ಪರಸ್ಪರ ನಿಂದನೆ, ಕೆಸರೆರಚಾಟ ಅಪ್ಪಟ ರಾಜಕಾರಣ. ಬೆಂಗಳೂರಿನ ಸಾಮಾನ್ಯ ಮೆಟ್ರೋ ಪ್ರಯಾಣಿಕರ ಜೇಬುಗಳನ್ನು ಕತ್ತರಿಸಲಾಗಿರುವುದೇ ಅಸಲು ಸಂಗತಿ. ದೆಹಲಿ, ಚೆನ್ನೈ, ಹೈದರಾಬಾದ್, ಮುಂಬಯಿ, ತಿರುವನಂತಪುರ ಮುಂತಾದ ಮಹಾನಗರಗಳಲ್ಲಿ ಮೆಟ್ರೋ ಪ್ರಯಾಣದ ಸೌಲಭ್ಯ ಇದೆ. ಆದರೆ ಮೊನ್ನೆಯ ದರ ಏರಿಕೆಯ ನಂತರ ಬೆಂಗಳೂರು ಮೆಟ್ರೋ ಪ್ರಯಾಣವು ದೇಶದಲ್ಲೇ ಅತಿ ದುಬಾರಿ ಸಾರ್ವಜನಿಕ ಸಾರಿಗೆ ಎನಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಮೆಟ್ರೋ ಪ್ರಯಾಣ ದರಗಳು ಆಕಾಶಕ್ಕೇರಿವೆ. 2017ರ ನಂತರ ಈ ದರಗಳಲ್ಲಿ ಏರಿಕೆ ಆಗಿರಲಿಲ್ಲ. ‘ದರ ನಿಗದಿ ಸಮಿತಿ’ಯ ಶಿಫಾರಸುಗಳ ಪ್ರಕಾರ ಈ ಏರಿಕೆ ಮಾಡಿರುವುದಾಗಿ ಬೆಂಗಳೂರು ಮೆಟ್ರೋ ಹೇಳಿಕೆ ನೀಡಿದೆ. ಏರಿಕೆಯು ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದೆ. ಈ ಏರಿಕೆಯ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಕೇಂದ್ರ ಬಿಜೆಪಿ ಸರ್ಕಾರದ ಮೇಲೆಯೂ, ರಾಜ್ಯದಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿಯು ರಾಜ್ಯ ಸರ್ಕಾರದ ಮೇಲೆಯೂ ಹೊರಿಸಿವೆ.
ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯನ್ನು ನಿಂದಿಸಿದ್ದಾರೆ. ಬೆಂಗಳೂರು ಮೆಟ್ರೋ ವಿಸ್ತರಣೆಯನ್ನು ಕೇಂದ್ರ ಸರ್ಕಾರದ ಸಾಧನೆ ಎಂದೆಲ್ಲ ಕೊಂಡಾಡಿದ್ದರು ಬಿಜೆಪಿ ನಾಯಕರು. ಇದೀಗ ಸಾರ್ವಜನಿಕರ ಆಕ್ರೋಶ ಪ್ರಕಟವಾಗುತ್ತಿದ್ದಂತೆ, ಹೊಣೆಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಿರುವುದು ಆತ್ಮವಂಚನೆ ಮತ್ತು ಬೂಟಾಟಿಕೆಯಾಗಿದೆ ಎಂದಿದ್ದಾರೆ.
ಪರಸ್ಪರ ನಿಂದನೆ ಕೆಸರೆರಚಾಟ ಅಪ್ಪಟ ರಾಜಕಾರಣ. ಬೆಂಗಳೂರಿನ ಸಾಮಾನ್ಯ ಮೆಟ್ರೋ ಪ್ರಯಾಣಿಕರ ಜೇಬುಗಳನ್ನು ಕತ್ತರಿಸಲಾಗಿರುವುದೇ ಅಸಲು ಸಂಗತಿ. ದೆಹಲಿ, ಚೆನ್ನೈ, ಹೈದರಾಬಾದ್, ಮುಂಬಯಿ, ತಿರುವನಂತಪುರ ಮುಂತಾದ ಮಹಾನಗರಗಳಲ್ಲಿ ಮೆಟ್ರೋ ಪ್ರಯಾಣದ ಸೌಲಭ್ಯ ಇದೆ. ಆದರೆ ಮೊನ್ನೆಯ ದರ ಏರಿಕೆಯ ನಂತರ ಬೆಂಗಳೂರು ಮೆಟ್ರೋ ಪ್ರಯಾಣವು ದೇಶದಲ್ಲೇ ಅತಿ ದುಬಾರಿ ಸಾರ್ವಜನಿಕ ಸಾರಿಗೆ ಎನಿಸಿದೆ.
