ಈ ದಿನ ಸಂಪಾದಕೀಯ |ನಕ್ಸಲ್ ‘ನಿಗ್ರಹ’ದ ಪರಿಣಾಮಕಾರಿ ಹತಾರು ಯಾವುದು?

Date:

Advertisements
ಜನಪರ ಜೀವಗಳು ಸಂವಿಧಾನ ಮತ್ತು ಜನತಂತ್ರಾತ್ಮಕ ಹೋರಾಟದ ದಾರಿಯಲ್ಲಿ ನಂಬಿಕೆ ಇರಿಸಿ ಮುಖ್ಯವಾಹಿನಿಗೆ ಮರಳುತ್ತಿರುವುದು ಮತ್ತು ಇಂತಹ ವಾಪಸಾತಿಯನ್ನು ಸಾಧ್ಯವಾಗಿಸಿರುವ ಸಿದ್ದರಾಮಯ್ಯ ಸರ್ಕಾರದ ಶರಣಾಗತಿ ನೀತಿ ಎರಡೂ ಅತ್ಯಂತ ಸ್ವಾಗತಾರ್ಹ...

ರಾಜ್ಯದ ಆರು ಮಂದಿ ನಕ್ಸಲೀಯ ಹೋರಾಟಗಾರರು ಇಂದು (ಜ.8) ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಮರಳಿದ್ದಾರೆ.

ಆದಿವಾಸಿಗಳು-ದಲಿತ-ದಮನಿತರ ಪರವಾಗಿ ಸಶಸ್ತ್ರ ಹೋರಾಟವನ್ನು ತ್ಯಜಿಸಿ ಮುಖ್ಯವಾಹಿನಿಯನ್ನು ಸೇರಿ ಪ್ರಜಾತಾಂತ್ರಿಕ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ. ಮುಖ್ಯವಾಹಿನಿಗೆ ಮರಳಬೇಕೆಂಬ ಸರ್ಕಾರದ ಕರೆಯನ್ನು ಸ್ವೀಕರಿಸಿದ್ದಾರೆ.

ನಕ್ಸಲೀಯ ಹೋರಾಟದಲ್ಲಿದ್ದ ವಿಕ್ರಂ ಗೌಡ ಎಂಬ ರಾಜ್ಯದ ಆದಿವಾಸಿ ಯುವಕ ಇತ್ತೀಚೆಗೆ ನಕ್ಸಲ್ ನಿಗ್ರಹ ದಳದ ಗುಂಡಿಗೆ ಬಲಿಯಾಗಿದ್ದ. ಈ ಹತ್ಯೆ ಕುರಿತು ನಾಗರಿಕ ಸಮಾಜ ಅನೇಕ ನ್ಯಾಯಬದ್ಧ ಪ್ರಶ್ನೆಗಳನ್ನು ಎತ್ತಿತ್ತು. ಧರಮ್ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸಾಕೇತ್ ರಾಜನ್, ಪಾರ್ವತಿ, ಹಾಜಿಮಾ ಎಂಬ ನಕ್ಸಲ್ ಹೋರಾಟಗಾರರ ಹತ್ಯೆಗಳ ಪ್ರಶ್ನೆಗಳ ಸರಮಾಲೆಯನ್ನೇ ಎತ್ತಿದ್ದವು.

Advertisements

ಹಿಂಸಾಚಾರದ ಹೋರಾಟದ ಹಾದಿ ಸಂವಿಧಾನ ಸಮ್ಮತವಲ್ಲ. ಆದರೆ ರಾಜ್ಯಶಕ್ತಿಯು ನಿತ್ಯಬದುಕಿನಲ್ಲಿ ದಲಿತ ದಮನಿತರ ಮೇಲೆ ಹರಿಯಬಿಡುವ ನಾನಾ ರೂಪಗಳ ಹಿಂಸೆಗಳು ಕಣ್ಣಿಗೆ ಕಾಣುವಂತಹವಲ್ಲ. ಪೇಟೆ ಪಟ್ಟಣಗಳ ಮಧ್ಯಮವರ್ಗಗಳ ಜನಕೋಟಿಗೆ ಈ ಹಿಂಸೆಗಳ ಕಲ್ಪನೆ ಕೂಡ ಇರುವುದಿಲ್ಲ. ಶರಣಾಗತರ್‍ಯಾರೂ ಶೋಕಿಗಾಗಿ ಬಂದೂಕು ಹಿಡಿದವರಲ್ಲ. ದಟ್ಟಾರಣ್ಯಗಳಲ್ಲಿ ದುರ್ಭರ ಬದುಕು ಮೋಜು ಮಜಾ ವಿಲಾಸಗಳಿಂದ ಕೂಡಿದ್ದಲ್ಲ. ಪೊಲೀಸರ ಬೇಟೆಯ ಬಂದೂಕುಗಳನ್ನು ತಪ್ಪಿಸಿಕೊಂಡು, ಹಸಿವು ನಿದ್ದೆ ನೀರಡಿಕೆಗಳ ನಿರ್ಲಕ್ಷಿಸಿ ಹಗಲಿರುಳು ಅಲೆಯುವುದು ಸುಲಭದ ಬದುಕೇನೂ ಅಲ್ಲ. ಅನ್ಯಾಯ ಅತ್ಯಾಚಾರ ದಬ್ಬಾಳಿಕೆಯ ವಾತಾವರಣದಿಂದ ರೋಸಿದವರು ಇವರು. ಪೊಲೀಸರ ಎನ್ಕೌಂಟರು ಹತ್ಯೆ ಸಾಧ್ಯತೆಗಳನ್ನು ಸದಾ ಎದುರಿಸಿದ್ದವರು.

