ಭಾರೀ ಸುದ್ದಿಯಾದ ಪ್ರಕರಣಗಳಿಂದ ಹಿಡಿದು ಅಷ್ಟೊಂದು ಸುದ್ದಿ ಮಾಡದ ಪ್ರಕರಣಗಳಲ್ಲಿಯೂ ಆರೋಪಿಗಳ ಬಂಧನವಾಗುತ್ತದೆ, ಪೊಲೀಸರು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸುತ್ತಾರೆ. ಸಾಕ್ಷ್ಯಾಧಾರವೂ ಇರುತ್ತದೆ. ಆದರೆ ಕೋರ್ಟ್‌ಗಳಲ್ಲಿ ತ್ವರಿತ ವಿಚಾರಣೆ ನಡೆಯುತ್ತಿಲ್ಲ, ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಇದು ಮತ್ತಷ್ಟು ಹೆಣ್ಣುಮಕ್ಕಳ ಬಲಿಗೆ ಕಾರಣವಾಗಿದೆ.
ಕಳೆದ ಆಗಸ್ಟ್‌ನಲ್ಲಿ ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ ತರಬೇತಿ ನಿರತ ವೈದ್ಯೆಯನ್ನು ರಾತ್ರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ನಿದ್ರಿಸುತ್ತಿದ್ದಾಗ ಭೀಕರವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಹತ್ತೊಂಬತ್ತು ವರ್ಷ ಪ್ರಾಯದ ವಿದ್ಯಾರ್ಥಿನಿಯ ಅತ್ಯಾಚಾರ ನಡೆದಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿನಿ ಡಿಸೆಂಬರ್ 23ರ ರಾತ್ರಿ ಗೆಳೆಯನ ಜೊತೆ ಕ್ಯಾಂಪಸ್‌ನ ಕಟ್ಟಡವೊಂದರ ಬಳಿ ಮಾತನಾಡುತ್ತ ನಿಂತಿದ್ದಾಗ ವಿವಿ ಬಳಿಯ ಕೊಟ್ಟೂರ್ ಪುರಂ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದ ಜ್ಞಾನಶೇಖರನ್ ಎಂಬಾತ ಯುವತಿಯ ಗೆಳೆಯನಿಗೆ ಬೆದರಿಕೆ ಹಾಕಿ, ಹಲ್ಲೆ ನಡೆಸಿ ಆಕೆಯನ್ನು ಪಕ್ಕದ ಪೊದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಡಿ 24ರಂದು ಸಂತ್ರಸ್ತರು ದೂರು ನೀಡಿದ್ದಾರೆ. ಸಿಸಿ ಟಿವಿ ದಾಖಲೆ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಜ್ಞಾನಶೇಖರನ್ ಇಂತಹ ಕೃತ್ಯಗಳಲ್ಲಿ ಹಿಂದೆಯೂ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಅಂದರೆ ಆತನಿಗೆ ಮತ್ತೆ ಮತ್ತೆ ಇಂತಹ ಕುಕೃತ್ಯ ಮಾಡಲು ನಮ್ಮ ವ್ಯವಸ್ಥೆಯೇ ಅನುವು ಮಾಡಿಕೊಟ್ಟಿದೆಯೇ? ಯಾಕೆ ಇಂತಹ ಕೇಡಿಗಳನ್ನು ಸಮಾಜದಲ್ಲಿ ಓಡಾಡಿಕೊಂಡಿರಲು ಬಿಡುತ್ತಿವೆ ನಮ್ಮ ಕೋರ್ಟ್‌ಗಳು? ಮತ್ತೆ ಮತ್ತೆ ಅತ್ಯಾಚಾರ, ಕಳ್ಳತನ, ಕೊಲೆಯಂತಹ ಕೃತ್ಯ ಮಾಡುವ ʼಕಸಬುದಾರʼ ದುರುಳರಿಗೆ ಕಾರಾಗೃಹದಲ್ಲಿ ಜಾಗ ಇಲ್ಲವೇ?