ತಾನು ಮಾಡಿರುವ ಏರಿಕೆ ಶೇ.45 ಎಂದು ಮೆಟ್ರೋ ಹೇಳುತ್ತಿದೆ. ಆದರೆ ವಾಸ್ತವ ಏರಿಕೆಯು ಶೇ.70ರಿಂದ ಶೇ.110ರಷ್ಟು ಎಂಬುದು ಪ್ರಯಾಣಿಕರ ದೂರು. ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಅನೇಕ ಸಾಫ್ಟ್‌ವೇರ್ ಟೆಕ್ಕಿಗಳು, ದರ ಇಳಿಸುವ ತನಕ ಕಾರುಗಳಲ್ಲಿ ಪ್ರಯಾಣಿಸುವುದಾಗಿ ಪ್ರತಿಭಟಿಸಿದ್ದಾರೆ. ಉದಾಹರಣೆಗೆ ವೈಟ್‌ಫೀಲ್ಡ್‌ನಿಂದ ಸಿಂಗಯ್ಯನಪಾಳ್ಯದ ನಡುವೆ ಇತ್ತೀಚಿನವರೆಗೆ ಜಾರಿಯಲ್ಲಿದ್ದ ಪ್ರಯಾಣ ದರ ರೂ.28.50. ಹೊಸ ದರ ರೂ.60.
ತೋಡಿ ಬುಡಮೇಲು ಮಾಡಲಾದ ಅಥವಾ ಸಮತಟ್ಟಾಗಿಲ್ಲದ ಇಲ್ಲವೇ ಅಂಗಡಿ ಮುಂಗಟ್ಟುಗಳಿಂದ ಅತಿಕ್ರಮಣಕ್ಕೆ ತುತ್ತಾದ, ವಾಹನಗಳ ಪಾರ್ಕಿಂಗ್ ಗೆ ಜಾಗವಾಗಿ ಹೋಗಿವೆ ಬೆಂಗಳೂರಿನ ಬಹುತೇಕ ಫುಟ್‌ಪಾತ್‌ಗಳು, ಈ ಬಾಧೆಗಳಿಂದ ಮುಕ್ತವಾಗಿರುವ ಫುಟ್‌ಪಾತ್‌ಗಳು ಕಸದ ರಾಶಿ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಜಲ್ಲಿ ಮರಳುಗಳ ರಾಶಿ ಇಲ್ಲವೇ ಗೋಡೆಗೆ ಮಾಡಿದ ಮೂತ್ರದ ದುರ್ವಾಸನೆಗಳಿಂದ ತುಂಬಿರುತ್ತವೆ. ಬೈಸಿಕಲ್ ಸವಾರರಿಗೆ ಸುರಕ್ಷತೆಯ ಖಾತ್ರಿಯಿಲ್ಲ. ಮೋಟಾರು ವಾಹನಗಳು ಉಗುಳುವ ಹೊಗೆಯಿಂದ ಕಲುಷಿತವಾಗಿರುವ ಗಾಳಿ ಉಸಿರಾಟಕ್ಕೆ ಯೋಗ್ಯವಲ್ಲ. ಎಲ್ಲಕ್ಕೂ ಮುಕುಟ ಇಟ್ಟಂತೆ ವಾಹನ ದಟ್ಟಣೆಗೆ ವಿಶ್ವದಲ್ಲೇ ಕುಖ್ಯಾತ ನಗರ ಬೆಂಗಳೂರು. ಮಂದಗತಿಯಲ್ಲಿ ಮೂರನೆಯ ಸ್ಥಾನ ಹೊಂದಿದೆ. ವಾಹನಗಳೊಂದಿಗೆ ರಸ್ತೆಗೆ ಇಳಿದರೆ ಇಂತಹ ಹೊತ್ತಿಗೇ ತಲುಪುತ್ತೇವೆಂದು ಹೇಳಲಾಗದಂತಹ ದುಸ್ಥಿತಿ. ತೀವ್ರ ದಟ್ಟಣೆಯ ಕಾರಣ ತಾಸುಗಟ್ಟಲೆ ಸ್ಥಗಿತಗೊಳ್ಳುವ ‘ಟ್ರ್ಯಾಫಿಕ್’ ಎಂದು ಬೆಂಗಳೂರಿನ ‘ಟ್ರ್ಯಾಫಿಕ್’ ನ್ನು ಬಣ್ಣಿಸಲಾಗಿದೆ. ಟಾಮ್ ಟಾಮ್ ಟ್ರ್ಯಾಫಿಕ್ ಸೂಚ್ಯಂಕದ ಪ್ರಕಾರ ಹತ್ತು ಕಿ.ಮೀ.ದೂರ ಪಯಣಿಸಲು ಬೇಕಾಗುವ ಸರಾಸರಿ ಅವಧಿ 28 ನಿಮಿಷ 10 ಸೆಕೆಂಡುಗಳು. ಇದು ಸರಾಸರಿ ಅವಧಿ ಎಂಬುದನ್ನು ಗಮನಿಸಬೇಕು. ಹತ್ತು ಕಿ.ಮೀ. ಪ್ರಯಾಣ ತಾಸುಗಟ್ಟಲೆ ತೆವಳಿದ ಉದಾಹರಣೆಗಳಿಗೆ ಲೆಕ್ಕವಿಲ್ಲ.