ಇಂತಹ ಜನಪರ ಜೀವಗಳು ಸಂವಿಧಾನ ಮತ್ತು ಜನತಂತ್ರಾತ್ಮಕ ಹೋರಾಟದ ದಾರಿಯಲ್ಲಿ ನಂಬಿಕೆ ಇರಿಸಿ ಮುಖ್ಯವಾಹಿನಿಗೆ ಮರಳುತ್ತಿರುವುದು ಮತ್ತು ಇಂತಹ ವಾಪಸಾತಿಯನ್ನು ಸಾಧ್ಯವಾಗಿಸಿರುವ ಸಿದ್ದರಾಮಯ್ಯ ಸರ್ಕಾರದ ಶರಣಾಗತಿ ನೀತಿ ಎರಡೂ ಅತ್ಯಂತ ಸ್ವಾಗತಾರ್ಹ.  

ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಇವರಿಗೆ ಕನಿಷ್ಠ ಸೌಲಭ್ಯಗಳು ದೊರೆಯಲಿವೆ. ಈ ಹಿಂದೆಯೂ ಮುಖ್ಯವಾಹಿನಿಗೆ ಮರಳಿದ ಇಂತಹ ನಿದರ್ಶನಗಳಿವೆ. 2013-2018ರ ಅವಧಿಯ ಸಿದ್ದರಾಮಯ್ಯ ಸರ್ಕಾರವೇ ನಕ್ಸಲೀಯ ಶರಣಾಗತಿ ನೀತಿಯನ್ನು ರೂಪಿಸಿತ್ತು. ಈ ನೀತಿ ನಿರೂಪಣೆಯ ಹಿಂದೆ ದಿವಂಗತರಾದ ಹಿರಿಯ ಗಾಂಧೀವಾದಿ ಎಚ್.ಎಸ್.ದೊರೆಸ್ವಾಮಿ, ಪತ್ರಕರ್ತೆ ಗೌರಿಲಂಕೇಶ್, ವಿಜಯಮ್ಮ ಮುಂತಾದ ಹಿರಿಯರು ಮುಖ್ಯ ಪಾತ್ರ ವಹಿಸಿದ್ದರು.

ಈ ಹಿಂದೆ ಮರಳಿದ್ದವರ ಪೈಕಿ ಹಿರಿಯರಾದ ಸಿರಿಮನೆ ನಾಗರಾಜ್ ಮತ್ತು ನೂರ್ ಮುಂತಾದವರು ಸಮಾಜ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದಾರೆ. ಜನತಂತ್ರ ಮತ್ತು ಸಂವಿಧಾನದಲ್ಲಿ ಅಚಲ ನಂಬಿಕೆ ಇರಿಸಿ ಅದೇ ದಾರಿಗಳಲ್ಲಿ ತಮ್ಮ ಜನಪರ ಹೋರಾಟಗಳನ್ನು ಹೊಸ ಹುಮ್ಮಸ್ಸಿನಿಂದ ಮುಂದುವರೆಸಿದ್ದಾರೆ. ಈ ಬೆಳವಣಿಗೆ ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ಕುರಿತ ವಿಶ್ವಾಸಾರ್ಹತೆಯನ್ನು ಇಮ್ಮಡಿಗೊಳಿಸಿದೆ.

