ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!

Date:

Advertisements

‘ಇಂಡಿಯಾ: ದಿ ಚಾಲೆಂಜ್ ಆಫ್ ಕಂಟ್ರಾಸ್ಟೆಡ್ ರೀಜನಲ್ ಡೈನಾಮಿಕ್ಸ್‌’ ಶೀರ್ಷಿಕೆಯಡಿ ಹೊಸ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ವರದಿಯು ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಕರ್ಯ ಕ್ಷೇತ್ರದಲ್ಲಿ ಗುಜರಾತ್ ತೀರಾ ಹಿಂದುಳಿದಿದೆ. ಸಾಮಾಜಿಕ-ಆರ್ಥಿಕ ಅಸಮಾನತೆ ಹೆಚ್ಚಾಗಿದೆ. ಅಪೌಷ್ಟಿಕತೆ, ಬಡತನ ತಾಂಡವವಾಡುತ್ತದೆ. ಅತ್ಯಂತ ಹಿಂದುಳಿದ ರಾಜ್ಯ ಎನಿಸಿಕೊಂಡಿರುವ ಬಿಹಾರಕ್ಕೆ ಅಧಿಕ ಸಮೀಪದಲ್ಲಿದೆ ಎಂದು ಹೇಳಿದೆ. ಆ ಮೂಲಕ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನ ಕರಾಳ ಮುಖವನ್ನು ಬಹಿರಂಗಗೊಳಿಸಿದೆ.

ಭಾರತದೊಳಗಿನ ವಿಭಿನ್ನ ಭಾರತಗಳನ್ನು ಗುರುತಿಸಲು, ಅವುಗಳ ಪರಿಸ್ಥಿತಿಯನ್ನು ವಿಶ್ಲೇಷಿಸಲು ದೇಶದ ಮೂರು ಭಿನ್ನ ಭಾಗಗಳ ಬಿಹಾರ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳನ್ನು ಹೋಲಿಕೆ ಮಾಡಿ ಹೊಸ ಅಧ್ಯಯನವನ್ನು ನಡೆಸಲಾಗಿದೆ. ಸ್ಟೋಫ್ ಜಾಫ್ರೆಲಾಟ್, ವಿಘ್ನೇಶ್ ರಾಜಮಣಿ ಮತ್ತು ನೀಲ್ ಭಾರದ್ವಾಜ್ ಅವರು ಅಧ್ಯಯನ ನಡೆಸಿದ್ದಾರೆ. ಈ ರಾಜ್ಯಗಳ ಅಭಿವೃದ್ಧಿಗಾಗಿ ಅಲ್ಲಿನ ಸರ್ಕಾರಗಳು ರೂಪಿಸಿದ ಸಾಮಾಜಿಕ, ಆರ್ಥಿಕ ಮತ್ತು ಆಡಳಿತ ನೀತಿಗಳನ್ನು ಪರಿಶೀಲಿಸಿದ್ದಾರೆ. ತಾಳೆ ಹಾಕಿ ನೋಡಿದ್ದಾರೆ.

ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಅಳೆದು-ತೂಗಿದಾಗ ಗುಜರಾತ್‌ ಕೈಗಾರಿಕಾ ಪ್ರಗತಿ ಸಾಧಿಸುತ್ತಿದ್ದರೂ, ಸಾಮಾಜಿಕವಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ. ಬಿಹಾರವನ್ನೂ ಮೀರಿಸುವ ಮಟ್ಟಕ್ಕೆ ಸಾಮಾಜಿಕವಾಗಿ ಕುಸಿಯುತ್ತಿದೆ ಎಂಬುದನ್ನು ಅಧ್ಯಯನ ಗಮನಿಸಿದೆ.