‘ನಮ್ಮ ಮೆಟ್ರೋ’ ಎಂಬ ಬೆಂಗಳೂರು ಮೆಟ್ರೋ ರೇಲು ಕಾರ್ಪೊರೇಷನ್ ಲಿಮಿಟೆಡ್ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜಂಟಿ ಉದ್ಯಮ. ಮೆಟ್ರೋ ಟಿಕೆಟ್ ದರಗಳನ್ನು 2017ರಿಂದಲೂ ಏರಿಸಿರಲಿಲ್ಲ. ಹೀಗಾಗಿ ದರಗಳನ್ನು ಪರಿಷ್ಕರಿಸುವಂತೆ ‘ನಮ್ಮ ಮೆಟ್ರೋ’ 2020ರಲ್ಲೇ ಕೇಂದ್ರ ಸರ್ಕಾರವನ್ನು ಕೋರಿತು. ಆದರೆ ದರ ಪರಿಷ್ಕರಣೆ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದ್ದು 2024ರಲ್ಲಿ. ಮದ್ರಾಸ್ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ತರಣಿ ಈ ಸಮಿತಿಯ ಅಧ್ಯಕ್ಷರು. ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತಲಾ ಒಬ್ಬರು ಅಧಿಕಾರಿಗಳಿದ್ದರು. ಮೂರು ಮಂದಿಯ ಈ ಸಮಿತಿಯಲ್ಲಿ ಮೇಲ್ನೋಟಕ್ಕೆ ಕೇಂದ್ರ ಸರ್ಕಾರದ್ದೇ ಮೇಲುಗೈ.
ಆದರೆ ದೇಶದ ಅರ್ಥವ್ಯವಸ್ಥೆಯ ಉದಾರೀಕರಣ ಮತ್ತು ಕಾರ್ಪೊರೇಟೀಕರಣದ ನಂತರ ಸರ್ಕಾರಿ ಮತ್ತು ಅರೆ ಸರ್ಕಾರಿ ಕಂಪನಿಗಳನ್ನು ಕೂಡ ಲಾಭದಾಯಕವಾಗಿ ನಡೆಸಬೇಕು, ಸರ್ಕಾರಿ ಸಬ್ಸಿಡಿಗಳನ್ನು ಇಡಿಯಾಗಿ ಕತ್ತರಿಸಬೇಕು ಎಂಬುದು ಸರ್ಕಾರಗಳ ಮತ್ತು ಐಎಎಸ್ ಅಧಿಕಾರಿಗಳ ಧೋರಣೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿ ಪ್ರತಿಭಟಿಸಿರುವ ಸಾಧ್ಯತೆಯೇ ವಿರಳ. ಚೆನ್ನೈ ಮತ್ತು ಡೆಲ್ಲಿ ಮೆಟ್ರೋ ಆಡಳಿತ ಮಂಡಳಿಗಳ ಜೊತೆ ಸಮಾಲೋಚಿಸಿದ ಈ ಸಮಿತಿ ದರ ಪರಿಷ್ಕರಣೆ ಮಾಡಿತು ಎನ್ನಲಾಗಿದೆ. ಉಳಿದ ಮಹಾನಗರಗಳ ಮೆಟ್ರೋಗಳ ಪ್ರಯಾಣ ದರಗಳು ಕೂಡ ಸದ್ಯದಲ್ಲೇ ಏರಲಿವೆ. ಬೆಂಗಳೂರಿನ ದರ ಏರಿಕೆಯೇನೂ ವಿಶೇಷ ಅಲ್ಲ ಎಂಬುದು ಸರ್ಕಾರಗಳ ಧೋರಣೆ.
