎಂದು ಹೇಳಿದರು.
ಸಂಭಾಲ್ ಜಿಲ್ಲೆಯ ಹಲವಾರು ಮಸೀದಿಗಳಿಗೆ ಅಧಿಕಾರಿಗಳು ದೊಡ್ಡ-ದೊಡ್ಡ ಟಾರ್ಪಾಲ್‌ಗಳನ್ನು ಹೊದಿಸುವಂತೆ ಮನವಿ ಮಾಡಿದರು. ಇದು, ಮುಸ್ಲಿಂ ಸಮುದಾಯದೊಳಗೆ ಭಯ ಮತ್ತು ಬೆದರಿಕೆಯನ್ನು ಹುಟ್ಟುಹಾಕುವ ಹುನ್ನಾರದ ಭಾಗವಾಗಿತ್ತು. ಮಾತ್ರವಲ್ಲ, ಮುಸ್ಲಿಮರ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಿತು.
ಉತ್ತರ ಪ್ರದೇಶ ಸರ್ಕಾರದ ಧೋರಣೆಯನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬಲವಾಗಿ ಖಂಡಿಸಿದರು. ”ಬಿಜೆಪಿಗರು ಹೋಳಿ ಹಬ್ಬದಂದು ಹೊರಬರದಂತೆ ಮುಸ್ಲಿಂ ಸಹೋದರರಿಗೆ ಹೇಳಿದ್ದಾರೆ. ಅವರು ಇಂತಹ ವಿಷಯಗಳನ್ನು ಹೇಗೆ ಹೇಳಬಹುದು? ನಮ್ಮದು ‘ರಾಮ್ ಮತ್ತು ರಹೀಮ್’ರನ್ನು ನಂಬುವ ದೇಶ. ಇಲ್ಲಿ ಐದಾರು ಹಿಂದುಗಳು ಒಬ್ಬ ಮುಸ್ಲಿಂ ಸಹೋದರನನ್ನು ರಕ್ಷಿಸುತ್ತಾರೆ. ಇದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು” ಎಂದರು.
ಬಿಜೆಪಿ ಅಧಿಕಾರದಲ್ಲಿರುವ ಹಲವು ರಾಜ್ಯಗಳಲ್ಲಿ ಹೋಳಿ ಸಮಯದಲ್ಲಿ ಇಂತಹ ಹೇಳಿಕೆಗಳು, ಬೆದರಿಕೆಗಳು ಬಂದಿವೆ. ಇವು, ಭಾರತದಲ್ಲಿ ಇನ್ನೂ ಜೀವಂತವಿರುವ ಸಹಬಾಳ್ವೆ ಮತ್ತು ಸಾಮರಸ್ಯವನ್ನು ಹೊಡೆದುರುಳಿಸಿ, ನಾಶ ಮಾಡಲು ಬಲಪಂಥೀಯ ಶಕ್ತಿಗಳು ಹೊಂಚು ಹಾಕುತ್ತಿರುವುದನ್ನು ತೋರುತ್ತವೆ.
13ನೇ ಶತಮಾನದ ಸೂಫಿ ಕವಿ ಅಮೀರ್ ಖುಸ್ರೋ ಅವರು ಬರೆದ ‘ಹೋಳಿ ಕವ್ವಾಲಿ’ಯಲ್ಲಿ, ‘ಆತ್ಮವು ದೈವಿಕತೆಯ ಜೊತೆಗೆ ಸಂತೋಷ, ಅರ್ಥ ಮತ್ತು ಶಾಂತಿಯನ್ನು ಕಂಡುಕೊಳ್ಳುವ ವಿಜೃಂಭಣೆಯ ಆಚರಣೆಯಾಗಿದೆ. ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಸರಳತೆ, ದಯೆ ಮತ್ತು ಔದಾರ್ಯವನ್ನು ಹಂಚಬೇಕು. ಅದೇ ದೇವರ ಮೇಲಿನ ಪ್ರೀತಿ’ ಎಂದಿದ್ದರು. ಅವರ ಹೇಳುವ ‘ದೇವರ ಮೇಲಿನ ಪ್ರೀತಿ’ ಎಂದರೆ, ಮಾನವೀಯತೆಯ ಮೇಲಿನ ಪ್ರೀತಿ.
ಈಗ ತಾವೇ ‘ನಿಜವಾದ’ ಹಿಂದುಗಳೆಂದು ಹೇಳಿಕೊಳ್ಳುವವರು (ಮಸೀದಿಗಳನ್ನು ಧ್ವಂಸ ಮಾಡುವ, ಕೋಮುದ್ವೇಷ ಹರಡುವವರು) ಯಾವುದಾದರೊಂದು ಪವಾಡದಿಂದ ದೇವರ ಮೇಲಿನ ಪ್ರೀತಿಯು ಎಲ್ಲ ಮಾನವೀಯತೆಯ ಮೇಲಿನ ಪ್ರೀತಿ ಎಂದು ಅರಿತುಕೊಂಡರೆ, ಅವರು ಇಲ್ಲಿಯವರೆಗೆ ಕಾಣದಾಗಿದ್ದ ಶಾಂತಿ ಮತ್ತು ತೃಪ್ತಿಯನ್ನು ಕಂಡುಕೊಳ್ಳಬಹುದು.