Advertisements

ಎಲ್ಲ ಕ್ಷೇತ್ರದಲ್ಲಿಯೂ ಹಿಂದುಳಿದಿರುವ ಬಿಹಾರ 2020-21ರಲ್ಲಿ ಮೂಲಸೌಕರ್ಯಗಳಿಗಾಗಿ ತನ್ನ GSDPಯ ಹೆಚ್ಚಿನ ಪಾಲನ್ನು (22.25%) ಹೂಡಿಕೆ ಮಾಡುತ್ತಿದೆ. ಮಾನವ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟಿರುವ, ಶಿಕ್ಷಣ, ಆರೋಗ್ಯ ಸೇರಿದಂತೆ ಮಾಲಸೌಕರ್ಯಕ್ಕೆ ಉತ್ತಮ ಮಾದರಿಯಾಗಿರುವ ತಮಿಳುನಾಡು ತನ್ನ ಸ್ತರ ಬದ್ಧತೆಯನ್ನು ಮುಂದುವರೆಸಿದೆ, 11% ವೆಚ್ಚ ಮಾಡುತ್ತಿದೆ. ಆದರೆ, ಕೈಗಾರಿಕಾ ಅಭಿವೃದ್ದಿಯೇ ಮಾದರಿ ಎನ್ನುತ್ತಿರುವ ಗುಜರಾತ್‌ ಕೇವಲ 4.46%ರಷ್ಟು ಮಾತ್ರವೇ ವ್ಯಯಿಸಿದೆ. ಆರ್ಥಿಕವಾಗಿ ಗುಜರಾತ್ ಬೆಳೆಯುತ್ತಿದ್ದರೂ, ಅಲ್ಲಿ ಉದ್ಯೋಗಗಳಿಲ್ಲ. ಬಡತನ ಹೆಚ್ಚುತ್ತಿದೆ. ಆರೋಗ್ಯ-ಶಿಕ್ಷಣ ಕ್ಷೇತ್ರ ಕುಸಿಯುತ್ತಿದೆ ಎಂಬುದನ್ನು ಅಧ್ಯಯನವು ಒತ್ತಿ ಹೇಳಿದೆ.

ಅಂದರೆ, ರಾಜ್ಯದ ಬಹುಸಂಖ್ಯಾತರನ್ನು ಕಡೆಗಣಿಸಿ, ಕಾರ್ಖಾನೆ-ಕಂಪನಿಗಳನ್ನು ಸ್ಥಾಪಿಸುವುದೇ ಅಭಿವೃದ್ಧಿಯೇ? ಇದೇ ಗುಜರಾತ್ ಮಾದರಿಯೇ?

2014ರ ಚುನಾವಣೆಯ ಸಮಯದಲ್ಲಿ ಮತ್ತು ಆ ನಂತರದಲ್ಲಿ, ‘ಭಾರತದಲ್ಲಿ ಅಭಿವೃದ್ಧಿ ಮಾದರಿ ಅಂತ ಒಂದಿದ್ದರೆ ಅದು ಗುಜರಾತ್ ಮಾದರಿ’ ಎಂದು ಬಿಜೆಪಿ ಭಾರೀ ಪ್ರಚಾರ ಮಾಡಿತ್ತು. ಇದೇ ಗುಜರಾತ್ ಮಾದರಿಯ ಹೆಸರು ಹೇಳಿಕೊಂಡೇ ಮೋದಿ ಅವರು ಚುನಾವಣೆ ಗೆದ್ದು ಪ್ರಧಾನಿಯೂ ಆದರು. ಇಡೀ ದೇಶವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆಂದು ಅಬ್ಬರದ ಪ್ರಚಾರ ಮಾಡಿದರು. ಇದೇ ಮಾದರಿಯ ಹೆಸರೇಳಿಕೊಂಡೇ ಐದು ವರ್ಷ ಅಧಿಕಾರವನ್ನೂ ನಡೆಸಿದರು. ಆ ನಂತರ, ಗುಜರಾತ್ ಮಾದರಿಯ ಸದ್ದಡಗಿತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಯಾದಗಿರಿ ಬಾಲಕಿಯರ ಅನುಮಾನಾಸ್ಪದ ಸಾವು; ಸಂಶಯಕ್ಕೆ ತೆರೆ ಎಳೆಯಬೇಕಿದೆ ಪೊಲೀಸ್‌ ಇಲಾಖೆ

ಈಗ ಪ್ರಕಟವಾಗಿರುವ ಅಧ್ಯಯನ ವರದಿಯೂ ಸೇರಿದಂತೆ ಹಲವು ಸಮೀಕ್ಷಾ ವರದಿಗಳು ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಿವೆ. ಅದು, ‘ಮೋದಿ ಅವರ ಗುಜರಾತ್‌ ಮಾದರಿಯಲ್ಲಿ ಸಾಮಾನ್ಯ ಜನರು ಇಲ್ಲ’ ಎಂಬುದು. ರಾಜ್ಯದ ಜನರನ್ನು ಬದಿಗಿಟ್ಟು ರೂಪುಗೊಂಡ ಅಭಿವೃದ್ಧಿ ಮಾದರಿ ಈ ‘ಗುಜರಾತ್ ಮಾದರಿ’.