ದರ ಏರಿಕೆಯು ಮೆಟ್ರೋ ಸವಾರರ ಪ್ರಮಾಣವನ್ನು ಶೇ.6ರಷ್ಟು ತಗ್ಗಿಸಿರುವ ವರದಿಗಳಿವೆ. ಮೆಟ್ರೋ ನಿರ್ಮಿಸಲು ಪಡೆಯಲಾಗಿರುವ ಸಾಲಗಳು- ಬಡ್ಡಿ ಮೊತ್ತಗಳ ವಾರ್ಷಿಕ ಮರುಪಾವತಿ, ಹಾಲಿ ಮೆಟ್ರೋ ವಿಸ್ತರಣೆ ಮತ್ತು ಉನ್ನತೀಕರಣ ಹಾಗೂ ಸುಧಾರಣೆಗಳಿಗೆ ಹಣಕಾಸು ಹೊಂದಿಸಲು ಈ ಏರಿಕೆ ಅನಿವಾರ್ಯ ಎಂಬುದು ಮೆಟ್ರೋ ವಿವರಣೆ.
ಮೋದಿ ಸರ್ಕಾರ ಹೆಜ್ಜೆ ಹೆಜ್ಜೆಗೆ ಶೇ.18ರಿಂದ ಶೇ.28ರವರೆಗೆ ಏರಿಸಿರುವ ಕುರಿತು ಬಾಯಿ ಹೊಲಿದು ಕೊಂಡಿದೆ ಬಹುತೇಕ ಮಧ್ಯಮವರ್ಗ. ಪೆಟ್ರೋಲ್-ಡೀಸೆಲ್ ದರಗಳು 500 ರುಪಾಯಿಗಳಾದರೂ ಖರೀದಿಸುತ್ತೇವೆ ಎನ್ನುವ ಭಕ್ತರು, ರೈತರಿಗೆ ಹೆಚ್ಚು ದರ ನೀಡಲೆಂದು ಹಾಲಿನ ದರ ಏರಿಕೆಯನ್ನು ವಿರೋಧಿಸುತ್ತಾರೆ. ರೈತರಿಗೆ ನೀಡುವ ಗೊಬ್ಬರದ ಸಬ್ಸಿಡಿಗಳನ್ನು, ಗ್ರಾಮೀಣ ಪ್ರದೇಶದ ಬಡಕುಟುಂಬಗಳ ಒಬ್ಬ ಸದಸ್ಯರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಿಕೆಯ ಮನರೇಗ ಯೋಜನೆಯನ್ನು ವಿರೋಧಿಸುತ್ತಾರೆ. ಖುದ್ದು ಮೋದಿಯವರೇ ಈ ಯೋಜನೆಯನ್ನು ಗುಂಡಿ ತೋಡಿ ಗುಂಡಿ ಮುಚ್ಚುವ ವ್ಯರ್ಥವೆಚ್ಚದ ಯೋಜನೆ ಎಂದು ಜರೆದಿದ್ದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ದರಗಳನ್ನು ಶಾಸನಬದ್ಧವಾಗಿ ನಿಗದಿ ಮಾಡಲು ಕೇಂದ್ರ ಸರ್ಕಾರ ತಯಾರಿಲ್ಲ. ಭೂ ರಹಿತ ಕೂಲಿಗಳು, ಮತ್ತು ಅಸಂಘಟಿತ ಕಾರ್ಮಿಕ ವಲಯಗಳ ಕುರಿತು ಮೋದಿ ಸರ್ಕಾರಕ್ಕಾಗಲಿ, ಅವರ ಭಕ್ತವೃಂದಕ್ಕೇ ಆಗಲಿ ಕಾಳಜಿ ಇಲ್ಲ. ಸಿದ್ದರಾಮಯ್ಯ ಸರ್ಕಾರದ ಉಚಿತ ಯೋಜನೆಗಳನ್ನು ಬೊಕ್ಕಸ ಬರಿದು ಮಾಡುವ ಯೋಜನೆಗಳೆಂದು ಹೀಗಳೆಯಲಾಗುತ್ತದೆ. ಆದರೆ ಮೆಟ್ರೋ ಪ್ರಯಾಣದರಗಳು ಅಗ್ಗವಾಗಿರಬೇಕೆಂದು ಬಯಸುತ್ತಾರೆ. ಮೋದಿ ಭಕ್ತರು ರಾಜ್ಯ ಸರ್ಕಾರವನ್ನು ನಿಂದಿಸಿದರೆ, ಮೋದಿ ವಿರೋಧಿಗಳು ಅಥವಾ ಬಿಜೆಪಿ ವಿರೋಧಿಗಳು ಕೇಂದ್ರ ಸರ್ಕಾರವನ್ನು ನಿಂದಿಸುತ್ತಿದ್ದಾರೆ.