ಹಾಲಿ ಮುಖ್ಯವಾಹಿನಿಗೆ ಮರಳಿರುವ ಆರು ಮಂದಿ ನಕ್ಸಲರ ಪೈಕಿ ನಾಲ್ವರು ಹೆಣ್ಣುಮಕ್ಕಳು. ಲತಾ ಮುಂಡಗಾರು, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ ರಾಜ್ಯದ ಆದಿವಾಸಿಗಳು. ಟಿ.ಎನ್. ಜಿಶಾ ಕೇರಳದ ವಯನಾಡ್ ಜಿಲ್ಲೆಯ ಆದಿವಾಸಿ ಮಹಿಳೆ. ಸರ್ಕಾರಗಳ ತಪ್ಪು ಆದ್ಯತೆಯ ಅಭಿವೃದ್ಧಿ ಯೋಜನೆಗಳಿಗೆ ತುಂಡು ಭೂಮಿ, ಬಡಗುಡಿಸಿಲುಗಳನ್ನು ಕಳೆದುಕೊಂಡು ಬಂಡೆದ್ದವರು. ಜಯಣ್ಣ ಆರೋಲಿ ಹಿಂದುಳಿದ ರಾಯಚೂರು ಜಿಲ್ಲೆಯ ದಲಿತ ಯುವಕ. ಭಾಸ್ಕರ್ ಎಂಬ ನಕ್ಸಲೀಯ ಹೋರಾಟಗಾರನ ಎನ್ಕೌಂಟರ್ ಹತ್ಯೆಯಿಂದ ಆಘಾತ ಅನುಭವಿಸಿ ಭೂಗತ ಹೋರಾಟ ಸೇರಿದವರು. ವಸಂತ ಆರ್ಕಾಟ್ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಬಿ.ಟೆಕ್ ಪದವೀಧರ. ಈ ಎಲ್ಲರೂ ಪೊಲೀಸ್ ದಾಳಿ ದೌರ್ಜನ್ಯಗಳು ಮತ್ತು ಸರ್ಕಾರಿ ಯೋಜನೆಗಳಿಗೆ ಬಲಿಯಾಗಿದ್ದವರ ದುರ್ಭರ ಬದುಕು ಬವಣೆಗಳನ್ನು ಖುದ್ದು ಕಂಡವರು. ಕೌಟುಂಬಿಕ ದುರಂತಗಳನ್ನು ಎದುರಿಸಿದವರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕ್ರಿಕೆಟ್ ಕೇಸರಿಕರಣ, ಪರಿಶುದ್ಧ ಆಟ ಅಂತರ್ಧಾನ

ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಭಾಗವಾಗಿ ತಮಗೆ ಬರಬಹುದಾದ ಹಣದ ಅರ್ಧವನ್ನು ತಮ್ಮ ಹಳ್ಳಿಯ ಶಾಲೆಯ ಅಭಿವೃದ್ಧಿಗಾಗಿ ನೀಡಲು ತೀರ್ಮಾನಿಸಿದ್ದಾರೆ ಜಯಣ್ಣ. ರಾಜ್ಯದ ಭೂಹೀನ ಕುಟುಂಬಗಳಿಗೆ ತಲಾ ಐದು ಎಕರೆ ಜಮೀನು ನೀಡಬೇಕು, ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು, ಅರಣ್ಯದಂಚಿನ ಜಮೀನುಗಳ ರೈತರ ಎತ್ತಂಗಡಿ ನಿಲ್ಲಬೇಕು, ಎಲ್ಲ ಆದಿವಾಸಿ ಕುಟುಂಬಗಳಿಗೆ ಮನೆ ಮತ್ತು ಜಮೀನು ನೀಡಬೇಕು ಮುಂತಾದ ಬೇಡಿಕೆಗಳು-ಷರತ್ತುಗಳನ್ನು ಈ ಹೋರಾಟಗಾರರು ಸರ್ಕಾರದ ಮುಂದಿರಿಸಿದ್ದರು. ಈ ಷರತ್ತುಗಳು ಇವರ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿ.

ಪೊಲೀಸರು ಮತ್ತು ಅರೆರಕ್ಷಣಾ ಪಡೆಗಳ ಮಾವೋವಾದಿ ನಿಗ್ರಹ ಕಾರ್ಯಾಚರಣೆಗಳು ಇತ್ತೀಚಿನ ವರ್ಷಗಳಲ್ಲಿ ಎಲ್ಲ ರಾಜ್ಯಗಳಲ್ಲೂ ತೀವ್ರತೆ ಪಡೆದಿವೆ. ಮಧ್ಯಭಾರತದ ಬಸ್ತರಿನಲ್ಲಂತೂ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿರುವ ನಕ್ಸಲೀಯರು ಮತ್ತು ಸರ್ಕಾರಿ ಪಡೆಗಳ ನಡುವೆ ಸಮರವೇ ನಡೆದಿದೆ. ಮಾವೋವಾದಿ ಹೋರಾಟಗಾರರ ಕೋಟೆಗಳು ಕುಸಿದು ಬೀಳುತ್ತಿವೆ. 2024ರಲ್ಲಿ ಬಸ್ತರಿನ ಈ ಘರ್ಷಣೆಗಳಲ್ಲಿ 296 ಮಾವೋವಾದಿಗಳು, 24 ಮಂದಿ ಭದ್ರತಾ ಪಡೆಗಳವರು ಹಾಗೂ 80 ಮಂದಿ ಜನಸಾಮಾನ್ಯ ನಾಗರಿಕರು ಮಡಿದಿದ್ದಾರೆ. ಕೆಲ ದಿನಗಳ ಹಿಂದೆ ಛತ್ತೀಸಗಢದ ಬಿಜಾಪುರ ಸೀಮೆಯಲ್ಲಿ ಮಾವೋವಾದಿಗಳು ಇರಿಸಿದ ಸ್ಫೋಟಕಗಳಿಗೆ ಎಂಟು ಮಂದಿ ಭದ್ರತಾ ಸಿಬ್ಬಂದಿ ಬಲಿಯಾದರು.