ಕಳೆದ 25 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಅದರಲ್ಲಿ, 13 ವರ್ಷಗಳ ಕಾಲ (2001-2014) ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅವರು ಮುಖ್ಯಮಂತ್ರಿ ಆಗಿದ್ದಾಗ, ರಸ್ತೆ ನಿರ್ಮಾಣಕ್ಕೆ ಹೆಚ್ಚು ಹೂಡಿಕೆ ಮಾಡಲಾಗಿತ್ತು. ಈಗಲೂ ರಸ್ತೆಗಳು ಉತ್ತಮವಾಗಿವೆ. ಜೊತೆಗೆ, ವಿದ್ಯುತ್ ಉತ್ಪಾದನಾ ವಲಯ ವಿಸ್ತರಿಸಿದೆ. ಈ ವಿಸ್ತರಣೆಯಲ್ಲಿ ಮೋದಿ ಅವರ ಅತ್ಯಾಪ್ತ ಅದಾನಿ ಅವರ ಪಾತ್ರ ಬಹುಮುಖ್ಯವಾದದ್ದು. ಗುಜರಾತ್ ಮಾದರಿ ರೂಪುಗೊಳ್ಳುವಲ್ಲಿಯೂ ಈ ಅದಾನಿಯ ಕೊಡುಗೆ ಹೆಚ್ಚಿನದ್ದು.

2002ರಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ಭೀಕರ ನರಮೇಧ ನಡೆಯಿತು. ಆ ಹತ್ಯಾಕಾಂಡ ಸರ್ಕಾರಿ ಪ್ರಾಯೋಜಿತ ಎಂಬ ಆರೋಪಗಳಿಗೆ. ಹತ್ಯಾಕಾಂಡದಲ್ಲಿ ಅಧಿಕ ಸಂಖ್ಯೆಯ ಮುಸ್ಲಿಮರು ಸೇರಿದಂತೆ ಸುಮಾರು 2,000 ಮಂದಿ ಸಾವನ್ನಪ್ಪಿದ್ದರು. ಅದೇ ಸಮಯದಲ್ಲಿ, 2002ರ ಅಕ್ಟೋಬರ್‌ನಲ್ಲಿ ಭಾರತದ ಶ್ರೀಮಂತ ಉದ್ಯಮಿಗಳ ಅತೀ ದೊಡ್ಡ ಸಂಘ – ಸಿಐಐ (ಕಾನ್ಫಿಡರೇಷನ್ ಆಫ್‌ ಇಂಡಿಯನ್ ಇಂಡಸ್ಟ್ರೀಸ್‌) ಸಮಾವೇಶ ನಡೆಯಿತು. ಆ ಸಮಾವೇಶದಲ್ಲಿ ಎಲ್ಲ ಉದ್ಯಮಿಗಳು ಗೋಧ್ರಾ ನರಮೇಧವನ್ನು ಖಂಡಿಸಿದರು. ಹತ್ಯಾಕಾಂಡಕ್ಕೆ ಕಾರಣವಾದ ಮೋದಿ ಆಡಳಿತದ ಗುಜರಾತ್‌ನಲ್ಲಿ ಹೂಡಿಕೆ ಮಾಡುವುದಿಲ್ಲ ಎಂದು ಸಮಾವೇಶವು ನಿರ್ಧರಿಸಿ, ಘೋಷಿಸಿತು.

ಸಿಐಐ ನಿರ್ಬಂಧದಿಂದ ಕಂಗಾಲಾದ ಮೋದಿ ಜೊತೆಗೆ ಕೈಜೋಡಿಸಿದ್ದು ಈ ಅದಾನಿ-ಅಂಬಾನಿ. ಗುಜರಾತ್ ಮೂಲದವರೇ ಆದ ಅದಾನಿ, ಅಂಬಾನಿ ಹಾಗೂ ನಿರ್ಮಾ ಸೋಪ್‌ನ ಮಾಲೀಕ ಕರ್ಷನ್‌ಭಾಯಿ ಪಟೇಲ್– ಈ ಮೂವರು ಸೇರಿ ಸಿಐಐಗೆ ಪ್ರತಿಯಾಗಿ ‘ಗುಜರಾತ್ ರಿಸರ್ಜೆಂಟ್ ಗ್ರೂಪ್’ (ಜಿಆರ್‌ಜಿ) ಆರಂಭಿಸಿದರು. ಇದು, ಗುಜರಾತ್ ಮೂಲದವರ ಬಂಡವಾಳಶಾಹಿಗಳ ಗುಂಪಾಗಿತ್ತು. ಈ ಗುಂಪು ಪ್ರತಿ ವರ್ಷ ‘ರಿಸರ್ಜೆಂಟ್ ಗುಜರಾತ್ ಕನ್ವೆನ್ಷನ್’ ನಡೆಸಲು ಆರಂಭಿಸಿತು. ಸಮಾವೇಶಗಳಲ್ಲಿ ಮೋದಿ ಅವರು ಗುಜರಾತ್‌ನಲ್ಲಿ ಹೂಡಿಕೆ ಮಾಡುವವರಿಗೆ ಪುಕ್ಕಟೆ ಭೂಮಿ, ವಿದ್ಯುತ್, ಕ್ಯಾಪಿಟಲ್‌ ಸಬ್ಸಿಡಿ, ಸಾಲದ ಜೊತೆಗೆ ಲಾಭದಾಯಕ ಆಕರ್ಷಕ ಸೌಲಭ್ಯಗಳನ್ನು ಒದಗಿಸುವುದಾಗಿ ಘೋಷಿಸಿದರು.