ಆದರೆ, ಈ ಹಿಂದುತ್ವ ಮತ್ತು ಬಲಪಂಥೀಯವಾದಿಗಳು ‘ಹೋಳಿ ವರ್ಸಸ್ ಜುಮ್ಮಾ’ ಮತ್ತು ’80 ವರ್ಸಸ್ 20′ ಎಂಬ ಚರ್ಚೆಗಳನ್ನು ಮುಂದೆ ತಂದಿದ್ದಾರೆ. ಸಂತೋಷ, ಏಕತೆ ಮತ್ತು ಉತ್ಸವಗಳಿಂದ ತುಂಬಿರಬೇಕಾದ ಹಬ್ಬದ ವಾತಾವರಣವನ್ನು ಕಲಹ ಮತ್ತು ವಿಭಜನೆಗಳಿಂದ ಕಳಂಕಿತಗೊಳಿಸುತ್ತಿದ್ದಾರೆ. ವೈವಿಧ್ಯತೆಯಲ್ಲಿ ಏಕತೆ, ಬಹುತ್ವವನ್ನು ಆಚರಿಸುವ ಭಾರತೀಯ ಸಂಸ್ಕೃತಿ, ಸರ್ವ ಧರ್ಮ ಸಂಭ್ರಮದ ತತ್ವವನ್ನು ಹೊಡೆಯಲು ದೀರ್ಘಕಾಲದಿಂದ ಯತ್ನಿಸುತ್ತಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರಧ್ವಜವಾಗಿ ಆಯ್ಕೆ ಮಾಡಿದಾಗ, ಬಲಪಂಥೀಯ ತೀವ್ರಗಾಮಿಗಳು ಅದನ್ನು ಧರ್ಮವಿರೋಧಿ ಎಂದು ಹಣೆಪಟ್ಟಿ ಕಟ್ಟಿದರು. ಜಾತ್ಯತೀತತೆ, ಸಾಮಾಜಿಕ ನ್ಯಾಯ ಮತ್ತು ಎಲ್ಲರಿಗೂ ಸಮಾನ ಹಕ್ಕುಗಳನ್ನು ಎತ್ತಿಹಿಡಿಯುವ ಸಂವಿಧಾನವನ್ನು ಮತ್ತು ಅದರ ಒಳಗೊಳ್ಳುವಿಕೆಯನ್ನು ವಿರೋಧಿಸಿದರು. ಆದರೆ, ಸಂವಿಧಾನದ ಮುಖ್ಯ ಕರ್ತೃ ಡಾ. ಬಿ.ಆರ್ ಅಂಬೇಡ್ಕರ್ ಅವರು ”ಭಾರತದ ಶಕ್ತಿಯು ವಿವಿಧತೆಯನ್ನು ಒಳಗೊಳ್ಳುವ ಸಾಮರ್ಥ್ಯದಲ್ಲಿದೆ. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಇದು ಮುಖ್ಯವಾಗಿ ಬಹುತ್ವದ ಸಂಯೋಜಿತ ಜೀವನ ವಿಧಾನ” ಎಂದು ಹೇಳಿದ್ದರು.
ಮಹಾತ್ಮ ಗಾಂಧಿಯವರು 1920ರ ಫೆಬ್ರವರಿ 29ರಂದು ಬರೆದಿದ್ದ ಲೇಖನದಲ್ಲಿ, “ಹಣೆಯ ಮೇಲೆ ಕುಂಕುಮ, ರುದ್ರಾಕ್ಷಿ ಹಾರವನ್ನು ಧರಿಸುವ ವೈಷ್ಣವ ಅಥವಾ ಹಿಂದೂ ಮತ್ತು ಸಂಧ್ಯಾ ಸಮಯದಲ್ಲಿ ನಿಯಮಿತವಾಗಿ ನಮಾಜ್ ಮಾಡುವ ಧರ್ಮನಿಷ್ಠ ಮುಸ್ಲಿಮರು ಸಹೋದರರಂತೆ ಬದುಕಬಹುದು ಎಂಬುದು ನನ್ನ ಕನಸು. ದೇವರು ಬಯಸಿದರೆ, ಕನಸು ನನಸಾಗುತ್ತದೆ” ಎಂದಿದ್ದರು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸುವುದೇ ನಮ್ಮ ನಾಗರಿಕತೆಯ ಸೌಂದರ್ಯ ಮತ್ತು ಪರೀಕ್ಷೆಯೆಂದು ಪ್ರತಿಪಾದಿಸಿದ್ದರು.
ಈ ವರದಿ ಓದಿದ್ದೀರಾ?: ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!