ಛತ್ತೀಸಗಢದ ಜೈಲುಗಳೆಂಬ ನರಕವನ್ನು ಎದುರಿಸಿದ ಅಸಂಖ್ಯಾತ ಆದಿವಾಸಿ ಹೆಣ್ಣುಮಕ್ಕಳ ಪೈಕಿ ಸೋನಿ ಸೋರಿ ಕೂಡ ಒಬ್ಬರು. ಪುರುಷ ಪೊಲೀಸರು ಆಕೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಷಾಕ್ ನೀಡಿದ್ದರು. ಲೈಂಗಿಕ ಹಲ್ಲೆ ನಡೆಸಿದ್ದರು. ಗುಪ್ತಾಂಗ ಮತ್ತು ಗುದಕ್ಕೆ ಕಲ್ಲು ಹರಳುಗಳನ್ನು ತೂರಿಸಿದ ಪ್ರಕರಣ ಸುಪ್ರೀಮ್ ಕೋರ್ಟಿನ ಮೆಟ್ಟಿಲು ಹತ್ತಿತ್ತು. ಈ ಕೃತ್ಯದ ಉಸ್ತುವಾರಿ ನಡೆಸಿದ ಪೊಲೀಸ್ ಅಧಿಕಾರಿಗೆ ಶೌರ್ಯಪ್ರಶಸ್ತಿ ಪದಕ ದೊರೆಯಿತು… ಇದು ಬಹಳ ಬಹದ್ದೂರ್ ಕೆಲಸ ಇದ್ದೀತೇನೋ… ಅದಕ್ಕೆಂದೇ ಆತನಿಗೆ ಪದಕದ ಸಮ್ಮಾನ ಸಿಕ್ಕಿತು. ಮನಸು ಪ್ರತೀಕಾರ ಬಯಸುತ್ತದೆ. ಆದರೆ ನನಗೆ ಸಂವಿಧಾನ ಮತ್ತು ಜನತಂತ್ರದಲ್ಲಿ ನಂಬಿಕೆ ಇದೆ. ಹತಾರುಗಳನ್ನು ಕೈಗೆತ್ತಿಕೊಳ್ಳುವುದು ನನಗೆ ಸಮ್ಮತವಿಲ್ಲ ಎಂದಿದ್ದರು ಸೋನಿ ಸೋರಿ.

ಪೊಲೀಸರು ಮತ್ತು ನಕ್ಸಲೀಯರು ಇಬ್ಬರ ಕೈಯಲ್ಲೂ ಹತಾರುಗಳಿವೆ. ಇಬ್ಬರದೂ ಹಿಂಸೆಯ ಮಾರ್ಗವೇ. ಆದರೆ ನಕ್ಸಲೀಯರು ಪ್ರಭುತ್ವದ ಶಕ್ತಿ ಮತ್ತು ಬಂಡವಾಳಶಾಹಿಯ ವಿರುದ್ಧ ತಮ್ಮ ಹೋರಾಟವೆಂದು ಸ್ಪಷ್ಟವಾಗಿ ಸಾರಿ ಹೇಳುತ್ತಾರೆ. ಆದರೆ ಜನತಂತ್ರ ಮತ್ತು ಸಂವಿಧಾನವನ್ನೇ ಪರಮ ದೈವ ಎಂದು ಆಣೆ ಪ್ರಮಾಣ ಮಾಡುತ್ತದೆ ರಾಜ್ಯ ಸರ್ಕಾರ. ಆದರೂ ಯಾಕೆ ಎಗ್ಗಿಲ್ಲದ ಹಿಂಸಾಚಾರವನ್ನು ಅಮಾಯಕ ಆದಿವಾಸಿಗಳ ಮೇಲೆ ಹರಿಯಬಿಡುತ್ತದೆ. ನಕ್ಸಲೀಯರು ಮಾಡುವುದು ತಪ್ಪು. ಆದರೆ ಸರ್ಕಾರ ಮಾಡೋದೂ ತಪ್ಪೇ ಅಲ್ಲವೇ ಎಂಬುದು ಆಕೆಯ ಪ್ರಶ್ನೆಯಾಗಿತ್ತು.