ಮೊದಲ ಹಂತದ ಮೆಟ್ರೋ ನಿರ್ಮಾಣಕ್ಕೆ ಅಂದಾಜು 14,405 ಕೋಟಿ ರುಪಾಯಿ ವೆಚ್ಚವಾಗಿದೆ. ಎರಡನೆಯ ಹಂತಕ್ಕೆ 26,405 ಕೋಟಿ ರುಪಾಯಿಯ ಅಗತ್ಯವಿದೆ. ಮಹಾನಗರಗಳು ಮತ್ತು ಅವುಗಳ ಮಧ್ಯಮವರ್ಗಗಳ ಜನರ ಗಂಟಲು ದೊಡ್ಡದು. ಮೂಲಭೂತ ಸೌಕರ್ಯಗಳ ಮಾತು ಬಂದರೆ ಮಹಾನಗರಗಳದು ಬಕಾಸುರ ಹಸಿವು. ಗ್ರಾಮೀಣ ಪ್ರದೇಶದ ಅಗತ್ಯಗಳನ್ನು, ಉಪೇಕ್ಷಿತ ಜನವರ್ಗಗಳ ಜರೂರತ್ತುಗಳನ್ನು ಬದಿಗೊತ್ತಿ ಈ ಹಸಿವನ್ನು ನೀಗಿಸಲು ಆದ್ಯತೆ ನೀಡುತ್ತಿವೆ ಸರ್ಕಾರಗಳು. ಮೆಟ್ರೋ ಬಳಕೆದಾರರ ಪೈಕಿ ಉಳ್ಳವರು ಮಾತ್ರವಲ್ಲ. ವಿದ್ಯಾರ್ಥಿಗಳು, ಶ್ರಮಿಕ ವರ್ಗ, ಕೆಳಮಧ್ಯಮವರ್ಗದ ಒಂದಷ್ಟು ಪ್ರಮಾಣವೂ ಸೇರಿತ್ತು. ಹಾಲಿ ದರ ಏರಿಕೆಯ ಕಾರಣ ಈ ಜನ ಮೆಟ್ರೋದಿಂದ ಅನಿವಾರ್ಯವಾಗಿ ದೂರ ಸರಿಯಲಿದ್ದಾರೆ. ಮೋಟಾರು ವಾಹನಗಳ ದಟ್ಟಣೆ ಬೆಂಗಳೂರಿನ ವಾಯು ಮಾಲಿನ್ಯಕ್ಕೆ ಗಣನೀಯ ಕಾರಣವಾಗಿದೆ. ವಾಯುಮಾಲಿನ್ಯ, ಹದಗೆಟ್ಟಿರುವ ರಸ್ತೆ ಸಂಚಾರ ವ್ಯವಸ್ಥೆಯ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ರಸ್ತೆಗಳಿಗೆ ಇಳಿಯುವುದನ್ನು ಆದಷ್ಟೂ ಮಟ್ಟಿಗೆ ತಡೆಯುವ ಕ್ರಮವಾಗಿ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಗು ಮಾಡುವುದು ಸರ್ಕಾರಗಳ ಕರ್ತವ್ಯ. ಈ ವ್ಯವಸ್ಥೆಯು ಈಗಾಗಲೇ ಸುಲಿಗೆಗೆ ತುತ್ತಾಗುತ್ತಿರುವ ಜನ ವರ್ಗಗಳನ್ನು ಮತ್ತಷ್ಟು ಸುಲಿಯುವಂತಿರಕೂಡದು.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ‘ಸತ್ತಂತೆಯೂ ಅತ್ತಂತೆಯೂ’ ಆಡುತ್ತಿರುವ ಈ ನಾಟಕ ನಿಲ್ಲಿಸಬೇಕು. ಟಿಕೆಟ್ ದರಗಳ ನ್ಯಾಯಯುತ ಮರುಪರಿಷ್ಕರಣೆ ಆಗಬೇಕು.

ಬಸ್ ಪ್ರಯಾಣ ದರ ಏರಿಕೆ ಮಾಡಿದಾಗ,, ವಿರೋಧ ಪಕ್ಷದ ನಾಯಕರು ಪ್ರಯಾಣಿಕರಿಗೆ ಗುಲಾಬಿ ಹೂ ಕೊಟ್ಟು ಪ್ರತಿಭಟನೆ ನಡೆಸಿದರು,,ಈಗ ಕಮಲದ ಹೂ ಕೊಟ್ಟು ಪ್ರತಿಭಟನೆ ಮಾಡುವಿರಾ ತಾಕತ್ತು ದಮ್ಮು ಬದ್ಧತೆ ಇದ್ದರೆ,,