ಲಾಭಬಡುಕರಾದ ಬಂಡವಾಳಿಗರು ಹೆಚ್ಚು ಲಾಭ ಗಳಿಸಲು ಗುಜರಾತ್‌ಗೆ ಲಗ್ಗೆ ಇಡಲಾರಂಭಿಸಿದರು. ಅದಾನಿ-ಅಂಬಾನಿಯೂ ಬೆಳೆಯತೊಡಗಿದರು. ಇದೇ ಸಮಯದಲ್ಲಿ, ರತನ್ ಟಾಟಾ ಅವರು 2006ರಲ್ಲಿ ಪಶ್ಚಿಮ ಬಂಗಾಳದಲ್ಲಿ ‘ನ್ಯಾನೋ’ ಕಾರು ಉದ್ದಿಮೆಯನ್ನು ಆರಂಭಿಸಿದರು. ಆದರೆ, ಬಂಗಾಳಿಗರಿಂದ ತೀವ್ರ ಹೋರಾಟವನ್ನು ಎದುರಿಸುತ್ತಿದ್ದರು. ಟಾಟಾಗೆ ಮೋದಿ ಆಮಿಷವೊಡ್ಡಿ, ಗುಜರಾತ್‌ಗೆ ಬನ್ನಿ, 10 ವರ್ಷ ಬಡ್ಡಿ ರಹಿತ ಸಾಲ, 6,000 ಎಕರೆ ಭೂಮಿ ಹಾಗೂ ಒಂದು ತಿಂಗಳೊಳಗೆ ಎಲ್ಲ ಪರವಾನಗಿಗಳನ್ನು ಕೊಡುತ್ತೇವೆಂದು ಭರವಸೆ ನೀಡಿದರು. ಟಾಟಾ ಗುಜರಾತ್‌ಗೆ ಲಗ್ಗೆ ಇಟ್ಟು, ಮೋದಿಯಿಂದಲೇ ‘ನ್ಯಾನೋ’ ಕಾರನ್ನು ಉದ್ಘಾಟನೆ ಮಾಡಿಸಿದರು. ಮೋದಿಯನ್ನು ಅಭಿವೃದ್ಧಿಯ ಹರಿಕಾರನೆಂದು ಹೊಗಳಲಾರಂಭಿಸಿದರು.

2009ರಲ್ಲಿ ಅದಾನಿ-ಅಂಬಾನಿಗಳು ‘ಮೋದಿ ಅಭಿವೃದ್ಧಿಯ ಕೃಷ್ಣ’ ಎಂದು ಹೊಗಳುತ್ತಲೇ ಮೋದಿಯನ್ನು ಭಾರತದಾದ್ಯಂತ ಪ್ರಚಾರಕ್ಕೆ ತಂದರು. 2013ರ ವೇಳೆಗೆ ಸಿಐಐನಲ್ಲಿದ್ದ 90% ಬಂಡವಾಳಿಗರು ಗುಜರಾತ್‌ನಲ್ಲಿ ತಮ್ಮ ಹೂಡಿಕೆಗಳನ್ನು ಪುನರಾರಂಭಿಸಿದರು. ಮಾತ್ರವಲ್ಲ, ಮೋದಿಯೇ ಭಾರತದ ಪ್ರಧಾನಿಯೂ ಆಗಬೇಕೆಂದು ಹೇಳಲಾರಂಭಿಸಿದರು.

ಗೋಧ್ರಾ ಹತ್ಯಾಕಾಂಡದಿಂದ ಮೋದಿ ಎದುರಿಸಿದ ನಿರ್ಬಂಧದಿಂದ ಹೊರಬರುವ ಪ್ರಯತ್ನದಲ್ಲಿ ರೂಪುಗೊಂಡ ಮಾದರಿ ಈ ಗುಜರಾತ್ ಮಾದರಿ ಅರ್ಥಾತ್ ಬಂಡವಾಳಿಗರ ಲಾಭಕೋರ ಮಾದರಿ. ಆದರೆ, ಇದೇ ಮಾದರಿಯನ್ನು ಬಳಸಿಕೊಂಡು ಪ್ರಚಾರ ಪಡೆದ ಮೋದಿ, ಬಂಡವಾಳಿಗರ ಇಚ್ಛೆಯಂತೆ ಮೋದಿ ಪ್ರಧಾನಿಯೂ ಆದರು.

