ಕೈಗಾರಿಕೆಗೆ ಬೆಂಗಳೂರೇ ಬೇಕು, ಅದೇ ಅಭಿವೃದ್ಧಿ ಎನ್ನುವುದನ್ನು ಬಿಟ್ಟರೆ, ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ರಾಜ್ಯದ ಅಸಮತೋಲನ, ಆರ್ಥಿಕ ಅಸಮಾನತೆ ಕಡಿಮೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿಯೇ ಉದ್ಯೋಗ ಸೃಷ್ಟಿಯಾಗುವುದರಿಂದ, ವಲಸೆಗೆ ಕಡಿವಾಣ ಬೀಳುತ್ತದೆ.
ಕೃಷಿ ಭೂಮಿ ಉಳಿಸಿಕೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿಯ ರೈತರು ಸುಮಾರು 3.5 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೂ, ಕೃಷಿ ಭೂಮಿಯಲ್ಲೇ ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡುತ್ತೇವೆಂದು ರಾಜ್ಯ ಸರ್ಕಾರ ಹಠಕ್ಕೆ ಬಿದ್ದಿದೆ. ರೈತರು ಮತ್ತು ಸರ್ಕಾರದ ನಡುವಿನ ತಿಕ್ಕಾಟ ಮುಂದುವರೆದಿದೆ. ಜುಲೈ 15ರಂದು ನಡೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರೈತ ಮುಖಂಡರ ನಡುವಿನ ಸಭೆಯಲ್ಲಿ ತಾರ್ಕಿಕ ತೀರ್ಮಾನ ನಡೆಯಲಿದೆ.
ಸಭೆಯಲ್ಲಿ ಚರ್ಚೆ ಮತ್ತು ತೀರ್ಮಾನ ಏನಾಗಬಹುದು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟ ಅಭಿಪ್ರಾಯಗಳಿಲ್ಲ. ರೈತರಂತೂ ಭೂಸ್ವಾಧೀನಕ್ಕೆ ಒಪ್ಪಿಕೊಳ್ಳುವ ಮಾತಿಲ್ಲ. ಆದರೆ, ಸರ್ಕಾರ ಭೂಸ್ವಾಧೀನದಿಂದ ಹಿಂದೆ ಸರಿಯುತ್ತದೋ, ಇಲ್ಲವೋ? ಸರ್ಕಾರದ ತೀರ್ಮಾನದ ಮೇಲೆ ರೈತರ ಹೋರಾಟದ ಭವಿಷ್ಯ ನಿರ್ಧಾರವಾಗುತ್ತದೆ.
ಆದರೆ, ಆಳುವವರ ತಲೆಯಲ್ಲಿ ಪೂರ್ವಗ್ರಹ ತುಂಬಿಕೊಂಡಿದೆ. ಕೈಗಾರಿಕೆ ಎಂದರೆ, ಅದು ಬೆಂಗಳೂರಿನಲ್ಲಿಯೇ ಆಗಬೇಕು. ಬೆಂಗಳೂರಿನಲ್ಲಿ ಆಗುವುದು ಮಾತ್ರವೇ ಅಭಿವೃದ್ಧಿ ಎಂಬುದು. ಆ ಕಾರಣಕ್ಕಾಗಿಯೇ, ಚನ್ನರಾಯಪಟ್ಟಣ ಹೋಬಳಿಯಲ್ಲಿ 1,770 ಎಕರೆ ಕೃಷಿ ಭೂಮಿಯನ್ನು ವಶಕ್ಕೆ ಪಡೆದು, ಬಂಡವಾಳಿಗರಿಗೆ ಕೊಡಬೇಕು ಎಂಬ ಹಠ ಸರ್ಕಾರಗಳಲ್ಲಿದೆ. ಇದು ಬಂಡವಾಳಿಗರು ಮತ್ತು ಆಳುವವರು ಇಬ್ಬರಿಗೂ ಲಾಭ ತಂದುಕೊಡುತ್ತದೆ. ಆದರೆ, ರೈತರಿಗೆ? ಉತ್ತರ ನಿಮಗೂ ಗೊತ್ತು!
ಎಲ್ಲ ಕೈಗಾರಿಕೆಗಳೂ ಬೆಂಗಳೂರು ವ್ಯಾಪ್ತಿಯಲ್ಲಿಯೇ ನಡೆಯಬೇಕು ಎಂಬುದನ್ನು ತಲೆಗೇರಿಸಿಕೊಂಡಿರುವ ಕರ್ನಾಟಕ ಸರ್ಕಾರದ ಮಂತ್ರಿ-ಮುಖ್ಯಮಂತ್ರಿಗಳು ಒಮ್ಮೆ ತಮಿಳುನಾಡಿನ ಕೈಗಾರಿಕಾ ನೆಲೆಗಳತ್ತ ಚಿತ್ತ ಹರಿಸುವ ಔಚಿತ್ಯವಿದೆ. ತಮಿಳುನಾಡು ಕೈಗಾರಿಕಾ ವಿಕೇಂದ್ರಿಕರಣದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿ ಬೆಳೆದಿದೆ.