ಭಾರತದ ಸಾಂಸ್ಕೃತಿಕ ನೀತಿಯು ಶಾಂತಿಯುತ ಸಹಬಾಳ್ವೆಯೇ ಹೊರತು ಸಂಘರ್ಷವಲ್ಲ ಎಂಬುದನ್ನು ಬಲಪಂಥೀಯ ತೀವ್ರಗಾವಿಗಳು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ಒಂದು ಹಬ್ಬ ಮತ್ತೊಂದು ಸಮುದಾಯದ ವಿರುದ್ಧ, ಒಂದು ಸಮುದಾಯ ಮತ್ತೊಂದು ಜನಾಂಗದ ವಿರುದ್ದ ಎಂಬ ದ್ವೇಷವನ್ನು ಮುನ್ನೆಲೆಗೆ ತಂದಿವೆ.
ಆದರೆ, ದ್ವೇಷ ರಾಜಕೀಯವು ವಸಂತಕಾಲವನ್ನು ತಡೆಯಲು ಸಾಧ್ಯವಿಲ್ಲ. ಹೂವುಗಳು ವಿವಿಧ ಬಣ್ಣಗಳಲ್ಲಿ ಅರಳುತ್ತಲೇ ಇರುತ್ತವೆ, ಪರಿಮಳಯುಕ್ತ ಗಾಳಿಯಲ್ಲಿ ಪಸರಿಸುತ್ತಲೇ ಇರುತ್ತದೆ. ಗಂಗಾ – ಯಮುನಾ, ತುಂಗಾ – ಭದ್ರಾ ಸಂದಿಸುತ್ತಲೇ ಇರುತ್ತವೆ. ಇದು ಪ್ರಕೃತಿಯ ನಿಯಮ.
ಹೋಳಿ, ದೀಪಾವಳಿ, ಈದ್, ಲೋಹ್ರಿ ಮತ್ತು ಕ್ರಿಸ್ ಮಸ್‌ನಂತಹ ಹಬ್ಬಗಳು ವರ್ಷದಿಂದ ವರ್ಷಕ್ಕೆ ಮರಳಿ ಬರುತ್ತವೆ. ಭಾರತದಲ್ಲಿ ಹಬ್ಬಗಳು ಒಳಗೊಳ್ಳುವಿಕೆ ಮತ್ತು ಹಂಚಿಕೆಯ ಆಚರಣೆಗಳನ್ನು ಸಾರಿ ಹೇಳುತ್ತವೆ. ಮೊಘಲ್ ಯುಗದ ಸಾಹಿತ್ಯ ಮತ್ತು ಭಾವಚಿತ್ರಗಳು ಇದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ. ಚಕ್ರವರ್ತಿ ಅಕ್ಬರ್ ತನ್ನ ಪತ್ನಿ ಜೋಧಾಬಾಯಿಯೊಂದಿಗೆ ಮತ್ತು ಜಹಾಂಗೀರ್ ತನ್ನ ಪತ್ನಿ ನೂರ್ ಜಹಾನ್ ಜೊತೆ ಹೋಳಿ ಹಬ್ಬ ಆಚರಿಸಿದ್ದರು. ಅಲ್ವಾರ್ ಮ್ಯೂಸಿಯಂನಲ್ಲಿರುವ ವರ್ಣಚಿತ್ರವು ಜಹಾಂಗೀರ್ ಹೋಳಿ ಹಬ್ಬವನ್ನು ಸಂಭ್ರಮಿಸಿದ್ದನ್ನು ಚಿತ್ರಿಸಿದೆ.
ಆದಾಗ್ಯೂ, ಇಂದಿನ ರಾಜಕೀಯ ವರ್ಣಪಟಲವು ಈ ಪರಂಪರೆಯನ್ನು ನಾಶಗೊಳಿಸಲು ಯತ್ನಿಸುತ್ತಿದೆ. ‘ಜುಮ್ಮಾ ವರ್ಸಸ್ ಹೋಳಿ’ ಎಂಬ ನಿರೂಪಣೆಯೊಂದಿಗೆ ಕೋಮು ಸೌಹಾರ್ದತೆಯನ್ನು ಭಂಗಗೊಳಿಸುವ ಕುತಂತ್ರಗಳ ನಡೆಯುತ್ತಿವೆ. ಇದನ್ನು ಹಿಮ್ಮೆಟ್ಟುವ ಮೂಲಕ, ಹಬ್ಬಗಳು ಪರಸ್ಪರರನ್ನು ಗೌರವಿಸುವಂತೆ, ಸಂಭ್ರಮಿಸುವಂತೆ, ಒಂದು ಭಾಷೆ ಮತ್ತೊಂದು ಭಾಷೆಯನ್ನು ಅಪ್ಪಿಕೊಳ್ಳುವಂತೆ, ಧರ್ಮ ಮತ್ತೊಂದು ಧರ್ಮವನ್ನು ಒಳಗೊಳ್ಳುವಂತೆ ಸಾಮೂಹಿಕ ಹಬ್ಬದ ಉತ್ಸಾಹವನ್ನು ಮರಳಿ ಪಡೆಯಬೇಕಿದೆ. ದ್ವೇಷವನ್ನು ಹೊರದೂಡಿ, ನಿರ್ಭೀತಿಯಿಂದ ಪ್ರೀತಿಯನ್ನು ಮುಖ್ಯವಾಹಿನಿಗೆ ತರಬೇಕಿದೆ.