ಇದನ್ನು ಓದಿದ್ದೀರಾ?: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ದೇವರು ಬೇಕಿಲ್ಲ – ಇಚ್ಛಾಶಕ್ತಿ ಸಾಕು

ಗುಜರಾತ್‌ ಮಾದರಿಯ ಲಾಭ ಪಡೆದವರು ಅಂಬಾನಿ-ಅದಾನಿ ಮಾತ್ರ. ಈ ಇಬ್ಬರೂ ತಮ್ಮ ಉದ್ದಿಮೆಗಳನ್ನು ದೇಶಾದ್ಯಂತ ವಿಸ್ತರಿಸಿಕೊಂಡರು. ಈಗ ಭಾರತದ ಅಗ್ರ ಶ್ರೀಮಂತರೂ ಆಗಿದ್ದಾರೆ. ಆದರೆ, ಗುಜರಾತ್‌ ಮಾದರಿ ಹುಟ್ಟುವುದಕ್ಕೂ ಮುಂಚೆ ಮತ್ತು ನಂತರದಲ್ಲಿ ಗುಜರಾತ್‌ ಜನರ ಬದುಕು ಮಾತ್ರ ಎಳ್ಳಷ್ಟೂ ಬದಲಾಗಿಲ್ಲ. ಅದನ್ನು, ಎಲ್ಲ ಸಮೀಕ್ಷೆಗಳು, ಅಧ್ಯಯನಗಳು, ವರದಿಗಳು ಬಹಿರಂಗಪಡಿಸಿವೆ.

ಗುಜರಾತ್‌ನಲ್ಲಿ ಬೃಹತ್ ಉದ್ದಿಮೆಗಳಿವೆ. ಬೃಹತ್ ರಸ್ತೆಗಳಿವೆ. ರಾಜ್ಯವು ಕೈಗಾರಿಕೀಕರಣಗೊಂಡಿದೆ. ಆದಾಗ್ಯೂ, ರಾಜ್ಯದ ಹೆಚ್ಚಿನ ಜನರು ಬಡವರಾಗಿದ್ದಾರೆ. ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಗುಜರಾತ್‌ನಲ್ಲಿ 5 ವರ್ಷದೊಳಗಿನ 40% ಮಕ್ಕಳು ಅಪೌಷ್ಟಿಕತೆ ಮತ್ತು ಕಡಿಮೆ ತೂಕದಿಂದ ಬಳಲುತ್ತಿದ್ದಾರೆ. 62.5% ಗರ್ಭಿಣಿಯರು ರಕ್ತಹೀನತೆ ಹೊಂದಿದ್ದಾರೆ. ಆರೋಗ್ಯ-ಶಿಕ್ಷಣ ಕ್ಷೇತ್ರವು ಹೀನಾಯ ಸ್ಥಿತಿಯಲ್ಲಿದೆ. ರಾಜ್ಯದ ಜನರು ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ಸೇವಾ ವಲಯದಲ್ಲಿ ಗುಜರಾತ್ ತೀರಾ ಹಿಂದುಳಿದಿದೆ.

ಆದರೂ, ಇಂದಿಗೂ ಬಿಜೆಪಿಗರು ಮತ್ತು ಮೋದಿ ಭಕ್ತರು ಗುಜರಾತ್‌ ಮಾದರಿ, ಗುಜರಾತ್ ರೀತಿ ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ. ಈ ವರದಿಗಳಿಂದಾದರೂ ಭಾರತೀಯರಲ್ಲಿರುವ ಗುಜರಾತ್‌ ಬಗೆಗಿನ ಭ್ರಮೆ ಅಳಿಯಬೇಕಿದೆ. ಗುಜರಾತ್‌ನಲ್ಲಿ ಸಾಮಾನ್ಯ ಜನರಿಗೆ ಮೂಲಸೌಕರ್ಯಗಳು, ಆರೋಗ್ಯ, ಶಿಕ್ಷಣ, ಉದ್ಯೋಗಗಳು ದೊರೆಯುವಂತಾಗಬೇಕಿದೆ. ಜನರು ಎಚ್ಚೆತ್ತುಕೊಳ್ಳಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X