ಗ್ರಾಮೀಣ ಕೂಲಿಕಾರರ ಬರಿ ಹೊಟ್ಟೆಗಳ ಮುಂದಿನ ತಟ್ಟೆಗಳಿಗೆ ಮುಸ್ಲಿಮ್ ದ್ವೇಷವನ್ನು ಉಣಬಡಿಸಲಾಗುತ್ತಿದೆ. ಭಾರತಮಾತೆ, ದೇಶಭಕ್ತಿ, ಹಿಂದುತ್ವದ ಭಾಷಣಗಳನ್ನು ಬಿಗಿಯಲಾಗುತ್ತಿದೆ. ಹೊಟ್ಟೆ ಬಟ್ಟೆಗಾಗಿ ಹಗಲಿರುಳು ದುಡಿದ ನಂತರವೂ ತತ್ತರಕ್ಕೆ ಸಿಲುಕಿರುವ ಜನಕೋಟಿ ಭಾರತ ಮಾತೆಯ ಮಕ್ಕಳಲ್ಲವೇ? ಅವರ ಸಂಕಟ ಭಾರತ ಮಾತೆಯ ಸಂಕಟ ಅಲ್ಲವೇ?
ಬೆಲೆ ಏರಿಕೆ ಬೆಂಕಿಯ ಉರಿನಾಲಗೆಗಳು ಬಡವರ ಬದುಕುಗಳನ್ನು ಸುಡತೊಡಗಿವೆ. ಈ ಬೆಂಕಿಯನ್ನು ಮರೆಮಾಚಲು ಕೋಮುವಾದಿ ಹಿಂದುತ್ವದ ದೊಡ್ಡ ಬೆಂಕಿಯನ್ನು ಸೃಷ್ಟಿಸುವ ದುಷ್ಟ ಕೆಲಸ ಜರುಗಿದೆ. ಶತಮಾನಗಳ ಹಿಂದಿನ ಮೊಗಲ್ ಸಾಮ್ರಾಟ ಔರಂಗಜೇಬನನ್ನು ವರ್ತಮಾನಕ್ಕೆ ಎಳೆದು ತಂದು ಕಟಕಟೆಯಲ್ಲಿ ನಿಲ್ಲಿಸಲಾಗುತ್ತಿದೆ. ಆತನ ಸಮಾಧಿಯನ್ನು ಬಗೆದು ಹಾಕುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿಯೇ ಮುಂದಾಗಿ ಘೋಷಿಸುತ್ತಾರೆ. ನಾಗಪುರವನ್ನು ಕುದಿಬಿಂದುವಿಗೆ ತರಲಾಗಿದೆ. ಹೋಳಿ ಹಬ್ಬದ ನೆಪದಲ್ಲಿ ಉತ್ತರಪ್ರದೇಶದ ಮಸೀದಿಗಳಿಗೆ ತಾಡಪಾಲಿನ ಮುಸುಕು ತೊಡಿಸಲಾಗುತ್ತದೆ.
ಗ್ರಾಮೀಣ ಕೂಲಿಕಾರರ ಬರಿ ಹೊಟ್ಟೆಗಳ ಮುಂದಿನ ತಟ್ಟೆಗಳಿಗೆ ಮುಸ್ಲಿಮ್ ದ್ವೇಷವನ್ನು ಉಣಬಡಿಸಲಾಗುತ್ತಿದೆ. ಭಾರತಮಾತೆ, ದೇಶಭಕ್ತಿ, ಹಿಂದುತ್ವದ ಭಾಷಣಗಳನ್ನು ಬಿಗಿಯಲಾಗುತ್ತಿದೆ. ಹೊಟ್ಟೆ ಬಟ್ಟೆಗಾಗಿ ಹಗಲಿರುಳು ದುಡಿದ ನಂತರವೂ ತತ್ತರಕ್ಕೆ ಸಿಲುಕಿರುವ ಜನಕೋಟಿ ಭಾರತ ಮಾತೆಯ ಮಕ್ಕಳಲ್ಲವೇ? ಅವರ ಸಂಕಟ ಭಾರತ ಮಾತೆಯ ಸಂಕಟ ಅಲ್ಲವೇ? ಹಸಿದ ಹೊಟ್ಟೆಗಳಿಗೆ ಧರ್ಮಬೋಧನೆ ಕುರಿತು ಸ್ವಾಮಿ ವಿವೇಕಾನಂದರು ಹೇಳಿದ್ದೇನು?