ದೆಹಲಿಯ ನಿರ್ಭಯ ಪ್ರಕರಣದ ನಂತರ ದೇಶದಲ್ಲಿ ಭುಗಿಲೆದ್ದ ಆಕ್ರೋಶ, ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದ್ದು ನೆಮ್ಮದಿ ತಂದಿತ್ತು. ಆದರೆ ಆನಂತರ ಅದೆಷ್ಟು ಪ್ರಕರಣಗಳಲ್ಲಿ ಇಂತಹ ತೀರ್ಪುಗಳು ಬಂದಿವೆ ಎಂದು ನೋಡಿದರೆ ನಿರಾಸೆಯಾಗುತ್ತದೆ. ದೇಶದಲ್ಲಿ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ತಂದ ಪೋಕ್ಸೊ ಕಾಯ್ದೆ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ದೇಶದಲ್ಲಿ ಲಕ್ಷದಷ್ಟು ಪೋಕ್ಸೊ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ.
ಭಾರೀ ಸುದ್ದಿಯಾದ ಪ್ರಕರಣಗಳಿಂದ ಹಿಡಿದು ಅಷ್ಟೊಂದು ಸುದ್ದಿ ಮಾಡದ ಪ್ರಕರಣಗಳಲ್ಲಿಯೂ ಆರೋಪಿಗಳ ಬಂಧನವಾಗುತ್ತದೆ, ಪೊಲೀಸರು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸುತ್ತಾರೆ. ಸಾಕ್ಷ್ಯಾಧಾರವೂ ಇರುತ್ತದೆ, ಸಿಸಿ ಟಿವಿ ದೃಶ್ಯಾವಳಿಯೂ ಇರುತ್ತದೆ. ಆದರೆ ಕೋರ್ಟ್‌ಗಳಲ್ಲಿ ತ್ವರಿತ ವಿಚಾರಣೆ ನಡೆಯುತ್ತಿಲ್ಲ, ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಇದು ಮತ್ತಷ್ಟು ಹೆಣ್ಣುಮಕ್ಕಳ ಬಲಿಗೆ ಕಾರಣವಾಗಿದೆ.
ಕೋಲ್ಕತ್ತಾದ ತರಬೇತಿನಿರತ ವೈದ್ಯೆಯ ಪ್ರಕರಣದಲ್ಲಿ ಆರೋಪಿಯ ಬಂಧನವಾಗಿದೆ. ವಿಚಾರಣೆ ನಡೆಯುತ್ತಿದೆ. ಸಂತ್ರಸ್ತೆಯ ಕಣ್ಣು, ಬಾಯಿಗಳಿಂದ ರಕ್ತ ಸೋರಿತ್ತು. ದೇಹದ ಮೂಳೆಗಳು ಮುರಿದಿದ್ದವು. ಗುಪ್ತಾಂಗದಲ್ಲೂ ಭೀಕರ ಗಾಯಗಳಾಗಿದ್ದವು. ಆಕೆಯನ್ನು ಕೊಂದು ನಂತರ ಅತ್ಯಾಚಾರ ಎಸಗಲಾಗಿದೆ ಎಂದು ವೈದ್ಯರು ಆರಂಭದಲ್ಲಿಯೇ ಹೇಳಿದ್ದರು. ಇತ್ತೀಚೆಗೆ ಬಂದ ವರದಿಯ ಪ್ರಕಾರ ಅತ್ಯಾಚಾರದ ಸಂದರ್ಭದಲ್ಲಿ ಆಕೆ ಪ್ರತಿರೋಧ ತೋರಿದ ಗುರುತಿಲ್ಲ. ಅದರರ್ಥ ಅತ್ಯಾಚಾರ ನಡೆಯುವಾಗ ಆಕೆ ಜೀವಂತವಾಗಿ ಇರಲಿಲ್ಲ. ವೈದ್ಯಕೀಯ ಕಾಲೇಜಿನಲ್ಲಿ ಸಿಬ್ಬಂದಿ, ರೋಗಿಗಳು, ರೋಗಿಗಳ ಕುಟುಂಬದವರು, ವೈದ್ಯರು, ದಾದಿಯರು ರಾತ್ರಿ ಹಗಲೆನ್ನದೇ ಡ್ಯೂಟಿ ಮಾಡುತ್ತಿರುತ್ತಾರೆ. ಅಂತಹ ಜಾಗದಲ್ಲಿ ವಿಶಾಲವಾದ ಅಡಿಟೋರಿಯಂನಲ್ಲಿ ಮುಂಜಾನೆ ನಾಲ್ಕರ ಸಮಯದಲ್ಲಿ ವೈದ್ಯೆಯೊಬ್ಬರ ಕೊಲೆ ನಡೆಯುತ್ತದೆ, ಅತ್ಯಾಚಾರ ನಡೆಯುತ್ತದೆ ಎಂದರೆ ಅದು ನಿರ್ಲಕ್ಷ್ಯದ ಪರಮಾವಧಿ.