 ಛತ್ತೀಸಗಢದ ಕಾಂಗ್ರೆಸ್ ಸರ್ಕಾರ ಒಂದೊಮ್ಮೆ ಖಾಸಗಿ ಆದಿವಾಸಿ ಪಡೆಯನ್ನು ರಚಿಸಿ ಅದರಿಂದಲೇ ಆದಿವಾಸಿ ನಕ್ಸಲೀಯರ ಬೇಟೆಯಾಡಿಸುವ ಸಲ್ವಾ ಜುಡುಂ ಎಂಬ ಸಂವಿಧಾನಬಾಹಿರ ಪಡೆಯನ್ನು ಅಂತ್ಯಗೊಳಿಸುವ ತೀರ್ಪನ್ನು ಸುಪ್ರೀಮ್ ಕೋರ್ಟು 2013ರಲ್ಲಿ ನೀಡಿತ್ತು. ಈ ತೀರ್ಪು ಆಳುವ ವರ್ಗಗಳ ಕ್ರೌರ್ಯ ಮತ್ತು ಆದಿವಾಸಿಗಳ ಬವಣೆಯ ಕುರಿತು ಕುರುಡಾಗಿರುವ ಈ ದೇಶದ ಮಧ್ಯಮವರ್ಗದ ಕಣ್ಣು ತೆರೆಸುವಂತಹುದು.

ತೀರ್ಪಿನ ಕೆಲ ಭಾಗಗಳ ನೇರ ಅನುವಾದ ಹೀಗಿದೆ- ”ಪ್ರಭುತ್ವದ ಅಗಾಧ ಬಲದ ವಿರುದ್ಧ ಜನ ಕಾರಣವೇ ಇಲ್ಲದೆ ಸುಮ್ಮ ಸುಮ್ಮನೆ ಬಂದೂಕು ಕೈಗೆ ಎತ್ತಿಕೊಳ್ಳುವುದಿಲ್ಲ….. ದರಿದ್ರರು, ದುರ್ಬಲರು, ವಂಚಿತರನ್ನು ಬಗೆ ಬಗೆಯ ಅನ್ಯಾಯಗಳ ಸರಣಿಯೇ ಹುರಿದು ಮುಕ್ಕಿದಾಗ ಜನ ಬಂಡೇಳುತ್ತಾರೆ. ಛತ್ತೀಸಗಢ ಸೀಮೆಯ ಬಹುಪಾಲು ಮಾವೋವಾದೀ ಚಟುವಟಿಕೆಯಿಂದ ಬಾಧಿತ ಎಂಬುದು ವ್ಯಾಪಕ ತಿಳಿವಳಿಕೆ. ಮಾವೋವಾದೀ ಬಂಡುಕೋರ ಚಟುವಟಿಕೆ ಮತ್ತು ಪ್ರಭುತ್ವ ಕೈಗೊಂಡ ಮಾವೋವಾದೀ ದಮನ ಕ್ರಮಗಳೆರಡರಿಂದಲೂ ಈ ಸೀಮೆಯ ಜನ ತೀವ್ರ ಸಂಕಟಕ್ಕೆ ಸಿಕ್ಕಿದ್ದಾರೆ. ಉಕ್ಕಿನ ಮುಷ್ಠಿಯಿಂದ ಆಳುವುದು, ಪ್ರತಿಯೊಬ್ಬ ವ್ಯಕ್ತಿಯನ್ನೂ ಅನುಮಾನದಿಂದ ಕಾಣುವ, ನಾಗರಿಕರ ಮಾನವೀಯ ಹಕ್ಕುಗಳ ಬಗೆಗೆ ದನಿಯೆತ್ತುವ ಯಾವನೇ ವ್ಯಕ್ತಿಯನ್ನು ಮಾವೋವಾದಿ ಎಂಬ  ಗುಮಾನಿಯಿಂದ ನೋಡುವುದೊಂದೇ ತನಗಿರುವ ಆಯ್ಕೆ ಎಂದು ಛತ್ತೀಸಗಢ ಸರ್ಕಾರ ಪದೇ ಪದೇ ನಮ್ಮ ಮುಂದೆ ನಿವೇದಿಸಿಕೊಂಡಿದೆ. ಈ ನಿವೇದನೆ ದುಪ್ಪಟ್ಟು ದಿಗ್ಭ್ರಾಂತಿ ಹುಟ್ಟಿಸುವಂತಹುದು”.

