ಶಿಮ್ಲಾ ಒಪ್ಪಂದವು ಕಳೆದ 50 ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನವು ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗದಂತೆ ತಡೆಯುತ್ತಿದೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಒಪ್ಪಂದವು ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ಸವೆದುಹೋಗುತ್ತಿದೆ. ಒಪ್ಪಂದವನ್ನು ನಗಣ್ಯ ಮಾಡುವಂತಹ ಕೃತ್ಯಗಳು ನಡೆಯುತ್ತಿವೆ.
ಏಪ್ರಿಲ್ 22ರಂದು ಭಯೋತ್ಪಾದಕರು ಭಾರತದ ಗಡಿಯೊಳಗೆ ನುಗ್ಗಿ, ಪಹಲ್ಗಾಮ್‌ನಲ್ಲಿ ಕ್ರೌರ್ಯ ಮೆರೆದರು. ಭಯೋತ್ಪಾದಕರ ದಾಳಿಗೆ ಸ್ಥಳೀಯರು, ವಿದೇಶಿಗರು ಸೇರಿ 28 ಮಂದಿ ಬಲಿಯಾದರು. ಪ್ರತೀಕಾರವಾಗಿ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ಪ್ರತಿದಾಳಿ ಮಾಡಿತು. ಸಿಂಧು ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಝೀಲಂ ಮತ್ತು ಚೆನಾಬ್ ನದಿಗಳಿಗೆ ಅಣೆಕಟ್ಟುಗಳಿಂದ ಏಕಾಏಕಿ ನೀರು ಹರಿಸಿ, ಪಾಕಿಸ್ತಾನದ ವಿರುದ್ಧ ಜಲ ದಾಳಿಯನ್ನೂ ನಡೆಸಿತು. ಪಾಕಿಸ್ತಾನವೂ ಗಡಿ ಭಾಗದಲ್ಲಿ ಭಾರತದ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಉಭಯ ರಾಷ್ಟ್ರಗಳ ನಡುವೆ ದಾಳಿ-ಪ್ರತಿದಾಳಿಗಳು ನಡೆಯುತ್ತಿವೆ. ಎರಡೂ ದೇಶಗಳ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಈ ಉದ್ವಿಗ್ನತೆಯು ಉಭಯ ರಾಷ್ಟ್ರಗಳು ಹಿಂದಿನ ಶಾಂತಿ ಒಪ್ಪಂದಗಳನ್ನು ಮರೆಯವಂತೆ ಮಾಡಿದೆ. ಗಡಿ ಭಾಗದಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಿದೆ. ಎರಡೂ ರಾಷ್ಟ್ರಗಳ ಗಡಿ ಭಾಗದ ಜನರನ್ನು ಭಯ, ಆತಂಕಕ್ಕೆ ದೂಡಿದೆ. ಈ ಉದ್ವಿಗ್ನತೆಯು 1972ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿದ್ದ ಶಿಮ್ಲಾ ಒಪ್ಪಂದವನ್ನು ಉಲ್ಲಂಘಿಸಿದೆ. ಮಾತ್ರವಲ್ಲ, ಎರಡೂ ದೇಶಗಳು ಮರೆತೇ ಹೋಗಿವೆ.
1971ರ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿತು. ಸೋಲುಂಡ ಪಾಕಿಸ್ತಾನ ಎರಡು ದೇಶಗಳಾಗಿ ವಿಭಜನೆಯಾಯಿತು. ಬಾಂಗ್ಲಾದೇಶ ಉದಯಿಸಿತು. ಈ ಎಲ್ಲ ಬೆಳವಣಿಗೆಗಳ ನಡುವೆ 1972ರಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರು ದ್ವಿಪಕ್ಷೀಯ (ಶಿಮ್ಲಾ) ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು ಎರಡೂ ರಾಷ್ಟ್ರಗಳು ಎಲ್ಲ ವಿವಾದಗಳನ್ನು – ವಿಶೇಷವಾಗಿ ಕಾಶ್ಮೀರ ಸಮಸ್ಯೆಯನ್ನು – ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಲು ಮತ್ತು ಯಾವುದೇ ರೀತಿಯ ಬಲಪ್ರಯೋಗ ಅಥವಾ ಏಕಪಕ್ಷೀಯ ಕ್ರಮಗಳನ್ನು ಎರಡೂ ರಾಷ್ಟ್ರಗಳು ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿತ್ತು. ಜೊತೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿನ ಕದನ ವಿರಾಮ ರೇಖೆಯನ್ನು ಗಡಿ ನಿಯಂತ್ರಣ ರೇಖೆಯಾಗಿ (ಎಲ್‌ಒಸಿ) ಪರಿವರ್ತಿಸಿತು.