ಮನರೇಗ (ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಹಳ್ಳಿಗಾಡಿನ ಬಡವರು, ನಿರ್ಗತಿಕರು, ಕೃಷಿ ಕೂಲಿಗಳಿಗೆ ತುಸುವಾದರೂ ಆಸರೆಯಾಗಿರುವ ಯೋಜನೆ. ಗ್ರಾಮೀಣ ಬಡ ಕುಟುಂಬಗಳ ಒಬ್ಬ ವ್ಯಕ್ತಿಗೆ ವರ್ಷದಲ್ಲಿ ನೂರು ದಿನ ಕೂಲಿ ಒದಗಿಸುವ ಮನರೇಗ, ವಿಶ್ವದ ಅತಿ ದೊಡ್ಡ ಉದ್ಯೋಗ ಯೋಜನೆ.
ಆದರೆ ನೂರು ದಿನಗಳ ಉದ್ಯೋಗ ಯೋಜನೆಯನ್ನು ಬರೆದಿರುವ ಕಾಗದದ ಮೇಲಷ್ಟೇ ಉಳಿದಿದೆ. ಕ್ಷೇತ್ರಕ್ಕೆ ಇಳಿದಿಲ್ಲ. ನರೇಗ ಸಂಘರ್ಷ ಮೋರ್ಚ ನೀಡಿರುವ ಅಂಕಿ ಅಂಶಗಳ ಪ್ರಕಾರ 2023-24ರಲ್ಲಿ ಕುಟುಂಬವೊಂದಕ್ಕೆ 44.62 ದಿನಗಳ ಉದ್ಯೋಗ ದೊರೆತಿದೆ ಅಷ್ಟೇ.
ಈ ಯೋಜನೆಯಡಿ ನೀಡಲಾಗುತ್ತಿರುವ ಕೂಲಿ ದರಗಳನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸುತ್ತಿಲ್ಲ. ಕೂಲಿಯನ್ನು ಆರು ತಿಂಗಳು- ವರ್ಷ ಕಾಲ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಹೀಗೆ ಕೂಲಿ ಸ್ಥಗಿತವಾದರೆ, ಬಾಕಿ ಉಳಿಸಿಕೊಂಡರೆ ಅಂದಂದಿನ ದಿನಸಿಯನ್ನು ತಂದು ಅಂದಂದೇ ಉಣ್ಣಬೇಕಿರುವ ಕೂಲಿಕಾರರ ಗತಿಯೇನು?
ಕೂಲಿ ದರಗಳನ್ನು ಹೆಚ್ಚಿಸುವಂತೆ ಮನರೇಗ ಕೂಲಿಕಾರರ ಸಂಘಟನೆಗಳು ಆಗ್ರಹಿಸುತ್ತಲೇ ಬಂದಿವೆ. ಎರಡು ವರ್ಷಗಳ ಹಿಂದೆ ಈ ದರಗಳನ್ನು ಶೇ.2ರಿಂದ ಶೇ.7ರಷ್ಟು ಹೆಚ್ಚಿಸಲಾಗಿತ್ತು. ಉತ್ತರಪ್ರದೇಶದಲ್ಲಿ ಈ ದರ ಏಳು ರುಪಾಯಿಗಳಷ್ಟು, ಗೋವೆಯಲ್ಲಿ 34 ರುಪಾಯಿಗಳಷ್ಟು ಹೆಚ್ಚಿತ್ತು. ಎರಡು ವರ್ಷಗಳಲ್ಲಿ ಬೆಲೆ ಏರಿಕೆ ಮತ್ತಷ್ಟು ಹೆಚ್ಚಿದ್ದು, ಗ್ರಾಮೀಣ ಸಂಕಟ ಅಧಿಕಗೊಂಡಿದೆಯೇ ವಿನಾ ತಗ್ಗಿಲ್ಲ.