ಈ ಪ್ರಕರಣದ ಆರೋಪಿ ಸಂಜಯ್ ರಾಯ್ ಹಿನ್ನೆಲೆಯೂ ಅಷ್ಟೇ ವಿಕೃತವಾಗಿದೆ. ಪತ್ನಿಯಿಂದ ದೂರವಾಗಿರುವ ಹಲವು ಚಟಗಳ ದಾಸ, ಆತನ ಮೊಬೈಲ್ ತುಂಬ ಅಶ್ಲೀಲ ವಿಡಿಯೋ, ಚಿತ್ರಗಳು ತುಂಬಿದ್ದವು ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಅಂತಹ ವ್ಯಕ್ತಿ ಸಲೀಸಾಗಿ ಆಸ್ಪತ್ರೆಯ ಸೆಕ್ಯುರಿಟಿ ತಪಾಸಣೆಯಿಲ್ಲದೇ ಬಂದು ಹೋಗುತ್ತಿದ್ದನಂತೆ. ಕೋಲ್ಕತ್ತ ಪೊಲೀಸ್ ನಾಗರಿಕ ಸ್ವಯಂ ಸೇವಕನಾಗಿದ್ದ ಆತ. ಆ ಗುರುತಿನ ಚೀಟಿ ತೋರಿಸಿ ಆಗಾಗ ಆಸ್ಪತ್ರೆಗೆ ಬಂದು ಹೋಗುತ್ತಿದ್ದ. ರೋಗಿಗಳನ್ನು ಕರೆತರುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ವರದಿಗಳು ಹೇಳಿದ್ದವು. ಆತನ ವ್ಯಕ್ತಿತ್ವದ ಬಗ್ಗೆ ಯಾವುದೇ ಪರಾಮರ್ಶೆ ನಡೆಸದೇ ಆತನಿಗೆ ನಾಗರಿಕ ಸ್ವಯಂ ಸೇವಕ ಜವಾಬ್ದಾರಿ ನೀಡಲಾಗಿತ್ತು. ಕ್ರಿಮಿನಲ್ ಒಬ್ಬನನ್ನು ಪೊಲೀಸರೇ ಸಲಹಿದ ಬಗೆಯಿದು. ತಮ್ಮ ಅಡಿಯಲ್ಲೇ ಒಬ್ಬ ಕ್ರಿಮಿನಲ್ ಇದ್ದ ಎಂಬುದನ್ನು ಪೊಲೀಸರು ಅರಿಯುವಲ್ಲಿ ವಿಫಲರಾಗಿದ್ದರು.
