ಈ ದಿನ ಸಂಪಾದಕೀಯ | ಮಂಗಳೂರು ಹತ್ಯೆಗಳಲ್ಲಿ ಮಾಧ್ಯಮಗಳೂ ಆರೋಪಿಗಳಲ್ಲವೇ?

Date:

Advertisements
ಕೊಲೆ ಮತ್ತು ಕೊಲೆ ಯತ್ನಕ್ಕೆ ಮುಂದಾದವರ ಜೊತೆಗೆ, ಕೋಮುದ್ವೇಷವನ್ನು ಪ್ರಚೋದಿಸಿದ ಮಾಧ್ಯಮಗಳನ್ನು ಆರೋಪಿಗಳನ್ನಾಗಿ ಮಾಡಬೇಕು. ದ್ವೇಷ ಬಿತ್ತುವ ಮಾಧ್ಯಮಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು.

ಕಳೆದ 15 ದಿನಗಳಿಂದ ಇಡೀ ದೇಶ ಪ್ರಕ್ಷುಬ್ಧಗೊಂಡಿದೆ. ಕಳವಳ, ಆತಂಕ ಇರಬೇಕಿದ್ದ ಜಾಗವನ್ನು ದ್ವೇಷ, ಅಸೂಯೆ ಆವರಿಸಿ, ಆಕ್ರಮಿಸಿಕೊಂಡಿದೆ. ನಾಗರಿಕರು ತಮ್ಮ ನೆರೆಹೊರೆಯ ಮತ್ತೊಂದು ಕೋಮಿನವರನ್ನು ದುಷ್ಕರ್ಮಿಗಳ ರೀತಿಯಲ್ಲಿ ನೋಡುತ್ತಿದ್ದಾರೆ. ಕೋಮುದ್ವೇಷದಿಂದ ನಿಂದಿಸುತ್ತಿದ್ದಾರೆ. ಅವಹೇಳನ ಮಾಡುತ್ತಿದ್ದಾರೆ. ಕೊಲ್ಲುವುದಕ್ಕೂ ಮುಂದಾಗಿದ್ದಾರೆ. ಕೋಮುದ್ವೇಷಕ್ಕೆ ಮಂಗಳೂರಿನಲ್ಲಿ ಹೆಣಗಳು ಉರುಳಿವೆ. ಇದೆಲ್ಲವೂ ಘಟಿಸುತ್ತಿರುವುದು ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ. ಮಾತ್ರವಲ್ಲ, ಆ ದಾಳಿಯ ಕುರಿತು ಮಾಧ್ಯಮಗಳು ಬಿತ್ತರಿಸಿದ ಉದ್ದೇಶ/ದುರುದ್ದೇಶಪೂರಿತ ಕೋಮುದ್ವೇಷಿ ಸುದ್ದಿಗಳಿಂದ.

ಮಂಗಳೂರಿನಲ್ಲಿ ಏಪ್ರಿಲ್ 29ರಂದು ಕೇರಳ ಮೂಲದ ಮುಸ್ಲಿಂ ವಲಸೆ ಕಾರ್ಮಿಕನನ್ನು ಗುಂಪೊಂದು ಅಮಾನುಷವಾಗಿ ಹೊಡೆದು ಕೊಂದಿತು. ಅದಾದ ಎರಡೇ ದಿನದಲ್ಲಿ, ಮೇ 1ರಂದು ಇದೇ ಮಂಗಳೂರಿನಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ಹತ್ಯೆಗೈಯಲಾಗಿದೆ. ಮುಸ್ಲಿಮನೆಂಬ ಕಾರಣಕ್ಕಾಗಿಯೇ ಮುಸ್ಲಿಂ ವಲಸೆ ಕಾರ್ಮಿಕನನ್ನು ಹತ್ಯೆಗೈಯಲಾಗಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಸುಹಾಸ್‌ ಶೆಟ್ಟಿಯ ಹತ್ಯೆಯ ಹಿಂದೆ ನಾನಾ ರೀತಿಯ ಅನುಮಾನಗಳಿವೆ. ಸಂಬಂಧಿಗಳೇ ಹತ್ಯೆಗೈದಿರಬಹುದು, ವಿರೋಧಿಗಳು ಕೊಂದಿರಬಹುದು ಎಂಬ ಶಂಕೆ ಇದೆ. ಆತನ ಕೊಲೆ ಪ್ರಕರಣದಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಅವರಲ್ಲಿ, ಮೂವರು ಹಿಂದೂಗಳು ಸೇರಿದ್ದು, ಇದು ಕೋಮುದ್ವೇಷದ ಹತ್ಯೆಯಲ್ಲ ಎಂಬುದನ್ನು ಸೂಚಿಸುತ್ತಿದೆ.