”ಛತ್ತೀಸಗಢ ಪ್ರಾಂತ್ಯದ ಹಲವು ಭಾಗಗಳಲ್ಲಿ ಪಿಡುಗಿನಂತೆ ಹಬ್ಬಿ ನೆಲೆಸಿರುವ ಅಮಾನವೀಯತೆಯನ್ನು ಪ್ರಶ್ನಿಸುವ ಯಾರೇ ಆದರೂ ಅವರು ಮಾವೋವಾದಿಗಳು ಇಲ್ಲವೇ ಅವರ ಬಗೆಗೆ ಸಹಾನುಭೂತಿ ಉಳ್ಳವರು ಎಂದು ಪರಿಗಣಿಸಬೇಕು ಎಂದು ವಾದಿಸುವ ಛತ್ತೀಸ್‌ಗಢ ಸರ್ಕಾರ ಮತ್ತು ಈ ಸರ್ಕಾರದ ಪರವಾಗಿ ವಾದಿಸುವವರ ಕುರುಡುತನ ಹೆದರಿಕೆ ಹುಟ್ಟಿಸುತ್ತದೆ. ಒಂದೆಡೆ ಮಾವೋವಾದಿಗಳು- ನಕ್ಸಲೀಯರು ಮತ್ತೊಂದೆಡೆ ಪ್ರಭುತ್ವ ಮತ್ತು ಅದರ ಕೆಲ ಏಜೆಂಟುಗಳಿಂದ ಛತ್ತೀಸಗಢದ ಜನರ ನಾಗರಿಕ ಹಕ್ಕುಗಳು ವ್ಯವಸ್ಥಿತವಾಗಿ
ದಮನಗೊಳ್ಳುತ್ತಿವೆ. ಹೀಗಾಗಿ ಸಮಸ್ಯೆ ಅಲ್ಲಿನ ಜನರಾಗಲೀ ಇಲ್ಲವೇ ಅವರ ಸ್ಥಿತಿಗತಿಗಳನ್ನು ಪ್ರಶ್ನಿಸತೊಡಗಿರುವ ಸದುದ್ದೇಶದ ಚಿಂತನಶೀಲ ನ್ಯಾಯಪರರಾಗಲೀ ಅಲ್ಲ. ಅಸಲು ಸಮಸ್ಯೆ  ಇರೋದು ಛತ್ತೀಸಗಢ ಪ್ರಭುತ್ವ ಅನುಮೋದಿಸಿರುವ ಅನೈತಿಕ ರಾಜಕೀಯ
ಅರ್ಥಸ್ಥಿತಿ ಮತ್ತು ಇಂತಹ ಅನರ್ಥ ಹುಟ್ಟಿ ಹಾಕುವ ರಾಜಕಾರಣದಲ್ಲಿ”.

ಇಂಡಿಯಾದ ಹಲವು ಭಾಗಗಳಲ್ಲಿ ಕಂಡು ಬಂದಿರುವ ಹಿಂಸಾತ್ಮಕ ಆಂದೋಳನ ರಾಜಕಾರಣ ಮತ್ತು ಸಶಸ್ತ್ರ ಬಂಡಾಯ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳಿಗೂ, ತೀವ್ರ ಅಸಮಾನತೆಗಳಿಗೂ, ಇಂತಹ ಅಸಮಾನತೆಗಳನ್ನೇ ಭುಂಜಿಸಿ ಬದುಕುವ ಭ್ರಷ್ಟ ಸಾಮಾಜಿಕ ಮತ್ತು ಪ್ರಭುತ್ವ ವ್ಯವಸ್ಥೆಗೂ ಅತ್ಯಾಪ್ತ ಸಂಬಂಧಗಳಿವೆ. ಈ ಸಂಬಂಧಗಳ ಕುರಿತು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಎಚ್ಚರಿಕೆ ನೀಡಲಾಗಿದೆ ಕೂಡ. ಯೋಜನಾ ಆಯೋಗ ರಚಿಸಿದ್ದ ತಜ್ಞರ ಸಮಿತಿಯೊಂದು ತೀವ್ರಗಾಮಿ ಬಾಧಿತ ಪ್ರದೇಶಗಳಲ್ಲಿ
ಅಭಿವೃದ್ಧಿಯ ಸವಾಲುಗಳು ಎಂಬ ವಿಷಯ ಕುರಿತು ನಿಡಿರುವ ವರದಿಯ ಸಮಾಪ್ತಿಯ ಭಾಗದಲ್ಲಿರುವ ವಾಕ್ಯಗಳನ್ನು ಉಲ್ಲೇಖಿಸುವುದೇ ಆದರೆ- “ಸ್ವಾತಂತ್ರ್ಯಾನಂತರದಲ್ಲಿ ಅಳವಡಿಸಿಕೊಳ್ಳಲಾಗಿರುವ ಅಭಿವೃದ್ಧಿಯ ಮಾದರಿಯು ಸಮಾಜದ ಅಂಚಿನಲ್ಲಿ ಬದುಕಿರುವ ಜನವರ್ಗಗಳಲ್ಲಿನ ಹಾಲಿ ಅಸಂತೃಪ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ…. ನೀತಿ ನಿರೂಪಕರು ನೀಡಿದ ಈ ಅಭಿವೃದ್ಧಿ ಮಾದರಿಯನ್ನು ಈ ಸಮುದಾಯಗಳ ಮೇಲೆ ಹೇರುತ್ತ ಬರಲಾಗಿದೆ…. ಪರಿಣಾಮವಾಗಿ ಈ ಜನವರ್ಗಗಳಿಗೆ ದುರಸ್ತಿ ಮಾಡಲಾಗದಷ್ಟು ಹಾನಿ ತಟ್ಟಿದೆ.