ಕೂಲಿ ದರಗಳನ್ನು ಬೆಲೆ ಏರಿಕೆ ಅನುಗುಣವಾಗಿ ಹೆಚ್ಚಿಸುವಂತೆ ಸಂಸತ್ತಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕುರಿತ ಸ್ಥಾಯಿ ಸಮಿತಿ ಕಳೆದ ವಾರ ಶಿಫಾರಸು ಮಾಡಿದೆ. ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಆಧಾರ್ ಕಾರ್ಡ್ ಆಧರಿತ ದಿನಗೂಲಿ ಪಾವತಿ ವ್ಯವಸ್ಥೆಯನ್ನು ಸಡಿಲಿಸಿ ಐಚ್ಛಿಕಗೊಳಿಸಬೇಕು. ವರ್ಷದಲ್ಲಿ ಅರ್ಹ ಕುಟುಂಬವೊಂದರ ಒಬ್ಬ ವ್ಯಕ್ತಿಗೆ ನೀಡಲಾಗುವ ಉದ್ಯೋಗ ದಿನಗಳ ಸಂಖ್ಯೆಯನ್ನು 100ರಿಂದ 150 ದಿನಗಳಿಗೆ ಹೆಚ್ಚಿಸಬೇಕು. ದಿನಗೂಲಿ ಮತ್ತು ಉಪಕರಣಗಳ ಸುಮಾರು 24 ಸಾವಿರ ಕೋಟಿ ರುಪಾಯಿಗಳ ಬಾಕಿ ಮೊತ್ತವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂಬ ಹಲವು ಮುಖ್ಯ ಶಿಫಾರಸುಗಳನ್ನು ಸಮಿತಿಯು ಮಾಡಿದೆ.
ಮನರೇಗ ದಿನಗೂಲಿಯನ್ನು ದಿನಕ್ಕೆ 400 ರುಪಾಯಿಗಳಿಗೆ ಏರಿಸುವಂತೆ ಕಾಂಗ್ರೆಸ್ ನಾಯಕಿ ಸೋನಿಯೋಗಾಂಧೀ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೊಳಿಸಿದ ಈ ಯೋಜನೆ ಕೋಟ್ಯಂತರ ಗ್ರಾಮೀಣ ಬಡವರ ಪಾಲಿನ ಏಕೈಕ ಆಸರೆ. ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಈ ಯೋಜನೆಯ ಕತ್ತು ಹಿಸುಕತೊಡಗಿದೆ ಎಂದು ಆಪಾದಿಸಿದ್ದಾರೆ.
ಈ ಯೋಜನೆಯ ದಿನಗೂಲಿ ದರಗಳನ್ನು ಕೃಷಿ ಕೂಲಿಕಾರರ ಗ್ರಾಹಕ ದರ ಸೂಚ್ಯಂಕಗಳ ಜೊತೆ ಜೋಡಿಸಲಾಗಿದೆ. ಈ ಸೂಚ್ಯಂಕಗಳು ಹಣದುಬ್ಬರದ ನೈಜ ಸ್ಥಿತಿಯನ್ನು ಬಿಂಬಿಸುವುದಿಲ್ಲ. ಹೀಗಾಗಿ ಬೇರುಮಟ್ಟದ ವಾಸ್ತವಗಳ ಆಧಾರದ ಮೇಲೆ ದಿನಗೂಲಿಯನ್ನು ಲೆಕ್ಕ ಹಾಕಿ ನಿಗದಿ ಮಾಡಬೇಕು. ದೇಶದ ಎಲ್ಲೆಡೆ ಸಮಾನ ಕೂಲಿದರಗಳನ್ನು ಜಾರಿಗೊಳಿಸಬೇಕು ಎಂಬುದು ಸಮಿತಿಯ ಒತ್ತಾಯ.
ಈ ಬಜೆಟ್ ನಲ್ಲಿ ಈ ಯೋಜನೆಗೆ 86 ಸಾವಿರ ಕೋಟಿ ರುಪಾಯಿಗಳ ಹಂಚಿಕೆ ಮಾಡಲಾಗಿದೆ. ಈ 86 ಸಾವಿರ ಕೋಟಿ ರುಪಾಯಿಯ ಮೊತ್ತ ಇದೇ ಸರ್ಕಾರ 2023-24ರಲ್ಲಿ ಮಾಡಿದ್ದ ವೆಚ್ಚಕ್ಕಿಂತ ಕಡಿಮೆ. 2023-24ರಲ್ಲಿ 89,154 ಕೋಟಿ ರುಪಾಯಿಯನ್ನು ವಿನಿಯೋಗಿಸಲಾಗಿತ್ತು. ಜಿಡಿಪಿಯ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ ಕಳೆದ ಹತ್ತು ವರ್ಷಗಳಲ್ಲಿ ಹಂಚಿಕೆ ಮಾಡಿರುವ ಅತಿ ಕಡಿಮೆ ಮೊತ್ತವಿದು ಎಂದು ಸೋನಿಯಾಗಾಂಧೀ ಆಪಾದಿಸಿದ್ದಾರೆ. ಕರ್ನಾಟಕದ ಗ್ರಾಮೀಣ ಕೂಲಿಕಾರರ ಸಂಘದ (ಗ್ರಾಕೂಸ) ಅಭಯ್ ಕುಮಾರ್ ಅವರೂ ಇದೇ ಅಸಮಾಧಾನವನ್ನು ಹೊರಹಾಕಿದ್ದಾರೆ.