ಆದರೂ, ರೌಡಿಶೀಟರ್‌ನನ್ನು ಹಿಂದುತ್ವ ಕಾರ್ಯಕರ್ತನೆಂದು, ಮುಸ್ಲಿಂ ಕಾರ್ಮಿಕನ ಹತ್ಯೆಗೆ ಪ್ರತೀಕಾರವಾಗಿ ಶೆಟ್ಟಿಯನ್ನು ಕೊಲ್ಲಲಾಗಿದೆ ಎಂದು ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿವೆ. ಕೋಮುದ್ವೇಷದ ಬಣ್ಣ ಕಟ್ಟಿ ಬಿತ್ತರಿಸುತ್ತಿವೆ. ಇದನ್ನು ಬಿಜೆಪಿಗರೂ ಬಳಸಿಕೊಳ್ಳುತ್ತಿದ್ದಾರೆ. ಬೆಂಕಿಯುಗುಳುವ ಮಾತುಗಳನ್ನಾಡುತ್ತಿದ್ದಾರೆ. ಅವರ ಮಾತುಗಳಿಂದ ಪ್ರಚೋದಿತರಾದವರು ಶೆಟ್ಟಿ ಹತ್ಯೆ ಬೆನ್ನಲ್ಲೇ, ಇಬ್ಬರು ಮುಸ್ಲಿಮರನ್ನು ಕೊಲ್ಲಲು ಯತ್ನಗಳನ್ನೂ ನಡೆಸಿದ್ದಾರೆ.

Advertisements

ಶೆಟ್ಟಿ ಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲದಿದ್ದರೂ, ಮುಸ್ಲಿಂ ಕಾರ್ಮಿಕನ ಹತ್ಯೆ ಮತ್ತು ಇನ್ನಿಬ್ಬರು ಮುಸ್ಲಿಮರ ಕೊಲ್ಲುವ ಪ್ರಯತ್ನಗಳು ನಡೆದದ್ದಕ್ಕೆ ಮೂಲ ಕಾರಣ ಕೋಮುದ್ವೇಷ. ಈ ಕೋಮುದ್ವೇಷವನ್ನು ಉಸುರಿದ್ದು ಮಾಧ್ಯಮಗಳು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಿರ್ದಿಷ್ಟವಾಗಿ ಹಿಂದು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ ಎಂಬ ಅಂಶವನ್ನು ಮಾಧ್ಯಮಗಳು ಮತ್ತೆ-ಮತ್ತೆ ಹೇಳಿದ್ದರ ನೇರ ಪರಿಣಾಮ ಮಂಗಳೂರಿನ ಹತ್ಯೆಯಲ್ಲಿ ಕಾಣಿಸಿದೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ವಿವೇಚನಾರಹಿತವಾಗಿ ಗುಂಡು ಹಾರಿಸಿ, ಹೇಯ ಕೃತ್ಯ ಎಸಗಿದರು. ಕೃತ್ಯದಲ್ಲಿ 26 ಮಂದಿ ಅಮಾಯಕ ಪ್ರವಾಸಿಗರು ಸಾವನ್ನಪ್ಪಿದರು. ಹಲವರು ಗಾಯಗೊಂಡರು. ಮೃತರಲ್ಲಿ ಓರ್ವ ಸ್ಥಳೀಯ ಮುಸ್ಲಿಂ ಯುವಕನೂ ಸೇರಿದ್ದಾನೆ.