ತಮಿಳುನಾಡಿನ ಅಣ್ಣಾ ಯುನಿವರ್ಸಿಟಿಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಗೈದ ವ್ಯಕ್ತಿಯೂ ಸರಣಿ ಅಪರಾಧ ಕೃತ್ಯದ ಹಿನ್ನೆಲೆಯವನು ಎಂದು ವರದಿಯಾಗಿದೆ. ಅಂದರೆ, ಆತನನ್ನು ಹೊರಗೆ ಬಿಟ್ಟ ವ್ಯವಸ್ಥೆ ಎಂತಹುದು? ಪೊಲೀಸರು, ನ್ಯಾಯಾಲಯಗಳು ಇಂತಹ ಕಿಮಿನಲ್‌ಗಳನ್ನು ಸಮಾಜದಲ್ಲಿ ಮುಕ್ತವಾಗಿ ಓಡಾಡಲು ಬಿಟ್ಟ ಕಾರಣ ಅಮಾಯಕ ಹೆಣ್ಣುಮಕ್ಕಳು ಬಲಿಪಶುಗಳಾಗುತ್ತಿದ್ದಾರೆ.
ಇಂತಹ ಘಟನೆಗಳು ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ಯಾವ ಜಾಗವೂ ಸುರಕ್ಷಿತವಲ್ಲ ಎಂದು ಸಾರಿ ಸಾರಿ ಹೇಳುತ್ತಿವೆ. 2023 ನವೆಂಬರ್‌ಲ್ಲಿ ವಾರಾಣಸಿಯ ಬನಾರಸ್ ಹಿಂದೂ ವಿವಿಯ ಕ್ಯಾಂಪಸ್‌ನಲ್ಲಿ ಐಐಟಿ ವಿದ್ಯಾರ್ಥಿಯೊಬ್ಬಳನ್ನು ಅಪಹರಿಸಿದ ನಾಲ್ವರು ಯುವಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆಕ್ಯುರಿಟಿ ಗಾರ್ಡ್, ಸಿಸಿ ಟಿವಿ ಕಣ್ಗಾವಲಿನಲ್ಲಿರುವ ಅಷ್ಟು ದೊಡ್ಡ ಕ್ಯಾಂಪಸ್, ಆಸ್ಪತ್ರೆ, ಕಾಲೇಜುಗಳಲ್ಲಿ ಸಲೀಸಾಗಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ? ಹೆಣ್ಣಮಕ್ಕಳ ಸುರಕ್ಷತೆ ಅಂದ್ರೆ ಸಿ ಸಿ ಟಿವಿ ಅಳವಡಿಸೋದು, ಸೆಕ್ಯುರಿಟಿ ನಿಯೋಜಿಸೋದು ಇಷ್ಟೇ ಎಂದು ಸಂಸ್ಥೆಗಳ ಆಡಳಿತ ನಡೆಸುವವರು ಅಂದುಕೊಂಡಂತಿದೆ.
ಮನೆ, ರಸ್ತೆ, ಪಾರ್ಕ್, ಬಸ್, ವಸತಿ ಶಾಲೆ, ಕಾಲೇಜು, ಯುನಿರ್ಸಿಟಿ, ಆಸ್ಪತ್ರೆ, ಹಾಸ್ಟೆಲ್ ಹೀಗೆ ಎಲ್ಲೆಲ್ಲೂ ಅತ್ಯಾಚಾರಿಗಳು ಹೊಂಚು ಹಾಕಿರುತ್ತಾರೆ. ಅವರಿಗೆ ಭಯ ಹುಟ್ಟಿಸುವುದು ನಮ್ಮ ಸಮಾಜ, ಸರ್ಕಾರ, ಕಾನೂನುಗಳಿಗೆ ಆಗಿಲ್ಲ ಎಂಬುದು ವಿಪರ್ಯಾಸ.