ತಮಿಳುನಾಡಿನಲ್ಲಿ ಯಾವುದೇ ಕೈಗಾರಿಕೆಗಳು ಒಂದು ನಗರ, ಅದರಲ್ಲೂ ರಾಜಧಾನಿ ಚೆನ್ನೈ ಕೇಂದ್ರಿತವಾಗಿಲ್ಲ. ಬದಲಾಗಿ, ದೂರದೃಷ್ಟಿಯ ನೀತಿಗಳು, ಯೋಜಿತ ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ಕಾರಿಡಾರ್‌ಗಳ ಸ್ಥಾಪನೆ, ಮತ್ತು ಗ್ರಾಮೀಣ ಕೈಗಾರಿಕೆಗಳಿಗೆ ಒತ್ತು ನೀಡಲಾಗಿದೆ. ತಮಿಳುನಾಡು ಸರ್ಕಾರವು 1970ರ ದಶಕದಿಂದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿತು. ಇದಕ್ಕಾಗಿ, ಕೈಗಾರಿಕಾ ಎಸ್ಟೇಟ್‌ಗಳನ್ನು ಸ್ಥಾಪಿಸಿತು. ತೆರಿಗೆ ರಿಯಾಯಿತಿಗಳನ್ನು ನೀಡಿತು. ಮೂಲಸೌಕರ್ಯವನ್ನು ಒದಗಿಸಿತು. ಇದರ ಪರಿಣಾಮವಾಗಿ, ರಾಜ್ಯದ ಒಳನಾಡು ಜಿಲ್ಲೆಗಳಾದ ಕೊಯಮತ್ತೂರು, ತಿರುಪ್ಪೂರ್, ಸೇಲಂ, ಮಧುರೈ, ಹೊಸೂರು, ತೂತ್ತುಕುಡಿ ಹಾಗೂ ತಿರುನಲ್ವೇಲಿ ಸೇರಿದಂತೆ ನಾನಾ ಜಿಲ್ಲೆಗಳು ಕೈಗಾರಿಕಾ ಕೇಂದ್ರಗಳಾಗಿ ಬೆಳೆದಿವೆ. ಜೊತೆಗೆ, ಕೈಗಾರಿಕೆಗಳು ಇತರ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಯಾಗಿವೆ.
ತಮಿಳುನಾಡು ಕೈಗಾರಿಕಾ ವಿಕೇಂದ್ರೀಕರಣದಲ್ಲಿ ಮುಖ್ಯವಾಗಿ ಕೈಗಾರಿಕಾ ಕಾರಿಡಾರ್‌ಗಳು ಮತ್ತು ಕ್ಲಸ್ಟರ್‌ಗಳ ಅಭಿವೃದ್ಧಿಯತ್ತ ಗಮನ ಸೆಳೆಯುತ್ತವೆ. ರಾಜ್ಯವು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್, ಚೆನ್ನೈ-ತೂತುಕುಡಿ ಕಾರಿಡಾರ್ ಹಾಗೂ ಮಧುರೈ-ತಿರುನಲ್ವೇಲಿ ಕಾರಿಡಾರ್‌ನಂತಹ ಯೋಜನೆಗಳ ಮೂಲಕ ಕೈಗಾರಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿದೆ. ಈ ಕಾರಿಡಾರ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ರಸ್ತೆ, ರೈಲ್ವೆ, ಬಂದರು ಹಾಗೂ ವಿದ್ಯುತ್ ಸಂಪರ್ಕದಂತಹ ಮೂಲಸೌಕರ್ಯವನ್ನು ಒದಗಿಸುವ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ನೆರವಾಗಿವೆ.
ಕೈಗಾರಿಕಾ ವಿಕೇಂದ್ರೀಕರಣದಿಂದಾಗಿ, ಕೊಯಮತ್ತೂರು ಮತ್ತು ತಿರುಪ್ಪೂರ್‌ನಂತಹ ಪ್ರದೇಶಗಳು ಜವಳಿ ಕೈಗಾರಿಕೆಯ ಕೇಂದ್ರಗಳಾಗಿ ಬೆಳೆದಿವೆ. ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಹಾಗೂ ತಂತ್ರಜ್ಞಾನ-ಆಧಾರಿತ ಕೈಗಾರಿಕೆಗಳಿಗೆ ಕೇಂದ್ರವಾಗಿದೆ. ಸೇಲಂ ಉಕ್ಕು ಉತ್ಪಾದನೆ ಮತ್ತು ತಿರುನಲ್ವೇಲಿ ಸಿಮೆಂಟ್ ಉತ್ಪಾದನೆಯ ಕೇಂದ್ರಗಳಾಗಿವೆ. ಅಲ್ಲದೆ, ವಿವಿಧ ಕ್ಲಸ್ಟರ್‌ಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ (MSMEs) ಹೆಚ್ಚು ಅವಕಾಶ ನೀಡಲಾಗಿದೆ.