ಈ ಘಟನೆಯನ್ನು ವರದಿ ಮಾಡಿದ ಮಾಧ್ಯಮಗಳು ಹಿಂದು/ಮುಸ್ಲಿಂ ಆಯಾಮವನ್ನು ಕೊಡುವ ಬದಲು, ಗುಪ್ತಚರ ಸಂಸ್ಥೆಗಳ ವೈಫಲ್ಯ, ಭದ್ರತಾ ಸಂಸ್ಥೆಗಳ ನಿರ್ಲಕ್ಷ್ಯ, ಗೃಹ ಸಚಿವಾಲಯದ ಬೇಜವಾಬ್ದಾರಿತನಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರೆ ದೇಶದ ಚಿತ್ರಣ ಬೇರೊಂದು ರೀತಿಯಲ್ಲಿ ಇರುತ್ತಿತ್ತು.

ಆದರೆ, ಮಾಧ್ಯಮಗಳಿಗೆ ಆಳುವವರನ್ನು ಪ್ರಶ್ನಿಸಲು ಮನಸ್ಸಿಲ್ಲ. ಹಾಗಂತ ಸುಮ್ಮನೆ ಇರಲಿಲ್ಲ. ಪ್ರಕರಣಕ್ಕೆ ಸಂಪೂರ್ಣವಾಗಿ ಕೋಮು ಆಯಾಮ ನೀಡಿದವು. ‘ಭಯೋತ್ಪಾದಕರು ಹಿಂದೂಗಳ ಹೆಸರು ಕೇಳಿ ಗುಂಡು ಹಾರಿಸಿದರು’ ಎಂಬ ಸಂತ್ರಸ್ತರೊಬ್ಬರ ಹೇಳಿಕೆಯ ವಿಡಿಯೋವನ್ನು ಮತ್ತೆ-ಮತ್ತೆ ತೋರಿಸಿ, ದ್ವೇಷವನ್ನು ದೇಶದ ಉದ್ದಗಲಕ್ಕೂ ಹರಡಿದವು. ಆ ವಿಡಿಯೋ ಸತ್ಯಾಸತ್ಯತೆಯನ್ನೂ ಪರಿಶೀಲಿಸಲಿಲ್ಲ. ಮಾತ್ರವಲ್ಲ, ಸಾವಿರಾರು ಪ್ರವಾಸಿಗರು ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ರಕ್ಷಿಸಿದವರು ಸ್ಥಳೀಯ ಮುಸ್ಲಿಮರು ಎಂದು ಹೇಳಿದ್ದ ಹೇಳಿಕೆಗಳನ್ನು ಎಚ್ಚರಿಕೆಯಿಂದ ಮಾಧ್ಯಮಗಳು ಮರೆಮಾಚಿದವು.

ಸ್ಥಳೀಯ ಮುಸ್ಲಿಮರು ಪಹಲ್ಗಾಮ್‌ನಲ್ಲಿ ಸಿಕ್ಕಿಬಿದ್ದಿದ್ದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು, ಆಶ್ರಯ ಮತ್ತು ಆಹಾರವನ್ನು ಒದಗಿಸಿದರು, ರಕ್ಷಣೆಗಾಗಿ ಮಸೀದಿಗಳಲ್ಲಿ ಜಾಗ ಕೊಟ್ಟರು, ವಾಹನಗಳು ಬಾರದ ಜಾಗದಲ್ಲಿಯೂ ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರವಾಸಿಗರನ್ನು ರಕ್ಷಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು, ಚಿಕಿತ್ಸೆ ಕೊಡಿಸಿದರು, ಪ್ರವಾಸಿಗರು ತಮ್ಮೂರುಗಳಿಗೆ ತೆರಳಲು ದೂರದ ಕಾಶ್ಮೀರಕ್ಕೂ ರವಾನಿಸಿದರು. ಅಷ್ಟೇ ಯಾಕೆ? ಪ್ರವಾಸಿಗರನ್ನು ರಕ್ಷಿಸಲು ಭಯೋತ್ಪಾದಕರಿಂದ ಬಂದೂಕು ಕಸಿದುಕೊಳ್ಳಲು ಹೋಗಿ, ಹೋರಾಡಿ, ಭಯೋತ್ಪಾದಕರ ಗುಂಡಿಗೆ ಮುಸ್ಲಿಂ ಯುವಕ ಸೈಯದ್ ಆದಿಲ್ ಹುಸೇನ್ ಶಾ ಬಲಿಯಾದರು.