ಈ ವರ್ಷದ ಫೆಬ್ರವರಿಯ 15ರ ಹೊತ್ತಿಗೆ ನೀಡಬೇಕಿದ್ದ ಒಟ್ಟು ಮನರೇಗ ಬಾಕಿಯ ಮೊತ್ತ 23,446.27 ಕೋಟಿ ರುಪಾಯಿಗಳು. ಈ ಮೊತ್ತದ ನಾಲ್ಕನೆಯ ಒಂದರಷ್ಟು ಮೊತ್ತವು ಕಳೆದ ವರ್ಷದ ಬಾಕಿ ತೀರಿಸುವುದಕ್ಕೇ ವಿನಿಯೋಗ ಆಗುತ್ತದೆ. ಪರಿಣಾಮವಾಗಿ ಹಾಲಿ ಹಣಕಾಸು ವರ್ಷದ ಹಂಚಿಕೆಯು 62,533.73 ಕೋಟಿ ರುಪಾಯಿಗಳಿಗೆ ಕುಸಿಯಲಿದೆ. ಗ್ರಾಮೀಣ ಸಂಕಟವನ್ನು ನೀಗಿಸುವ ಉದ್ದೇಶಕ್ಕೆ ಬೀಳುವ ದೊಡ್ಡ ಹೊಡೆತವಿದು. ಗಾಯದ ಮೇಲೆ ಬರೆ ಎಳೆದಂತೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಯೋಜನೆಯನ್ನೇ ಮೂಲೆಗುಂಪು ಮಾಡುತ್ತಿದೆ. ಬಜೆಟ್ ಹಂಚಿಕೆಯ ಮೊತ್ತವನ್ನು ಕಡಿತಗೊಳಿಸುತ್ತಲೇ ನಡೆದಿದೆ. ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ಟಿನಲ್ಲಿ ಈ ಯೋಜನೆಯ ಹೆಸರನ್ನು ಕೂಡ ಹೇಳಲಿಲ್ಲ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್.
ಯೋಜನೆಗೆ ಭಾರೀ ಬೇಡಿಕೆ ಇದ್ದರೂ ಹಂಚಿಕೆಯನ್ನು ಕಡಿತ ಮಾಡಲಾಗುತ್ತಿದೆ. ‘ಗುಂಡಿ ತೋಡಿ ಗುಂಡಿ ಮುಚ್ಚುವ ಈ ನಿರುಪಯೋಗಿ ಯೋಜನೆಯನ್ನು ನಿಲ್ಲಿಸುವ’ ಕಠೋರ ಟೀಕೆಯನ್ನು ತಮ್ಮ ಸರ್ಕಾರ ಅಧಿಕಾರ ಹಿಡಿದ ಹೊಸತರಲ್ಲಿ ಕಠೋರ ಮಾಡಿದ್ದರು ಮೋದಿ. ‘ಯುಪಿಎ ವೈಫಲ್ಯವನ್ನು ಬಿಂಬಿಸುವ ಜೀವಂತ ಸ್ಮಾರಕ ಮನರೇಗ’ ಎಂದೆಲ್ಲ ಜರೆದಿದ್ದರು.
ಕೋವಿಡ್ ನಂತರದ ಗ್ರಾಮೀಣ ನಿರುದ್ಯೋಗದ ತೀವ್ರ ಸಂಕಟದ ನಿವಾರಣೆಗೆ ತುಸು ಮಟ್ಟಿಗೆ ಉಪಯೋಗಕ್ಕೆ ಬಂದಿತ್ತು ಮನರೇಗ. 2020ರಲ್ಲಿ ಈ ಯೋಜನೆಯ ಮೊತ್ತವನ್ನು 1.11 ಲಕ್ಷ ಕೋಟಿ ರುಪಾಯಿಗಳಿಗೆ ಏರಿಸಲಾಗಿತ್ತು. ಕೋವಿಡ್ ನಂತರವೂ ಈ ಯೋಜನೆಗೆ ಭಾರೀ ಬೇಡಿಕೆ ಮುಂದುವರೆದಿತ್ತು. ಹೀಗಾಗಿ 2023-24ರಲ್ಲಿ 90,800 ಕೋಟಿ ರುಪಾಯಿಗಳನ್ನು ವಿನಿಯೋಗಿಸಲಾಗಿತ್ತು.