ಅಲ್ಲಿನ ಸರ್ಕಾರಗಳು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ಯಮಗಳಿಗೆ ಸ್ಟಾಂಪ್ ಡ್ಯೂಟಿ, ವಿದ್ಯುತ್ ಸುಂಕ ಹಾಗೂ ಭೂಮಿ ಪರಿವರ್ತನೆ ಶುಲ್ಕದಲ್ಲಿ ವಿನಾಯತಿ ನೀಡಿವೆ. ರಸ್ತೆ, ನೀರು, ವಿದ್ಯುತ್ ಹಾಗೂ ಒಳಚರಂಡಿ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿವೆ.
ವಿಶೇಷವಾಗಿ, ‘ತಮಿಳುನಾಡು ಕೈಗಾರಿಕಾ ನೀತಿ-2021’ರ ಅಡಿಯಲ್ಲಿ ಗ್ರಾಮೀಣ ಮತ್ತು ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು ನೀಡಲಾಗಿದೆ. ಈ ನೀತಿಯಲ್ಲಿ ಆಧುನಿಕ ತಂತ್ರಜ್ಞಾನ, ಗ್ರೀನ್ ಎನರ್ಜಿ ಹಾಗೂ ಡಿಜಿಟಲ್ ಕೈಗಾರಿಕೆಗಳನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ.
ಇದನ್ನು ಓದಿದ್ದೀರಾ?: ಎಂ.ಬಿ.ಪಾಟೀಲರ ಹೇಳಿಕೆ ಉದ್ಧಟತನದ ಪರಮಾವಧಿ
ತಮಿಳುನಾಡು ಸರ್ಕಾರವು ಕೈಗಾರಿಕೆಗಳಿಗಾಗಿ ಆಗಾಗ್ಗೆ ಸ್ಥಳೀಯ ಜನರ ಮೇಲೆ ಕ್ರೌರ್ಯವನ್ನೂ ಎಸಗಿದೆ. ತೂತುಕುಡಿಯಲ್ಲಿ ಸ್ಟರ್ಲೈಟ್ ತಾಮ್ರ ಸಂಸ್ಕರಣ ಘಟಕದಿಂದ ಹೊರಸೂಸುವ ವಿಷಕಾರಿ ಅನಿಲದ ವಿರುದ್ಧ 2018ರಲ್ಲಿ ಪ್ರತಿಭಟನೆ ನಡೆಸಿದ ಜನರ ಮೇಲೆ ಸರ್ಕಾರವು ಗೋಲಿಬಾರ್ ನಡೆಸಿತು. 13 ಮಂದಿಯನ್ನು ಕೊಂದಿತು.
ಇಂತಹ ದುಷ್ಕೃತ್ಯಗಳ ಆಚೆಗೂ, ಕೈಗಾರಿಕಾ ವಿಕೇಂದ್ರೀಕರಣದಿಂದಾಗಿ, ಏಕ ನಗರ ಕೇಂದ್ರಿತ ಅಭಿವೃದ್ಧಿಯು ವಿಭಜನೆಗೊಂಡು ರಾಜ್ಯದ ಹಲವು ನಗರ ಮತ್ತು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಗೊಂಡಿವೆ. ಚೆನ್ನೈ ಮತ್ತು ಇತರ ನಗರ ಕೇಂದ್ರಗಳ ಮೇಲಿನ ಒತ್ತಡ ಕಡಿಮೆಯಾಗಿ, ಗ್ರಾಮೀಣ ಜಿಲ್ಲೆಗಳ ಆರ್ಥಿಕತೆ ಬಲಗೊಂಡಿದೆ. ನಗರಗಳಲ್ಲಿ ಮಾಲಿನ್ಯ ಮತ್ತು ಜನಸಂದಣಿಯ ಒತ್ತಡ ಕಡಿಮೆಯಾಗಿದೆ. ಡಿಜಿಟಲ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಗಳು ಗ್ರಾಮೀಣ ಪ್ರದೇಶಗಳನ್ನು ತಲುಪಿವೆ.