ಯಾವುದೇ ಸಂದರ್ಭದಲ್ಲೂ ಈ ಒಪ್ಪಂದವನ್ನು ಉಲ್ಲಂಘಿಸುವಂತಿಲ್ಲ. ಯಾವುದೇ ರಾಜಕೀಯ ಸಂದರ್ಭದಲ್ಲಿಯೂ ಏಕಪಕ್ಷೀಯವಾಗಿ ಧೋರಣೆ ಅಥವಾ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ. ಎರಡೂ ರಾಷ್ಟ್ರಗಳು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲದೆ, ದ್ವಿಪಕ್ಷೀಯ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ಆದಾಗ್ಯೂ, ಇಂದು ಪಾಕಿಸ್ತಾನವು ಒಪ್ಪಂದದ ಮೂಲ ಅಂಶವನ್ನೇ ಮರೆತು ವರ್ತಿಸುತ್ತಿದೆ. ಪದೇ-ಪದೇ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ನಡೆಸಿದ 2008ರ ಮುಂಬೈ ದಾಳಿಯನ್ನು ಪಾಕಿಸ್ತಾನ ಬೆಂಬಲಿಸಿತು. ಒಪ್ಪಂದವನ್ನು ಉಲ್ಲಂಘಿಸಿತು. ಜೊತೆಗೆ, ಗಡಿ ವಿಚಾರ ಅಥವಾ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಅಂತಾರಾಷ್ಟ್ರೀಯ ವೇದಿಕೆಗಳು, ವಿಶ್ವಸಂಸ್ಥೆ, ಇಸ್ಲಾಮಿಕ್ ಸಹಕಾರ ಸಂಸ್ಥೆ (OIC) ಹಾಗೂ ಅಂತಾರಾಷ್ಟ್ರೀಯ ನ್ಯಾಯಾಲಯ (ICJ) ಸೇರಿದಂತೆ ನಾನಾ ಜಾಗತಿಕ ಸಂಸ್ಥೆಗಳನ್ನು ಮಧ್ಯಸ್ಥಿಕೆಗೆ ಎಳೆಯುತ್ತಿದೆ. 2003 ಮತ್ತು 2021ರ ಎಲ್‌ಒಸಿ ಕದನ ವಿರಾಮ ಮಾತುಕತೆಗಾಗಿ ಪಾಕಿಸ್ತಾನವು ಮೂರನೇ ವ್ಯಕ್ತಿಗಳನ್ನು ಮಧ್ಯಸ್ಥಿಕೆಗೆ ಕರೆದಿತ್ತು. ವರದಿಗಳ ಪ್ರಕಾರ, 2021ರಲ್ಲಿ ಉಭಯ ರಾಷ್ಟ್ರಗಳ ನಡುವೆ ನಡೆದ ಮಾತುಕತೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಹಸ್ಯ ಚರ್ಚೆಗಳನ್ನು ಮುನ್ನಡೆಸುವಲ್ಲಿ ಸಕ್ರಿಯ ಪಾತ್ರವಹಿಸಿತ್ತು.
ಶಿಮ್ಲಾ ಒಪ್ಪಂದವು ದ್ವಿಪಕ್ಷೀಯ ಮಾತುಕತೆಗಳನ್ನು ಒತ್ತಿ ಹೇಳಿದ್ದರೂ, ಪಾಕಿಸ್ತಾನವು ಉದ್ದೇಶಪೂರ್ವಕವಾಗಿಯೇ ಮೂರನೆಯವರನ್ನು ಮಧ್ಯಸ್ಥಿಕೆಗೆ ಎಳೆಯುತ್ತಿದೆ. ದ್ವಿಪಕ್ಷೀಯ ಒಪ್ಪಂದಗಳನ್ನು ಬುಡಮೇಲು ಮಾಡಿ, ಮುನ್ನುಗ್ಗುತ್ತಿದೆ. ಜೊತೆಗೆ, ಶಾಂತಿಯುತ ಮಾತುಕತೆಯನ್ನು ಹಿಂದಕ್ಕೆ ಸರಿಸಿ, ದಾಳಿ, ಹಿಂಸಾಚಾರದ ಕೃತ್ಯಗಳನ್ನು ನಡೆಸುತ್ತಿದೆ.