ಅಣ್ಣಾ ಯುನಿವರ್ಸಿಟಿಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿಪರೀತ ಪ್ರತಿಕ್ರಿಯೆ ನೀಡಿ, ತಾನು ಚಪ್ಪಲಿ ಧರಿಸಲ್ಲ, ಉಪವಾಸ ಕೂರುತ್ತೇನೆ ಎಂದು ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಚಾಟಿಯಿಂದ ಹೊಡೆದುಕೊಂಡು ತಮ್ಮನ್ನು ತಾವೇ ಹಿಂಸಿಸಿಕೊಂಡಿದ್ದಾರೆ. ಡಿಎಂಕೆ ನಾಯಕ ಉದಯನಿಧಿ ಜೊತೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಇರುವ ಫೋಟೋ ಟ್ವೀಟ್ ಮಾಡಿ ರಾಜಕೀಯ ಹೇಳಿಕೆ ನೀಡಿದ್ದಾರೆ. ಅಣ್ಣಾಮಲೈ ಪೊಲೀಸ್ ಅಧಿಕಾರಿಯಾಗಿದ್ದವರು. ಅವರಿಗೆ ಯಾವುದನ್ನು ರಾಜಕೀಯಗೊಳಿಸಬಾರದು ಎಂಬ ಕನಿಷ್ಠ ಜ್ಞಾನ ಇರಬೇಕಿತ್ತು.
ವರ್ಷದ ಹಿಂದೆ ಬಿಎಚ್‌ಯು ಕ್ಯಾಂಪಸ್‌ನಲ್ಲಿ ಐಐಟಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧಿತರಾದವರು ಬಿಜೆಪಿ ಐಟಿ ಸೆಲ್‌ನ ಉದ್ಯೋಗಿಗಳು. ಆಗಿನ ಸಚಿವೆ ಸ್ಮೃತಿ ಇರಾನಿಯವರ ಜೊತೆಗೆ ಆರೋಪಿ ಕುನಾಲ್ ಪಾಂಡೆ ಇರುವ ಫೋಟೋ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅಣ್ಣಾಮಲೈ ಪ್ರತಿನಿಧಿಸುವ ಪಕ್ಷದಲ್ಲಿ ಅಂತಹ ಹಿನ್ನೆಲೆಯ ನಾಯಕರು ಭರ್ತಿ ಇದ್ದಾರೆ. ಎರಡು ಅವಧಿಯಿಂದ ಬಿಜೆಪಿ ಅಧಿಕಾರ ನಡೆಸುತ್ತಿರುವ ಉತ್ತರಪ್ರದೇಶ ಮಹಿಳೆಯರ ವಿರುದ್ಧದ ಕ್ರೈಮ್‌ಗಳ ರಾಜಧಾನಿ ಎನಿಸಿದೆ. ಇದು ರಾಜಕೀಯ ಹೇಳಿಕೆ ನೀಡುವ, ಕೆಸರೆರಚಾಟ ನಡೆಸುವ ವಿಚಾರವಲ್ಲ.
ಯಾವುದೇ ಪಕ್ಷ, ಸರ್ಕಾರಗಳಿಗೆ ಹೆಣ್ಣುಮಕ್ಕಳ ಸುರಕ್ಷತೆ, ಸಬಲೀಕರಣ ಆದ್ಯತೆಯ ವಿಷಯ ಆಗಿಲ್ಲ. ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇದು ಸಲ್ಲದು. ಸುಸಜ್ಜಿತ ಕಟ್ಟಡ, ಸಿಸಿಟಿವಿ ಕಣ್ಗಾವಲು, ಸೆಕ್ಯುರಿಟಿ ಸಿಬ್ಬಂದಿ ಇದ್ದರೂ ಹೆಣ್ಣುಮಕ್ಕಳಿಗೆ ಯುನಿವರ್ಸಿಟಿ, ವೈದ್ಯಕೀಯ ಕಾಲೇಜುಗಳಲ್ಲೂ ಸುರಕ್ಷತೆ ಮರೀಚಿಕೆಯಾಗಿರುವುದರ ಬಗ್ಗೆ ಚಿಂತಿಸಬೇಕಿದೆ. ಎಲ್ಲರೂ ಸೇರಿ ಪರಿಣಾಮಕಾರಿ ಕ್ರಮಗಳ ಬಗ್ಗೆ ಯೋಚಿಸಬೇಕಿರುವುದು ಇಂದಿನ ತುರ್ತು.