1980ರ ದಶಕದಲ್ಲಿ ತಿರುಪ್ಪೂರ್ ಒಂದು ಸಣ್ಣ ಗ್ರಾಮೀಣ ಪಟ್ಟಣವಾಗಿತ್ತು. ಆದರೆ, ಸರ್ಕಾರದ ಬೆಂಬಲ, ರಫ್ತು ಪ್ರೋತ್ಸಾಹ ನೀತಿಗಳು ಹಾಗೂ ಕೈಗಾರಿಕಾ ಸ್ಥಾಪನೆಯಿಂದಾಗಿ ಇಂದು ಜಾಗತಿಕ ಜವಳಿ ಕೇಂದ್ರವಾಗಿ ಬೆಳೆದಿದೆ. ಪ್ರಸ್ತುತ, ತಿರುಪ್ಪೂರ್ ಪ್ರದೇಶವು ಭಾರತದ ಒಟ್ಟು ಜವಳಿ ರಫ್ತಿನಲ್ಲಿ ಸುಮಾರು 50% ಪಾಲು ಹೊಂದಿದೆ. ಜೊತೆಗೆ, ಸ್ಥಳೀಯ ಜನರಿಗೆ ಉದ್ಯೋಗ, ಆರ್ಥಿಕ ಸ್ಥಿರತೆ ಹಾಗೂ ಜಾಗತಿಕ ಮಾರುಕಟ್ಟೆಗೆ ಸಂಪರ್ಕವನ್ನು ಒದಗಿಸಿದೆ.
ಈ ರೀತಿಯಲ್ಲಿ, ಎಂಎಸ್‌ಎಂಇಗಳಿಗೆ ವಿಶೇಷ ಒತ್ತು ಕೊಡುತ್ತಿರುವ ಪರಿಣಾಮ, ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪಾದನೆಗಳು ಹೆಚ್ಚುತ್ತಿವೆ. ತಿರುಪ್ಪೂರ್‌ನ ಜವಳಿ ಉದ್ಯಮ ಹಾಗೂ ಶಿವಕಾಶಿಯ ಪಟಾಕಿ ಕಾರ್ಖಾನೆ ರೀತಿಯ ಕೈಗಾರಿಕೆಗಳು ಯಶಸ್ಸು ಕಂಡಿವೆ. ಮಾತ್ರವಲ್ಲ, ಪ್ರತಿ ಪ್ರದೇಶದಲ್ಲಿಯೂ ಸ್ಥಳೀಯ ಗ್ರಾಮೀಣ ಜನರಿಗೆ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ.
ರಾಜ್ಯದ ಎಲ್ಲ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಕೈಗಾರಿಕೆಗಳನ್ನು ತೆರೆದಿರುವ ತಮಿಳುನಾಡಿನಿಂದ ಕರ್ನಾಟಕ ಸರ್ಕಾರವು ಕೆಲವು ಪಾಠಗಳನ್ನು ಕಲಿಯಬೇಕಿದೆ. ಚೆನ್ನೈ-ಬೆಂಗಳೂರು ಕಾರಿಡಾರ್‌ನಂತೆ, ಕರ್ನಾಟಕವು ತನ್ನ ಬೆಂಗಳೂರು-ಮೈಸೂರು ಕಾರಿಡಾರ್, ಬೆಂಗಳೂರು-ಹುಬ್ಬಳ್ಳಿ ಕಾರಿಡಾರ್ ಅಥವಾ ಮಂಗಳೂರು-ಉಡುಪಿ ಕಾರಿಡಾರ್‌ನಂತಹ ಯೋಜನೆಗಳಿಗೆ ಒತ್ತು ನೀಡಬಹುದು. ಅದಕ್ಕಿಂತ ಹೆಚ್ಚಾಗಿ ಯಾವಾಗಲೂ ಹಿಂದುಳಿದ ಭಾಗ ಎಂದು ಭಾಷಣ ಬಿಗಿಯುವುದಕ್ಕಷ್ಟೇ ಸೀಮಿತಗೊಳಿಸಿಕೊಂಡಿರುವ ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಆಲೋಚಿಸಬಹುದು. ಎಂಎಸ್‌ಎಂಇಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬಹುದು.
ಇದರಿಂದ, ರಾಜ್ಯದ ಅಸಮತೋಲನ, ಆರ್ಥಿಕ ಅಸಮಾನತೆ ಕಡಿಮೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿಯೇ ಉದ್ಯೋಗ ಸೃಷ್ಟಿಯಾಗುವುದರಿಂದ, ವಲಸೆಗೆ ಕಡಿವಾಣ ಬೀಳುತ್ತದೆ. ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಕರ್ನಾಟಕವು ನೆರೆಯ ತಮಿಳುನಾಡಿನಿಂದ ಪಾಠ ಕಲಿಯಬೇಕಿದೆ. ಬೆಂಗಳೂರನ್ನು ಬಿಟ್ಟು ಯೋಚಿಸಬೇಕಿದೆ.