ಇದನ್ನು ಓದಿದ್ದೀರಾ?: ಜನಾರ್ದನ ರೆಡ್ಡಿಗೆ ಜೈಲು: ಇದು ಜನಸಾಮಾನ್ಯರ ಜಯ
ಶಿಮ್ಲಾ ಒಪ್ಪಂದದ ಮತ್ತೊಂದು ಮಹತ್ವದ ಅಂಶವೆಂದರೆ ಎಲ್‌ಒಸಿಯನ್ನು ಪರಸ್ಪರ ಗುರುತಿಸಲ್ಪಟ್ಟ ಗಡಿಯಾಗಿ ನಿಗದಿ ಮಾಡಿಕೊಂಡಿರುವುದು. ಎರಡೂ ರಾಷ್ಟ್ರಗಳು ಅದನ್ನು ಏಕಪಕ್ಷೀಯವಾಗಿ ಬದಲಾಯಿಸುವುದಿಲ್ಲ ಎಂದು ಪ್ರಮಾಣ ಮಾಡಿವೆ. ಆದರೆ, ಎಲ್‌ಒಸಿಯನ್ನು ದಾಟಿ ಪಾಕಿಸ್ತಾನದ ಭಾರತದೊಳಗೆ ನುಸುಳಲು ಯತ್ನಿಸುತ್ತಿದೆ. ಎಲ್‌ಒಸಿಯಲ್ಲಿ ದಾಳಿಗಳನ್ನು ನಡೆಸುತ್ತಿದೆ.
ಶಿಮ್ಲಾ ಒಪ್ಪಂದವು ಕಳೆದ 50 ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನವು ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗದಂತೆ ತಡೆಯುತ್ತಿದೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಒಪ್ಪಂದವು ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ಸವೆದುಹೋಗುತ್ತಿದೆ. ಒಪ್ಪಂದವನ್ನು ನಗಣ್ಯ ಮಾಡುವಂತಹ ಕೃತ್ಯಗಳು ನಡೆಯುತ್ತಿವೆ. ಈಗ, ಎಲ್‌ಒಸಿಯಲ್ಲಿ ಶೆಲ್ ಮತ್ತು ಡ್ರೋಣ್ ದಾಳಿ ನಡೆಸುವ ಮೂಲಕ ಸಂಘರ್ಷವನ್ನು ಉಲ್ಬಣಗೊಳಿಸುತ್ತಿದೆ. ಸಂಭಾವ್ಯ ಯುದ್ಧಕ್ಕೆ ವೇದಿಕೆ ಸಿದ್ದಪಡಿಸುತ್ತಿದೆ.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ನೆರೆಹೊರೆಯ ರಾಷ್ಟ್ರಗಳ ನಡುವೆ ಶಾಂತಿಯುತ ಮಾತುಕತೆಯಲ್ಲಿ ಅನಿಶ್ಚಿತತೆ ತುಂಬಿದೆ. ಇತ್ತೀಚಿನ ಬೆಳವಣಿಗೆಗಳು ದ್ವಿಪಕ್ಷೀಯ ಚೌಕಟ್ಟನ್ನು ಸ್ಥಗಿತಗೊಳಿಸಿವೆ. ಎರಡು ದೇಶಗಳ ನಡುವಿನ ಅಂತರವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ದಾಳಿಗಳು ಇನ್ನೂ ಮುಂದುವರೆಯುತ್ತವೆ ಎಂಬುದನ್ನು ಸೂಚಿಸುತ್ತಿದೆ. ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ಒಮ್ಮೆ ಶಿಮ್ಲಾ ಒಪ್ಪಂದದತ್ತ ಕಣ್ಣು ಹಾಯಿಸುವ ತುರ್ತು ಅಗತ್ಯವಿದೆ.