ಈ ಅಭಿವೃದ್ಧಿ ಮಾದರಿಯ ಬಹುತೇಕ ಬೆಲೆ ತೆತ್ತವರು ಬಡವರು. ಅವರ ಹಿತವನ್ನು ಬಲಿಗೊಟ್ಟು ಬಲಾಢ್ಯ ಜನವರ್ಗಗಳು ಈ ಅಭಿವೃದ್ಧಿ ಮಾದರಿಯ ಲಾಭಗಳನ್ನು ಬಹು ದೊಡ್ಡ ಪ್ರಮಾಣದಲ್ಲಿ ಕಬಳಿಸಿದೆ. ಬಡ ಜನವರ್ಗಗಳ ಅಗತ್ಯಗಳ ಕುರಿತು ದಪ್ಪಚರ್ಮ ಬೆಳೆಸಿಕೊಂಡ ಅಭಿವೃದ್ಧಿ ಮಾದರಿಯು ಈ ಜನವರ್ಗಗಳನ್ನು ಒಕ್ಕಲೆಬ್ಬಿಸಿದ್ದು ಅವರನ್ನು ನಿಕೃಷ್ಟ ಬದುಕಿಗೆ ತಳ್ಳಿದೆ. ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗಗಳ ಕುರಿತು ಹೇಳುವುದಾದರೆ ಈ ಅಭಿವೃದ್ಧಿ ಮಾದರಿಯು ಈ ಸಮುದಾಯಗಳ ಸಾಮಾಜಿಕ ಸಂಘಟನೆಯನ್ನು, ಸಾಂಸ್ಕೖತಿಕ ಅಸ್ಮಿತೆಯನ್ನು ಹಾಗೂ ಸಂಪನ್ಮೂಲ ನೆಲೆಯನ್ನು ನಾಶ ಮಾಡಿದೆ… ಪರಿಣಾಮವಾಗಿ ಈ
ಸಮುದಾಯಗಳು ಶೋಷಣೆಗೆ ಹೆಚ್ಚು ಹೆಚ್ಚು ಪಕ್ಕಾಗುವಂತೆ ಆಗಿದೆ. ಅಭಿವೃದ್ಧಿಯ ಈ ಮಾದರಿ ಮತ್ತು ಇದರ ಅನುಷ್ಠಾನವು ಅಧಿಕಾರಶಾಹಿಯ ಭ್ರಷ್ಟ ಆಚರಣೆಗಳನ್ನು ಹೆಚ್ಚಿಸಿದೆ. ಜೀವಿ ಮತ್ತೊಂದು ಜೀವಿಯನ್ನು ಕಬಳಿಸುವ ಲಾಲಸೆಕೋರ ಹಪಾಹಪಿಯ (rapascious) ಕಾಂಟ್ರ್ಯಾಕ್ಟರುಗಳು, ಮಧ್ಯವರ್ತಿಗಳು, ವರ್ತಕರು ಹಾಗೂ ಸಮಾಜದ ಇತರೆ ಆಶೆಬುರುಕ ವರ್ಗಗಳು ಆದಿವಾಸಿಗಳ ಸಂಪನ್ಮೂಲಗಳನ್ನು ಕಸಿದುಕೊಂಡು ಅವರ ಬದುಕಿನ ಘನತೆಯನ್ನು ಉಲ್ಲಂಘಿಸಿವೆ.”

”ಸರ್ಕಾರಿ ವರದಿಗಳು ವಾಸ್ತವ ಸ್ಥಿತಿಯನ್ನು ತಗ್ಗಿಸಿ ತೆಳುವಾಗಿಸಿ ಹೇಳುವುದೇ ಸಾಮಾನ್ಯ ರೂಢಿ. ಆದರೆ ಭಾರತ ಸರ್ಕಾರದ ಯೋಜನಾ ಆಯೋಗ ರಚಿಸಿದ ತಜ್ಞರ ಸಮಿತಿಯೊಂದು ಕೊನೆಯಿಲ್ಲದ ದುರಾಶೆಯನ್ನು ತಣಿಸಿಕೊಳ್ಳಲೋಸುಗ ಮತ್ತೊಂದು ಜೀವಿಯನ್ನು ಕೊಲ್ಲುವುದು ಎಂಬ ಅರ್ಥ ಬರುವ rapascious ಶಬ್ದವನ್ನು ಬಳಸಿದೆ. ನಮ್ಮ ಬಹುಸಂಖ್ಯೆಯ ಸಹ ದೇಶವಾಸಿಗಳು ಅನುಭವಿಸುತ್ತಿರುವ ಮೇರೆಯಿಲ್ಲದ ಕಷ್ಟ ಕಾರ್ಪಣ್ಯಗಳ ಸೂಚಕ ಈ ಪದ. ಘನತೆಯ ಬದುಕನ್ನು ಬದುಕಲು ಅಗತ್ಯವಿರುವ ಸಾಧನಗಳನ್ನು ಈ ಜನವರ್ಗಗಳಿಗೆ ನಿರಾಕರಿಸಿ ನಿಕೃಷ್ಟ ಬದುಕಿಗೆ ಅವರನ್ನು ವ್ಯವಸ್ಥಿತವಾಗಿ ನೂಕಿರುವುದು ಇದೇ ಅಭಿವೃದ್ಧಿ ಮಾದರಿಯ ಶಕ್ತಿಗಳು ಮತ್ತು ಹುನ್ನಾರಗಳೇ ಎಂಬುದು ನಿಚ್ಚಳ”.