ಈ ವರದಿ ಓದಿದ್ದೀರಾ?: ಭಾಗವತ್ ಅಹಿಂಸೆಯ ಮಾತಾಡಿದ್ದಾರೆ; ಅಂದಮೇಲೆ ಸಿದ್ದರಾಮಯ್ಯರ ಹೇಳಿಕೆಯಲ್ಲಿ ತಪ್ಪೇನಿದೆ?

ಭಯೋತ್ಪಾದಕ ದಾಳಿಯ ವೇಳೆ ಕಾಶ್ಮೀರಿ ಮುಸ್ಲಿಮರು ನೀಡಿದ ನೆರವು, ತೋರಿಸಿದ ಪ್ರೀತಿ, ಮೆರೆದ ಮಾನವೀಯತೆ ಮತ್ತು ಧೈರ್ಯಕ್ಕೆ ಪ್ರವಾಸಿಗರು ಋಣಿಯಾಗಿದ್ದಾರೆ. ಕಾಶ್ಮೀರದ ಮುಸ್ಲಿಮರು ತಮ್ಮ ಸಹೋದರರು ಎಂದು ಹಿಂದು ಪ್ರವಾಸಿಗರು ಹೇಳುತ್ತಿದ್ದಾರೆ.

ಇಂತಹ ಮಾನವೀಯ ನೆಲೆಯ ಸುದ್ದಿ, ವರದಿಗಳನ್ನು ಮಾಧ್ಯಮಗಳು ದುರುದ್ದೇಶದಿಂದ ಮುಚ್ಚಿಟ್ಟವು. ‘ಭಯೋತ್ಪಾದಕರು ಹಿಂದುಗಳ ಹೆಸರು ಕೇಳಿ ಹತ್ಯೆ ಮಾಡಿದರು’ ಎಂಬ ಒಂದೇ ಒಂದು ಹೇಳಿಕೆಯನ್ನೇ ದಾಳವಾಗಿ ಇಟ್ಟುಕೊಂಡು ದಿನ/ವಾರಗಟ್ಟಲೆ ವರದಿ ಬಿತ್ತರಿಸಿದವು. ದೇಶದ ಹೊರಗಿನ ಭಯೋತ್ಪಾದಕ ಸಂಘಟನೆಯೊಂದು ಎಸಗಿದ ಕತ್ಯಕ್ಕೆ, ಭಾರತದೊಳಗಿನ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಧ್ಯಮಗಳು ಮಾಡಿದವು. ಅದು ದೇಶಾದ್ಯಂತ ಕೋಮು ದಳ್ಳುರಿಗೆ ಕಾರಣವಾಯಿತು. ಪರಿಣಾಮವಾಗಿ, ದೇಶದ ಅನೇಕ ಭಾಗಗಳಲ್ಲಿ ಮುಸ್ಲಿಮರ ಮೇಲೆ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿವೆ.

ಮಾಧ್ಯಮಗಳು ಹರಡಿದ ಕೋಮುದ್ವೇಷದಿಂದ ಏಪ್ರಿಲ್ 29ರ ಮಂಗಳೂರಿನಲ್ಲಿ ಅಮಾಯಕ ಮುಸ್ಲಿಂ ಕಾರ್ಮಿಕನ ಜೀವ ಉರುಳಿತು. ಬಳಿಕ, ಕರಾವಳಿ ಪ್ರಕ್ಷುಬ್ಧಗೊಂಡಿತು. ಕೊಲೆ ಯತ್ನಗಳು ನಡೆಯುತ್ತಿವೆ. ಈ ಕೊಲೆ ಮತ್ತು ಕೊಲೆ ಯತ್ನಕ್ಕೆ ಮುಂದಾದವರ ಜೊತೆಗೆ, ಕೋಮುದ್ವೇಷವನ್ನು ಪ್ರಚೋದಿಸಿದ ಮಾಧ್ಯಮಗಳನ್ನು ಆರೋಪಿಗಳನ್ನಾಗಿ ಮಾಡಬೇಕು. ದ್ವೇಷ ಬಿತ್ತುವ ಮಾಧ್ಯಮಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಕಟಕಟೆಗೆ ಎಳೆದು ನಿಲ್ಲಿಸಬೇಕು. ಆಗಲೇ, ಸಮಾಜದ ಸ್ವಾಸ್ಥ ಸರಿಯಾಗಿರಲು, ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಬೆಳೆಯಲು ಸಾಧ್ಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X