ಈ ದಿನ ಸಂಪಾದಕೀಯ | ಬಡಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಹಳ್ಳ ಹಿಡಿಯಿತೇ?

Date:

Advertisements
ರಾಜ್ಯದಲ್ಲಿ ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ರಾಜ್ಯದಲ್ಲಿ 2023-24ರ ಶೈಕ್ಷಣಿಕ ವರ್ಷದಲ್ಲಿ ಈ ಯೋಜನೆಯಡಿ 15,373 ಸೀಟುಗಳು ಲಭ್ಯ ಇವೆ. ಮೊದಲ ಹಂತದ 5,105 ಸೀಟುಗಳ ಈ ಪೈಕಿ ಕೇವಲ 2,306 ವಿದ್ಯಾರ್ಥಿಗಳು ಮಾತ್ರ ದಾಖಲಾತಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ

ಆರು ವರ್ಷದಿಂದ ಹದಿನಾಲ್ಕು ವರ್ಷ ವಯೋಮಾನದ ಎಲ್ಲ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಭಾರತ ಸರ್ಕಾರ 2009ರಲ್ಲಿ ಶಿಕ್ಷಣದ ಹಕ್ಕು (Right to Education) ಕಾಯ್ದೆಯನ್ನು ಜಾರಿಗೊಳಿಸಿತು. ಸರ್ಕಾರಿ ಶಾಲೆಗಳೆಂದರೆ ಬಡವರ ಶಾಲೆ, ಖಾಸಗಿ ಶಾಲೆಗಳೆಂದರೆ ಶ್ರೀಮಂತರ ಶಾಲೆ ಎಂಬ ಗೋಡೆ ಕೆಡವಬೇಕು ಎಂಬ ಉದಾತ್ತ ಆಶಯ ಈ ಕಾಯ್ದೆ ರಚನೆಯ ಹಿಂದೆ ಇತ್ತು. ಕರ್ನಾಟಕದಲ್ಲಿ ಈ ಕಾಯ್ದೆ ಜಾರಿಗೊಂಡದ್ದು 2012ರಲ್ಲಿ.

ಕಾಯ್ದೆಯ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟಂಬದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶೇ 25 ರಷ್ಟು ಸೀಟುಗಳನ್ನು ಕಾಯ್ದಿರಿಸಬೇಕು. ಆರಂಭದಲ್ಲಿ ಈ ಕಾಯ್ದೆಯ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ಅಸಮಾಧಾನ ತೋರಿದ್ದವು. ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದೂ ಇದೆ. ಅದೇನೇ ಇದ್ದರೂ, ನಗರವಾಸಿ ಬಡ ಪೋಷಕರು ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುವ ಕನಸನ್ನು ನನಸಾಗಿಸಿಕೊಂಡಿದ್ದರು.

ಪ್ರತಿಷ್ಠಿತ ಶಾಲೆಗಳಿಗೆ ಸೇರಿದ ಬಡ ಮಕ್ಕಳ ಪೋಷಕರು ಆ ಸಂಸ್ಥೆಯ ನಿಯಮಾನುಸಾರ ಕೆಲವು ವೆಚ್ಚಗಳನ್ನು ಭರಿಸುವುದು ಅನಿವಾರ್ಯವಾಗಿತ್ತು. ಹನ್ನೊಂದು ಗಂಟೆಯ ʼಸ್ನ್ಯಾಕ್ಸ್‌ ʼ (ತಿನಿಸು) ಕಲ್ಪನೆಯೇ ಇಲ್ಲದ ಬಡಪೋಷಕರು, ಜೊತೆಗೆ ಮಧ್ಯಾಹ್ನದ ಊಟ ಮುಂತಾದ ಅಗತ್ಯಗಳನ್ನು ಭರಿಸುವ ಅನಿವಾರ್ಯತೆಗೆ ಸಿಕ್ಕಿಬಿದ್ದರು. ಆದರೆ ಖಾಸಗಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸುವ ಅವರ ಕನಸು ನನಸಾಗಿಸುವ ಹಾದಿಯಲ್ಲಿ ಅವೆಲ್ಲ ಬೆಟ್ಟದಂತಹ ಕಷ್ಟ ಎನಿಸಿರಲಿಲ್ಲ. ಬಡ ಮಕ್ಕಳು ಎಂಬ ಕಾರಣಕ್ಕಾಗಿ ಶಾಲೆಯಲ್ಲಿ ಸಹಪಾಠಿಗಳು ಮಾತ್ರವಲ್ಲ ಶಿಕ್ಷಕರ, ಆಡಳಿತ ಮಂಡಳಿಯವರ ಕುಹಕ, ಕಿರುಕುಳಕ್ಕೆ ಒಳಗಾಗಿದ್ದೂ ಇದೆ. ಇದರ ನಡುವೆಯೇ ಆಟೋ, ಟ್ಯಾಕ್ಸಿ ಡ್ರೈವರ್‌ಗಳು, ಚಿಕ್ಕಪುಟ್ಟ ವೃತ್ತಿ ಮಾಡಿ ಬದುಕುತ್ತಿದ್ದ ನಗರದ ಪೋಷಕರು ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಿ ಅವರಿಗೆ ಉತ್ತಮ ಭವಿಷ್ಯ ರೂಪಿಸಿಕೊಟ್ಟವರಿದ್ದಾರೆ.