ಈ ವರದಿ ಓದಿದ್ದೀರಾ?: ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?

ತಜ್ಞರ ಸಮಿತಿಯ ಇಂತಹ ವರದಿಯ ಬುದ್ಧಿಮಾತುಗಳಿಗೆ ಭಾರತ ಸರ್ಕಾರ ಕಿವುಡು ಎನ್ನುವ ನ್ಯಾಯಾಲಯ ತಜ್ಞರ ಸಮಿತಿಯ ಬುದ್ಧಿಮಾತುಗಳನ್ನು ಉಲ್ಲೇಖಿಸಿದೆ- ”ದೇಶದ ನಾನಾ ಭಾಗಗಳಲ್ಲಿ ನೆಲೆಸಿರುವ ಸಾಮಾಜಿಕ-ಆರ್ಥಿಕ ಸನ್ನಿವೇಶವೇ ನಕ್ಸಲೀಯ ಆಂದೋಲನ ಇಲ್ಲವೇ ಇತರೆ ಹಿಂಸಾತ್ಮಕ ರೂಪಗಳಿಗೆ ಕಾರಣವಾಗಿದೆ. ಈ ತ್ವೇಷಗಳನ್ನು ಸಾಮಾಜಿಕ-ಆರ್ಥಿಕ-ರಾಜಕೀಯ ಸಂದರ್ಭಗಳಲ್ಲಿ ಇಟ್ಟು ಘನತೆ ಗೌರವದ ಬದುಕನ್ನು ಕಲ್ಪಿಸಿಕೊಡುವ ಜೀವನೋಪಾಯದ ಹಕ್ಕು, ಪ್ರಾಣದ ಹಕ್ಕಿನಂತಹ ಜನಪರ ಇಶ್ಯೂಗಳ ಕಾರ್ಯಸೂಚಿಯನ್ನು ಕಾರ್ಯಸೂಚಿಯ ಮುನ್ನೆಲೆಗೆ ತರಬೇಕು.

ತೀವ್ರಗಾಮಿ ಆಂದೋಲನ ಮತ್ತು ಬಡತನದ ನಡುವೆ ಮತ್ತು ಅರಣ್ಯಗಳು ಮತ್ತು ಅರಣ್ಯವಾಸಿಗಳ ನಡುವೆ ನೇರ ಆಳ ಸಂಬಂಧವಿದೆ. ಒಕ್ಕಲೆಬ್ಬಿಸುವ ನೀತಿಯಿಂದ ಆದಿವಾಸಿಗಳು ಗಿರಿಜನರು ಕಾರ್ಪಣ್ಯಗಳ ಸರಣಿಗೆ ಬಿದ್ದು ಬೇಯುತ್ತಾರೆ ಎಂದು ಸರ್ಕಾರದ ನೀತಿ ನಿರೂಪಕ ದಾಖಲೆ ದಸ್ತಾವೇಜುಗಳು ಸಾರುತ್ತವೆ. ಆದರೆ ಸರ್ಕಾರಗಳು ಈ ಕ್ಷೋಭೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದೇ ಬಗೆದು ಭಿನ್ನಮತವನ್ನೂ ಅಸಂತೃಪ್ತಿಯನ್ನೂ ಜನತಂತ್ರದ ಸಕಾರಾತ್ಮಕ ಅಂಶವೆಂದು ಪರಿಗಣಿಸದೆ ದಮನ ಮಾಡುತ್ತಿವೆ. ಈ ಮನಸ್ಥಿತಿ ಬದಲಾಗಬೇಕು. ಕಾಳ್ಗಿಚ್ಚನ್ನು ಪ್ರತಿ ಕಿಚ್ಚನ್ನು ಹಚ್ಚಿ ಅಡಗಿಸುವುದು ಅರಣ್ಯದಲ್ಲಿ ಸಾಧ್ಯ. ಆದರೆ ಸಮಾಜ ಅರಣ್ಯ ಅಲ್ಲ. ಮನುಷ್ಯರೆಂದರೆ ಹುಲ್ಲಿನ ಒಣ ಹುಲ್ಲಿನ ಎಸಳುಗಳಲ್ಲ. ಸ್ವತಂತ್ರ ಚೇತನಗಳು”.

ಸುಪ್ರೀಮ್ ಕೋರ್ಟಿನ ಈ ತೀರ್ಪು ಸರ್ಕಾರಗಳ ದಾರಿದೀಪ ಆಗಬೇಕು. ಅದುವೇ ‘ನಕ್ಸಲ್ ನಿಗ್ರಹ’ದ ಪರಿಣಾಮಕಾರಿ ಹತಾರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X