ಸಾಮಾಜಿಕ ಭದ್ರತೆಯ ಯೋಜನೆಯಿದು ಎಂಬುದನ್ನು ಸಾಬೀತು ಪಡಿಸಿತ್ತು. ಈ ಯೋಜನೆಗೆ ಹಂಚಿಕೆಯನ್ನು ಕಡಿತಗೊಳಿಸಿರುವುದು ನಿಗೂಢ ಅಚ್ಚರಿಯ ಸಂಗತಿ. ಈ ಕುರಿತು ಪುನರ್ ಪರಿಶೀಲನೆ ಮಾಡಬೇಕು ಎಂದು 2024ರ ಮನರೇಗ ಲೋಕಸಭಾ ಸ್ಥಾಯಿ ಸಮಿತಿ ತನ್ನ ವರದಿಯಲ್ಲೂ ಹೇಳಿತ್ತು. ಆದರೆ ಈ ಸಮಿತಿಯ ಶಿಫಾರಸುಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಕುರಿತು ಸ್ಥಾಯಿ ಸಮಿತಿ ತನ್ನ ನಿರಾಶೆಯನ್ನು ದಾಖಲಿಸಿದೆ.
ಮನರೇಗ ಕೂಲಿ ಪಾವತಿಯನ್ನು ಆಧಾರ್ ಜೊತೆ ಬೆಸೆದ ಕೇಂದ್ರ ಸರ್ಕಾರದ ಕ್ರಮ ಬಹು ದೊಡ್ಡ ಸಂಖ್ಯೆಯ ಮನರೇಗ ಫಲಾನುಭವಿಗಳನ್ನು ಕಷ್ಟಕ್ಕೆ ಗುರಿ ಮಾಡಿದ್ದಲ್ಲದೆ, ಅವರನ್ನು ಈ ಯೋಜನೆಯಿಂದಲೇ ಹೊರಗಿರಿಸಲು ಕಾರಣ ಆಗಿರುವುದೂ ಹೌದು. ಆಧಾರ್ ಆಧರಿತ ಕೂಲಿ ಪಾವತಿಯನ್ನು ಕಡ್ಡಾಯ ಮಾಡಕೂಡದು ಎಂಬುದು ಮನರೇಗ ಫಲಾನುಭವಿಗಳ ತೀವ್ರತರ ಬೇಡಿಕೆ. ಈ ಯೋಜನೆಯ ಕೂಲಿಯನ್ನು ದಿನಕ್ಕೆ 400 ರುಪಾಯಿಗೂ, ಕೂಲಿ ನೀಡಿಕೆಯ ದಿನಗಳನ್ನು ವರ್ಷಕ್ಕೆ 100ರಿಂದ 140ಕ್ಕೆ ಹೆಚ್ಚಿಸಬೇಕೆಂಬ ಕೂಗಿಗೂ ಕೇಂದ್ರ ಸರ್ಕಾರ ಕಿವಿಗೊಟ್ಟಿಲ್ಲ. ಈ ಯೋಜನೆಗೆ ದೇಶದ ಜಿಡಿಪಿಯ ಶೇ.1.7ರಷ್ಟನ್ನಾದರೂ ಮೀಸಲಿಡಬೇಕು ಎಂಬುದು ವಿಶ್ವಬ್ಯಾಂಕಿನ ಶಿಫಾರಸಾಗಿತ್ತು. ಆದರೆ ಈ ಹಂಚಿಕೆಯನ್ನು ಕೇವಲ ಶೇ.0.26ಕ್ಕೆ ಸೀಮಿತಗೊಳಿಸಲಾಗಿದೆ.
ಯೋಜನೆಗೆ ಭಾರೀ ಬೇಡಿಕೆಯಿದ್ದರೂ ಮೋದಿಯವರು ಅದನ್ನು ಅವಗಣಿಸುತ್ತ ಬಂದಿದ್ದಾರೆ. ಹಣದ ಹಂಚಿಕೆಯು ವರ್ಷದಿಂದ ವರ್ಷಕ್ಕೆ ತಗ್ಗುತ್ತಿದ್ದು, ಯೋಜನೆಯ ಪರಿಣಾಮ ಸವೆಯುತ್ತ ನಡೆದಿದೆ. ಗ್ರಾಮೀಣ ಬದುಕನ್ನು ಕಾಡಿರುವ ಸಂಕಟದ ಮೇಲೆ ಹಿಂದು-ಮುಸ್ಲಿಮ್ ದ್ವೇಷದ ಪರದೆ ಎಳೆದು ಮುಚ್ಚುವುದು ಮೋದಿಯವರ ಸನ್ನಾಹ.