Advertisements

ಯಾವುದೇ ಹೊಸ ಕಾಯ್ದೆಯ ವಿರುದ್ಧ ಒಂದು ವರ್ಗದ ಜನರ ಅಸಮಾಧಾನ, ವಿರೋಧ ಸ್ವಾಭಾವಿಕ. ಹಾಗೆಯೇ ಆಯಿತು, 2012ರಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಖಾಸಗಿ ಶಾಲೆಗಳು ಕೋರ್ಟ್‌ ಮೆಟ್ಟಿಲೇರಿದವು. ಕಾಯ್ದೆಯ ವ್ಯಾಪ್ತಿಯಿಂದ ವಿನಾಯಿತಿ ಪಡೆದವು.

ಇದೆಲ್ಲದರ ಜೊತೆಗೆ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣ ನೀಡಿ 2018ರಲ್ಲಿ ರಾಜ್ಯ ಸರ್ಕಾರ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದಿತು. ಅದರ ಪ್ರಕಾರ ಮಗು ವಾಸವಾಗಿರುವ ಪ್ರದೇಶದಲ್ಲಿ ಸರ್ಕಾರಿ ಶಾಲೆ ಅಥವಾ ಅನುದಾನಿತ ಶಾಲೆಗಳು ಇರದಿದ್ದ ಪಕ್ಷದಲ್ಲಿ ಮಾತ್ರ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪಡೆಯಬಹುದು ಎಂದಿತು. ಹಳೆಯ ನಿಯಮವಿದ್ದಾಗ ಯಾವ ಶಾಲೆಯಲ್ಲಿ ಬೇಕಿದ್ದರೂ ಪ್ರವೇಶ ಪಡೆಯಬಹುದಾಗಿತ್ತು. ಇದರಿಂದಾಗಿ ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಸಂಖ್ಯೆ ತೀರಾ ಕುಸಿಯಿತು. ಕೆಲ ಪ್ರದೇಶಗಳ ಅಗ್ಗದ ಬಜೆಟ್ಟಿನ ಖಾಸಗಿ ಶಾಲೆಗಳ ಶಿಕ್ಷಣದ ಗುಣಮಟ್ಟ ಸರ್ಕಾರಿ ಶಾಲೆಗಳಿಗಿಂತಲೂ ಕಳಪೆ ಎಂಬ ಅಭಿಪ್ರಾಯವೂ ಇದೆ. ಈ ಕಾರಣದಿಂದಾಗಿ ಪೋಷಕರು ಇಂತಹ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಬದಲು ಸರ್ಕಾರಿ ಶಾಲೆಗಳ ಪಾದವನ್ನೇ ಹಿಡಿದರು.

ಈ ಯೋಜನೆಯಡಿ ಪ್ರತಿ ಮಗುವಿನ ಕಲಿಕಾ ಶುಲ್ಕ ರೂ.16,000ದಂತೆ ರೂ.1.5 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಸಂದಾಯ ಮಾಡಿತ್ತು. ಈ ನಡುವೆ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಕೆಲವು ಶಿಕ್ಷಣ ತಜ್ಞರು ಪ್ರತಿ ಪಂಚಾಯಿತಿಗೊಂದು ನವೋದಯ ಮಾದರಿಯಲ್ಲಿ ʼಕರ್ನಾಟಕ ಪಬ್ಲಿಕ್‌ ಸ್ಕೂಲ್‌ʼಗಳನ್ನು ತೆರೆಯುವಂತೆ ಸಲಹೆ ಕೊಟ್ಟರು. ಆದರೆ, ಸರ್ಕಾರ ತಾಲ್ಲೂಕಿಗೊಂದು ಪಬ್ಲಿಕ್‌ ಸ್ಕೂಲ್‌ ತೆರೆದು ಸುಮ್ಮನಾಯಿತು.

ಇತ್ತ ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ರಾಜ್ಯದಲ್ಲಿ 2023-24ರ ಶೈಕ್ಷಣಿಕ ವರ್ಷದಲ್ಲಿ ಈ ಯೋಜನೆಯಡಿ 15,373 ಸೀಟುಗಳು ಲಭ್ಯ ಇವೆ. ಮೊದಲ ಹಂತದ 5,105 ಸೀಟುಗಳ ಈ ಪೈಕಿ ಕೇವಲ 2,306 ವಿದ್ಯಾರ್ಥಿಗಳು ಮಾತ್ರ ದಾಖಲಾತಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆಘಾತಕಾರಿ ವಿಷಯವೆಂದರೆ ಒಂಬತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿ ದಾಖಲಾತಿ ಪ್ರಮಾಣ ಸೊನ್ನೆ! ಬೆಂಗಳೂರು ಉತ್ತರ, ಚಿಕ್ಕಮಗಳೂರು, ಹಾಸನ, ಕೊಡಗು, ಮಧುಗಿರಿ, ರಾಯಚೂರು, ಸಿರ್ಸಿ, ಉತ್ತರಕನ್ನಡ, ವಿಜಯನಗರ ಜಿಲ್ಲೆ ಸೇರಿ ಒಟ್ಟು 1652 ಸೀಟಿನಲ್ಲಿ ಮೊದಲ ಹಂತದಲ್ಲಿ 419 ಸೀಟು ಮೀಸಲಿರಿಸಲಾಗಿತ್ತು. ಈ ಜಿಲ್ಲೆಗಳಲ್ಲಿ ಒಂದು ಮಗುವೂ ಶಿಕ್ಷಣದ ಹಕ್ಕು ಕಾಯ್ದೆಯಡಿ ಸೀಟು ಪಡೆದಿಲ್ಲ.

ಬಡವರ ಮಕ್ಕಳೂ ಓದಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಿದ ಕಾಯ್ದೆಯ ಕತ್ತನ್ನು ಸರ್ಕಾರವೇ ಹಿಸುಕಿ ಹಾಕಿದಂತಾಗಿದೆ. ಈ ಕಾಯ್ದೆಯ ಜಾರಿಯಲ್ಲಿ ಆದ ಲೋಪಗಳಿಗೆ ಸಂಬಂಧಿಸಿದ ದೂರುಗಳು ಸುಪ್ರೀಂ ಕೋರ್ಟಿನಲ್ಲಿ ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದುಬಿಟ್ಟಿವೆ. ಆ ಪ್ರಕರಣಗಳು ಆದಷ್ಟು ಬೇಗ ಇತ್ಯರ್ಥವಾಗಬೇಕು. ಅಷ್ಟೇ ಅಲ್ಲ ಹಳೆಯ ನಿಯಮವನ್ನೇ ಮರು ಜಾರಿಗೊಳಿಸಬೇಕು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡಿಸಲು ಖಾಸಗಿ ಶಾಲೆಗಳನ್ನು ಸರ್ಕಾರ ಅವಲಂಬಿಸುವುದು ಶಿಕ್ಷಣ ಕ್ಷೇತ್ರ ಕುರಿತು ತಾನು ತಳೆದಿರುವ ನಿರ್ಲಕ್ಷ್ಯದ ಧೋರಣೆಗೆ ಹಿಡಿದ ಕನ್ನಡಿ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣ ಕೊಡುವ ಬದ್ಧತೆಯನ್ನು ಸರ್ಕಾರಗಳು ತೋರಿಸುವುದು ಯಾವಾಗ? ಕಡ್ಡಾಯ ಮತ್ತು ಉಚಿತ ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಮೂಲಭೂತ ಹಕ್ಕು ಎಂದ ಮೇಲೆ ಅದನ್ನು ಕೊಡುವುದು ಸರ್ಕಾರದ ಕರ್ತವ್ಯ ಅಲ್ಲವೇ?

ದೆಹಲಿಯ ಆಮ್ ಆದ್ಮೀ ಪಾರ್ಟಿಯ ಸರ್ಕಾರ ಅಧಿಕಾರ ಹಿಡಿಯುತ್ತಿದ್ದಂತೆ ಮೊದಲ ಆದ್ಯತೆಯಾಗಿ ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸಿ ದೇಶಕ್ಕೇ ಮಾದರಿಯಾಗಿದೆ. ಕರ್ನಾಟಕ ಸರ್ಕಾರವೂ ಇಂತಹ ಬದ್ಧತೆ ಪ್ರದರ್ಶಿಸುವ ಅಗತ್ಯವಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X